ವಾಲಿಕಾರ ಮಲ್ಲೇಶಪ್ಪನ ಪಲ್ಲಕ್ಕಿ ಸೇವೆ – (ಭಾಗ೧)

ಕೊಪ್ಪಳದ ಒಂದು ಹಳ್ಳಿ ‘ವದಗನಹಾಳಿನ’ ಕೋರಗಲ್ ವಿರೂಪಾಕ್ಷಪ್ಪ ನಿವೃತ್ತ ಗಣಿತ ಪ್ರಾಧ್ಯಾಪಕರು, ಅವರು ಗ್ರಾಮೀಣ ಭಾಷೆಯಲ್ಲಿ “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣ ಇಂದಿನಿಂದ ಆರಂಭವಾಗಿದೆ, ತಪ್ಪದೆ ಎಲ್ಲರೂ ಓದಿ ಮತ್ತು ತಪ್ಪದೆ ಹಂಚಿಕೊಳ್ಳಿ…

ನಾನಾಗ ಕೊಪ್ಪಳದಲ್ಲಿ ಅಭ್ಯಾಸ ಮಾಡುತ್ತಿದ್ದೆ. ಅಪ್ಪ ಆಗಾಗ ಹಂಪೆಗೆ ಹೋಗುತ್ತಿದ್ದ. ಹಂಪಿಯ ವಿರೂಪಾಕ್ಷ ಆತನ ಆರಾಧ್ಯ ದೈವ. ಅಂತೆಯೆ ನನಗೆ ಆ ವಿರೂಪಾಕ್ಷನ ಹೆಸರು ಇಡಲಾಗಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಪ್ರತಿ ಜಾತ್ರೆಗಂತೂ ಅಪ್ಪ ತಪ್ಪದೆ ಹೋಗುತ್ತಿದ್ದ. ಆಗ ಹಂಪಿಗೆ ಹೋದರೆ ಹೊಸಪೇಟೆಯಿಂದ ನಾವು ನಡೆದುಕೊಂಡೇ ಹೋಗುತ್ತಿದ್ದೆವು.
ಹೀಗಾಗಿ ಒಂದೇ ದಿವಸದಲ್ಲಿ ಹೋಗಿ ಬರಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಹಂಪಿಯ ದಾರಿಯಲ್ಲಿ ಬೆಲ್ಲ ಮಾಡುವ ಗಾಣಗಳು ಇರುತ್ತಿದ್ದವು. ಅಂತಹ ಕೆಲವು ಗಾಣಗಳಲ್ಲಿ ನಮ್ಮ ಊರಿನ ಜನರು ಕೆಲಸ ಮಾಡುತ್ತಿದ್ದರು. ರಾತ್ರಿ ತಡವಾದರೆ ಅಲ್ಲಿಯೇ ವಸತಿ ಮಾಡುತ್ತಿದ್ದೆವು. ಅಲ್ಲಿ ವಸ್ತಿ ಮಾಡಿದರೆ ಊಟದ ಚಿಂತೆ ಇರುತ್ತಿದ್ದಿಲ್ಲ. ಗಂಡಸರು ಮಾಡಿದ ಅಡುಗೆಯೆ ಬಹಳ ರುಚಿಕಟ್ಟು ಎಂದು ನನ್ನ ಅಭಿಪ್ರಾಯ. ಅಲ್ಲಿದ್ದವರು ರುಚಿಕಟ್ಟಾದ ಅನ್ನಾ ಹುಳಿ ಮಾಡುತ್ತಿದ್ದರು. ನಾನು ಅನ್ನದಲ್ಲಿ ಕಾಕಂಬಿ ಹಾಕಿಕೊಂಡು ಸಿಹಿ ಅನ್ನಾ ಉಣ್ಣುತ್ತಿದ್ದೆ.

ಫೋಟೋ ಕೃಪೆ : google

ಬೇಸಿಗೆ ಬಂದರೆ ನಮ್ಮ ಊರುಗಳಲ್ಲಿ ಕೆಲಸಗಳಿರುತ್ತಿರಲಿಲ್ಲ. ಆಗ ನಮ್ಮ ಭಾಗದ ರೈತಾಪಿ ಜನ ಹೊಸಪೇಟೆಯ ಕಡೆಗೆ ಕೆಲಸಾ ಅರಸಿಕೊಂಡು ಹೋಗುತ್ತಿದ್ದರು. ಬರಿ ಬಡವರು ಮಾತ್ರ ಹೋಗುತ್ತಿರಲಿಲ್ಲ. ಇದ್ದವರೂ ಸಹ ಆಗ ಎರಡು ತಿಂಗಳು ಅಲ್ಲಿಯ ಮಾಗಾಣೆಯಲ್ಲಿ ಬೆಲ್ಲ ಮಾಡುವ ಗಾಣಗಳಲ್ಲಿ ದುಡಿಮೆಗೆ ಹೋಗುತ್ತಿದ್ದರು. ಅವರು ಅಲ್ಲಿ ಎತ್ತು ಚಕ್ಕಡಿ ತೆಗೆದುಕೊಂಡು ಹೋಗಿ ಎರಡು ತಿಂಗಳು ಕೆಲಸ ಮಾಡಿದರೆ ನೂರಿನ್ನೂರು ರೂಪಾಯಿ ಮತ್ತು ಎರಡು ಕ್ವಿಂಟಲ್ಲಿನಷ್ಟು ಬೆಲ್ಲಾ ಮನೆಗೆ ತರುತ್ತಿದ್ದರು. ಒಂದು ಸಲ ಹಂಪೆಗೆ ಹೋಗುವಾಗ ಅಪ್ಪ ನನ್ನನ್ನೂ ಜೊತೆಗೆ ಕರೆದುಕೊಂಡು ಹೋದರು. ಮಕ್ಕಳಿಗೆ ಊರಿಗೆ ಹೋಗುವುದೆಂದರೆ ಖುಷಿಯಲ್ಲವೇ? ನಾನು ಖುಷಿಯಿಂದ ರೈಲು ಹತ್ತಿದ್ದೆ. ಕಣ್ಣಿದ್ದವರು ಕನಕಗಿರಿಯನ್ನು ನೋಡಬೇಕು ಕಾಲಿದ್ದವರು ಹಂಪೆಯನ್ನು ನೋಡಬೇಕು ಎಂದು ನಮ್ಮ ಭಾಗದಲ್ಲಿ ಒಂದು ಹೇಳಿಕೆ ಇದೆ, ಒಂದು ಇಡೀ ದಿವಸ ಅಡ್ಡಾಡಿದರೂ ಹಂಪೆಯನ್ನು ಪೂರ್ತಿಯಾಗಿ ನೋಡಲಿಕ್ಕೆ ಆಗುತ್ತಿರಲಿಲ್ಲ. ಆ ಕಾರಣಕ್ಕೆ ಕೆಲವು ಸಲ ಹಂಪೆಗೆ ಹೊದರೆ ಅಲ್ಲಿಯೇ ಉಳಿದು ಮರುದಿವಸ ಮತ್ತೆ ಹಂಪೆಯನ್ನೆಲ್ಲಾ ನೋಡಿಕೊಂಡು ಬರುತ್ತಿದ್ದರು. ನಾವು ಖುಷಿಯಿಂದ ಅಡ್ಡಾಡಿದೆವು. ಬರುವಾಗ ನಾವು ಹೊಸಪೇಟೆಯ ದಾರಿಯಲ್ಲಿ ಅನಂತಶಯನ ಗುಡಿಯ ಹತ್ತಿರವಿದ್ದ ಬೆಲ್ಲ ಮಾಡುವ ಗಾಣದ ಕ್ಯಾಂಪಿಗೆ ಹೋದೆವು. ಅಪ್ಪ ನನಗೆ ಬೆಲ್ಲಾ ಮಾಡುವ ರೀತಿಯನ್ನು ತೋರಿಸಿದ. ಅಲ್ಲಿ ವ್ಯವಸ್ಥಿತವಾಗಿ ಕೆಲಸಗಳನ್ನು ಹಂಚಿಕೊಂಡು ಕೆಲಸ ಮಾಡುತ್ತಿದ್ದರು. ಕಬ್ಬು ಕಡಿಯುವವರು, ಗಾಣಕ್ಕೆ ಕಬ್ಬು ಹಾಕುವವರು ಒಲೆಗೆ ಉರಿ ಹಾಕುವವರು, ಪಾಕ ಬಂದ ಮೇಲೆ ಆಣವನ್ನು ಚ್ಯಾಪೆಯ ಮೇಲೆ ಸುರಿದು ಹರಡುವವರು ತಮ್ಮ ತಮ್ಮ ಕೆಲಸ ತಾವು ಮಾಡುತ್ತಿದ್ದರು. ನಾವು ಅಲ್ಲಿ ಅಡ್ಡಾಡಿ ಸಮಯ ಕಳೆದದ್ದರಿಂದ ನಮ್ಮ ರೈಲು ತಪ್ಪುತ್ತದೆಯೆಂದು ಗೊತ್ತಾಗಿ ಅಲ್ಲಿಯೇ ಉಳಿಯಬೇಕಾಯಿತು. ಆ ಗಾಣದ ಕ್ಯಾಂಪಿನ ಹತ್ತಿರ ಒಂದು ಸಣ್ಣ ದುರುಗಮ್ಮನ ದೇವಸ್ಥಾನವಿತ್ತು. ನಮ್ಮ ದೇಶದಲ್ಲಿ ಬೇಕಾದಷ್ಟು ಬಡತನವಿದ್ದರೂ ಈ ಇಂಡಿಯಾ ದೇಶದಲ್ಲಿ ಮಕ್ಕಳನ್ನು ಹಡೆಯುವವರಿಗೆ ಬಡತನವಿಲ್ಲ, ಮತ್ತು ದೇವರನ್ನು ಸೃಷ್ಟಿ ಮಾಡುವವರಿಗೆ ಬಡತವಿಲ್ಲವೆಂದು ಬ್ರಿಟಿಷ ಅಧಿಕಾರಿಯೊಬ್ಬರು ಬರೆದಿದ್ದಾರೆ. ಹೀಗೆ ಎಲ್ಲೆಂದರಲ್ಲಿ ದೇವರುಗಳನ್ನು ಸೃಷ್ಟಿ ಮಾಡಿ ಪ್ರತಿಷ್ಠಾಪಿಸುವುದು ಸಾಮಾನ್ಯ ಸಂಗತಿ. ಕಾಲರಾ ಬಂದರೆ ದೇವಿಯೆಂದು ನಂಬಿ ಆಕೆಯನ್ನು ಊರ ಸೀಮೆ ದಾಟಿಸಿ ಕಳಿಸಿ ಬರುತ್ತಾರೆ. ಹೀಗೆ ಕಳಿಸಲ್ಪಟ್ಟ ದೇವಿಗೆ ಅಲ್ಲಿಯೇ ಒಂದು ಗುಡಿ ಕಟ್ಟಿಕೊಂಡು ಕುಳಿತ ಮನುಷ್ಯನಿಗೊಂದು ಪೂಜಾರಿಯ ಕೆಲಸ ಸಿಕ್ಕುತ್ತದೆ. ಹಾಗೆಯೆ ಅಲ್ಲೊಬ್ಬ ದೇವತೆ ಇದ್ದಳು. ಅಂದು ದೇವಿ ಚಳೇವಕ್ಕೆ ಹೋಗುವವಳಿದ್ದಳು. ಅದಕ್ಕೆ ರಾತ್ರಿ ಪಲ್ಲಕ್ಕಿ ಹೊತ್ತುಕೊಂಡು ಊರ ಜನ ಉಧೋ ಉಧೋ ಎಂದು ಘೋಷಣೆ ಕೂಗುತ್ತಾ ಬಂದರು.ನಾನು ಅಪ್ಪನನ್ನು ಕೇಳಲೇ ಇಲ್ಲ ಉಧೋ ಉಧೋ ಎನ್ನುತ್ತಾ ಅವರ ಹಿಂದೆ ಹೋಗಿ ಬಿಟ್ಟೆ. ನಮ್ಮ ಊರವರೆಲ್ಲಾ ಹೊರಟರು. ಚಳೇವಕ್ಕೆ ಹೋಗುವುದೆಂದರೆ, ಹಳ್ಳಿಯ ಜನರೆಲ್ಲಾ ಅಲ್ಲಿ ಬಂದು ಒಂದು ದಿವಸ ಪಲ್ಲಕ್ಕಿಯಲ್ಲಿ ದೇವಿಯನ್ನು ಕೂಡ್ರಿಸಿಕೊಂಡು ಚಳೇವ (ತಿರುಗಾಟ) ಕ್ಕೆ ಕರೆದುಕೊಂಡು ಹೋಗುತ್ತಾರೆ. ಪಲ್ಲಕ್ಕಿ ಹೊತ್ತುಕೊಂಡು ಊರವರೆಲ್ಲಾ ಹೊರಟಾಗ ಗಾಣಕ್ಕೆ ಬಂದವರೂ ಸಹ ಪಲ್ಲಕ್ಕಿ ಹಿಂದೆ ‘ಉಧೋ ಉಧೋ’ ಎಂದು ಘೋಷಣೆ ಕೂಗುತ್ತಾ ಹಿಂಬಾಲಿಸಿದರು.

ಫೋಟೋ ಕೃಪೆ : google

ನನಗಾಗ ಹತ್ತು ವರ್ಷವಿರಬೇಕು. ಹಾಗೆ ಘೋಷಣೆಗುವುದು ನನಗೆ ಮಜವೆನಿಸುತ್ತಿತ್ತು. ಪಲ್ಲಕ್ಕಿಯನ್ನು ನಮ್ಮ ಊರಿನವರೂ ಹೊರುತ್ತಿದ್ದರು. ಸ್ವಲ್ಪ ದೂರಕ್ಕೆ ಹೋದ ಮೇಲೆ ದೇವಿಗೆ ಹರಕೆ ಸಲ್ಲಿಸಬೇಕೆನ್ನುವವರು ತಾವೂ ಪಲ್ಲಕ್ಕಿ ಹೊರುತ್ತೇವೆ ಎಂದರೆ ಅವರಿಗೆ ಬಿಟ್ಟು ಕೊಡುವುದು ಪದ್ದತಿ. ಹೊರದಿದ್ದರೂ ಒಂದು ಸಲ ಪಲ್ಲಕ್ಕಿಯನ್ನು ಮುಟ್ಟಿ ನಮಸ್ಕರಿಸಿ ಸೇವೆ ಮಾಡಿದೆವೆಂಬ ಧನ್ಯತೆ ತುಂಬಿಕೊಂಡು ಹೋಗುತ್ತಾರೆ. ಊರ ಮುಂದೆ ದೇವಿಯನ್ನು ನಿಲ್ಲಿಸಿ ಆಕೆಯ ಪಾದಕ್ಕೆ ನೀರು ಹಾಕಿ ಕಾಯಿ ಒಡೆದು ಊರಿನ ಹಿರಿಯರು ಆಕೆಗೆ ಭಕ್ತಿಯನ್ನು ಅರ್ಪಿಸಿ ಧನ್ಯರಾದರು. ಅದಾದ ಮೇಲೆ ಪಲ್ಲಕ್ಕಿ ಮತ್ತೆ ಮುಂದೆ ಹೊರಟಿತು. ಅಲ್ಲಿಂದ ಹೊರಟಾಗ ವಾಲೀಕಾರ ಮಲ್ಲೇಶಪ್ಪ ಒಂದು ಕಡೆಗೆ ಪಲ್ಲಕ್ಕಿಯನ್ನು ಹೊತ್ತು ನಡೆದ. ದೇವಿಯ ಪೂಜಾರಿ ಹಣೆಗೆಲ್ಲಾ ಕುಂಕುಮ ಬಳಿದುಕೊಂಡು ಜೋಲಿ ಹೊಡೆಯುತ್ತಾ ಉಧೋ ಉಧೋ ಎಂದು ಪಲ್ಲಕ್ಕಿ ಅಂಚನ್ನು ಹಿಡಿದು ಗಂಟೆ ಬಾರಿಸುತ್ತಾ ನಡೆಯುತ್ತಿದ್ದ. ಆ ಪೂಜಾರಿಗೆ ದೇವಿ ಮೈಯಲ್ಲಿ ಬಂದಿದ್ದಾಳೆಂದು ಮತ್ತೊಬ್ಬ ಆತನ ರಟ್ಟೆ ಹಿಡಿದುಕೊಂಡು ಹೋಗುತ್ತಿದ್ದ. ಪಲ್ಲಕ್ಕಿ ಊರ ಊರ ಬಾಗಿಲಿಗೆ ಹೋಗುತ್ತಿದ್ದಂತೆಯೇ ಪಲ್ಲಕ್ಕಿಯಲ್ಲಿ ಭದ್ರವಾಗಿ ಕುಳಿತ ದೇವಿಯ ಮೂರ್ತಿ ಉರುಳಿ ಬಿದ್ದದ್ದರಿಂದ ಪಲ್ಲಕ್ಕಿಯನ್ನು ಕೆಳಗೆ ಇಳಿಸಿ ಮತ್ತೊಂದು ಪೂಜೆ ಮಾಡಿ ದೇವಿ ‘ಏನನ್ನು ಕೇಡು ತರಬ್ಯಾಡವ್ವಾ’ ಎಂದು ಬೇಡಿಕೊಂಡು ಮುನ್ನೆಡದರು. ಹತ್ತಿಪ್ಪತ್ತು ಹೆಜ್ಜೆ ಹೋಗುತ್ತಿರುವಂತೆಯೇ ಮತ್ತೆ ದೇವಿ ಪಲ್ಲಕ್ಕಿಯಲ್ಲಿ ಒರಗಿ ಬಿಟ್ಟಳು. ಪಲ್ಲಕ್ಕಿ ಮತ್ತೆ ನಿಲ್ಲಿಸಿದರು. ಹಿಂದಿದ್ದ ನಾವುಗಳೆಲ್ಲಾ ಗಲ್ಲ ಗಲ್ಲಾ ಬಡಿದುಕೊಂಡು ಮಾಡದ ತಪ್ಪಿಗೆ ಕ್ಷಮೆ ಕೇಳಿದೆವು. “ಏನೋ ಕೇಡಾಗತ್ತ. ಅದಕ್ಕ ನೀನು ಪಲ್ಲಕ್ಕಿ ಹಂತೇಲಿ ಹೋಗಬ್ಯಾಡ ಬಾ” ಎಂದು ಅಪ್ಪ ನನ್ನನ್ನು ಹಿಂದಕ್ಕೆ ಸರಿಸಿ ನಿಲ್ಲಿಸಿದ. ನಾನು ದೂರ ಸರಿದು ನಿಂತು ಪಲ್ಲಕ್ಕಿ ಹಿಂಬಾಲಿಸಿದೆ. ಅಪ್ಪ ನನ್ನ ಕೈ ಹಿಡಿದುಕೊಂಡು ಮುಂದಕ್ಕೆ ಹೋಗದಂತೆ ತಡೆದಿದ್ದ. ಆದರೂ ನಾನು ಉಧೋ ಉಧೋ ಎನ್ನುವುದನ್ನು ಬಿಟ್ಟಿರಲಿಲ್ಲ.

ಫೋಟೋ ಕೃಪೆ : google

ದೇವಿ ಬಲಿ ಬೇಡುತ್ತಿದ್ದಾಳೆ ಎಂದು ಪೂಜಾರಪ್ಪ ಹೇಳಿಕೆ ಕೊಟ್ಟ ಮೇಲೆ ಸಮೀಪದಲ್ಲಿದ್ದ ಕೇರಿಯಿಂದ ಒಂದು ಕೋಳಿಯನ್ನು ತಂದು ಕುತ್ತಿಗೆ ಮುರಿದಾಗ ನಮ್ಮ ಅಪ್ಪ ನನ್ನ ಕಣ್ಣು ಮುಚ್ಚಿ ಹಿಡಿದುಕೊಂಡಿದ್ದಾತ, “ನಾವು ಹೊಳ್ಳಿ ಹೋಗಿ ಬುಡಾನ.” ಎಂದ. ನನಗೆ ದೇವಿಯ ಪಲ್ಲಕ್ಕಿ ಜೊತೆಯಲ್ಲಿಯೇ ಹೋಗಬೇಕೆನ್ನುವ ಹುಚ್ಚು. “ಇನ್ನೊಂದಿಷ್ಟು ದೂರ ಹೋಗಾನ. ಇನ್ನೊಮ್ಮೆ ದೇವಿ ಉರುಳಿ ಬಿದ್ದರ ಹಿಂದಕ್ಕ ಹೋಗಿ ಬಿಡಾನ”ಎಂದೆ. ಅಪ್ಪನಿಗೆ ನನ್ನ ಮನಸ್ಸು ನೋಯಿಸುವುದು, ಅದೂ ಸಹ ದೇವರ ವಿಷಯದಲ್ಲಿ ಬೇಡವಾಗಿತ್ತು. ದೇವಿ ಮತ್ತೊಮ್ಮೆ ಉರುಳಿದಾಗ ದೇವಿ ಯಾಕೆ ಉರುಳಿ ಬೀಳುತ್ತಾಳೆನ್ನುವುದನ್ನು ನಮ್ಮ ತಂದೆ ಕಂಡು ಹಿಡಿದು ಬಿಟ್ಟರು. ಅಪ್ಪ ದೇವಿಯ ಮುಂದೆ ಬಂದು “ಎಲ್ರೂ ಹಿಂದಕ್ಕ ಸರೀರಿ. ನಾನು ದೇವಿಗೆ ಬೇಡಿಕೊಂಡು ಇನ್ನೊಮ್ಮೆ ಬೀಳದಂತೆ ಮಾಡುತ್ತೇನೆ” ಎಂದು ಹೇಳಿದ. ಎಲ್ಲರೂ ಹಿಂದೆ ಸರಿದು ನಿಂತರು. ಮತ್ತೆ ಪೂಜೆ ಮಾಡಿ ಎಬ್ಬಿಸಿದಾಗ ಅಪ್ಪ ದೇವಿಗೆ ಅಡ್ಡ ಬಿದ್ದು “ಯವ್ವಾ ತಾಯಿ ನಾವೆಲ್ಲಾ ನಿನ್ನ ಮಕ್ಕಳು ನಮಗೆ ಏನೂ ಕೇಡು ಮಾಡಬ್ಯಾಡವ್ವಾ” ಎಂದು ಬೇಡಿಕೊಂಡದ್ದಲ್ಲದೆ ಪಲ್ಲಕ್ಕಿಯನ್ನು ಹೊತ್ತ ಮಲ್ಲೇಶಪ್ಪ, ಪಲ್ಲಕ್ಕಿಯ ಮುಂದೆ ಬಂದು ದೇವಿಗೆ ಅಡ್ಡ ಬಿದ್ದು ಬೇಡಿಕೊಳ್ಳಬೇಕೆಂದು ಹೇಳಿದ. ಆಗ ಪಲ್ಲಕ್ಕಿಯನ್ನು ಹೊತ್ತಿದ್ದ ಮಲ್ಲೇಶಪ್ಪ ಪಲ್ಲಕ್ಕಿಯ ಮುಂದೆ ಬಂದು ದೇವಿಗೆ ಅಡ್ಡ ಬಿದ್ದು ಬೇಡಿಕೊಂಡ. ಆತ ಬೇಡಿಕೊಳ್ಳಲಿಕ್ಕೆ ಪಲ್ಲಕ್ಕಿಯ ಮುಂದೆ ಬರುತ್ತಿರುವಂತೆಯೇ ಮಲ್ಲೇಶಪ್ಪನ ಸ್ಥಳದಲ್ಲಿ ಪಲ್ಲಕ್ಕಿಯನ್ನು ಹೊರಲಿಕ್ಕೆ ಬೇರೊಬ್ಬರನ್ನು ಗೊತ್ತು ಮಾಡಿ ನಿಲ್ಲಿಸಿದ್ದರಿಂದ, ಅವರು ಪಲ್ಲಕ್ಕಿಗೆ ಹೆಗಲು ಕೊಟ್ಟರು. ಅಂದರೆ ವಾಲೀಕಾರ ಮಲ್ಲೇಶಪ್ಪನನ್ನು ಬಿಡಿಸಿ ದೇವಿಯ ಪಲ್ಲಕ್ಕಿಗೆ ಉಪ್ಪಾರ ಯಮನಪ್ಪ ಹೆಗಲು ಕೊಡುವಂತೆ ಮಾಡಿದ. ಯಮನಪ್ಪ ದೇವಿಯ ಪಲ್ಲಕ್ಕಿಯನ್ನು ಹೊತ್ತುಕೊಂಡ ಮೇಲೆ ದೇವಿ ಒಮ್ಮೆಯೂ ಬೀಳದೆ ಶಾಂತಳಾಗಿ ಪಲ್ಲಕ್ಕಿಯಲ್ಲಿ ಕುಳಿತು ನಮ್ಮನ್ನೆಲ್ಲಾ ಅನುಗ್ರಹಿಸಿದ್ದು ನೋಡಿ ನಮಗೆಲ್ಲಾ ಆಶ್ಚರ್ಯವಾಯಿತು. ದೇವಿಯು ಅಪ್ಪನಿಗೆ ಪ್ರತ್ಯಕ್ಷಳಾಗಿ ಆತನ ಮುಂದೆ ಏನೋ ಹೇಳಿದ್ದಾಳೆಂದು ನಾನು ಭಾವಿಸಿದೆ. ಆ ಊರವರಂತೂ ಅಪ್ಪನ ಪವಾಡವನ್ನು ಹೊಗಳಿದರು. ಅಂತೂ ಸುರಕ್ಷಿತವಾಗಿ ದೇವಿ ಸ್ವಸ್ಥಾನಕ್ಕೆ ಬಂದಾದ ಮೇಲೆ ಅನ್ನ ಸಂತರ್ಪಣೆಯಾಯಿತು.

ನಾವೇಲ್ಲಾ ಗೋದಿ ಹುಗ್ಗಿ ಅನ್ನ ಸಾರು ಉಂಡು ಖುಷಿ ಪಟ್ಟೆವು. ನಾವುಗಳೆಲ್ಲಾ ದೇವಿಯನ್ನು ಕಳಿಸಿ ಬಂದ ಮೇಲೆ ನಮ್ಮ ಊರಿನ ಹತ್ತು ಹನ್ನೆರಡು ಜನರು ಮಾತ್ರ ಗಾಣದಲ್ಲಿ ಉಳಿದರು. ಆಗ ನಮ್ಮ ಊರವರು “ದೇವಿಗೆ ನೀನು ಬೇಡಿಕೊಂಡ ಮೇಲೆ ಆಕೆ ಬೀಳಲೇ ಇಲ್ಲನೋಡಪ್ಪಾ ಚನ್ನಪ್ಪಾ” ಎಂದರು. ಆಗ ಅಪ್ಪ ದೇವಿ ಯಾಕೇ ಕೋಪಿಸಿಕೊಂಡು ಉರುಳಿ ಬೀಳುತ್ತಿದ್ದಳು ಎಂಬುದರ ಗುಟ್ಟು ಹೇಳಿದ. “ದೇವಿ ನಮ್ಮಮಲ್ಲೇಶಿಯ ಕಾಲಗುಣದಿಂದ ಉರುಳಿ ಬೀಳುತ್ತಿದ್ದಳು.” ಎಂದು ಅಪ್ಪ ಗುಟ್ಟು ಹೇಳಿದ. ಪಲ್ಲಕ್ಕಿಯನ್ನು ಹೊತ್ತು ನಡೆದಿದ್ದ ವಾಲೀಕಾರ ಮಲ್ಲೇಶಪ್ಪನದು ಒಂದು ಕಾಲು ಕುಂಟು. ಎಡಗಾಲನ್ನು ಮೀಟಿ ನಡೆಯುತ್ತಿದ್ದಂತೆಯೇ ದೇವಿ ಉರುಳಿ ಬೀಳುತ್ತಿದ್ದಳು.“ಈ ಮಲ್ಲೇಶಿ ಕೇರಿಯೊಳಗಿನದು ಒಂದು ಕೋಳಿ ಸುಮ್ಮ ಸುಮ್ಮನ ಬಲಿ ತಗೊಂಡಾ” ಎಂದು ಹೇಳಿದಾಗ ಎಲ್ಲರೂ ನಕ್ಕರೆ ಮಲ್ಲೇಶಪ್ಪ ನಗಲಿಲ್ಲ.

  • “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣ ಮುಂದಿನ ಭಾಗ ನಿರೀಕ್ಷಿಸಿ…

  • ಕೊರಗಲ್ಲ ವಿರೂಪಾಕ್ಷಪ್ಪ  – ನಿವೃತ್ತ ಗಣಿತ ಪ್ರಾಧ್ಯಾಪಕ. ಗ್ರಾಮೀಣ ಭಾಷೆಯಲ್ಲಿ ಕಥೆ ಕಟ್ಟುವ ಜಾಣ ಕಥೆಗಾರರು, ಹಾವೇರಿ.

0 0 votes
Article Rating

Leave a Reply

1 Comment
Inline Feedbacks
View all comments
Home
News
Search
All Articles
Videos
About
1
0
Would love your thoughts, please comment.x
()
x
%d
Aakruti Kannada

FREE
VIEW