ಸ್ವಪ್ರಶಂಸೆ ಕುರಿತು ಚಿಂತನೆ – ಸುದರ್ಶನ್ ಪ್ರಸಾದ್

”Self advertising ತಪ್ಪು ಎಂದು ಖಂಡಿತಾ ಹೇಳಲಾಗುವುದಿಲ್ಲ. ಜಗತ್ತಿಗೆ ಉಪಕಾರ ಮಾಡ ಹೊರಟವರು ಅದನ್ನು ತೋರಿಸಿಕೊಳ್ಳದೇ ಇದ್ದರೆ ಪ್ರಯೋಜನ ಪಡೆಯುವವರಿಗೆ ತಿಳಿಯುವುದಾದರೂ ಹೇಗೆ?” .- ಸ್ವಪ್ರಶಂಸೆ ಕುರಿತು ಸುದರ್ಶನ್ ಪ್ರಸಾದ್ ಅವರ ಒಂದು ಚಿಂತನ ಲೇಖನ, ತಪ್ಪದೆ ಓದಿ…

ಒಂದಿಷ್ಟು ಜನ ಅದೆಷ್ಟು ಸುಲಭವಾಗಿ ತಮ್ಮನ್ನು ತಾವು ಹೊಗಳಿಕೊಳ್ಳುತ್ತಾರಪ್ಪಾ, ಇದೆಲ್ಲಾ ಹೇಗೆ ಸಾಧ್ಯ ಅನ್ನಿಸೋದು ನನಗೆ. ಯಾಕೆಂದರೆ ಇನ್ನೊಬ್ಬ ವ್ಯಕ್ತಿಯನ್ನು ಹೊಗಳಿದಷ್ಟು ಸುಲಭವಲ್ಲ ತಮ್ಮನ್ನು ತಾವು ಹೊಗಳಿಕೊಳ್ಳುವುದು. ಹಾಗೆ ಹೊಗಳಿಕೊಳ್ಳಲು ಎದುರಿನ ವ್ಯಕ್ತಿಯ ದೃಷ್ಟಿಯಿಂದ ಯೋಚಿಸಬೇಕಾಗುತ್ತದೆ, ನಾಲ್ಕಾರು ಜನರ ಅಭಿಪ್ರಾಯಗಳನ್ನು ನೋಡಬೇಕಾಗುತ್ತದೆ ಮತ್ತು ಅದೆಲ್ಲಕ್ಕೂ ತಾನು ಯೋಗ್ಯ ಎನ್ನಿಸಿದಾಗ ಮಾತ್ರ ಹೇಳಿಕೊಳ್ಳಬಹುದು. ಹಾಗಾದ್ರೆ ಕೆಲವರಿಗೆ ಈ ಹೊಗಳಿಕೊಳ್ಳುವಿಕೆ ಅಷ್ಟು ಸುಲಭವಾಗಿದ್ದು ಹೇಗೆ? ಅವರು ಈ ಮೇಲಿನ ವಿಚಾರಗಳನ್ನು ಯೋಚಿಸುವುದೇ ಇಲ್ಲವಾ? ಇಂದಿಗೂ ನನ್ನನ್ನು ಕಾಡುತ್ತಿರುವ ಪ್ರಶ್ನೆಗಳಿವು.

ನಾನು ನೋಡಿದ ಹಾಗೆ ಈ ಸ್ವಪ್ರಶಂಸೆ ಮಾಡಿಕೊಳ್ಳುವ ವ್ಯಕ್ತಿಗಳಲ್ಲಿ ಎರಡು ರೀತಿಯವರಿರುತ್ತಾರೆ. ಮೊದಲನೆಯವರು ಇನ್ನೊಬ್ಬರು ತಮ್ಮನ್ನು ಹೊಗಳಿದ ಉದಾಹರಣೆಗಳನ್ನು ನೀಡುತ್ತಾ ಸ್ವಪ್ರಶಂಸೆ ಮಾಡಿಕೊಂಡರೆ ಎರಡನೆಯವರದ್ದು ತಮ್ಮದೇ ನಿಲುವುಗಳು. ಇವೆರಡರ ಹಿಂದೆ ಯಾವುದಾದರೂ ಲಾಭದ ಉದ್ದೇಶವಿದ್ದರೆ Self advertising ಎನ್ನಬಹುದು, ಯಾವುದೇ ಲಾಭವಿಲ್ಲದೇ ಹೆಚ್ಚಿನವರು ತಮ್ಮನ್ನು ತಾವು ಹೊಗಳಿಕೊಳ್ಳಲು ಹಿಂಜರಿಯುತ್ತಾರೆ ಅಲ್ಲವೇ? ಅದು ಎಲ್ಲರಿಗೂ ಗೊತ್ತಿರುವ ವಾಸ್ತವ.

ಫೋಟೋ ಕೃಪೆ :depositphotos

ಈ ಜಗತ್ತಲ್ಲಿ ಒಂದಿಷ್ಟು ದೈವಿಕ ಮನಸ್ಸುಗಳೂ ಇವೆ. ಅವುಗಳಿಗೆ ಲಾಭದ ಮೇಲೆ ಆಸಕ್ತಿಯಿಲ್ಲ. ತಮ್ಮ ಅನುಭವಗಳನ್ನು ಜಗತ್ತಿನ ಮುಂದಿಟ್ಟು ಜನರಿಗೊಂದು ಮಾರ್ಗದರ್ಶನ ಮಾಡುವುದಷ್ಟೇ ಕರ್ತವ್ಯ. ಆದರೆ ಈ ಜಗತ್ತು ಅದನ್ನೂ ಒಪ್ಪುವುದಿಲ್ಲ ನೋಡಿ. ಅದಕ್ಕೂ self advertising ಎಂಬೆಲ್ಲಾ ಹಣೆಪಟ್ಟಿ ಅಂಟಿಸಿ ಆ ಮನಸ್ಸಿಗೆ ಘಾಸಿಯುಂಟುಮಾಡುತ್ತದೆ. ಚುಚ್ಚು ಮಾತುಗಳನ್ನು ಮೀರಿ ಬೆಳೆದು ನಿಂತರೆ ಅದು ಆ ಮನಸ್ಸುಗಳಿರುವ ಶ್ರೇಷ್ಠತೆ.

ಇಲ್ಲಿ Self advertising ತಪ್ಪು ಎಂದು ಖಂಡಿತಾ ಹೇಳಲಾಗುವುದಿಲ್ಲ. ಎಲ್ಲಿಯವರೆಗೆ ಅದರಿಂದ ಈ ಜಗತ್ತಿಗೆ ಒಳಿತಾಗುತ್ತದೆಯೋ ಅಲ್ಲಿಯವರೆಗೆ ಅದು ಬೇಕೇ ಬೇಕು. ಜಗತ್ತಿಗೆ ಉಪಕಾರ ಮಾಡ ಹೊರಟವರು ಅದನ್ನು ತೋರಿಸಿಕೊಳ್ಳದೇ ಇದ್ದರೆ ಪ್ರಯೋಜನ ಪಡೆಯುವವರಿಗೆ ತಿಳಿಯುವುದಾದರೂ ಹೇಗೆ? ಉಪಕಾರ ಕಾರ್ಯಗತವಾಗುವುದಾದರೂ ಹೇಗೆ? ಆ ಉಪಕಾರದಿಂದ ತಾನೊಂದಿಷ್ಟು ಗಳಿಸಿದರೂ ಅದು ತಪ್ಪಲ್ಲ. ಒಬ್ಬ ವ್ಯಕ್ತಿಯಿಂದ ಸಹಾಯ ಪಡೆಯಬೇಕಾದರೆ ಅವರ ಕುರಿತಾದ ಮಾಹಿತಿ ಇರುವುದು ಅಗತ್ಯ ಮತ್ತು ಆ ಮಾಹಿತಿಯ ಮೂಲ ಅವರ ಅಭಿವ್ಯಕ್ತತೆ ಮಾತ್ರವೇ ಆಗಿದ್ದರೆ ಅದು ಅತ್ಯಗತ್ಯ.


ಫೋಟೋ ಕೃಪೆ : weddingwire

ಆದರೆ ತಾನು ಗಳಿಸುವುದಕ್ಕಾಗಿ ಇನ್ನೊಬ್ಬರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ Self advertising ಇದ್ದಲ್ಲಿ ಅದು ಅಪಾಯ. ಎದುರಿಗಿರುವ ವ್ಯಕ್ತಿಯ ಮಾಹಿತಿ, ಹಣ, ವ್ಯಕ್ತಿತ್ವ, ಆರೋಗ್ಯ, ಅಷ್ಟೇ ಏಕೆ ಆತನ ಜೀವವನ್ನೇ ತನ್ನ ಲಾಭಕ್ಕಾಗಿ ಬಳಸಿಕೊಳ್ಳುವ ಅದೆಷ್ಟೋ ಜನರು ನಮ್ಮ ನಡುವೆ ಇದ್ದಾಗ ನಿಸ್ವಾರ್ಥ ಸೇವೆ ನೀಡುವವರ ಮೇಲೆ ಅನುಮಾನ ಬಾರದೇ ಇರುವುದಿಲ್ಲ. ಈ ಸಂದರ್ಭದಲ್ಲಿ ಮುಖ್ಯವಾಗುವುದು ವ್ಯಕ್ತಿಗಳನ್ನು ಆರಿಸಿಕೊಳ್ಳುವ ಜಾಣ್ಮೆ ಮತ್ತು ಅಪಾಯಗಳಿಗೆ ಸಿಲುಕದಂತೆ ನೋಡಿಕೊಳ್ಳುವ ಆತ್ಮರಕ್ಷಣೆ.

ಒಬ್ಬರ ಅನುಭವಗಳು ಇನ್ನೊಬ್ಬರಿಗೆ ಸಹಾಯ ಮಾಡುತ್ತವೆ ಎನ್ನುವುದಾದರೆ ಅದನ್ನು ನಿಸ್ಸಂದೇಹವಾಗಿ ಸ್ವೀಕರಿಸುವುದು ಸಮಾಜದ ಒಳಿತಿಗೆ ಅಗತ್ಯ. ಎಲ್ಲಾ ಅನುಭವಗಳಿಗೂ ಸೆಲ್ಫ್ ಅಡ್ವರ್ಟೈಸಿಂಗ್ ಎಂಬ ಟ್ಯಾಗ್ ನೀಡದೇ ನೋಡಿದರೆ ಖಂಡಿತಾ ಒಂದಿಷ್ಟು ಬದಲಾವಣೆ ಸಾಧ್ಯ. ಅನುಭವಗಳು ಕೇವಲ ವೈಯಕ್ತಿಕವಾಗಿರಬೇಕಿಲ್ಲ, ಔದ್ಯೋಗಿಕ ಅನುಭವಗಳು, ಓದಿದ, ನೋಡಿದ ಅನುಭವಗಳು ಎಲ್ಲವಕ್ಕೂ ಅದರದ್ದೇ ಆದ ಮಾನ್ಯತೆಯಿದೆ. ಅವುಗಳನ್ನು ಅಭಿವ್ಯಕ್ತಿಪಡಿಸುವ ಕಲೆ ಅಪರೂಪದ್ದು ಮತ್ತು ಅವುಗಳಿಗೆ ಸಿಗುವ ಪ್ರೋತ್ಸಾಹ ಹೊಸ ಚೈತನ್ಯ ನೀಡುವಂತದ್ದು. ಇಂತವರ ಮಧ್ಯೆ ಹುಟ್ಟಿಕೊಳ್ಳುವ ನಕಲಿ ನಿಸ್ವಾರ್ಥಿಗಳನ್ನು ಗುರುತಿಸುವ ಬುದ್ದಿವಂತಿಕೆಯೂ ನೈಜ ಮನಸ್ಸುಗಳಿಗೆ ನೀಡುವ ರಕ್ಷಣೆ.


  • ಸುದರ್ಶನ್ ಪ್ರಸಾದ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading