‘ಪದ್ದಣ ಮನೋರಮೆ’ ಕೃತಿ ಪರಿಚಯ

‘ಆಕೃತಿ ಕನ್ನಡ ‘ ಎಂಬ ಅಂತರ್ಜಾಲ ಪತ್ರಿಕೆಯ ಸಂಪಾದಕರೂ ಆಗಿರುವ ಲೇಖಕಿ ಶ್ರೀಮತಿ ಶಾಲಿನಿ ಹೂಲಿ ಪ್ರದೀಪ್ ಅವರ ಮೊದಲ ಪ್ರಕಟಿತ ಪುಸ್ತಕವಿದು. ‘ಆಕೃತಿ ಕನ್ನಡ’ ಪತ್ರಿಕೆಯನ್ನು ಹುಟ್ಟು ಹಾಕಿದ ಪತಿ ಪ್ರದೀಪ್ ರಾಧಾಕೃಷ್ಣ ಅವರು ತಮ್ಮ ಯಶಸ್ಸಿಗೆ ಕಾರಣ ಎಂದು ಲೇಖಕಿ ಅವರ ಪ್ರೋತ್ಸಾಹವನ್ನೂ ಸಹಾ ಸ್ಮರಿಸಿದ್ದಾರೆ. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ಪದ್ದಣ ಮನೋರಮೆ
ಲೇಖಕರು: ಶಾಲಿನಿ ಹೂಲಿ ಪ್ರದೀಪ್
ಆಕೃತಿ ಕನ್ನಡ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ:೨೦೨೫.
ಪುಟಗಳು: ೮೮.
ಬೆಲೆ: ರೂ. ೧೫೦.

ನಮ್ಮ ಸುತ್ತಲ ಸಮಾಜದಲ್ಲಿ ದಿನನಿತ್ಯ ನಡೆಯುವ ಅದೆಷ್ಟೋ ಅಹಿತಕರ ಸುದ್ದಿಗಳು ಇಲ್ಲಿ ಲೇಖನದ ಪ್ರಧಾನ ವಸ್ತುವಾಗಿದೆ. ಆ ಪ್ರತಿಬಿಂಬಗಳನ್ನು ಲೇಖಕಿ ತಮ್ಮದೇ ರೀತಿಯಲ್ಲಿ ನೋಡುವ ದೃಷ್ಟಿಕೋನವೇ ಇಲ್ಲಿನ ೨೪ ಪ್ರಸಂಗಗಳ ಬರಹಗಳು.

ಪುರಾಣ ಕಾಲದ ‘ಮುದ್ದಣ್ಣ -ಮನೋರಮೆ’ಯನ್ನು ಇಲ್ಲಿ ಪತಿಯನ್ನು ಪದ್ದಣ್ಣನಿಗೂ ತಮ್ಮನ್ನು ಮನೋರಮೆಗೂ ಕಲ್ಪಿಸಿಕೊಂಡು ನವಿರು ಹಾಸ್ಯದ ಮೂಲಕ ಇವರು ಸುತ್ತಲಿನ ಹತ್ತಾರು ಘಟನೆಗಳ ಜೊತೆಗೆ ಕುಟುಂಬಗಳಲ್ಲಿ ಅವುಗಳ ಬಗ್ಗೆ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸಮೀಕರಿಸುತ್ತಾ ಸಾಗುತ್ತಾರೆ. ಅವುಗಳ ಕೆಲವು ಮಾದರಿ ಹೀಗಿದೆ.

