ಏಕೆನ್ನ ತೊರೆದೆಯೋ…ನನ್ನನು ಮರೆತೆಯೋ…ಮುಂದೆ ಓದಿ ಕವಿಯತ್ರಿ ಪವಿತ್ರ.ಹೆಚ್.ಆರ್ ಅವರ ಲೇಖನಿಯಲ್ಲಿ ಅರಳಿದ ಒಂದು ಭಾವನಾತ್ಮಕ ಕವನ…
ಜೀವನದ ಸಂಜೆಯಲ್ಲಿ
ಯಾತ್ರಿಕನು ಹಿಂದಿರುಗಿ
ತನ್ನ ಹಾದಿಯ ನೋಳ್ಪ ಸಮಯದಲ್ಲಿ
ಎರಡು ಜೋಡಿನ ಗುರುತು
ಹೆಜ್ಜೆ ಕಾಣಿಸಿತಲ್ಲಿ
ತನ್ನದೊಂದು,ದೈವದ್ದು,ಮಳಲಿನಲ್ಲಿ
ಒಮ್ಮೊಮ್ಮೆ ಹೆಜ್ಜೆಯಲ್ಲಿ
ಜೋಡೊಂದು ಕಾಣದೇ
ಏನಾದದೆಂದು ತಾ ನೋಡುವಲ್ಲಿ
ಅದುವೇ ಕಷ್ಟದ ಹೊತ್ತು
ಕಾರ್ಪಣ್ಯ ಮೆರೆದಿತ್ತು
ದೈವವವನು ಮಾತ್ರ ತೊರೆದನಲ್ಲಿ
ಏಕೆನ್ನ ತೊರೆದೆಯೋ
ನನ್ನನು ಮರೆತೆಯೋ
ಹೇಳು ನೀನೆಂದು ಇವ ಬೇಡಲಲ್ಲಿ
ದೈವವೆಂದಿತು ಆಗ
ನಿನ್ನ ಮನಕಿದು ಭಾವ
ನಿಜವೆ ಬೇರಿಹುದು ಕಾಣು ನೀನಿಲ್ಲಿ
ಒಂದೊಂದು ಜೋಡೊಮ್ಮೆ
ಕಾಣದ ತೀರದಲ್ಲಿ
ನಿನ್ನ ಜೋಡೊಂದೆಂದು ತಿಳಿದೆಯಲ್ಲ
ನಿನ್ನನು ಹೊತ್ತು ನಾ
ನಡೆದು ಬರುತಿರಲ್ಲಲಿ
ನನ್ನ ಹೆಜ್ಜೆಯ ಗುರುತು ಮರೆತೆಯಲ್ಲಾ.
- ಪವಿತ್ರ.ಹೆಚ್.ಆರ್ – ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಬರಹಗಾರರು, ಕವಿಯತ್ರಿ
