ಚಿವ್ ಚಿವ್ ಎಲ್ಲಿ ಮರೆಯಾದೆ

ಪ್ರತಿವರ್ಷ ಮಾರ್ಚ್ ೨೦ ರಂದು ವಿಶ್ವ ಗುಬ್ಬಚ್ಚಿ ದಿನ ಆಚರಿಸಲಾಗುತ್ತದೆ. ಈ ದಿನವು ಗುಬ್ಬಚ್ಚಿಗಳ ಮಹತ್ವವನ್ನು ಅರಿತು ಅವುಗಳ ಸಂರಕ್ಷಣೆಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಕೊಡಗಿನ ಲೇಖಕಿ ಗೀತಾಂಜಲಿ ಎನ್ ಎಮ್ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಮನೆಯ ಮೇಲ್ಚಾವಣಿಯೇ
ನಿನ್ನ ಗೂಡಿನ ಪುಟ್ಟ ಅರಮನೆ,
ನಿನ್ನ ಕಂಡಾಗ ಮನವಾಗುವುದು
ಸಂತಸದ ಮನೆ.
ಪ್ರಕೃತಿಯ ಸುಂದರ
ಮುದ್ದು ರೂಪ ನೀ
ನಗರದ ಗದ್ದಲದಲಿ
ಕಣ್ಮರೆಯಾಗದಿರು ನೀ,

ಮುಂಜಾನೆಯ ಕಿರಣಗಳು ಭೂಮಿಯನ್ನು ಮುತ್ತಿಡುವ ಹೊತ್ತಿಗೆ ನಮ್ಮ ಕಿವಿಗೆ ಕೇಳಿಬರುವ ಮಧುರ ಧ್ವನಿ – “ಚಿವ್ ಚಿವ್”. ಅದು ಮತ್ತಾರದು ಅಲ್ಲ, ನಮ್ಮ ಮನೆಯ ಅಂಗಳದಲ್ಲಿ ಮುದ್ದಾಗಿ ಹಾರಾಡುತ ಓಡಾಡುವ ನಮ್ಮ ಮುದ್ದು ಗೆಳತಿ ಗುಬ್ಬಚ್ಚಿಯ ಸವಿ ಸಹಿ ದನಿ. ಚಿಕ್ಕದಾದ ದೇಹ, ಸರಳವಾದ ಬಣ್ಣ, ಆದರೆ ಮನಸ್ಸಿಗೆ ಸಂತೋಷ ತರುವ ಸ್ವಭಾವ ಇವೆಲ್ಲವೂ ಸೇರಿ ಗುಬ್ಬಚ್ಚಿಯನ್ನು ಪ್ರಕೃತಿಯ ಮುದ್ದು ಅತಿಥಿಯನ್ನಾಗಿಸಿವೆ.

ಮೊದಲೆಲ್ಲ ಮನೆಗಳ ಮೇಲ್ಚಾವಣಿ, ಕಿಟಕಿಗಳ ಅಂಚು, ಹೊಲಗಳ ಗದ್ದೆ ಎಲ್ಲೆಡೆ ಗುಬ್ಬಚ್ಚಿಗಳು ಸುಲಭವಾಗಿ ಕಾಣುತ್ತಿದವು. ಅದಕ್ಕಿರಬೇಕು ಗುಬ್ಬಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಪ್ರಿಯವೇ, ಒಂದು ರೀತಿಯ ಭಾವನಾತ್ಮಕ ನಂಟು ಎಂದರೆ ತಪ್ಪಿಲ್ಲ. ಅವು ಬೆಳಗಿನ ಹೊತ್ತಿನಲ್ಲಿ ಚಿವ್ ಚಿವ್ ಎಂದು ಹಾಡುತ್ತಾ ಮನೆಮನೆಗೂ ಸಂತೋಷ ಹಂಚುತ್ತಿದವು. ಮಕ್ಕಳಿಗೆ ಅವು ಆಟದ ಗೆಳೆಯರು, ಹಿರಿಯರಿಗೆ ಪ್ರಕೃತಿಯ ನೆನಪುಗಳಾಗಿ ಕಾಣಿಸುತ್ತಿದ್ದವು. ಆದರೆ ಈ ಪುಟ್ಟ ಪಕ್ಷಿ ಇಂದು ನಿಧಾನವಾಗಿ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನ ಆಚರಿಸಲಾಗುತ್ತದೆ. ಈ ದಿನವು ಗುಬ್ಬಚ್ಚಿಗಳ ಮಹತ್ವವನ್ನು ಅರಿತು ಅವುಗಳ ಸಂರಕ್ಷಣೆಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.

ಗುಬ್ಬಚ್ಚಿಯ ಮಹತ್ವ ಕೇವಲ ಅದರ ಮುದ್ದಾದ ರೂಪದಲ್ಲೇ ಅಲ್ಲ. ಅದು ಪರಿಸರ ಸಮತೋಲನವನ್ನು ಕಾಪಾಡುವ ಒಂದು ಚಿಕ್ಕ ಕಾವಲುಗಾರ. ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ತಿನ್ನುವುದರಿಂದ ಕೃಷಿಗೂ ಸಹಾಯ ಮಾಡುತ್ತದೆ. ಆದ್ದರಿಂದ ಗುಬ್ಬಚ್ಚಿ ಇರುವ ಸ್ಥಳಗಳು ಆರೋಗ್ಯಕರ ಪರಿಸರದ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ.

ಆದರೆ ಇಂದು ನಗರೀಕರಣದ ವೇಗದಲ್ಲಿ ಈ ಚಿಕ್ಕ ಪಕ್ಷಿಯ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಾಂಕ್ರೀಟ್ ಕಟ್ಟಡಗಳು ಹೆಚ್ಚಾಗುತ್ತಾ ಬಂದಂತೆ ಗೂಡು ಕಟ್ಟಲು ಸ್ಥಳಗಳು ಕಡಿಮೆಯಾದವು.
ಮೊಬೈಲ್ ಟವರ್‌ಗಳ ಕಿರಣಗಳ ಪರಿಣಾಮವೂ ಒಂದು ಕಾರಣ ಎಂದು ಹೇಳಲಾಗುತ್ತದೆ ಜೊತೆಗೆ ಮರಗಳ ಕಡಿತದಿಂದ ಸಹಜವಾದ ಅವುಗಳ ವಾಸಸ್ಥಳಗಳು ನಾಶವಾಗುತ್ತಿವೆ. ಕೀಟನಾಶಕಗಳ ಬಳಕೆಯಿಂದ ಅವುಗಳಿಗೆ ಆಹಾರವೂ ಕಡಿಮೆಯಾಗುತ್ತಿದೆ. ಈ ಕಾರಣಗಳಿಂದ ಗುಬ್ಬಚ್ಚಿಗಳ ಸಂಖ್ಯೆ ಹಲವೆಡೆ ಇಳಿಕೆಯಾಗುತ್ತಿರುವುದು ವಿಷಾದಕರ ಸಂಗತಿ.

ಗುಬ್ಬಚ್ಚಿಯನ್ನು ಉಳಿಸುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಮನೆಗಳ ಬಳಿ ನೀರಿನ ಪಾತ್ರೆ ಇಡುವುದು, ಚಿಕ್ಕ ಗೂಡು ಪೆಟ್ಟಿಗೆಗಳನ್ನು ಹಾಕುವುದು, ಮರಗಳನ್ನು ನೆಡುವುದು ಇಂತಹ ಸಣ್ಣ ಪ್ರಯತ್ನಗಳೇ ಅವುಗಳಿಗೆ ಹೊಸ ಜೀವನ ನೀಡಬಹುದು. ಪ್ರಕೃತಿಯೊಂದಿಗೆ ನಮ್ಮ ಸಂಬಂಧವನ್ನು ಉಳಿಸುವ ದಾರಿಯೂ ಇದೇ. “ಚಿವ್ ಚಿವ್ ಎಂದು ಕೂಗುವ ಗುಬ್ಬಚ್ಚಿಯ ಸ್ವರ ಪ್ರಕೃತಿಯ ಮಧುರ ಸಂಗೀತ.ಆ ಸ್ವರ ಮೌನವಾಗದಿರಲು ಅದನ್ನು ಕಾಪಾಡುವುದು ನಮ್ಮ ಜವಾಬ್ದಾರಿ.”

ಗುಬ್ಬಚ್ಚಿ ಕೇವಲ ಒಂದು ಪಕ್ಷಿ ಅಲ್ಲ ಅದು ನಮ್ಮ ಸಂಸ್ಕೃತಿ, ನಮ್ಮ ಮನೆಗಳ ನೆನಪು ಮತ್ತು ಪ್ರಕೃತಿಯ ಜೀವಂತ ಚಿಹ್ನೆ. ಅದರ ಚಿರುಪುಟ ಕೇಳಿಸುವ ಮನೆಗಳು ಜೀವಂತ ಪ್ರಕೃತಿಯ ಸಾಕ್ಷಿಗಳಾಗಿವೆ. ಆದ್ದರಿಂದ ಗುಬ್ಬಚ್ಚಿಯನ್ನು ಉಳಿಸುವುದು ಅಂದರೆ ಪ್ರಕೃತಿಯೊಂದಿಗೆ ನಮ್ಮ ಸಂಬಂಧವನ್ನು ಉಳಿಸುವುದೇ ಆಗಿದೆ.


  • ಗೀತಾಂಜಲಿ ಎನ್ ಎಮ್ – ಕೊಡಗು.

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW