ಪತ್ರಿಕೋದ್ಯಮದಿಂದ ಹೊರಬಂದು ಕೃಷಿಯನ್ನು ಆಧರಿಸಿದ ಪರೀಕ್ಷಿತನಿಗಾಗಲೀ, ಬೆಂಗಳೂರಿನಲ್ಲಿ ಸುಖವಾಗಿ ಸಂಬಳ ಪಡೆಯುತ್ತಿದ್ದ ವೀಕ್ಷಿತಾಳಿಗಾಗಲೀ ಕೃಷಿ ಒಂದು ಉದ್ಯಮವಾಗಿಲ್ಲ ಪ್ರೀತಿಯ ಕಾಯಕವಾಗಿದೆ. ಪರೀಕ್ಷಿತ ಮತ್ತು ವೀಕ್ಷಿತಾರ ಮಣ್ಣಿನ ಅದಮ್ಯ ಪ್ರೀತಿಯ ಕುರಿತು ಹಿರಿಯ ಸಾಹಿತಿಗಳಾದ ಡಾ ಗಿರಿಜಾ ರಘುನಾಥ್ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಹಿತ್ತಿಲ ಬಾಗಿಲು ತೆರೆದರೆ ಹೊಸ್ತಿಲ ಉದ್ದಕ್ಕೂ ಮಲಗಿರುವ ಕಟ್ಟು ಹಾವು (common krait) ಇದು ನಾಗರಹಾವಿಗಿಂತಲೂ ವಿಷಕಾರಿಯೆಂದು ಗೂಗಲ್ ಹೇಳುತ್ತದೆ. ಹುಲ್ಲುಹೊರೆ ಹೊತ್ತು ಬರುವಾಗ ಆಳೆತ್ತರಕೆ ಹೆಡೆಯಾಡಿಸುವ ನಾಗರ ಹಾವು. ಸೊಪ್ಪುಸದೆ ಕೊಯ್ಯುವಾಗೆಲ್ಲಾ ಮತ್ತೆಂಥದೋ ವಿಷಜಂತುಗಳು. ರಾತ್ರಿಯಾಯಿತೆಂದರೆ, ಗೆಡ್ಡೆ ಗೆಣಸುಗಳನ್ನು ತಿಂದು ಮಣ್ಣನ್ನು ಬುಡಮೇಲು ಮಾಡುವ ‘ಕಾಂತಾರ’ ದಿಂದ ಇಳಿದುಬರುವ ‘ವರಾಹ’ಗಳು. ಕೇವಲ ಇರುಳಲ್ಲ ! ಇಲ್ಲಿ ಹಗಲೂ ಜೀರ್ರೋ ಎಂದು ಕಾಡು ಕೂಗುತ್ತದೆ. ಈ ಕಾಡಿನ ಊರಿಗೆ ಮಡಂತ್ಯಾರು ಎಂದು ಹೆಸರು. ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿದೆ ಈ ಊರು.
ಈ ಕಾಡಿನ ಮದ್ಯೆ ನಾಲ್ಕೂವರೆ ಎಕರೆ ಜಾಗವನ್ನು ತೆಗೆದುಕೊಂಡು ನಿಗೂಢ ನಿಸರ್ಗದೊಡನೆ ಅನನ್ಯ ಪ್ರೀತಿಯಿಂದ ಕೃಷಿಗೆ ಇಳಿದಿರುವ ಹುಡುಗ ನಮ್ಮ ಪರೀಕ್ಷಿತ ಭಟ್ಟ. ಪರೀಕ್ಷಿತನನ್ನು ನಾವು ಅವನ ಬಾಲ್ಯದಿಂದಲೇ ಬಲ್ಲೆವು. ಅವನ ಅತ್ತೆ (ತಂದೆಯ ತಂಗಿ) ಸರಸ್ವತಿ ಕುಮಾರಿ ಹಾಗೂ ಅವರ ಪತಿ ಸುಬ್ಬಣ್ಣ ರೈ ಇಬ್ಬರೂ ಮುಂಬಯಿ ವಿಶ್ವವಿದ್ಯಾಲಯದಲ್ಲಿ ನಮಗೆ ಪಿಎಚ್.