‘ಒಳಚರಂಡಿ’ ಕೃತಿ ಪರಿಚಯ : ಪ್ರಸನ್ನ ಸಂತೇಕಡೂರು

ಕತೆಗಾರ, ಕಾದಂಬರಿಕಾರ, ಅಂಕಣಕಾರ, ಅಧ್ಯಾಪಕ, ಸಂಘಟಕ, ಪ್ರಕಾಶಕ ನಾಗತಿಹಳ್ಳಿ ಚಂದ್ರಶೇಖರರ ಅವರ “ಒಳಚರಂಡಿ” ಕಥಾಸಂಕಲನ ಕುರಿತು ವಿಜ್ಞಾನಿ ಹಾಗೂ ಕತೆಗಾರ ಪ್ರಸನ್ನ ಸಂತೇಕಡೂರು ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಪುಸ್ತಕ : ಒಳಚರಂಡಿ
ಲೇಖಕರು : ನಾಗತಿಹಳ್ಳಿ ಚಂದ್ರಶೇಖರ
ಪ್ರಕಾರ : ಕಥಾಸಂಕಲನ
ಬೆಲೆ : ೧೫೦.೦೦

ಚಲನಚಿತ್ರ ನಿರ್ದೇಶಕರಾಗಿ ನಾಗತಿಹಳ್ಳಿ ಚಂದ್ರಶೇಖರರವರು ಕನ್ನಡನಾಡಿನಲ್ಲಿ ಬಹುದೊಡ್ಡ ಮತ್ತು ಚಿರಪರಿಚಿತ ಹೆಸರು. ಕನ್ನಡ ಸಾಹಿತ್ಯದಲ್ಲೂ ಕೂಡ ಅವರು ಬಹುಮುಖ ಪ್ರತಿಭೆ. ಕತೆಗಾರ, ಕಾದಂಬರಿಕಾರ, ಅಂಕಣಕಾರ, ಅಧ್ಯಾಪಕ, ಸಂಘಟಕ, ಪ್ರಕಾಶಕ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ.

ಬಾ ನಲ್ಲೆ ಮಧು ಚಂದ್ರಕೆ, ಕೊಟ್ರೇಶಿ ಕನಸು, ಅಮೆರಿಕ! ಅಮೇರಿಕಾ!!, ಹೂಮಳೆ, ನನ್ನ ಪ್ರೀತಿಯ ಹುಡುಗಿ, ಪ್ಯಾರಿಸ್ ಪ್ರಣಯ, ಅಮೃತಧಾರೆ ಇನ್ನು ಮುಂತಾದ ಅವರದೇ ಸಿನಿಮಾಗಳಲ್ಲಿ ಅವರಲ್ಲಿರುವ ಲೇಖಕನನ್ನ ಮತ್ತು ಸಾಹಿತ್ಯ ಪ್ರೀತಿಯನ್ನು ನಾವು ಹೆಚ್ಚು ಕಾಣಬಹುದು.

೨೦೨೪ ರ ಪ್ರಜಾವಾಣಿಯ ದೀಪಾವಳಿ ಕಥಾಸ್ಫರ್ಧೆಯಲ್ಲಿ ಇವರ ಒಳಚರಂಡಿ ಕತೆಗೆ ಮೊದಲ ಬಹುಮಾನ ಬಂದಾಗ ಕೆಲವರು ಅಪಸ್ವರ ಎತ್ತಿದ್ದರು. ಅದಕ್ಕೆ ಮುಖ್ಯ ಕಾರಣ ನಾಗತಿಹಳ್ಳಿಯವರು ಅಧ್ಯಾಪಕರಾಗಿ ಕೆಲಸ ಮಾಡಿದ್ದವರು. ಸಾಹಿತ್ಯದ ಮೂಲಕವೇ ತಮ್ಮ ಕೃತಿಗಳಿಗೆ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರು. ಇಂತವರು ಕಥಾಸ್ಪರ್ಧೆಗೆ ಸ್ಪರ್ಧಿಸಿ ಕತೆ ಬರೆದರೆ ಈಗಾಗಲೇ ಅದರಲ್ಲಿ ಹೊಸಬರಿಗೆ ಯುವ ಜನಾಂಗಕ್ಕೆ ಸ್ಪರ್ಧೆಯಲ್ಲಿ ಅವಕಾಶ ತಪ್ಪಿ ಬಹುಮಾನ ಸಿಗುವುದಿಲ್ಲ ಎಂಬ ಕಾರಣವೂ ಇತ್ತು. ಆದರೆ, ನನ್ನ ಪ್ರಕಾರ ನಾಗತಿಹಳ್ಳಿಯವರು ಕಥಾಸ್ಪರ್ಧೆಗೆ ಕತೆ ಬರೆದು ಬಹುಮಾನ ಪಡೆದು ತಮ್ಮಲ್ಲಿರುವ ಲೇಖಕನಲ್ಲಿ ಇನ್ನು ಪ್ರತಿಭೆಯಿದೆ ಎಂದು ತೋರಿಸಿರುವುದು ತುಂಬಾ ಒಳ್ಳೆಯ ಕೆಲಸ.

ಅವರು ಈ ಕತೆ ಬರೆಯದಿದ್ದರೆ ನಮ್ಮ ಸಾಹಿತ್ಯ ವಲಯ ಮತ್ತು ಮಾಧ್ಯಮಗಳು ಅವರ ಸಾಹಿತ್ಯದ ಕೊಡುಗೆಯನ್ನ ಮರೆತು ಬಿಡುತ್ತಿದ್ದವು. ಅವರೊಬ್ಬ ಸಿನಿಮಾ ನಿರ್ದೇಶಕ ಮಾತ್ರ ಎಂಬ ಲೇಬಲ್ ಹಚ್ಚಿ ಸುಮ್ಮನಾಗುತ್ತಿದ್ದವು. ಅವರ ಈ ಕತೆಗೆ ಬಹುಮಾನ ಬಂದಾಗ ಹಲವು ಹೊಸ ತಲೆಮಾರಿನ ಲೇಖಕರಿಗೂ ನಾಗತಿಹಳ್ಳಿಯವರ ಸಾಹಿತ್ಯದ ಬಗ್ಗೆ ಕುತೂಹಲ ಮೂಡಿ ತಿಳಿದುಕೊಳ್ಳುವುದಕ್ಕೆ ಮತ್ತು ಮರು ಓದಿಗೆ ಅವಕಾಶ ಸೃಷ್ಟಿಸಿ ಅದಕ್ಕೆ ತೆರೆದುಕೊಳ್ಳುವಂತೆ ಮಾಡಿತು.

ಮೂರು ನಾಲ್ಕು ದಿನಗಳ ಕೆಳಗೆ ಮೈಸೂರಿನ ನವಕರ್ನಾಟಕ ಪುಸ್ತಕ ಮಳಿಗೆಗೆ ಹೋಗಿದ್ದೆ. ಅಲ್ಲಿ ಕೆಲವು ಪುಸ್ತಕಗಳನ್ನ ಹುಡುಕಿ ತೆಗೆದುಕೊಂಡು ಇನ್ನೇನೂ ಹೊರಡಬೇಕು ಎಂದು ಅಂದುಕೊಳ್ಳುವುದರಲ್ಲಿ ಅವರ ಒಳಚರಂಡಿ ಕತೆಯ ಶೀರ್ಷಿಕೆಯ ಕಥಾಸಂಕಲನ ಕಂಡಿತು. ತಕ್ಷಣ ಅದನ್ನ ಕೈಗೆತ್ತಿಕೊಂಡೆ. ಪುಸ್ತಕವನ್ನ ಕೈಗೆತ್ತಿಕೊಂಡ ತಕ್ಷಣವೇ ವಾವ್ ಎಂದು ಅನಿಸಿತು. ಅದಕ್ಕೆ ಮುಖ್ಯ ಕಾರಣ ಪುಸ್ತಕದ ಮುಖಪುಟ, ಒಟ್ಟು ಪುಸ್ತಕದ ರಚನೆ, ಪುಟಗಳ ಗುಣಮಟ್ಟ, ಮುಖಪುಟದ ಹೊದಿಕೆ. ಒಂದು ಕತೆಯ ನಂತರ ಇನ್ನೊಂದು ಕತೆಗೆ ಬಿಟ್ಟಿರುವ ಜಾಗ, ಅಲ್ಲಿ ಕೊಟ್ಟಿರುವ ಕತೆಯ ಸಂಬಂಧಿ ಕೆಲವು ಸಾಲುಗಳು ಒಟ್ಟು ಎಲ್ಲಾ ಸೇರಿ ಪುಸ್ತಕ ಅದ್ಭುತವಾಗಿ ಮೂಡಿ ಬಂದಿದೆ. ಅದನ್ನ ಕೈಯಲ್ಲಿ ಹಿಡಿದ ತಕ್ಷಣವೇ ಈ ಪುಸ್ತಕವನ್ನ ಕೊಂಡುಕೊಳ್ಳಲೇ ಬೇಕು ಎಂದು ಅನಿಸಿತು.

ಭಾರತೀಯ ಮೂಲದ ಬ್ರಿಟಿಷ್ ಅಮೆರಿಕನ್ ಲೇಖಕಿ ಝಂಪಾ ಲಹಿರಿ ಪುಸ್ತಕಗಳ ಮುಖಪುಟ ಮತ್ತು ಅವುಗಳಿಗೆ ಉಡಿಸುವ ಮೆಲೊದಿಕೆ ಬಗ್ಗೆಯೇ ಒಂದು ಪುಸ್ತಕ( ದಿ ಕ್ಲಾತಿಂಗ್ ಆಫ್ ಬುಕ್ಸ್) ಬರೆದಿದ್ದಾರೆ. ಅದರಲ್ಲಿ ಮೆಲೊದಿಕೆ ಮತ್ತು ಮುಖ ಪುಟದ ಮಹತ್ವದ ಬಗ್ಗೆ ಹೇಳಿದ್ದಾರೆ.

ಇಲ್ಲಿ ಒಟ್ಟು ಎಂಟು ಕತೆಗಳಿವೆ. ಆತ್ಮಗೀತ, ಮೀ ಟೂ, ವೀಸಾ ರಕ್ಷತಿ ರಕ್ಷಿತಃ, ಒಳಚರಂಡಿ, ಸಂಜೆ, ಒಬ್ಬ, ಹೋರಿ ಮತ್ತು ಇನ್ನೂ ಮುಂತಾದವರು. ಎಂಟು ಕತೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ.

ಒಳಚರಂಡಿ ಆಧುನಿಕ ಭಾರತದಲ್ಲಿನ ನಗರಗಳಲ್ಲಿನ ಬಹುದೊಡ್ಡ ಸಮಸ್ಯೆಯನ್ನೇ ಕತೆಯಾಗಿಸಿದ್ದರೂ ಇಲ್ಲಿ ಮನುಷ್ಯ ಸಂಬಂಧಗಳಲ್ಲಿನ ಸಂಕೀರ್ಣತೆ, ಭ್ರಷ್ಟಾಚಾರ, ಲಂಚ, ವ್ಯಕ್ತಿಯೊಬ್ಬನ ಪ್ರಾಮಾಣಿಕ ಹೋರಾಟ ಎಲ್ಲಾ ಚೆನ್ನಾಗಿ ಮೂಡಿ ಬಂದಿವೆ. ಗಿರಡ್ಡಿ ಗೋವಿಂದರಾಜರ “ಹಂಗು” ಕತೆಯ ಮುಖ್ಯ ಪಾತ್ರದ ಚಡಪಡಿಕೆಯನ್ನ ಸ್ವಲ್ಪ ಮಟ್ಟಿಗೆ ನೆನಪಿಸುತ್ತದೆ. ಹಂಗು ಕತೆಯನ್ನ ಪುಟ್ಟಣ್ಣ ಕಣಗಾಲರು ತಮ್ಮ ಕಥಾ ಸಂಗಮ ಚಲನಚಿತ್ರದಲ್ಲಿ ಒಂದು ಕತೆಯಾಗಿ ಬಳಸಿಕೊಂಡಿದ್ದಾರೆ.

ಆತ್ಮಗೀತ ಕತೆ ಅವರ ಆತ್ಮಕತೆಯ ಭಾಗದಂತೆ ಕಾಣುತ್ತದೆ. ಇಲ್ಲಿ ಕೋವಿಡ್ ಸಮಯದಲ್ಲಿ ಕ್ಯಾನ್ಸರ್ ಬಂದು ನರಳುತ್ತಿರುವ ತಾಯಿಯ ಬದುಕನ್ನ ನಿರೂಪಕನಾದ ಮಗ ತನ್ನ ಕರ್ತವ್ಯವನ್ನ ಜೊತೆಗೆ ಲೋಕದ ವ್ಯವಹಾರಗಳನ್ನ ಚಿತ್ರಿಸುತ್ತ ಚೆನ್ನಾಗಿ ಮೂಡಿಸಿದ್ದಾರೆ.

ವೀಸಾ ರಕ್ಷತಿ ರಕ್ಷಿತಃ ಕತೆ ಕ್ಯಾನ್ಸರ್ ಬಂದ ಯುವಕನ ತಂದೆಯ ಹೋರಾಟ ಮತ್ತು ನಿರೂಪಕನ ಪ್ರಯತ್ನ ಆಧುನಿಕ ಜಗತ್ತಿನ ಬದುಕಿನ ವಿಪರ್ಯಾಸವನ್ನ ಚೆನ್ನಾಗಿ ಚಿತ್ರಿಸಿದ್ದಾರೆ. ಸಂಜೆ ಕತೆಯಲ್ಲಿ ಮೂವರು ಬಾಲ್ಯದ ಗೆಳೆಯರು ನಿವೃತ್ತರಾದ ನಂತರ ಒಂದು ಕಡೇ ಸೇರಿ ತಮ್ಮ ಬದುಕಿನ ಅವಲೋಕನ ಮಾಡುತ್ತ ತಾವು ಬದುಕಿನಲ್ಲಿ ಕಳೆದುಕೊಂಡಿದ್ದನ್ನ ಹುಡುಕುತ್ತ ಹೋಗಿ ಕೊನೆಗೆ ಅದು ಮರೀಚಿಕೆ ಎಂದು ಗೊತ್ತಾಗುತ್ತದೆ. ಮೀ ಟೂ ಕತೆಯಲ್ಲಿ ಮಿಥ್ಯಾರೋಪ ಮತ್ತು ಚಳುವಳಿಕಾರ ಬಂಡವಾಳಶಾಹಿತನ ಚೆನ್ನಾಗಿ ಮೂಡಿಬಂದಿದೆ. ಅಪಾರ್ಟ್ಮೆಂಟ್ ಸಂಕೀರ್ಣವೊಂದರಲ್ಲಿ ಮನೆ ಕೆಲಸದ ಮುಗ್ದ ಮಹಿಳೆಯೊಬ್ಬಳ ಆರೋಪದ ಹಿನ್ನೆಲೆಯಲ್ಲಿ ಮೂಡಿ ಬಂದಿದೆ.

ಇನ್ನೂ ಮುಂತಾದವರು ಕತೆಯಲ್ಲಿ ಚಲನಚಿತ್ರಗಳಲ್ಲಿ ಹೀರೊ ಹೀರೊ ಇನ್ ಗಳ ಜೊತೆಯಲ್ಲಿ ನೃತ್ಯ ಮಾಡುವಾಗ ಬರುವ ಅನಾಮಿಕ ನಟ ನಟಿಯರ ಬದುಕಿನ ಕುರಿತು ಅವರು ಪಡುವ ಕಷ್ಟಗಳ ಕುರಿತ ಕತೆ. ಒಬ್ಬ ಮತ್ತು ಹೋರಿ ಕತೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಈ ಕಥಾಸಂಕಲನದ ಎಲ್ಲಾ ಕತೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಇದರ ಪ್ರಕಾಶಕರು ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆಯವರು. ಇದು ಕೂಡ ನಾಗತಿಹಳ್ಳಿಯವರ ಪ್ರಕಾಶನವೇ ಎಂದು ಅನಿಸುತ್ತದೆ.

ಪುಸ್ತಕ ಮುಟ್ಟಿದ ತಕ್ಷಣವೇ ಇಂಗ್ಲೀಷ್ ಪ್ರಕಾಶಕರ ಪುಸ್ತಕದ ರೀತಿ ಕಂಡಿತು. ಚಿಕ್ಕದಾಗಿ ಚೊಕ್ಕವಾಗಿ ಮೂಡಿ ಬಂದಿದೆ. ನನ್ನ ಮಗಳು “ಪಪ್ಪಾ ಯಾವುದೋ ಚಿಲ್ದ್ರೆನ್ಸ್ ಪುಸ್ತಕ ಓದುತ್ತಿದ್ದಿಯ?” ಎಂದು ಕೇಳಿದಳು. ಅದು ಪುಸ್ತಕದ ಮುಖ ಪುಟ ನೋಡಿ. ಆ ಮೇಲೆ ಪುಸ್ತಕ ಮುಟ್ಟಿ ಪುಸ್ತಕ ಚೆನ್ನಾಗಿದೆ. ಟೈಟಲ್ ಚೆನ್ನಾಗಿಲ್ಲ . ಬೇರೆ ಟೈಟಲ್ ಇದ್ದರೆ ಚೆನ್ನಾಗಿರುತಿತ್ತು ಅಂದಳು. ಮೂರನೇ ತರಗತಿಯಲ್ಲಿ ಓದುತ್ತಿರುವ ಅವಳಿಗೆ ಒಳಚರಂಡಿ ಎಂಬ ಶೀರ್ಷಿಕೆ ಇಷ್ಟ ಆಗಲಿಲ್ಲ ಎಂದು ಅನಿಸುತ್ತದೆ. ಆದರೆ ಕತೆಗಳು ತುಂಬಾ ಚೆನ್ನಾಗಿವೆ ಎಂದು ಹೇಳಿದ ಮೇಲೆ ಸುಮ್ಮನಾದಳು.

ನಾಗತಿಹಳ್ಳಿ ಚಂದ್ರಶೇಖರರವರು ಸಾಹಿತ್ಯದಲ್ಲೂ ಹೆಚ್ಚು ಸಾಧನೆ ಮಾಡಿರುವವರು. ಅವರಿಂದ ಇನ್ನು ಹೆಚ್ಚು ಸಾಹಿತ್ಯ ಮೂಡಿಬರಲಿ ಎಂದು ಆಶಿಸುತ್ತೇನೆ.


  • ಪ್ರಸನ್ನ ಸಂತೇಕಡೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW