ಹೆಣ್ಣು ಭ್ರೂಣ ಹತ್ಯೆಯ ಸುತ್ತ – ಡಾ. ಶ್ರೀದೇವಿ ಆಲೂರ

ಇತ್ತೀಚಿನ ದಿನಗಳಲ್ಲಿ ತುಂಬಾನೇ ಕೇಳಿ ಬರುತ್ತಿರುವ ಸಂಗತಿ ಎಂದರೆ ಮದುವೆಗೆ ಹೆಣ್ಣೆ ಸಿಗುತ್ತಿಲ್ಲ. ಜನಗಣತಿಯ ವರದಿಯ ಪುಟಗಳನ್ನೊಮ್ಮೆ ಗಮನಿಸಿದಾಗ 1991 ರಲ್ಲಿ 1000 ಪುರುಷರಿಗೆ 927, 2001 ರಲ್ಲಿ 933, 2011ರಲ್ಲಿ 943, 2021ರಲ್ಲಿ 948 ರಷ್ಟು ಹೆಣ್ಣು-ಗಂಡಿನ ಅನುಪಾತ ಸಂಖ್ಯೆಯಲ್ಲಿನ ವ್ಯತ್ಯಯವನ್ನು ಕಾಣಬಹುದು. ಹೆಣ್ಣು ಭ್ರೂಣ ಹತ್ಯೆ? ಕುರಿತು  ಡಾ. ಶ್ರೀದೇವಿ ಆಲೂರ ಅವರು ಬರೆದಿರುವ ಚಿಂತನ ಲೇಖನವನ್ನು ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ತೀರಾ ಇತ್ತೀಚಿನ ದಿನಗಳಲ್ಲಿ ತುಂಬಾನೇ ಕೇಳಿ ಬರುತ್ತಿರುವ ಸಂಗತಿ ಅಯ್ಯೋ ಎಷ್ಟೇ ಶೋಧ ಮಾಡಿದರೂ ಮದುವೆಗೆ ಹೆಣ್ಣೆ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿದಾಗ, ಮಾತನಾಡುತ್ತಿರುವ ವಿಷಯ ತೀರಾ ಹಗುರವೆನಿಸಿದರೂ ಅದರ ಹಿಂದಿನ ಛಾಯೆಯ ಹಿಂದೆ ಗಂಭೀರವಾದ ಸಂಗತಿ ಅಡಗಿಕೊಂಡಿದೆಯೋ? ಅಥವಾ ಪ್ರಜ್ಞೆಗೆ ಬಾರದಂತಹ ಮೋಡ ಕವಿದಿದೆಯೋ? ವಿವರಿಸಿಕೊಳ್ಳುವುದು ಬಹಳ ಕಷ್ಟ. ಯಾಕೇ ಇಂತಹ ಸಂದರ್ಭಗಳು ಎದುರಾಗುತ್ತಿವೆ ಎನ್ನುವುದಕ್ಕೆ ಒಂದಷ್ಟು ಸೈದ್ಧಾಂತಿಕ ಚಿಂತನೆಗಳತ್ತ, ಸಾಮಾಜಿಕ ಹೋರಾಟಗಳತ್ತ ಮುಖಮಾಡುವುದು ಅನಿವಾರ್ಯ.