ಡಿ ಸಹಪಾಠಿಗಳು. ನಮ್ಮೆಲ್ಲರಿಗೆ ಆಗ ಮುಂಬಯಿಯೊಂದಿಗೆ ಹೋರುವ ದಿನಗಳು. ಎಲ್ಲಾ ಹೋರಾಟಗಳೂ ಸರಸ್ವತಿಯವರನ್ನು ಬಲಗೊಳಿಸಿರುವ ರೀತಿಗೆ ಪ್ರತೀಕವಾಗಿ ಅವರ ಮಡಂತ್ಯಾರು ಕಾಡಿನ ಪರಿಸರವಿದೆ. ಪರೀಕ್ಷಿತನಿಗೆ ಬೆಂಗಾವಲಾಗಿ ಅವನನ್ನು ಪ್ರೋತ್ಸಾಹಿಸುತ್ತಿರುವವರು ಸರಸ್ವತಿ ಮತ್ತು ಸುಬ್ಬಣ್ಣ ರೈ. ತಂದೆಯಿಲ್ಲದ ಮೂವರು ಮಕ್ಕಳನ್ನು ದಡ ಸೇರಿಸಿದವರು. ಇದೆಲ್ಲದರ ಮೂಲ, ಮೂರು ದಶಕಗಳ ಹಿಂದೆ ಸರಸ್ವತಿ ಸುಬ್ಬಣ್ಣರ ನಡುವೆ ಬಿತ್ತಿದ ಪ್ರೇಮ ಬೀಜ ಕಾರಣ. ಅವರಿಗೆ ಸ್ವತಃ ಮಕ್ಕಳು ಇಲ್ಲದಿದ್ದರೂ , ಅವರ ಅಣ್ಣನ ಮಕ್ಕಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಪೋಷಕರಾಗಿರುವ ಇವರು ಎಲ್ಲರಿಗೂ ( ಅದರಲ್ಲೂ ತಮ್ಮ ಮಕ್ಕಳು ಮಾತ್ರ ಮಕ್ಕಳು ಎಂದು ಭಾವಿಸಿ ಅವರ ಮೋಹದಲ್ಲಿ ಬಿದ್ದು ತೊಳಲುವ ನಮ್ಮಂತಹ ಅಸಂಖ್ಯಾತರಿಗೆ) ನಿಜವಾಗಿಯೂ ಮಾದರಿ ಎಂದರೆ ಅದರಲ್ಲಿ ಯಾವ ಉತ್ಪ್ರೇಕ್ಷೆ ಕೂಡ ಇಲ್ಲ.
ಆಗಾಗ ನಾವು ಸರಸ್ವತಿಯವರ ಊರಾದ ವಿಟ್ಲಕ್ಕೆ ಹೋಗುತ್ತಿದುದುಂಟು. ಆಗ ನಾವು ಪರೀಕ್ಷಿತನನ್ನು ಕಂಡಿದ್ದೆವು. ಪರೀಕ್ಷಿತ ಬಹಳ ಉತ್ಸಾಹೀ ಯುವಕ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡ ಅವರು ಸುದ್ದಿ ಟಿವಿ, ಬಿ.ಟಿ.ವಿ, ಪ್ರಜಾ ಟಿ.ವಿ, ನ್ಯೂಸ್೧೮, ದಿಗ್ವಿಜಯ ವಾಹಿನಿಗಳಲ್ಲಿ ವಿಶೇಷ ಪ್ರೊಗ್ರಾಮ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದರು. ‘ಹೊಸದಿಗಂತ’ ಪತ್ರಿಕೆಯಲ್ಲೂ ಕೈಯಾಡಿಸಿದರು. ಕನ್ಯಾನದ ಅಭಯಾಶ್ರಮದ ವೃದ್ದರ ಬಗೆಗಿನ ‘ ಮಸಣದ ಮುನ್ನುಡಿ’ ಎಂಬ ಸಾಕ್ಷ್ಯಚಿತ್ರ ತಯಾರಿಸಿದರು.

ತಮ್ಮ ಕಾಲೇಜು ಸಹಪಾಠಿಯಾಗಿದ್ದ ಎಂಎಸ್ಸಿ ಪದವೀಧರೆ ವೀಕ್ಷಿತಾ ಶೆಟ್ಟಿ ಎಂಬ ಹುಡುಗಿಯನ್ನು ಮದುವೆಯಾದರು. ಸ್ವತಂತ್ರ ಮನೋಭಾವದ ಸ್ವಾಭಿಮಾನೀ ಯುವಕನಿಗೆ ಸುದ್ದಿಮಾಧ್ಯಮದ ಚಕ್ರವ್ಯೂಹ ಹೊಕ್ಕ ಮೇಲೆ ಅಲ್ಲಿನ ಯಾಜಮಾನ್ಯಕ್ಕೆ, ಅವರ ಐಡಿಯಾಲಜಿಗಳ ತಾಳಕ್ಕೆ ತಕ್ಕಂತೆ ಕುಣಿಯುವುದು ಬಹಳ ಕಷ್ಟವಾಗತೊಡಗಿತು. ಅಷ್ಟರಲ್ಲೇ ಕೊರೋನಾ ವಕ್ಕರಿಸಿತು. ಶಸ್ತ್ರ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ ಅತ್ತೆಯನ್ನು ನೋಡಿಕೊಳ್ಳಬೇಕಾದ ತುರ್ತೂ ಒದಗಿ ಬಂತು. ಒಂದು ಬೆಳಿಗ್ಗೆ ಪರೀಕ್ಷಿತ ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಬೆಂಗಳೂರಿನಿಂದ ಗಂಟು ಮೂಟೆ ಕಟ್ಟಿ ಊರಿಗೆ ಮರಳಿದರು.
ಮಡಂತ್ಯಾರು ಕೃಷಿಭೂಮಿಯನ್ನು ಅತ್ತೆ ಖರೀದಿಸಿ ಅಳಿಯನ ಸುಪರ್ದಿಗೆ ಕೊಟ್ಟಿದ್ದಾರೆ. ಈಗ ಪರೀಕ್ಷಿತನೇ ಅದರ CEO. ಯಾವ ಗುಲಾಮಗಿರಿಯಿಲ್ಲ, ಬುದ್ಧಿಯನ್ನು ಮಾರಿಕೊಳ್ಳಬೇಕಿಲ್ಲ. ಅಪ್ಪಟ ಕೃಷಿಕನಾಗಿಬಿಟ್ಟಿದ್ದಾರೆ. ಅದರಲ್ಲಿ ಎರಡು ಸಾವಿರ ಅಡಕೆ ಮರಗಳು, ಹನ್ನೊಂದು ತೆಂಗಿನ ಮರಗಳು ಹಾಗೂ ವೀಳ್ಯದೆಲೆ ಮೆಣಸನ್ನು ಬೆಳೆಯುತ್ತಾರೆ. ಜತೆಗೆ ತರತರದ ಬೆಂಡೆ, (ಕೆಂಪು ಬೆಂಡೆಯೂ ಒಂದು) ಅಲಸಂದೆ, ಬದನೆ, ಹುರುಳಿಕಾಯಿ, ಕ್ಯಾರೇಟ್, ಮೆಣಸಿನಕಾಯಿ ಮುಂತಾದ ತರಕಾರಿ ಗಿಡಗಳು ಬೇರೆ.
ನಾಲ್ಕಾರು ಹಸು ಕರುಗಳಿವೆ. ಮೂರು ನಾಯಿಗಳಿವೆ. ಆಗಾಗ ನವಿಲುಗಳೂ ಬಂದು ಜೊತೆಗೂಡುತ್ತವೆ. ಸದಾ ಹಕ್ಕಿಗಳ ಹಿನ್ನೆಲೆ ಸಂಗೀತ ! ಹುಲ್ಲು ಕೊಯ್ಯುವುದು ಅದನ್ನು ದನಗಳಿಗೆ ಹಾಕುವುದು,ಹಾಲು ಕರೆಯುವುದು, ಹೆಚ್ಚಾದ ಹಾಲನ್ನು ಡೈರಿಗೆ ಹಾಕುವುದು, ತರಕಾರಿ ಗಿಡಗಳ ಪೋಷಣೆ, ತರತರದ ಗಿಡಮರಗಳ ಸೂಕ್ಷ್ಮತೆಗೆ ತಕ್ಕಂತೆ ಉಪಚಾರ ಮಾಡುವುದು, ಬಿದ್ದ ಅಡಕೆಗಳನ್ನು ಹೆಕ್ಕುವುದು. ಅವುಗಳನ್ನು ಒಟ್ಟು ಮಾಡುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದು, ನೀರು ಬಿಡುವುದು ಒಂದೇ ಎರಡೇ? ದಿನವಿಡೀ ಕೆಲಸ ಈ ಉತ್ಸಾಹೀ ದಂಪತಿಗೆ.
ಪತ್ರಿಕೋದ್ಯಮದಿಂದ ಹೊರಬಂದು ಕೃಷಿಯನ್ನು ಆಧರಿಸಿದ ಪರೀಕ್ಷಿತನಿಗಾಗಲೀ, ಬೆಂಗಳೂರಿನಲ್ಲಿ ಸುಖವಾಗಿ ಸಂಬಳ ಪಡೆಯುತ್ತಿದ್ದ ವೀಕ್ಷಿತಾಳಿಗಾಗಲೀ ಕೃಷಿ ಒಂದು ಉದ್ಯಮವಾಗಿಲ್ಲ ಪ್ರೀತಿಯ ಕಾಯಕವಾಗಿದೆ. ಮಣ್ಣಿನ ಅದಮ್ಯ ಪ್ರೀತಿ ಅವರ ಪ್ರತಿ ಕೆಲಸದಲ್ಲಿ ಹೊಮ್ಮುತ್ತದೆ.
ಇಲ್ಲಿನ ನಾಯಿ,ಬೆಕ್ಕು, ಹಸು, ಕರುಗಳನ್ನು ಅವರು ಸಂಬೋಧಿಸುವುದೇ ಮನುಷ್ಯರನ್ನು ಸಂಬೋಧಿಸುವಂತೆ. ಅವುಗಳನ್ನು ವೇದ ,ಗಣೇಶ, ಅಪ್ಪು , ನಂದಿನಿ ಮತ್ತು ಬಂಗಾರಿ ( ಹಸು ಕರುಗಳು). ಜಿಮ್ಮಿ , ಮೋತಿ, ಮುತ್ತು (ನಾಯಿ) ಎಂದು ಹೆಸರು ಹಿಡಿದೇ ಕೂಗುವುದು. ಅವು ಕೂಡ ಅವರ ಕೂಗಿಗೆ ಪಡಿ ಮಿಡಿಯುತ್ತವೆ.
“ಅವಳು ಎಂತ ಕೂಗ್ತಾಳೆ!”, “ಇವಳು ಕರು ಹಾಕಿದ್ದೇ ಗೊತ್ತಾಗ್ಲಿಲ್ಲ”, ” ಈ ಜಿಮ್ಮಿ , ಯಾರು ಹೊಸಬರು ಕಂಡರೂ ಬೊಗಳ್ತಾನೆ, ಮೋತಿ ಹಾಂಗಲ್ಲ ಅವನು ಪಾಪ! “, “ಎಂತ ಹಾರುವುದೋ ನೀನು ಮುತ್ತು ? ( ಲ್ಯಾಬ್ರಡಾರ್ ತಳಿಯ ನಾಯಿ) ‘ ಮುತ್ತು’ ಕಟ್ಟು ಬಿಚ್ಚಿದರೆ ತನ್ನ ಪ್ರಾಂತ್ಯವನ್ನು ಮೀರಿ ಪೇಟಿಗೆ ಓಡಿಬಿಡುತ್ತಾನೆ ಆಗೆಲ್ಲಾ ಬೀದಿ ನಾಯಿಗಳಾದ ಜಿಮ್ಮಿ ಮತ್ತು ಮೋತಿಯೇ ಪೇಟೆಯ ನಾಯಿಗಳ ಜೊತೆ ಜಗಳಾಡಿ ಬಿಡಿಸಿಕೊಂಡು ಬರುವುದಂತೆ. “ಮಧ್ಯರಾತ್ರಿ ಹಸು ಕರು ಹಾಕಿದಾಗ ನಮಗೆ ನಿದ್ದೆ. ಆಗ ಈ ಮೂವರೂ ಎಂತ ಬೊಬ್ಬೆ ಹೊಡೆದರು. ಅವರಿಗೆ ವಾಸನೆಯಿಂದಲೇ ಗೊತ್ತಾಯಿತು ನೋಡಿ…!” ಎನ್ನುತ್ತಾರೆ ಪರೀಕ್ಷಿತನ ತಾಯಿ. ಪರೀಕ್ಷಿತನ ನಾಲ್ಕು ವರುಷದ ಮಗ ಸೂರ್ಯಾಂಶನ ಆಟಕ್ಕೆ ಅವುಗಳೇ ಸಾಥಿಗಳು. ಮುದ್ದಾದ ಕರುವಿಗೆ ‘ಬಂಗಾರಿ’ ಎಂದು ಹೆಸರಿಟ್ಟಿರುವವನು ಅವನೇ! ಯಾವ ಪ್ರಾಣಿಯನ್ನಾದರೂ ಕೊಟ್ಟು ಬಿಡುವ ಮಾತು ತಮಾಷೆಗಾಗಿಯೂ ಆಡಬಾರದು. ಓಡಿ ಹೋಗಿ ಅವುಗಳ ಕೊರಳಿಗೆ ಬೀಳುತ್ತಾನೆ ‘ಒಲ್ಲೆ ‘ ಎನ್ನುವಂತೆ. ಬೆಕ್ಕು ಅವನ ಬದಿಯಲ್ಲೇ ಕುಳಿತು ‘ಡೋರೆಮಾನ್’ ‘ಛೋಟಾ ಭೀಮ್’ನೋಡುತ್ತದೆ. “Wheels on the bus” ಹಾಡುತ್ತದೆ.
ಕೃಷಿಯ ರಹಸ್ಯಗಳನ್ನು, ಅದನ್ನು ನಿಭಾಯಿಸುವ ತಂತ್ರಗಳನ್ನು ಪರಿಣಿತರಿಂದ ಹಾಗೂ ಗೂಗಲ್ ಸಹಾಯದಿಂದ ಪಡೆದುಕೊಳ್ಳುತ್ತಿರುವ ಪರೀಕ್ಷಿತ ಯಶಸ್ವೀ ಕೃಷಿಕನಾಗುವುದರಲ್ಲಿ ಸಂದೇಹವೇ ಇಲ್ಲ. ದಕ್ಷಿಣ ಕನ್ನಡದ ಹವ್ಯಕರಿಗೆ ಕೃಷಿ ಜನ್ಮತಃ ಒಲಿದು ಬಂದ ವಿದ್ಯೆ.
ಇಂದಿನ ಯುವ ಜನಾಂಗಕ್ಕೆ ಪೇಟೆಯ ಹುಚ್ಚು. ಬೆಂಗಳೂರು, ಮುಂಬಯಿ ಬಸ್ಸು ರೈಲು ಹತ್ತುವುದರಲ್ಲೇ ಹೆಚ್ಚು ಆಸಕ್ತಿ. ಶ್ರೀಮಂತ ಕೃಷಿಕ ಹುಡುಗರಿಗೂ ಇಂದು ಹೆಣ್ಣು ಕೊಡುವವರಿಲ್ಲ. ಇಂತಹ ಸಂದರ್ಭದಲ್ಲಿ ಪರೀಕ್ಷಿತ ಬೆಂಗಳೂರಿನಿಂದ ಮಡಂತ್ಯಾರಿನ ಕಾಡಿಗೆ ಮರಳಿದ್ದಾರೆ. ಅವರ ಹೆಂಡತಿಯೂ ಅಷ್ಟೇ ಉತ್ಸಾಹದಿಂದ ಮಾಲ್ ಗಳಲ್ಲಿ ಷಾಪಿಂಗ್ , ವೀಕೆಂಡ್ ಔಟಿಂಗ್ ಎಲ್ಲ ಆಮಿಷಗಳನ್ನೂ ಬದಿಗೆ ತಳ್ಳಿ ಹಳ್ಳಿಗೆ ಮರಳಿದ್ದಾರೆ.
ಹಲ್ಲು ಮೂಡುವ ದಿನಗಳಲ್ಲಿ ಹಲವಾರು ಸಮಸ್ಯೆಗಳು ಇದ್ದದ್ದೇ. ಎಲ್ಲದಕ್ಕೂ ಪರೀಕ್ಷಿತ ಮತ್ತು ವೀಕ್ಷಿತಾ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಅವರ ಹೆಸರಿನಂತೆಯೇ ಅವರ ದಾಂಪತ್ಯವೂ ಅನುರೂಪವಾದುದು. ಅವರ ಪರಿಶ್ರಮದ ಫಲಬಿಡಲು ಇನ್ನು ಕೆಲವು ವರ್ಷಗಳಾದರೂ ಕಾಯಬೇಕು. ಮನುಷ್ಯರು, ಪ್ರಾಣಿ, ಪಕ್ಷಿ, ಗಿಡ ಮರ,ಹೂ, ಕ್ರೂರ ಜಂತುಗಳೆಲ್ಲ ಒಂದು ಪರಿವಾರವಾಗಿ ಏಕತ್ರ ಬದುಕುವ ಅಭೇದದ ಅನುಭವವಾಗಬೇಕಾದರೆ, ಎಲ್ಲ ರೀತಿಯ “ಭಯ, ಲೋಪ ಪಾಪ” ಗಳಿಂದ ಮುಕ್ತರಾಗಬೇಕೆಂದರೆ ಒಮ್ಮೆ ಪರೀಕ್ಷಿತನ ಆಶ್ರಮವನ್ನು ನೋಡಲೇ ಬೇಕು.
ಪರೀಕ್ಷಿತನಿಗೆ ಕೃಷಿ ಒಂದು ಹಂತಕ್ಕೆ ನೆಲೆ ನಿಂತ ಮೇಲೆ ಸ್ವತಂತ್ರ ಪತ್ರಿಕೋದ್ಯಮ ಮಾಡುವ ಅಸೆ ಇದೆ. ಪರೀಕ್ಷಿತನಂತಹ ಸ್ವೋಪಜ್ಞ ಚಿಂತಕರು ಎಲ್ಲಾ ಶಕ್ತಿವಲಯಗಳಲ್ಲೂ ಹಬ್ಬಿ ಹರಡಬೇಕು.
ಪರೀಕ್ಷಿತ -ವೀಕ್ಷಿತ ದಂಪತಿ ಕೃಷಿಗೆ ಒಲಿದು ,ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಮ್ಮ ಇಂದಿನ ಯುವಕ ಯುವತಿಯರಿಗೆ ಒಂದು ಪರ್ಯಾಯ ಮಾದರಿಯಾಗಿದೆ. ಇದಕ್ಕೆ ಬೆನ್ನಲೆಬಾಗಿ ನಿಂತು ಸಹಕಾರ ಹಸ್ತ ಚಾಚಿರುವ ನಮ್ಮ ಗೆಳತಿ ಸರಸ್ವತಿಯ ಹೃದಯ ಶ್ರೀಮಂತಿಕೆ ದೊಡ್ಡದು. ಅವರಿಂದಾಗಿ ಅವರು ಮಾಡಿದ ತೋಟದಲ್ಲಿ ತಿರುಗಾಡಿ ನೋಡಿ, ಸಂತೋಷ ಪಡುವ ಭಾಗ್ಯ ನಮ್ಮದಾಯಿತು.
ಕೃಷಿಯ ಜತೆಗೆ, ಪ್ರೇಮ ಕೃಷಿಯ ಪರಿಣಾಮವಾಗಿ ಹುಟ್ಟಿದ ಸೂರ್ಯಾಂಶ ನಾಲ್ಕು ವರ್ಷದ ಮಗು ಶಾಲೆಗೆ ಹೋಗುತ್ತಾನೆ. ಇದು ಈ ಪರಂಪರೆ ಜೀವಂತ ಮುಂದುವರಿಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಭರ್ಜರಿ ಆತಿಥ್ಯ ಮತ್ತು ಉಡುಗೊರೆಗಳ ನಂತರ ಬೇಡ ಬೇಡ ಎಂದರೂ ಕೇಳದೆ, ಅತ್ತೆ ಅಳಿಯ ಇಬ್ಬರೂ ನಮ್ಮನ್ನು ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ತಲುಪಿಸಿ ಬೀಳ್ಕೊಟ್ಟರು. ಅವಿಸ್ಮರಣೀಯ ನೆನಪುಗಳನ್ನು ಹೊತ್ತು ನಾವು ಬೆಂಗಳೂರು ರೈಲು ಹತ್ತಿದೆವು. ಇಂತಹವರ ಸಂಖ್ಯೆ ಹೆಚ್ಚಲಿ. ಇಂತಹ ಅಪರೂಪದ ಸರಸ್ವತಿ ಸ್ನೇಹ ಭಾಗ್ಯ ನಮ್ಮದು.
- ಗಿರಿಜಾ ರಘುನಾಥ್
