ಶಾಲಿನಿ ಹೂಲಿ ಪ್ರದೀಪ್ ಅವರ ‘ಪದ್ದಣ ಮನೋರಮೆ’ ಕೃತಿಯ ಕುರಿತು ಲೇಖಕಿ ರಮ್ಯ ರಾಜ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ …
ಪುಸ್ತಕ – ಪದ್ದಣ ಮನೋರಮೆ
ಲೇಖಕರು – ಶಾಲಿನಿ ಹೂಲಿ ಪ್ರದೀಪ್
ಪ್ರಕಾಶಕರು – ಆಕೃತಿ ಕನ್ನಡ ಪ್ರಕಾಶನ ಬೆಂಗಳೂರು
ಮೊದಲ ಮುದ್ರಣ – 2025
ಪುಟಗಳು – 88
ಬೆಲೆ – 150
‘ಪದ್ದಣ ಮನೋರಮೆ’ ಕೃತಿಯಲ್ಲಿ 24 ಬಿಡಿ ಲೇಖನಗಳಿದ್ದು, ಎಲ್ಲವೂ ಕೂಡ ಪ್ರತಿಯೊಬ್ಬರ ಜೀವನದಲ್ಲಿ ನಡೆಯುವಂತಹ ಕಥೆಗಳೇ ಆಗಿವೆ. ಇಷ್ಟೇ ಆಗಿದ್ದರೆ ಈ ಪುಸ್ತಕ ಅಷ್ಟು ವಿಶೇಷವೆನಿಸುತ್ತಿರಲಿಲ್ಲ. ಆದರೆ ಲೇಖಕಿಯವರು ಗಂಡ – ಹೆಂಡತಿಯ ನಡುವೆ ನಡೆಯುವಂತಹ ಪ್ರತಿಯೊಂದು ಸಂಭಾಷಣೆಗಳನ್ನು ಹೇಗೆ ಹಾಸ್ಯ ಎಂಬ ರಸಪಾಕದಲ್ಲಿ ಅದ್ದಿ ತಗೆಯಬಹುದು ಎಂಬ ಸಿಹಿಯಾದ ಉದಾಹರಣೆಗಳಿವೆ.
ಅಷ್ಟೇ ಅಲ್ಲದೆ,
ನಮ್ಮ ಸುತ್ತಮುತ್ತಲು ನಡೆಯುವ ಹಾಗೂ ದಿನನಿತ್ಯದ ಚಟುವಟಿಕೆಗಳಲ್ಲಿ ಕಾಣುವಂತಹ ವಿಷಯಗಳು ಗಂಭೀರವಾಗಿದ್ದರೂ, ತಮ್ಮ ಸೊಗಸಾದ ನಿರೂಪಣೆಯ ಮೂಲಕ ಒಂದು ಸಂದೇಶದ ಜೊತೆಗೆ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡುವ ಜಾದು ಲೇಖಕಿಯವರ ಲೇಖನಿ ಯಲ್ಲಿದೆ ಎನ್ನಬಹುದು.

ಲೇಖನಗಳ ವಿಶೇಷತೆಯ ಬಗ್ಗೆ ಹೇಳ್ತೀನಿ ಬನ್ನಿ;
ರೋಮಿಯೋ
ಈ ಲೇಖನದಲ್ಲಿ ಹುಡುಗನೊಬ್ಬ ತನ್ನ ಕೈಯಲ್ಲಿ ಹೂ ಹಾಗೂ ಕಾಗದವನ್ನು ಹಿಡಿದು ಬರುವಾಗ ಅದನ್ನು ಕಂಡ ಹುಡುಗಿ ಈತ ತನ್ನನ್ನೇ ಹಿಂಬಾಲಿಸುತ್ತಿದ್ದಾನೆ ಎಂದುಕೊಂಡು ಹಿರಿ ಹಿರಿ ಹಿಗ್ಗೆಕಾಯಾಗುವ ಹುಡುಗಿಯ ಕಥೆಯಿದೆ. ಈ ಪ್ರೇಮ ಕಥೆ ಪಾಸೋ ! ಫೇಲೋ! ಮುಂದೇನಾಯ್ತು.. ಎಂಬ ಕುತೂಹಲವನ್ನು ಈ ಕಥೆ ತಣಿಸುತ್ತದೆ.
ಚಳ್ಳೆ ಹಣ್ಣು ತಿನಿಸಿದ ಹುಡುಗ
ಈ ಲೇಖನದಲ್ಲಿ ಫೇಸ್ಬುಕ್ ಲಿಸ್ಟ್ ನಲ್ಲಿದ್ದ ಫ್ರೆಂಡ್ ಒಬ್ಬ ತನ್ನ ಚಂದದ ಫೋಟೋವನ್ನು ಹಾಕ್ಕೊಂಡಿರುತ್ತಾನೆ. ಅದನ್ನು ನೋಡಿದ ಹುಡುಗಿಯೊಬ್ಬಳು ಅದಕ್ಕೆ ಹಾರ್ಟ್ ಬಟನ್ ಅನ್ನು ಒತ್ತಿರುತ್ತಾಳೆ. ಇದನ್ನು ಕಂಡ ಆ ಹುಡುಗ ಆ ಹುಡುಗಿಯ ಬೆನ್ನತ್ತುತ್ತಾನೆ.
ಇದರಿಂದ ಆ ಹುಡುಗಿ ಗಾಬರಿಗೊಂಡರು. ಮುಂದೆ ಆ ಹುಡುಗ ಹೇಳುವ ವಿಷಯವನ್ನು ಕೇಳಿ ಈ ರೀತಿ ಎಲ್ಲಾ ಆಗುತ್ತದಾ? ಎಂಬ ಆಶ್ಚರ್ಯ ಆಕೆಗೆ ಉಂಟಾಗುತ್ತದೆ.
ಆ ವಿಷಯ ಏನೆಂದು..ತಿಳಿಯಲು ಈ ಲೇಖನ ತಪ್ಪದೇ ಓದಿ.. ತುಂಬಾ ಚೆನ್ನಾಗಿದೆ.
ಹಾರ್ಟ್ ಢಂ ಅಂದ್ರೆ
ಹಾರ್ಟ್ ಬಾಯಿಗೆ ಬಂದಾಗ; ಈ ಎರಡೂ ಲೇಖನಗಳು ಪ್ರಸ್ತುತ ಪರಿಸ್ಥಿತಿಯನ್ನು, ವಾಸ್ತವದ ಚಿತ್ರಣವನ್ನು ತಿಳಿಸುತ್ತಾ ಹೋಗುತ್ತವೆ. ಈಗ ಎಲ್ಲೆಲ್ಲೂ ಕಡಿಮೆ ವಯಸ್ಸಿನವರ ಸಾವಿನ ಸುದ್ದಿಯನ್ನು ಕೇಳುತ್ತಲೇ ಇದ್ದೇವೆ. ಇವುಗಳನ್ನು ಕೇಳುವಾಗ ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರು ಭಯಭೀತರಾಗುತ್ತಲೇ ಇರುತ್ತೇವೆ. ಈ ಘಟನೆಗಳಿಂದಲೇ ಹೆಚ್ಚೆತ್ತ ದಂಪತಿಗಳು ಹೇಗೆ ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಾರೆ.. ಎಂಬ ಹಾಸ್ಯದ ವರ್ಷನ್ ಇಲ್ಲಿದೆ ಎನ್ನಬಹುದು.

ಅಬ್ಬಾ…! ಆ ದಿನ
ಇದೊಂದೇ ಲೇಖನವೆನಿಸುತ್ತೆ ಹಾಸ್ಯದ ಎಳೆಯನ್ನು ಬಿಟ್ಟು ಗಂಭೀರವಾದ ವಿಷಯದ ಬಗ್ಗೆ ಚರ್ಚೆಯಾಗಿರುವಂಥದ್ದು. ಮನೆಯಲ್ಲಿ ಮಕ್ಕಳು ಇದ್ದಮೇಲೆ ಅವರ ಮೇಲೆ ಎಷ್ಟೇ ನಿಗಾ ಇಟ್ಟರು ಕಡಿಮೆಯೇ. ಅದು ಚಿಕ್ಕ ಮಕ್ಕಳಿದ್ದರಂತೂ ಅವರ ಹಿಂದೆಯೇ ನಾವು ಇರಬೇಕಾಗುತ್ತದೆ. ಸ್ವಲ್ಪ ಕಣ್ಣು ತಪ್ಪಿದರೂ ಆಗುವ ಅನಾಹುತಕ್ಕೆ ಮನೆ ಹಿರಿಯರೆಲ್ಲ ಬೆಲೆ ತರ ಬೇಕಾಗುತ್ತದೆ.