ಪದ್ದಣ್ಣನ ಗೆಳೆಯನ ಹೆಂಡತಿ ತೀರಿಕೊಂಡ ಸುದ್ದಿ ತಿಳಿದು ನೋಡಲೆಂದು ಈ ದಂಪತಿಗಳು ಹೋಗುತ್ತಾರೆ. ಅಲ್ಲಿ ನೆರೆದ ಜನರು…ಪದ್ದಣ್ಣನ ಗೆಳೆಯ ತನ್ನ ಹೆಂಡತಿ ನೋಡಲು ದಪ್ಪವಿದ್ದಾಳೆಂದು ನಿರ್ಲಕ್ಷ್ಯ ಮಾಡುತ್ತಿದ್ದ. ಅದಕ್ಕಾಗೇ ಅವಳು ಸಣ್ಣ ಆಗೋಕೆ ‘ಕೀಟೋ ಡಯಟ್ಟು’ ಮಾಡೋಕೆ ಹೋಗಿ ಹೊಗೆ ಹಾಕಿಸಿಕೊಳ್ಳೋ ಹಾಗಾಯಿತು. ಎಂದು ಮಾತಾಡಿ ಕೊಳ್ಳುವುದು ಕಿವಿಗೆ ಬೀಳುತ್ತದೆ. ಅಲ್ಲದೇ ಸತ್ತ ಹೆಣಕ್ಕೆ ದುಬಾರಿ ಸೀರೆ, ಅಲಂಕಾರ ಮಾಡಿದ ಬಗ್ಗೆಯೂ ಗಮನಿಸಿದ ಮನೋರಮೆ ಪದ್ಧಣನಲ್ಲಿ ಹೇಳಿದ್ದೇನು?.

ಯಾವುದು ಯಾವಕಾಲಕ್ಕೆ ಆಗಬೇಕೋ ಅದಾಗದಿದ್ದರೆ ಸಮಾಜಕ್ಕೆ ಆಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಸರಿ ವಯಸ್ಸಿಗೆ ಮದುವೆ ಯಾಗದಿದ್ದರೆ, ನಂತರ ಮಕ್ಕಳಾಗದಿದ್ದರೆ, ಆದಮೇಲೂ ಉದ್ಯೋಗವೆಂದು ಅವರನ್ನು ಸರಿಯಾಗಿ ನೋಡಿಕೊಳ್ಳದೆ ಹೋದರೆ ಏನೆಲ್ಲಾ ಅಪಾಯಗಳು ಸಂಭವಿಸಬಹುದು ಎನ್ನುವುದನ್ನು ಅಜ್ಜನ ಚೀಲದಲ್ಲಿದ್ದ ನಿದ್ದೆ ಮಾತ್ರೆಯನ್ನು ನುಂಗಿ, ಅದೃಷ್ಟವಶಾತ್ ಪಾರಾದ ಅದ್ವಿತ್ ಎಂಬ ಪುಟ್ಟ ಹುಡುಗನ ಕಥೆಯನ್ನು ಹೇಳಿದ್ದಾರೆ.

ರೋಡ್ ರೋಮಿಯೋಗಳು ಹೆಣ್ಣು ಮಕ್ಕಳ ಹಿಂದೆಬಿದ್ದು ಕಾಡಿಸುವ ಘಟನೆ, ಫೇಸ್ ಬುಕ್ ನಲ್ಲಿ ಇಮೋಜಿ ನೋಡಿ ಬೇಸ್ತು ಬೀಳುವ ಹುಡುಗರು, ಮೆಸೆಂಜರ್ ನಲ್ಲೇ ಪ್ರೀತಿ ಪ್ರಣಯ, ಇದಕ್ಕೆ ಕಡಿವಾಣ ಹಾಕುವ ಉಪಾಯ, ಸೆಲೆಬ್ರಿಟಿಗಳ ಬದುಕು, ದುಬಾರಿ ಮಾಲ್ ಗಳಲ್ಲಿ ಏನೂ ಕೊಳ್ಳದೆ ಬರೀ ನೋಡುತ್ತಾ ಹೋಗುವವರ ಆನಂದವನ್ನು ಬೇರೆಯವರು ಹೇಗೆ ತಪ್ಪಾಗಿ ಭಾವಿಸಬಹುದು? ಎನ್ನುವ ವಿಷಯಗಳ ಕುರಿತು ಲಘು ಬರಹಗಳಿವೆ.

 

ಇಂದಿನ ಮಹಿಳೆಯರಿಗೆ ಮನೆಯ ಒಳಗೂ- ಹೊರಗೂ ದುಡಿಯುವ ಅನಿವಾರ್ಯತೆ ಇದೆ. ಈ ನಡುವೆ ಮನೆ ಮಕ್ಕಳು, ಅಡುಗೆಯ ಹೊಣೆ ಹೊತ್ತಿರುವ ಸ್ತ್ರೀಯರು ಕಾಲಕ್ಕೆ ತಕ್ಕಂತೆ ಇಂಟರ್ ನೆಟ್, ಮೋಬೈಲಿನಲ್ಲಿಯೂ ತೊಡಗಿಸಿ ಕೊಂಡಿದ್ದಾರೆ. ಇಲ್ಲಿ ಉಪಯೋಗದ ಜೊತೆಗೆ ಅವುಗಳು ಉಂಟುಮಾಡುವ ಅಪಾಯವನ್ನು ಕೂಡ ಒಂದು ಸಂಭಾಷಣೆಯ ಮೂಲಕ ಲೇಖಕಿ ತಿಳಿಸಿದ್ದಾರೆ.

ನಾವು ದಪ್ಪಗಿದ್ದೇವೆ.. ತೆಳ್ಳಗಿದ್ದೇವೆ… ಕಪ್ಪಗಿದ್ದೇವೆ… ಎಂದೆಲ್ಲಾ ಬೇಸರಿಸಬಾರದು. ಅದಕ್ಕಾಗಿ ಜನರು ಹೇಳಿದ ಸ್ವಯಂ ಚಿಕಿತ್ಸೆಯನ್ನೂ ಮಾಡಬಾರದು. ಅದರಿಂದ ಅಡ್ಡ ಪರಿಣಾಮವೇ ಜಾಸ್ತಿ. ಇರೋದ್ರಲ್ಲಿ ಸಂತೋಷವಾಗಿ ಆರೋಗ್ಯದಿಂದಿದ್ದರೆ ಸಾಕು… ಹಾಗೆಯೇ ಕಷ್ಟವೆಂದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಹೆಣ್ಣೊಬ್ಬಳಲ್ಲಿ ಬದುಕಿನ ಭರವಸೆಯನ್ನು ತುಂಬಿ. ಎಂಬ ಕಿವಿಮಾತಿನ ಬರಹವೂ ಚೆನ್ನಾಗಿದೆ.

ಗಂಡ ಕಟ್ಟಿದ ಮಾಂಗಲ್ಯ ಹೆಣ್ಣಿಗೆ ಶ್ರೀರಕ್ಷೆ. ಆದರೆ ಗಂಡಿಗೆ? ಕುಡುಕ ಗಂಡನ ಬಗ್ಗೆ ಕೆಲಸದವಳ ತಿರಸ್ಕಾರ, ಗಂಡಂದಿರಿಗೆ ತಮ್ಮ ಹೆಂಡತಿ ಬಗ್ಗೆ ಇರಬೇಕಾದ ಕಾಳಜಿ,ಇಬ್ಬರೂ ಜವಾಬ್ದಾರಿ ತೆಗೆದು ಕೊಂಡಾಗ ಮಾತ್ರ ಆ ಸಂಸಾರ ಸುಖಮಯವಾಗಿರುತ್ತದೆ. ಅದು ಕೆಲಸ, ಹಣ ಯಾವುದೇ ವಿಷಯವಾಗಿರಬಹುದು ಎನ್ನುತ್ತಾರೆ ಲೇಖಕಿ.

ಎಲ್ಲರೂ ಅರಾಮಾಗಿದ್ದಾರೆ. ನಮಗೊಬ್ಬರಿಗೆ ಮಾತ್ರ ನೋವು ಎಂದು ಚಿಂತಿಸುತ್ತಾ ದುರಾಭ್ಯಾಸಕ್ಕೆ ಬೀಳಬಾರದು. ಯಾರ ನೋವಿಗೂ ಯಾರ ಕೆಲಸವೂ ನಿಲ್ಲೊಲ್ಲ. ಎಂದು ವಾಸ್ತವದ ಕಟುಸತ್ಯವನ್ನೂ ಹೇಳಿದ್ದಾರೆ. ಹೀಗೆ ಆರೋಗ್ಯಕರ ದೃಷ್ಟಿಕೋನ ಹೊಂದಿರುವ ಅನೇಕ ಜೀವನ್ಮುಖಿ ವಿಚಾರಗಳನ್ನು ನಾವಿಲ್ಲಿ ನೋಡಬಹುದು.

ಪ್ರಗತಿಪರ ವಿಚಾರಧಾರೆಯನ್ನು ಹೊಂದಿದ ಅನೇಕ ಪ್ರಸಂಗಗಳನ್ನು ನಾವಿಲ್ಲಿ ಕಾಣಬಹುದು. ಇಲ್ಲಿ ಯಾರ ಬಗ್ಗೆಯೂ ದೂರಿಲ್ಲ. ದಾಂಪತ್ಯ ಜೀವನದಲ್ಲಿ ಬರುವ ಎಲ್ಲಾ ವಿಷಯಗಳಲ್ಲಿ ಹೊಂದಾಣಿಕೆ, ಜೊತೆಗೆ ಗಂಭೀರತೆಯನ್ನೂ ವಿನೋದದಿಂದಲೇ ಲಘುವಾಗಿ ಬಗೆಹರಿಸಿ ಕೊಳ್ಳುತ್ತಾ ಸಾಗುವುದು ಕಾಣುತ್ತದೆ.ಇಲ್ಲಿ ಬಹಳಷ್ಟು ಸ್ವಾನುಭವದ
ನುಡಿಗಳಿವೆ.

ಶಾಲಾ ದಿನಗಳಲ್ಲಿ ಓದಿನಲ್ಲಿ ಮುಂದಿದ್ದ ಎಷ್ಟೋ ಬುದ್ಧಿವಂತರು ಏನೂ ಸಾಧಿಸದೇ ಹತ್ತರಲ್ಲಿ ಹನ್ನೊಂದಾಗಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಆದರೆ ಸಾಧಾರಣವಿದ್ದವರೇ ಕೆಲವೊಮ್ಮೆ ಏನೇನೋ ಮಾಡುತ್ತಾ ಬೆಳೆದು ಬಿಡುತ್ತಾರೆ. ಜೀವನದಲ್ಲಿ ತಿರುವುಗಳು ಯಾವಾಗ ಹೇಗೆ ಅಚಾನಕ್ ಆಗಿ ಬರುತ್ತವೆಯೋ ಗೊತ್ತಿಲ್ಲ. ಎನ್ನುವ ಬರಹ ಇಷ್ಟವಾಯಿತು.

ನಮ್ಮಲ್ಲಿನ ಕುಂದು -ಕೊರತೆಯನ್ನೂ ಕೂಡ ಹಾಸ್ಯವಾಗಿಯೇ ನೋಡುತ್ತಾ, ನಗು ನಗುತ್ತಾ ಬಾಳುವುದೇ ಸೊಗಸು ಎಂಬ ಸಂದೇಶವನ್ನೂ ನಾವು ಗಮನಿಸಬೇಕು.

ಅನಾದಿಕಾಲದಿಂದಲೂ ನಮ್ಮಲ್ಲಿ ಹೆಣ್ಣು -ಗಂಡೆಂಬ ಬೇಧವಿದೆ. ಇದು ನಾಯಿಮರಿಗಳಿಗೂ ಅನ್ವಯಿಸುವ ಕುರಿತು ಒಂದು ಸಾಕುನಾಯಿಯ ಒಡತಿಯ ಜೊತೆ ಮಾತಾಡಿದ್ದ ಪ್ರಸಂಗವೊಂದನ್ನು ಹಾಸ್ಯಮಯವಾಗಿ ಬರೆದಿದ್ದಾರೆ. ಇಂತಹ ಇನ್ನಷ್ಟು ಲೇಖನಗಳು ಇಲ್ಲಿವೆ. ಪದ್ದಣ ಮನೋರಮೆಯೇ ಎದ್ದುನಿಂತು ವಾಗ್ವಾದ ಮಾಡುವಂತಿರುವ ಹೊಳಪಿನ ಗೆರೆಯ ಆಕರ್ಷಕ ಮುಖಪುಟ ಕೃತಿಗೆ ಮೆರಗು ನೀಡಿದೆ. ಸರಳವಾಗಿ ಓದಿಸಿಕೊಂಡು ಹೋಗುವ ಈ ಪುಸ್ತಕವನ್ನು ನೀವೂ ಓದಿ ಆನಂದಿಸಿ.

  • ಪುಸ್ತಕವನ್ನು ಪ್ರೀತಿಯಿಂದ ಕಳಿಸಿಕೊಟ್ಟ ಲೇಖಕಿ ಶಾಲಿನಿ ಹೂಲಿ ಪ್ರದೀಪ್ ಅವರಿಗೆ ಮತ್ತೊಮ್ಮೆ ಧನ್ಯವಾದಗಳು. ಮುಂಬರುವ ದಿನಗಳಲ್ಲಿ ನಿಮ್ಮ ಲೇಖನಿಯಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತೇನೆ.

‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW