‘ಮಡಿಲು’ ಕಾದಂಬರಿ ಪರಿಚಯ -ಶಾಲಿನಿ ಹೂಲಿ ಪ್ರದೀಪ್

ಕಾದಂಬರಿಗಾರ್ತಿ ಶೋಭಾ ನಾರಾಯಣ ಹೆಗಡೆ ಅವರ ಚೊಚ್ಚಲ ಕಾದಂಬರಿ ‘ಮಡಿಲು’ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ ಮತ್ತು ಯುವ ಬರಹಗಾರ್ತಿ ಶೋಭಾ ಅವರಿಗೆ ಪ್ರೋತ್ಸಾಹಿಸಿ….

ಪುಸ್ತಕ : ಮಡಿಲು
ಲೇಖಕರು : ಶೋಭಾ ನಾರಾಯಣ ಹೆಗಡೆ
ಪ್ರಕಾಶಕರು: ವಿಜಯಲಕ್ಷ್ಮಿ ಪ್ರಕಾಶನ
ಪ್ರಕಾರ : ಕಾದಂಬರಿ
ಬೆಲೆ : ೧೯೫.೦೦
ಪುಟ : ೧೭೬
ಖರೀದಿಗಾಗಿ : ೭೦೧೯೨೧೯೫೫೯

ಶೋಭಾ ಅವರ ‘ಮಡಿಲು’  ಎರಡು ಕತೆಯನ್ನೊಳಗೊಂಡ ಕಾದಂಬರಿಯಾಗಿದೆ. ಒಂದು ಕತೆಯಲ್ಲಿ ಹೆಣ್ಣಿನ ಭಾವನೆ, ಮಾನಸಿಕ ಹಿಂಸೆ, ಸಮಾಜದ ಕಟ್ಟು ಪಾಡುಗಳ ಬಗ್ಗೆ ಹೇಳಿದರೆ, ಇನ್ನೊಂದು ಕತೆಯಲ್ಲಿ ಗಂಡಿನಲ್ಲಿ ಅಡಗಿರುವ ಆಗಾಧವಾದ ಪ್ರೀತಿ, ಕರುಣೆ, ತಾಯ್ತಾನ ಕುರಿತು ಚಂದವಾಗಿ ವರ್ಣಿಸಿದ್ದಾರೆ.

ಈ ಕಾದಂಬರಿ ಓದುವಾಗ ತಾಯಿಯ ಮಡಿಲಿನಲ್ಲಿ ಕೂತು ಜೀವನ ಪಾಠವನ್ನು ಕೇಳಿದಂತೆ ಅನುಭವವಾಗುತ್ತದೆ. ಸುಖ ಸಂಸಾರದಲ್ಲಿ ಹೆಣ್ಣಿನ ಪಾತ್ರ ಎಷ್ಟು ಮುಖ್ಯವಾಗಿರುತ್ತದೆ ಎನ್ನುವುದನ್ನು ಲೇಖಕಿ ಸೂಕ್ಷ್ಮವಾಗಿ ಓದುಗರ ಮುಂದಿಟ್ಟಿದ್ದಾರೆ.

ಸಮಾಜದ ಕಟ್ಟುಪಾಡುಗಳ ಮಧ್ಯೆ, ಅದರಲ್ಲಿಯೂ ಶುಭ ಸಮಾರಂಭಗಳಲ್ಲಿ ವಿಧವೆಯನ್ನು ಹೇಗೆ ನಡೆಸಿಕೊಳ್ಳುತ್ತಾರೆ, ಅವಳ ಅಂತರಾತ್ಮಕ್ಕೆ ಆಗುವ ನೋವನ್ನು ಲತಾ ಎನ್ನುವ ವಿಧವೆ ಪಾತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ವಿಚ್ಛೇದಿತ ಮಹಿಳೆಯ ಪಾತ್ರವನ್ನು ಸೃಷ್ಟಿಸಿ ಅವಳಿಗೆ ಸಮಾಜದಲ್ಲಿ, ಅದರಲ್ಲಿಯೂ ಶುಭಸಮಾರಂಭಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಸ್ವಚ್ಚಂದವಾಗಿ ಓಡಾಡುವುದನ್ನು ಹೇಳುವುದರ ಜೊತೆಗೆ ವಿಧಿಯಾಟದಿಂದ ಗಂಡನನ್ನು ಕಳೆದುಕೊಂಡವಳಿಗೆ ಸಮಾಜ ತೋರುವ ಪರಿ ಹಾಗು ಗಂಡ ಬಿಟ್ಟು ಬಂದವಳನ್ನು ಸಮಾಜ ನೋಡುವ ಪರಿಯನ್ನು ಹೋಲಿಕೆ ಮಾಡಿ ಅದನ್ನು ಓದುಗರ ಮಸ್ತಕಕ್ಕೆ ಬಿಟ್ಟು, ಚಿಂತನೆ ಮಾಡುವಂತೆ ಮಾಡಿದ್ದಾರೆ.

 

ತವರು ಮನೆಯಲ್ಲಿ ಇರಲು ಆಗದೆ, ಗಂಡನ ಪ್ರೀತಿಯಿಲ್ಲದೆ ಒದ್ದಾಡುವ ಲತಾ ಮುಂದೆ ಗೊತ್ತು ಗುರಿಯಿಲ್ಲದ ಊರಿಗೆ ಹೋಗಿ ತನ್ನ ಬದುಕು ಕಟ್ಟಿಕೊಳ್ಳುತ್ತಾಳೆ . ಅಲ್ಲಿಯ ಹಳ್ಳಿಗರ ಮುಗ್ದ  ಮನಸ್ಸಿನಲ್ಲಿ ನೆಲೆಕೊಳ್ಳುತ್ತಾಳೆ. ಕತೆಯಲ್ಲಿ ಹಲವಾರು ರೋಚಕ ತೀರುವುಗಳನ್ನು ಕೊಡುತ್ತಾ ಕೊನೆಗೆ ಲತಾ ಕಳೆದುಕೊಂಡ ಗಂಡನನ್ನೇ ಮತ್ತೆ ಪಡೆಯುತ್ತಾಳೆ ಹೀಗೆ ಕತೆ ಸುಖಾಂತ್ಯವಾಗುವುದು.

ಲತಾಳ ಪಾತ್ರ ಸೃಷ್ಟಿಯಾದುದರ ಬಗ್ಗೆ ಲೇಖಕಿ ಶೋಭಾ ಅವರು ಪುಸ್ತಕದ ಒಂದು ಕಡೆ ಹೇಳಿಕೊಂಡಿದ್ದಾರೆ ಪುಟ್ಟ ವಯಸ್ಸಿನ ವಿಧವೆಯೊಬ್ಬಳ ನೋವಿನ ಕತೆಯನ್ನು ನೇರವಾಗಿ ಕೇಳಿದಾಗ ಮನಮಿಡಿಯಿತು. ಆ ಎಳೆಯನ್ನೇ ಇಟ್ಟುಕೊಂಡು ಸಮಾಜದಲ್ಲಿ ಧನಾತ್ಮಕ ಚಿಂತನೆ ತರುವ ತರುವ ಪ್ರಯತ್ಮ ಮಾಡಿದ್ದೇನೆ ಎನ್ನುತ್ತಾರೆ. ನಾನು ಕೂಡಾ ಈ ಕತೆಯನ್ನು ಓದುವಾಗ ನನ್ನ ಮನಸ್ಸಿನಲ್ಲಿಯೂ ಹಲವು ವಿಚಾರಗಳು ಬಂದವು, ವಿಧವೆಯಾದ ಮಾತ್ರಕ್ಕೆ  ಅವಳ ಆಸೆಗಳನ್ನು ಕೊಲ್ಲುವುದಲ್ಲ. ಎಲ್ಲರಂತೆ ಅವಳಲ್ಲೂ ಆಸೆಗಳಿವೆ, ಭಾವನೆಗಳಿವೆ, ಬದುಕಬೇಕು ಎನ್ನುವ ಛಲವಿದೆ, ಆ ಛಲಕ್ಕೆ ಒಂದು ಹಿಡಿ ಪ್ರೀತಿ, ಗೌರವ ತೋರಿಸಿದರೆ ಆಕೆಯು ಕೂಡಾ ದಿಟ್ಟ ಹೆಣ್ಣುಮಗಳಾಗಿ ಸಮಾಜದಲ್ಲಿ ಗೌರವ ಸಂಪಾದಿಸುತ್ತಾಳೆ ಎನ್ನುವುದಕ್ಕೆ ಲತಾ ಪಾತ್ರ ಉದಾಹರಣೆಯಾಗಿ ನಿಂತಿದೆ.

****

 

ಮಡಿಲು ಕಾದಂಬರಿಯಲ್ಲಿ ಮತ್ತೊಂದು ಕತೆಯಲ್ಲಿ ಒಂದು ಪಕ್ಷಿ ಹಾಗೂ ಮನುಷ್ಯನ ಬದುಕನ್ನು ಹೋಲಿಕೆ ಮಾಡಿ ಲೇಖಕಿ ಶೋಭಾ ಅವರು ಸುಂದರವಾಗಿ ಕತೆ ಹೆಣೆದು ಓದುಗರ ಮುಂದೆ ಇಟ್ಟಿದ್ದಾರೆ. ಈ ಕಾದಂಬರಿಯಲ್ಲಿ ಪಕ್ಷಿ ತನ್ನ ಮರಿಗಳನ್ನು ರೆಕ್ಕೆ ಬಲಿಯುವವರೆಗೂ ಊಟ ಹಾಕಿ, ಸಾಕಿ, ಸಲುಹುತ್ತದೆ. ಅದೇ ಮರಿಗಳ ರೆಕ್ಕೆ ಬಲಿತ ಮೇಲೆ ತನ್ನ ಗೂಡಿನಿಂದ ಹೊರಕ್ಕೆ ದಬ್ಬಿ ಜೀವನ ಕಲಿಸುತ್ತದೆ. ಆದರೆ ಮನುಷ್ಯ ತನ್ನ ಮಕ್ಕಳು ಅಂಬೆಗಾಲು ಇಡುವಾಗಿನಿಂದ ಹಿಡಿದು ಅವರು ದೊಡ್ಡವರಾಗಿ ಕೆಲಸಕ್ಕೆ ಸೇರಿ ಮದುವೆ ಆಗಿ , ಮಕ್ಕಳಾಗಿ ಅವರ ಸಂಸಾರದ ಬಂಡಿ ಶುರುವಾದರೂ ತಂದೆ- ತಾಯಿ ತಮ್ಮ ಮಕ್ಕಳ ಮೇಲಿನ ವ್ಯಾಮೋಹವನ್ನು ಬಿಡುವುದಿಲ್ಲ. ಕೊನೆಗೆ ವ್ಯಾಮೋಹದ ಸುಳಿಯಲ್ಲಿ ಜೀವನ ಪರ್ಯಂತ ಬಳಲಿ ಬೆಂಡಾಗುವ ವಾಸ್ತವವನ್ನು ಶೋಭಾವರು ಕತೆಯಲ್ಲಿ ಅವರು ಒಪ್ಪುವಂತೆ ಹೇಳಿದಾಗ ಭೇಷ್…ಎಂದು ನನ್ನ ಮನಸ್ಸು ಹೇಳಿದ್ದು ಸುಳ್ಳಲ್ಲ .

ತಾಯಿ- ಮಗನ ಪ್ರೀತಿ, ಗಂಡ- ಹೆಂಡತಿಯ ಸರಸ, ವಿರಸಗಳನ್ನೂ ಚಂದವಾಗಿ ಹೇಳಿದ್ದಾರೆ. ಗಂಡ ಹೆಂಡತಿ ಜಗಳ ತಿಂದು ಮಲಗೋವರೆಗೂ ಅನ್ನೋ ಮಾತಿದೆ. ಆದರೆ ಇಂದಿನ ವಾಸ್ತವದಲ್ಲಿ ಗಂಡ ಹೆಂಡತಿ ಜಗಳ ಡೈವೋರ್ಸ್ ಆಗುವವರೆಗೆ ಬಂದು ನಿಂತಿರುವುದು ವಿಷಾದನೀಯ.

ಈ ಕತೆಯಲ್ಲಿ ಡೈವೋರ್ಸ್ ಬೇಕೇ ಬೇಕು ಎಂದು ಹಠ ಹಿಡಿದು ನಿಂತಿರುವ ಕೃತಿಯ ಒಂದು ಪಾತ್ರ, ಹೆಂಡತಿಗಾಗಿ ಕಣ್ಣೀರು ಇಡುವ ಗಂಡ, ತಾಯಿಯ ಮಮತೆ, ವಾತ್ಸಲ್ಯ, ಪ್ರೀತಿಗಳು ಕೇವಲ ಹೆಣ್ಣಿನಲ್ಲಷ್ಟೇ ಅಲ್ಲ, ಗಂಡಿನಲ್ಲೂ ತಾಯ್ತನವಿದೆ ಎಂದು ಪ್ರಶಾಂತನ ಪಾತ್ರದ ಮೂಲಕ ಸುಂದರವಾಗಿ ವರ್ಣಿಸಿದ್ದಾರೆ. ಪ್ರಶಾಂತ್ ಹಾಗು ಕೃತಿ ದಾಂಪತ್ಯದ ಗೀತೆ ಅರ್ಧದಲ್ಲೇ ನಿಲ್ಲುತ್ತದೆಯಾ? ಅಥವಾ ಮುಂದುವರೆಯುತ್ತದೆಯಾ?… ಎನ್ನುವವನ್ನು ಕುತೂಹಲ ಓದುಗರಿಗೆ ಬಿಟ್ಟಿದ್ದೇನೆ.

ಮಡಿಲು ಕಾದಂಬರಿಗಾರ್ತಿ  ಶೋಭಾ ನಾರಾಯಣ ಹೆಗಡೆ

ಮಡಿಲು ಕಾದಂಬರಿಯಲ್ಲಿ ಲೇಖಕರ ಆಶಯ ನುಡಿಯಲ್ಲಿ ಎಸ್ ಸಂತೋಷ ಕುಮಾರ್ ಅವರು ಕಾದಂಬರಿ ಕುರಿತು ಬರೆದ ತಮ್ಮ ಅಭಿಪ್ರಾಯವನ್ನು ಓದುವಾಗ ಮಿನಿ ಮಡಿಲು ಕಾದಂಬರಿ ಓದಿದಂತೆ ಆಯಿತು. ಅಷ್ಟು ವಿವರವಾಗಿ ಬರೆದು, ಯುವ ಕಾದಂಬರಿಗಾರ್ತಿಗೆ ಪ್ರೋತ್ಸಾಹಿಸಿದ್ದಾರೆ. ಜೊತೆಗೆ ಕಾಳನಾಯಕ ವಿ ಆಶಯ ನುಡಿಗಳಿವೆ. ಶ್ರೀ ದತ್ತಗುರು ಕಂಠಿ ಮತ್ತು ಕೆ ಮಹೇಶ್ ಅವರ ಮುನ್ನುಡಿ ಹಾಗು ಖ್ಯಾತ ಕಾದಂಬರಿಕಾರರಾದ ಸಂತೋಷಕುಮಾರ ಮೆಹೆಂದಳೆ ಅವರ ಬೆನ್ನುಡಿ ಕಾದಂಬರಿಗೆ ಇನ್ನಷ್ಟು ಮೆರಗು ನೀಡಿದೆ.

ಶೋಭಾ ಅವರ ಬರವಣಿಗೆಯಲ್ಲಿ ಗಮನಿಸಬಹುದಾದ ಒಂದು ಅಂಶವೆಂದರೆ ಅವರ ಕತೆಗಳೆಲ್ಲ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನಿಟ್ಟುಕೊಂಡು ಬರೆದಂತಹ ಕತೆಗಳೇ ಹೆಚ್ಚು. ಮಡಿಲು ಕಾದಂಬರಿಯಲ್ಲೂ ಕೂಡಾ ಸಮಾಜದ ಸ್ವಾಸ್ತ್ಯವನ್ನು ಗಮನದಲ್ಲಿಟ್ಟುಕೊಂಡು ಬರೆದಿದ್ದಾರೆ. ಅದನ್ನು ಮೆಚ್ಚುವಂತದ್ದು. ಲೇಖಕಿಯ ಚಿಂತನೆ, ಬರಹದ ರೀತಿ ಸಾಹಿತ್ಯಲೋಕದಲ್ಲಿ ತಮ್ಮದೇ ಹೆಸರು ಛಾಪು ಮಾಡಿಸುವ ಎಲ್ಲ ಅರ್ಹತೆಗಳು ಶೋಭಾ ಅವರಲ್ಲಿದೆ. ಇನ್ನಷ್ಟು ಕತೆ, ಕಾದಂಬರಿಗಳು ಅವರಿಂದ ಬರಲಿ ಎಂದು ಅವರಿಗೆ ಆಕೃತಿ ಕನ್ನಡದಿಂದ ಶುಭ ಕೋರುತ್ತೇನೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW