ಸೊಸೆಯಂದಿರು ಗಂಡಂದಿರನ್ನು ತೊರೆದು ಮಕ್ಕಳೊಂದಿಗೆ ತವರುಮನೆ ಸೇರಿದರು. ಅನಂತರ ಜಮೀನನ್ನು ಅವರ ಸ್ವಾಧೀನಕ್ಕೆ ತೆಗೆದುಕೊಂಡರು. ಸೊಸೆಯಂದಿರಿಗೆ ಬೇಕಿದ್ದು ಆಸ್ತಿ ಮಾತ್ರ, ಸಂಸಾರ ಆಗಿರಲಿಲ್ಲ. ಮನುಷ್ಯನ ದುರಾಷೆಗೆ ಕೊನೆಯೆ ಇಲ್ಲ . ಕಾನೂನಿನಲ್ಲಿ ಗೆದ್ದದ್ದು ಏನು? ತಪ್ಪದೆ ಓದಿ ವಕೀಲರಾದ ಪ್ರಕಾಶ ವಸ್ತ್ರದ ಅವರ ಹೊಸ ಅಂಕಣ ‘ನ್ಯಾಯದ ಕಣ್ಣು’…
ಕೆಲವಂದು ವ್ಯಾಜ್ಯಗಳು ಉದ್ಭವಿಸುವುದಿಲ್ಲ ಆದರೆ ಹುಟ್ಟು ಹಾಕುತ್ತಾರೆ. ಇಂತಹ ಕೇಸುಗಳು ದಾಖಲಿಸಿದಾಗ ಎದುರಿಸಿ, ತನ್ನ ಹಕ್ಕು ರಕ್ಷಿಸಿಕೊಳ್ಳಲು ಹೆಣ ಗಾಡುವುದು ಅನಿವಾರ್ಯ. ಅಷ್ಟರಲ್ಲಿ ಎದುರಾಳಿ ಹೈರಾಣಾಗಿ ಹೋಗುತ್ತಾನೆ. ಇಂತಹ ಸ್ವರೂಪದ ಪ್ರಕರಣಗಳು ದಾಖಲು ಆಗುತ್ತಲೆ ಇರುತ್ತವೆ. ಹಲವು ಪ್ರ ಕರಣಗಳು ಉದ್ದೇಶಪೂರಿತವಾಗಿ ಹೊಂದಾಣಿಕೆಯಿಂದ ಮಾಡಿಕೊಂಡಿರುವಂತವೆ ಆಗಿರುತ್ತವೆ. ಇವುಗಳಲ್ಲಿ ಅಮಾಯಕರನ್ನು ಸಿಲುಕಿಸಿ ಮೋಜು ನೋಡಿ, ಏನಾದರೂ ಲಾಭವಾದಿತು ಎನ್ನುವ ದುರಾಷೆ ಇರುತ್ತದೆ.
ಇವೆಲ್ಲ ಪ್ರಕಾರಣಗಳು ಮೇಲ್ನೋಟಕ್ಕೆ ಸುಳ್ಳು, ಮೋಜಿನ, ದುರುದ್ದೇಶದಿಂದ ಮಾಡಿದ ಪ್ರಕರಣಗಳು ಎಂದು ಕಂಡು ಬಂದರೂ ಸತ್ಯಾ ಸತ್ಯತೆ ಬಿಚ್ಚಿಡಲು ಹಲವು ವರ್ಷಗಳು ಉರುಳಿ ಬಿಡುತ್ತವೆ. ಅಮಾಯಕ ಹೈರಾಣಾಗಿ, ತೊಂದರೆಗೆ ಒಳಗಾಗಿ ಕೈ ಎತ್ತಿ ರಾಜಿ ಸಂಧಾನಕ್ಕೆ ನಿಲ್ಲಬೇಕಾಗುತ್ತದೆ. ದುಷ್ಟರ ಅಟ್ಟಹಾಸದ ನಗೆ ಚೆಲ್ಲಿದರೆ, ಅಮಾಯಕ ನೀತಿಯುತ, ನ್ಯಾಯಪರ ಹಕ್ಕು ಹೊಂದಿದ್ದರು ಸೋತು ಮಂಡಿ ಊರುವ ಸಂದರ್ಭ ಉಂಟಾಗುತ್ತದೆ. ಕಾನೂನು ಹೋರಾಟದಲ್ಲಿ ಧೈರ್ಯ ಕಳೆದುಕೊಳ್ಳದೆ ಎದುರಿಸಿ ನಿಂತು ತನ್ನ ಹಕ್ಕು, ಹಿತರಕ್ಷಣೆ ಕಾಪಾಡಿಕೊಳ್ಳುವವನು ಜಯಶಾಲಿ ಆಗುತ್ತಾನೆ. ಇದೊಂದು ಉದಾಹರಣೆ ಮಾತ್ರ ಆಗುತ್ತದೆ ಅಷ್ಟೆ. ಅಷ್ಟರಲ್ಲಿ ಇನ್ನೊಬ್ಬ ಚಿಗುರಿ ನಿಲ್ಲುತ್ತಾನೆ. ಕಸ ಇದ್ದ ಹಾಗೆ ಅದನ್ನುಗುಡಿಸೋದೆ, ಅದು ಮತ್ತೆ ಬರೋದೆ ಮತ್ತೆ ಗುಡಿಸೋದೆ. ಇದೊಂದು ಅನಿವಾರ್ಯ ಪುನಾವರ್ತನೆ.
ನಾಗರಿಕ ಸಮಾಜ ಅನ್ನುವ ವ್ಯವಸ್ಥಿತ ಸಮಾಜ ನಿರ್ಮಾಣ ಆಗಿ ಕಾನೂನು, ನಿಯಮ ಕಟ್ಟಳೆಗಳು ಬಂದಿವೆ. ಮಾನವ ಸಹಜ ದುರಾಷೆ, ಆಶೆ, ದ್ವೇಷ, ಅ ಸೂಯೆಗಳಿಗೆ ಲಗಾಮು ಹಾಕಿವೆ. ಆದರೂ ಮಾನವ ಸಹಜ ದೌರ್ಬಲ್ಯ ಇಣುಕಿ ಹಾಕುತ್ತವೆ. ಶತಮಾನ ಗಳಿಂದಲೂ ಆಯಾ ಧರ್ಮದ ಗ್ರಂಥಗಳು ಮಾನವನ ನಡುವಳಿಕೆ ಹೇಗಿರಬೇಕು ಎಂದು ತಿಳಿಹೇಳಿ, ಪುಣ್ಯವಂತರಿಗೆ ಸ್ವರ್ಗ ಪಾಪಿಗಳಿಗೆ ನರಕ ಎಂದು ಭಯ, ಭಕ್ತಿಯ ಬಿಂಬ ತೋರಿಸಿದ್ದಾರೆ. ಆದರೆ ಮಾನವ ಸಹಜ ದೌರ್ಬಲ್ಯ ಎದ್ದು ನಿಲ್ಲುತ್ತವೆ. ಧರ್ಮ ಗ್ರಂಥ, ಪುರಾಣ, ಪ್ರವಚನ, ನೀತಿ ಪಾಠಗಳಿಂದ ಮನುಷ್ಯ ಬದಲಾವಣೆ ಆಗುವ ಹಾಗಿದ್ದರೆ ಕಾನೂನು ನಿಯಮ, ನ್ಯಾಯಾಲಯ, ಪೊಲೀಸರು ಅವಶ್ಯಕತೆ ಇರುತ್ತಿರಲಿಲ್ಲ.ದೇಶದಲ್ಲಿ ನೂರಾರು ಜನರನ್ನು ಕೊಲೆ, ಸುಲುಗೆ ಹಲವಾರು ಅಪರಾಧಗಳಲ್ಲಿ ಮರಣ ದಂಡನೆ, ಜೀವಾವಧಿ, ಹಲವಾರು ವರ್ಷ ಶಿಕ್ಷೆಗೆ ಗುರಿಯಾಗಿದ್ದಾರೆ. ಅಪರಾಧಗಳು ಗಣಣೀಯವಾಗಿ ಕ ಡಿಮೆಯಾಗುತ್ತವೆ, ನಿಲ್ಲುವದಿಲ್ಲ. ಹೊಸ ಜಗತ್ತು ತೆರೆದಂತೆ ಹೊಸ ಅಪರಾಧಗಳು ಸೃಷ್ಟಿಯಾಗುತ್ತವೆ. ಹೊಸ ಕಾನೂನುಗಳು ಬಂದಾಗ ಅವುಗಳ ದೌರ್ಬಲ್ಯ ಹುಡುಕಿ ಪರಾರಿ ಆಗುವ ಮಾರ್ಗ ಹುಡುಕುತ್ತಾರೆ. ಕಾನೂನುಗಳು ಇರುವುದು ಕೇವಲ ಪಾಲಿಸಲು ಅಲ್ಲ ಉಲ್ಲಂಘಿಸಲು ಅನ್ನುವ ಮನೋಭಾವನೆ ಜನರು ಸೃಷ್ಟಿಯಾಗಿದ್ದಾರೆ. ಕಾನೂನು ನಿಯಮಗಳಿಂದ ಜನರ ಸಂಯಮ, ಅಪರಾಧ ನಿಗ್ರಹಿಸಬಹುದು ವಿನಃ ಸಂಪೂರ್ಣ ತಡೆಯಲಾಗದು.

ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ)
ಸುಮಾರು 80 ವಯಸ್ಸಿನ ವಯೋವೃದ್ದ ಶರಣಪ್ಪನ್ನು ಮಕ್ಕಳು ನಾಗರಾಜ ಮತ್ತು ಶಿವರಾಜ (ಎಲ್ಲರ ಹೆಸರು ಬದಲಿಸಲಾಗಿದೆ) ತಮ್ಮ ಹೆಗಲು ಆಸರೆ ನೀಡಿ ಕೋರ್ಟ ಆವರಣದಲ್ಲಿ ಭೇಟಿಯಾದರು. ಜೊತೆಗೆ ಮಗಳು ಗೌರಿ ಜೊತೆಗೆ ಬಂದಿದ್ದಳು. ಪ್ರಶಸ್ತವಾದ ಸ್ಥಳದಲ್ಲಿ ಕುಳ್ಳಿರಿಸಿಕೊಂಡು ವಿಚಾರಿಸಿದೆ. ಹಿರಿಯ ಜೀವ ಶರಣಪ್ಪ ಅಶಕ್ತತೆಯಿಂದ ಆಗೊಮ್ಮೆ ಇಗೊಮ್ಮೆ ಕೆಮ್ಮುತ್ತ ನಿಟ್ಟಿಸುರು ಬಿಡುತ್ತಿದ್ದರು. ” ಸರ್ ನಮಗೆಲ್ಲ ಕೋರ್ಟಿನಿಂದ ನೋಟಿಸು ಬಂದಿವೆ ನೋಡಿ” ಎಂದು ಕೈಗಿಟ್ಟರು. ನಾಗರಾಜ ಮತ್ತು ಶಿವರಾಜನ ಹೆಂಡತಿಯರ ಮಕ್ಕಳು ವಾದಿಯರೆಂದು, ತಮ್ಮ ಗಂಡಂದಿರ ಮಾವ ಶರಣಪ್ಪ ಮತ್ತು ಅವಿವಾಹಿತ ಸಹೋದರಿ ಗೌರಿ ಪ್ರತಿವಾದಿಯರೆಂದು ಜಮೀನಿನ ಲ್ಲಿ ಪಾಲು ಕೇಳಿ ಹಿಸ್ಸೆ ವಿಭಜನೆ ಮತ್ತು ಪ್ರತ್ಯೇಕ ಸ್ವಾಧೀನಕ್ಕೆ ಪ್ರಾರ್ಥಿಸಿ ದಾವೆ ಮಾಡಿದ್ದರು. ವಾದ ಪತ್ರದಲ್ಲಿ, ವಾದಿ ಪ್ರತಿವಾದಿಯರ ಮನೆತನದಲ್ಲಿ ದಾವೆ ಆಸ್ತಿ ಹೊರತು ಪಡಿಸಿ ಬೇರೆ ಆಸ್ತಿಯಲ್ಲಿ ಪಾಲು ಆಗಿದ್ದು, ದಾವೆ ಆಸ್ತಿ ಏಕತ್ರ ಕುಟುಂಬದ ಆಸ್ತಿಯೆಂದು ವಿವರಿಸಿದ್ದರು. ನಿಮ್ಮ ನಿಲುವು ಏನು ಅನ್ನುವಂತೆ ಅವರೆಡೆ ನೋಡಿದೆ. ಶರಣಪ್ಪ ಕಷ್ಟಪಟ್ಟು ವಿವರವಾಗಿ ಮಾಹಿತಿ ನೀಡಿದರು.
” ವಕೀಲ ಸರ್, ಇಬ್ಬರು ಅಕ್ಕ ತಂಗಿಯರನ್ನು ನನ್ನ ಮಕ್ಕಳಾದ ನಾಗರಾಜ, ಶಿವರಾಜರರಿಗೆ ಮದುವೆ ಮಾಡಿದೆವು. ಇಬ್ಬರಿಗು ಎರಡೆರಡು ಮಕ್ಕಳು. ಸೊಸೆಯಂದಿರಿಗೆ ಗಂಡಂದಿರ ಗಳಿಕೆ ಮೀರಿ ಜೀವನ ಶೈಲಿ ಅಪೇಕ್ಷಿಸಿದರು. ಮನೆ ರಣರಂಗವಾಯಿತು. ಹಿರಿಯರು ಸೇರಿದರು. ನಾನು ಉಳಿಸಿಕೊಂಡು ಬಂದ ಪಿತ್ರಾರ್ಜಿತ ಮನೆತನ ಹತ್ತು ಎಕರೆ ಜಮೀನು ಭಾಗವಾಯಿತು. ನಾಗರಾಜ ಹೆಂಡತಿ ಮಕ್ಕಳಿಗೆ 5 ಎಕರೆ, ಶಿವರಾಜ ಹೆಂಡತಿ ಮಕ್ಕಳಿಗೆ 5 ಎಕರೆ ಜಮೀನು ಬಂದಿತು. ನನಗೆ ಮಗಳು ಗೌರಿ ಹಿಸ್ಸೆಗೆ ಹೆಸರಿಗೆ ಮಾತ್ರ ತಲಾ ಐವತ್ತು ಸಾವಿರ ಹಣ ಎಂದು ತೋರಿಸಿ ಪಾಲು ಪತ್ರ ಮಾಡಿದರು. ಅವರವರ ಹೆಸರು ಜಮೀನಿನ ಕಂದಾಯ ದಾಖಲೆಯಲ್ಲಿ ದಾಖಲಾದವು. ಸೊಸೆಯಂದಿರು ಗಂಡಂದಿರನ್ನು ತೊರೆದು ಮಕ್ಕಳೊಂದಿಗೆ ತವರು ಮನೆ ಸೇರಿದರು. ಜಮೀನು ಸ್ವಾಧೀನ ತೆಗೆದುಕೊಂಡರು. ಅವರಿಗೆ ಬೇಕಿದ್ದು ಆಸ್ತಿ ಮಾತ್ರ, ಸಂಸಾರ ಆಗಿರಲಿಲ್ಲ.” ಮಾತಿಗೆ ಅಲ್ಪ ವಿರಾಮ ಹೇಳಿದರು.
” ನೋಡ್ರಿ ಸಾಹೇಬ್ರೆ, ಈಗ ನನ್ನ ಹೆಸರಿಗೆ ಇರುವ ಎರಡು ಎಕರೆಗೂ ಕಣ್ಣು ಹಾಕಿದ್ದಾರೆ. ಈ ವಯಸ್ಸಿನಲ್ಲಿ ನನ್ನ ಉಪಜೀವನಕ್ಕೆ ಆಸರೆ ಇರುವುದು ಇದೊಂದೆ ಆಸ್ತಿ. ಸೊಸೆಯಂದಿರು ಪಿತ್ರಾರ್ಜಿತ ಜಮೀನು ಕಸಿದುಕೊಂಡು, ನನ್ನ ಗಂಡು ಮಕ್ಕಳನ್ನು ಬಿಟ್ಟು ಹೋಗಿದ್ದಾರೆ. ಮಗಳ ಮದುವೆ ಆಗಬೇಕಿದೆ. ಇಷ್ಟೆ ಆಸ್ತಿಯಲ್ಲಿ ನಾವೆಲ್ಲಾ ಹೊಟ್ಟೆ ತುಂಬಿಕೊಳ್ಳಬೇಕಿದೆ.” ಎಂದು ಕಣ್ಣೀರು ಸುರಿಸಲಾರಂಬಿಸಿದರು. ಮಕ್ಕಳ ಕಣ್ಣಾಲಿಗೆ ತುಂಬಿದವು. ಸ್ವಲ್ಪ ಹೊತ್ತು ನಮ್ಮ ನಡುವೆ ನಿಶಬ್ದ ಮೌನ ಆವರಿಸಿತು. ಮೌನ ಮುರಿದು ನಾನೆ ಮಾತು ಮುಂದುವರೆಸಿದೆ.”
ಯಜಮಾನ್ರೆ, ಈ ಆಸ್ತಿ ನಿಮಗೆ ಹೇಗೆ ಬಂತು? “ಎಂದು ಪ್ರಶ್ನಿಸಿದೆ.” ಸರ್, ನನ್ನ ಮದುವೆ ತಡವಾಗಿ ಆಗಿದೆ. ದಾವೆ ಜಮೀಣನನ್ನು ಸಾಗು ಮಾಡುತ್ತಿದ್ದೇನು. ಭೂ ನ್ಯಾಯ ಮಂಡಳಿ,
ನಾನು ಟೆನಂಟ್ ಎಂದು ಘೋಷಿಸಿ ಆದಿಭೋಗದ ಹಕ್ಕು ಕೊಟ್ಟಿದ್ದಾರೆ. ನಂತರ ಮದುವೆ ಆಯಿತು ಮಕ್ಕಳು ಜನಿಸಿದರು. ಹೆಂಡತಿ ತೀರಿಕೊಂಡಳು. ಜಮೀನು ಸ್ವಯಾರ್ಜಿತ ಆಸ್ತಿ ಸಾಹೇಬ್ರೆ, ಉಳಿಸಿಕೊಡಿ ಇಲ್ಲಾಂದ್ರೆ ಈ ವಯಸ್ಸಲ್ಲಿ ನಾನು ಹೇಗೆ ಬದುಕೋದು?” ಎಂದು ದುಃಖಿಸಿಸಿದರು. “ಯಜಮಾನ್ರೆ, ಚಿಂತೆ ಬಿಡಿ. ನಾನಿದ್ದೇನೆ ” ಎಂದು ಹೇಳಿ ಭರವಸೆ ನೀಡಿದೆ.
ಪ್ರತಿವಾದಿಯರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿ, ಸುಧೀರ್ಘವಾದ ಲಿಖಿತ ಹೇಳಿಕೆ ತಕರಾರು ಸಲ್ಲಿಸಿದೆ. ವಾದಿಯರ ದುರಾಸೆ ಎಳೆ ಎಳೆಯಾಗಿ ಬಿಚ್ಚಿಟ್ಟೆ. ದಾವೆ ಜಮೀನು ಭೂ ನ್ಯಾಯಮಂಡಳಿ ಆದೇಶದಂತೆ ಶರಣಪ್ಪನಿಗೆ ಆದೇಶವಾಗಿದ್ದು ಮುಚ್ಚಿಟ್ಟು ದಾವೆ ಮಾಡಿದ್ದು ಎತ್ತಿ ತೋರಿಸಿದ ವಾದಿ ಪ್ರತಿವಾದಿಯರ ಪರ ಲಿಖಿತ ಮೌಕಿಕ ಸಾಕ್ಷಾಧಾರ. ವಾದಿ ಪ್ರತಿವಾದಿಯರ ಪರ ವಕೀಲರ ವಾದವನ್ನು ನ್ಯಾಯಾಲಯ ಗಮನಿಸಿತು.
ತೀರ್ಪು : ನ್ಯಾಯಾಲಯವು, ವಾದಿಯರ ದಾವೆಯನ್ನು ವಜಾಗೊಳಿಸಿ ತೀರ್ಪು ನೀಡಿತು. ನ್ಯಾಯಾಲಯವು, ವಾದಿಯರ ಲಾಲಸೆಯನ್ನು ಖಂಡಿಸಿ, ಪಿತ್ರಾರ್ಜಿ ಆಸ್ತಿಯನ್ನು ಎತ್ತಿ ಹಾಕಿದ್ದಲ್ಲದೆ, ವಯೋವೃದ್ಧ ಮಾವನಿಗೆ ವಿನಾಕಾರಣ ತೊಂದರೆ ನೀಡಿದ್ದಾರೆಂದು, ದಾವೆ ಜಮೀನು ಶರಣಪ್ಪನ ಸ್ವಯಾರ್ಜಿತ ಆಸ್ತಿ ಅದರಲ್ಲಿ ವಾದಿಯರಿಗೆ ಹಿಸ್ಸೆ ಇಲ್ಲ ಎಂದು ಅಭಿಪ್ರಾಯ ಪಟ್ಟಿತು. ವಾದಿಯರು ತೀರ್ಪಿನ ಮೇಲೆ ಮೆಲ್ಮನವಿ ಸಲ್ಲಿಸಿದರು. ಅದು ವಜಾಗೊಂಡಿತು.
ಅಂತಿಮ ಸತ್ಯದ ನ್ಯಾಯ ಪ್ರಕ್ರಿಯೆ ಮುಗಿದು ಇಡಿ ಕುಟುಂಬ ತೆರಳುವಾಗ ಜಯದ ಸಂಭ್ರಮ, ಹರುಷ ಇರಲಿಲ್ಲ, ಬಚಾವಾದೆವು ಅನ್ನುವ ಭಾವ ಇತ್ತು. ಸುಳ್ಳು ದಾವೆಯ ಷಡ್ಯಂತ್ರಕ್ಕೆ ಹಿರಿಯ ಜೀವ ಹಲವಾರು ವರ್ಷ ಕೋರ್ಟಿಗೆ ಅಲೆದಾಡಿ ಸಮಯ, ಹಣ ವ್ಯಯಿಸಿ ಹೈರಾಣಾಗಿ ದಣಿದು ಹೋಯಿತು. ಕುಟುಂಬದ ವ್ಯವಸ್ಥೆ ಅಲುಗಾಡಿತು. ಈ ಪ್ರಕರಣ ಉದಾಹರಣೆ ಆಗಿ ದಾಖಲಾಗುತ್ತದೆ ಅಷ್ಟೆ. ಪ್ರತಿ ಪ್ರಕರಣದ ತೀರ್ಪುಗಳು ಆಯಾ ಕೇಸಿನ ಸಂಗತಿ, ಸಂದರ್ಭ ಕಾನೂನು ಪ್ರಕ್ರಿಯೆಯಂತೆ ನಿರ್ಣಯ ಆಗಿರುತ್ತವೆ.
- ಪ್ರಕಾಶ ವಸ್ತ್ರದ – ವಕೀಲರು, ಲೇಖಕರು, ಮುಧೋಳ
