‘ಪದ್ದಣ ಮನೋರಮೆ’ ಕೃತಿ ಪರಿಚಯ

ಶಾಲಿನಿ ಹೂಲಿ ಪ್ರದೀಪ್ ಮನಸ್ಸು ಮಾಡಿದರೆ ಉತ್ತಮ ಕಥೆ ಬರೆಯಬಲ್ಲರು ಎಂಬುದಕ್ಕೆ ‘ಪದ್ದಣ ಮನೋರಮೆ’ ಲಘು ಪ್ರಸಂಗಗಳಲ್ಲಿ ನಿದರ್ಶನಗಳಿವೆ. ಪತ್ರಕರ್ತರು, ಲೇಖಕರಾದ ಲಕ್ಷ್ಮಣ ಕೊಡಸೆ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಪದ್ದಣ ಮನೋರಮೆ
ಲೇಖಕರು: ಶಾಲಿನಿ ಹೂಲಿ ಪ್ರದೀಪ್
ಪ್ರಕಾಶಕರು : ಆಕೃತಿ ಕನ್ನಡ ಪ್ರಕಾಶನ ಬೆಂಗಳೂರು
ಮೊದಲ ಮುದ್ರಣ : 2025
ಪುಟಗಳು : 88
ಬೆಲೆ : 150
ಖರೀದಿಗಾಗಿ :
ಸಾಹಿತ್ಯಲೋಕ – 99459 39436
ಪುಸ್ತಕಗಾರ – 81820 83840

ನಟ, ನಾಟಕಕಾರ, ನಿರ್ದೇಶಕ, ರಂಗ ಸಂಘಟಕ ಹೂಲಿ ಶೇಖರ್ ಉತ್ತರ ಕನ್ನಡ ಜಿಲ್ಲೆಯ ಅಂಬಿಕಾನಗರದಲ್ಲಿ ಸುಮಾರು 35 ವರ್ಷ ರಂಗಭೂಮಿಯ ಪರಿಚಾರಕನಾಗಿ ಕೆಲಸ ಮಾಡಿದವರು. ಬಾಲನಟನಾಗಿ ರಂಗ ಪ್ರವೇಶಿಸಿದ ಇವರು ಸ್ತ್ರೀ ಪಾತ್ರಗಳನ್ನೂ ಮಾಡಿದರು. ಸಮುದಾಯದ ಪ್ರಭಾವದಿಂದಾಗಿ ಬೀದಿ ನಾಟಕಗಳನ್ನು ಮಾಡಿದವರು. ಹವ್ಯಾಸಿ ನಾಟಕಗಳನ್ನು ಮಾಡುತ್ತಾ ಅನೇಕ ರಂಗಶಿಬಿರಗಳನ್ನು, ನಾಟಕೋತ್ಸವಗಳನ್ನು, ರಂಗಗೋಷ್ಠಿಗಳನ್ನು ಆಯೋಜಿಸಿದರು. `ನಿರಪರಾಧಿ ಕಳ್ಳ’, `ಬಡತನದ ಭೂತ’, `ಅಮಟೂರು ಬಾಳಪ್ಪ’, `ಮೌನ ತಪಸ್ವಿ’, `ಜೈ ಜವಾನ್ ಜೈ ಕಿಸಾನ್’ ಎಂಬ ನಾಟಕಗಳನ್ನೂ ಬರೆದಿದ್ದಾರೆ. ಜೊತೆಗೆ ವಿದ್ಯುತ್ ಇಲಾಖೆಯ ಸುಧಾರಣ ಕ್ರಮದ ಹಿನ್ನೆಲೆಯಲ್ಲಿ ಬೀದಿ ನಾಟಕಗಳನ್ನು ಬರೆದು ಐದು ತಂಡಗಳ ಮೂಲಕ ರಾಜ್ಯದಾದ್ಯಂತ ಏಳು ನೂರು ಪ್ರದರ್ಶನಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಹೂಲಿ ಶೇಖರ್ ಅವರನ್ನು ರಂಗ ವಿಮರ್ಶಕರು ‘ಸಾಧನೆಗಳ ಸರದಾರ’ ಎಂದು ಬಣ್ಣಿಸಿದ್ದಾರೆ.

ರಂಗಕರ್ಮಿ ಶೇಖರ್ ಕುಟುಂಬದಲ್ಲಿಯೂ ಸಾಂಸ್ಕೃತಿಕ ವಾತಾವರಣವೂ ಇರುವಂತೆ ನೋಡಿಕೊಂಡವರು ಎಂಬುದು ಅವರ ಪುತ್ರಿ ಶಾಲಿನಿ ಈಚೆಗೆ ಪ್ರಕಟಿಸಿದ `ಲಘು ಪ್ರಸಂಗ- ಕಥೆಗಳು’ ಎಂಬ ಕೃತಿಯಲ್ಲಿ ವ್ಯಕ್ತವಾಗುತ್ತದೆ. ಮಗಳು ಬಾಲ್ಯದಲ್ಲಿ ಎಲ್ಲಿಗೆ ಪ್ರವಾಸ ಹೋದರೂ ಅದರ ಅನುಭವವನ್ನು ಒಂದು ಪುಟದಲ್ಲಿ ಬರೆದು ತನಗೆ ತೋರಿಸುವಂತೆ ಹೇಳುತ್ತಾ ಇದ್ದುದರಿಂದ ಬರವಣಿಗೆಯ ಕ್ಷೇತ್ರಕ್ಕೆ ಪ್ರವೇಶವಾಯಿತೆಂದು ಶಾಲಿನಿ ಬರೆದುಕೊಂಡಿದ್ದಾರೆ. ಒಂದು ಪುಟಕ್ಕೆ ಸೀಮಿತವಾಗಿದ್ದ ಬರೆಯುವ ಅಭ್ಯಾಸ ಮುಂದೆ ಪತಿಯ ಉತ್ತೇಜನದಿಂದ ಸಾಮಾಜಿಕ ಜಾಲತಾಣದಲ್ಲಿ ಬರೆಯುವಂತಾಯಿತು. ಫೇಸ್ ಬುಕ್ ನಲ್ಲಿ ನಿತ್ಯವೂ ಒಂದೊಂದು ಬರಹವನ್ನು ಪೋಸ್ಟ್ ಮಾಡುತ್ತಾ ಆಗ ಸಿಕ್ಕಿದ ಉತ್ತೇಜನದಿಂದ `ಆಕೃತಿ’ ಕನ್ನಡ ಅಂತರ್ಜಾಲ ಪತ್ರಿಕೆಯನ್ನು ಹುಟ್ಟು ಹಾಕಿದರು. ಅದರಲ್ಲಿ ಹೊಸಬರಿಗೆ ಅವಕಾಶ ಸಿಗಲಿ ಎಂಬ ಸದುದ್ದೇಶ. ಅದನ್ನು ವೇದಿಕೆಯಾಗಿ ಬಳಸಿಕೊಂಡವರು ನಾಲ್ಕುನೂರಕ್ಕೂ ಹೆಚ್ಚಿನ ಸಂಖ್ಯೆಯ ಲೇಖಕರು. ಐದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಬರಹಗಳು ಶಾಲಿನಿ ಆರಂಭಿಸಿದ `ಆಕೃತಿ’ ಕನ್ನಡ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ವಿಶೇಷ ವಿದ್ಯಮಾನ.

ಲಘು ಪ್ರಸಂಗಗಳು ಶಾಲಿನಿಯವರ ಸೃಷ್ಟಿ. ಪತಿ ಪ್ರದೀಪ್ ರಾಧಾಕೃಷ್ಣ ಅವರ ಎಲ್ಲ ಬರಹಗಳ ಹಿಂದಿನ ಪ್ರೇರಣೆ. ಪತಿಯ ಬೆಂಬಲದಿಂದ ಅಂತರ್ಜಾಲ ಪತ್ರಿಕೆಯನ್ನು ಹೊರಡಿಸಿದ್ದ ಶಾಲಿನಿ ತಮ್ಮ ಲಘು ಬರಹಗಳ ಸಂಕಲನಕ್ಕೆ `ಪದ್ದಣ ಮನೋರಮೆ’ ಎಂಬ ಶೀರ್ಷಿಕೆಯನ್ನು ಇಟ್ಟಿದ್ದಾರೆ. ಇಲ್ಲಿನ ಬರಹಗಳಲ್ಲಿ ಪ್ರದೀಪ್ `ಪದ್ದಣ’ನಾಗಿ ಶಾಲಿನಿ ‘ಮನೋರಮೆ’ಯಾಗಿದ್ದಾರೆ. ತಾವಿಬ್ಬರೇ ಪಾತ್ರಧಾರಿಗಳು ಏಕೆ ಆಗಬೇಕಾಯಿತು ಎಂಬುದನ್ನೂ ಶಾಲಿನಿ ಲೇಖಕಿಯ ಮಾತುಗಳಲ್ಲಿ ವಿವರಿಸಿದ್ದಾರೆ.

`ಪದ್ದಣ ಮನೋರಮೆ’ ಇಪ್ಪತ್ನಾಲ್ಕು ಕಿರು ಬರಹಗಳ ಸಂಕಲನ. ಒಂದೊಂದು ಬರಹವೂ ಸಣ್ಣ ಕತೆಯಂತೆ, ವಿಡಂಬನೆಯಂತೆ, ಹಾಸ್ಯಪ್ರಸಂಗದಂತೆ ಹಲವು ಬಗೆಯ ಸಾಹಿತ್ಯಪ್ರಕಾರದ ಚುಟುಕು ರೂಪಗಳಾಗಿವೆ. ಫೇಸ್ ಬುಕ್ ಪೋಸ್ಟ್ ಗಳಿಗೆ ಹೊಂದಿಕೊಳ್ಳುವಂಥ ಚುಟುಕು ರಚನೆಗಳು. ಸ್ವಾರಸ್ಯಕರವಾದ ಸಂಗತಿಗಳು. ಕಚಗುಳಿ ಇಡುವಂಥ ಘಟನೆಗಳು. ಒಂದು ಆರೋಗ್ಯಕರ ಮನಸ್ಸು ವರ್ತಮಾನದ ಅಭಿರುಚಿಗೆ ತಕ್ಕ ಹಾಗೆ ಅನುಭವಗಳನ್ನು ಸ್ವಾರಸ್ಯಕರವಾಗಿ ನಿರೂಪಿಸಿದ ಸಹಜ ಅಭಿವ್ಯಕ್ತಿ ಇಲ್ಲಿದೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂಥ ರಸಪ್ರಸಂಗಗಳ ಸಂಕಲನ.

ಲೇಖಕಿಯ ಮೊದಲ ಪುಸ್ತಕ ಎಂಬ ಉಪಶೀರ್ಷಿಕೆಯಾಗಲೀ, `ಮುದ್ದಣ ಮನೋರಮೆ ಅವರ ಕ್ಷಮೆ ಕೋರಿ’ ಎಂಬ ತಪ್ಪೊಪ್ಪಿಗೆಯ ಬರಹವಾಗಲೀ ಮುಖಪುಟದಲ್ಲಿ ಅಗತ್ಯ ಇರಲಿಲ್ಲ. ಏಕೆಂದರೆ ಶಾಲಿನಿ ಹೂಲಿ ಪ್ರದೀಪ್ ಮನಸ್ಸು ಮಾಡಿದರೆ ಉತ್ತಮ ಕಥೆ ಬರೆಯಬಲ್ಲರು ಎಂಬುದಕ್ಕೆ ಈ ಲಘು ಪ್ರಸಂಗಗಳಲ್ಲಿ ನಿದರ್ಶನಗಳಿವೆ. ಲೇಖಕಿ ಶಾಲಿನಿ ಹೂಲಿ ಪ್ರದೀಪ್ ಮತ್ತು ಅವರಿಗೆ ಬರವಣಿಗೆಯ ಹವ್ಯಾಸ ಮೂಡಿಸಿದ ರಂಗಕರ್ಮಿ ಹೂಲಿ ಶೇಖರ್ ಅವರಿಗೆ ಅಭಿನಂದನೆಗಳು.

‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :


  • ಲಕ್ಷ್ಮಣ ಕೊಡಸೆ – ಪತ್ರಕರ್ತರು, ಲೇಖಕರು 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW