ಸಾಹಿತ್ಯಾಸಕ್ತರಿಗೆ ಪ್ರೀತಿಯ ಕವಿಯತ್ರಿ, ನ್ಯಾಯಕ್ಕಾಗಿ ದುಡಿಯುವ ವಕೀಲೆ,ಮಕ್ಕಳಿಗೆ ಮುದ್ದಿನ ಅಮ್ಮ, ಗಂಡನಿಗೆ ಪ್ರೇಯಸಿ, ಸ್ನೇಹಿತರಿಗೆ ಪ್ರೀತಿಯ ಪವಿ ಹೀಗೆ ಎಲ್ಲಾ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರರಾದ ಪವಿತ್ರ ಹೆಚ್.ಆರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ, ಅವರ ಒಂದು ಕವಿತೆ ಓದುಗರ ಮುಂದಿದೆ…
ಹುಟ್ಟುವಾಗ ಹೆಣ್ಣೆಂಬ
ತಾತ್ಸಾರದ ನುಡಿ ಕೇಳಿದೆ
ಬೆಳೆಯುವಾಗ ರೀತಿ ನೀತಿಗಳ
ಚೌಕಟ್ಟಿನೊಳಗೆ ಬೆಳೆದೆ
ಹದಿಹರೆಯಕ್ಕೆ ಬಂದಾಗಲೆ
ನನಗರಿವಾಗಿದ್ದು ನಾನು ಅವಳೋ..ಅವನೋ…???
ಎಲ್ಲ ಮಕ್ಕಳನ್ನು ಹಡೆದಂತಲ್ಲವೇ
ನನ್ನ ಹಡೆದ್ದಿದ್ದು…ನನ್ನವ್ವ
ನನ್ನ ಒಡಹುಟ್ಟಿದವರ ಜನ್ಮಕ್ಕೆ ಕಾರಣವಾದ ಜನಕನೆ ಅಲ್ಲವೇ ನನಗೂ ತಂದೆಯಾಗಿದ್ದು….
ಮತ್ತೇಕೆ ನನಗೆ ಈ ಶಿಕ್ಷೆ…?
ಎಲ್ಲರಿಗೂ ಹಿತವಾಗಿದ್ದ ನನ್ನ ಸವಿನುಡಿಗಳು..ಒಮ್ಮೆಲೇ ಗಡುಸಾಯ್ತೇಕೆ
ಹೆಣ್ತನ ತುಂಬ ಬೇಕಿದ್ದ
ದೇಹದ ಆಕೃತಿ ಬದಲಾಗಿದ್ದಲ್ಲಿ
ನನ್ನ ತಪ್ಪೆನೀದೆ…..?
ನನಗೂ ಆಸೆಯಿದೆ
ನನ್ನ ಅಕ್ಕನಂತೆ ಸಂಸಾರಿಯಾಗಬೇಕು
ನನ್ನವರ ತೋಳು ಬಳಸಿ ಹಾಯಾಗಿ ನಿದ್ರಿಸಬೇಕು
ಮಡಿಲ ಮಗುವಿಗೆ ಹಾಲುಣಿಸಿ ತಾಯಿತನದ ಸುಖ ಅನುಭವಿಸಬೇಕು..
ಆದರೇನು.. ?? ರಾತ್ರಿ ದೀಪದ ಬೆಳಕಿನಲ್ಲಿ
ಅರಳಿ ಕಮರುವ ಹಾದಿಬದಿಯ ಹೂವಾದೆ..
ನನ್ನಲ್ಲೂ ಛಲವಿದೆ
ನನ್ನ ತಂಗಿಯಂತೆ ಓದಿ ವಿದ್ಯಾವಂತಳಾಗಿ ನನ್ನ ಕಾಲ ಮೇಲೆ ನಿಲ್ಲಬೇಕು
ಸ್ವತಂತ್ರವಾಗಿ ಬದುಕಬೇಕು
ಆದರೇನು…?? ಬೇಡಿ ತಿನ್ನುವ ಬದುಕಾಯಿತು ನನ್ನದು…
ಬಿರು ನುಡಿಗಳ ಕೇಳುತ್ತಾ
ಸಿಡಿಮಿಡಿಗಳನ್ನು ಸಹಿಸುತ್ತಾ
ನಾಲ್ಕು ಗೋಡೆಗಳ ಮಧ್ಯೆ
ಹಾದಿಬದಿಯಲ್ಲಿ ಬದುಕು ಸವೆಸುತ್ತಾ
ಸಮಾನತೆಯ ಕನಸು ಕಾಣುವ ಮಂಗಳಮುಖಿಯಾದೆ ನಾನು….
ನನ್ನದಲ್ಲದ ಈ ದೇಹಕ್ಕೆ ಧಿಕ್ಕಾರವಿರಲಿ
ಒಲ್ಲದ ಮನಸ್ಸಿನಿಂದ ಬೇಡುವ ನನ್ನ ಬಗ್ಗೆ ಕನಿಕರವಿರಲಿ ಕಿಂಚಿತ್ತು…
- ಪವಿತ್ರ ಹೆಚ್.ಆರ್