ಚಿಕ್ಕವಯಸ್ಸಿನಲ್ಲಿಯೇ ಹೆಚ್ಚಾಗಿ ಕಾಣುವ ಬಿಳಿಕೂದಲಿಗೆ ಪರಿಹಾರವನ್ನು ಲೇಖಕ ಮಂಜುನಾಥ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ. ಮನೆಯಲ್ಲಿ ಮಾಡಿ, ಉಪಯೋಗಿಸಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ…
ತಲೆಯಲ್ಲಿ ಈಗಾಗಲೆ ಅಲ್ಲಲ್ಲಿ ಸಾಕಷ್ಟು ಬಿಳಿ ಕೂದಲು ಕಾಣಿಸುತ್ತಿದೆಯೇ..? ಕೂಡಲೇ ಡೈ ಹಚ್ಚಲು ಹೋಗಬೇಡಿ, ಹೀಗೆ ಮಾಡಿ. 2 ರಿಂದ 3 ಹಿಡಿಯಷ್ಟು ಫ್ರೆಶ್ ಆಗಿರುವ , ಎಳೆಯ ಮೆಂತ್ಯೆ ಸೊಪ್ಪು ತೆಗೆದುಕೊಂಡು ಚೆನ್ನಾಗಿ ತೊಳೆದು ಸ್ವಲ್ಪ ಮಾತ್ರ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.

ರುಬ್ಬಿಕೊಂಡ ಮೆಂತ್ಯೆಯನ್ನು ಒಂದು ಕಬ್ಬಿಣದ ಬಾಣಲಿಗೆ ಹಾಕಿಕೊಳ್ಳಿ. ಇದಕ್ಕೆ 2 ಟೇಬಲ್ ಚಮಚ ನೆಲ್ಲಿಕಾಯಿ ಪುಡಿ ಬೆರೆಸಿ. ನೆಲ್ಲಿಕಾಯಿ ಪುಡಿ ಈಗಂತೂ ಎಲ್ಲ ಅಂಗಡಿಗಳಲ್ಲಿ / online ನಲ್ಲಿ ಸಿಗುತ್ತೆ. ಬೆಟ್ಟದ ನೆಲ್ಲಿಕಾಯಿಯೇ ಸಿಕ್ಕರಂತೂ ಇನ್ನೂ ಒಳ್ಳೆಯದು. ಒಂದು 5 ನೆಲ್ಲಿಕಾಯಿ ಬೀಜಗಳನ್ನು ತೆಗೆದುಹಾಕಿ ಹೆಚ್ಚಿಕೊಂಡು ಮೆಂತ್ಯೆ ಜೊತೆಗೇ ನುಣ್ಣಗೆ ರುಬ್ಬಿಕೊಳ್ಳಿ.
ಈ ಮಿಶ್ರಣವನ್ನು ಒಂದು ಬಟ್ಟೆ ಮುಚ್ಚಿ ಒಂದೆರಡು ಘಂಟೆ ಅಥವ ಹೆಚ್ಚು ಹಾಗೆಯೇ ಬಿಡಿ. ಎಲ್ಲಾ ಚೆನ್ನಾಗಿ ಬೆರೆತುಕೊಳ್ಳುತ್ತೆ.

ನಂತರ ಈ ಮಿಶ್ರಣವನ್ನು ನೆತ್ತಿಯ ಬುಡದಿಂದ ನಿಧಾನವಾಗಿ ಹಚ್ಚಿ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. ಒಂದು ಘಂಟೆ ಹಾಗೆಯೇ ಬಿಟ್ಟು ಸೋಪು ಮತ್ತು ಶಾಂಪು ಹಾಕದೆ ತೊಳೆದುಕೊಳ್ಳಿ. ವಾರದಲ್ಲಿ ಎರಡು ಸಲ ಮಾಡಿಕೊಂಡರೆ ಹೆಚ್ಚಿನ ಬಿಳಿಕೂದಲು ಆಗುವುದು ನಿಲ್ಲುತ್ತೆ. ತಲೆ ಹೊಟ್ಟು ಆಗಲ್ಲ.

ಇದು ತಂಪು ಉಂಟುಮಾಡುವ ಮಿಶ್ರಣ. ಹಾಗಾಗಿ ಇದನ್ನು ಹಚ್ಚಿಕೊಂಡು ಕಣ್ಣುಮುಚ್ಚಿ ವಿಶ್ರಾಂತಿ ಪಡೆದರೆ ಕಂಪ್ಯೂಟರ್ ಮತ್ತು ಮೊಬೈಲ್ ನಲ್ಲಿ ಕೆಲಸ ಮಾಡುವವರ ಕಣ್ಣಿನ ಶ್ರಮ ಕಡಿಮೆಯಾಗುತ್ತದೆ. ಬಿಳಿ ಕೂದಲು ಹೆಚ್ಚಾಗಿದ್ದಲ್ಲಿ ಒಂದು ಹಿಡಿ ಕರಿಬೇವಿನ ( ಅಡುಗೆಗೆ ಉಪಯೋಗಿಸುವ ) ಸೊಪ್ಪು ಹಾಕಿ ರುಬ್ಬಿಕೊಳ್ಳಿ.
ಅದೇ ದಾಸವಾಳದ ಎಲೆ ಮತ್ತು ಹೂವುಗಳನ್ನು ಸಹಾ ಹಾಕಿಕೊಂಡರೆ ಕೂದಲು ಶೈನಿಂಗ್ ಬರುತ್ತದೆ. ಒಂದೆಲಗ ಸೊಪ್ಪು ಸೇರಿಸಿಕೊಂಡರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
ಉಷ್ಣ ದೇಹ ಪ್ರಕೃತಿಯ ಹಲವು ದೈಹಿಕ ತೊಂದರೆಗಳು ಸಹ ನಿವಾರಣೆ ಆಗುತ್ತೆ. ಆದರೆ ಶೀತ ದೇಹ ಪ್ರಕೃತಿಯವರು ನೋಡಿಕೊಂಡು ಉಪಯೋಗಿಸಿ.
- ಚಿತ್ರ ಮತ್ತು ಲೇಖನ : ಮಂಜುನಾಥ್ ಪ್ರಸಾದ್