ಜನಗಣತಿಯ ವರದಿಯ ಪುಟಗಳನ್ನೊಮ್ಮೆ ಗಮನಿಸಿದಾಗ 1991 ರಲ್ಲಿ 1000 ಪುರುಷರಿಗೆ 927, 2001 ರಲ್ಲಿ 933, 2011ರಲ್ಲಿ 943, 2021ರಲ್ಲಿ 948 ರಷ್ಟು ಹೆಣ್ಣು-ಗಂಡಿನ ಅನುಪಾತ ಸಂಖ್ಯೆಯಲ್ಲಿನ ವ್ಯತ್ಯಯವನ್ನು ಕಾಣಬಹುದು. ಕಾಲಕ್ರಮೇಣವಾಗಿ ಇದರ ಅನುಪಾತದಲ್ಲಿ  ಹೆಚ್ಚಿನ ಸುಧಾರಣೆಗಳು ಕಂಡುಬಂದಿಲ್ಲ. ಆಗಿನ ಸಂದರ್ಭದಲ್ಲಿ ಅದು ತೀರಾ ಗಂಭೀರ ಸಂಗತಿ ಏನಿಸದೆ ಹೋದರೂ ಮುಂಬರುವ ದಿನಗಳಲ್ಲಿ (ಈ ದಿನಗಳಲ್ಲಿ) ಅದರ ಪರಿಣಾಮವನ್ನು ಅಷ್ಟೇ ಗಂಭೀರವಾಗಿ ಎದುರಿಸಬಹುದು ಎಂಬ ಅಂದಿನ ಮೂನ್ಸೂಚನೆಗಳು ಇಂದು ಉತ್ತರಿಸುತ್ತಿವೆ.

ಫೋಟೋ ಕೃಪೆ : google
ಒಂದಷ್ಟು ದಿನಗಳ ಕೆಳಗೆ ಸ್ನೇಹಿತೆಯೊಬ್ಬರು ತನ್ನ ಸಂಬಂಧಿಕರ ಮದುವೆಯ ಕುರಿತು ಹರಟುತ್ತಿರುವಾಗ ಬಹಳ ಸಂಭ್ರಮದಿಂದ ಹೇಳುತ್ತಿದ್ದರು. ‘ಮೇಡಂ, ನಿಮಗೆ ಗೊತ್ತಾ ಈ ಮದುವೆಗೆ ಹೆಣ್ಣನ್ನು ದುಡ್ಡುಕೊಟ್ಟು ತಂದಿರೊಂದು, ಬಹುಶಃ ಹೀಗೆ ಆದರೆ ವರದಕ್ಷಿಣೆ ಸಂಪೂರ್ಣ ಇಲ್ಲವಾಗುತ್ತೆ ಅಲ್ವಾ’ ಎಂದು. ಆಗ ಮೊಗದಲ್ಲೊಂದು ಮಂದಹಾಸ ಬೀರಿ ನಡೆದೆ. ಆದರೆ ಆ ಮಾತುಗಳು ನನ್ನ ಚಿಂತನೆಯ ಅರಿವಿನಲ್ಲಿ ಮುಂದಾಗಬಹುದಾದ ಗಂಭೀರ ಸಮಸ್ಯೆಗಳ್ನನ್ನು ಕೆದಕಹತ್ತಿದವು.
ಎತ್ತಣ ಮಾಮರ – ಎತ್ತಣ ಕೋಗಿಲೆ ಏನಿಸುತ್ತಿದೆಯೇ? ನಿಜ ಆದರೆ ಇದೆಲ್ಲದರ ಮೂಲ ಮಾತ್ರ ಹೆಣ್ಣು ಭ್ರೂಣ ಹತ್ಯೆಯೇ ಎಂಬುವುದನ್ನು ಗಂಭೀರವಾಗಿ ಪರಿಗಣಿಸದೇ ಹೊದರೆ ಸ್ತ್ರೀ ಸಂಕುಲ ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಭಿನ್ನ ಮುಖಗಳ ಸಮಸ್ಯೆಗಳಿಗೆ ಎದುರಾಗದೆ ಇರದು. ಕಡಿಮೆಯಾಗುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆಯಿಂದ ಅವರ ಬೇಡಿಕೆ ಹೆಚ್ಚಿಸುವುದು ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಹಾಗಾದರೆ ಏನಿದು ಹೆಣ್ಣು ಭ್ರೂಣಹತ್ಯೆ? ತಾಯಿಯ ಗರ್ಭದಲ್ಲಿಯೇ ಹೆಣ್ಣು ಮಗುವು ಎಂಬ ಕಾರಣಕ್ಕಾಗಿಯೇ ಭ್ರೂಣದಲ್ಲಿಯೇ ಅದನ್ನು ಹೊಸಕಿಹಾಕುವುದು. ಮಾನವನ ಅರಿವಿನ ಚಿಂತನೆಯ  ಆವಿಷ್ಕಾರದಲ್ಲಿ ವಿಜ್ಞಾನ-ತಂತ್ರಜ್ಞಾನದ ಶೋಧಗಳು ಬಹು ಮಹತ್ವಪೂರ್ಣವಾದವು. ಆಧುನಿಕತೆಯ ಬದುಕು ಸಂಪೂರ್ಣವಾಗಿ ತಂತ್ರಜ್ಞಾನದಿಂದ ಆವೃತವಾಗಿದೆ. ಬಹುಪಾಲು ಸಂದರ್ಭಗಳಲ್ಲಿ ಮನುಷ್ಯ ಬದುಕು ಅದಿಲ್ಲದೇ ಸಾಗದು ಎಂಬಷ್ಟು ಅವಲಂಬಿತವಾಗಿದೆ.
ಫೋಟೋ ಕೃಪೆ : google
ಅಂತಹುದೇ ಪ್ರಮುಖ ವೈಜ್ಞಾನಿಕ ಶೋಧ ಅಮ್ನಿಯೋ ಸಿಂಥೆಸಿಸ್‌. ವೈಜ್ಞಾನಿಕ ಲೋಕದ ಬಹುಮುಖ್ಯ ಶೋಧಗಳಲ್ಲಿ ಇದು ಒಂದಾಗಿದೆ. ಇದು ಆರೋಗ್ಯಕರ ಮಗುವಿನ ಜನ್ಮದತ್ತ ಕೇಂದ್ರಿಕರಿಸಿದ್ದು, ಗರ್ಭಜಲ ಪರೀಕ್ಷೆಯಿಂದ ಅಂಗವಿಕಲ ಮಗುವಿನ ಜನನವನ್ನು ತಪ್ಪಿಸುವ ಹಾಗೂ ತಾಯಿ-ಮಗುವಿನ ಮತ್ತು ಆರೋಗ್ಯಕರ ಸಮಾಜಕ್ಕಾಗಿನ ಮೂಲ ಆಶಯವನ್ನು ಆಧರಿಸಿ ಶೋಧವಾಗಿರುವುದು. ಇದಕ್ಕೆ ಪೂರಕವಾಗಿರುವ Ultra sonography ಮತ್ತು foetosocpyಗಳು. ಯಾವುದೇ ಸಂಗತಿಯು ಅನುಕೂಲ ಮತ್ತು ಅನಾನುಕೂಲಗಳೆರಡನ್ನು
ಹೊಂದಿರುವುದು ಹೊಸತೇನಲ್ಲ. ಬಳಕೆಯ ಸಂದರ್ಭದಲ್ಲಿ ಅವುಗಳು ಬಳಕೆಯಾಗುವ ಪರಿಯನ್ನು ಆಧರಿಸಿ ಅದರ ಮೌಲ್ಯವು ನಿರ್ಧರಿತವಾಗುತ್ತದೆ.
ಈ ತಂತ್ರಜ್ಞಾನಗಳಲ್ಲಿಯೂ ಒಳಗೊಂಡಿರುವ ಲಿಂಗಪತ್ತೆಯ ಸಂಗತಿಯೇ ಪ್ರಮುಖವಾಗಿ ಅದರ ಮೂಲ ಆಶಯಕ್ಕಿಂತ ಪಿತೃ ಸಂಸ್ಕೃತಿಯಲ್ಲಿ ಹೆಣ್ಣು ಸಂಕುಲದ ನಿರ್ನಾಮಕ್ಕಾಗಿಯೇ ಶೋಧಿತವಾಗಿರುವ ಅಸ್ತ್ರವೆಂಬಷ್ಟು ಇಂದಿಗೂ ಪರಿಣಮಿಸುತ್ತಲೇ ಇದೆ.  ಭ್ರೂಣದ ಹಂತದಲ್ಲಿಯೇ ಆಗುವ ಲಿಂಗಪತ್ತೆಯಿಂದಾಗಿ ಈ ಪ್ರಕ್ರಿಯೆಯು ವೈದ್ಯಲೋಕದಲ್ಲಿ ಒಂದು ವ್ಯಾಪಾರವನ್ನೇ ಹುಟ್ಟುಹಾಕಿತು. ಸಾಕಷ್ಟು ಸ್ಕ್ಯಾನಿಂಗ್‌ ಕೇಂದ್ರಗಳು ಲಿಂಗಪತ್ತೆಯ ಕೇಂದ್ರಗಳೆಂಬಷ್ಟು ಪ್ರಚಲಿತವಾದವು. ತತ್ಪರಿಣಾಮವಾಗಿ ಇವುಗಳ ನಿರ್ಭಂಧಕ್ಕಾಗಿ ಸಾಕಷ್ಟು ಹೋರಾಟಗಳು, ಪ್ರಚಾರಾಂದೋಲನಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅವುಗಳ ಫಲಿತವಾಗಿ ಲಿಂಗಪತ್ತೆಯನ್ನು ನಿರ್ಭಂಧಿಸುವ PNDT(1994), MTP(1971) ಯಂತಹ ಕಾಯಿದೆಗಳು ಜಾರಿಯಾದವು. ಇತ್ತೀಚಿನ ದಿನಗಳಲ್ಲಿ ಇವುಗಳು ನಿರ್ಭಂಧಿತವಾಗಿವೆ ಎಂದು ಮೇಲ್ನೋಟಕ್ಕೆ ಎಂಬ ಪ್ರಶ್ನೆಯು ಮೂಡುವುದಕ್ಕೆ ಲಿಂಗಾನುಪಾತವು ಸಾಕ್ಷೀಯಾಗಿದೆ.
ಬಹುಪಾಲು ವಿಷಯಗಳು ಅದರಲ್ಲಿಯೂ ಮಹಿಳಾ ವಿಷಯಗಳನ್ನು ಚರ್ಚಿಸುವಾಗ ಸದಾವಕಾಲವೂ ಎದುರಾಗುವ ಸವಾಲು ಸಾಮಾಜಿಕ ಅನುಷ್ಠಾನದ ಪ್ರಶ್ನೆ. ಶೋಧಿತವಾಗುವ ಸಂಗತಿಗಳು ಮೂಲತಃ ತರತಮತೆಯ ಆದರೂ ಪುರುಷಪ್ರಧಾನ ಸಮಾಜದಲ್ಲಿ ಅದರ ಉಪಯುಕ್ತತೆಯ ನೆಲೆಯನ್ನು ಬಹುಪಾಲು ಪುರುಷ ಬದುಕನ್ನು ಹೆಚ್ಚು ಕೇಂದ್ರಿಕರಿಸುತ್ತದೆ. ಈ ಕಾರಣದಿಂದಾಗಿಯೇ ಮಹಿಳಾ ಬದುಕನ್ನು ಸಂಬಂಧಿಸಿದ ಸಂಗತಿಗಳ ಸಮರ್ಪಕ ಅನುಷ್ಠಾನದ ಕೊರತೆಗಳು, ತೆರೆಮರೆಯ ಪ್ರೋತ್ಸಾಹಗಳು ಸಮಸ್ಯೆಯ ಉಲ್ಬಣತೆಯತ್ತ ವಿಸ್ತರಿಸುತ್ತಿರುವುದಕ್ಕೆ ಹೆಣ್ಣುಭ್ರೂಣ ಹತ್ಯೆಯೇ ನಿದರ್ಶನವಾಗಿದೆ.

ಫೋಟೋ ಕೃಪೆ : google
ವಿಜ್ಷಾನ-ತಂತ್ರಜ್ಞಾನವು ಮಹಿಳಾ ಬದುಕಿನ ಹತ್ತು ಹಲವು ಪ್ರಕ್ರಿಯೆಗಳನ್ನು ಹೆಚ್ಚು ಸುಲಲಿತಗೊಳಿಸಿದೆ. ನವಿನ ಆವಿಷ್ಕಾರಗಳು ಸಾಮಾಜಿಕ ಮಿಥ್‌ಗಳ ಸಂಕೋಲೆಯನ್ನು ತೊಡೆದು ಹಾಕಿದೆ. ಮಹಿಳೆಯ ಸಂತಾನ ಸಂಬಂಧಿತ ಹಲವಾರು ಸಂಗತಿಗಳನ್ನು  ಸಾಕಷ್ಟು ನಿರರ್ಗಳಗೊಳಿಸಲು ಶ್ರಮಿಸುತ್ತಿದೆ. ಆದರೆ ಪ್ರಧಾನಧಾರೆಯ ವ್ಯವಸ್ಥೆಗಳಲ್ಲಿ ನಾವಿನ್ಯತೆಯ ಶೋಧಗಳು ಅವಳ ಬದುಕನ್ನು ಹೆಚ್ಚು ಬರ್ಬರಗೊಳಿಸುವತ್ತ ಸಾಗುತ್ತಿದೆ. ಅದು ಐವಿಎಫ್‌, ಬಾಡಿಗೆ ತಾಯ್ತನದಂತಹ ನವೀನ ಶೋಧಗಳು ಬಂಜೆತನದಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಎಷ್ಟು ಸಹಕಾರಿಯಾಗಿವೆಯೋ ಅಷ್ಟೇ ಪ್ರಮಾಣದಲ್ಲಿ ಗಂಡು ಸಂತಾನವನ್ನು ಪೋಷಿಸುವಂತಹ ವ್ಯವಸ್ಥೆಯಲ್ಲಿ ಹೆಣ್ಣು ಸಂತಾನವನ್ನು ಇನ್ನಿಲ್ಲವಾಗಿಸುವಲ್ಲಿ ಹೆಣ್ಣು ಭ್ರೂಣಹತ್ಯೆಯ ಬಹುಮುಖಿ ಆಯಾಮಗಳನ್ನು ಪರಿಚಯಿಸುತ್ತಿವೆಯೇ? ಎಂಬ ಪ್ರಶ್ನೆಯು ಸ್ಪಷ್ಟವಾಗಿದೆ.
ಸಾಮಾಜಿಕ ಪ್ರಜ್ಞಾ ಜಾಗೃತಿಯ ಮತ್ತು ಸ್ವದ ಅರಿವಿನ ಹೊರತು ಹೋರಾಟಗಳು, ಕಾನೂನುಗಳು ಮತ್ತು ನೀತಿ-ನಿಯಮಗಳು ಕೇವಲ ಪುಸ್ತಕದಲ್ಲಿ ಮಾತ್ರ ಮೌಲ್ಯಯುಕ್ತವಾಗುತ್ತವೆ. ಮುಂಬರುವ ದಿನಗಳಲ್ಲಿನ ಗಂಭೀರ ಸಾಮಾಜಿಕ ಪರಿಣಾಮವನ್ನು ಗ್ರಹಿಸದ ಹೊರತು ಈ ಬಗೆಯ ಸಮಸ್ಯೆಗಳು ಕಗ್ಗಾಂಟಾಗಿಯೇ ಉಳಿಯುತ್ತವೆ. ಈ ನಿಟ್ಟಿನಲ್ಲಿ ನಾವಿನ್ಯತೆಯು ಸ್ವಸ್ಥ ಸಮಾಜದ ನಿರ್ನಾಮದ ಬದಲು ನಿರ್ಮಾಣದತ್ತ ಸಾಗಿದಾಗ ಮಾತ್ರ ಸಮತೋಲಿತ ಮನುಷ್ಯ ಸಂಕುಲದ ಉಳಿವು ಸಾಧ್ಯವಾಗಬಹುದು.

  •  ಡಾ. ಶ್ರೀದೇವಿ ಆಲೂರ – ಸಹಾಯಕ ಪ್ರಾಧ್ಯಾಪಕರು, ಮಹಿಳಾ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ.

4 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW