ವಿವಿಧ ಲೇಖಕರ ರಚನೆಯ ‘ಪಾರಿಜಾತ’ (ದೇವಲೋಕದ ಪುಷ್ಪ) ಕಥಾ ಸಂಕಲನದ ಕೃತಿಯ ಕುರಿತು ಲೇಖಕರಾದ ವಾಣಿ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ: ಪಾರಿಜಾತ (ಕಥಾ ಸಂಕಲನ)
ಲೇಖಕರು: ವಿವಿಧ ಲೇಖಕರು
ಒಟ್ಟೂ ಕಥೆಗಳ ಸಂಖ್ಯೆ: ೨೫
ಪುಟಗಳು: ೧೮೦
ಬೆಲೆ: ₹೨೩೦/-
ಪ್ರಕಾಶಕರು: ಒಕ್ಕೂಟ ಪ್ರಕಾಶನ

ಜಾಲತಾಣದ ವಿವಿಧ ಗುಂಪುಗಳಲ್ಲಿ “ಫೇಕ್ ಅಕೌಂಟುಗಳ ಒಕ್ಕೂಟ” ಕೂಡ ಒಂದು. ಈ ಗುಂಪಿನ ವಾರ್ಷಿಕೋತ್ಸವದ ನಿಮಿತ್ತ ಏರ್ಪಡಿಸಿದ್ದ ಕಥಾಸ್ಪರ್ಧೆಯ ಆಯ್ದ ಕಥೆಗಳು ಈ ಪುಸ್ತಕದಲ್ಲಿವೆ. ಸ್ಪರ್ಧೆಗೆ ಇಂತದ್ದೇ ವಿಷಯ ಎಂದು ಕೊಡದಿರುವ ಕಾರಣ, ವಿಭಿನ್ನ ವಿಷಯವಸ್ತುವಿನ ಮನತಟ್ಟುವ ಕಥೆಗಳು ಈ ಪುಸ್ತಕದಲ್ಲಿವೆ. ಪ್ರೀತಿ-ಪ್ರೇಮ, ಭಯಾನಕ, ಹಾಸ್ಯ, ಮನೋವಿಜ್ಞಾನ ಹಾಗೂ ಸಾಮಾಜಿಕ ಕಳಕಳಿಯ ಕಥೆಗಳಿವೆ. ೨೫ ಕಥೆಗಳಲ್ಲಿ ನನಗೆ ಬಹಳ ಇಷ್ಟವಾದ ಕೆಲವು ಕಥೆಗಳನ್ನು ಇಲ್ಲಿ ಪರಿಚಯಿಸಲು ಬಯಸುತ್ತೇನೆ.

೧. ಮೌನದ ಮುಸುಕಿನ ಭಾವ ಅಶ್ವಿನಿ ಸುನಿಲ್ ಅವರು ಬರೆದದ್ದು. ಶಾರದೆ ಹಳ್ಳಿಮನೆಯ ಸೊಸೆಯಾಗಿ ಗಂಡನನ್ನು ಕಳೆದುಕೊಂಡ ಏಕಾಂಗಿ, ಆ ಮನೆಯಲ್ಲಿ ವಯಸ್ಸಾದ ಮಾವನ ಹೊರತೂ ಅವಳ ಬಗ್ಗೆ ಕಾಳಜಿ ಮಾಡುವ ಒಬ್ಬರೂ ಇಲ್ಲ. ಮನೆಯ ಸದಸ್ಯೆಯಾಗಿಯೂ ಆಳಿನಂತೆ ದುಡಿತಾಯದ ಜೀವನ, ಸಾಲದ್ದಕ್ಕೆ ಉಣ್ಣಲೂ ಆಗದ ಉಗುಳಲೂ ಆಗದಂತೆ, ಬೆನ್ನಿಗೆ ಬಿದ್ದು ಸತಾಯಿಸುವ, ಕೆಟ್ಟ ದೃಷ್ಟಿಯಿಂದ ನೋಡುವ ಸೋದರಳಿಯನ ಕಾಟ! ಇದ್ದೊಬ್ಬ ಮಗಳನ್ನು ಈ ಕೇಡುಗನಿಂದ ರಕ್ಷಿಸಲು ಮಗಳುನ್ನು ಪಟ್ಟಣಕ್ಕೆ ಓದಿಸಲು ಕಳಿಸಿದ್ದಾಳೆ. ಆ ದಿನ…ಮನೆಯವರೆಲ್ಲಾ ಜಾತ್ರೆಗೆ ಹೋದಾಗ, ಮನೆಯಲ್ಲಿ ಮಾವ ಮಾತ್ರ ಇರುವಾಗ, ಶಾರದೆ ಹುಲ್ಲು ತರಲು ಬೆಟ್ಟಕ್ಕೆ ಹೋಗಿದ್ದಾಳೆ. ಇದ್ದಕ್ಕಿದ್ದಂತೆ ನೆನಪಾಯ್ತು, ಮಗಳು ಸಂಜೆ ಬರುತ್ತೇನೆ ಎಂದದ್ದು. ಯಾರಿಲ್ಲದ ಮನೆಯಲ್ಲಿ, ಮುಗ್ಧ ಮಗಳು ಒಂಟಿಯಾಗಿದ್ದಾಳೆಂದು ಓಡೋಡಿ ಬಂದ ಶಾರದೆಗೆ ಕಂಡಿದ್ದೇನು? ಈ ಕಥೆಯ ಅಂತ್ಯ ಹೆಣ್ಮನಸ್ಸಿಗೆ ನೆಮ್ಮದಿ ಕೊಡುವಂತದ್ದು, ಶಾರದೆಯ ಮಾವನವರ ವ್ಯಕ್ತಿತ್ವ ಓದುಗನಮನದಲ್ಲಿ ಶಾಶ್ವತ ಸ್ಥಾನ ಪಡೆಯುವುದು.

೨. ರಾಜಮಹಲ್ ನೀವು ಹಾರರ್ ಕಥೆಗಳನ್ನು ಇಷ್ಟ ಪಡುವವರಾದರೆ ಅಪರ್ಣಾ ಅವರ ಈ ಕಥೆ ನಿಮಗೆ ಇಷ್ಟವಾಗುತ್ತದೆ. ನಾನಂತೂ ಓದಿ ಮುಗಿಯುವವರೆಗೂ ಉಸಿರು ಬಿಗಿಹಿಡಿದು ಕೂತಿದ್ದೆ.
“ರಾಜಮಹಲ್” ಒಂದೊಮ್ಮೆ ಹೆಸರಾಂತ ಕಲ್ಯಾಣಮಂಟಪವಾಗಿ ಈಗ ಹಾಳು ಬಿದ್ದಿತ್ತು. ಅದರ ಈಗಿನ ಒಡೆಯ ಸ್ಕಂದ, ರಾಧೆ ಅವನ ಸ್ನೇಹಿತೆ. ಆ ಹಳೆಯ ಕಟ್ಟಡವನ್ನು ಡಿಮಾಲಿಶ್ ಮಾಡಿ ಹೊಸ ಕಟ್ಟಡ ಕಟ್ಟುವ ಮುನ್ನ, ಹಳೆಯ ಕಟ್ಟಡದ ಅಂದ-ಚಂದವನ್ನು ರಾಧೆಯ ಬಳಿ ಪೋಟೊಗ್ರಾಪೀ ಮಾಡಲು ಕೇಳಿಕೊಲ್ಳುತ್ತಾನೆ. ರಾಧೆ ಅಲ್ಲಿಗೆ ಹೋದಾಗ ಅವಳಿಗಾಗುವ ಅನುಭವವೇ ಈ ಕಥೆ. ಆ ರಾಜಮಹಲಿನ ರಹಸ್ಯವೇನು? ನೂರಾರು ಮದುವೆಗಳನ್ನು ನೋಡಿದ ಕಲ್ಯಾಣಮಂಟಪ ಹಾಳುಬೀಳಲು ಕಾರಣವೇನು? ಓದಿ ನೋಡಿ.

೩. ಕಾಣದ ಕೈಗಳು ಇದು ಕೂಡ ಭಯಾನಕ ಕಥೆಗಳ ಸಾಲಿಗೆ ಸೇರುವ ನಿತಿನ್ ಕದಂ ಪುತ್ತೂರು ಅವರ ಕಥೆ. ನಿರೂಪಣೆಯೇ ಕಥೆಯ ವೈಶಿಷ್ಟ್ಯ. ಅದೊಂದು ಮಧ್ಯಮ ವರ್ಗದವರ ವಠಾರ. ಗೋಪಾಲಯ್ಯನವರ ಮನೆಯಲ್ಲಿ ಮಧ್ಯರಾತ್ರಿಯಾದರೂ ತೊಟ್ಟಿಲು ತೂಗುವುದು ನಿಂತಿಲ್ಲ. ಊರಿನ್ನೂ ಎಚ್ಚರವಾಗುವ ಮೊದಲೇ ಪದ್ಮವಲ್ಲಿ ಎದ್ದು ಕುಳಿತಿದ್ದಾಳೆ, ಬಂಗಾರದ ಆಭರಣಗಳನ್ನು ತೊಟ್ಟು, ಅಂಗಳ ಗುಡಿಸುತ್ತಾಳೆ. ಮರುದಿನ ಮತ್ತದೇ ದೃಶ್ಯ ಮರುಕಳಿಸುತ್ತದೆ ಕಸಗುಡಿಸುವ ಮುನ್ನ ಚಿನ್ನ ತೊಡಲು ಹುಡುಕಿದಾಗ ಕಾಣುವುದಿಲ್ಲ!! ಪದ್ಮವಲ್ಲಿ ಮಲಗುತ್ತಾಳೆ, ಜೀವನದಲ್ಲಿ ಮೊದಲ ಬಾರಿ ಕಸಬರಿಗೆ ಹಿಡಿದ ಚಾಂದಿನಿ ಬಂಗಾರ ತೊಟ್ಟು ಗೋಪಾಲಯ್ಯನ ಮನೆಯೆದುರು ಗುಡಿಸುತ್ತಾಳೆ. ಏನೀ ವಿಚಿತ್ರದ ಮರ್ಮ? ಇದರ ಹಿಂದಿನ ಕಥೆಯೇನು?
೪. ಭಿನ್ನ ಒಂದು ನವಿರಾದ ಪ್ರೇಮಕಥೆಯಂತೆ ಶುರುವಾಗುವ ಕಥೆಯ ಹೂರಣವಿರುವುದು ನೇತ್ರಾ ಅವನನ್ನು ಕರೆದೊಯ್ದ ಜಾತ್ರೆಯಲ್ಲಿ. ಜಾತ್ರೆಯಲ್ಲಿ ಪೂಜಿತಳಾಗಬೇಕಿದ್ದ ನೇತ್ರಾಳ ಅಮ್ಮನ ಮೂರ್ತಿ, ಗೋಪುರದಿಂದ ಹೊರಗೆ ಬಂದದ್ದು ಏಕೆ? ಊರಿನ ಒಳಿತಿಗಾಗಿ ಬಲಿಯಾದ ಗರ್ಭಿಣಿ ಹೆಣ್ಣಿನ ವಿಗ್ರಹವನ್ನು ಗೋಪುರದ ಆಚೆಗಿಡುವಂತಾದದ್ದು ವಿಪರ್ಯಾಸವಲ್ಲವೇ?
೫. ಆರನೇ ಆಯಾಮ ಒಂದೇ ಓದಿಗೆ ಅರ್ಥವಾಗದ ವಿಶಿಷ್ಟ ಮನೋವೈಜ್ಞಾನಿಕ ಕಥೆಯಿದು. ಕ್ವಾಂಟಮ್ ಸೈನ್ಸ್, ಫಿಸಿಕ್ಸ್ ಗಳ ವಿವರಣೆ ವಿಶಿಷ್ಟ ಅನ್ನಿಸಿತು. ಇದನ್ನು ಬರೆದವರು ರೂಪಾ ರಾವ್.

೬. ತಲ್ಲಣಿಸದಿರು ಮನವೆ ನಮ್ಮ ಗುಂಪಿನ ಹೆಮ್ಮೆಯ ಸದಸ್ಯರಲ್ಲಿ ಒಬ್ಬರಾದ ರಮ್ಯಾ ನಂದ ಅವರು ಬರೆದ ಕಥೆಯಿದು. ಉನ್ನತ ವ್ಯಾಸಂಗ, ಸಂಶೋಧನೆಗಳಲ್ಲಿ ನಡೆಯುವ ಅವ್ಯವಹಾರ, ಅನ್ಯಾಯದ ಝಲಕ್ ನೀಡುವ ಕಥೆ. ವೃಶಾಲಿ ಐದು ವರ್ಷದಿಂದ ಮಾಡುತ್ತಿದ್ದ ಸಂಶೋಧನೆ ಕೊನೆಯ ಹಂತದಲ್ಲಿತ್ತು. ಇನ್ನೇನು ಪ್ರಬಂಧ ಮಂಡಿಸುವುದು ಬಾಕಿಯಿರುವಾಗ ಅವಳ ಮಾರ್ಗದರ್ಶಕರು ಅದನ್ನು ಬೇರೊಬ್ಬ ಸಂಶೋಧಕರ ಪ್ರಬಂಧದಲ್ಲಿ ಸೇರಿಸಿದ್ದರು. ಅದೂ ವೃಶಾಲಿಯ ಒಪ್ಪಿಗೆಯಿಲ್ಲದೇ! “ನೀನು ಹೆಣ್ಣು, ಈಗಾಗಲೇ ಮದುವೆಯಾಗಿದೆ, ಅವನಿಗೆ ಹಾಗಲ್ಲ ಅವನೇ ಜೀವನ ಕಟ್ಟಿಕೋಬೇಕು’ ಎಂಬ ಮನವೊಲಿಕೆಯ ಯತ್ನ. ಅದಕ್ಕೆ ಬಾಗದಿದ್ದಾಗ, ‘ನೋಡು ನಿನ್ನ ಗಂಡನ ಕೆಲಸ ಪರ್ಮನೆಂಟ್ ಆಗಿಲ್ಲ, ಅವನನ್ನು ಕೆಲಸದಿಂದ ಕಿತ್ತುಹಾಕಲು ನನಗೆ ಸಾಧ್ಯ’ ಎಂಬ ಬೆದರಿಕೆ… ಒಟ್ಟಾರೆಯಾಗಿ ಹೆಣ್ಣೆಂಬ ಕಾರಣಕ್ಕೆ ಮಗಳಿಗೆ ಆಗುತ್ತಿದ್ದ ಅನ್ಯಾಯವನ್ನು ಮೈಥಿಲಿ ನೋಡುತ್ತಿದ್ದಳು. ಎಲ್ಲಾ ಸರಿಯಿದ್ದರೆ ನಾನೂ ಡಾ. ಮೈಥಿಲಿ ಆಗಬೇಕಿತ್ತಲ್ಲವೇ? ಎಂದು ತನಾಗದ ಅನ್ಯಾಯವೂ ನೆನಪಿಗೆ ಬಂತು. ಆ ತಾಯಿ ಈಗೇನು ಮಾಡಿದಳು? ಎಂಬುದೇ ಕಥೆಯ ಸಾರಾಂಶ.
೭. ಕೊನೆಗಾರ ಇದೊಂದು ಪತ್ತೇದಾರಿ ಕಥೆ. ಕೊಲೆಯಾದ ಬಿಹಾರಿಗಳ ಕೊಲೆಗಾರ ಯಾರು? ಎಂಬುದನ್ನು ಪತ್ತೆ ಹಚ್ಚುವ ಸಮಯದಲ್ಲಿ ಬೆಳಕಿಗೆ ಬರುವ ಕಳ್ಳ ಮರಳು ಸಾಗಾಣೆ, ಬಿಹಾರಿಗಳು ಎಂದು ಕರೆದುಕೊಳ್ಳುವ ಬಾಂಗ್ಲಾ ವಲಸಿಗರ ಸಮಸ್ಯೆ, ಅವರ ಬರುವಿಕೆಯಿಂದ ಊರ ಜನ ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಆಗದಂತೆ ಆದದ್ದು ಮುಂತಾದ ವಿವರಗಳಿವೆ. ರವಿವಾರ ಸ್ಪೆಶಲ್ ಕ್ಲಾಸ್ ಇದೆ ಎಂದು ಹೋದ ರಾಶಿ ಆಸ್ಪತ್ರೆ ಸೇರುವಂತಾದದ್ದು ಏಕೆ? ಅವಳು ಬಸ್ಸಿಗಾಗಿ ಒಂಟಿಯಾಗಿ ಕಾಯುತ್ತಿದ್ದುದನ್ನು ಕೊನೆಗಾರ ನೋಡಿದ್ದ, ಪತ್ತೇದಾರಿಗೆ ಬಂದ ಪೋಲಿದರಿಗೆ ಹೆಣದ ಬಳಿ ಕಂಡ ಮಾಲೆ ಯಾರದ್ದು? ಕೊನೆಗಾರನ ಕತ್ತಿಗಿದ್ದ ರಕ್ತ ಯಾರದ್ದು? ಮಧು ಹೊಸನಗರ ಅವರ ಈ ಕಥೆ ಓದಿನೋಡಿ.

೭. ಫಣಿವೇಣಿ ಪ್ರಶಾಂತ್ ಶ್ರೀಕಂಠಯ್ಯ ಅವರು ಸರಳವಾಗಿ, ಹಾಸ್ಯಲೇಪಿತವಾಗಿ ಹೇಳಿದ ಪ್ರೇಮಕಥೆಯಿದು. ಆರ್ಮಿಯಲ್ಲಿದ್ದ ಹೀರೋ ಕಟ್ಟಿಂಗ್ ಶಾಪಿಗೆ ಹೋದಾಗ ಬರುವ ನೆನಪಿನ ಸಾಲುಗಳು, ಅಲ್ಲಿ ಕಂಡ ಫಣಿವೇಣಿ ನಾಯಕನ ಮನ ಕದ್ದಿದ್ದು, ಮನೆಗೆ ಗಂಡು ನೋಡಲು ಬಂದವಳೂ ಸಹ ಅವಳೆ ಎಂದು ತಿಳಿದಾಗ ಸ್ವರ್ಗಕ್ಕೆ ಮೂರೇ ಗೇಣು, ಆದರೆ ಅಲ್ಲೇ ಇದೆ ಟ್ವಿಸ್ಟು! ವೇಣಿ ಫಣಿಯಲ್ಲ, ಮೂಷಕದ ಬಾಲಕ್ಕೆ ಹತ್ತಿರ ಅದೇನೇ ಇರಲಿ, “ದೇವರು ಕೊಟ್ಟಿದ್ದನ್ನು ಅವನು ಕೇಳಿದೊಡನೆ ಹಿಂದೆ ಕೊಡಬೇಕು, ಇನ್ನು ಕೂದಲು ಯಾವ ಲೆಕ್ಕ! ಎಂಬ ಇನ್ಸೈಟು ತುಂಬಾ ಇಷ್ಟವಾಯ್ತು.
ಇದರ ಹೊರತಾಗಿ ಪುರಾಣ ಕಥೆಯ ಆಧಾರದಲ್ಲಿ ಹೊಸ ಸಂಶೋಧನೆಗೆ ಹೊರಡುವ “ಪುರುಷಮೃಗ”. (ಶ್ಯಾಮ್ ಭೀಮಗುಳಿ), ಗರ್ಭಿಣಿ ಹೆಣ್ಣಿಗಾದ ಅನ್ಯಾಯ ಸಾರುವ ” ಕುಕ್ಷಿ”(ಶರತ್ ಪರಶುರಾಮ್), ಹದಿಹರೆಯದವರು ಎದುರಿಸುವ ಬಾಡಿಶೇಮಿಂಗ್ ಹಾಗೂ ಅಂತರ್ಜಾಲದ ಮೋಸದ ದಂಧೆಯ ಕಥೆ ಹೇಳುವ “ರೋಷ್ಣಿ” (ಮಂಜುಳಾ ಅಜಯ್), ಬೀದಿನಾಯಿಗಳ ರಾಕ್ಷಸ ಪ್ರವೃತ್ತಿ ಬಿಚ್ಚಿಡುವ ” ಹಲ್ಲಿಗಂಟಿದ ರಕ್ತ”(ಶುಭಾ ಗಿರಣೀಮನೆ) ಮುಂತಾದ ಕಥೆಗಳೂ ಚೆನ್ನಾಗಿವೆ. ನಾನು ಬರೆದ ಒಂದು ಕಥೆ ಕೂಡ ಈ ಪುಸ್ತಕದಲ್ಲಿ ಜಾಗ ಪಡೆದಿದೆ ಎಂಬದೂ ಒಂದು ಸಂತಸ.
- ವಾಣಿ ಭಟ್
