ಹತ್ತಿಮತ್ತೂರಿನ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲರು ಹಾವೇರಿಯ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿದ್ದರು.ಹಾವೇರಿಯ ನೇರ ನುಡಿಯ ಪ್ರತಿಭೆ ‘ಚಂಪಾ’ ಅವರ ಕುರಿತು “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣದಲ್ಲಿ ನಿವೃತ್ತ ಗಣಿತ ಪ್ರಾಧ್ಯಾಪಕರಾದ ಕೋರಗಲ್ ವಿರೂಪಾಕ್ಷಪ್ಪ ಅವರು ಬರೆದಿರುವ ಅಂಕಣವನ್ನು ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ಚಂದ್ರಶೇಖರ ಪಾಟೀಲರು ನಮ್ಮ ಭಾಗದ ಓರ್ವ ಶ್ರೇಷ್ಠ ಮತ್ತು ಬದ್ಧತೆಯನ್ನು ಕಾಯ್ದುಕೊಂಡು ಬಂದಿರುವ ಸಾಹಿತಿ. ಹಾವೇರಿಯ ಮೇಲೆ ಅವರಿಗೆ ಬಹಳ ಪ್ರೀತಿ. ಹಾವೇರಿಯ ವಿಷಯ ಬಂದಾಗಲೆಲ್ಲಾ ಹಾವೇರಿ ನನ್ನ ತವರು ಮನೆಯೆಂದು ಹೇಳುತ್ತಿದ್ದರು. ಬೆಂಗಳೂರು ಸೇರಿ ವಿಧಾನ ಸೌಧದ ಸಂಪುಟ ದರ್ಜೆಯ ಹುದ್ದೆಗೇರಿದರೂ ಹಾವೇರಿಯ ಮೇಲೆ ಹಾಯ್ದು ಹೋಗುವಾಗಲೆಲ್ಲಾ ನಮ್ಮನ್ನು ಕರೆದು ‘ಏನು ಹದುಳವೇ’ ಎಂದು ಕೇಳಿ ನುಡಿಸಿಕೊಂಡು ಹೋಗುವವರು. ಹಾವೇರಿ ಒಂದು ಸಾಂಸ್ಕೃತಿಕ ನಗರಿಯೆಂದು ಗುರುತಿಸುವುದಕ್ಕೆ ಸಹಕಾರಿಯಾಗಿ ನಿಂತವರು. ನಾವು ಹಾವೇರಿಯಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರೂ ನಮ್ಮ ಜೊತೆಗೆ ಬಂದು ನಿಂತವರು.
ನಮ್ಮ ಪ್ರಕಟಣೆಗಳನ್ನು ಬಿಡುಗಡೆಗೊಳಿಸಬೇಕೆಂದಾಗ ಬಂದು ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿ ಉತ್ಸಾಹ ತುಂಬಿದವರು. ಕಳೆದ ೫೦ ವರ್ಷಗಳಿಂದ ಚಂದಾದಾರರಿಗೆ ನೆನಪಿನೋಲೆಗಳನ್ನು ಬರೆಯುತ್ತಾ ಸುಲಭವಾಗಿ ಅಲ್ಲದಿದ್ದರೂ ತಿಣಿಕ್ಯಾಡುತ್ತಲಾದರೂ ಸಾಹಿತ್ಯ ಪತ್ರಿಕೆಯಾದ ‘ಸಂಕ್ರಮಣ’ ವನ್ನು ಬದುಕಿಸಿಕೊಂಡು ಬರುವ ಮೂಲಕ ಗಟ್ಟಿ ಮತ್ತು ಜನಪರ ಸಾಹಿತ್ಯಕ್ಕೆ ನೆಲೆಯೊದಗಿಸಿ ಕೊಟ್ಟವರು. ಹತ್ತಿಮತ್ತೂರಿನ ಈ ಹಿರಿಯ ಗೆಳೆಯ ಹಾವೇರಿಯ ಮೂಲಕ ಧಾರವಾಡ ಸೇರಿ ಗೋಕಾಕರ ಸೆರಗಿನಲ್ಲಿ ಕಾವ್ಯ ಕೃಷಿ ಶುರು ಮಾಡಿದರೂ, ನಾಡು ನುಡಿಯ ರಕ್ಷಣೆಯ ವಿಷಯ ಬಂದಾಗ ವಿದ್ಯೆ ಮತ್ತು ಕಾವ್ಯದ ಗುರುವಾದ ಗೋಕಾಕರಿಗೆ ಕಪ್ಪು ನಿಶಾನೆ ತೋರಿಸಿ “ಗೋಕಾಕ ಗೋ ಬ್ಯಾಕ್” ಎಂದು ಘೋಷಣೆ ಕೂಗಿ ಧಾರವಾಡದಿಂದ ಬೆಂಗಳೂರಿನವರೆಗೆ ಕನ್ನಡದ ಸುಂಟರ ಗಾಳಿಯನ್ನು ಸೃಷ್ಟಿಸಿದವರು. ರಾಜಕೀಯ ನಾಯಕರು ಅಧಿಕಾರದಾಶೆಯಿಂದ ತುರ್ತು ಪರಿಸ್ಥಿತಿಯನ್ನು ಹೇರಿ ಅಡ್ಡ ದಾರಿ ಹಿಡಿದಾಗ ನಮಗೇಕೆ ಬೇಕೆಂದು ಮುಸುಕು ಹಾಕಿ ಮಲಗಿದ್ದ ಸಾಹಿತಿಗಳು ಮತ್ತು ಬುದ್ದಿ ಜೀವಿಗಳ ಮಧ್ಯದಿಂದ ಎದೆ ಸೆಟೆಸಿ ಎದ್ದು ಬಂದು ಜೈಲು ಸೇರಿ ವೀರಾಗ್ರಣಿ ಪಟ್ಟಕ್ಕೆ ಅರ್ಹರಾದವರು. ಅಪ್ಪಟ ಉತ್ತರ ಕರ್ನಾಟಕದ ಮುಗ್ಧ ನುಡಿಗೆ ಅರ ಹಚ್ಚಿ ಮೊನಚುಗೊಳಿಸಿದರೂ, ವ್ಯಂಗ್ಯದ ಲೇಪ ಸವರಿ ಕೇಳುಗರು ಕೇಳಬೇಕೆನ್ನವಂತೆ ಮಾತಾಡಿದವರು. ಓದುಗರು ಮತ್ತೆ ಮತ್ತೆ ಓದಬೇಕೆನ್ನುವಂತೆ ಬರೆದವರು. ಚಂಪಾ ಒಬ್ಬ ಕವಿಯೇ ಅಲ್ಲ, ನಾಟಕಕಾರನೇ ಅಲ್ಲವೆಂದು ಹೇಳಿ ತಮ್ಮನ್ನು ತಾವು ಎತ್ತರಕ್ಕೇರಿಸಿಕೊಳ್ಳ ಬಯಸುವ ಸಾಹಿತಿಗಳ ಘವನ್ನು ಆತನ ಪ್ರೀತಿಯೆ ಕೊಂದು ಬಿಡುತ್ತದೆ. ಪ್ರಶಸ್ತಿಗಳು ಪಾರಿತೋಷಕಗಳು ಅವರ ಹತ್ತಿರ ಬರಲಿಕ್ಕೆ ಹೆದರುತ್ತವೆ. ಚಂಪಾ ಈ ನಾಡಿನ ರಾಜಕಾರಣಿಗಳ ತಲೆಯಲ್ಲಿ ಕನ್ನಡದ ಮೇಲಿನ ಪ್ರೀತಿಯನ್ನು ಬಿತ್ತಬೇಕೆಂದು ಹದಗೊಳಿಸಲಿಕ್ಕೆ ಪ್ರಯತ್ನಿಸಿದವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಾಗಾಗಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಾದಿಗೇರಿದಾಗಾಗಲಿ ಆಡಳಿತ ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳದೆ ಅಲುಗಾಡದ ತಮಗಿಷ್ಟವಾದ ತಮ್ಮ ಹಳೆ ಬುದ್ಧಿಯ ಕುರ್ಚಿಯ ಮೇಲೆ ಕುಳಿತು ಆಡಳಿತ ನಡೆಯಿಸಿದವರೂ, ಸಮಕಾಲೀನ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಬದುಕಿದವರು. ನಮ್ಮ ಪ್ರದೇಶದ ಸಾಹಿತಿಯೆಂದು ಹೊಗಳಲಿಕ್ಕೆ ಹೋದರೆ ಅದೊಂದು ಪ್ರಮಾದವಾದೀತು. ಆತ ಕನ್ನಡದ ಮನುಷ್ಯ. ಹಾಗೆ ಆತನನ್ನು ವರ್ಣಿಸಿ ಹೊಗಳಲಿಕ್ಕೆ ಹೋದರೆ ಶಬ್ದಗಳು ಸೋತು ಬಿಟ್ಟಾವು. ಈ ಚಂಪಾ ಆಗ ಹೊಸರಿತ್ತಿಯಲ್ಲಿ ಜರುಗಲಿರುವ ಏಳನೆಯ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೆಂದು ಆಯ್ಕೆಯಾಗಿದ್ದಾರು . ಹೊಸರಿತ್ತಿ ಹಳ್ಳಿಕೇರಿ ಗುದ್ಲೆಪ್ಪನವರ ಹುಟ್ಟೂರು. ಚಂಪಾ ಗುದ್ಲೆಪ್ಪನವರ ಮಾರ್ಗದರ್ಶನದಲ್ಲಿ ಬೆಳೆದವರು. ಗುದ್ಲೆಪ್ಪನವರ ಮೇಲೆ ಅವರಿಗೆ ಎಲ್ಲಿಲ್ಲದ ಅಭಿಮಾನ. ಆದ್ದರಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅರ್ಥದಲ್ಲಿ ಗುದ್ಲೆಪ್ಪನವರನ್ನು ಗೌರವಿಸಿದಂತಾಗಿದೆ. ಆಗ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದ ಹೊಸ್ತಿಲಲ್ಲಿದ್ದ.
ಫೋಟೋ ಕೃಪೆ : google
ಚಂಪಾ ಅವರನ್ನು ಈ ಸ್ಥಾನಕ್ಕೆ ಬಹಳ ತಡ ಮಾಡಿ ಕರೆದುಕೊಂಡು ಬಂದಿದ್ದೇವು. ಅದೇನೆ ಇರಲಿ ಹೀಗೆ ಮಾಡುವುದರಿಂದ ಹಾವೇರಿಯ ಸಾಹಿತಿಗಳು ತಮ್ಮನ್ನು ತಾವು ಗೌರವಿಸಿಕೊಂಡತ್ತಾಗಿತ್ತು. ಇಷ್ಟು ದಿವಸಗಳವರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಯಾಕೆ ಮರೆತಿತ್ತು ಎಂದು ಕೇಳುವಂತಾಗಿದೆ. ಈ ಘಟನೆ ನಡೆದದ್ದು ೩೦ ವರ್ಷದ ಹಿಂದೆ. ಬಂಡಾಯ ಸಾಹಿತ್ಯ ಸಂಘಟನೆ ಆಗಿನ್ನೂ ಶೈಶವಾವಸ್ಥೆಯಲ್ಲಿದ್ದದ್ದು ನಮ್ಮನ್ನೆಲ್ಲಾ ತನ್ನ ತೆಕ್ಕಗೆ ತೆಗೆದುಕೊಂಡಿತ್ತು. ಕಾವ್ಯದ ಹುಚ್ಚು ಹಚ್ಚಿಕೊಂಡಿರುವ ಸತೀಶ ಕುಲಕರ್ಣಿ ಆಗಿನ್ನೂ ಬಿಸಿ ರಕ್ತದ ಹುಡುಗ. ವಾಣಿಜ್ಯ ನಗರಿ ಹಾವೇರಿಯಲ್ಲಿ ಸಾಹಿತ್ಯ ಪ್ರೀತಿಯನ್ನು ಬೆಳೆಯಿಸಬೇಕೆನ್ನುವ ಅಭಿಲಾಷೆಯನ್ನು ತಲೆಯಲ್ಲಿ ತುಂಬಿಕೊಂಡು ತಿರುಗ್ಯಾಡುವ ಹುಡುಗನಾಗಿದ್ದ. ಆತ ಆಗ ತಾನೇ ಹಾವೇರಿಗೆ ಬಂದು ಸಾಹಿತ್ಯ ಮಂಟಪದ ಗೂಟ ನೆಟ್ಟಿದ್ದರು. ತಳಿರು ತೋರಣವಿಲ್ಲದ ಆ ಮಂಟಪಕ್ಕೆ ಚಂಪಾ ಅವರನ್ನು ಅತಿಥಿಗಳನ್ನಾಗಿ ಬರಮಾಡಿಕೊಂಡು ಒಂದು ಸಾಹಿತ್ಯ ಸಂವಾದ ವೇರ್ಪಡಿಸಿದ್ದೆವು. ಅದು ನಡೆದದ್ದು ಬಸವೇಶ್ವರ ವ್ಯಾಯಾಮ ಶಾಲೆಯಲ್ಲಿ. ಹಾವೇರಿಗೆ ಹೊಸಬನಾಗಿದ್ದ ಸತೀಶ ಹತ್ತು ಹದಿನೈದು ಜನರನ್ನು ಕೂಡಿ ಹಾಕಲಿಕ್ಕೆ ಒದ್ದಾಡಿ ಹೋಗಿದ್ದ. ಅದೊಂದು ಸಾಹಿತ್ಯ ಸಂವಾದ. ಅರ್ಧ ಗಂಟೆಯವರೆಗೆ ಮಾತಾಡಿದ ಚಂಪಾ “ಯಾರಾದರೂ ಏನಾದರೂ ಕೇಳ ಬೇಕೆಂದ್ರ ಕೇಳ್ರಿ” ಎಂದು ಹೇಳಿ ಸಂವಾದಕ್ಕೆ ಎಡೆ ಮಾಡಿ ಕೊಟ್ಟರು. ಒಂದೆರಡು ಸಾಹಿತ್ಯಿಕ ಪ್ರಶ್ನೆಗಳಾದ ಮೇಲೆ ಹಿಂದಿನ ಕುರ್ಚಿಯಿಂದ ಒಬ್ಬರು ಎದ್ದು ನಿಂತರು. ಅವರಿಗೆ ಎದ್ದು ನಿಲ್ಲಲಿಕ್ಕೂ ಬರುತ್ತಿರಲಿಲ್ಲ. ಅಷ್ಟು ಕುಡಿದು ಬಂದಿದ್ದರು. ಅಕ್ಕ ಪಕ್ಕದಲ್ಲಿದ್ದವರು ಅವರನ್ನು ಸುಮ್ಮನೆ ಕೂಡ್ರಿಸಲಿಕ್ಕೆ ಪ್ರಯತ್ನಸಿದರು. ಆದರೆ ಚಂಪಾ ಅವರು “ಅವರು ಏನು ಪ್ರಶ್ನೆ ಕೇಳುತಾರ ಕೇಳಲಿ ಬಿಡ್ರಿ” ಎಂದರು. ಅವರ ಪ್ರಶ್ನೆ ” ನಾರ್ಮಲಿ ಹೇಳಬೇಕಂದರ ಬಂಡಾಯ ಸಾಹಿತಿಗಳಾದ ನೀವು ಏನು ಕಸರತ್ ಮಾಡತೀರಿ.” ಎಂಬುದಾಗಿತ್ತು.”ನಾವು ಬಂಡಾಯದವರೆಲ್ಲಾ ನಾರ್ಮಲ್ ಆಗಿದ್ದೇವೆ” ಎಂದು ಚಂಪಾ ಹೇಳಿದರೆ; “ಹೌದು ನೀವು ನಾರ್ಮಲ್ಲಾಗಿದ್ರ ನಾನು ಅಬನಾರ್ಮಲ್ಲ ಆಗಿದ್ದೀನಿ” ಎಂದರು. ಆ ಸುರಾ ಸಾಮ್ರಾಜ್ಯದ ಕನ್ನಡ ಸಾಹಿತಿ ಹಾಗೆ ಅವರು ಹೇಳಿದ ಕೂಡಲೆ ಕುಳಿತವರೆಲ್ಲಾ ಜೋರಾಗಿ ನಗಲಿಕ್ಕೆ ಶುರು ಮಾಡಿದರು. ಎಲ್ಲರೂ ನಕ್ಕದ್ದು ಕೇಳಿ ಅವರಿಗೆ ಸಿಟ್ಟು ಬಂತು. ಜೋರಾಗಿ ಕೂಗಲಿಕ್ಕೆ ಶುರು ಮಾಡಿದರು.ಸತೀಶ ಕುಲಕರ್ಣಿ ಅವರ ಹತ್ತಿರ ಹೋಗಿ ಅವರನ್ನು ಸುಮ್ಮನೆ ಕೂಡ್ರಿಸಲಿಕ್ಕೆ ಪ್ರಯತ್ನಿಸಿದರು. ಅವರು ಸುಮ್ಮನಾಗದೆ ಜೋಲಿ ಹೊಡೆಯುತ್ತಾ ತಮ್ಮದೆ ಭಾಷೆಯಲ್ಲಿ ಏನೇನೋ ಹೇಳುತ್ತಲೇ ಇದ್ದರು. ಅದಕ್ಕೆ ಚಂಪಾ “ ಇರ್ಲಿ ಬಿಡ್ರಿ ಸತೀಶ ಅವರಿಗೆ ನಾನು ಉತ್ತರ ಕೊಡ್ತೀನಿ” ಎಂದು ಹೇಳುತ್ತಾ; “ನೋಡ್ರಿ ನೀವು ದಿನದ ಇಪ್ಪತ್ತುನಾಲ್ಕು ತಾಸೂ ಅಬ್ನಾರ್ಮಲ್ ಆಗರ‍್ತೀರಿ. ಆದರೆ ನಾವು ಸಾಯಂಕಾಲ ಒಂದೆರಡು ಗಂಟೆ ಮಾತ್ರ ಅಬ್ನಾರ್ಮಲ್ಲಾಗಿರತೀವಿ. ಆವಾಗ ಬಂದ್ರ ನಮ್ಮ ನಿಮ್ಮ ಸಾಹಿತ್ಯ ಸಂವಾದಕ್ಕ ಮೆರಗು ಬರತೈತೆ” ಎಂದು ಹೇಳುತ್ತಿದ್ದಂತೆಯೇ ಆ ದೇವೇಂದ್ರ ಎದ್ದು ನಿಂತು “ಹಂಗ ಮಾಡ್ತೀನಿ. ಸಾಯಂಕಾಲ ಬಂದು ನಿಮ್ಮನ್ನು ನೋಡಿಕೆಂತೀನಿ” ಎಂದು ಹೇಳುತ್ತಾ ಎದ್ದು ನಡೆದರು. ಕೊನೆಯಲ್ಲಿ ಕುಳಿತ ಒಬ್ಬ ಹುಡುಗ “ಏ ! ಚಹ ಕುಡ್ದು ಹೋಗ್ರಿ” ಎಂದ. “ ಚಹ ಸಂಜಿ ಮುಂದ ಕುಡಿತೀನಿ ಅವರ ಕೂಡ” ಎಂದು ಹೇಳುತ್ತಾ ಹೊರಟು ಹೋಗಿದ್ದರು.
ಫೋಟೋ ಕೃಪೆ : google
ಇಂಥ ಹಾವೇರಿಯ ನೇರ ನುಡಿಯ ಪ್ರತಿಭೆ ‘ಚಂಪಾ’ ಎಂಬ ನಕ್ಷತ್ರ ಜನೆವರಿ ೨೦೨೨ ರಲ್ಲಿ ಕಣ್ಮರೆಯಾಗಿ ಹೋದರು.. ಐವ್ವತ್ತು ವರ್ಷದ ನನ್ನ ಅವರ ಒಡನಾಟ ಅಂದಿಗೆ ನಿಂತು ಹೋಯಿತು. ಅವರೇ ಕಾವ್ಯ ಕಟ್ಟಿ ಹೇಳಿ ಹೋಗಿದ್ದ ಈ ಮಾತುಗಳು ನೆನಪಿನ ಹಗೆಯಿಂದ ಮೇಲೆದ್ದು ಬಂದವು.
” ಸತ್ತವರು ಎಲ್ಲಿಗೆ ಹೋಗುತ್ತಾರೆ
ಅವರು ಎಲ್ಲಿಗೂ ಹೋಗುವುದಿಲ್ಲ,
ಬದುಕಿ ಉಳಿದವರು ನೆನಪಿನ ಗುದ್ದಿನಲ್ಲಿ ಬದುಕಿರುತ್ತಾರೆ’
ಎಂದು ಆ ನಮ್ಮ ಚಂಪಾ ಹೇಳಿದ್ದು ಬಹುವಾಗಿ ಯಾವಾಗಲು ಕಾಡುತ್ತೆ.
ಹಾವೇರಿಯ ಮ್ಯಾಲೆ ಹಾಯ್ದು ಹೋಗುವಾಗೊಮ್ಮೆ ಒಂದು ಫೋನು ಮಾಡಿ “ಆಯ್.ಬಿ ಗೆ ಬರ್ರಿ ಭೇಟಿಯಾಗಿ ಒಂಚೂರು ಮಾತಾಡಾಣ” ಎಂದು ಕರೆದು ನುಡಿಸಿಕೊಂಡು ಹೋಗುತ್ತಿದ್ದ ಆ ಗೆಳೆಯ ಈಗ ಬರಿ ನೆನಪು ಮಾತ್ರ. ನುಡಿದಂತೆ ನಡೆದು ತಾನು ಪಡೆದ ಬಸವ ಪ್ರಶಸ್ತಿಗೆ ನ್ಯಾಯ ಒದಗಿಸಿ ಕೊಟ್ಟ ಗೆಳೆಯ. ನಿತ್ಯ ಆತನನ್ನು ನೆನಪಿಸಿ ಕೊಡುವ ಆ ಮುನಸಿಪಲ್ ಹೈಸ್ಕೂಲು, ಆತನ ಸಾವಿರಾರು ಜನ ಗೆಳೆಯರಲ್ಲಿ ಇಲ್ಲಿದ್ದಾರೆ . ಅವರ ಕುಟುಂಬದವರಿಗೆ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ. ನನ್ನನ್ನು ಕೈ ಹಿಡಿದು ನಡೆಯಿಸಿದ ಗೆಳೆಯನಿಗೆ ನನ್ನ ನಮನಗಳು.
“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಹಿಂದಿನ ಸಂಚಿಕೆಗಳು :
- ಕೊರಗಲ್ಲ ವಿರೂಪಾಕ್ಷಪ್ಪ – ನಿವೃತ್ತ ಗಣಿತ ಪ್ರಾಧ್ಯಾಪಕ. ಗ್ರಾಮೀಣ ಭಾಷೆಯಲ್ಲಿ ಕಥೆ ಕಟ್ಟುವ ಜಾಣ ಕಥೆಗಾರರು, ಹಾವೇರಿ.