ಮಲಪ್ರಭಾ ನದಿಯು ಬಯಲು ಸೀಮೆಯ ಭೂಮಿಗಳಿಗೆ ಮತ್ತು ಅಲ್ಲಿಯ ಜನರಿಗೆ ಉಸಿರಾಗಿದೆ. ಜೊತೆಗೆ ವಿವಿಧ ರೀತಿಯ ಪಕ್ಷಿಗಳು ಕಾಲಮಾನಕ್ಕೆ ತಕ್ಕಂತೆ ವಲಸೆ ಬಂದು ನೆಲೆಸಿ ಋತುಮಾನದ ನಂತರ ತಮ್ಮ ನೆಲೆಗಳಿಗೆ ಹಾರಿ ಹೋಗುತ್ತವೆ. ಮಲಪ್ರಭಾ ನದಿಯ ಕುರಿತು ಅವಿನಾಶ್ ಸೆರೆಮನಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ಸುತ್ತಲೂ ಮೈ ಚಾಚಿ ನಿಂತಿಹ ಉದಕ, ಹಸಿರಿನಲ್ಲಿಯೇ ಚೆಲುವ ಸೂಸುವ ಹೊಲಗಳು, ಹಕ್ಕಿಗಳ ಚಿಲಿಪಿಲಿ ನಾದದ ಸುಸ್ವರ, ಮೀನಿಗಾಗಿ ಬಲೆ ಬೀಸುವ ಮೀನುಗಾರರು, ಸುತ್ತಮುತ್ತಲಿನ ರೈತರ ಪಾಲಿನ ಜೀವದಾತೆಯಾಗಿ ಮೈದುಂಬಿಕೊಂಡು ಹುಬ್ಬಳ್ಳಿ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಜನರ ದಾಹವನ್ನು ನೀಗಿಸುವ ಜೀವನಾಡಿ. ಬಯಲುಸೀಮೆಯ ಭೂಮಿಗಳಿಗೆ ಉಸಿರಾಗುತ ಜನ ಜೀವನಕೆ ಬೆನ್ನೆಲುಬಾಗಿರುವ ಗಂಗಾ ಮಾತೆಯ ಕೂಸೇ ಮಲಪ್ರಭಾ ನದಿ.
ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಉಗಮಿಸಿ ಸವಿಸ್ತಾರವಾಗಿ ಎಲ್ಲ ದಿಕ್ಕಿಗೂ ತನ್ನ ವಿಸ್ತಾರತೆಯನು ಚಾಚಿದೆ. ಬರ ಬರುತ್ತಾ ಈ ನದಿಯು ತನ್ನದೆಯಾದ ಸ್ಥಿಮಿತತೆಯನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸಿತು. ಇದರ ಚಿತ್ರಣವೇ ಬದಲಾಗುತ್ತಾ ಬಂತು.ನೂರಾರು ಕಿಲೋಮೀಟರ್ ವರೆಗೆ ಹರಿಯುತ್ತಿದ್ದ ಮಲಪ್ರಭೆ ಒತ್ತುವರಿಯ ನೆಪದಲ್ಲಿ ಕ್ರಮೇಣ ಕಿರಿದಾಗಿದೆ.ಅಲ್ಲದೆ ಈ ನದಿಯನು ರಕ್ಷಿಸುವಲ್ಲಿ ಜನರ ಪಾತ್ರವು ಬಹುಮುಖ್ಯವಾಗಿದ್ದರಿಂದ ಇದನ್ನು ಪುನಶ್ಚೇತನಗೊಳಿಸಿ ಉಳಿವಿಗಾಗಿ ಹೋರಾಟವನ್ನು ನಡೆಸಿದ್ದುಂಟು.
ರೈತರ ಬಾಳನು ಹಸಿನಾಗಿಸುವ ಮತ್ತು ಬೆಳೆಗಳಿಗೆ ಸದಾ ವರದಾನವಾಗುತ ಜೀವನಾಡಿಯಾಗಿದೆ. ಅಲ್ಲದೆ ನವಿಲುಗಳು ಕೂಡ ಜಮೀನು ಗದ್ದೆಗಳಲ್ಲಿ ಆಗಾಗ ಕಂಡು ಬರುವುದರ ಮೂಲಕ ನವಿಲಿನ ಸಂತತಿಯ ಉಳಿವಿಗೂ ನದಿಯ ಪಾತ್ರ ಅಗಾಧವಾಗಿದೆ. ಅಲ್ಲದೆ ವಿವಿಧ ರೀತಿಯ ಪಕ್ಷಿಗಳು ಕಾಲಮಾನಕ್ಕೆ ತಕ್ಕಂತೆ ವಲಸೆ ಬಂದು ನೆಲೆಸಿ ಋತುಮಾನದ ನಂತರ ತಮ್ಮ ನೆಲೆಗಳಿಗೆ ಹಾರಿ ಹೋಗುತ್ತವೆ. ಅಲ್ಲದೆ ಇಲ್ಲಿಯ ಫಲವತ್ತಾದ ಮಣ್ಣು ಕೂಡ ಬೆಳೆಗಳಿಗೆ ಯೋಗ್ಯವಾಗಿದ್ದು ಬೇಸಿಗೆಯಲ್ಲಿ ನದಿಯ ಸುತ್ತಲಿನ ರೈತರು ಬೆಳೆ ಬೆಳೆಯುವರು. ಮಳೆಗಾಲದಲ್ಲಿ ನದಿಯು ಸಂಪೂರ್ಣ ಭರ್ತಿಯಾಗುವುದರಿಂದ ಹೊಲಗಳು ಮುಳುಗಡೆಯಾಗಿ ಹೋಗುತ್ತವೆ.
ಇಲ್ಲಿಯ ಜನರು ಕೂಡ ಸಂಸ್ಕೃತಿ, ಸಂಸ್ಕಾರವಂತರಾಗಿರುವುದರಿಂದ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಮಲಪ್ರಭೆಯ ಜಾತ್ರೆಯನ್ನು ಮಾಡಿ ಗಂಗೆಯ ಕೃಪೆಗೆ ಪಾತ್ರರಾಗುತ್ತಾರೆ. ಬೇರೆ ಬೇರೆ ಹಳ್ಳಿಗಳಿಂದ ಜನರು ಬುತ್ತಿಯನ್ನು ಕಟ್ಟಿಕೊಂಡು ಬಂದು ನಿರ್ಮಲ, ಪ್ರಶಾಂತವಾದ ನದಿ ತಟದ ಮೇಲೆ ಕುಳಿತು ಉಲ್ಲಾಸ ಸಂತಸದಿಂದ ಊಟವನ್ನು ಸವೆದು ಮನಸನ್ನು ಹಗುರವಾಗಿಸಿಕೊಂಡು ಸಂತಸದಲ್ಲಿ ಮಿಂದೇಳುತ್ತಾರೆ.ಬೇಸಿಗೆಯಲ್ಲಿ ಬಿಸಿಲಿನ ತಾಪವನ್ನು ನೀಗಿಸಿಕೊಳ್ಳಲು ಈಜುಗಾರರು ಈಜಾಡಿ ಮೋಜು ಮಸ್ತಿ ಮಾಡುತ್ತಾರೆ. ಆದರೆ ನದಿಯು ಆಳವಾಗಿದ್ದರಿಂದ ಬಹಳ ಎಚ್ಚರಿಕೆಯಿಂದ ಇರಲೇಬೇಕು. ಪ್ರತಿ ವರ್ಷ ಸಂಕ್ರಾಂತಿಯಲ್ಲಿ ಜಾತ್ರೆ ಆಗುವುದರಿಂದ ಬಹಳಷ್ಟು ಜನಜಂಗುಳಿ ಇರುತ್ತದೆ. ಜನರು ಕೂಡ ಭಯ ಭಕ್ತಿಯಿಂದ ಪೂಜೆ ಪುನಸ್ಕಾರಗಳನ್ನು ಮಾಡಿ ನಮ್ಮೆಲ್ಲರ ಜೀವನಾಡಿಯಾಗಿ ಸದಾ ನಮ್ಮ ಬೆಳೆಗಳಿಗೆ ರಕ್ಷಕಿಯಾಗಿದ್ದು ನಮ್ಮೆಲ್ಲರ ದಾಹವನ್ನು ನೀಗಿಸು ಮಲಪ್ರಭೆ ಎಂದು ಕೇಳಿಕೊಳ್ಳುತ್ತಾರೆ. ಹಾಗಾಗಿ ಮಲಪ್ರಭಾ ನದಿಗೆ ವಿಶಿಷ್ಟವಾದ ಪೂಜ್ಯನೀಯ ಸ್ಥಾನಮಾನವಿದೆ. ಹಾಗೂ ಮಳೆಗಾಲದ ಕೊನೆಗೆ ನದಿಯು ಪೂರ್ತಿ ತುಂಬಿದಾಗ ಜನರು ಪಾದಯಾತ್ರೆ ಮೂಲಕ ಬರಿಗಾಲಿನಲ್ಲಿ ತಮ್ಮೂರ ಗ್ರಾಮ ದೇವತೆಗಳನ್ನು ಪಲ್ಲಕ್ಕಿಯಲ್ಲಿ ತಂದು ನದಿಯ ಪಕ್ಕದಲ್ಲೇ ಬಿಡಾರ ಹೂಡಿ ದೇವಿಗೆ ಸ್ನಾನ ಮಾಡಿಸಿ ಮಡಿಯನ್ನು ಮಾಡಿ ಸೀರೆಯುಡಿಸಿ ಸಂಪ್ರದಾಯದ ವಿಧಾನಗಳಿಂದ ಪೂಜೆಯನ್ನು ನೆರೆವೇರಿಸಿ ಪ್ರಸಾದವನ್ನು ಉಣಬಡಿಸಿ ತದನಂತರ ಮರಳಿ ಸಂತಸದಿಂದ ಪಾದಯಾತ್ರೆ ಮೂಲಕ ಗ್ರಾಮದೇವತೆಯನ್ನು ಪುನರ್ ಗುಡಿಯಲ್ಲಿ ಪ್ರತಿಷ್ಠಾಪಿಸುವರು. ಹೀಗೆ ಮಲಪ್ರಭೆಯು ತನ್ನದೇ ಆದ ದೈವಿಕ ಶಕ್ತಿಯಿಂದ ಬೆಳಗಾವಿ ಮತ್ತು ಅವಳಿ ನಗರಗಳ ಜೀವಾಳವಾಗಿದ್ದಾಳೆ.
ಈ ನದಿಯು ಕೃಷ್ಣಾ ನದಿಯ ಉಪನದಿಯಾಗಿದ್ದು, ಹಲಾತ್ರಿ, ಬೆಣ್ಣೆಹಳ್ಳ, ಹೀರೆಹಳ್ಳ, ತುಪ್ಪರಿಹಳ್ಳ, ತಾಸಹಳ್ಳಗಳು ಈ ನದಿಯ ಸಂಗಮಿಸುವ ಪ್ರಮುಖ ಹಳ್ಳಗಳಾಗಿವೆ. ಅಲ್ಲದೆ ಈ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥ ಡ್ಯಾಂನಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಅಣೆಕಟ್ಟು ಸುಮಾರು 145 ಮೀ ಉದ್ಧವಿದ್ದು 41 ಮೀ ಎತ್ತರವಿದೆ.ಇದು ಅಗಾಧ ನೀರಿನ ಸಾಮರ್ಥ್ಯ ಹೊಂದಿದ್ದು. ಇದರ ಹಿನ್ನೀರಿನಲ್ಲಿ ಸುಮಾರು 13,000 ಹೆಕ್ಟೇರ್ ಗಳಷ್ಟು ಭೂಮಿ ಮುಳುಗಡೆಯಾಗಿದ್ದು ಅಗಾಧ ಪ್ರದೇಶವನ್ನು ಆವರಿಸಿದೆ ಈ ಜಲಾಶಯಕ್ಕೆ ರೇಣುಕಾ ಜಲಾಶಯವೆಂದು ಕರೆಯಲಾಗುತ್ತದೆ. ಈ ಜಲಾಶಯದಿಂದ ಹುಬ್ಬಳ್ಳಿ ಧಾರವಾಡ ನಗರಗಳಿಗೆ ನೀರು ಪೂರೈಕೆಯಾಗುತ್ತದೆ.
ಸವದತ್ತಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಕಾಲುವೆಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸುತ್ತದೆ.ಈ ನದಿಯ ಅಣೆಕಟ್ಟಿನ ಎಡದಂಡೆ ಕಾಲುವೆಯು 150 ಕಿಮೀ ಉದ್ಧವಿದ್ದು, ಸುಮಾರು 54 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುತ್ತದೆ.ಅಲ್ಲದೆ ಉತ್ತರ ಕರ್ನಾಟಕದ ನೀರಾವರಿ ಯೋಜನೆ ರೂವಾರಿಗಳಾದ ಇಂಜನಿಯರ್ ಎಸ್ ಜಿ ಬಾಳೆಕುಂದ್ರಿ ಸ್ಮರಣಾರ್ಥ ಈ ಕಾಲುವೆಗೆ ಬಾಳೆಕುಂದ್ರಿ ಕಾಲುವೆ ಎಂದು ಹೆಸರಿಡಲಾಗಿದೆ. ಬಲದಂಡೆ 142 ಕಿಮೀ ಉದ್ಧವಿದ್ದು ಸುಮಾರು 1ಲಕ್ಷ 40 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುತ್ತದೆ. ಅಲ್ಲದೆ ಇಲ್ಲಿಯ ರೈತರು ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಕೃಷಿಯಿಂದ ಅಪಾರ ಆದಾಯವನ್ನು ಗಳಿಸುತ್ತಾರೆ. ಅಲ್ಲದೆ ಇಲ್ಲಿ ಸಕ್ಕರೆ ಕೈಗಾರಿಕೆಗಳು ನೆಲೆಗೊಂಡಿದ್ದು. ಅಪಾರ ಪ್ರಮಾಣದ ಸಕ್ಕರೆಯನ್ನು. ಉತ್ಪಾದಿಸಿ ರಫ್ತು ಮಾಡುತ್ತವೆ.
ಒಟ್ಟಿನಲ್ಲಿ ಮಲಪ್ರಭೆಯು ಸದಾ ತುಂಬಿ ಹರಿಯುತ್ತ ಹೊಲಗಳಿಗೆ ಸದಾ ನೀರುಣಿಸುತ್ತಾ ಅವಳಿ ಜಿಲ್ಲೆಗಳ ಜನರ ದಾಹ ನೀಗಿಸುತ್ತ ವರದಾನವಾಗಿದೆ.ಈ ನದಿ ಹರಿಯುತ್ತಾ ಹರಿಯುತ್ತಾ ಕಟಗಿನಹಾಳ ಗ್ರಾಮದ ಮೂಲಕ ಕೃಷ್ಣಾನದಿಯನ್ನು ಕೂಡಲ ಸಂಗಮದಲ್ಲಿ ಸೇರುತ್ತದೆ.
- ಅವಿನಾಶ್ ಸೆರೆಮನಿ