ಆಷಾಢ ಮಾಸದಲ್ಲಿ ಕೊಡಗಿನ ವಿಶೇಷ ಖಾದ್ಯವೇ ಮದ್ದು ಸೊಪ್ಪಿನ ಸೇವನೆ. ಮಧುಬನ ಸೊಪ್ಪಿನ ಖಾದ್ಯದ ‘ಮಧು ಬನ ಪಾಯಸ’ದ ಬಗ್ಗೆ ಕೊಡಗಿನವರೇ ಆದ ಪವಿತ್ರ. ಹೆಚ್.ಆರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ ಮತ್ತು ಹಂಚಿಕೊಳ್ಳಿ…
ಕೊಡಗಿನಲ್ಲಿ ಜೂನ ತಿಂಗಳಿಂದ ಸೋನೆ ಮಳೆ ಶುರುವಾಗುತ್ತದೆ. ಸೋನೆ ಮಳೆಗೆ ಮೈ ಕೊರೆಯುವ ಚಳಿಯೂ ಹೆಚ್ಚುತ್ತದೆ. ಅಟ್ಟದ ಮೇಲೆ ಮಡಚಿ ಇಟ್ಟ ಛತ್ರಿ, ಬೀರುವಿನಲ್ಲಿ ಭದ್ರ ವಾಗಿದ್ದ ಸ್ವೆಟರ್, ಕೋಟು, ಟೋಪಿ, ಮಪ್ಲರ್, ರೈನ ಕೋಟು ಗಮ್ ಬೂಟ್, ಕಂಬಳಿ ಎಲ್ಲವೂ ಮೆಲ್ಲನೆ ಹೊರ ಬರುತ್ತವೆ. ಇವೆಲ್ಲವನ್ನು ದರಿಸಿದರು ಹೊದ್ದರು ಚಳಿ ಮಾತ್ರ ಕಡಿಮೆ ಆಗೋಲ್ಲ .
ಒಂದೇ ಸಮನೆ ಸುರಿಯುವ ಮಳೆಯಿಂದ ಥಂಡಿಯ ವಾತಾವರಣದಲ್ಲಿ ಜನರ ಜೀವನ ಶೈಲಿಯು ಬದಲಾಗುತ್ತದೆ. ಗದ್ದೆ ಗಳಲ್ಲಿ ಭತ್ತದ ನಾಟಿ,ಇತರೆ ಬೇಸಾಯಗಳನ್ನು ನಿತ್ಯ ನಿರಂತರವಾಗಿ ಸುರಿಯುವ ಜೋರು ಮಳೆಯಲ್ಲೆ ಮಾಡಬೇಕಿರುವುದರಿಂದಲೂ ಮತ್ತು ಬೇರೆ ಬೇರೆ ಉದ್ಯೋಗದಲ್ಲಿ ತೋಡಗಿಸಿಕೊಳ್ಳುವುದರಿಂದ ಕೊಡಗಿನಲ್ಲಿ ಆಹಾರ ಸೇವನೆಗೆ ಬಳಸುವ ಆಹಾರ ಪದಾರ್ಥಗಳು ಕೂಡ ಬದಲಾಗುತ್ತವೆ,ಈ ಆಹಾರ ಪದಾರ್ಥಗಳ ಸೇವನೆಯಿಂದ ಥಂಡಿ ಹಿಡಿದ ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಅದಷ್ಟು ನಮ್ಮನ್ನು ಬೆಚ್ಚಗಿಡಲು ಸಹಕಾರಿ ಆಗುತ್ತವೆ.
ಕೊಡಗಿನಲಿ ಅಕ್ಕಿಯ ಖಾದ್ಯಗಳಿಗೆ ಹೆಚ್ಚಿನ ಪ್ರಾಧಾನ್ಯತೆ. ಅಕ್ಕಿ ರೊಟ್ಟಿ ಮತ್ತು ಕಡಬು ಪ್ರತಿನಿತ್ಯ ಮಾಡುವ ಬೆಳಗಿನ ವಿಶೇಷತಿಂಡಿ.ಇವುಗಳ ರುಚಿಗೆ ಸರಿಸಾಟಿ ಮತ್ತೊಂದಿಲ್ಲ ಅನ್ನಬಹುದು.. ವೈವಿಧ್ಯಮಯ ತಿಂಡಿಗಳ ನಡುವೆ ನಮ್ಮ ಮಲೆನಾಡು ಮತ್ತು ಕೊಡಗಿನ ಭಾಗದವರು ಅಕ್ಕಿ ರೊಟ್ಟಿ ,ಕಡಬು ಇಲ್ಲದಿದ್ದರೆ ಅವರ ಭೋಜನ ಪರಿಪೂರ್ಣವಾಗುವುದಿಲ್ಲ.. ಇಂತಹ ಅಕ್ಕಿ ರೊಟ್ಟಿ ಕಡಬುಗಳ ರುಚಿಯನ್ನು ದುಪ್ಪಟ್ಟು ಮಾಡುವುದು ಮಳೆಗಾಲದಲ್ಲಿ ಸಿಗುವ ವಿಭಿನ್ನ ಪದರ್ಥಾಗಳು, ಅದರಲ್ಲಿ ವಿಶೇಷವಾಗಿ, ಕೆಸುವಿನ ಸೊಪ್ಪು, ಮರಕೆಸ, ಕಾಟುಮಾವು, ಕಳಲೆ ಪಲ್ಯದ ಜೊತೆಗೆ ಮಾಂಸಹಾರಿಗಳ ನಾಲಿಗೆಯ ರುಚಿ ಹೆಚ್ಚಿಸುವ ಅಣಬೆ, ಏಡಿ, ಹೊಳೆ ಮೀನು, ನಾಟಿಕೋಳಿ, ಒತ್ತು ಶ್ಯಾವಿಗೆ, ಮೊಳಕೆ ಹುರುಳಿಕಾಳಿನ ಸಾರು, ಒಣಗಿದ ಮೀನು ಪ್ರಮುಖವಾದವು. ಇವುಗಳಲ್ಲದೆ ಮಳೆಗಾಲದಲ್ಲಿ ಅಡುಗೆಗೆ ಬಳಸುವ ಸೊಪ್ಪು, ತರಕಾರಿಗಳ ಔಷಧೀಯ ಗುಣಗಳನ್ನು ಹೊಂದಿರುತ್ತವೆ.ಮತ್ತು ಜನರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ವಿಶೇಷವಾಗಿ ಕೊಡಗಿನವರು ಹವಾಮಾನಕ್ಕೆ ತಕ್ಕಂತೆ ಆಹಾರ ಸೇವಿಸುತ್ತಾರೆ. ಅಂತೆಯೇ ಆಷಾಢ ಮಾಸದಲ್ಲಿ (ಕೊಡಗಿನಲ್ಲಿ ಕಕ್ಕಡ ತಿಂಗಳು) ಹದಿನೆಂಟನೇ ದಿನದಂದು ವಿಶೇಷವಾದ ಔಷಧೀಯ ಸೊಪ್ಪು-ಮದ್ದುಸೊಪ್ಪನ್ನು ಬಳಸಿ ಪಾಯಸ, ಖಿಚಡಿ, ಹಲ್ವ, ಪಾಪಟ್ಟು, ಕಡಬು, ಇನ್ನಿತರೆ ಖಾದ್ಯಗಳನ್ನು ತಯಾರಿಸುತ್ತಾರೆ. ಕಾರಣ ಕರ್ಕಾಟಕ ಮಾಸದ ಹದಿನೆಂಟನೇ ದಿನದಂದು (ಇಂದು) ಸಮುದ್ರಕ್ಕೆ ಹಾಲು ಸುರಿಯುವ ದಿನ,ಅಂದು ಕಡಲು ತನ್ನ ಒಡಲನ್ನು ಸಂಪೂರ್ಣವಾಗಿ ತುಂಬಿಕೊಂಡು ಉಕ್ಕುವುದೆಂಬುದು ನಂಬಿಕೆ.
ಈ ಕಾರಣದಿಂದ ಕೊಡಗಿನ ಜನರ ಕೃಷಿ ಚಟುವಟಿಕೆ “ಕಕ್ಕಡ್ ಪದಿನೆಟ್” ತುಳು ಭಾಷಿಕರ ‘ಆಟಿಪದಿನೆಣ್ಮ” ಆಗಸ್ಟ್ 3 ರಂದು (ಇಂದು) ಜಿಲ್ಲೆಯಾದ್ಯಂತ ಸಂಪ್ರದಾಯಬದ್ದವಾಗಿ ಆಚರಿಸಲ್ಲಡುತ್ತದೆ (ಕನ್ನಡಿಗರ ಆಷಾಢ ಎಂಬ ಪದ ಕೊಡವರ “ಕಕ್ಕಡ್”, ತುಳುಭಾಷಿಕರ “ಆಟಿ” ಆಗಿದೆ) ಈ ಕಕ್ಕಡ್ ಪದಿನೆಟ್ ಒಂದು ಜಾನಪದ ಶೈಲಿಯ ಹಬ್ಬದ ಆಚರಣೆಯಾಗಿದೆ ಭತ್ತದ ಪೈರುಗಳನ್ನು ಸಾಮೂಹಿಕ ಗದ್ದೆಯಲ್ಲಿ ನಾಟಿ ಮಾಡಿದ ಮೇಲೆ ಮಧುಬನ / ಮದ್ದುಸೊಪ್ಪಿನ ಪಾಯಸ ಮತ್ತು ಮರಕೆಸದ ಪತ್ರೊಡೆ ಯೊಂದಿಗೆ ಈ ಹಬ್ಬದ ಆಚರಣೆ ಶುರುವಾಗುತ್ತದೆ.
ಆಷಾಢ ಮಾಸದ (ಕಕ್ಕಡ್ ಪದಿನೆಟ್ಟು) ವಿಶೇಷವೆ ಖಾದ್ಯವೆ ಮದ್ದು ಸೊಪ್ಪಿನ ಸೇವನೆ. ಈ ಸಸ್ಯ ಹಸಿರು ಎಲೆಗಳಿಂದ ಕೊಡಿದ ಪೊದೆಯಂತೆ ಬೆಳೆಯುವ ಗಿಡವಾಗಿದೆ. ಉದ್ದನೆಯ ಕಡ್ಡಿಯು ಎಲೆಗಳಿಂದ ತುಂಬಿರುತ್ತದೆ ಆಷಾಢ ಮಾಸದ ಆರಂಭದ ದಿನದಿಂದ ಒಂದೊಂದು ಔಷಧಿ ಗುಣಗಳು ಈ ಗಿಡದಲ್ಲಿ ಸೇರಲಾರಂಭಿಸುತ್ತದೆಯಂತೆ ಹಾಗೆ ಆಷಾಢ ಮಾಸದ ಹದಿನೆಂಟನೇ ದಿನದಂದು ಹದಿನೆಂಟು ಔಷಧಿಗಳು ಸೇರಿ ಈ ದಿನಂದ್ದು ಮಾತ್ರ ಸುವಾಸನಾಭರಿತವಾಗಿರುತ್ತದೆ ಎಂದು ನಂಬುತ್ತಾರೆ. ಆದರಿಂದ ಮನೆಯ ಹಿತ್ತಲಲ್ಲಿ, ತೋಟದ ಬೇಲಿಯಂಚಿನಲಿ ಬೆಳೆಯುವ ಮಧುಬನ ಗಿಡದ ಸೊಪ್ಪನ್ನು ಕಕ್ಕಡ್ ಪದಿನೆಟ್ ರಂದು ಕೊಯ್ದು ಮದ್ದುಸೊಪ್ಪನ್ನು ದಂಟಿನ ಸಹಿತ ನೀರಿನಲ್ಲಿ ಚೆನ್ನಾಗಿ ಬೇಯಿಸಲಾಗುತ್ತದೆ. ಆ ನೀರು ಕಡು ನೆರಳೆ ಬಣ್ಣಕ್ಕೆ ತಿರುಗುತ್ತದೆ. ಮತ್ತು ಸುವಾಸನೆ ಬರಲು ಶುರುವಾಗುತ್ತದೆ. ಆಗ ಆ ನೀರನ್ನು ಸೋಸಿಕೊಂಡು ಆ ನೀರಿನಿಂದ ನಮಗೆ ಬೇಕಾದ ಅಡುಗೆಗೆಳನ್ನು ತಯಾರಿಸುತ್ತಾರೆ.
ಹೆಚ್ಚಾಗಿ ಪಾಯಸ, ಕೇಸರಿ ಬಾತ್, ಹಲ್ವಾ, ಪಾಪಟ್ಟು, ಕಡಬು, ಖಿಚಡಿಗಳನ್ನು ಮಾಡಲಾಗುತ್ತದೆ. ತೆಂಗಿನಕಾಯಿ ತುರಿ, ತುಪ್ಪ ಹಾಗೂ ಬಾಳೆಹಣ್ಣಿನೊಂದಿಗೆ ಸವಿಯುತ್ತಾರೆ (ಖಿಚಡಿಗೆ ಮಾತ್ರ ತಿನ್ನುವಾಗ ತುಪ್ಪದ ಜೊತೆಗೆ ಜೇನು, ಅಥವಾ ಸಕ್ಕರೆ ಬಳಸುತ್ತಾರೆ )
ಈ ಮದ್ದು ಸೊಪ್ಪಿನನ ಬಳಕೆಯನ್ನು ಸರಿಯಾಗಿ ಆಷಾಢದ ಹದಿನೆಂಟನೇ ದಿನವೇ ಮಾಡಿದರೆ ಅದರ ಎಲ್ಲ ಹದಿನೆಂಟು ತರಹದ ಔಷಧಿಗುಣಗಳು ನಮ್ಮ ದೇಹವನ್ನು ಸೇರುತ್ತವೆ. ಕೆಲವರು ಆಷಾಢದ ಎಂಟನೇ ದಿನದಿಂದ ಹದಿನೆಂಟ್ಟು ದಿನದವರೆಗೂ ಬಳುಸುತ್ತಾರೆ ಆದರೆ ಹದಿನೆಂಟನೇ ದಿನದ ನಂತರ ಯಾರು ಈ ಸೊಪ್ಪು ಬಳಸುವುದಿಲ್ಲ.. ಹಾಗಾಗಿ ಹದಿನೆಂಟನೇ ದಿನ ಈ ಸೊಪ್ಪಿನ ರಸವನ್ನು ತೆಗೆದು ಬಾಟಲಿ ಶೇಖರಿಸಿ ಪ್ರೀಜ್ ನಲ್ಲಿಟ್ಟುಕೊಂಡು ಶ್ರಾವಣ ಮಾಸ ಮತ್ತು ಭಾದ್ರಪದ ಮಾಸದಲ್ಲಿ ಹಬ್ಬಕ್ಕೆ ದೊರದೂರಿಂದ ಮನೆಗೆ ಬರುವ ಮಕ್ಕಳು, ಬಂಧುಗಳಿಗೆ ಅಡುಗೆ ಮಾಡಿ ಬಡಿಸುತ್ತಾರೆ ಹಲವರು.. ಈ ನೀರನ್ನು ಎರಡು ಮೂರು ತಿಂಗಳು ಪ್ರೀಜ್ ನಲಿರಿಸಿದರೂ ಹಾಳಾಗುವುದಿಲ್ಲ.
ಈ ಎಲ್ಲಾ ಆಹಾರ ಪದಾರ್ಥಗಳು ಮಳೆಗಾಲದಲ್ಲಿ ಚಳಿಯ ನಡುವೆ ಬಿಸಿಬಿಸಿ ಅಡುಗೆ ತಯಾರಿಸಿ ತಿನ್ನಲು ಬಹಳ ಸೊಗಸು, ಈ ಆಹಾರ ಪದಾರ್ಥಗಳ ಸೇವನೆ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಿರಿಯರು ರೂಢಿಸಿಕೊಂಡ ಸಂಪ್ರದಾಯವಾಗಿದ್ದರು ತಿನ್ನಲೂ ರುಚಿ. ಆರೋಗ್ಯಕ್ಕೂ ಒಳ್ಳೆಯದು.ಜೊತೆಗೆ ಶೀತವಾತಾವರಣದಲಿ ಉಷ್ಣಾಂಶವನ್ನು ಹೆಚ್ಚಿಸಿ ಮಳೆಯಥಂಡಿ ಮತ್ತು ಚಳಿಯಿಂದ ನಮ್ಮನ್ನು ಸ್ವಲ್ಪ ಮಟ್ಟಿಗೆ ಬೆಚ್ಚಗೆ ಇಡುತ್ತವೆ ಎಂದರೆ ತಪ್ಪಲ್ಲ.
- ಪವಿತ್ರ. ಹೆಚ್.ಆರ್ – ಕೊಡಗು