‘ನಲಿ ಕಲಿ’ ಹೆಮ್ಮೆಯ ಶಿಕ್ಷಕಿ ರೇವತಿ ಗೌಡ

ಸ್ವಾತಂತ್ರ್ಯೋತ್ಸವ ದಿನದಂದು ನಮ್ಮ ನಾಡು, ನುಡಿಗೆ ಶ್ರಮಿಸಿದ ಶಿಕ್ಷಕಿ ರೇವತಿ ಗೌಡ ಅವರು ಹೆಮ್ಮೆಯ ಶಿಕ್ಷಕಿ . ಅವರ ಅಕ್ಷರ ಪ್ರೀತಿಯ ಕುರಿತು ರಾಘುವೇಂದ್ರ ಕೃಷ್ಣಮೂರ್ತಿ ಅವರು ಬರೆದ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…

ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು, ಬಾಲ್ಯದಲ್ಲಿ ಅಮ್ಮನ ಅಕ್ಕರೆಯಲ್ಲಿ ಕಲಿಕೆ ಶುರುವಾಗುತ್ತದೆ. ತಪ್ಪುಗಳನ್ನು ಅಮ್ಮ ತಿದ್ದಿ ತೀಡುತ್ತಾಳೆ. ಬಾಲ್ಯದ ಚಿನ್ನಾಟಗಳು ಮುಗಿದ ಮೇಲೆ ಬದುಕಿನ ಪಾಠವನ್ನು ಹೇಳಿಕೊಡುವ ಇನ್ನೊಂದು ದೇಗುಲವೆಂದರೆ ಅದು ಶಾಲೆ. ಅಲ್ಲಿ ಗುರುಗಳೇ ನಮ್ಮ ಮಾರ್ಗದರ್ಶಕರಾಗುತ್ತಾರೆ.  ಬದುಕಿನ ಪಾಠಗಳನ್ನು ಹಂತ ಹಂತವಾಗಿ ಗುರುಗಳು ಹೇಳಿಕೊಡುತ್ತಾ, ಮಕ್ಕಳು ಶಾಲೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ, ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಶಾಲೆಯ ಪಾತ್ರ ದೊಡ್ಡದಿರುತ್ತದೆ. ಬೆನ್ನ ಹಿಂದೆ ಉತ್ತಮ ಗುರುವಿರಬೇಕು ಆಗಲೇ ಇಟ್ಟ ಗುರಿ ತಪ್ಪಲಾರದು. ಮಕ್ಕಳನ್ನು ತಿದ್ದುವುದರಲ್ಲಿ ಶಿಕ್ಷಕರ ಪಾತ್ರವು ಕೂಡಾ ಮುಖ್ಯವಾಗಿರುತ್ತದೆ .

ಆದರ್ಶ ಗುರುಗಳೆಂದೇ ಖ್ಯಾತರಾದ, ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿ ನಮ್ಮ ರೇವತಿ ಗೌಡ ಟೀಚರ್. ಮಲೆನಾಡಿನಲ್ಲಿ ಹುಟ್ಟಿ ಬೆಳೆದು ರಾಯಚೂರಿನ ಉರಿ ಬಿಸಿಲಿನಲ್ಲಿ ಧಗೆಯೆನ್ನದೆ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಇಂದಿನ ಮಕ್ಕಳನ್ನು ಭವಿಷ್ಯತ್ತಿನ ಆಸ್ತಿಗಳನ್ನಾಗಿ ಮಾಡಬೇಕು ಅನ್ನುವ ಹಠ ಅವರಲ್ಲಿದೆ, ಮುದ್ದು ಮಕ್ಕಳಲ್ಲಿ ಶಿಸ್ತು, ಶಾಂತಿ, ದೇಶಾಭಿಮಾನ, ಸಾಮಾಜಿಕ ಕಾಳಜಿ, ಸುಸಂಸ್ಕೃತ ವಿದ್ಯೆಯನ್ನು ಬೀಜ ಬಿತ್ತುತ್ತಿದ್ದಾರೆ.

