ಕಳೆದುಕೊಂಡದ್ದು ನಿದ್ದೆ, ನೆಮ್ಮದಿಯಲ್ಲ

ಕಳೆದುಕೊಂಡಿದ್ದು ನಿದ್ದೆಯಾದರು ನೆಮ್ಮದಿಯಿದೆ. ಇರಲವ್ವ ಮನೆತುಂಬ ಮಕ್ಕಳು ಅಂತೀವಿ. ಮನೆ ತುಂಬಾ ಮಕ್ಕಳು ಬೇಡ, ಎರಡು ಮಕ್ಕಳು ಸಾಕುವಷ್ಟರಲ್ಲಿ ತಾಯಿಯ ಆರೋಗ್ಯ ಮೇಲೆ ಕೆಳಗೆ ಆಗುತ್ತೆ. ಹಾಗಂತ ಯಾವುದೇ ಬೇಸರವಿಲ್ಲ. ಅದರಲ್ಲಿಯೂ ಒಂದು ಹಿತ ಕಂಡ ಬದುಕದು. ಆಶ್ರಿತಾ ಕಿರಣ್ ರಾವ್ ಅವರ ಬದುಕಿನ ಒಂದು ಚಿತ್ರಣ.

ಮದುವೆಗೆ ಮೊದಲು ಮುಂಜಾನೆ 5 30 ಕ್ಕೆ ಎದ್ದು ರಾತ್ರಿ 10 30 ರ ಒಳಗೆ ಮಲಗುವ ದಿನಚರಿಯನ್ನು ಪಾಲಿಸಿಕೊಂಡು ಬಂದಿದ್ದವಳು ನಾನು. ಮಗಳು ಹುಟ್ಟಿದ ದಿನದಿಂದ ನನ್ನ ದಿನಚರಿ ಸಂಪೂರ್ಣ ಬದಲಾಯಿತು. ನನ್ನ ಪ್ರಪಂಚ ಅವಳಾಗಿದ್ದಳು. ಅವಳು ನನ್ನ ಉದರಲ್ಲಿದ್ದ ದಿನದಿಂದ ನಿದ್ರಾದೇವಿ ನನ್ನಿಂದ ಕೊಂಚ ದೂರ ಸರಿದಿದ್ದಳು. ಬಹುಶಃ ಮುಂದಿನ ದಿನಗಳ ಬಗ್ಗೆ ನನ್ನನ್ನು ಮಾನಸಿಕವಾಗಿ ಸಿದ್ದಗೊಳಿಸಲು ಹಾಗೆ ದೂರ ಸರಿದಳೆಂದು ಕಾಣುತ್ತದೆ. ಮಗಳು ಹುಟ್ಟಿದ ಆರಂಭದ ಐದು ತಿಂಗಳು ಅಮ್ಮನ ಮನೆಯಲ್ಲಿದ್ದೆ. ನಿದ್ದೆಗೆ ನನ್ನ ಜೊತೆ ಅವರು ಟಾಟಾ ಬೈ ಹೇಳಿದ್ದರು. ಅಮ್ಮ ,ಅಜ್ಜಿ ,ಅಪ್ಪ ಹಾಗು ನಾನು ಒಬ್ಬೊಬ್ಬರಾಗಿ ಮಗುವಿನೊಂದಿಗೆ ರಾತ್ರಿ ಕುಳಿತು ಆಡುತ್ತಿದ್ದೆವು.

“ಮೊದಲ ಮೂರು ತಿಂಗಳು ಹೀಗೆ ಆಮೇಲೆ ಸರಿ ಆಗುತ್ತೆ” ಎಂದು ಒಂದಿಷ್ಟು ಜನ ಧೈರ್ಯ ಹೇಳಿದರೆ “ನೀನು ಹಗಲು ಮಲಗಿಸಬೇಡ ಆಗಿ ಸರಿ ಹೋಗುತ್ತದೆ. ನೀನು routine set ಮಾಡಿಲ್ಲ” ಎಂದು ನನ್ನದೇ ತಪ್ಪೆಂದು ಹೇಳಿದವರು ಅನೇಕರು. ಅದೆಷ್ಟೇ ಪ್ರಯತ್ನ ಪಟ್ಟರೂ ಅವಳ sleeping pattern ಬದಲಾಯಿಸಲು ಸಾಧ್ಯವಾಗುತ್ತಿರಲಿಲ್ಲ. ದೇವರ ಮೇಲೆ ಭಾರ ಹಾಕಿ ಅವಳು ಮಲಗಿದಾಗ ಮಲಗಲಿ ಎಂದು ಅವಳೊಡನೆ ಆಟವಾಡುತ್ತಿದ್ದೆ. ಆ ಸಮಯ ಅಳುವೊಂದು ಬಿಟ್ಟು ಬೇರೇ ಏನೂ ತಲೆಗೆ ಹೋಗುತ್ತಿರಲಿಲ್ಲ. ಸಮಯ ಸರಿದಿದ್ದು ತಿಳಿಯಲಿಲ್ಲ. ಮಗಳಿಗೆ ಮೂರು ವರುಷ ತುಂಬಿ ಮೂರು ದಿನಕ್ಕೆ ಮಗ ಹುಟ್ಟಿದ. ಮಗಳು ಶಾಲೆಗೆ ಹೋಗಲು ಆರಂಭಿಸಿದಳು. ಸರಿಯಾಗಿ ಮೂರುವರೆ ವರುಷದ ಮೇಲೆ ರಾತ್ರಿ ನಿದ್ದೆ ಮಾಡಿದರೆ ಬೆಳಿಗ್ಗೆ ಏಳುವುದನ್ನು ಅವಳಷ್ಟಕ್ಕೆ ಅಭ್ಯಾಸ ಮಾಡಿಕೊಂಡಳು. ಬಹುಶಃ ಆ ದೇವರು ಕೊಟ್ಟ ವರ ಇರಬೇಕು. ನಾನು ಹಾಗು ನನ್ನ ತಂದೆ ತಾಯಿ ಅಜ್ಜಿ ಮತ್ತೊಮ್ಮೆ ಮಗನಿಗಾಗಿ ನಿದ್ದೆಯನ್ನು ಬಿಡಲು ಸಿದ್ದರಾದ್ದೆವು.

ಈ ಬಾರಿ ನಾನು ಗಟ್ಟಿಯಾಗಿ ನಿರ್ಧರಿಸಿದ್ದೆ. ಯಾರ ಮಾತಿಗೂ ತಲೆ ಕೊಡಬಾರದು ಎನ್ನುವುದನ್ನು ಮನಸ್ಸಿಗೆ ಆಗಾಗ ಹೇಳಿಕೊಳ್ಳಿತ್ತಿದ್ದೆ. ಅಮ್ಮನ ಮನೆಯಲ್ಲಿ ಇದಷ್ಟು ದಿನ ಗೊತ್ತಾಗಲಿಲ್ಲ. ಮರಳಿ ನನ್ನ ಗೂಡಿಗೆ ಬಂದಾಗ ಇಬ್ಬರನ್ನು ಸಂಭಾಳಿಸಿಕೊಂಡು ಹೋಗುವುದು ಬಹಳಾ ಕಷ್ಟದ ಕೆಲಸವಾಗಿತ್ತು. ರಾತ್ರಿಯಾದರೆ ಭಯವಾಗುತ್ತಿತ್ತು. ಮಗಳನ್ನು ಮಲಗಿಸಿ ಮಗನೊಂದಿಗೆ ಆಟವಾಡಲು ಕೂರುತ್ತಿದ್ದೆ. ಮುಂಜಾನೆ ಮೂರರವರೆಗೆ ಆಡಿ ಮಲಗುತ್ತಿದ್ದೆ. ಮಗಳು ಆರಕ್ಕೆ ಏಳುತ್ತಿದ್ದಳು. ದಿನದಲ್ಲಿ ಮೂರಿಂದ ನಾಲ್ಕು ಗಂಟೆ ಮಾತ್ರ ನಾನು ಮಲಗುತ್ತಿದ್ದೆ. ಕುಟುಂಬದ ಯಾವ ಸಮಾರಂಭದಲ್ಲಿ ನನಗೆ ಪಾಲ್ಗೊಳ್ಳಲು ಚೈತನ್ಯವೇ ಇರುತ್ತಿರಲಿಲ್ಲ. “ನೀನೊಬ್ಬಳೇ ಮಕ್ಕಳನ್ನು ಬೆಳೆಸುತ್ತಿರುವುದಾ? ಕರೆದುಕೊಂಡು ಬಾ ಅಭ್ಯಾಸ ಆಗುತ್ತೆ” ಎಂದು‌ ಹೇಳಿದವರ ಸಂಖ್ಯೆ ಲೆಕ್ಕಕ್ಕಿಲ್ಲ. ಅವೆಲ್ಲ ಮುಗಿದ ಅಧ್ಯಾಯ. ಈಗ ಹೊಸ ಅಧ್ಯಾಯ ಹೇಳೋಕೆ ಇಷ್ಟು ಬರೆದೆ.

ಮಗ ಈ ವರುಷ ಶಾಲೆಗೆ ಹೋಗ್ತಾ ಇದ್ದಾನೆ. ಮಧ್ಯಾಹ್ನ ಬಂದವನು ನಿದ್ದೆ ಮಾಡ್ತಾನೆ. ಆದರೆ ರಾತ್ರಿ 11 ರ ಒಳಗೆ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ನಾನೇನು ಬದಲಾಯಿಸಿಲ್ಲ. ಅವನೇ ತಿದ್ದಿಕೊಂಡಿದ್ದಾನೆ.

6 ವರುಷ 8 ತಿಂಗಳು ರಾತ್ರಿ ನಿದ್ದೆಗೆಟ್ಟವಳು ಈಗ ನೆಮ್ಮದಿಯಾಗಿ ರಾತ್ರಿ ಮಲಗುತ್ತಿದ್ದೇನೆ. ಇಷ್ಟು ವರುಷ ನಿದ್ದೆಗಾಗಿ ಪರದಾಡಿದೆ. ಆದರೆ ನನ್ನ ಮಕ್ಕಳು ಬೇರೆ ಯಾವ ವಿಷಯಕ್ಕೂ ನನ್ನನ್ನು ಗೋಳಾಡಿಸಿಲ್ಲ ಎನ್ನುವುದನ್ನು ಹೇಳದೆ ಇದ್ದರೆ ತಪ್ಪಾಗುತ್ತದೆ. ಮಕ್ಕಳೆಂದ ಮೇಲೆ ತುಂಟಾಟ ಸಹಜ. ನನ್ನ ಮಕ್ಕಳು ಅಷ್ಟೇ ತುಂಟರು. ಈ ಆರು ವರುಷ ನನ್ನ ಗಂಡನಿಗಿದ್ದ work preassure ಇಂದ ರಾತ್ರಿ ನಿದ್ದೆಗೆಡುವುದು ಅವರಿಂದ ಸಾಧ್ಯವಿರಲಿಲ್ಲ. ಹಾಗಾಗಿ ಒಂಟಿಯಾಗಿ ಗೆಲ್ಲಬೇಕಾಯಿತು. ಊಟ ತಿಂಡಿಗೆ ನನ್ನವರು ಯಾವುದಕ್ಕೂ ಆಕ್ಷೇಪ ಮಾಡುತ್ತಿರಲಿಲ್ಲ. ಮಾಡಿದ್ದು ಹೇಗಿದ್ದರು ಚೆನ್ನಾಗಿದೆ ಎಂದು ತಿಂದು ನನ್ನ ಮಾನಸಿಕ ನೆಮ್ಮದಿ ಕಾಯ್ದುಕೊಳ್ಳಲು ಸಹಕರಿಸಿದ್ದಾರೆ. ಸಹಕರಿಸುತ್ತಿದ್ದಾರೆ.

ಮಗಳಿಗಾಗಿ ನಿದ್ದೆಗೆಡುವ ಸಮಯದಲ್ಲಿ ಅತ್ತಿದ್ದೇ ಹೆಚ್ಚು. ಆದರೆ ಮಗನಿಗಾಗಿ ನಿದ್ದೆಗೆಡುವಾಗ ಓದಲು ಆರಂಭಿಸಿದೆ. ಆ ಓದು ಬರವಣಿಗೆಯ ಕಡೆಗೆ ನನ್ನನ್ನು ತಳ್ಳಿತು. ರಾತ್ರಿ ನನ್ನ ಮಗ ಆಡುವಾಗ ಅವನೊಂದಿಗೆ ಸುತ್ತುತ್ತಾ ಬರೆಯಲು ಆರಂಭಿಸಿದೆ. ನಿದ್ದೆ ಬಿಡುವ ಸಂಕಟ ತಿಳಿಯಲೇ ಇಲ್ಲ. ಈ 6 ವರೆ ವರುಷ ನಾನು ಹೊರಗೆ ಹೋಗಿದ್ದು ಕಡಿಮೆ. “ಎಲ್ಲೂ ಬರಲ್ಲ” ಎಂದು ಹೇಳಿಸಿಕೊಂಡಿದ್ದು ಜಾಸ್ತಿ. ನಿದ್ದೆ ಗೆಟ್ಟು ತಿರುಗುವ ಶಕ್ತಿ ನನಗಿರಲಿಲ್ಲ. ಹಾಗಾಗಿ ನಾನು ಹೋಗುತ್ತಿರಲಿಲ್ಲ. ಆದರೆ ಕೇಳಿದ ಮಾತುಗಳು ಮರೆಯಬೇಕೆಂದರೂ ಆಗುತ್ತಿಲ್ಲ .ಮನದಲ್ಲಿ ಉಳಿದಿದೆ. ಈಗ “ಮಕ್ಕಳು ಸ್ಕೂಲ್ ಗೆ ಹೋಗ್ತಾರೆ.” ನೀನು ಈಗ ಫ್ರೀ.. ಆರಾಮ್ ಆಯ್ತು” ಎಂದು ಹೇಳುವುದನ್ನು ಕೇಳುವಾಗ ನಗು ಬರುತ್ತದೆ. ಮಕ್ಕಳು ಮನೆಯಲ್ಲಿ ಇದ್ದಾಗ ಸಿಗುತ್ತಿದ್ದ ಸಮಯ ಈಗ ಸಿಗುತ್ತಿಲ್ಲ. ಒಂದೇ ಶಾಲೆಯಾಗಿದ್ದರೂ ಇಬ್ಬರ ಶಾಲೆಯ ಸಮಯ ಬೇರೆಯಾಗಿದೆ. ಬಿಟ್ಟು ಬಾ ಕರೆದುಕೊಂಡು ಬಾ ಎನ್ನುವುದರಲ್ಲಿ ಸಮಯ ಹೋಗಿದ್ದು ತಿಳಿಯುತ್ತಿಲ್ಲ. ಮಕ್ಕಳನ್ನು ಸಂಭಾಳಿಸಿಕೊಂಡು ಮನೆಯ ಕೆಲಸ ನಿಭಾಯಿಸಿ ಹೊರಗೆ ದುಡಿಯಲು ಹೋಗುತ್ತಿರುವ ತಾಯಂದಿರಿಗೆ ನನ್ನದೊಂದು ಸಲಾಂ. ನಿಮ್ಮಂತೆ ನಾನು ಎಲ್ಲವನ್ನೂ ಸಂಭಾಳಿಸಿಕೊಂಡು ನನ್ನ ವೃತ್ತಿಯನ್ನು ಮುಂದುವರೆಸುವ ಹಂಬಲವಿದೆ. ಆದರೆ ಕೆಲ ಸಮಯ ಚೆನ್ನಾಗಿ ನಿದ್ದೆ ಮಾಡಿ ಮತ್ತೆ ಆರಂಭಿಸಬೇಕೆಂದಿರುವೆ.

ಮಕ್ಕಳಿಗೆ ಕೊಡುವಷ್ಟು ಸಮಯ ಕೊಟ್ಟಿರುವೆ ಎನ್ನುವ ತೃಪ್ತಿ ಇದೆ. ಕಷ್ಟವಾಗಿದ್ದು ಸುಳ್ಳಲ್ಲ. ಆದರೆ ಕೇವಲ ಕಷ್ಟ ಮಾತ್ರ ಇರ್ಲಿಲ್ಲ. ನನ್ನನ್ನು ಕಂಡೊಡನೆ ಅವರ ಮುಖದಲ್ಲಿ ಮೂಡುವ ನಗು, ನಾನು ಎಲ್ಲಿಗೂ ಹೋಗಲಾರೆ ಎನ್ನುವ ಅವರ ವಿಶ್ವಾಸ ಅವರ ಕಣ್ಣುಗಳಲ್ಲಿ ಕಂಡಾಗ ನೆಮ್ಮದಿ ಎನಿಸುತ್ತದೆ. ಕಳೆದುಕೊಂಡಿದ್ದು ನಿದ್ದೆ..ಒಂಚೂರು ಆರೋಗ್ಯ. ಎರಡನ್ನೂ ಇನ್ನು ಸರಿ ಪಡಿಸಿಕೊಳ್ಳುವ ಸಮಯ ಬಂದಾಗಿದೆ. ಅದರತ್ತ ಹೆಜ್ಜೆ ಇಟ್ಟಿದ್ದೇನೆ. ಎಲ್ಲಾ ತಾಯಂದಿರು ಈ ಹಂತ ದಾಟಿರುತ್ತಾರೆ. ಎಲ್ಲರಂತೆ ನಾನು ದಾಟಿರುವೆ.


  • ಆಶ್ರಿತಾ ಕಿರಣ್ ರಾವ್

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW