ತಮ್ಮ ವಸ್ತುಗಳನ್ನು ಎಲ್ಲೋ ಇಟ್ಟು ಮರೆತು, ಮನೆಯವರ ಮೇಲೆ ನೀವೇ ಕಳೆದದ್ದು ಎನ್ನೋದು.ನಿಮ್ಮ ಮನೆ ಸರಿಹೋಗಲ್ಲ ಮಗಳ ಮನೆಗೆ ಹೋಗುತ್ತೇವೆ ಕಳಿಸಿ ಬಿಡಿ ಎಂದು ವರಾತ ಮಾಡೋದು. ಅಲ್ಲಿಯೂ ಸರಿ ಹೋಗದಾಗ ಮತ್ತೆ ಮಗನ ಮನೆಗೆ ಹೊರಡುವ ವರಾತ. ಇದು ವೃದ್ದಾಪ್ಯದಲ್ಲಿ ಕಾಣುವ ಸಹಜ ಸ್ವಭಾವಗಳು, ಅವರ ಸ್ವಭಾವವನ್ನು ಅರಿತು ನಡೆದರೆ ಹಿರಿಯರಿರುವ ಮನೆ ದೇವರಗುಡಿಯಂತೆಯಾಗುವುದು, ವಾಸ್ತವಕ್ಕೆ ಹತ್ತಿರವಾದ ಅಪರ್ಣಾದೇವಿ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ಬಾಲ್ಯ, ಯೌವನ, ವೃದ್ಧಾಪ್ಯ ಜೀವನದ ಘಟ್ಟಗಳು ಮನುಷ್ಯನಿಗೆ. ಬಾಲ್ಯದಲ್ಲಿ ಮುಗ್ಧತೆ ತುಂಬಿದ ಆಟಗಳು, ಕುತೂಹಲದಿಂದ ಉತ್ತರಿಸಲಾಗದ ಪ್ರಶ್ನೆ ಕೇಳುವುದು, ಹಲವು ಬಾರಿ ಹೆತ್ತವರನ್ನು ಪೇಚಿಗೆ ಸಿಗಿಸುವುದು, ತಮಾಷೆ ತರಲೆ, ತುಂಟಾಟ ಇವೆಲ್ಲಾ ಸಾಮಾನ್ಯ.
ಯೌವನಕ್ಕೆ ಬಂದಾಗ ಅಪರಿಮಿತ ಉತ್ಸಾಹ. ಜಗತ್ತನ್ನೇ ಗೆಲ್ಲುವೆನೆಂಬ ಹುಮ್ಮಸ್ಸು, ಕನಸಿನ ಲೋಕದಲ್ಲಿ ವಿಹಾರ, ತಮ್ಮ ಚೆಲುವಿನ ಬಗ್ಗೆ, ವಿದ್ಯೆ, ಸಾಮರ್ಥ್ಯದ ಬಗ್ಗೆ ಗರ್ವ ಇವೂ ಸಹಜ. ಸುಂದರ ಜೀವನ ಸಂಗಾತಿಯ ಆಯ್ಕೆಗಾಗಿ ಹುಡುಕಾಟ. ವಿವಾಹದ ನಂತರ ಸಂಸಾರದ ಜಂಜಾಟ.ಮಕ್ಕಳು ಮರಿಯಾದ ಮೇಲೆ ಅವರ ಶ್ರೇಯೋಭಿವೃದ್ಧಿಗಾಗಿ ಹೋರಾಟ.
ಇಷ್ಟೆಲ್ಲ ಮಜಲು ದಾಟಿ ಬರುವಾಗ ವೃದ್ಧಾಪ್ಯ ಕಾಲಿಟ್ಟದ್ದು ಗೊತ್ತೇ ಆಗಿರಲ್ಲ.
ಮಕ್ಕಳ ಮದುವೆಯಾಗಿ, ಸೊಸೆಯೋ, ಅಳಿಯನೋ ಹೊಸ ಬಂಧು ಮನೆಗೆ ಎಂಟ್ರಿಯಾದರೋ ಆಗ ಶುರುವಾಗುತ್ತೆ ವೃದ್ಧಾಪ್ಯದ ವರಾತಗಳು.”ಅಯ್ಯೋ ನಂಗೆ ವಿಪರೀತ ಸುಸ್ತು
ಮೊದಲಿನ ಹಾಗೆ ಮನೆ ಕೆಲಸ ಆಗಲ್ಲ. ಅಡುಗೆ ಮನೆಗೆ ಹೋಗಿ ಒಲೆ ಮುಂದೆ ನಿಂತರೆ ತಲೆ ಸುತ್ತು ಬರುತ್ತೆ, ಇನ್ನೇನು ವಯಸ್ಸಾಯ್ತು.. ಡಾಕ್ಟರ್ ಹತ್ರ ಹೋಗಿ ಬರೋಣ ಕಣೋ ಮಗನೆ ” ಅಂತ ಅಮ್ಮ ಮಗನ ಮುಂದೆ ಅಲವತ್ತು ಕೊಳ್ಳೋದು. ಸರಿ ಈ ವರಾತ ಕೇಳಿ ವೈದ್ಯಕೀಯ ತಪಾಸಣೆ ಮಾಡಿಸಿ, ಬಿ.ಪಿ. ಅಥವಾ ಶುಗರ್ ಇದೆ.
ಫೋಟೋ ಕೃಪೆ : google
ಅಂತೇನಾದ್ರೂ ರಿಪೋರ್ಟ್ ಬಂದರೆ ಮುಗೀತು. ತಮ್ಮ ಜೀವನಾನೆ ಇಲ್ಲಿಗೆ ಮುಗೀತು ಅನ್ನೋ ಥರ ಕಂಗಾಲಾಗಿ ಎಲ್ರನ್ನೂ ಗಾಬರಿಪಡಿಸೋ ಮಾತಾಡ್ತಾ “ಇಷ್ಟು ದಿನ ಎಲ್ಲಾರಿಗೂ ಮಾಡ್ಹಾಕ್ತಿದ್ದೆ. ಈಗ ಪರಾಧೀನ ಆಗೋದ್ನಲ್ಲ. ಇಂಥವೆಲ್ಲ ಕಾಯಿಲೆ ನಮ್ಮನ್ನು ನೆಲ ಹಿಡಿಸಿಬಿಟ್ರೆ ಅಂತಾ ಗೋಳಾಟ. ಔಷಧಿ, ಪಥ್ಯದ ಆರೈಕೆ, ಊಟೋಪಚಾರದ ವಿಷಯಕ್ಕೆ ನಾನಾ ತರಹದ ಹಠ. ನನ್ನನ್ನು ನಿರ್ಲಕ್ಷ್ಯ ಮಾಡ್ತೀರಾ ಅಂತ ಆರೋಪ. ಇನ್ನು ಆರೋಗ್ಯ ಚೆನ್ನಾಗಿದ್ದು, ನಿಶ್ಯಕ್ತಿ, ವಯೋಸಹಜ ಬಳಲಿಕೆಯಿದ್ದರೆ ಅಯ್ಯೋ ” ಎಷ್ಟು ಗಟ್ಟಿಯಾಗಿದ್ದೆ, ಇದ್ದಕ್ಕಿದ್ದಂತೆ ಯಾಕೆ ಹೀಗೋ ಇನ್ನು ಹೆಚ್ಚು ಕೆಲಸ ಮಾಡಬಾರದು. ಎಲ್ಲಾದರೂ ಬಿದ್ದು ಎದ್ದು ಕೈಕಾಲು ಮುರಿದರೆ ಏನ್ಗತಿ ನಮ್ಮನ್ಯಾರು ಗಮನಿಸ್ತಾರೆ.
ಪರಾಧೀನ ಆಗಬಾರದು ರಾಮಕೃಷ್ಣ ಅಂತ ಸುಮ್ಮನೆ ಕೂತೀರೋದೇ ವಾಸಿ “ಅಂತ ಉದಾಸೀನ ಭಾವ ತಾಳಿ ನಿರಾಸಕ್ತಿ ವಹಿಸಿ ಬಿಡೋದು. ಮನೆಯವರೆಲ್ಲ ಕನಿಕರ ಪಡೋಹಾಗೆ ಮಾಡೋದು ಇದು ಇನ್ನೊಂಥರ. ಮಗನ ಮೇಲೆ ಬೇಸರ ಹೊರಹಾಕಿ ಮಗ, ಸೊಸೆ ಬಂದ ಮೇಲೆ ನನ್ನ ಸರಿಯಾಗಿ ಗಮನಿಸಲ್ಲ,ಹೊತ್ತು ಹೆತ್ತು ಮಾಡಿದೋಳಿಗಿಂತ ಈಗ ಬಂದವಳೇಹೆಚ್ಚು ಅಂತ,ತಮ್ಮ ಬೇಸರ ಸೊಸೆಯ ಮೇಲೆ ಅಸಮಾಧಾನ ತೋರ್ಸೋದು. ಸಣ್ಣ ಸಣ್ಣ ವಿಷಯಕ್ಕೂ ತಗಾದೆ, ಪಾತ್ರೆ ತೊಳೆಯೋಕೆ ಬರಲ್ಲ, ರಂಗೋಲಿ ಹಾಕಕ್ಕೆ ಬರಲ್ಲ. ದೇವರ ನಾಮಕಲಿತಿಲ್ಲ. ಕಾಫಿ ಡಿಕಾಕ್ಷನ್ ಸರಿಯಿಲ್ಲ ಇಂತಹವು ನೂರಾರು.
ಮಗಳ ಮೇಲೆ ಒಂಚೂರು ತೂಕ ಹೆಚ್ಚಿಸಿ ಮಾತಾಡೋದು. ಅಳಿಯಂದ್ರು ನಿಮಗಿಂತ ನಮ್ಮನ್ನು ಚೆನ್ನಾಗಿ ಕಾಣ್ತಾರೆ ಅಂತ ಹೇಳಿ ಕೆರಳಿಸೋದು. ಸದಾ ಜೊತೆ ಇರುವವರನ್ನು ಬಿಟ್ಟು ಬೇರೆಯವರನ್ನು ಹೊಗಳೋದು.. ಇವೆಲ್ಲ ವೃದ್ಧಾಪ್ಯದ ಸರ್ವೇ ಸಾಧಾರಣ ವರಾತಗಳು. ಹಬ್ಬ ಹುಣ್ಣಿಮೆಗಳಲ್ಲಿ ನಮ್ಮ ಹಾಗೆ ಶಾಸ್ತ್ರ ಸಂಪ್ರದಾಯ ನಿಮಗೆಲ್ಲಿ ಮಾಡಕ್ಕೆ ಬರುತ್ತೆ.
“ನಾವು ಹೇಗೆ ಸೈ ಅನ್ನಿಸಿಕೊಂಡಿದ್ವಿ ಅತ್ತೆ ಮಾವನ ಹತ್ರ ,”ಅಂತಾ ಸೊಸೆ ಮುಂದೆ ಹೇಳೋದು.
ಫೋಟೋ ಕೃಪೆ : google
ಅವರಿವರ ಮುಂದೆ ಸೊಸೆಯ ಮೇಲೆ ನೇರಾರೋಪ ಮಾಡದಿದ್ದರೂ,”ಏನೋ ತಕ್ಕ ಮಟ್ಟಿಗೆ ಹೊಂದಿಕೊಂಡಿದ್ದಾಳೆ, ಪಾಲಿಗೆ ಬಂದದ್ದು ಪಂಚಾಮೃತ” ಅನ್ನೋದು. ತಮ್ಮ ಮಗಳೂ ಬೇರೆ ಮನೆ ಸೊಸೆ ಅನ್ನೋದು ಮರೆತೇ ಹೋಗಿರುತ್ತೆ. ಸಂಪ್ರದಾಯ ನೇಮ ನಿಷ್ಠೆಗಳನ್ನು ಆಚರಿಸುವಾಗ ಅತಿಯಾಗಿ ಒತ್ತಡದ ವರಾತ ತರೋದು.ಮಗ ಸೊಸೆ ಹೊರಗೆ
ಸಿನಿಮಾಕ್ಕೋ ಪಾರ್ಕಿಗೋ ಬೇಸರ ಕಳೆಯಲು ಹೊರಟರೆ,ಏನು ತಿರುಗ್ತಾರೋ ಮನೆಕೆಲಸ ಬಿಟ್ಟು ಅಂತ ಹೇಳೋದು. ಹೊಸ ಜೋಡಿ ಸಿನಿಮಾಗೆ ಹೊರಟಾಗೆಲ್ಲ ” ಓಹೋ ಇವರಿಬ್ರಿಗೇ ಸಿನಿಮಾ ತೋರಿಸ್ತಾರೇನೋ, ನಮ್ಮನ್ನು ಕರದಿದ್ರೆ ಏನಾಗ್ತಿತ್ತು” ಅನ್ನೋದು. ನಾವು ಹಿಂಗೆಲ್ಲ ಹೋದೋರೇ ಅಲ್ಲ. ಇಂತಹ ಮಾತುಗಳು ಮಾಮೂಲು ಹಿರಿಯರಿಂದ.
ಇದರ ಜೊತೆಗೆ ಮರೆವಿನ ಸಮಸ್ಯೆ ವೃದ್ಧರಿಂದ ಹಲವು ಪೇಚುಗಳನ್ನು ತರುತ್ತೆ. ಯಾರನ್ನೋ ಸ್ನೇಹಿತರು ಸಂಬಂಧಿಕರೆಂದು ಮಾತಾಡಿಸಿ ನಂಬಿ ಮೋಸ ಹೊಗೋದು. ತಮ್ಮ ವಸ್ತುಗಳನ್ನು ಎಲ್ಲೋ ಇಟ್ಟು ಮರೆತು, ಮನೆಯವರ ಮೇಲೆ ನೀವೇ ಕಳೆದದ್ದು ಎನ್ನೋದು.”ನಿಮ್ಮ ಮನೆ ಸರಿಹೋಗಲ್ಲ ಮಗಳ ಮನೆಗೆ ಹೋಗುತ್ತೇವೆ ಕಳಿಸಿ ಬಿಡಿ” ಎಂದು ವರಾತ ಮಾಡೋದು. ಅಲ್ಲಿಯೂ ಸರಿ ಹೋಗದಾಗ ಮತ್ತೆ ಮಗನ ಮನೆಗೆ ಹೊರಡುವ ವರಾತ. ಮೊಮ್ಮಕ್ಕಳ ಜೊತೆ ಕಾಲ ಕಳೆಯುವಾಸೆ ವೃದ್ಧರಿಗೆ. ಕರೆದಾಗ ಅವರು ಬರದಿದ್ದರೆ ಹೇಳಿದ
ಮಾತೇ ಕೇಳಲ್ಲ ಈಗಿನ ಮಕ್ಕಳು ಅಂತಾ ಟೀಕೆ. ಟಿವಿ ನೋಡುವಾಗ ಮಕ್ಕಳು ಬಂದು ತಮ್ಮ ಇಷ್ಟದ ಛಾನೆಲ್ ಹಾಕಿದರೆ ಯುದ್ಧವೇ ಶುರು. ದೇವ್ರಲ್ಲ ದಿಂಡ್ರಲ್ಲ ಅದೇನು
ನೋಡ್ತಾವೋ ಕೆಟ್ಟು ಹಾಳಾಗಿ ಹೋಗೀದೀರ ಅಂತ ಹೇಳಿ ಮಕ್ಕಳ ಜೊತೆ ವಾದ. ಅಜ್ಜ ಅಜ್ಜಿ ಅಂದ್ರೆ ತಾತ್ಸಾರ ಮಾಡ್ತಾರೆ ಅಂತ ಬೇಸರ ಮಾಡಿಕೊಳ್ಳುವರು.
ಫೋಟೋ ಕೃಪೆ : google
ಇಂತಹ ಜೀವನ ಸಂಧ್ಯಾ ಸಮಯದಲ್ಲಿ ನಮ್ಮ ಹಿರಿಯರಿಗೆ ನಮ್ಮ ಪ್ರೀತಿಯ ಮಾತುಗಳು, ಅಕ್ಕರೆ ಆರೈಕೆ, ನೀವು ನಮಗೆ ಹೊರೆಯಲ್ಲ, ನಿಮ್ಮ ಭಾವನೆಗಳಿಗೆ ಅಪಾರ ಬೆಲೆ ಕೊಡುತ್ತೇವೆ, ನಿಮ್ಮ ಸಲಹೆ ಮಾರ್ಗದರ್ಶನ ನಮಗೆ ಅತ್ಯಮೂಲ್ಯ ಎಂಬ ಭರವಸೆಯ ಆಪ್ತ ನುಡಿಗಳು ಬೇಕು. ಬಾಲ್ಯ ಮತ್ತೆ ಮರುಕಳಿಸಿದಂತಾಗಿರುತ್ತೆ ಮುಪ್ಪಿನಲ್ಲಿ. ಅದೇ
ಮುಗ್ಧತೆ, ಅವಲಂಬನೆ, ತನ್ನವರಿಗಾಗಿ ಹಂಬಲಿಸುವಿಕೆ ಎಲ್ಲವೂ. ಅವರಾಡುವ ನುಡಿಗಳನ್ನು ಅನ್ಯಥಾ ಭಾವಿಸದೆ ನಾವೂ ಇಂತಹ ಸ್ಥಿತಿಗೆ ತಲುಪುವವರೇ ಎಂಬ ಅರಿವಿನಿಂದ, ನಿಧಾನವಾಗಿ ಅವರ ಮನ ಗೆಲ್ಲಬೇಕು. ‘ಹಿರಿಯರಿರುವ ಮನೆ ದೇವರಗುಡಿಯಂತೆ” ಅವರ ಮನದಲ್ಲಿರುವ ಅಕ್ಕರೆಯ ಸಕ್ಕರೆ ಅರಿತರೆ ಚಂದ.
ಅವರ ಸಿಟ್ಟಿನ ಮಾತುಗಳಲ್ಲಿ ದ್ವೇಷವಿರದೆ ತನ್ನವರಿಗಾಗಿ ಮಿಡಿವ ಪ್ರೇಮಭಾವವಿದೆ. ಸಂಸ್ಕಾರ ಸನ್ನಡತೆ ಕಲಿಯಲಿ ಎಂಬ ವರಾತವಿದೆ. ಮನೆಯಲ್ಲಿ ಹಿರಿಯರಿದ್ದರೆ ಅಮೂಲ್ಯ ಅಮರಕೋಶವಿದ್ದಂತೆ. ಅನುಭವದಿಂದ ಹಣ್ಣಾದ ಜೀವ ಜೀವನ ಮೌಲ್ಯವನ್ನು ತಾಳ್ಮೆ, ಧೈರ್ಯ, ಸಮಾಧಾನದ ಪಾಠವನ್ನು ಕಲಿಸುತ್ತೆ.
ಯಾವುದಕ್ಕೆ ಎಷ್ಟೇ ವರಾತ ಮಾಡಿ ಕಾಡಿದರೂ ನನ್ನವರು ಚೆನ್ನಾಗಿರಲಿ ಎಂಬ ಭಾವವಿರುತ್ತೆ. ಇದನ್ನು ನಾವು ತಿಳಿದು ಹಿರಿ ಜೀವಗಳನ್ನು ಪ್ರೀತಿಸೋಣ. ಅವರ ಆಪ್ತಭಾವದಲ್ಲಿ ಮೀಯೋಣ.
ವೃದ್ಧಾಪ್ಯ ಕಾಲದಲ್ಲಿ ಸಂತೋಷದಿಂದ ಜೊತೆಯಿರೋಣ.
- ಅಪರ್ಣಾದೇವಿ