ಪಶ್ಚಿಮ ಘಟ್ಟದ ಕಪ್ಪೆಗಳು ಜಂಪಿಂಗ್ ಚಿಕನ್ ಹೆಸರಲ್ಲಿ ಸ್ಟಾರ್ ಹೋಟೆಲ್ ಗಳಲ್ಲಿ ಲಭ್ಯವಿದ್ದು, ದೊಡ್ಡ ಗಾತ್ರದ ಬುಲ್ ಪ್ರಾಗ್ ಬೆಲೆ ೫ ರಿಂದ ೭ಸಾವಿರ ಚೀನಾ, ರಷ್ಯಾ ಪ್ರವಾಸಿಗಳಿಗೆ ಇದು ವಿಶೇಷ ಖಾದ್ಯವಾಗಿದೆ. ಅರುಣ್ ಪ್ರಸಾದ್ ಅವರು ಪಶ್ಚಿಮ ಘಟ್ಟದ ಕಪ್ಪೆಗಳ ಕುರಿತು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಮುಂಗಾರು ಶುರುವಿನಲ್ಲಿ ಈ ಕಪ್ಪೆಗಳು ಸಂತಾನೋತ್ಪತ್ತಿಗಾಗಿ ಹೊರ ಬರುತ್ತದೆ. ವಿಶ್ವದಲ್ಲೇ ದೊಡ್ಡ ಪ್ರಮಾಣದಲ್ಲಿ ವಾರ್ಷಿಕ 5,000 ಟನ್ ಕಪ್ಪೆ ಕಾಲು ರಪ್ತು ಮಾಡುವುದು, ಇಂಡೋನೇಷಿಯ ಫ್ರೆಂಚ್ ದೇಶದಲ್ಲಿ ಇದು ಸುಪ್ರಸಿದ್ಧ ಖಾದ್ಯವಾಗಿದೆ.
1970 ರಲ್ಲಿ ತಮಿಳುನಾಡಿನಿಂದ ತಂಡ ತಂಡವಾಗಿ ನಮ್ಮ ಊರಿನ ಮತ್ತು ಸುತ್ತ ಮುತ್ತಲಿನ ಕೆರೆ, ಹೊಳೆ ದಂಡೆಗಳಲ್ಲಿ ಕ್ಯಾಂಪ್ ಹಾಕಿ ರಾತ್ರಿ ಗ್ಯಾಸ್ ಲೈಟ್ ಬೆಳಕಿನಲ್ಲಿ ದೊಡ್ಡ ಗಾತ್ರದ ‘ಬುಲ್ ಪ್ರಾಗ್’ ಹಿಡಿದು ಖಾಲಿ ಆದ ಟಾರ್ ಡ್ರಂಗಳಲ್ಲಿ ತುಂಬಿ ಲಾರಿಗಳಲ್ಲಿ ಎಲ್ಲಿಗೋ ಒಯ್ಯುವುದು ನೋಡುತ್ತಿದ್ದೆವು. ನಂತರ ಸ್ಥಳೀಯರು ಅವರಂತೆ ಈ ಕಪ್ಪೆಗಳನ್ನು ಹಿಡಿದು ತಮಿಳುನಾಡಿನ ಗುತ್ತಿಗೆದಾರನಿಗೆ ಮಾರುವ ಮೂಲಕ ಹೊಟ್ಟೆ ಪಾಡು ಕಂಡು ಹಿಡಿದಿದ್ದರು. ಆಗೆಲ್ಲ ಅತ್ಯಂತ ಬಡತನದ ಕಷ್ಟದ ದಿನಗಳು ನಮ್ಮ ಊರಿನ ಅನೇಕರಿಗೆ ಈ ಉದ್ಯೋಗ ಖಾತ್ರಿ ನೀಡಿತ್ತು. ಆದರೆ ಆ ದಿನಗಳಲ್ಲಿ ಕಪ್ಪೆ ಹಿಡಿಯುವುದು ನಿಕೃಷ್ಟ ಉದ್ಯೋಗ ಎಂಬ ಭಾವನೆ ಇದ್ದಿದ್ದರಿಂದ ಇವರೆಲ್ಲ ರಹಸ್ಯವಾಗಿ ಕಪ್ಪೆ ಶಿಕಾರಿ ಮಾಡುತ್ತಿದ್ದರು.
ನಂತರ ಅನೇಕ ವರ್ಷ ಈ ಕೆಲಸ ನಡೆಯುತ್ತಿತ್ತು. ಆದರೆ ಇವರ್ಯಾರು ಕಪ್ಪೆ ತಿನ್ನುವುದನ್ನು ಮಾತ್ರ ಕಲಿಯಲಿಲ್ಲ. ಆ ಕಾಲದಲ್ಲಿ ರಾತ್ರಿ ಕೊಳ್ಳಿ ದೆವ್ವ ಓಡಾಡುತ್ತದೆ ಎಂದು ಭಯ ಪಡುವ ಜಾಗಗಳೆಲ್ಲ ಈ ಕಪ್ಪೆ ಶಿಕಾರಿಗಾರರ ಗ್ಯಾಸ್ ಲೈಟ್ ನಿಂದ ಕೊಳ್ಳಿ ದೆವ್ವಗಳೇ ನಾಪತ್ತೆ ಆಯಿತು.
ಈಗಲೂ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಸುತ್ತ ಮುತ್ತ ಮತ್ತು ಕಾರವಾರದ ಪ್ರದೇಶದಲ್ಲಿ ಈ ಕಪ್ಪೆಗಳನ್ನು ಹಿಡಿದು ಗೋವಾದ ಸ್ಟಾರ್ ಹೋಟೆಲ್ ಗಳಿಗೆ ಸರಬರಾಜು ಮಾಡುತ್ತಾರೆ. ಆದರೆ ಈ ಕಪ್ಪೆ ವಹಿವಾಟು ಪಶ್ಚಿಮ ಘಟ್ಟದಲ್ಲಿ ಅರಣ್ಯ ಇಲಾಖೆ ನಿರ್ಬಂದಿಸಿದ್ದರಿಂದ ರಹಸ್ಯವಾಗಿ ನಡೆದಿದೆ.
ಒಂದು ಕಿಲೋ ಬುಲ್ ಪ್ರಾಗ್ ಗೆ 5 ರಿಂದ 7 ಸಾವಿರ ಬೆಲೆ ಇದೆ, ಇದರ ಹಿಂಭಾಗದ ತೊಡೆಗಳಿಂದ ಮಾಡುವ ಖಾದ್ಯಗಳಿಗೆ ಗೋವಾಕ್ಕೆ ಬರುವ ರಷ್ಯಾ ಮತ್ತು ಚೀನಾದ ಪ್ರವಾಸಿಗಳಿಂದ ಭಾರೀ ಬೇಡಿಕೆ ಇದೆ. ಈ ಕಪ್ಪೆ ಖಾದ್ಯಕ್ಕೆ ಜಂಪಿಂಗ್ ಚಿಕನ್ ಎಂಬ ಹೆಸರಿದೆ. ಇದರಿಂದ ಸೂಪ್ ಮತ್ತು ಪ್ರೈ ತಯಾರಿಸುತ್ತಾರೆ.
ಇದೆಲ್ಲ ಈ ವರ್ಷದ ಮುಂಗಾರು ಮಳೆ ನಿರೀಕ್ಷೆಯ ಚರ್ಚೆಯಲ್ಲಿ ನೆನಪಾಯಿತು.
- ಅರುಣ್ ಪ್ರಸಾದ್