ಕಾರ್ಮಿಕರ ಜೀವನ ನಿಂತಿರುವುದೇ ದಿನದ ದುಡಿಮೆಯ ಮೇಲೆ ಆ ದುಡಿಮೆಯಲ್ಲಿಯೂ ಕೂಡ ವೇತನ ಕಡಿತಗೊಳಿಸಿ ಕೊಟ್ಟರೆ ಜೀವನ ನಡೆಸುವುದಾದರೂ ಹೇಗೆ. ಕಾರ್ಮಿಕರು ನಮ್ಮಂತೆ ಮನುಜರೆ. ಕಾರ್ಮಿಕ ದಿನದಂದು ಲೇಖಕ ಅವಿನಾಶ ಸೆರೆಮನಿ ಅವರು ಬರೆದ ವಿಶೇಷ ಲೇಖನ, ತಪ್ಪದೆ ಮುಂದೆ ಓದಿ…
ಬೆಳಗಾದರೆ ಸಾಕು ಇವತ್ತೇನು ಕೆಲಸ ಸಿಗುತ್ತೆ ಇಲ್ಲವೋ ಎಂಬ ಚಿಂತೆಯಲ್ಲಿ ಎದ್ದೇಳುವರು.ಲಗು ಬಗೆಯಿಂದ ಉಪಹಾರ ಸೇವಿಸಿ ಬುತ್ತಿ ಕಟ್ಟಿಕೊಂಡು ಮನೆಯಿಂದ ಬಸ್ ನಿಲ್ದಾಣದತ್ತ ಹೊರಡುವರು.ಸಮಯದ ಪರಿವಿಲ್ಲದೆ ಬದುಕಲು ಬೇರೆ ದಾರಿಯಿಲ್ಲದೆ ಹೊಟ್ಟೆ ಪಾಡಿಗಾಗಿ ನಿತ್ಯ ಕನವರಿಸುತ ಕೆಲಸಕ್ಕಾಗಿ ಹಪಹಪಿಸುವ ತುತ್ತು ಅನ್ನಕ್ಕಾಗಿ ದೇಹವನ್ನು ದಂಡಿಸುವ ಕಾಯಕಯೋಗಿಯೇ ಕಾರ್ಮಿಕ.ಕಾರ್ಮಿಕ ಎಂದರೆ ಕಾರ್ಯದಲ್ಲಿ ನಂಬಿಕೆಯಿಟ್ಟು ಕೆಲಸದ ಮೇಲೆ ಅವಲಂಬನೆಯಾಗಿ ಬದುಕುವ ಶ್ರಮ ಜೀವಿ.
ಪ್ರತಿ ವರ್ಷ ಮೇ 1 ಬಂದರೆ ಸಾಕು ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಿಸುತ್ತೇವೆ.ಇದು ಈ ದಿನಕ್ಕೆ ಮಾತ್ರ ಸೀಮಿತವಾಗಬಾರದು.ಪ್ರತಿದಿನ ಕಾರ್ಮಿಕರ ಕಾರ್ಯವನ್ನು ಪ್ರಶಂಸಿಸುತ ಗೌರವನೀಯ ಭಾವದಿಂದ ಕಾಣಬೇಕು.ಕಾರ್ಮಿಕರು ಇರದಿದ್ದರೆ ನಾವೇ ಕಾರ್ಮಿಕರಾಗುವ ಸ್ಥಿತಿ ಉದ್ಭವಿಸುತ್ತಿತ್ತು.ಹಾಗಾಗಿ ಕಾರ್ಮಿಕರನು ತುಚ್ಛ ಭಾವನೆಯಿಂದ ಕಾಣದೆ ಆದರದಿಂದ ಕಾಣಿರಿ.
ಮಾಲೀಕನು ಹೇಳಿದ ಸ್ಥಳಕೆ ತೆರಳಿ ಕೆಲಸದ ಬಟ್ಟೆಗಳನ್ನು ಧರಿಸುತ ದೇವನಿಗೆ ಕೈ ಮುಗಿಯುತ ಸಲಕರಣೆಗಳನ್ನು ಹಿಡಿಯುತ ಕಾರ್ಯೋನ್ಮುಖರಾಗುವರು.ನೂರಾರು ಸಮಸ್ಯೆಗಳಿದ್ದರೂ ಮನದಲ್ಲೇ ನುಂಗುವರು.ಕನಕದಾಸರು ಹೇಳೆದಂತೆ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ವೇಳೆಯನು ಲೆಕ್ಕಿಸದೆ ಅವಿರತ ದುಡಿಯುವರು.ಮಳೆ ಚಳಿ ಬಿಸಿಲನು ಲೆಕ್ಕಿಸದೆ ಮಕ್ಕಳನ್ನು ಸೊಂಟದಲಿ ಎತ್ತಿಕೊಂಡು ಕೆಲಸದಲ್ಲಿ ತೊಡಗುವರು.ಎಷ್ಟೇ ಕಷ್ಟಗಳಿದ್ದರೂ ತೋರ್ಪಡಿಸದೆ ಅನುಭವಿಸುತ್ತಾ ಕಣ್ಣೀರಲ್ಲೇ ಕೈ ತೊಳೆಯುತ ಜೀವ ಸವೆಸುವರು.
ಮಾಲೀಕರ ದಬ್ಬಾಳಿಕೆ ಬೈಗುಳ ತಿನ್ನುತ ಪ್ರತ್ಯುತ್ತರಿಸದೆ ಸಹಿಸಿಕೊಂಡು ಬದುಕುವ ಸ್ಥಿತಿ ತಲೆದೋರಿದೆ.ಮರು ಉತ್ತರಿಸಿದರೆ ಕೆಲಸ ಕಳೆದುಕೊಳ್ಳುವ ದುಸ್ಥಿತಿ ಬಂದೊದಗುತ್ತದೆ. ಹೀಗಾದರೆ ಕಾರ್ಮಿಕರಿಗೆ ಬೆಲೆಯಿಲ್ಲವೇ?ಎಂಬ ಪ್ರಶ್ನೆ ಮೂಡದೆ ಇರದು.ಯಾವಾಗ ತಂತ್ರಜ್ಞಾನದ ಪರ್ವ ಆರಂಭವಾಯಿತು ಆಗಿನಿಂದ ಕಾರ್ಮಿಕರ ಅವಶ್ಯಕತೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದರಿಂದ ಅಸಂಖ್ಯಾತ ಕಾರ್ಮಿಕರು ಇತರ ತಂತ್ರಜ್ಞಾನ ಪೂರಿತ ಉದ್ಯೋಗದತ್ತ ವಲಸೆ ಹೋದರು.ಇಂದಿಗೂ ಬದುಕಿಗೆ ಭದ್ರತೆ ಇಲ್ಲದೆ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಫೋಟೋ ಕೃಪೆ : ಅಂತರ್ಜಾಲ
ಕಾರ್ಮಿಕರ ಜೀವನ ನಿಂತಿರುವುದೇ ದಿನದ ದುಡಿಮೆಯ ಮೇಲೆ ಆ ದುಡಿಮೆಯಲ್ಲಿಯೂ ಕೂಡ ವೇತನ ಕಡಿತಗೊಳಿಸಿ ಕೊಟ್ಟರೆ ಜೀವನ ನಡೆಸುವುದಾದರೂ ಹೇಗೆ. ನಿತ್ಯವೂ ಆರ್ಥಿಕತೆಯಲ್ಲಿ ಏರುತ್ತಿರುವ ವಸ್ತುಗಳ ಬೆಲೆಗಳು ಕಾರ್ಮಿಕರನ್ನು ಆರ್ಥಿಕವಾಗಿ ಕುಗ್ಗಿಸಿ ಬದುಕಿಗೆ ಸಂಕಷ್ಟ ಬಂದೆರಗುತ್ತದೆ.ಆಗ ದಿಕ್ಕು ತೋಚದೆ ವಾಮ ಮಾರ್ಗದತ್ತ ಸಾಗುತ್ತಾರೆ. ಇದರಿಂದ ಪರೋಕ್ಷವಾಗಿ ಕಾರ್ಮಿಕರಾಗಿ ಬಾಳಬೇಕಾದ ಕೆಲ ಜನರು ಇತರೆ ರೀತಿಯ ಋಣಾತ್ಮಕ ಬಾಹ್ಯ ಕಾರ್ಯದಲ್ಲಿ ತೊಡಗಿ ತಮ್ಮಯ ವ್ಯಕ್ತಿತ್ವಕ್ಕೆ ತಾವೇ ಕುತ್ತಾಗುತ್ತಾರೆ.
ಇಂದಿನ ಆಧುನಿಕ ಯುಗದಲ್ಲಿ ಕಾರ್ಮಿಕರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಬದುಕಿಗೆ ಭದ್ರತೆ ಇಲ್ಲದಾಗಿದೆ ಹಾಗಾಗಿ ಇದು ಕಾರ್ಮಿಕರಿಗೆ ಅತಿ ಅವಶ್ಯವಾಗಿದ್ದು ಸರ್ಕಾರವು ಕೂಡ ವಿವಿಧ ಯೋಜನೆಗಳಡಿಯಲಿ ಕಾರ್ಮಿಕರನ್ನು ಗಣನೆಗೆ ತೆಗೆದುಕೊಂಡು ಸಾಧ್ಯವಾದಷ್ಟು ಸೌಲಭ್ಯಗಳನ್ನು ಒದಗಿಸಿ ಕಾರ್ಮಿಕರ ಹಿತವನ್ನು ಕಾಪಾಡಿದ್ದೆ ಆದಲ್ಲಿ ಕಾರ್ಮಿಕರ ಜೀವನ ಸುಭದ್ರವಾಗುತ್ತದೆ ಇಲ್ಲದಿರೆ ಅಭದ್ರವಾಗಿ ಜೀವನ ಅಯ್ಯೊಮಯವಾಗುವುದರಲ್ಲಿ ಸಂದೇಹವಿಲ್ಲ.
ಕಾರ್ಮಿಕರು ನಮ್ಮಂತೆ ಮನುಜರೆ ಮಾನವೀಯತೆ ಮನುಷ್ಯತ್ವವನ್ನು ಮರೆಯದೆ ಕಾರ್ಯವನ್ನು ಶ್ಲಾಘಿಸುತ ಮೆಚ್ಚುಗೆಯ ನುಡಿಗಳನ್ನಾಡಿ ಅವರಿಗೆ ತಮ್ಮ ಕಾರ್ಯದ ಬಗ್ಗೆ ಹೆಮ್ಮೆ ಮೂಡುವಂತೆ ಮಾಡಿ ಆಗ ಕಾರ್ಮಿಕರಿಗೆ ಸಾರ್ಥಕ ಭಾವ ಮೂಡುವುದು.ಕಾರ್ಮಿಕರೆ ಆರ್ಥಿಕ ಪ್ರಗತಿಯ ರೂವಾರಿಗಳು ಪ್ರತಿ ವಲಯಕ್ಕೂ ಆಧಾರಸ್ತಂಭವಿದ್ದಂತೆ ದೇಶದ ಪ್ರತಿ ವಲಯದ ಉಸಿರು ಹಗಳಿರುಳೆನ್ನದೆ ಸುರಿಸುವರು ಬೆವರು.ಹಾಗಾಗಿ ಕಾರ್ಮಿಕರನ್ನು ಗೌರವಿಸಿ ದೇಶದ ಪ್ರಗತಿಯನ್ನು ನಿರೀಕ್ಷಿಸಿ.ಕಾರ್ಮಿಕರೆ ದೇಶದ ಹೃದಯ ಇವರ ಕಾರ್ಯವೆ ಕ್ಷೇತ್ರಗಳ ಉನ್ನತಿಗೆ ಅಭಯ.
- ಅವಿನಾಶ ಸೆರೆಮನಿ – ಬೈಲಹೊಂಗಲ
