ಪಾಲಕ ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು, ಅದನ್ನು ಇಷ್ಟಪಡದೆ ಇರುವವರು ಪಕೋಡ ಮಾಡಿ ತಿಂದರೆ ಪಾಲಕ ದೇಹದೊಳಗೆ ಹೋಗುವುದಷ್ಟೇ ಅಲ್ಲ, ಪಾಲಕ ಪ್ರಿಯರನ್ನಾಗಿ ಮಾಡುತ್ತದೆ. ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರ ಪಾಲಕ್ ಪಕೋಡ ಮಾಡುವ ಬಗೆಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೇಕಾಗುವ ಪದಾರ್ಥಗಳು :
- ಪಾಲಕ್ ಸೊಪ್ಪು – 1 ಕಂತೆ
- ಈರುಳ್ಳಿ – 1
- ಗೋಡಂಬಿ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
- ಅಚ್ಚ ಮೆಣಸಿನ ಪುಡಿ – 2ಸ್ಪೂನ್
- ಜೀರಿಗೆ – 1 ಸ್ಪೂನ್
- ಓಂ ಕಾಳು – ಅರ್ಧ ಸ್ಪೂನ್
- ಕಡ್ಲೆಹಿಟ್ಟು – 4 ಸ್ಪೂನ್
- ಅಕ್ಕಿ ಹಿಟ್ಟು – 2 ಸ್ಪೂನ್
- ಕಾಯಿಸಿದ ಬಿಸಿ ಎಣ್ಣೆ – 2 ಸ್ಪೂನ್
- ಕರಿಯಲು ಎಣ್ಣೆ
ಮಾಡುವ ವಿಧಾನ : ಮೊದಲಿಗೆ ಪಾಲಕ್ ಸೊಪ್ಪು ಹಾಗೂ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಬಾಣಲಿಗೆ ಎಣ್ಣೆ ಕಾಯಲು ಇಡಿ. ಒಂದು ಪಾತ್ರೆಗೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಪಾಲಕ್ ಸೊಪ್ಪಿನಲ್ಲಿ ನೀರಿನಂಶ ಇರುವುದರಿಂದ ಕಲಿಸುವಾಗ ನೀರಿನ ಅವಶ್ಯಕತೆ ಇರುವುದಿಲ್ಲ 2 ಸ್ಪೂನ್ ಬಿಸಿ ಎಣ್ಣೆ ಹಾಕಿ ಕಲಸಿದರೆ ಸರಿ ಹೋಗುತ್ತದೆ. ಈಗ ಕಾದ ಎಣ್ಣೆಯಲ್ಲಿ ಪಾಲಕ್ ಮಿಶ್ರಣವನ್ನು ಕೈಯಲ್ಲಿ ತೆಗೆದು ಕೊಂಡು ಪಕೋಡ ಹಾಕಿ ಗರಿಗರಿಯಾಗಿ ಕರಿಯಿರಿ.
ಈಗ ಪಕೋಡ ರೆಡಿ.ಸಾಸ್ ಕೆಚಪ್ ಜೊತೆ ಸವಿಯಿರಿ.
- ಶಕುಂತಲಾ ಸವಿ – ಮೈಸೂರು




