‘ಒಡಲ ಉರಿ’ ಸಣ್ಣಕತೆ – ಶೇಖರಗೌಡ ವೀ

ಡಾ.ಗಂಗಾಧರ್ ಮತ್ತು ಡಾ.ಪೂರ್ಣಿಮಾ ವೃತ್ತಿಯಲ್ಲಿ ವೈದ್ಯರಾಗಿದ್ದರು. ಅನ್ಯೋನ್ಯ ಸಂಸಾರ ಅವರದಾಗಿತ್ತು. ಆದರೆ ವೈದ್ಯ ದಂಪತಿಗಳ ಬದುಕಿನಲ್ಲಿ ದೊಡ್ಡ ಬಿರುಗಾಳಿಯನ್ನು ಎಬ್ಬಿಸಿದ್ದು ಡಾ.ಪೂರ್ಣಿಮಾ ಅವರ ಕಾರ್ ಅಪಘಾತ. ಡಾ.ಗಂಗಾಧರ್ ಮತ್ತೊಂದು ಮದುವೆಯಾಗದೆ ಮಗ ಸಾರ್ಥಕನಿಗೆ ಅಪ್ಪನ ಸ್ಥಾನದ ಜೊತೆಗೆ ಅಮ್ಮನ ಸ್ಥಾನವನ್ನು ತುಂಬಿ ಮಗನನ್ನು ಕೂಡ ವೈದ್ಯರನ್ನಾಗಿ ಮಾಡಿದರು. ಮುಂದೆ ಮತ್ತೊಂದು ಆಘಾತ ಕಾಯ್ದಿತ್ತು. ಕತೆಗಾರ ಶೇಖರಗೌಡ ವೀ ಸರನಾಡಗೌಡರ್ ಅವರ ಈ ಸಣ್ಣಕತೆಯನ್ನು ತಪ್ಪದೆ ಪೂರ್ತಿಯಾಗಿ ಓದಿ…

ಡಾ.ಗಂಗಾಧರ್ ಯೋಚನೆಯಲ್ಲಿ ಮುಳುಗಿದ್ದರು. ಮನಃಶಾಂತಿ ಕದಡಿ ಹೋಗಿತ್ತು. ಮನಸ್ಸು ಚಡಪಡಿಸುತ್ತಿತ್ತು, ಕಳ್ಳು ಕುಡಿದ ಕುದುರೆಯಂತೆ ಎತ್ತೆತ್ತಲೋ ಕೆನೆದಾಡುತ್ತಿತ್ತು. ತೊಣಚಿ ಹತ್ತಿದ ನಾಯಿಯಂತೆ ಒದ್ದಾಡತೊಡಗಿತ್ತು. ಕಲ್ಲೆಸೆದ ಕೊಳದಂತಾಗಿತ್ತು. ಒಂದೆಡೆ ನಿಲ್ಲದಾಗಿತ್ತು. ದೃಷ್ಟಿ ಎಲ್ಲೋ ನೆಟ್ಟಿತ್ತು. ಭಾವಶೂನ್ಯರಾಗಿ ಕುಳಿತಿದ್ದರು. ನಿರ್ಜೀವ ಭಾವ ದೇಹದಲ್ಲಿ ಮೇಳೈಸಿತ್ತು.

“ನಾನು ಯಾರಿಗೆ ಅನ್ಯಾಯ ಮಾಡಿರುವೆ…? ನನಗೆ ತಿಳಿದ ಮಟ್ಟಿಗೆ ನಾನು ಯಾರಿಗೂ ಅನ್ಯಾಯ ಮಾಡಿದವನೇ ಅಲ್ಲ. ಸಾರ್ವಜನಿಕರೆಲ್ಲರೂ ನನ್ನಿಂದ ಉಪಕಾರ ಪಡೆದವರೇ. ವೈದ್ಯಕೀಯ ವೃತ್ತಿಯ ವೃತ್ತಿ ಧರ್ಮದಂತೆ ನಾನು ಪ್ರಾಮಾಣಿಕವಾಗಿ, ನಿಷ್ಠೆಯಿಂದ ನಿಸ್ಪøಹ ಸೇವೆ ಸಲ್ಲಿಸಿದವನೇ. ಕರ್ತವ್ಯದಲ್ಲಿ ಅನುಪಮ ಸಂತಸ ಅನುಭವಿಸಿದವನು. ಬಡಬಗ್ಗರಿಗೆ, ದೀನ ದಲಿತರಿಗೆ ಸರಕಾರಿ ಸೌಲಭ್ಯದ ಸೇವೆಯ ಜೊತೆಗೆ ನನ್ನ ಕೈಯಲ್ಲೂ ದುಡ್ಡನ್ನು ಖರ್ಚುಮಾಡಿ ಉಚಿತ ಸೇವೆ ನೀಡಿರುವ ಅದೆಷ್ಟೋ ಉದಾಹರಣೆಗಳಿವೆ. ಹಣ, ಆಮಿಷಗಳಿಗೆ ಮಾರಿಕೊಂಡವನಲ್ಲ. ಅಸಂಬದ್ಧ, ಅನಾವಶ್ಯಕ ಒತ್ತಡಗಳಿಗೆ ಮಣಿದವನಲ್ಲ. ಹೊತ್ತಲ್ಲದ ಹೊತ್ತಿನಲ್ಲಿ ನಿದ್ದೆಗೆಟ್ಟು, ಕಣ್ಣಿಗೆ ಎಣ್ಣೆ ಬತ್ತಿ ಹಾಕಿಕೊಂಡು ರೋಗಿಗಳಿಗೆ ಸೇವೆ ಸಲ್ಲಿಸಿ ವೃತ್ತಿಯಲ್ಲಿ ಸಂತೃಪ್ತಿಯ ಭಾವ ಅನುಭವಿಸಿರುವೆನಲ್ಲ? ಮತ್ತೆ ನನಗ್ಯಾಕಿಂಥ ಕ್ರೂರ ಶಿಕ್ಷೆ…? ಅಗೋಚರ ಶಕ್ತಿಯ ಕಾಣದ ಕೈವಾಡಕ್ಕೆ ನನ್ನ ಜೀವನವೆಂಬುವುದು ಗೋಳಿನ ಕಥೆಯಾಗಿದೆಯಲ್ಲ…? ನನಗೊಂದೂ ಅರ್ಥವಾಗುತ್ತಿಲ್ಲ…? ನನ್ನ ಪ್ರಾಮಾಣಿಕ ಸೇವೆಗೆ ಸಂದಿರುವ ಉಡುಗೊರೆ ಇದೇನಾ? ಸದ್ಯದ ಜಾಯಮಾನದಲ್ಲಿ ವೈದ್ಯಕೀಯ ವೃತ್ತಿ ವ್ಯಾಪಾರೀಕರಣವಾಗಿರುವುದಾದರೂ ನಾನಂಥ ಶೋಷಣೆಗೆ ಮುಂದಾಗಿಲ್ಲ. ಕರ್ತವ್ಯವೇ ದೇವರು ಎಂದವ ನಾನು. ಅಣ್ಣ ಬಸವಣ್ಣನವರ ಮಾತಿನಂತೆ ಕಾಯಕದಲ್ಲಿ ಕೈಲಾಸ ಕಂಡುಕೊಳ್ಳುತ್ತಿರುವವನು.

ಭಗವಂತ, ನನ್ನ ಜೀವನವನ್ನೇಕೆ ನರಕವನ್ನಾಗಿ ಮಾಡಿಬಿಟ್ಟಿ? ನನ್ನ ಜೀವನವನ್ನೇ ಬರಡು ಮಾಡಿಬಿಟ್ಟೆಯಲ್ಲ…? ನನಗೆ ಎಲ್ಲವೂ ಇದ್ದು ಏನೂ ಇಲ್ಲದಂತೆ ಮಾಡಿಬಿಟ್ಟಿರುವಿಯಲ್ಲ? `ಕಲಿಯುಗದಲ್ಲಿ ಯಾರ ಶಾಪ ಯಾರಿಗೂ ತಟ್ಟುವುದಿಲ್ಲ. ಅವರು ಮಾಡಿದ ಕರ್ಮ ಅವರನ್ನೇ ತಿನ್ನುತ್ತದೆ’ ಅಂತ ದಾರ್ಶನಿಕರು ಹೇಳುತ್ತಾರೆ. ಸತ್ಕರ್ಮವನ್ನೇ ನನ್ನ ವೃತ್ತಿಯನ್ನಾಗಿ ಮಾಡಿಕೊಂಡಿದ್ದಕ್ಕೆ ನನಗಿಂಥ ಶಿಕ್ಷೆಯೇ? ನಾನು ಮಾಡಿರುವ ಅಪರಾಧವಾದರೂ ಏನು? ನಾ ಮಾಡಿರುವ ಅಪರಾಧಗಳನ್ನಾದರೂ ಪಟ್ಟಿಮಾಡಿ ತೋರಿಸು. ಆವಾಗಲಾದರೂ ನೀ ನನಗೆ ಕೊಟ್ಟ ಶಿಕ್ಷೆ ಸರಿ ಎಂದು ಒಪ್ಪಿಕೊಳ್ಳುವೆ. ಏನೂ ತಪ್ಪು ಮಾಡದವನಿಗೆ ಇಂಥಹ ಕಠೋರ ಶಿಕ್ಷೆ ನ್ಯಾಯವೇ? ಭಗವಂತ, ನಿನ್ನ ನ್ಯಾಯಾಲಯದಲ್ಲಿ ನ್ಯಾಯದ ತಕ್ಕಡಿ ನ್ಯಾಯದ ಕಡೆಗೆ ತೂಗುವುದಿಲ್ಲವೇ? ಅನ್ಯಾಯ, ಅಧರ್ಮಕ್ಕೇ ಮನ್ನಣೆಯಾ…? `ಬದುಕನ್ನು ಪ್ರೀತಿಸುತ್ತಾ ಸಾಗಿದರೆ ಆ ಬದುಕೇ ನಮ್ಮನ್ನು ಸ್ವಾಗತಿಸುತ್ತದೆ’ ಅಂತ ಹೇಳುತ್ತಾರೆ. ನಾ ಅದ್ಹೇಗೆ ಬದುಕನ್ನು ಪ್ರೀತಿಸಲಿ? `ಬಂಗಾರದ ಪಾತ್ರೆಯಲ್ಲಿರುವ ಹಳಸಿದ ಅನ್ನ’ದಂತಾಗಿದೆ ನನ್ನ ಜೀವನವೀಗ. ಮನಃಶಾಂತಿ ಇಲ್ಲದ ಸಂಪತ್ತು ಇದ್ದರೂ ಅಷ್ಟೇ, ಇಲ್ಲದಿದ್ದರೂ ಅಷ್ಟೇ ಅಲ್ಲವೇ? ನಾಯಿಯ ಕೆಚ್ಚಲಿನಲ್ಲಿರುವ ಹಾಲಿನಂತಾಗಿದೆ ನನ್ನ ಸಂಪತ್ತು. ಅತ್ತ ದೇವರ ನೈವೇದ್ಯಕ್ಕೂ ಬರುವುದಿಲ್ಲ, ಇತ್ತ ಗೃಹ ಬಳಕೆಗೂ ಬರುವುದಿಲ್ಲ. `ಹರಿಯುವ ನದಿಯಂತೆ ಬದುಕಬೇಕು, ಎಷ್ಟೇ ಅಡೆತಡೆಗಳು ಬಂದರೂ ಮುನ್ನುಗ್ಗಬೇಕು’ ಅಂತ ಹೇಳುತ್ತಾರೆ. ಬರೀ ಅಡೆತಡೆಗಳೇ ಜೀವನವಾದರೆ ಹೇಗೆ…? ನನ್ನ ಜೀವನದಲ್ಲಿ ಬಂದ ಅಡೆತಡೆಗಳು ಒಂದೇ ಎರಡೇ…? ಎಲ್ಲವನ್ನೂ ಸಹಿಸಿಕೊಂಡು ಮುನ್ನಡೆಯುತ್ತಿರುವೆ. ನನ್ನದೊಂಥರ ಭಂಡ ಬದುಕೇ. ನನ್ನ ಬಾಳೇ ಗೋಳಿನಿಂದ ತುಂಬಿದೆ. ಈ ಪಾಪಿ ಜೀವ ಇನ್ನೂ ಬದುಕಿರುವುದಾದರೂ ಯಾತಕ್ಕೋಸ್ಕರವೋ ಏನೋ? ಭಗವಂತ, ನನ್ನೂ ತೊಗೊಂಡು ಹೋಗಿದ್ದರೆ ನಿಂದೇನು ಗಂಟು ಹೋಗುತ್ತಿತ್ತು? `ನಿನ್ನ ಸರದಿ ಇನ್ನೂ ಬಂದಿಲ್ಲ. ನಿನ್ನದು ಇನ್ನೂ ಮುಗಿದು ಬಂದಿಲ್ಲ. ಭೂಮಿಯ ಋಣ ಮುಗಿದಾಗ ನೀ ಒಂದು ಕ್ಷಣಾನೂ ಇಲ್ಲಿರಂಗಿಲ್ಲ. ಆಗ ನಿನ್ನೂ ಕರೆದುಕೊಂಡು ಹೋಗುವೆ. ಅಲ್ಲಿಯವರೆಗೆ ನೀನು ಇನ್ನೂ ಏನೇನೋ ಅನುಭವಿಸಬೇಕಿದೆಯಲ್ಲ? ನೀನು ಪಡೆದುಕೊಂಡು ಬಂದಿದ್ದನ್ನು ನೀನೇ ಅನುಭವಿಸಬೇಕು ತಾನೇ? ಯಾರೂ ಯಾರದನ್ನೂ ಹಂಚಿಕೊಳ್ಳಲಾಗುವುದಿಲ್ಲ ಎನ್ನುವುದು ನಿನಗೆ ಗೊತ್ತೇ ಇದೆ. ಈ ನಿನ್ನ ವಯಸ್ಸಿಗೆ ತಾಳ್ಮೆಯೇ ಜೀವನವಾಗಬೇಕು ಅಷ್ಟೇ’ ಎಂದೆನ್ನುವಿಯಾ ಭಗವಂತ? ಕಾಣದ ಲೋಕದಲ್ಲಿ ಕುಳಿತು ಸಕಲ ಜೀವಿಗಳನ್ನು ಬೊಂಬೆಗಳಂತೆ ಆಡಿಸುತ್ತಿರುವ ನೀನೇ ಮಹಾಮಹಿಮ.” ಹೀಗೆ ಏನೇನೋ ಯೋಚನೆಗಳ ತಾಕಲಾಟ ಡಾ.ಗಂಗಾಧರ್ ಅವರ ಮನದಲ್ಲಿ.

