ಪದ್ದಣ ಮನೋರಮೆ ಕೃತಿ ಪರಿಚಯ : ಡಾ.ಪ್ರಕಾಶ ಬಾರ್ಕಿ

ನಿನ್ನೆ ಮಧ್ಯಾಹ್ನದ ಹೊತ್ತಿಗೆ ಪೋಸ್ಟ್’ಮ್ಯಾನ್ ಕೈಗೊಂದು ಪುಸ್ತಕವಿಟ್ಟು ಹೋದ. ಅದು… ಆಕೃತಿ ಕನ್ನಡ ಇ-ಮ್ಯಾಗಝಿನ್’ನ ಸಂಪಾದಕಿ ಶಾಲಿನಿ ಪ್ರದೀಪ್ ಅವರ ಚೊಚ್ಚಲ ಪುಸ್ತಕ. ಲಘು ಪ್ರಸಂಗ ಕಥೆಗಳ ಸರಮಾಲೆ “ಪದ್ದಣ ಮನೋರಮೆ”. ಡಾ.ಪ್ರಕಾಶ ಬಾರ್ಕಿ ಅವರ ಕಲ್ಪನೆಯಲ್ಲಿ ಪದ್ದಣ ಮನೋರಮೆ. 

ಪುಸ್ತಕ : ಪದ್ದಣ ಮನೋರಮೆ
ಲೇಖಕರು : ಶಾಲಿನಿ ಹೂಲಿ ಪ್ರದೀಪ್
ಪ್ರಕಾಶನ : ಆಕೃತಿ ಕನ್ನಡ ಪ್ರಕಾಶನ, ಬೆಂಗಳೂರು
ಬೆಲೆ : 150 ರೂಪಾಯಿ

ಲೇಖಕಿಯವರು ನನ್ನ ಹಲವು ಲೇಖನಗಳಿಗೆ ವೇದಿಕೆ ಕಲ್ಪಿಸಿಕೊಟ್ಟವರು. ಹೊಸ ಬರಹಗಾರರಿಗೆ ಸದಾ ಪ್ರೋತ್ಸಾಹಿಸುವ ಸಾಹಿತ್ಯ ಜೀವಿ. “ಪದ್ದಣ ಮನೋರಮೆ” ಪುಸ್ತಕದ ಎಲ್ಲಾ ಕಥೆಗಳ ಮುಖ್ಯ ಭೂಮಿಕೆಯಲ್ಲಿ ರಾರಾಜಿಸುವುದು ಲೇಖಕಿಯ ವಿಶಿಷ್ಟ ಕಥಾ ನಿರೂಪಣೆ ಶೈಲಿ, ಜೊತೆಗೆ ಅವರ ಪತಿ “ಪ್ರದೀಪ್”‌.‌

ಪುಸ್ತಕದ 24 ಕಥೆಗಳ ಜೀವಾಳ ಸಮಾಜದ ಒಂದೊಂದು ಓರು ಕೋರೆಗಳು, ಸಾಮಾಜಿಕ ಜಾಲತಾಣಗಳು, ಜನ ಜೀವನ, ಹಠಾತ್ತನೆ ಬಂದೇರಗುವ ಹೃದಯ ಸ್ತಂಭನ, ಸಾವು, ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಮತ್ತು ಮೈ ಬಣ್ಣದ ಬಗೆಗಿನ ತಾತ್ಸಾರಗಳು. ಜೊತೆ ಜೊತೆಗೆ ಕಚಗುಳಿಯಿಡುವ ಲೇಖಕಿ ಮತ್ತು ಅವರ ಪತಿಯ ನಡುವಿನ ಮಾತುಕತೆ, ಕೋಪ-ತಾಪ.
ಲೇಖಕಿಯವರು ಮತ್ತೊಬ್ಬರನ್ನೂ ಎಲ್ಲಿಯೂ ಹೀಗಳೆಯದೆ, ತಮ್ಮನ್ನು ತಾವು ಕಪ್ಪು ದಪ್ಪ ಎಂದುಕೊಳ್ಳುತ್ತಾ, ತಮ್ಮ ಪತಿ “ಶ್ರೀ ರಾಮನ” ಅಪರಾವತಾರ ಎಂದು ಅವರೆಡೆಗಿನ ತಮ್ಮ ಪ್ರೀತಿ, ಕಾಳಜಿ, ಭರವಸೆ ವ್ಯಕ್ತಪಡಿಸಿದ್ದಾರೆ. ಹಲವಾರು ಲಘು ಪ್ರಸಂಗಗಳಲ್ಲಿ ಸೂಕ್ಷ್ಮವಾಗಿ ಸಮಾಜಕ್ಕೆ ಮತ್ತು ಜನರ ಮನಸ್ಥಿತಿಗೆ ಚಾಟಿ ಬೀಸುವುದನ್ನು ಮರೆತಿಲ್ಲ.

* ಲೇಖಕಿ ಮದುವೆಯಾದ ಹೊಸತರಲ್ಲಿ ತಮ್ಮ ಪತಿಯೊಂದಿಗೆ, ಉತ್ತರ ಕರ್ನಾಟಕದ ಹಳ್ಳಿಯೊಂದಕ್ಕೆ ತಮ್ಮ ದೊಡ್ಡಮ್ಮನ ಮನೆಗೆ ಬರುತ್ತಾರೆ‌. ಹಳ್ಳಿ ಹೆಂಗಸರ ಮನೆ ಬಾಗಿಲಿನಿಂದ, ಕಿಟಕಿಯಿಂದ ಇಣುಕಿ ಹೊಸ ಜೋಡಿ ನೋಡುವ ಕೌತುಕದ ನೋಟದ ಬಗ್ಗೆ ವಿವರಿಸುತ್ತಾ… ಖಡಕ್ ರೊಟ್ಟಿ, ಚಟ್ನಿ, ಎಣಗಾಯಿ, ಖಡಕ್ ಶೇಂಗಾ ಹೋಳಿಗೆ ತಿಂದು ಪರದಾಡಿದ ತಮ್ಮ ಪತಿಯ ಪ್ರಸಂಗವನ್ನು ರಸವತ್ತಾಗಿ ಬರಹಕ್ಕಿಳಿಸಿದ್ದಾರೆ. ಪಾಪಾ.!! ಇಡ್ಲಿ ತಿಂದ ಹೊಟ್ಟೆ ಕೆಂಪು ಚಟ್ನಿ ತಿಂದು ಅದೇಷ್ಟು ಒದ್ದಾಡಿರಬಹುದು.

* ಮದುವೆಯಾಗಿ ಸುಮಾರು ವರ್ಷಗಳ ನಂತರ ಹುಟ್ಟಿದ ಮಗುವೊಂದು.. ಮನೆಯ ಸರ್ವರ ಪ್ರೀತಿ ಬಸಿದುಕೊಂಡು ಬೆಳೆಯುತ್ತೆ. ಅಂತಹ ಅಕ್ಕರೆಯ ಮಗುವೊಂದು ಆಟವಾಡುತ್ತಾ‌.. ಅಚಾನಕ್ಕಾಗಿ ಅಜ್ಜನ ನಿತ್ಯದ “ನಿದ್ರೆ ಮಾತ್ರೆ” ನುಂಗಿ ಎಚ್ಚರತಪ್ಪಿ ಆಸ್ಪತ್ರೆ ಸೇರುತ್ತೆ‌. ಆವಾಗಿನ ತಂದೆ ತಾಯಿ ತಲ್ಲಣವನ್ನು ಲೇಖಕಿ ವಿವರಿಸುತ್ತಾ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಯಾವುದೇ ಔಷಧಿಗಳು ಕೈಗೆ ಸಿಗದಂತೆ ಇಡಲು ಎಚ್ಚರಿಸುತ್ತಾರೆ. ಅಪಾಯ ಅರಿತು ಬಾಳುವುದು ಮೇಲು ಎಂಬುದು ಲೇಖಕಿಯ ಕಳಕಳಿ.

* ಮದುವೆಯಾಗಿ ಮಕ್ಕಳಿದ್ದರೂ ಕ್ಷಣಿಕ ಸುಖ ಮತ್ತು ಮರುಳು ಮಾತು ನಂಬಿ ಓಡಿ ಹೋಗುತ್ತಿರುವ ಹೆಂಗಸರ ಬಗ್ಗೆ ಮರುಕ ವ್ಯಕ್ತಪಡಿಸುವ ಲೇಖಕಿ, ತಮಗಾದ ಮೆಸೇಂಜರ್ ಅನುಭವ.. ಕಾಮುಕರ ಬಗ್ಗೆ, ಡೋಂಗಿ ಪ್ರೇಮಿಗಳ ಬಗ್ಗೆ, ಬರಗೆಟ್ಟವರ ಬಲೆಗೆ ಬೀಳದಂತೆ ಮುನ್ನೆಚ್ಚರಿಕೆ ಮುಖ್ಯ ಅಂತ ಕಿವಿ ಮಾತು ಹೇಳಿದ್ದಾರೆ.

* ಹೆಣ್ಣು ಮಗು ಕಪ್ಪು ಇದ್ದರೆ ಕಷ್ಟ ಅಂತ.. ಲೇಖಕಿಯ ತಾಯಿ ಅವರನ್ನು ಬೆಳ್ಳಗೆ ಮಾಡಲು ಪಟ್ಟ ಹರಸಾಹಸದ ಬಗ್ಗೆ ಹಾಸ್ಯ ಪ್ರಸಂಗ ಬರೆದಿದ್ದಾರೆ. ಲೇಖಕಿಯನ್ನು ಬೆಳ್ಳಗಾಗಿಸಲು ಅವರ ತಾಯಿ Fair n Lovely ಉಪಯೋಗಿಸುವಂತೆ ದುಂಬಾಲು ಬೀಳುತ್ತಾರೆ ಕೊನೆಗೆ ಮುಖದ ಚರ್ಮ ಹಾಳಾಗಿ “ಚರ್ಮದ ವೈದ್ಯ”ರಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ ನಂತರ ಮತ್ತೆ ಮೊದಲಿನ ಮೈ ಕಾಂತಿ ಕಪ್ಪು ಮರಳಿತಂತೆ.

ಕಪ್ಪು ಬಣ್ಣದ ಹೆಣ್ಣುಮಕ್ಕಳ ಬಗ್ಗೆ ಯಾವಾಗಲೂ ತಾತ್ಸಾರ ತೋರುವ ಮನಸುಗಳು ಬಗ್ಗೆ ಕಿಡಿಕಾರಿದ್ದಾರೆ. ಮನುಷ್ಯನ ಆರೋಗ್ಯ, ಗುಣ ಮುಖ್ಯ.. ಬಣ್ಣ ನಗಣ್ಯ ಎಂದು ತಿಳುವಳಿಕೆ ಮಾತನಾಡುತ್ತಾರೆ ಲೇಖಕಿ.

ಇನ್ನೂ “ಲಲ್ಲಿಯ ಗಂಡನ ಕಥೆ”, ಗೋವಾದಲ್ಲಿ ಕಂಡ ರಾಮಚಂದ್ರ, ವಿಂಡೋ ಶಾಪಿಂಗ್, ನಾಯಿ ಹೆಣ್ಣಾದ್ರೆ ತಪ್ಪಾ!, ಮೆಸ್ಸೇಂಜರ್ ಪ್ರೀತಿ ಪ್ರೇಮ. ಇನ್ನೂ ಹಲವು ರಸಭರಿತ ಕಥಾ ಪ್ರಸಂಗಗಳನ್ನು ಓದಲು ನೀವು ಪುಸ್ತಕ ಕೈಗೆತ್ತಿಕೊಳ್ಳುವುದು ಅನಿವಾರ್ಯ.‌

ಲೇಖಕಿಯು ಎಲ್ಲಾ ಪ್ರಸಂಗಗಳನ್ನು ಹಾಸ್ಯ ಲೇಪಿಸಿ ಬರೆದಿದ್ದರೂ ಅವುಗಳಲ್ಲಿ ಗಂಡ ಹೆಂಡತಿ ನಡುವಿನ ಕೋಪ ಮಿಶ್ರಿತ ಪ್ರೀತಿಯ ಕುಟುಕು ಚುರುಕಿನ ಮಾತುಗಳಿವೆ. ಗಂಭೀರವಾದ ವಿಚಾರಗಳೆ ಎಲ್ಲವೂ.‌ ಜ್ವಲಂತ ಸಮಸ್ಯೆಗಳೆ. ಲೇಖಕಿಯ ಭಾಷೆಯಲ್ಲಿ ಹಿಡಿತವಿದೆ‌. ಕಥಾ ಶೈಲಿ ಸರಳ ಭಾಷೆಯಲ್ಲಿದ್ದು, ಪದಗಳ ಬಳಸುವಿಕೆಯಲ್ಲಿ ಎಲ್ಲಿಯೂ ಎಡವದೆ ಪ್ರತಿ ಕಥೆಗೊಂದು ಒಪ್ಪುವ ಅಂತ್ಯ ನೀಡಿದ್ದಾರೆ.

ಕಥಾ ಪ್ರಸಂಗಗಳು ಎಲ್ಲಿಯೂ ಓದುಗ ಆಕಳಿಸದಂತೆ.. ಓದಿಸಿಕೊಳ್ಳುತ್ತವೆ. ಲೇಖಕಿ ಮುಂದೆ ಇನ್ನೂ ಹೆಚ್ಚಿನ ಸಾಹಿತ್ಯ ಸೇವೆ ಮಾಡಲಿ, ಇವರ ಬತ್ತಳಿಕೆಯಿಂದ ಹಲವು ಪುಸ್ತಕಗಳು ಪ್ರಕಟವಾಗಲಿ ಎಂದೂ ಹಾರೈಸುವೆ.

ಇವತ್ತಿನ ಭಾನುವಾರವನ್ನು ಸಂಪನ್ನಗೊಳಿಸಿದ್ದು “ಪದ್ದಣ ಮನೋರಮೆ”…..

ಅಂದಹಾಗೆ….

ಲೇಖಕಿ “ಶಾಲಿನಿ ಹೂಲಿ ಪ್ರದೀಪ್” ರವರು.. ದಶಕಗಳ ಹಿಂದೆ ಪ್ರತಿಯೊಬ್ಬರ ಮನೆ ಮಾತಾಗಿದ್ದ ” ಮೂಡಲ ಮನೆ” ಧಾರಾವಾಹಿಯ ಸಂಭಾಷಣೆಕಾರ ಶ್ರೀ ಹೂಲಿ ಶೇಖರ್” ಅವರ ಮಗಳು. ‌

ಹೂಲಿ ಶೇಖರ್ ಸರ್ ಕತೆಗಾರ, ಕಾದಂಬರಿಕಾರ, ನಾಟಕಕಾರರು. 50 ವರ್ಷ ಕಾಲ ಕನ್ನಡ ರಂಗಭೂಮಿಯಲ್ಲಿ ನಟ, ರಂಗ ನಿರ್ದೇಶಕರಾಗಿಯೂ ಕೊಡುಗೆ ನೀಡಿದ್ದಾರೆ. ಸುಮಾರು 40 ಕ್ಕೂ ಮಿಕ್ಕಿ ನಾಟಕಗಳನ್ನು ಬರೆದಿದ್ದಾರೆ. ಕಥೆ-ಚಿತ್ರಕಥೆ-ಸಂಭಾಷಣೆ-ನಟರಾಗಿ ಕಿರುತೆರೆಯಲ್ಲಿ ಸುಮಾರು 20 ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಕರ್ನಾಟಕ ಅಕಾಡೆಮಿ ಪ್ರಶಸ್ತಿಗಳು ಸಂದಿವೆ.

‘ಪದ್ದಣ ಮನೋರಮೆ’ ಕುರಿತು ವಿವಿಧ ಲೇಖಕರ ಅಭಿಪ್ರಾಯಗಳು :


  • ಡಾ. ಪ್ರಕಾಶ ಬಾರ್ಕಿ – ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು, ಕಾಗಿನೆಲೆ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW