ಶಾಲಿನಿ ಹೂಲಿ ಪ್ರದೀಪ್ ಅವರ ‘ಪದ್ದಣ ಮನೋರಮೆ’ಯಲ್ಲಿ ಬಹುಪಾಲು ಕಥೆಗಳು ಈಗಿನ ಸಮಾಜದಲ್ಲಿ ಕಾಣುವ ಸತ್ಯತೆಯನ್ನು ಹಿಡಿದಿಟ್ಟಿದ್ದು, ಲೇಖಕಿಯ ನಿರೂಪಣಾ ಶೈಲಿ ಸರಳ, ನೇರ, ಹಾಗೆಯೇ ಗಂಭೀರವಾದ ಸಂಗತಿಗಳನ್ನು ತಿಳಿ ಹಾಸ್ಯದ ಹೊದಿಕೆಯಲ್ಲಿ ಹೇಳುವಲ್ಲಿ ಚಾತುರ್ಯ ತೋರಿಸಿದ್ದಾರೆ.ಲೇಖಕಿ ತಮ್ಮ ಮೊದಲ ಸಂಕಲನದಲ್ಲಿ ಸಾಹಿತ್ಯದ ಅಂಗಳಕ್ಕೆ ಭರವಸೆಯ ಹೆಜ್ಜೆ ಇಟ್ಟಿದ್ದಾರೆ. ಲೇಖಕರಾದ ಎನ್.ವಿ. ರಘುರಾಂ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ: ಪದ್ದಣ ಮನೋರಮೆ
(ಮುದ್ದಣ ಮನೋರಮೆ ಅವರ ಕ್ಷಮೆ ಕೋರಿ.)
ಪ್ರಕಾರ : “ಲಘು ಪ್ರಸಂಗ-ಕಥೆಗಳು.
ಲೇಖಕಿ: ಶಾಲಿನಿ ಹೂಲಿ ಪ್ರದೀಪ್.
ಪ್ರಕಾಶನ: ಆಕೃತಿ ಕನ್ನಡ ಪ್ರಕಾಶನ.
ಬೆಲೆ: ರೂ.೧೫೦.
ಖರೀದಿಗಾಗಿ : 9880424461
ಕಿರು ಪುಸ್ತಕ ಪರಿಚಯ :
ಮುದ್ದಣ – ಮನೋರಮೆಯ ಸಲ್ಲಾಪದ ಬಗ್ಗೆ ಕೇಳದೆ ಇರುವವರು ಬಹುಶಃ ಯಾರೂ ಇಲ್ಲ. ಇದಕ್ಕೆ ಕಾರಣವೆಂದರೆ ಇದು ಶಾಲೆಯಲ್ಲಿ ಇರುವಾಗಲೇ ಪಠ್ಯದ ಪುಸ್ತಕದಲ್ಲಿ ಬಂದಿರುವುದು. ಅದಕ್ಕಿಂತ ಹೆಚ್ಚಾಗಿ ಆ ಪಾಠದಲ್ಲಿ ಬರುವ “ಪದ್ಯಂ ವಧ್ಯಂ ಗದ್ಯಂ ಹೃದ್ಯಂ”, ಮತ್ತು “ನೀರಿೞಯದ ಗಂಟಲೊಳ್ ಕಡುಬಂ ತುಱುಕಿದಂತಾಯ್ತು”, “ಕನ್ನಡ ಕತ್ತುರಿಯಲ್ತೆ.” ಸಾಲುಗಳು ಎಲ್ಲ ಓದುಗರಿಗೂ ಆಪ್ತವಾಯಿತು. “ನೀರಿಳಿದ ಗಂಟಲಲ್ಲಿ…..” ಸಾಲುಗಳನ್ನು ನಾವು ಇಂಗ್ಲಿಷ್ ಕಲಿಯುವಾಗಲೂ ಮನಸ್ಸಿನಲ್ಲಿ ಅಂದುಕೊಂಡಿದ್ದು ನೆನಪಿದೆ. ಹಾಗಾಗಿ “ಪದ್ದಣ – ಮನೋರಮೆ” ಶೀರ್ಷಿಕೆಯ ಪುಸ್ತಕವೊಂದನ್ನು ನೋಡಿದ ತಕ್ಷಣ ತನ್ನ ಶೀರ್ಷಿಕೆಯಿಂದಲೇ ಅದು ಕುತೂಹಲ ಮೂಡಿಸುತ್ತದೆ. ಲೇಖಕಿ ಶ್ರೀಮತಿ ಶಾಲಿನಿ ಹೂಲಿ ಪ್ರದೀಪ್ ಬರೆದು ಪ್ರಕಟಸಿದ ಮೊದಲ ಪುಸ್ತಕವಿದು.
ಪುಸ್ತಕವೊಂದು ಚೆನ್ನಾಗಿದೆ ಎಂದು ಹೇಳಲು ಒಬ್ಬೊಬ್ಬರು ಒಂದೊಂದು ರೀತಿಯ ಮಾನದಂಡ ಇಟ್ಟುಕೊಂಡಿರುತ್ತಾರೆ. ನನ್ನ ಪ್ರಕಾರ ಪುಸ್ತಕವೊಂದು ಸಾಧ್ಯವಾದರೆ ಒಂದೆರಡು ಗುಕ್ಕಿಗೆ ಓದಿಸಿಕೊಂಡು ಹೋಗಬೇಕು. ನಂತರ ಪುಸ್ತಕದಲ್ಲಿ ಬರುವ ಪ್ರಸಂಗಗಳು ಓದುಗ ತಾನು ಕೇಳಿದ, ನೋಡಿದ, ಅನುಭವಿಸಿದ ಪ್ರಸಂಗಗಳ ಜೊತೆ ಗುರುತಿಸಿಕೊಳ್ಳುವಂತೆ ಇರಬೇಕು. ಆನಂತರ ಪ್ರಸಂಗಗಳಿಂದ ಕಲಿಯುವ ಪಾಠಗಳು ನಿಧಾನವಾಗಿಯಾದರೂ ಓದುಗನ ಮನಸ್ಸಿನಲ್ಲಿ ಅರಳುತ್ತಾ ಹೋಗಬೇಕು. ಈ ಮೂರೂ ಗುಣಗಳು ಈ ಪುಸ್ತಕದಲ್ಲಿರುವ ಪ್ರಸಂಗ-ಕಥೆಗಳಲ್ಲಿವೆ. ಹಾಗಾಗಿ ಇದೊಂದು ಚೆನ್ನಾಗಿರುವ ಪುಸ್ತಕ.

ಮುದ್ದಣ ತನ್ನ ಉತ್ತರ ರಾಮಾಯಣದ ಬೃಹತ್ ಕಥೆಯನ್ನು ಹೇಳುವಾಗ ಮುದ್ದಣ-ಮನೋರಮೆ ಸಲ್ಲಾಪದ ವಿಷಯ ಬರುತ್ತದೆ. ಆದರೆ ಈ ಪುಸ್ತಕ ಬೃಹತ್ ಕಥೆಯಿರುವ ಕಾದಂಬರಿಯಲ್ಲ. ಇದೊಂದು ೨೪ ಲಘು ಬರಹಗಳನ್ನು ಒಳಗೊಂಡ ಪುಸ್ತಕ. ಆದರೆ ಮುದ್ದಣ – ಮನೋರಮೆಯ ಸಲ್ಲಾಪದಂತೆ ಸರಳ ಕಸ್ತೂರಿ ಕನ್ನಡದಲ್ಲಿ ಬಂದಿದೆ. ಅಲ್ಲಲ್ಲಿ ಹಾರ್ಟ್, ಸೆಲೆಬ್ರಟಿ ಎನ್ನುವ ಇಂಗ್ಲಿಷ್ ಪದಗಳು ಬಂದಿದ್ದರೂ, ಕಡುಬು ತುರಿಕಿದಂತೆ ಆಗದೆ, ಮನಸ್ಸಿನಲ್ಲಿ ಸರಾಗವಾಗಿ ಇಳಿಯುತ್ತದೆ. ಇದರ ಜೊತೆಗೆ ಸಣ್ಣ ಕಥೆಗಿಂತ ಸ್ವಲ್ಪ ಸಣ್ಣ, ಪುಟ್ಟ ಕಥೆಗಿಂತ ಸ್ವಲ್ಪ ದೊಡ್ಡದಾಗಿರುವ ಬರಹಗಳು ನೇರವಾದ ನಿರೂಪಣಾ ಶೈಲಿಯಿಂದ ಈಗೀನ ಸಾಮಾಜಿಕ ಜಾಲತಾಣಗಳಲ್ಲಿ ಬರುವ ‘ಶಾರ್ಟ್ಸ’ಗಳಿಗೆ ಒಗ್ಗಿಕೊಂಡಿರುವ ಓದುಗರನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಅಲ್ಲಿ ಮುದ್ದಣ ಮೆಚ್ಚಿನ ಮಡದಿಯ ಆಸೆಯಂತೆ ಕಥೆ ಹೇಳಿದರೆ, ಇಲ್ಲಿ ಮನೋರಮೆಯೇ ಎಲ್ಲರಿಗೂ ಅನೇಕ ಪ್ರಸಂಗಗಳನ್ನು ಮತ್ತು ಕಥೆಗಳನ್ನು ಹೇಳುತ್ತಾಳೆ.
ಮರಣ ಹೊಂದಿದ ಪರಿಚಯಸ್ತರ ಮನೆಗೆ ಹೋದಾಗ ಮೃತದೇಹಕ್ಕೆ ಉಡುಸಿರುವ ಬೆಲೆ ಬಾಳುವ ಕಾಜೀವರಂ ಸೀರೆ ಮತ್ತು ವಜ್ರದ ಮೂಗುಬಟ್ಟು ಒಂದು ಕಥೆ ಹೇಳಿದರೆ, ದಪ್ಪಗಿರುವ ಗಂಡನ ಆಸೆ ಈಡೇರಿಸಲು ಸಣ್ಣ ಆಗಲು ಹೋಗಿ ಮರಣ ಹೊಂದಿದ ಆ ಹೆಂಗಸಿನ ಕಥೆ ತೆರೆದುಕೊಳ್ಳುತ್ತದೆ. ಈ ತರಹದ ಗಂಭೀರವಾದ ವಿಷಯಗಳನ್ನು ಕೂಡ “ಗೆಳೆಯನ ಹೆಂಡತಿ ರೈಟ್ ಹೇಳಿದಾಗ” ಎಂಬ ಶೀರ್ಷಿಕೆಯ ಅಡಿಯಲ್ಲಿ ಪದ್ದಣ-ಮನೋರಮೆಯ ಲಘು ಸಂಭಾಷಣೆಯ ಜೊತೆ, ಜೊತೆಯಲ್ಲಿ ತೆರೆದಿಟ್ಟಿರುವ ರೀತಿ ಅನನ್ಯ.
ಇದೇ ರೀತಿ ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಕಾರಣವಿಲ್ಲದೇ ಅರಳುವ ಪ್ರೀತಿಯ ಬಗ್ಗೆ ಒಂದಿಷ್ಟು ಪ್ರಸಂಗಗಳು ನಗು ತರಿಸದೇ ಇರುವುದಿಲ್ಲ. ಇನ್ನೊಂದು ಕಡೆ ಹೆಣ್ಣಿನ ಬಣ್ಣ, ಆಕಾರ, ಅಲಂಕಾರಗಳ ಬಗ್ಗೆ ಹೇಳುತ್ತಾ ಸಾಗುವ ಪ್ರಸಂಗಗಳು ಪದ್ದಣನನ್ನು ಆಗಾಗ ಪೇಚಿಗೆ ಸಿಲುಕಿಸಿದರೂ, ಆ ಬಗ್ಗೆ ಹೆಣ್ಣಿಗೆ ಕೀಳರಿಮೆ ಬೇಡ ಎಂದು ಹೇಳುವುದರಲ್ಲಿ ಯಶಸ್ವಿಯಾಗಿವೆ. ಪದ್ದಣ ಜೋಳದ ರೊಟ್ಟಿ ಜೊತೆ ಖಾರದ ಪಲ್ಯ ತಿಂದು ಒದ್ದಾಡುವ ಸಂದರ್ಭದಲ್ಲಿ ಹಳ್ಳಿಯ ಜನರ ನಿಷ್ಕಲ್ಮಶ ಪ್ರೀತಿಯ ಅನಾವರಣವಾದರೆ, ಶಾಲೆಯ ಪರೀಕ್ಷೆಗಳಲ್ಲಿ ಹಿಂದಿದ್ದ ಕಥೆಗಾರ್ತಿ ಜೀವನದ ಪರೀಕ್ಷೆಯಲ್ಲಿ ಮುಂದೆ ಬಂದಿರುವ ವಿಷಯ ಇನ್ನೊಂದು ಕಥೆಯಲ್ಲಿ ತೆರೆದುಕೊಳ್ಳುತ್ತದೆ.
ಹೆಣ್ಣಿನ ಭ್ರಮೆ, ಕನಸು, ದುಡಿಮೆ, ದಾಂಪತ್ಯದಲ್ಲಿ ಹೊಂದಾಣಿಕೆ, ಮಕ್ಕಳ ಜವಾಬ್ದಾರಿ ಹೀಗೆ ಹತ್ತು ಹಲವು ವಿಷಯಗಳ ಸುತ್ತ ಬಂದಿರುವ ಕಥೆಗಳು ಓದುಗರನ್ನು ಬರಹಗಳಲ್ಲಿರುವ ಪಾತ್ರಗಳನ್ನಾಗಿ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿವೆ. ಅದರ ಜೊತೆಗೆ ಪದ್ದಣನಿಗೆ ಮನೋರಮೆ ಮೇಲಿರುವ ಪ್ರೀತಿ, ಆಗಾಗ ಬರುವ ಕೋಪ, ಆತ ಮಾಡಿಕೊಳ್ಳುವ ಹೊಂದಾಣಿಕೆ ಜೊತೆಗೆ ಆಕೆಗೆ ಕೊಡುವ ಗೌರವ ಕೂಡ ತೆರೆದುಕೊಂಡು ಬರಹದಲ್ಲಿ ಸಾಕಷ್ಟು ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ. ಹಾಗಾಗಿ ಪುಸ್ತಕದ ಶೀರ್ಷಿಕೆಯು ಓದುಗರ ಮನದಲ್ಲಿ ಹೊತ್ತು ತರುವ ನಿರೀಕ್ಷೆಗಳನ್ನು ಮುಟ್ಟುವುದರಲ್ಲಿ ಸಾಕಷ್ಟು ಯಶಸ್ವಿಯಾಗುತ್ತದೆ.
ಲಘು ಬರಹಕ್ಕೆ ತಕ್ಕಂತ ಶೀರ್ಷಿಕೆಗಳೂ ಕೂಡ ಗಮನ ಸೆಳೆಯುತ್ತದೆ. “ಹಾರ್ಟ್ ಢಂ ಅಂದ್ರೇ…..”, “ಲಿಲ್ಲಿ ಗಂಡನ ಕಥೆ”, “ಅಬ್ಬಾ…! ಆದಿನ”, “ಸೆಲೆಬ್ರಟಿ ಗಂಡಾ -ಗುಂಡಿ ಕೈ ಕೈ” ಮುಂತಾದ ಶೀರ್ಷಿಕೆಗಳು ಅರ್ಥವತ್ತಾಗಿದೆ.

“ಆಕೃತಿ ಕನ್ನಡ” ಎಂಬ ಸಾಮಾಜಿಕ ಜಾಲತಾಣದ ಸಂಪಾದಕರಾಗಿ ಕನ್ನಡ ಭಾಷೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಶ್ರೀಮತಿ ಶಾಲಿನಿ ಹೂಲಿ ಪ್ರದೀಪರ ಮೊದಲ ಈ ಪುಸ್ತಕ ಆಕೃತಿ ಕನ್ನಡ ಪ್ರಕಾಶನದಿಂದ ಪ್ರಕಟವಾಗಿದೆ. ಇಲ್ಲಿನ ಬಹುಪಾಲು ಕಥೆಗಳು ಈಗಿನ ಸಮಾಜದಲ್ಲಿ ಕಾಣುವ ಸತ್ಯತೆಯನ್ನು ಹಿಡಿದಿಟ್ಟಿವೆ. ಲೇಖಕಿಯ ನಿರೂಪಣಾ ಶೈಲಿ ಸರಳ, ನೇರ, ಹಾಗೆಯೇ ಗಂಭೀರವಾದ ಸಂಗತಿಗಳನ್ನು ತಿಳಿ ಹಾಸ್ಯದ ಹೊದಿಕೆಯಲ್ಲಿ ಹೇಳುವಲ್ಲಿ ಚಾತುರ್ಯ ತೋರಿಸಿದ್ದಾರೆ. ಲೇಖಕಿ ತಮ್ಮ ಮೊದಲ ಸಂಕಲನದಲ್ಲಿ ಸಾಹಿತ್ಯದ ಅಂಗಳಕ್ಕೆ ಭರವಸೆಯ ಹೆಜ್ಜೆ ಇಟ್ಟಿದ್ದಾರೆ. ಈ ಲಘು ಬರಹಗಳ ಹಿಂದಿನ ಗಂಭೀರ ಚಿಂತನೆ, ಕಲಾತ್ಮಕ ದೃಷ್ಟಿಕೋನ ಮತ್ತು ಸಮಕಾಲೀನ ಸಮಾಜದ ಪ್ರತಿಫಲನಗಳು ಬರಹಗಳಲ್ಲಿ ಕಂಡು ಬಂದಿದೆ. ಅಲ್ಲಲ್ಲಿ ವಿಸ್ತರಿಸಲು ಕೂಡ ಸಾಕಷ್ಟು ಅವಕಾಶವಿದೆ. ಮುಂದಿನ ದಿನಗಳಲ್ಲಿ ಇವರಿಂದ ಕನ್ನಡ ಸಾರಸ್ವತ ಲೋಕ ಇನ್ನಷ್ಟು ಸಂಪದ್ಭರಿತವಾಗಲಿ ಎಂದು ಆಶಿಸುತ್ತೇನೆ.
ಮುದ್ದಣ-ಮನೋರಮೆಯ ಸಲ್ಲಾಪದಲ್ಲಿ “ಒಂದು ಒಳ್ಳೆಯ ಕಥೆ ಹೇಳಿದರೆ ಅರಮನೆಯಲ್ಲಾದರೆ ರತ್ನದ ಕಡಗ, ಹೊನ್ನಿನ ಹಾರವನ್ನು ಮೆಚ್ಚುಗೆಯೆಂದು ಕೊಡುವರು. ನೀನೇನು ಕೊಡುತ್ತೀ?” ಎಂದು ಮುದ್ದಣ ಮನೋರಮೆಗೆ ಕೇಳುತ್ತಾನೆ. ಆಗ “ಅರಮನೆಯವರಾದರೂ ಕಾವ್ಯ ಹೇಗಿದೆ ಎಂದು ನೋಡಿದ ಮೇಲೆಯೇ ಅಲ್ಲವೇ ಉಡುಗೊರೆ ಕೊಡುವುದು? ಹಾಗೆಯೇ ನಾನು ಸಹ ಕಥೆ ಕೇಳಿದಮೇಲೆ ಸೊಗಸಾಗಿದ್ದರೆ ಸನ್ಮಾನಿಸುವೆ” ಎಂದು ಮನೋರಮೆ ಹೇಳುವ ಮಾತು ಬರುತ್ತದೆ. ಈಗ ನಾನು “ಪದ್ದಣ-ಮನೋರಮೆ” ಎನ್ನುವ ಸೊಗಸಾದ ಪುಸ್ತಕ ಓದಿರುವುದರಿಂದ, ಕಥೆ ಹೇಳಿದ ಲೇಖಕಿಗೆ ಅಭಿನಂದನೆಗಳನ್ನು ಸಲ್ಲಿಸುವ ಸಮಯ ಬಂದಿದೆ. ಉತ್ತಮ ಪುಸ್ತಕ ಕೊಟ್ಟ ಲೇಖಕಿಗೆ ಧನ್ಯವಾದಗಳು.
‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ರಮ್ಯ ರಾಜ್
- ‘ಪದ್ದಣ ಮನೋರಮೆ’ ಲಘು ಪ್ರಸಂಗಗಳು – ಹೆಚ್. ಪಿ. ಕೃಷ್ಣಮೂರ್ತಿ
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ದೇವರಾಜ ಚಾರ್
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ಚನ್ನಕೇಶವ ಜಿ ಲಾಳನಕಟ್ಟೆ
- ಎನ್.ವಿ. ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್) ಕ.ವಿ.ನಿ.ನಿ., ಬೆಂಗಳೂರು.