ಫೋಟೋ ಕೃಪೆ : ಅಂತರ್ಜಾಲ

ಡಾ.ಗಂಗಾಧರರ ದೃಷ್ಟಿ ವಿಶಾಲವಾದ ತಮ್ಮ ಬೆಡ್ ರೂಮಿನ ವಿಶಾಲವಾದ ಎರಡು ಕಿಟಕಿಗಳತ್ತ ಹರಿಯಿತು. ಎರಡೂ ಕಿಟಕಿಗಳ ಮಧ್ಯದಲ್ಲಿದ್ದ ವಿಶಾಲವಾದ ಮೇಜಿನ ಮೇಲಿದ್ದ ಆಳೆತ್ತರದ ಚಿತ್ರಪಟದಲ್ಲಿ ಅವರ ದೃಷ್ಟಿ ನೆಲೆ ನಿಂತಿತು. ಬಂಗಾರದ ಬಣ್ಣದ ಸುಂದರ ವಿನ್ಯಾಸದಲ್ಲಿ ತಯಾರಿಸಿದ್ದ ಭವ್ಯ ಫ್ರೇಮಿನೊಳಗಡೆ ವಿರಾಜಮಾನಳಾಗಿದ್ದ ಡಾ.ಪೂರ್ಣಿಮಾಳ ಸುಂದರ ವದನದ ಭಾವಗಳಲ್ಲಿ ಏನೋ ಹುಟುಕಾಟ ನಡೆಸಿತು ಅವರ ಮನಸ್ಸು. ಮೈತುಂಬಾ ಸೆರಗನ್ನು ಹೊದ್ದು ನಿಂತಿದ್ದ ಸ್ನಿಗ್ಧ ಸೌಂದರ್ಯ ದೇವತೆ, ನಗುಮೊಗದ ಮಂದಸ್ಮಿತೆ ಡಾ.ಪೂರ್ಣಿಮಾಳ ಆ ಭಾವಚಿತ್ರ ನೋಡುಗರ ಎದೆಯಲ್ಲಿ ಗೌರವದ ಭಾವನೆ ಮೂಡಿಸುವಂತಿತ್ತು. ಅಪಾದ ಮಸ್ತಕದವರೆಗೆ ಡಾ.ಗಂಗಾಧರರ ಕಣ್ಣೋಟ, ಮನಸ್ಸು, ಭಾವಗಳು ತುಸು ಹೊತ್ತು ಹರಿದಾಡಿದವು. ಚಿತ್ರಪಟದಲ್ಲಿನ ಪುತ್ಥಳಿಯನ್ನು ನೋಡೇ ನೋಡಿದರು. ಕಣ್ಣು ಪಿಳುಕಿಸದೇ ನೋಡಿದರು. ದೃಷ್ಟಿ ತಾಗುವಂತೆ ದಿಟ್ಟಿಸಿದರು. ತಮ್ಮ ನೋಟಕ್ಕೆ ತಾವೇ ಬಯ್ದುಕೊಂಡರು. ಲಜ್ಜಾ ಹೀನರಾಗಿ ನೋಡಿದರು. ಕೊನೆಗೆ ಡಾ.ಪೂರ್ಣಿಮಾಳ ಕಣ್ಣೋಟದಲ್ಲೇ ಡಾ.ಗಂಗಾಧರರ ಕಣ್ಣೋಟ ಸ್ಥಿರವಾಯಿತು. ಕಣ್ರೆಪ್ಪೆಗಳ ಓಡಾಟ ನಿಂತು ಹೋಯಿತು. ಅದೆಷ್ಟೋ ಹೊತ್ತು ಹಾಗೇ ನೋಡುತ್ತಿದ್ದರು. ಅದೇನಾಯಿತೋ ಏನೋ, ತುಸು ಹೊತ್ತಿನ ನಂತರ ಏಕಾಯೇಕಿ ಗದ್ಗದಿತರಾದರು, ಅಳತೊಡಗಿದರು. ಗಟ್ಟಿಸಿ ಗಟ್ಟಿಸಿ ಅಳತೊಡಗಿದರು. ಕಣ್ಣೀರು ಧಾರೆ ಧಾರೆಯಾಗಿ ಇಳಿದು ಕುಳಿತಿದ್ದ ಹಾಸಿಗೆಯನ್ನು ತೋಯಿಸತೊಡಗಿತು. ಕಡೆಕೋಡಿ ಒಡೆದ ಕೆರೆಯ ಪ್ರವಾಹದಂತೆ ಕಣ್ಣೀರು ಧುಮ್ಮಿಕ್ಕತೊಡಗಿತು. ತೆಕ್ಕೆಗೆ ಹಾಕಿಕೊಂಡು ತಲೆಗೂದಲಲ್ಲಿ ಬೆರಳಾಡಿಸಿ, ಬೆನ್ನು ನೇವರಿಸಿ ಸಂತೈಸುವ ಕೈಗಳು ಅಲ್ಲಿರಲಿಲ್ಲ, ಸಂತೈಸಿ ಸಮಾಧಾನಿಸುವ ಹೃದಯವೂ ಅಲ್ಲಿರಲಿಲ್ಲ. ಅವರ ಅಳು ತಾರಕಕ್ಕೇರಿತು. ಕೇಳುವವರಿರಲಿಲ್ಲ, ಮನಸ್ಸಿನ ಗಾಯಕ್ಕೆ ಪ್ರೀತಿಯ ಮುಲಾಮು ಹಚ್ಚುವವರಿರಲಿಲ್ಲ. ತುಸು ಹೊತ್ತಾಗುವಷ್ಟರಲ್ಲಿ ಕಣ್ಣೀರಿನ ಸೆಲೆ ಬತ್ತಿ ಹೋಯಿತೇನೋ? ತಾರಕಕ್ಕೇರಿದ್ದ ಅಳು ನಿಧಾನಗತಿಯಲ್ಲಿ ಇಳಿಮುಖವಾಗಿ ಸಾಗತೊಡಗಿತು. ಕಣ್ಣೀರ ಪ್ರವಾಹದ ಸೆಳವು ಕಡಿಮೆಯಾಗುತ್ತಾ ಹಾಗೇ ನಿಂತು ಹೋಯಿತು. ಭಾವಶೂನ್ಯರಾಗಿ ನೋಡತೊಡಗಿದರು.
“ಏಯ್ ಪೂರ್ಣೀ, ಹೀಗೆ ನಗುತ್ತಾ ಯಾಕೆ ನನ್ನ ಕೊಲ್ಲಾಕತ್ತೀದಿ? ಇಲ್ಲಿ ನನ್ನವರೆನ್ನುವವರು ನನಗೆ ಯಾರಿದ್ದಾರೆ? ಯಾರೂ ಇಲ್ಲ. ಎಲ್ಲರೂ ನನ್ನ ನಡು ನೀರಿನಲ್ಲಿ ಬಿಟ್ಟು ಹೋಗಿಬಿಟ್ಟಿರಿ. ಏಕಾಂಗಿಯಾಗಿರುವ ನಾನೀಗ ಅನಾಥನೇ ಸೈ. ನನಗೆ ದಿಕ್ಕೂ ಇಲ್ಲ, ದೆಶೆಯೂ ಇಲ್ಲ. ಒಂಥರ ದೆಶೆಗೇಡಿ ಅಂತ ಅನ್ನು. ನನ್ನೆದೆಯೊಳಗಿನ ಸಂಕಟ, ತಳಮಳ, ಕುದಿ, ಕಿಚ್ಚು, ನೋವು ನಿನಗೆ ಹಾಸ್ಯಾಸ್ಪದವಾಗಿ ಕಾಣುತ್ತಿವೆಯೇ…? ಹೌದೌದು, ನಿನಗೆ ಹಾಗೇ ಕಾಣುತ್ತಿರಬೇಕು? ಇಲಿಗೆ ಪ್ರಾಣ ಸಂಕಟವಾದರೆ ಬೆಕ್ಕಿಗೆ ಚೆಲ್ಲಾಟವಲ್ಲವೇ? ನಾನೊಂಥರ ಜೀವಂತ ಶವದಂತೆ ಆಗಿರುವುದು ನಿನಗೆ ಕಾಣುತ್ತಿಲ್ಲವೇ? ಮೇಲ್ನೋಟಕ್ಕೆ ನೋಡುಗರಿಗೆ ನನ್ನ ದೇಹವೇನು ಸರಿಯಾಗೇ ಕಾಣುತ್ತಿದೆ. ಆದರೆ ಒಳಗೆ? ಗೊರಲಿ ಹತ್ತಿದ ಕಟ್ಟಿಗೆಯ ತುಂಡಿನಂತಾಗಿದೆ. ಮುಟ್ಟಿದರೆ ಯಾವಾಗ ಪುಡಿಪುಡಿಯಾಗುತ್ತದೆಯೋ ಏನೋ? ನನ್ನನ್ನೂ ನಿನ್ನ ಜೊತೆಗೇ ಕರೆದುಕೊಂಡು ಹೋಗಿದ್ದರೆ ಆಗುತ್ತಿರಲಿಲ್ಲವೇ? ಹಾಗಾಗಿದ್ದರೆ ನನ್ನ ಬಾಳಿನಲ್ಲಿ ಗೋಳು ಎಂಬುದೇ ಇರುತ್ತಿರಲಿಲ್ಲ, ಜಂಜಾಟವಿರುತ್ತಿರಲಿಲ್ಲ.” ಸ್ವಗತದಲ್ಲಿ ಏನೇನೋ ಒಂದಿಷ್ಟು ಗುನುಗಿಕೊಂಡರು ಡಾಕ್ಟರ್. ಅವರ ಅಳು, ಧ್ವನಿ ಯಾರ ಕಿವಿಗೂ ತಲುಪಲಿಲ್ಲ. ತುಸು ಸಮಯವಾಗುವಷ್ಟರಲ್ಲಿ ಮತ್ತೆ ಅವರ ಎದೆ ಭಾರವಾಯಿತು. ಎದೆಯೊಳಗೆ ಮತ್ತೆ ದುಃಖ ಮಡುವುಗಟ್ಟಿತು. ಹಾಗೆ ಮಡುವುಗಟ್ಟಿದ ದುಃಖ ಕಣ್ಣೀರ ಧಾರೆಯ ರೂಪದಲ್ಲಿ ಇಳಿಯಲು ಶುರುವಾಯಿತು. ಅವರಿಗರಿವಿಲ್ಲದಂತೆ ಮತ್ತೆ ಬಿಕ್ಕತೊಡಗಿದರು. ಬಿಕ್ಕಿಸಿ ಬಿಕ್ಕಿಸಿ, ಗಟ್ಟಿಸಿ ಗಟ್ಟಿಸಿ, ದುಃಖಿಸಿ ದುಃಖಿಸಿ ಅಳತೊಡಗಿದರು.

ಅಷ್ಟರಲ್ಲಿ ಬಲಭುಜದ ಮೇಲೆ ಯಾರೋ ಕೈ ಇಟ್ಟ ಅನುಭವ ಅವರಿಗೆ. ಮುಖ ತಿರುಗಿಸಿ, ಕಣ್ಣು ಹೊರಳಿಸಿ, ಅರಳಿಸಿ ನೋಡಿದರು. ಯಾರೂ ಕಾಣಲಿಲ್ಲ. ಹಾಗೇ ಕಣ್ಣೀರಿನಿಂದ ಮಂಜುಮಂಜಾಗಿದ್ದ ಕಣ್ಣುಗಳನ್ನು ಪಕ್ಕದಲ್ಲೇ ಇದ್ದ ವಸ್ತ್ರದಿಂದ ಒರೆಸಿಕೊಂಡರು. ಕಣ್ಣುಗಳ ದೃಷ್ಟಿ ಒಂದಿಷ್ಟು ನಿಚ್ಚಳವಾಯಿತು. ಮತ್ತೆ ಮತ್ತೆ ಕಣ್ಣಗಲಿಸಿ ನೋಡಿದರು. ಯಾರೂ ಕಾಣಲಿಲ್ಲ. ಮತ್ತೆ ಅವರ ದೃಷ್ಟಿ ಮುಂದಿದ್ದ ಚಿತ್ರಪಟದ ಕಡೆಗೆ ಹರಿಯಿತು. ಚಿತ್ರಪಟದಲ್ಲಿದ್ದ ಪೂರ್ಣಿಮಾ ನಕ್ಕಂತಾಯಿತು. ಮತ್ತೆ ಯಾಕೋ ಎದೆಯೊಳಗಿನ ದುಃಖ, ನೋವು, ಹತಾಶೆ ಉಕ್ಕಿದಂತಾಯಿತು. ಮತ್ತೆ ಬಿಕ್ಕುಗಳು ಶುರುವಿಟ್ಟುಕೊಂಡವು. ಅಳು ಹೊರಹೊಮ್ಮತೊಡಗಿತು. ಮತ್ತೆ ಯಾರೋ ಎರಡೂ ಭುಜಗಳ ಮೇಲೆ ಕೈ ಇಟ್ಟಂಗಾಯಿತು. ಆ ಹಿತವಾದ ಮೃದು ಸ್ಪರ್ಶದ ಅನುಭವ ಹೊಸದೆಂದು ಅನಿಸಲಿಲ್ಲ. ಅದೇ ಪರಿಚಿತ ಮೃದು ಹಸ್ತದ ಸ್ಪರ್ಶವೇ ಎಂದೆನಿಸಿತು. ತುಂಬಾ ಆತ್ಮೀಯ, ಆಪ್ತ ಎಂದೆನಿಸಿತು. ಎದೆಯೊಳಗೆ ಒಂಥರ ಭಾವಸ್ಪಂದನ. ಮತ್ತೆ ತಿರುಗಿ ನೋಡಿದರು. ಯಾವ ಆಕಾರವೂ ಕಾಣಲಿಲ್ಲ. `ಇದೇನು ದೆವ್ವ-ಗಿವ್ವದ ಕಾಟವೇ…?’ `ಛೇ…! ಛೇ…! ದೆವ್ವ-ಗಿವ್ವಗಳ ಇರುವಿಕೆಯಲ್ಲಿ ನನಗೆ ನಂಬಿಕೆಯೇ ಇಲ್ಲವಲ್ಲ? ಈಗೇಕೆ ಅದರ ಪರಿಕಲ್ಪನೆ…?’ ತಮ್ಮೊಳಗೇ ಅಂದುಕೊಂಡರು. ಮನಸ್ಸು ತಿಳಿಯಾಗಲಿಲ್ಲ. ಗೊಂದಲದ ಗೂಡಾಯಿತು. ಮೃದು ಹಸ್ತದ ಆತ್ಮೀಯ ಭಾವದ ಸ್ಪರ್ಶ ಎದೆಯೊಳಗೆ ಇಳಿಯತೊಡಗಿತು. `ಅರೇ, ಇದು ನನ್ನ ಪೂರ್ಣಿಯ ಹಸ್ತ ಸ್ಪರ್ಶ ಅಲ್ಲವೇ…? ಹಾಂ…! ಹೌದು, ಹೌದು. ಅವಳಿಲ್ಲಿ ಬಂದಿರುವ ಹಾಗಿದೆ…? ಹಾಗಿದ್ದರೆ ಅವಳೇಕೆ ನನಗೆ ಕಾಣಿಸುತ್ತಿಲ್ಲ? ಈ ನತದೃಷ್ಟನಿಗೇಕೆ ದರ್ಶನ ಕೊಡುತ್ತಿಲ್ಲ…?’ ಎಂದಂದುಕೊಳ್ಳುತ್ತಾ ಆ ಮೃದು ಹಸ್ತದ ಮೇಲೆ ತಮ್ಮ ಕೈ ಇಡಲು ಮುಂದಾದರು ಡಾ.ಗಂಗಾಧರ್. ಆದರೆ ಡಾ.ಪೂರ್ಣಿಮಾಳ ಹಸ್ತ ಡಾ.ಗಂಗಾದರರ ಕೈಗೆ ಸಿಗಲಿಲ್ಲ.

“ಯಾಕೆ ಪೂರ್ಣೀ, ನಿನಗೂ ನನ್ಮ್ಯಾಲೆ ಸಿಟ್ಟಾ…? ನಾನು ನಿನಗೂ ಬ್ಯಾಡಾದೆನೇ…?” ಡಾ.ಗಂಗಾಧರ್ ಹಲಬುತ್ತಾ ಚಡಪಡಿಸತೊಡಗಿದರು.

“ಏಯ್ ಗಂಗೂ, ನಾನ್ಯಾಕೆ ನಿನ್ಮ್ಯಾಲೆ ಸಿಟ್ಟಾಗ್ಲೀ…? ಅಯ್ಯೋ ನನ್ನಪ್ಪಾ, ನಿನ್ಮ್ಯಾಲೆ ಸಿಟ್ಟಾಗಿ ನಾ ಯಾವ ನರಕಕ್ಕೆ ಹೋಗ್ಲಿ…? ನೀ ಒಂತಟಗು ಒಳಗಣ್ಣಿನಿಂದ ನನ್ನ ನೋಡು. ಆವಾಗ ನಾ ನಿನ್ಗೆ ಕಂಡೇ ಕಾಣ್ತೀನಿ.” ಕಿಲಕಿಲ ನಕ್ಕ ಸ್ವರ ಕೋಣೆಯಲ್ಲಿ ಅನುರಣಿದಂತಾಯಿತು. ಡಾ.ಗಂಗಾಧರ್ ಮತ್ತು ಡಾ.ಪೂರ್ಣಿಮಾ ಪರಸ್ಪರ ಯಾವಾಗಲೂ ಏಕವಚನದಲ್ಲೇ ಮಾತಾಡುತ್ತಿದ್ದರು.

“ಹಾಂ…! ಹೌದಲ್ವಾ…? ನಾ ಬರೀ ಹೊರಗಣ್ಣಿನಿಂದ ನೋಡಿದ್ರೆ ನನ್ ಪೂರ್ಣಿ ನನ್ಗೆಲ್ಲಿ ಕಾಣ್ತಾಳ…?” ಎಂದೆನ್ನುತ್ತಾ ಡಾ.ಗಂಗಾದರ್ ತುಸು ಹೊತ್ತು ಕಣ್ಣುಗಳನ್ನು ಮುಚ್ಚಿಕೊಂಡು ಧ್ಯಾನಾಸಕ್ತ ಭಂಗಿಯಲ್ಲಿ ಕುಳಿತುಕೊಂಡರು.

“ಹಾಂ ಪೂರ್ಣೀ, ನೀನೀಗ ನನ್ಗೆ ಸ್ಪಷ್ಟವಾಗಿ ಕಾಣಾಕತ್ತೀದಿ…”

“ಸರಿ, ಅದಿರ್ಲಿ ದೊರೆಯೇ, ಈಗ ನನ್ನ ಆಹ್ವಾನಿಸಿದ್ದಾದ್ರೂ ಯಾಕೆ ಅಂತೀನಿ…?”

“ಪೂರ್ಣೀ, ನನಗೀಗ ಜೀವನ ಬ್ಯಾಸ್ರ ಆಗ್ಲಿಕತ್ತೇದ. ನೀ ಹೋಗೋದು, ಹೋದಿ, ಒಬ್ಳೇ ಯಾಕ್ ಹೋದಿ? ನನ್ನೂ ಯಾಕ್ ಜೊತಿಗೆ ಕರ್ಕೊಂಡು ಹೋಗ್ಲಿಲ್ಲ…? ಈಗ ಇಲ್ಲಿ ನಂದೇನು ಐತಿ ಅಂತ ನಾ ಜೀವ್ನ ಮಾಡ್ಬೇಕು? ಏಕಾಂಗಿಯಾಗಿ ನಾನ್ಯಾಕೆ ಬಾಳಿ ಬದುಕಬೇಕು? ನನ್ಗಿಲ್ಲಿ ಯಾರು ಅದಾರ ಅಂತ ಜೀವ ಹಿಡ್ಕೊಳ್ಳಿ…? ಒಮ್ಮೊಮ್ಮೆ ನನ್ನ ಆಸ್ತೀನೆಲ್ಲ ಯಾವ್ದಾದ್ರೂ ಮಠಕ್ಕೆ, ಇಲ್ಲಾ ಅನಾಥಾಶ್ರಮಕ್ಕೆ ವರ್ಗಾಯಿಸಿ ಜೀವನವನ್ನು ಕೊನೆಗಾಣಿಸಿಕೊಂಡ್ಬಿಡಬೇಕು ಅಂತ ಅನಸ್ತದ. ಎಪ್ಪತ್ತರ ಈ ಇಳಿವಯಸಿನ್ಯಾಗ ನಾ ಸಾಧಿಸುವುದಾದ್ರೂ ಏನೈತಿ…? ನನ್ನೀ ನೋವಿನ ಕಥೆಗೆ ಮಂಗಳ ಹಾಡ್ಬಿಡ್ಬೇಕು ಅಂತ ಅನಸತೈತಿ…” ಇಷ್ಟು ಹೇಳುವಷ್ಟರಲ್ಲಿ ಡಾ.ಗಂಗಾಧರ್ ಭಾವೋದ್ವೇಗಕ್ಕೆ ಒಳಗಾಗತೊಡಗಿದರು. ಮತ್ತೆ ಎದೆ ತುಂಬಿ ಬಂತು. ಕಣ್ಣುಗಳಲ್ಲಿ ಪಸೆ ಮೂಡಿ ದೃಷ್ಟಿ ಮಬ್ಬಾಯಿತು.

“ಗಂಗೂ, ನಾನೇನು ನಿನ್ನ ಬಿಟ್ಟು ಒಬ್ಳೇ ಹೋಗ್ಬೇಕು ಅಂತ ದೇವ್ರಲ್ಲಿ ಬೇಡ್ಕೊಂಡಿದ್ನೇನು…? ಮುತ್ತೈದೆ ಸಾವು ಕೊಡು ಅಂತ ಕೇಳ್ಕೊಂಡಿದ್ನೇನು? ಇಲ್ಲವಲ್ಲ…? ತಮ್ಮ ಸಾವು ಯಾವಾಗ ಬರುತ್ತೆ ಅಂತ ಯಾರ್ಗೂ ಗೊತ್ತಿಲ್ಲ ತಾನೇ? ಭೂಮಿಯ ಋಣ ಮುಗಿದಾಗ ಕಾಣದ ಕೈ ಸರದಿ ಪ್ರಕಾರ ಒಬ್ಬೊಬ್ಬರನ್ನೇ ಭೂಮಿಯೊಳ್ಗೆ ಸೇರ್ಸಿಬಿಡ್ತದ. ನನ್ ಸರ್ದಿ ಬಂದಿತ್ತು, ಭೂಮಿಯೊಳ್ಗೆ ತಳ್ಬಿಟ್ಟ ಅಷ್ಟೇ. ನಿನ್ ಪಾಳೆ ಇನ್ನೂ ಬಂದಿಲ್ಲ, ಅದ್ಕೇ ನಿನ್ನ ಭೂಮಿ ಮ್ಯಾಲೆ ಉಳಿಸ್ಯಾನ. ಸರ್ದಿ ಬಂದ್ಮ್ಯಾಲೆ ಒಂದು ಕ್ಷಣಾನೂ ಬಿಡಾವಲ್ಲ ಅವ. ನಿನ್ನ ಇನ್ನೂ ಯಾಕ್ ಕರ್ಕೊಂಡಿಲ್ಲ ಅಂದ್ರೆ ನಿನ್ನಿಂದ ಇನ್ನಾ ಬಾಳಷ್ಟು ಜನ್ರ ಪ್ರಾಣ ಉಳಿಬೇಕಾಗೈತಿ. ನಿನ್ನ ವೈದ್ಯಕೀಯ ಸೇವೆ ಇನ್ನೂ ಬಾಳಷ್ಟು ಜನ್ರಿಗೆ ಬೇಕಾಗೈತಿ ಅಲ್ಲೇನು…? ನಿನ್ನೆದಿಯೊಳ್ಗೆ ತುಂಬಿ ತುಳುಕಾಡ್ತಿರೋ ನೋವು, ದುಃಖ ಏನು ಅಂತ ನನ್ಗೆ ಗೊತ್ತಾಗಂಗಿಲ್ಲೇನು? ಆದ್ರೆ ನಿನ್ನ ನನ್ನೆದಿಗೆ ಒತ್ತಿಕೊಂಡು ಸಮಾಧಾನ ಮಾಡಿ ಸಂತೈಸ್ಲಿಕ್ಕೆ ಆಗವೊಲ್ತಲ್ಲ ಎಂಬ ಅಸಹಾಯಕತೆ ನನ್ನೆದಿಯೊಳ್ಗೂ ಭುಗಿಲೇಳೋದು ನಿಜ. ಅದೇನಿದ್ರೂ ನಿನ್ನಷ್ಟಕ್ಕೆ ನೀನೇ ಸಮಾಧಾನ ಮಾಡ್ಕೋಬೇಕು ಗಂಗೂ. ಪರದೆಯ ಹಿಂದೆ ನಾ ನಿನ್ಜೊತಿಗೆ ಇರ್ತೀನಿ. ಸುಮ್ನೇ ಚಿಂತಿ ಕಡಿಮಿ ಮಾಡು. ಕಹಿ ಎಲ್ಲವನ್ನೂ ಮರೆಯಲು ಗಟ್ಟಿ ಮನ್ಸು ಮಾಡು. ಚಿಂತಿ ಹೆಚ್ಚಾದಂಗೆಲ್ಲ, ಬ್ಯಾರೆ ಬ್ಯಾರೆ ರೋಗಗಳು ನಿನ್ನ ಮೈ, ಮನ ಆವರಿಸಿಕೊಂಡ್ಬಿಡ್ತವೆ. ಅದ್ಕೇ ಎದೆಯೊಳಗಿನ ಚಿಂತೀನೆಲ್ಲ ಕೊಡವಿ ರೋಗಿಗಳ ಆರೈಕೆಯಲ್ಲಿ ಮನಸ್ಸು ತೊಡಗಿಸು. ಎಲ್ಲಾ ತಾನಾಗಿಯೇ ಸರಿ ಹೋಗ್ತದೆ…”

“ಹೇಳೋಕೆ ಎಲ್ಲಾದೂ ಸಲೀಸು. ಆದ್ರೆ ಅನುಭವಿಸಿದಾಗ್ಲೇ ನೋವು ಹೆಂಗೆ ಅಂತ ಗೊತ್ತಾಗೋದು. ನೀ ಹೋದ್ಮ್ಯಾಲೆ ಎರ್ಡು-ಮೂರು ವರ್ಷದಾಗ ನಾ ಸುಧಾರಿಸಿಕೊಂಡಿದ್ದು ಖರೇನೇ…? ಆದ್ರೆ ಈಗ ಮತ್ತೊಂದು ಆಘಾತ ಆಗ್ಬಿಡ್ತಲ್ಲ, ನಾ ಹೆಂಗ ಮನುಷ್ಯ ಆಗ್ಲಿ…? ನನ್ ಜೀವನದಾಗ ಬರೀ ಆಘಾತಗಳೇ ಬೊಬ್ಬಿರಿಯಾಕತ್ಯಾವಲ್ಲ? ಆಘಾತಗಳ ಮೇಲೆ ಆಘಾತ ಅಂದ್ರೆ ನಾ ಹೆಂಗ ಸಹಿಸಿಕೊಳ್ಲಿ? ನಂದು ಪಾಪಿ ಜೀವನ. ಅದ್ಕೇ ಕಣ್ಣೆದುರಿಗೇ ಎಲ್ಲಾ ನೋಡ್ತಾ ಅನುಭವಿಸ್ಲಿಕತ್ತೀನಿ. ಈ ಸರಣಿ ಆಘಾತಗಳ ಪೆಟ್ಟಿನ್ಯಾಗ ನನ್ ಮುಷ್ಟಿ ಅಳತೆಯ ಹೃದಯ ಛಿದ್ರ ಛಿದ್ರ ಆಗಿದ್ರೆ ನನ್ಗೂ ಯಾವ ಚಿಂತೀನೂ ಇರ್ತಿರ್ಲಿಲ್ಲ. ಭಗವಂತ ನನ್ಪಾಲಿಗೆ ಇಲ್ಲ. ಬದುಕಿದ್ದಾಗ್ಲೇ ನನ್ ಜೀವ್ನಾನ ನರಕ ಮಾಡಿ ತಮಾಷೆ ನೋಡ್ಲಿಕತ್ಯಾನ ಅವ! ಏನ್ ಮಾಡೋದು…? ನನ್ ಕೈಯಾಗ ಅದೆಷ್ಟೋ ಜೀವಗಳು ಉಳಿದಿವೆ. ಆದ್ರೆ ನನ್ ಕುಟುಂಬದವರ ಜೀವಗಳನ್ನೇ ನುಂಗಿಬಿಟ್ನಲ್ಲ ದೇವ್ರು ಅನ್ನೋ ದೊಡ್ ವ್ಯಕ್ತಿ…? ನೀನ್ ನೋಡಿದ್ರೆ, `ಉಳಿದಿರೋ ಆಯುಷ್ಯಾನ ರೋಗಿಗಳ ಸೇವೆಯಲ್ಲಿ ಕಳೆ. ಸೇವೆಯಲ್ಲಿ ಖುಷಿ ಅನುಭವಿಸು. ಅದೂ ಭಗವಂತನಿಗೆ ಸಲ್ಲಿಸೋ ಸೇವೆ ಅಂತ ಅಂದ್ಕೋ. ಚಿಂತ್ಯಾಕ ಮಾಡ್ತೀ, ಚಿನ್ಮಯನಿದ್ದಾನ. ನಿನ್ ಅಂತರಂಗದಾಗ ನಾ ಯಾವಾಗ್ಲೂ ಇರ್ತೀನಿ ಅನ್ನೋದು ಮರೀಬ್ಯಾಡ’ ಅಂತ ಏನೇನೋ ಹೇಳಾಕತ್ತೀದಿ. ಪೂರ್ಣೀ, ನೀ ಹೇಳೋದೆಲ್ಲ ಸರೀನೇ. ಆದ್ರೆ ಎರ್ಡನೇ ಆಘಾತ, ಮೂರ್ನೇ ಆಘಾತಾನ ಹೆಂಗ ಸಹಿಸಿಕೊಳ್ಲಿ…?” ಡಾ. ಗಂಗಾಧರ್ ಮತ್ತೆ ಭಾವುಕರಾದರು. ದುಃಖದ ಕಟ್ಟೆ ಒಡೆಯಿತು. ಕಂಬನಿಯ ಧಾರೆ ಶುರುವಿಟ್ಟುಕೊಂಡಿತು. ಮತ್ತೆ ಭಾವಶೂನ್ಯರಾದರು. ಹಾಗೇ ನೆನಪಿನ ಉಗ್ರಾಣಕ್ಕಿಳಿದರು. ಒಂದಿಷ್ಟು ಸಿಹಿ-ಕಹಿ ಘಟನೆಗಳು ಮನದ ಮುಂದೆ ಧುತ್ತೆಂದು ಬಂದುನಿಂತವು.

ತುಂಗಭದ್ರಾ ನದಿ ತಟದ ಊರು ಡಾ.ಗಂಗಾಧರ್ ಅವರದು. ರೈತಾಪಿ ಕುಟುಂಬ. ತುಂಗಭದ್ರಾ ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಟ್ಟ ನೀರಾವರಿ ಪ್ರದೇಶ. ತಂದೆ ಶಿವಪ್ಪ, ತಾಯಿ ಗಿರಿಜಾದೇವಿ. ಶಿವಪ್ಪ-ಗಿರಿಜಾದೇವಿ ದಂಪತಿಗಳಿಗೆ ಬರೋಬ್ಬರಿ ಅರ್ಧ ಡಜನ್ ಮಕ್ಕಳು. ಮೂರು ಜನ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು. ಗಂಗಾಧರರಿಗೆ ಮೂವರು ಅಕ್ಕಂದಿರು, ಒಬ್ಬ ಅಣ್ಣ, ಒಬ್ಬ ತಮ್ಮ. ಮೂವರೂ ಅಕ್ಕಂದಿರಿಗೆ ಮದುವೆಯಾಗಿ ತಮ್ಮ ತಮ್ಮ ಗಂಡಂದಿರೊಂದಿಗೆ ಸುಂದರ ಸಂಸಾರ ಕಟ್ಟಿಕೊಂಡಿದ್ದರು. ಮಲ್ಲಿಕಾರ್ಜುನ್ ಅಣ್ಣನಾದರೆ ಗೌರಿಶಂಕರ್ ತಮ್ಮ. ತಂದೆ ಶಿವಪ್ಪನ ಒಡೆತನದಲ್ಲಿ ನೂರು ಎಕರೆ ಜಮೀನು ಇತ್ತು. ಮೂವರೂ ಗಂಡು ಮಕ್ಕಳಿಗೆ ಚೆನ್ನಾಗಿ ಓದಿಸಿ ನೌಕರಿಗೆ ಹಚ್ಚಬೇಕೆಂದಿದ್ದರು ಶಿವಪ್ಪ. ಮಲ್ಲಿಕಾರ್ಜುನ್ ಪಿಯುಸಿಯವರೆಗೆ ಓದಿ ತಂದೆಯ ಜೊತೆಗೆ ವ್ಯವಸಾಯಕ್ಕೆ ನಿಂತ. ಶಿವಪ್ಪನವರ ಕೊನೆಯ ಮಗ ಗೌರಿಶಂಕರ್ ಬಿಎ ಪದವಿಗೇ ತನ್ನ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹಾಡಿದ. ಅವನೂ ಅಪ್ಪ, ಅಣ್ಣನ ಜೊತೆಗೆ ಕೃಷಿಗೆ ಇಳಿದ.

ಗಂಗಾಧರ್ ಓದಿನಲ್ಲಿ ಮೊದಲಿನಿಂದಲೂ ಚೂಟಿ. ಶಾಲೆಯಲ್ಲಿ ತರಗತಿಗೇ ಮೊದಲನೆಯವನು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದಿದ್ದಕ್ಕೆ ಗಂಗಾಧರನಿಗೆ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ಆರಾಮವಾಗಿ ಸೀಟೂ ಸಿಕ್ಕಿತು. ಉತ್ತಮ ಶ್ರೇಣಿಯಲ್ಲಿ ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆದ. ಹೆತ್ತವರು, ಒಡಹುಟ್ಟಿದವರು ಮುಂದೆ ಓದಲು ಪ್ರೋತ್ಸಾಹಿಸಿದರು. ಜನರಲ್ ಮೆಡಿಸಿನ್‍ದಲ್ಲಿ ಎಂಡಿ ಸಹ ಮಾಡಿ ಮುಗಿಸಿದ. ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯಲ್ಲಿ ಕೆಲಸವೂ ಸಿಕ್ಕಿತು. ತನ್ನದೇ ಜಿಲ್ಲೆಯ ಪಕ್ಕದ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯೂ ಆದ. ಧಾರವಾಡದ ಡಾ.ಪೂರ್ಣಿಮಾಳ ಜೊತೆಗೆ ಡಾ.ಗಂಗಾಧರರ ಮದುವೆಯೂ ವಿಜೃಂಭಣೆಯಿಂದ ಜರುಗಿತು. ಪೂರ್ಣಿಮಾಳೂ ಎಂಬಿಬಿಎಸ್ ಮತ್ತು ಗೈನಾಕಲಜಿಯಲ್ಲಿ ಪಿಜಿ ಮಾಡಿಕೊಂಡಿದ್ದಳು. ಡಾ.ಪೂರ್ಣಿಮಾ ಪ್ರೈವೇಟ್ ಪ್ರ್ಯಾಕ್ಟೀಸ್ ಮಾಡತೊಡಗಿದಳು.

ಡಾ.ಗಂಗಾಧರ್ ಮತ್ತು ಡಾ.ಪೂರ್ಣಿಮಾ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿ ನಾಲ್ಕು ವರ್ಷಗಳಾಗಿದ್ದವು. ಒಂದೇ ವರ್ಷದಲ್ಲಿ ಡಾ.ಗಂಗಾಧರರಿಗೆ ಮಾತಾ-ಪಿತೃ ವಿಯೋಗವಾಯಿತು. ಹೆತ್ತವರು ಕೈಲಾಸ ಸೇರಿಕೊಂಡ ವರ್ಷವೇ ಮಲ್ಲಿಕಾರ್ಜುನ ತಮ್ಮ ಆಸ್ತಿಯನ್ನು ವಿಭಾಗ ಮಾಡಿಕೊಳ್ಳುವ ಪ್ರಸ್ತಾಪವಿಟ್ಟ. `ಕೂಡಿ ಬಾಳಿದರೆ ಸ್ವರ್ಗ ಸುಖ’ ಅಂತ ಗಂಗಾಧರ್ ಮತ್ತು ಗೌರಿಶಂಕರ್ ಹೇಳಿದರೂ ಮಲ್ಲಿಕಾರ್ಜುನ್ ಕೇಳಲಿಲ್ಲ. ಕೊನೆಗೂ ದೊಡ್ಡ ಮನೆತನ ಇಬ್ಭಾಗವಾಯಿತು. ಊರಲ್ಲಿದ್ದ ಎರಡೂ ಮನೆಗಳು ಮಲ್ಲಿಕಾರ್ಜುನ್ ಮತ್ತು ಗೌರಿಶಂಕರನ ಭಾಗಕ್ಕೆ ಹೋದವು. ಮಲ್ಲಿಕಾರ್ಜುನ್ ಮತ್ತು ಗೌರಿಶಂಕರ ತಲಾ ಮೂವತ್ತೈದು ಎಕರೆ ಜಮೀನು ತೆಗೆದುಕೊಂಡು ಡಾ.ಗಂಗಾಧರರಿಗೆ ಮೂವತ್ತು ಎಕರೆ ಜಮೀನು ಕೊಟ್ಟರು. ಗಂಗಾಧರರ ಓದಿಗೆ ಬಹಳಷ್ಟು ಹಣ ಖರ್ಚು ಮಾಡಿರುವುದರಿಂದ ಊರಲ್ಲಿಯ ಮನೆಯಲ್ಲಿ ಅವರಿಗೆ ಭಾಗ ಕೊಡಲಿಲ್ಲ ಮತ್ತು ಐದೆಕೆರೆ ಜಮೀನೂ ಕಡಿಮೆ ಕೊಟ್ಟರು. ಡಾ.ಗಂಗಾಧರ್ ಯಾವುದಕ್ಕೂ ಕ್ಯಾತೆ ತೆಗೆಯಲಿಲ್ಲ. ಅಣ್ಣ ಮತ್ತು ತಮ್ಮನ ಮಾತಿಗೆ ಸರಿ ಎಂದಿದ್ದು ಅವರ ದೊಡ್ಡ ಗುಣ, ಹೃದಯ ವಿಶಾಲ್ಯತೆಗೆ ನಿದರ್ಶನವಾಗಿತ್ತು. ತನ್ನ ಪಾಲಿಗೆ ಬಂದಿದ್ದ ಮೂವತ್ತು ಎಕರೆ ಭೂಮಿಯಲ್ಲಿ ಹದಿನೈದು ಎಕರೆ ತನ್ನ ಹೆಸರಿನಲ್ಲಿ ಮತ್ತು ಹದಿನೈದು ಎಕರೆಯನ್ನು ಪೂರ್ಣಿಮಾಳ ಹೆಸರಿನಲ್ಲಿ ಮಾಡಿಸಿಕೊಂಡರು. ಸಾಗುವಳಿಯ ಉಸ್ತುವಾರಿಯನ್ನು ತಮ್ಮ ಗೌರಿಶಂಕರನಿಗೇ ಬಿಟ್ಟುಕೊಟ್ಟರು. ಮೊದಲಿನಂತೆ ಅಣ್ಣ-ತಮ್ಮಂದಿರಲ್ಲಿ ಅನ್ಯೋನ್ಯತೆ ಉಳಿದುಕೊಂಡು ಬಂದಿತು.

ಮದುವೆಯಾದ ಐದನೇ ವರ್ಷ ಡಾ.ಪೂರ್ಣಿಮಾ ಮುದ್ದಾದ ಗಂಡು ಮಗುವಿಗೆ ತಾಯಿಯಾದಾಗ ಡಾಕ್ಟರರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಮಗುವಿಗೆ ಸಾರ್ಥಕ್ ಅಂತ ಹೆಸರಿಟ್ಟು ಕರೆದರು. ಬಿದಿಗೆ ಚಂದ್ರಮನಂತೆ ಬೆಳೆದ ಸಾರ್ಥಕ್. ಡಾಕ್ಟರರಿಬ್ಬರದೂ ಹಾಲು-ಜೇನಿನಂಥಹ ಸಂಸಾರವಾಗಿದ್ದರೂ ಸಾರ್ಥಕನ ನಂತರ ಡಾ.ಪೂರ್ಣಿಮಾ ಮತ್ತೆ ಗರ್ಭ ಧರಿಸಲಿಲ್ಲ. ಇಬ್ಬರೂ ತಜ್ಞ ಡಾಕ್ಟರರ ಹತ್ತಿರ ತಪಾಸಣೆ ಮಾಡಿಸಿಕೊಂಡಾಗ ಯಾವ ಕುಂದು, ಕೊರತೆಯೂ ಕಾಣಲಿಲ್ಲ. ಆದರೂ ಅವರಿಗೆ ಮತ್ತೆ ಮಕ್ಕಳಾಗುವ ಯೋಗ ಬರದಿರುವುದು ವಿಪರ್ಯಾಸ. `ಒಂದೇ ಮಗು ಸಾಕುಬಿಡು’ ಎಂಬ ನಿರ್ಧಾರಕ್ಕೆ ಬಂದು ಅಷ್ಟಕ್ಕೇ ಸುಮ್ಮನಾಗಿ ಬಿಟ್ಟರು.

ಸಾರ್ಥಕ್ ಬ್ರಿಲ್ಲಿಯಂಟ್ ವಿದ್ಯಾರ್ಥಿಯಾಗಿ ಬೆಳೆದ. ತರಗತಿಗೆ ಮೊದಲನೆಯವನಾಗಿ ತೇರ್ಗಡೆಯಾಗುತ್ತಿದ್ದ. ಹೆತ್ತವರಿಗೆ, ಶಾಲೆಗೆ, ಕಲಿಸಿದ ಗುರುಗಳಿಗೆ ಒಳ್ಳೆಯ ಹೆಸರು ತರುತ್ತಿದ್ದ. ಹೆತ್ತವರಿಗೆ ಇದಕ್ಕಿಂತ ಮತ್ತಿನ್ನೇನು ಬೇಕು? ಮಗನ ವಿದ್ಯಾರ್ಥಿ ಜೀವನದ ಬೆಳವಣಿಗೆಯಲ್ಲಿ ಡಾ.ಗಂಗಾಧರ್ ಮತ್ತು ಡಾ.ಪೂರ್ಣಿಮಾ ಸಂತಸ ಅನುಭವಿಸತೊಡಗಿದರು.
ಸಾರ್ಥಕ್ ಆಗ ಎಂಟನೆಯ ತರಗತಿಯಲ್ಲಿ ಓದುತ್ತಿದ್ದ. ಸಂಬಂಧಿಕರ ಮದುವೆಗೆಂದು ಡಾ.ಪೂರ್ಣಿಮಾ ಧಾರವಾಡಕ್ಕೆ ಹೋಗಿದ್ದಳು. ಡಾ.ಗಂಗಾಧರ್ ಸಹ ಹೆಂಡತಿಯ ಜೊತೆಗೆ ಹೋಗಬೇಕಿತ್ತು. ಅಂದು ಅವರ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಮಂತ್ರಿಗಳ ಸಂದರ್ಶನವಿದ್ದುದರಿಂದ ಡಾ.ಪೂರ್ಣಿಮಾ ಒಬ್ಬಳೇ ಹೋಗಬೇಕಾಯಿತು. ಮದುವೆ ಮುಗಿಸಿಕೊಂಡು ವಾಪಾಸು ಬರುವಾಗ ಪೂರ್ಣಿಮಾ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿ ಡ್ರೈವರ್ ಮತ್ತು ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಡಾ.ಗಂಗಾಧರರ ಮನೆ ಶೋಕ ಸಾಗರದಲ್ಲಿ ಮುಳುಗಿತು. ಅದು ಡಾ.ಗಂಗಾಧರ್ ಅವರ ಜೀವನದಲ್ಲಾದ ಮೊದಲನೆಯ ಆಘಾತ. ಆಗಿನ್ನೂ ಅವರಿಗೆ ಐವತ್ತರ ಹರೆಯ. ಇಚ್ಛೆಯನರಿತು ನಡೆಯುತ್ತಿದ್ದ ಒಲವಿನ ಸಂಗಾತಿಯನ್ನು ಕಳೆದುಕೊಂಡು ಏಕಾಂಗಿಯಾಗಿಬಿಟ್ಟರು ಡಾ.ಗಂಗಾಧರ್. ಸಾರ್ಥಕ್ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿಬಿಟ್ಟ. ಬಹಳ ದಿನಗಳವರೆಗೆ ಡಾ.ಗಂಗಾಧರ್ ಮೌನಕ್ಕೆ ಶರಣಾಗಿಬಿಟ್ಟರು. ದೈನಂದಿನ ಜೀವನದಲ್ಲಿ ಉತ್ಸಾಹ ಕಡಿಮೆಯಾಯಿತು. ಅದೆಷ್ಟೋ ರಾತ್ರಿಗಳನ್ನು ಪೂರ್ಣಿಮಾಳ ನೆನಪಿನ ಕನವರಿಕೆಯಲ್ಲೇ ಕಳೆದರು. `ಪೂರ್ಣೀ, ನೀ ಹೋಗೋದು ಹೋದಿ, ನನ್ನೂ ಕರ್ಕೊಂಡು ಹೋಗಿದ್ರೆ ಆಗ್ತಿರ್ಲಿಲ್ಲೇನು…?’ ಅಂತ ಪೇಚಾಡುತ್ತಿದ್ದರು ಏಕಾಂಗಿಯಾಗಿ. `ಗಂಗೂ, ಇದಕ್ಕೇ ವಿಧಿಯಾಟ ಅಂತಾರೇನೋ? ಆವತ್ತು ನಾವಿಬ್ರೂ ಪ್ರಯಾಣಿಸುತ್ತಿದ್ದರೆ, ಒಂದು ವೇಳೆ ಅಪಘಾತವಾಗಿದ್ದರೆ ನಮ್ಮ ಮಗ ಸಾರ್ಥಕ್ ಅನಾಥನಾಗಿಬಿಡ್ತಿದ್ದ. ಹಾಗಾಗಬಾರ್ದೆಂದು ಆ ವಿಧಿ ನನ್ನಷ್ಟೇ ಕರ್ಕೊಂಡೋತು. ಮಗನನ್ನು ನೋಡ್ಕೊಳ್ಳಾಕ ಒಬ್ರಾದ್ರೂ ಬೇಕಲ್ಲ…? ಅದ್ಕೇ ನೀ ಆವತ್ತು ನನ್ಜೊತಿಗೆ ಬರ್ಲಿಲ್ಲ. ನೀನೇ ಈಗ ಅವನಿಗೆ ತಾಯಾಗಿ, ತಂದೆಯಾಗಿ ನಿಲ್ಲು. ನಿನ್ಗೆ ಮೊನ್ನೆ ಮೊನ್ನೆಯಷ್ಟೇ ನಿನ್ಗೆ ಐವತ್ತು ತುಂಬ್ಯಾವ. ನೀ ಮತ್ತೆ ಮದುವೆಯಾಗೋದೂ ಒಳ್ಳೇದೇ. ಆದಷ್ಟು ಲಗೂನ ಮದುವೀನೂ ಆಗ್ಬಿಡು. ನನ್ನ ಶುಭ ಹಾರೈಕೆಗಳು ಸದಾ ಇರ್ತವೆ’ ಅಂತ ಡಾ.ಪೂರ್ಣಿಮಾ ಹೇಳಿದಂಗಾಗಿತ್ತು ಗಂಗಾಧರರಿಗೆ.

ಹೆಣ್ಣಿನ ಸಾಂಗತ್ಯ ಬೇಡವೇ ಬೇಡ ಎನ್ನುವ ವಯಸ್ಸೇನು ಅಲ್ಲ ಐವತ್ತರ ಹರೆಯ. ಅಣ್ಣ, ತಮ್ಮಂದಿರು ಡಾ.ಗಂಗಾಧರರಿಗೆ ಮತ್ತೊಂದು ಮದುವೆ ಮಾಡಲು ಓಡಾಡಿದರು. ಬಹಳಷ್ಟು ಜನ ಸಂಬಂಧಿಕರು, ಆತ್ಮೀಯರು, ಸ್ನೇಹಿತರು, ಹಿತೈಷಿಗಳು, ಸಹೋದ್ಯೋಗಿಗಳು ಮರುಮದುವೆಗೆ ಒತ್ತಡ ಹೇರಿದರು. ಡಾ.ಗಂಗಾಧರರಿಗೆ ಯಾಕೋ ಮರುಮದುವೆ ಬೇಡವೆನ್ನಿಸಿತು. `ಈ ಮಧ್ಯ ವಯಸ್ಸಿನಲ್ಲಿ ಮದುವೇನೇ ಬೇಡ. ಪೂರ್ಣಿಮಾಳ ನೆನಪಲ್ಲೇ ನಾ ಜೀವನ ಕಳೆಯಬಲ್ಲೆ. ನಾನೊಂದು ವೇಳೆ ಮದುವೆಯಾದರೆ ಬರುವವಳು ಸಾರ್ಥಕನಿಗೆ ತಾಯಿಯಾಗಬಲ್ಲಳೇ? ಯಾವುದನ್ನೂ ಹೇಳಲಿಕ್ಕೆ ಆಗುವುದಿಲ್ಲ. ಬೇಡ, ಬೇಡ. ಸಾರ್ಥಕನಿಗೆ ಮಲತಾಯಿಯನ್ನು ತರುವುದೇ ಬೇಡ’ ಎಂದು ಗಟ್ಟಿಯಾಗಿ ನಿರ್ಧರಿಸಿಕೊಂಡರು.

ಡಾ.ಗಂಗಾಧರ್ ಸಾರ್ಥಕನಿಗೆ ತಂದೆಯಾಗಿ, ತಾಯಿಯಾಗಿ ಮಗನನ್ನು ಬೆಳೆಸಿದರು. ಸಾರ್ಥಕನೂ ತಂದೆಗೆ ಪ್ರೀತಿಯ ಮಗನೇ ಆದ. ಓದಿನಲ್ಲೂ ತನ್ನ ಛಾಪು ಮೂಡಿಸಿದ. ಮೆಡಿಕಲ್ ಕಾಲೇಜಿಗೆ ಸೇರಿಕೊಂಡ. ಎಂಬಿ ಮುಗಿಸಿ ಎಂಎಸ್ ಜನರಲ್ ಸರ್ಜನ್ ಮುಗಿಸಿಕೊಂಡೇ ಕಾಲೇಜಿನಿಂದ ಹೊರಬಂದ. ಊರಲ್ಲಿಯೇ ತಾಯಿಯ ಹೆಸರಿನಲ್ಲಿ ಸಾರ್ಥಕನ, `ಪೂರ್ಣಿಮಾ ಹಾಸ್ಪಿಟಲ್ಸ್’ ಚಾಲನೆ ಪಡೆದುಕೊಂಡಿತು. ಜಿಲ್ಲೆಯಲ್ಲಿಯೇ ಅತಿ ದೊಡ್ಡ ಮತ್ತು ಸಂಪದ್ಭರಿತ ತಾಲೂಕು ಕೇಂದ್ರ ಅದು. ಪ್ರ್ಯಾಕ್ಟೀಸ್ ಚೆನ್ನಾಗಿಯೇ ನಡೆಯತೊಡಗಿತು. ಅಷ್ಟರಲ್ಲಿ ಡಾ.ಗಂಗಾಧರ್ ಸಹ ನಿವೃತ್ತರಾಗಿ ಮಗನಿಗೆ ಕೆಲಸದಲ್ಲಿ ಕೈಜೋಡಿಸಿದರು. ತಂದೆ ಎಂಡಿ ಡಾಕ್ಟರ್, ಮಗ ಎಂಎಸ್ ಡಾಕ್ಟರ್. ಗಂಗಾಧರ್ ಮಗನ ಮದುವೆಗೆ ತಯಾರಿ ನಡೆಸಿದಾಗ ಬಹಳಷ್ಟು ಜನರು ಸಂಬಂಧ ಬೆಳೆಸಲು ತಾಮುಂದು, ನಾಮುಂದು ಎಂದು ಬರತೊಡಗಿದರು. ಆಯ್ಕೆಗೆ ಸಂಪೂರ್ಣ ಸ್ವಾತಂತ್ರ್ಯ ಮಗನಿಗೇ ಕೊಟ್ಟರು ಗಂಗಾಧರ್. ಶ್ರೀಮಂತ ಮನೆತನದ ಡಾಕ್ಟರ್ ಹುಡುಗಿ ಪ್ರೀತಿಲತಾ ಸಾರ್ಥಕನಿಗೆ ಇಷ್ಟವಾದಳು. ಅವಳೂ ಮಕ್ಕಳ ರೋಗ ತಜ್ಞಳೇ. ಮದುವೆ ವಿಜೃಂಭಣೆಯಿಂದ ಜರುಗಿತು. ಪ್ಸ್ರೀತಿಲತಾಳೂ ಪೂರ್ಣಿಮಾ ಹಾಸ್ಪಿಟಲ್ಸ್‍ದ ಸದಸ್ಯಳಾದಳು. ತನ್ನ ಜವಾಬ್ದಾರಿ ಒಂದು ಹಂತಕ್ಕೆ ಬಂದಿದ್ದರಿಂದ ಡಾ.ಗಂಗಾಧರ್ ಒಂದಿಷ್ಟು ನಿರಾಳರಾದರು. ಪತ್ನಿಯ ನೆನಪು ದಿನಾಲೂ ಅವರನ್ನು ಕಾಡುತ್ತಿತ್ತು. ಅವಳನ್ನು ಸ್ಮರಿಸಿಕೊಳ್ಳದೇ ದಿನವೇ ಇರಲಿಲ್ಲ.

ಸಾರ್ಥಕ್-ಪ್ರೀತಿಲತಾ ಜೊತೆಜೊತೆಯಾಗಿ ಎರಡು ವಾರಗಳವರೆಗೆ ಊಟಿ, ಕೊಡೈಕೆನಾಲ್, ಮುನ್ನಾರ್, ಮೈಸೂರು ಅದೂ ಇದೂ ಅಂತ ತಿರುಗಾಡಿ ಮಧುಚಂದ್ರದ ಸವಿ ಸವಿದು ಬಂದರು. ಆಗಾಗ್ಗೆ ಪ್ರೇಕ್ಷಣೀಯ ಸ್ಥಳಗಳಿಗೆ ಸುತ್ತುವ ಹವ್ಯಾಸವಿತ್ತು ಪ್ರೀತಿ ಲತಾಳಿಗೆ. ಖುಷಿ ಖುಷಿಯಿಂದ ಇಬ್ಬರ ದಾಂಪತ್ಯ ಜೀವನ, ವೃತ್ತಿ ಜೀವನ ಶುರುವಾಗಿತ್ತು. ವಾರದಲ್ಲಿ ಒಂದು ದಿನವಾದರೂ ಆರಾಮವಾಗಿ ಕಾಲ ಕಳೆಯಬೇಕೆಂಬುದು ಪ್ರೀತಿ ಲತಾಳ ಅಭಿಮತವಾದರೆ ರೋಗಿಗಳ ಸೇವೆ ಮುಖ್ಯ ಅಂತ ಅನ್ನೋದು ಸಾರ್ಥಕನ ಅಭಿಮತ. ಕಾರಿನಲ್ಲಿ ಜಮ್ಮಂತ ಹೊರಗಡೆ ಹೋಗಿ ಅಲ್ಲಿ, ಇಲ್ಲಿ ಸುತ್ತಾಡಿಕೊಂಡು ಹೊರಗಡೇನೇ ಊಟಮಾಡಿಕೊಂಡು ಬರಬೇಕೆನ್ನುವ ವಾದ ಪ್ರೀತಿಲತಾಳದು. ಹೈಲೀ ಹೈಫೈ ಕುಟುಂಬದಿಂದ ಬಂದಿದ್ದ ಪ್ರೀತಿಲತಾಳಿಗೆ ಸಾರ್ಥಕನ ಸಿಂಪ್ಲಿಸಿಟಿ ಇಷ್ಟವಾಗುತ್ತಿರಲಿಲ್ಲ. ಸಾರ್ಥಕನಿಗೆ ಪ್ರತಿಸಾರೆ ಹೆಂಡತಿಗೆ ಕಂಪನಿ ಕೊಡುವುದಾಗುತ್ತಿರಲಿಲ್ಲ. ಏನೂ ಎಮರ್ಜೆನ್ಸಿ ಇಲ್ಲವೆಂದಾಗ ಸಾರ್ಥಕ್ ಪ್ರೀತಿಲತಾಳಿಗೆ ಕಂಪನಿ ಕೊಡುತ್ತಿದ್ದ. ಇಳಿಯವಸ್ಸಿನ ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಅವನಿಗಿತ್ತು. ಹೀಗಾಗಿ ಗಂಡ, ಹೆಂಡತಿಯ ಮಧ್ಯೆ ಕೆಲವೊಮ್ಮೆ ವಾದ-ವಿವಾದಗಳೂ ಉದ್ಭವಿಸುತ್ತಿದ್ದವು. ಧನದಾಹಿ ಆಗಿರದ ಸಾರ್ಥಕ್, `ಬಡ ರೋಗಿಗಳ ಸೇವೆಯೇ ದೇವರ ಸೇವೆ’ ಎಂದೆನ್ನುತ್ತಿದ್ದ. ಒಂದಿಷ್ಟು ಜನ ಬಡಬಗ್ಗರಿಗೆ, ದೀನದಲಿತರಿಗೆ ಉಚಿತ ವೈದ್ಯಕೀಯ ಸೇವೆ ಸಲ್ಲಿಸುವುದನ್ನು ರೂಢಿಗೊಳಿಸಿಕೊಂಡಿದ್ದ. ತಮ್ಮ ಹಳ್ಳಿಯ ಕಡೆಗಿನ ಜನರಿಗೆ ಒಂದಿಷ್ಟು ರಿಯಾಯಿತಿ ದರದಲ್ಲಿ, ಇಲ್ಲವೇ ಉಚಿತವಾಗಿ ಸಾರ್ಥಕ್ ಸೇವೆ ನೀಡುತ್ತಿದ್ದ. ಇದ್ಯಾವುದೂ ಪ್ರೀತಿಲತಾಳಿಗೆ ಇಷ್ಟವಾಗುತ್ತಿರಲಿಲ್ಲ. `ಯಾರಿಗೂ ಉಚಿತವಾಗಿ ಮತ್ತು ರಿಯಾಯಿತಿ ದರದಲ್ಲಿ ಸೇವೆ ಸಲ್ಲಿಸುವುದು ಬೇಡ. ವೈದ್ಯಕೀಯ ಶಿಕ್ಷಣಕ್ಕೆ ನಾವೇನು ತುಸು ಖರ್ಚು ಮಾಡಿರುವೆವೇ? ಉಚಿತ ಸೇವೆ ಕೊಡಬೇಕಾಗಿರುವ ಸರಕಾರಿ ಆಸ್ಪತ್ರೆಗಳಲ್ಲೇ ಡಾಕ್ಟರುಗಳು ಸಿಕ್ಕಾಬಟ್ಟೆ ಹಣ ಗಳಿಸುತ್ತಿರುವಾಗ ಖಾಸಗಿಯಾಗಿ ಆಸ್ಪತ್ರೆ ನಡೆಸುತ್ತಿರುವ ನಮಗೆ ಆಸ್ಪತ್ರೆ ಮೆಂಟೇನ್ ಮಾಡಲು ತುಸು ಖರ್ಚಾಗುತ್ತಿದೆಯೇ…?’ ಎಂದೆನ್ನುತ್ತಿದ್ದಳು. ಕೆಲವೊಮ್ಮೆ ಇಬ್ಬರ ನಡುವೆ ಭಾರೀ ಭಾರಿ ವಾಗ್ವಾದಗಳೂ ಆಗುತ್ತಿದ್ದವು. ಭಿನ್ನಾಭಿಪ್ರಾಯಗಳು ಆಗಾಗ ತಲೆದೋರುತ್ತಿದ್ದವು. ತನ್ನಿಷ್ಟದಂತೆ ಸಾರ್ಥಕ್ ನಡೆಯದಿದ್ದಾಗ ಪ್ರೀತಿಲತಾ ಆಗಾಗ ಅವನನ್ನು ತನ್ನ ಹರಿತವಾದ ಮಾತುಗಳಿಂದ ಕುಟುಕುತ್ತಿದ್ದುದೂ ಇತ್ತು. ಸಾರ್ಥಕ್ ಅದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲವಾದರೂ ಮನಸ್ಸಿನ ಮೂಲೆಯಲ್ಲಿ ಪ್ರೀತಿಲತಾಳ ಕೊಂಕು ಮಾತುಗಳು ಗೂಡು ಕಟ್ಟುತ್ತಿದ್ದವು. ಸಾರ್ಥಕನ ಮನಸ್ಸು ಮುದುಡಿದ ತಾವರೆಯಂತಾಗುತ್ತಿತ್ತು. `ಇಂಥಹ ಸಣ್ಣ ಮನಸ್ಸು ಇವಳಿಗ್ಯಾಕೋ…? ನಮ್ಮ ಆದಾಯದಲ್ಲಿ ಒಂದಿಷ್ಟು ಬಡಬಗ್ಗರ ಸೇವೆಗೆ ಮೀಸಲಿಟ್ಟರೆ ನಮಗೇನೂ ನಷ್ಟವಿಲ್ಲವಲ್ಲ…?’ ಎಂಬ ಹಳಹಳಿ ಸಾರ್ಥಕನ ಮನಸ್ಸಿನಲ್ಲಿ ಮೇಳೈಸುತ್ತಿತ್ತು. ಹೆಂಡತಿಯ ಮಾತುಗಳನ್ನು ಮನಸ್ಸಿಗೆ, ಹೃದಯಕ್ಕೆ ತೆಗೆದುಕೊಳ್ಳಬಾರದೆಂದು ಅಂದುಕೊಂಡರೂ ಸಾರ್ಥಕನ ಮನಸ್ಸು ಒಳಗೊಳಗೇ ನಲುಗುತ್ತಿತ್ತು, ಹೃದಯ ಮರುಗುತ್ತಿತ್ತು. ಮಗ, ಸೊಸೆಯ ಶೀತಲ ಸಮರ ಡಾ.ಗಂಗಾಧರರ ಮನದರಿವಿಗೆ ಬರುತ್ತಿತ್ತಾದರೂ ಗಂಡ, ಹೆಂಡಿರ ನಡುವೆ ತಾವು ಮೂಗು ತೂರಿಸುವುದು ಬೇಡ ಎಂದು ಸುಮ್ಮನಾಗಿಬಿಡುತ್ತಿದ್ದರು. ಮೌನದಲ್ಲೇ ಅವರ ಹೃದಯ ಮುದುಡುತ್ತಿತ್ತು, ನಲುಗುತ್ತಿತ್ತು, ಮರುಗುತ್ತಿತ್ತು.

ಫೋಟೋ ಕೃಪೆ : ಅಂತರ್ಜಾಲ

ಹೀಗೇ ಒಂದಿಷ್ಟು ವೈರುಧ್ಯಗಳ ನಡುವೆ ಸಾರ್ಥಕ್-ಪ್ರೀತಿಲತಾಳ ದಾಂಪತ್ಯದಲ್ಲಿ ಪ್ರೀತಿಲತಾ ಗಂಡು ಮಗುವಿಗೆ ಜನ್ಮವಿತ್ತಳು. ಡಾ.ಗಂಗಾಧರರ ಮನೆಯಲ್ಲಿ, ಆಸ್ಪತ್ರೆಯಲ್ಲಿ ಸಂಭ್ರಮವೋ ಸಂಭ್ರಮ. ಮಗುವಿಗೆ ಪ್ರೀತಿಯಿಂದ ಕೃತಾರ್ಥ ಎಂದು ಕರೆದರು. ಬೆಳೆದಂತೆ ಕೃತಾರ್ಥ ತಂದೆ ಮತ್ತು ತಾತನನ್ನು ಹಚ್ಚಿಕೊಂಡಿದ್ದೇ ಹೆಚ್ಚು. ಮೊಮ್ಮಗನ ಆಟಪಾಟ, ಮುದ್ದಾದ ನಗು, ತೊದಲು ನುಡಿಗಳು ತಾತನಿಗೆ ಮೋಡಿ ಮಾಡುತ್ತಿದ್ದವು. ಅಪ್ಪನ ಸಂಭ್ರಮಕ್ಕೆ ಕೊನೆ ಇರುತ್ತಿರಲಿಲ್ಲ.

ಆಗಷ್ಟೇ ಕೃತಾರ್ಥನಿಗೆ ಆರು ವಸಂತಗಳು ತುಂಬಿದ್ದವು. ಅದೊಂದು ದಿನ ಸಾರ್ಥಕ ಬೆಳಿಗ್ಗೆಯಿಂದಲೇ ತುಂಬಾ ಬಿಜಿ. ಮೂವರು ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವುದಿತ್ತು. ಒಂಭತ್ತು ಗಂಟೆಯಾಗುವಷ್ಟರಲ್ಲಿ ಎರಡು ಶಸ್ತ್ರ ಚಿಕಿತ್ಸೆಗಳನ್ನು ಮುಗಿಸಿದ್ದ. ಒಂದಿಷ್ಟು ಸಮಯದ ವಿಶ್ರಾಂತಿಯ ನಂತರ ಮೂರನೆಯ ಶಸ್ತ್ರ ಚಿಕಿತ್ಸೆಯನ್ನು ಆರಂಭಿಸುವವನಿದ್ದ. ಆತನ ಜೊತೆಗೆ ಇನ್ನಿಬ್ಬರು ಡಾಕ್ಟರ್ ಸಹ ಇದ್ದರು. ಒಂದಿಷ್ಟು ಕ್ಲಿಷ್ಟವಾದ ಶಸ್ತ್ರ ಚಿಕಿತ್ಸೆ ಅದಾಗಿತ್ತು. ಶಸ್ತ್ರ ಚಿಕಿತ್ಸೆ ಆರಂಭಿಸಬೇಕೆಂದು ರೋಗಿಯ ಹತ್ತಿರ ನಿಂತಿದ್ದ. ಅದೇನಾಯಿತೋ ಗೊತ್ತಿಲ್ಲ, ಸಾರ್ಥಕ್ ಹಾಗೇ ಅಲ್ಲೇ ಕುಸಿದು ಕುಳಿತ. ಜೊತೆಗಿದ್ದ ಡಾಕ್ಟರ್‍ಗಳು ಸ್ಥಳೀಯ ಕಾರ್ಡಿಯಾಲಜಿಸ್ಟ್ ಡಾಕ್ಟರ್‍ಗೆ ಕರೆಮಾಡಿ ಚುಟುಕಾಗಿ ವಿಷಯ ತಿಳಿಸಿ ಅರ್ಜೆಂಟಾಗಿ ಬರಲು ತಿಳಿಸಿದರು. ಡಾ.ಗಂಗಾಧರ್, ಡಾ.ಪ್ರೀತಿಲತಾ ಆಪರೇಶನ್ ಥೇಟರಿಗೆ ದೌಡಾಯಿಸಿದರು. ಎಲ್ಲರೂ ಸೇರಿಕೊಂಡು ತುರ್ತು ಚಿಕಿತ್ಸೆ ಆರಂಭಿಸುವಷ್ಟರಲ್ಲಿ ಹೃದ್ರೋಗ ತಜ್ಞರೂ ಬಂದರು. ತಪಾಸಣೆ ಮಾಡಿದರು. `ಕುಸಿದು ಕುಳಿತಾಗಲೇ ಡಾ.ಸಾರ್ಥಕನ ಉಸಿರು ನಿಂತು ಹೋಗಿದೆ’ ಅಂತ ಡಿಕ್ಲೇರ್ ಮಾಡಿದಾಗ ಪೂರ್ಣಿಣಾ ಹಾಸ್ಪಿಟಲ್ಸ್ ಶೋಕ ಸಾಗರದಲ್ಲಿ ಮುಳುಗಿತು. ಕರ್ತವ್ಯದಲ್ಲಿ ನಿರತನಾಗಿದ್ದ ಸಾರ್ಥಕ್ ತಾಯಿ ಮಡಿಲು ಸೇರಿಕೊಂಡಿದ್ದ.

ಸಾರ್ಥಕನ ಅಕಾಲಿಕ ಮರಣ ಡಾ.ಗಂಗಾಧರರನ್ನು ಅಧೀರರನ್ನಾಗಿ ಮಾಡಿತು. ಇದು ಅವರ ಜೀವನದ ಎರಡನೆಯ ಆಘಾತ. ಸೊಸೆ ಡಾ.ಪ್ರೀತಿಲತಾ ಮಗುವಿನೊಂದಿಗೆ ತವರುಮನೆ ಸೇರಿಕೊಂಡಳು. ಗಂಡನ ಮನೆಗೆ ಬರುವ ಇಚ್ಛೆ ತೋರಿಸಲಿಲ್ಲ. ಡಾ.ಗಂಗಾಧರರ ಪಿತ್ರಾರ್ಜಿತ ಆಸ್ತಿ ತನ್ನ ಹೆಸರಿನಲ್ಲಿ ವರ್ಗಾಯಿಸಬೇಕೆಂದು ಹಟಹಿಡಿದಳು. ಮಗು ಕೃತಾರ್ಥ ತನ್ನೊಂದಿಗೇ ಇರುವುದಾಗಿ ಘೋಷಿಸಿದಳು. ಇದು ಡಾ.ಗಂಗಾಧರರಿಗೆ ಮೂರನೆಯ ಆಘಾತ.

ಡಾ.ಗಂಗಾಧರ್ ನೆನಪಿನ ಉಗ್ರಾಣದಿಂದ ಹೊರಗೆ ಬಂದರು. ದುಃಖದ ಮಡುವು ಹೆಚ್ಚಾಗತೊಡಗಿತ್ತು. `ಪೂರ್ಣೀ, ಈಗೇನು ಹೇಳುವಿ? ಪ್ರೀತಿಗೆ ಪಾತ್ರರಾಗಿದ್ದ ನೀನು, ಸಾರ್ಥಕ್ ಇಬ್ಬರೂ ಒಬ್ಬರಾದ ಮೇಲೆ ಒಬ್ಬರಂತೆ ತೆರೆಮರೆಗೆ ಸರಿದುಬಿಟ್ಟಿರಲ್ಲ? ಸಾರ್ಥಕನಿಗೆ ಅದು ಸಾಯುವ ವಯಸ್ಸೇ? ಈ ಸಾವನ್ನು ಹೇಗೆ ಸಹಿಸಿಕೊಳ್ಳಲಿ…? ನನ್ನೆದೆಯ ನೋವಿಗೆ ಕಿಚ್ಚು ಹಚ್ಚುವಂತೆ ಸೊಸೆ ನಮ್ಮ ವಂಶದ ಏಕೈಕ ಕುಡಿ ಮೊಮ್ಮಗನನ್ನು ಕರೆದುಕೊಂಡು ತನ್ನ ತವರಿಗೆ ಹೋಗಿಬಿಟ್ಟಳಲ್ಲ…? ನಾನೀಗ ನಿಜವಾಗಿಯೂ ಒಂಟಿಯಲ್ಲವಾ…? ನಾನು ಯಾರಿಗೆ ಅಂತ ಬದುಕಬೇಕಿದೆ…?’ `ಗಂಗೂ, ನಿನ್ನೆದೆಯ ನೋವು ಏನಂತ ನಾ ಬಲ್ಲೆ. ಆದರೆ ಬಂದಿದ್ದನ್ನು ಅನುಭವಿಸಬೇಕಲ್ಲ…? ನೀ ಪಡೆದುಕೊಂಡು ಬಂದಿದ್ದು ನಿನಗೇ ಅಲ್ಲವೇ…? ಬೇರೊಬ್ಬರು ತೆಗೆದುಕೊಳ್ಳಬಲ್ಲರೇ? ಎಲ್ಲವನ್ನೂ ತಾಳ್ಮೆಯಿಂದ ನಿರ್ವಹಿಸು. ಅನಾವಶ್ಯಕ ಚಿಂತೆ ಬೇಡ. ಭಗವಂತನ ಕರೆ ಬರುವವರೆಗೆ ನಿನ್ನ ವೈದ್ಯಕೀಯ ಸೇವೆ ಮುಂದುವರಿಯಲಿ. ಗಂಗೂ, ಹಾಗೇ ಒಂದ್ಮಾತಿದೆ…’ ಪೂರ್ಣಿಮಾ ರಾಗವೆಳೆದದ್ದು ಗಂಗಾಧರರ ಹೃದಯದರಿವಿಗೆ ಬರದಿರಲಿಲ್ಲ. `ಅದೇನೇ ಪೂರ್ಣೀ…? ಸರಿಯಾಗಿ ಹೇಳೇ…? ಹರೇದ ಹುಡುಗಿಯಂಗ ಹಿಂಗ್ಯಾಕ ನುಲಿಯಾಕತ್ತೀದಿ…?’ `ನಾ ನಿನ್ಗೆ ಯಾವಾಗ್ಲೂ ಚಿರಯೌವ್ವನೆ ಅಲ್ಲೇನು?’ `ಹೌದು, ಯಾರಿಲ್ಲಂತಾರ? ಇರ್ಲಿ, ಮುಖ್ಯ ವಿಷಯಕ್ಕೆ ಬಾ.’ `ಗಂಗೂ, ಕೃತಾರ್ಥ ನಮ್ಗಿರೋ ಒಂದೇ ವಂಶದ ಕುಡಿ. ಇವತ್ತಲ್ಲ, ನಾಳೆ ನಮ್ ಆಸ್ತಿ ಅವ್ನಿಗೇ ಸೇರ್ಬೇಕು ತಾನೇ…? ಪಿತ್ರಾರ್ಜಿತ ಆಸ್ತೀನ ಅವ್ನ ಹೆಸ್ರಿಗೇ ಮಾಡ್ಬಿಡು. ಹೆಂಗೂ ಇಲ್ಲಿ ಸುಸಜ್ಜಿತ ಆಸ್ಪತ್ರೆ ಐತೆ. ಸೊಸೆಗೆ ಇಲ್ಲೇ ಬರ್ಲಿಕ್ಕೆ ಹೇಳು. ಅವ್ಳಿಗಿನ್ನೂ ಚಿಕ್ಕ ವಯಸ್ಸು. ಯೌವನವಿದೆ. ಅದೊಂದು ವೇಳೆ ಅವ್ಳು ಮರುಮದುವೆ ಮಾಡ್ಕೊಳ್ತೀನಿ ಅಂದರೆ ಸುಮ್ನೇ ಒಪ್ಕೊಂಡ್ಬಿಡು. ನಿನ್ನಲ್ಲಿರೋ ಬ್ಯಾಂಕ್ ಬ್ಯಾಲೆನ್ಸ್, ಒಡವೆಗಳನ್ನು ನಿನ್ಗೆಷ್ಟು ಬೇಕೋ ಅಷ್ಟನ್ನು ಇಟ್ಕೊಂಡು ಉಳಿದಿದ್ದನ್ನು ನಿನ್ನಣ್ಣ, ತಮ್ಮನ ಮಕ್ಕಳಿಗೆ ಬೇಕಾದ್ರೆ ಕೊಡು. ಇಲ್ಲಾ ನಿನ್ಗಿಷ್ಟವಾದವ್ರಿಗೆ ಕೊಡು. ಇಲ್ಲಾ ಆಸ್ಪತ್ರೇಲಿ ಕೆಲ್ಸ ಮಾಡೋ ಕೆಳ ಹಂತದ ನೌಕರರ ಏಳಿಗೆಗಾಗಿ ಮೀಸಲಿಡು.’ `ನೀ ಹೀಗಂತೀಯಾ…?’ `ಹೂಂ… ನಿನ್ನ ಗಳಿಕೆ ಸತ್ಪಾತ್ರರಿಗೆ ಸಲ್ಲಲಿ ಅನ್ನೋದು ನನ್ನ ಮನದಿಚ್ಛೆ. ಸರೀನಾ…? ಏನೋ ನನ್ಗೆ ತಿಳಿದದ್ದು ಹೇಳೀನಿ. ಕಾರ್ಯಗತ ಮಾಡೋದು ನಿನ್ಗೆ ಬಿಟ್ಟಿದ್ದು… ಶುಭವಾಗಲಿ.’ `ಸರಿ ಪೂರ್ಣೀ… ನಿನ್ಮಾತು ವಾಜಿಮಿ ಐತೆ. ನಿನ್ನ ಮನದಿಚ್ಛೆಯಂತೆ ನಡೀತೀನಿ’ ಎಂದೆನ್ನುವಷ್ಟರಲ್ಲಿ ಡಾ.ಗಂಗಾಧರರ ದುಃಖದ ಕಟ್ಟೆ ಮತ್ತೆ ಒಡೆಯಿತು. `ಮತ್ಯಾಕೆ ಈ ಕಣ್ಣೀರು…? ನನ್ನೆದೆಯೊಳ್ಗೆ ಅಡಗಿಸಿಕೊಂಡು ಸಂತೈಸುವೆ. ಬಾ…’ ಎಂದೆನ್ನುವಷ್ಟರಲ್ಲಿ ಡಾ.ಗಂಗಾಧರರಿಗೆ ಒಲವಿನ, ಪ್ರೀತಿಯ, ಆತ್ಮೀಯ ಮಡದಿ ಡಾ.ಪೂರ್ಣಿಮಾಳ ಬೆಚ್ಚನೆಯ ಎದೆಯೊಳಗೆ ಸೇರಿಕೊಂಡ ಅನುಭವ.

ಮಡದಿ ದಿವಂಗತ ಡಾ.ಪೂರ್ಣಿಮಾಳ ಸಲಹೆಗಳನ್ನು ಡಾ.ಗಂಗಾಧರ್ ಸೊಸೆ ಡಾ.ಪ್ರೀತಿಲತಾಳ ಮುಂದಿಟ್ಟರು. `ಮಗಳೇ, ನನಗೀಗ ನನ್ನವರೆಂದರೆ ನೀನು ಮತ್ತು ಮೊಮ್ಮಗ ಕೃತಾರ್ಥ ಅಷ್ಟೇ. ಎಲ್ಲರೂ ಜೊತೆಯಾಗಿರೋಣ. ನೀನು ಡಾ.ಪೂರ್ಣಿಮಾ ಹಾಸ್ಪಿಟಲ್ಸ್‍ದ ನಾಯಕತ್ವ ವಹಿಸಿಕೊಂಡರೆ ನನ್ನೆದೆಯ ಭಾರ ಕಡಿಮೆಯಾಗುತ್ತದೆ. ರೋಗಿಗಳ ಸೇವೆ ದೇವರ ಸೇವೆ ಎಂದಂದುಕೊಂಡು ಸಾರ್ಥಕನ ಕನಸುಗಳನ್ನು ನನಸಾಗಿಸಿದರೆ ಸಾರ್ಥಕನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅವನ ಜೀವನ ಸಾರ್ಥಕವಾಗುತ್ತದೆ. ನನ್ನದೆನ್ನುವ ಆಸ್ತಿ ಅದೇನಿದ್ದರೂ ಅದು ನಿಮ್ಮದೇ ತಾನೇ…? ನಾನು ಈಗಾಗಲೇ ಹಣ್ಣೆಲೆ. ಯಾವಾಗಲಾದರೂ ಉದುರಿ ಬೀಳಬಹುದು. ಇಳಿವಯಸ್ಸಿನಲ್ಲಿ ನೀನು, ಮೊಮ್ಮಗ ನನ್ನ ಜೊತೆಗಿದ್ದರೆ ನನಗದೇ ಖುಷಿ. ನೀನು ಮರುಮದುವೆ ಮಾಡಿಕೊಳ್ಳುವುದಾದರೆ ಅದಕ್ಕೂ ನನ್ನ ಸಹಮತವಿದೆ’ ಎಂದು ತಣ್ಣನೆಯ ದನಿಯಲ್ಲಿ ಹೇಳಿದರು ಡಾ.ಗಂಗಾಧರ್. ಮಾವನವರ ಸಂಬಂಧ ಬೆಸೆಯುವ ಭಾವನಾತ್ಮಕ ಮಾತುಗಳಿಂದ ಡಾ.ಪ್ರೀತಿಲತಾಳ ಎದೆತುಂಬಿ ಬಂದಿತು. ಹೃದಯ ಮಿಡಿಯಿತು. ತುಸು ಹೊತ್ತಿನ ಮೌನ. `ಅಷ್ಟೇ ಆಗಲಿ ಮಾವಾ. ನಿಮ್ಮಿಚ್ಛೆಯಂತೆ ನಡೆಯುವೆ. ನಿಮ್ಮ ಆಶೀರ್ವಾದ ನನಗಿರಲಿ’ ಎಂದು ಡಾ.ಪ್ರೀತಿಲತಾ ಹೇಳಿದಾಗ ಡಾ.ಗಂಗಾಧರರ ಸಂಭ್ರಮಕ್ಕೆ ಆಕಾಶವೇ ಮೇರೆಯಾಯಿತು.


  • ಶೇಖರಗೌಡ ವೀ ಸರನಾಡಗೌಡರ್ –  ತಾವರಗೇರಾ  (ತಾ:ಕುಷ್ಟಗಿ, ಜಿ:ಕೊಪ್ಪಳ).

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW