ಕವಿ ಜಬೀವುಲ್ಲಾ ಎಂ.ಅಸದ್ ಮತ್ತು ಕವಿಯತ್ರಿ ಭಾಗ್ಯ.ಕೆ.ಯು. ಯಂತಹ ಬರಹ ಮಾಂತ್ರಿಕರ ಕವಿತೆಯ ಜುಗಲ್ಬಂಧಿ ಹೇಗಿರುತ್ತೆ ಅಂದ್ರೆ…ಅದು ಹೀಗಿರುತ್ತೆ…ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ಅವಳು ಮತ್ತೆ ಕೇಳಿದಳು
“ಪ್ರೀತಿ ಎಂದರೇನು?” ಅಸದ್…
ನಾನೊಮ್ಮೆ ಅವಳ ಕಾಡಿಗೆ ಬಳ್ಳಿ ಹಬ್ಬಿದ
ಕಂಗಳ ಕೊಳದಿ ಇಣುಕಿ
ನಕ್ಕು ಸುಮ್ಮನಾದೆ
ಅರ್ಥ ಆಗಲಿಲ್ಲವೆಂಬಂತೆ
ಸ್ವಲ್ಪ ವಿವರಿಸು ಎಂದಳು…
ಆಗಲಿ ಎಂಬಂತೆ ತಲೆದೂಗಿ
ಅವಳ ಅಂಗೈ ಹಿಡಿದು
ಮೌನವಾಗಿ ಒಂದಷ್ಟು ದೂರ ನಡೆದೆ
ಹೃದಯದೊಂದಿಗೆ ಹೆಜ್ಜೆಗಳ ಮಿಡಿದು
ಅಬ್ಬಾ…! ಎಂದು ಬೆರಗಿನಿಂದ
ನಿಟ್ಟುಸಿರು ಬಿಡುವುದ ಕಂಡೆ
ಸರಿ, ಈಗ ನನಗೂ ನಿನಗೂ ಏನು ಸಂಬಂಧ?
ಮತ್ತೆ ಪ್ರಶ್ನೆ
ಭೂಮಿ ಬಾನು ಒಂದಾದಂತೆ ಕಾಣುವ
ದಿಗಂತವ ಒಮ್ಮೆ ನೋಡು ಎಂದೆ
ಹಾಗಾದರೆ ನಮ್ಮ ಸಂಬಂಧ
ಅದೊಂದು ಭ್ರಮೆಯೇನು? ಎಂದಳು
ಹೌದು! ಭ್ರಮೆ ಎಂಬುದು
ಸಂಪೂರ್ಣ ಸತ್ಯವಲ್ಲ
ಹಾಗೆಂದ ಮಾತ್ರಕ್ಕೆ ಅದು
ಸಂಪೂರ್ಣ ಸುಳ್ಳೂ ಅಲ್ಲ
ನಂಬಿಕೆಯ ನಂಟದು
ನಂಬಿದರೆ ಅಹುದು, ಇದೆ
ನಂಬದಿದ್ದರೆ ಇರದು, ಇಲ್ಲ
ಎಲ್ಲವೂ ಹೀಗೆ ಇರುವುದಿಲ್ಲ
ಪ್ರೀತಿ, ಸ್ನೇಹ, ನಂಬಿಕೆ, ಸಂಬಂಧ
ಯಾವೊಂದೂ ಶಾಶ್ವತವಲ್ಲ
ಮಾಸಲೇ ಬೇಕು
ಎಲ್ಲವೂ ಒಂದು ದಿನ
ಬದಲಾವಣೆ ಜಗದ ನಿಯಮ
ನಾನು, ನೀನೂ,
ಯಾರೊಬ್ಬರೂ ಹೊರತಲ್ಲ ಇಲ್ಲಿ
ಕಾಲದ ಕೋವಿಗೆ
ಎದೆಯೊಡ್ಡಲೇ ಬೇಕು ಒಂದು ದಿನ
ವಾಸ್ತವದ ನೆಲೆಯಲ್ಲಿ
ಅವಳ ಮನವೀಗ ಕದಡಿದ ಕನ್ನಡಿಯಾಗಿತ್ತು
ಯಾವ ಚಿತ್ರವೂ ಸ್ಪಷ್ಟವಾಗಿ ಕಾಣದಾಗಿತ್ತು
ದ್ವಂದ್ವ ಭಾವಗಳು ಮುತ್ತಿದ್ದವು
ಚಿಂತೆಯ ಕಡಲಲ್ಲಿ ಮುಳುಗಿದ್ದಳು
ನಾನೆಂದೇ….
ಬಿಡು ಚಿಂತೆ,
ಸುಮ್ಮನಿರು, ಏನೂ ಯೋಚಿಸದಿರು
ಅರಳುವ ಹೂವಿನ ಹಾಗೆ
ಹಾರುವ ಹಕ್ಕಿಯ ಹಾಗೆ
ಹರಿಯುವ ನೀರಿನ ಹಾಗೆ
ಬೀಸುವ ಗಾಳಿಯ ಹಾಗೆ
ಅನುಕ್ಷಣವೂ ಸಂತಸಗಳ ಹೆಕ್ಕುತಲಿ
ಪ್ರತಿದಿನವೂ ವಸಂತಗಳ ಅಪ್ಪುತಲಿ
ಸಂಭ್ರಮಿಸುತ್ತಿರು…
ಈಗ ಮತ್ತೊಮ್ಮೆ ದಿಗಂತವನ್ನು ದಿಟ್ಟಿಸು ಎಂದೆ
ಈಗವಳ ಕಣ್ಣಡಿಗೊಳ ತಿಳಿಯಾಗಿತ್ತು
ಯಾವ ಪ್ರಶ್ನೆ, ಚಿಂತೆಗಳಿಲ್ಲದೆ
ಪ್ರಶಾಂತತೆ ಅವಳ ಬಳಸಿತ್ತು
ಅವಳ ಎಲ್ಲಾ ಪ್ರಶ್ನೆಗಳಿಗೂ
ಉತ್ತರ ಸಿಕ್ಕಂತೆ ಭಾಸವಾಗುತ್ತಿತ್ತು
ಇಷ್ಟೆಲ್ಲಾ ಹೇಳುವ ಬದಲು
‘ಪ್ರೇಮ’ ಎಂದರೆ, ನೀನೆ ಎಂದು
ಹೇಳಿದರೆ ಸಾಕಿತ್ತು!
- ಜಬೀವುಲ್ಲಾ ಎಂ. ಅಸದ್
ಅಬ್ಬಾ!
ಇಷ್ಟೆಲ್ಲಾ ಹೇಳುವ ಬದಲು
‘ಪ್ರೇಮ’ ಎಂದರೆ ‘ನೀನೇ’ ಎಂದು ಹೇಳಿದರೆ ಸಾಕಿತ್ತು..
ಹೌದು
ಕಾಡಿಗೆ ಬಳ್ಳಿಯನು ಕದಲಿಸಿಬಿಟ್ಟೆ
ತಿಳಿಗೊಳದಲ್ಲೀಗ ರಾಡಿಯಾಗಿದೆ ಭಾವಚಿಟ್ಟೆ
ಕಣ್ಣ ಕೊಳದಿ ಇಣುಕಿ
ನಕ್ಕು ಸುಮ್ಮನಾದಂತೆಯೆ
ಅಂಗೈಯ ಬೆಸೆದು
ಅನತಿ ದೂರ ನಡೆದಂತೆಯೆ
ಮುಂಗುರುಳ ನಗುವಿಗೆ ತಲೆಬಾಗಿ
ಎದೆಯ ಮುಗುಳಿಗೆ ಒಲವದೂಗಿ
ಹೆಜ್ಜೆಗೆಜ್ಜೆಗೂಡಿ
ಹೃದಯ ಮಿಡಿತದಿ ಹಾಡಿ
ಸುಮ್ಮನಾಗಬೇಕಿತ್ತು!.
ನಾನೇ ಎಸೆದ ಪ್ರಶ್ನೆಯೊಂದಕ್ಕೆ
ಭ್ರಮೆಯು ವಾಸ್ತವವನು ಸೆರಗಿಗೆ ಕಟ್ಟಿಟ್ಟು
ನಂಬಿಕೆ ಸುಳ್ಳನು ಸತ್ಯತೆಯ ಎದೆಗಿಟ್ಟು
ಪ್ರೀತಿ ಸಂಬಂಧ ಸ್ನೇಹ ಬಂಧಗಳ ಕುರಿತು ವ್ಯಾಖ್ಯಾನಿಸಬೇಕಿರಲಿಲ್ಲ.
ಹೌದು ಎಲ್ಲವೂ ಮಾಸುತ್ತದೆ ನಿಜ
ಮಾಯುವ ಕಾಲದೊಂದಿಗೆ
ಕಾಲದ ಕೋವಿಗೆ ಎದೆಯೊಡ್ಡುವಂತೆ
ಭವಿಷ್ಯದ ಬಾಯಿಗೆ ಎದೆ ತೆರೆಯಲೇಬೇಕು
ಎನ್ನ ಮನವೀಗ ಕದಡಿದ ಕನ್ನಡಿಯಾಯಿತು
ಎಲ್ಲಾ ಚಿತ್ರಗಳು ಅಸ್ಪಷ್ಟತೆಯ ಕುರುಹಾಯಿತು
ದ್ವಂದ್ವಗಳ ಎದೆಗೆ ಬಿದ್ದು
ಭಾವಗಳ ಸದ್ದಿನ ಸಂತೆಯಲಿ
ಚಿಂತೆಗಳ ಬಿತ್ತಿದಿಯೇಕೆ?
ಬಿಡು ಹರಿವ ನೀರಂತೆ
ಹರಿಯಲಿಬಿಡು ಪ್ರೇಮ
ನಿನ್ನ ಕಣ್ಣತಳದಲಿ ತಿಳಿಯಾದ ನಾನೀಗ
ನಿನ್ನ ಹೃದಯ ಹಾಡುವ ಹಾಡಿನ ಪಲ್ಲವಿ
ಬೀಸುವ ಗಾಳಿಯಂತೆ ಹಾರುವ ಹಕ್ಕಿಯಂತೆ ಅನುಕ್ಷಣವೂ ವಸಂತಗಳಪ್ಪುತಲಿ ಸಂಭ್ರಮಿಸೋಣ…
ಈಗ ಮತ್ತೊಮ್ಮೆ ಕೇಳುತ್ತೇನೆ.
ಪ್ರೀತಿ ಎಂದರೇನೆಂದು
“ನೀ” ಎಂದುಸುರು ಸಾಕು!
- ಭಾಗ್ಯ.ಕೆ.ಯು – ಗೃಹಿಣಿ, ಹವ್ಯಾಸಿ ಬರಹಗಾರ್ತಿ, ಬೆಂಗಳೂರು