ಮಕ್ಕಳ ಕೈಗೆ ಎಟುಕುವಂತೆ ಯಾವುದೇ ಮಾತ್ರೆಗಳನ್ನು ಇಡುವುದು ಎಷ್ಟು ಅಪಾಯಕಾರಿ ಎಂಬ ಎಚ್ಚರಿಕೆಯ ಸಂದೇಶವನ್ನು ಈ ಲೇಖನ ನೀಡುತ್ತದೆ.
ಫೇಸ್ಬುಕ್ ಪ್ರಪಂಚ, ಮೆಸೆಂಜರ್ ಪ್ರೀತಿ ಪ್ರಣಯ, ಇಂದಿನ ಟ್ರೆಂಡ್, ಭಯ ಹುಟ್ಟಿಸಿದ ರೀಲ್ಸ್ , ಪದ್ದಣ್ಣಗೆ ಹೊಟ್ಟೆಕಿಚ್ಚು, ನಮ್ಮ ಸೇಫ್ಟಿ ನಮ್ಮದು ಹಾಗೂ ಮೊಬೈಲ್ ಅವಾಂತರ.
ಈ ಏಳು ಲೇಖನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರತಿಯೊಬ್ಬರು ಓದಿ ತಿಳಿಯಲೇ ಬೇಕಾದದ್ದು ಎಂದರೆ ತಪ್ಪಾಗಲಾರದು. ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ.. ಎಚ್ಚರ ತಪ್ಪದಿರಿ.. ಎಂಬ ಕಿವಿ ಮಾತುಗಳಿವೆ. ಹಾಗಾದ್ರೆ ಇನ್ಯಾಕೆ ತಡ ! ಮೊಬೈಲ್ ಪಕ್ಕಕಿರಿಸಿ. ಈ ಪುಸ್ತಕ ಕೈಗೆತ್ತಿಕೊಳ್ಳಿ.
ಕಂಡವರ ಮನೆ ಕತೆ
ಇದು ಕಂಡವರ ಮನೆ ಕಥೆಯಾದರೂ, ಉರಿಯೋ ಬೆಂಕಿಗೆ ತುಪ್ಪ ಹಾಕುವ ಬದಲು.. ತಣ್ಣಗಾಗಿಸುವ ಕೆಲಸವನ್ನು ಮಾಡಿದಾಗ ಕಷ್ಟದಲ್ಲಿರುವವರಿಗೆ ಕೈ ನೀಡಿದಂತೆಯೂ ಆಗುತ್ತದೆ ಜೊತೆಗೆ ನಮಗೂ ಸಾರ್ಥಕ ಭಾವ ಉಂಟಾಗುತ್ತದೆ.
ಕಂಡವರ ಮನೆ ಕಥೆ ಕೇಳಿ.. ಸಾಧ್ಯವಾದರೆ ಸಹಾಯ ಮಾಡಿ ಇಲ್ಲವಾದಲ್ಲಿ ಸುಮ್ಮನಿದ್ದು ಬಿಡಿ. ಸಹಾಯ ಹಸ್ತ ಚಾಚುವ ಬಗೆಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಗೋವಾದಲ್ಲಿ ಕಂಡ ಶ್ರೀರಾಮಚಂದ್ರ
ಈ ಲೇಖನದಲ್ಲಿ ರೂಪಕ್ಕಿಂತ, ಗುಣ ಮುಖ್ಯ .. ಎಂಬ ಸಂದೇಶವನ್ನು ಸಾಬೀತುಪಡಿಸಿದ್ದಾರೆ. ಹೀಗೆ ಈ ಪುಸ್ತಕದಲ್ಲಿರುವ ಇನ್ನಿತರೆ ಲೇಖನಗಳು ಕೂಡ ಲವಲವಿಕೆಯಿಂದ ಓದಿಸಿಕೊಳ್ಳುತ್ತವೆ.
- ರಮ್ಯ ರಾಜ್