ಶಾಲಾ ಮಕ್ಕಳಿಗೆ ತಾಯಿಯ ಪ್ರೀತಿ ನೀಡಿ ತಮ್ಮ ಬದುಕಿನ ಅಮೂಲ್ಯ ಸಮಯವನ್ನು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮೀಸಲಿಟ್ಟು ದುಡಿಯುತ್ತಿರುವ ವಿಭಿನ್ನ ಯೋಚನೆಯನ್ನು ರೇವತಿಯವರು ಹೊಂದಿದ್ದಾರೆ.

ರಾಯಚೂರು ತಾಲೂಕಿನ ಪಲವಲದೊಡ್ಡಿ ಶಾಲೆಗೆ ಸಹ ಶಿಕ್ಷಕಿಯಾಗಿ ಒಂದರಿಂದ ಮೂರನೆಯ ತರಗತಿಯ ಮಕ್ಕಳಿಗೆ ಸತತವಾಗಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ಚಂದ್ರಬಂಡ ಕ್ಲಸ್ಟರಿನ ಉತ್ತಮ ‘ನಲಿ ಕಲಿ’ ಶಾಲೆಯಾಗಿ ಹೊರ ಹೊಮ್ಮುವಲ್ಲಿ ಅವರ ಪಾತ್ರ ದೊಡ್ಡದು. ಸಹ ಶಿಕ್ಷಕಿಯಾಗಿ ಬಡ್ತಿ ಪಡೆದು ಆ ಶಾಲೆಯಿಂದ ರಾಯಚೂರಿನ ಗಾಜರಹಾಳ ಶಾಲೆಗೆ ನೇಮಕವಾದರು, ಈ ಶಾಲೆ ಗಾಜರಹಾಳ ಆಂಧ್ರಪ್ರದೇಶದ ಗಡಿಭಾಗದ ರಾಯಚೂರು ತಾಲೂಕಿನಿಂದ 25 ಕಿಮಿ ದೂರವಿರುವ ತೆಲುಗು ಮಾತೃ ಭಾಷೆಯಾಗಿರುವ ಪುಟ್ಟದೊಂದು ಗ್ರಾಮ. ಇಲ್ಲಿ 1 ರಿಂದ 7 ನೇ ತರಗತಿವರೆಗಿದ್ದು, ಸುಮಾರು 200 ವಿದ್ಯಾರ್ಥಿಗಳಿದ್ದಾರೆ.

ಶಿಕ್ಷಕಿ ರೇವತಿ ಅವರಿಗೆ ಚಿಕ್ಕಂದಿನಿಂದ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ, ಗೌರವ. ಗಡಿ ಭಾಗದಲ್ಲಿರುವ ಕಾರಣಕ್ಕೆ ಬಹುತೇಕ ಮಕ್ಕಳು ಮತ್ತು ಅಲ್ಲಿಯ ಜನ ತೆಲುಗು ಮಾತಾಡುತ್ತಿದ್ದರು. ಹೀಗಾದರೆ ಕನ್ನಡ ಭಾಷೆ ಅಳಿಸಿ ಹೋಗುತ್ತದೆ ಎನ್ನುವ ದುಗುಡ ಅವರಲ್ಲಿದ್ದ ಕಾರಣಕ್ಕೆ ಮಕ್ಕಳಿಗೆ ಶಿಕ್ಷೆಯ ರೂಪದಲ್ಲಿ ಶಾಲೆಯಲ್ಲಿ ತೆಲುಗು ಮಾತನಾಡಿದರೆ ದಂಡವಾಗಿ ಐದು ರೂಪಾಯಿ ವಿಧಿಸುತ್ತಿದ್ದರು. ಕೆರೆಯ ನೀರನ್ನು ಕೆರೆಗೆ ಚಲ್ಲಿಯಂತೆ ಬಂದ ಆ ಐದು ರೂಪಾಯಿ ಸಂಗ್ರಹವನ್ನು ಮತ್ತೆ ಶಾಲೆಯ ಉಪಯುಕ್ತ ವಸ್ತುವನ್ನು ಖರೀದಿಸಲು ಬಳಸುತ್ತಿದ್ದರು.

ಸುಮಾರು ೯೦ ವಿದ್ಯಾರ್ಥಿಗಳಿದ್ದ ಒಂದೇ ಕೋಣೆಯನ್ನು ಎರಡು ವಿಭಾಗಗಳಾಗಿ ವಿಭಾಗಿಸಿ, 6 ಮತ್ತು 7 ನೇ ತರಗತಿಯ ಮಕ್ಕಳಿಗೆ ಅಚ್ಚು ಮೆಚ್ಚಿನ ಕನ್ನಡ ಶಿಕ್ಷಕಿಯಾಗಿ, ಮಕ್ಕಳು 8 ನೇ ತರಗತಿಗೆ ಹೋಗುವುದರೊಳಗೆ ಕನ್ನಡವನ್ನು ಅಚ್ಚುಕಟ್ಟಾಗಿ ಅವರು ಓದು- ಬರಹ ಮಾಡುವಂತೆ ಮಾಡಿದ ಕೀರ್ತಿ ಅವರದ್ದು.

ಮುಖ್ಯ ಶಿಕ್ಷಕರ ಸಹಕಾರದಿಂದ ನಲಿ- ಕಲಿ ತರಗತಿಗೆ ಅಗತ್ಯವಾದ ಎಲ್ಲಾ ಭೌತಿಕ ಸೌಕರ್ಯಗಳನ್ನು ಒದಗಿಸಿದ್ದಾರೆ.  ಉತ್ತಮ ನಲಿಕಲಿ ಶಾಲೆಗಳಲ್ಲಿ ಈ ಶಾಲೆಯು ಒಂದಾಗಿದ್ದು  ಒಂದಾಗುವಲ್ಲಿ ಅವರ ಪಾತ್ರ ದೊಡ್ಡದು. ಇದಕ್ಕೆ ತಮ್ಮ ಶಾಲೆಯ ಸಹಶಿಕ್ಷಕರ ಸಹಕಾರವೂ ಕಾರಣವೆಂದು ಹೇಳಿಕೊಳ್ಳುತ್ತಾರೆ.

ಕೌಟುಂಬಿಕ ಹಿನ್ನೆಲೆ :

ಕೃಷ್ಣಮೂರ್ತಿ ಗೌಡ ಹಾಗೂ ರತ್ನಮ್ಮ ದಂಪತಿಗಳಿಗೆ ದ್ವಿತೀಯ ಪುತ್ರಿಯಾಗಿ ಜನಿಸಿದ ಅವರಿಗೆ ಸೀತಾರಾಮ ಎನ್ನುವ ಒಬ್ಬ ಸಹೋದರ ಇದ್ದಾರೆ. ತೀರ್ಥಹಳ್ಳಿಯ ಬೆಟ್ಟಮಕ್ಕಿ ವಾಸಿಗಳಾದ ಮಾಜಿ ಸೈನಿಕ ಚಂದ್ರಪ್ಪ ಹಾಗೂ ಪ್ರೇಮ ಇವರ ಪ್ರಥಮ ಪುತ್ರ ದೀಪಕ್ ಅವರನ್ನು ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇತ್ತೀಚಿಗೆ ಹುಟ್ಟೂರಿನ ಸಮೀಪದ’ ಕೋಗಿಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿದೆ.  ಕೋಗಿಲೆ ತಟ್ಟಿಕೇವಿ ಭಾಗದ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸದಾ ಅವರ ಹೆಜ್ಜೆ ಮುಂದಿದೆ.

This slideshow requires JavaScript.

ಶಿಕ್ಷಣ :

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಹುಟ್ಟೂರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶರಾವತಿ ನದಿಯ ಹುಟ್ಟೂರಾದ ಅಂಬುತೀರ್ಥದ ತಪ್ಪಲಿನ ನೊಣಬೂರಿನಲ್ಲಿ ಹಾಗೂ ಹೊಸನಗರ ತಾಲೂಕಿನ ನಗರ ಎಂಬಲ್ಲಿನ ಖಾಸಗಿ ಶಾಲೆಯಲ್ಲಿ ಮುಗಿಸಿ,ಪದವಿಪೂರ್ವ ಶಿಕ್ಷಣವನ್ನು ತೀರ್ಥಹಳ್ಳಿಯ ತೀರ್ಥಹಳ್ಳಿ ಜೂನಿಯರ್ ಕಾಲೇಜಿನಲ್ಲಿ ಪೂರ್ಣಗೊಳಿಸಿ ತಮ್ಮ ಡಿಇಡಿ ಶಿಕ್ಷಣವನ್ನು ರಿಪ್ಪನ್ ಪೇಟೆಯ ಶ್ರೀಗುರುನಾರಾಯಣ ಡಿ.ಇಡಿ ಕಾಲೇಜಿನಲ್ಲಿ ಮುಗಿಸಿರುವುದಲ್ಲದೆ ಪ್ರಥಮ ವರ್ಷವನ್ನು ಪ್ರಥಮ ಸ್ಥಾನದೊಂದಿಗೆ ಮುಗಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಹಾಗೂ ಪಿಯುಸಿಯಲ್ಲಿ ಎರಡು ವರ್ಷ ಹಾಗೂ 9 ನೇ ತರಗತಿಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.ಇವರಿಗೆ ಬಾಲ್ಯದಿಂದ ಓದಿನಲ್ಲಿ ತುಂಬಾ ಆಸಕ್ತಿಯಿದ್ದು ಪಠ್ಯ ಹಾಗೂ ಪಠ್ಯೇತರ ಎರಡೂ ವಿಷಯಗಳಲ್ಲಿ ಶಿಕ್ಷಕರ ಮೆಚ್ಚಿಗೆಗೆ ಪಾತ್ರವಾಗುತ್ತಿದ್ದರು.ಅಲ್ಲದೆ ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ A ವಿಭಾಗಕ್ಕೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. 2008ರಿಂದ 2010ರವರೆಗೆ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಐಚ್ಛಿಕ ವಿಷಯದೊಂದಿಗೆ ಬಿ.ಎ ಪದವಿ ಪಡೆದು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ 2011-12ರಲ್ಲಿ ಎಂ.ಎ ಪದವೀಧರರಾಗಿದ್ದಾರೆ.

ವೃತ್ತಿ ಜೀವನ :

2008ಫೆಬ್ರುವರಿ 28 ರಲ್ಲಿ ರಾಯಚೂರು ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಲವಲದೊಡ್ಡಿಯಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿ ಮಕ್ಕಳ ನೆಚ್ಚಿನ ಶಿಕ್ಷಕಿಯಾಗಿ ಮೂರು ವರ್ಷ ಉತ್ತಮ ಸೇವೆ ಮಾಡಿ. 2011 ರಲ್ಲಿ ಹೆಚ್ಚುವರಿ ಶಿಕ್ಷಕಿಯಾಗಿ ಅದೇ ತಾಲೂಕಿನ ಗಾಜರಹಾಳ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ತಮ್ಮ ವೃತ್ತಿ ಬದುಕು ಆರಂಭಿದರು. ತಮ್ಮ ಶಾಲೆಯನ್ನು ಆ ಕ್ಲಸ್ಟರಿನ ಉತ್ತಮ ಶಾಲೆಯನ್ನಾಗಿಸಿ ಅಧಿಕಾರಿಗಳ ಮೆಚ್ಚುಗೆ ಪಡೆದು, ಪ್ರಸ್ತುತ ರಾಯಚೂರು ತಾಲೂಕಿನ ನಲಿ ಕಲಿ ಕನ್ನಡದ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ಶಿಕ್ಷಕರಿಗೆ ನಲಿ ಕಲಿಯ ಮಾರ್ಗದರ್ಶಕರಾಗಿದ್ದಾರೆ. ಅಲ್ಲದೆ ಶಾಲಾ ಸಿದ್ದತಾ ಕಾರ್ಯಕ್ರಮದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದು, ತಮಗೆ ಅವಕಾಶ ನೀಡಿದ ರಾಜ್ಯ ನಲಿ ಕಲಿ ಸಂಪನ್ಮೂಲ ವ್ಯಕ್ತಿಯಾದ ಆರ್.ಡಿ ರವೀಂದ್ರ ಅವರು ತಮ್ಮ ವೃತ್ತಿ ಜೀವನದ ಮಾರ್ಗದರ್ಶಕರೆಂದು ಕೃತಜ್ಞತೆಯಿಂದ ಹೇಳುತ್ತಾರೆ.

2018-19 ರಲ್ಲಿ ತಮ್ಮ ಶಾಲೆ ರಾಜ್ಯದ ಉತ್ತಮ ನಲಿಕಲಿ ಶಾಲೆಗಳ ಪಟ್ಟಿ ಸೇರಿ ಐದು ಸಾವಿರ ರೂಪಾಯಿ ರೂಪಾಯಿ ಬಹುಮಾನ ಪಡೆಯುವಲ್ಲಿ ಇವರ ಶ್ರಮ ಅಧಿಕವಾಗಿದೆ. ಪ್ರಸ್ತುತ ಶಾಲೆಯು ತೆಲುಗು ಭಾಷೆ ಪ್ರಭಾವಿತ ಗಡಿನಾಡ ಗ್ರಾಮದಲ್ಲಿದ್ದು ಮಕ್ಕಳಿಗೆ ತೆಲುಗು ಮರೆಸಿ… ಕನ್ನಡ ಕಲಿಸಿ… ಬೆಳೆಸುವಲ್ಲಿ ಸಾಕಷ್ಟು ಯೋಜನೆ ರೂಪಿಸಿಕೊಂಡಿದ್ದಾರೆ. 2023ಆಗಸ್ಟ್ 8 ರಂದು ನಡೆದ ಶಿಕ್ಷಕರ ವರ್ಗಾವಣೆಯಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ‘ಸರ್ಕಾರೀ ಕಿರಿಯ ಪ್ರಾಥಮಿಕ ಶಾಲೆ ಕೋಗಿಲೆ’ ಎಂಬ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಮಲೆನಾಡಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ನೀಡಿ ದೇಶದ ಭವ್ಯ ಪ್ರಜೆಗಳಾಗಿಸುವ ಕನಸು ಹೊತ್ತಿದ್ದಾರೆ.

ಇವರ ಹುಟ್ಟೂರಿನ ಶರಾವತಿ ನದಿ ಹೇಗೆ ಜೋಗದ ಸಿರಿಯಾಗಿ ನಾಡಿಗೆ ಬೆಳಕು ನೀಡಿ ಜನರ ಬಾಳು ಬೆಳಗುವಳೊ ಹಾಗೆ ಇವರು ತಮ್ಮ ವೃತ್ತಿ ಬದುಕಿನಲ್ಲಿ ಮುಂದೆಯೂ ಕೂಡ ಮಲೆನಾಡಿನ ಅನೇಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಬಾಳಿಗೆ ಬೆಳಕಾಗಲಿ.


  • ರಾಘವೇಂದ್ರ ಕೃಷ್ಣಮೂರ್ತಿ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading