ನಮ್ಮ ದೇಹದಲ್ಲಿ ಸಣ್ಣ ಬದಲಾವಣೆಯಾದರೂ ನಮ್ಮ ದೇಹ ಮುನ್ಸೂಚನೆ ನೀಡುತ್ತದೆ. ಅಂದರೆ ನಮ್ಮ ದೇಹ ಮೊದಲನೆಯ ವೈದ್ಯನಾಗಬೇಕು. ೪೦ ವರ್ಷ ದಾಟಿದ ಪ್ರತಿಯೊಬ್ಬರೂ ಕೆಲವು ವೈದಕೀಯ ತಪಾಸಣೆ ಮಾಡಿಸಿದರೆ ಉತ್ತಮ… ಆರೋಗ್ಯದ ಕುರಿತು ದೇವರಾಜ ಚಾರ್ ಅವರು ಓದುಗರಿಗೆ ಇನ್ನಷ್ಟು ಮಾಹಿತಿ ನೀಡುತ್ತಾರೆ ತಪ್ಪದೆ ಓದಿ…
- ಆರೋಗ್ಯ :
ರೋಗ ಬಂದ ಮೇಲೆ ವಾಸಿ ಮಾಡಿಕೊಳ್ಳುವುದು ಇದ್ದೇ ಇದೆ.ರೋಗ ಬರದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಉಲ್ಬಣಗೊಳ್ಳುವ ಮೊದಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹಿಂದಿನ ದಿನಗಳಲ್ಲಿ ಎಂಬಿಬಿಎಸ್ ಮತ್ತು ಸ್ನಾತಕೋತ್ತರ (pg) ಡಿಪ್ಲೋಮಾ ಮಾಡಿರುವ ವೈದ್ಯರೇ ಸಾಕಾಗಿತ್ತು. ಎಲ್ಲಾ ರೋಗಗಳಿಗೂ ಅವರೇ ಚಿಕಿತ್ಸೆ ಕೊಡುತ್ತಿದ್ದರು.
ನಂತರದಲ್ಲಿ ವೈದ್ಯ ವಿಜ್ಞಾನ ಮುಂದುವರಿದು, ಬರೀ ಎಂ ಬಿ ಬಿ ಎಸ್ ಕಲಿತವರು ಹಾಗೆ ಉಳಿದವರು ಬಹಳ ಕಡಿಮೆ. ಉನ್ನತ ವ್ಯಾಸಂಗ ಅಂದರೆ, ಪ್ರತಿ ವೈದ್ಯಕೀಯ ವಿಭಾಗದಲ್ಲೂ ಸ್ನಾತಕೋತ್ತರ ಪದವಿ ಮಾಡಿಕೊಂಡು ಸೇವೆ ಸಲ್ಲಿಸುವವರ ಸಂಖ್ಯೆ ಜಾಸ್ತಿ ಆಗಿದೆ. ಸಾಮಾನ್ಯ ರೋಗಿಗಳು ಸಹ ಇಂತಹವರ ಸೇವೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಜೀವಿತಾವಧಿಯು ಸಹ ಹೆಚ್ಚಾಗಿದೆ. ಇತ್ತೀಚಿಗೆ ಇಂತಹ ವೈದ್ಯರು ಸಹ ಡಿ.ಎಂ ಪದವಿ ಮಾಡಿಕೊಂಡು ಪ್ರತಿಯೊಂದು ಅಂಗಗಳಲ್ಲೂ ಪ್ರವೀಣರಾಗಿದ್ದಾರೆ. ಇವರೆಲ್ಲರೂ ಸೂಪರ್ ಸ್ಪೆಷಲಿಸ್ಟ್. ಇಂತಹವರು ಹೆಚ್ಚಾಗಿ ಕಾರ್ಪೊರೇಟ್ ಹಾಸ್ಪಿಟಲ್ ನಲ್ಲಿ (hiteck hospital)ಸೇವೆ ಸಲ್ಲಿಸುತ್ತಿದ್ದಾರೆ. ಇಂತಹವರ ಸೇವೆ ಪಡೆದುಕೊಳ್ಳುವುದು ದುಬಾರಿ ನಿಜ. ಅದಕ್ಕಾಗಿ ಸಾಕಷ್ಟು ಹೆಲ್ತ್ ಇನ್ಸೂರೆನ್ಸ್ ಕಂಪನಿ ಹುಟ್ಟಿಕೊಂಡಿವೆ. ಇನ್ಶೂರೆನ್ಸ್ ಇದೆ ಅಂದರೆ ಸಾಕು, ಆಸ್ಪತ್ರೆಯ ಸಿಬ್ಬಂದಿ ಯಾವುದೇ ಯೋಚನೆ ಇಲ್ಲದೆ ಅಂತಹ ರೋಗಿಗಳಿಗೆ ಮೊದಲ ಆದ್ಯತೆ ಸಿಗುತ್ತದೆ. ಜೇಬಲ್ಲಿ ಹಣ ಇರಬೇಕು ಅಥವಾ ಇನ್ಸೂರೆನ್ಸ್ ಕಾರ್ಡ್ ಇದ್ದರೆ ಸಾಕು. ರೋಗಿ ಯಾವ ಸ್ಥಿತಿಯಲ್ಲಿ ಇದ್ದರೂ ಸಹ ತಕ್ಕ ಚಿಕಿತ್ಸೆಯನ್ನು ಕೊಡುತ್ತಾರೆ. ಇಂತಹ ಆಸ್ಪತ್ರೆಗಳು ಆಸ್ಪತ್ರೆ ಅನ್ನಿಸುವುದೇ ಇಲ್ಲ. (ಡೀಲಕ್ಸ್ ಲಾಡ್ಜ್) ಸುಸಜ್ಜಿತ ವಸತಿಗೃಹದಲ್ಲಿ ಇದ್ದಂತೆ ಇರುತ್ತವೆ.
ಫೋಟೋ ಕೃಪೆ :google
- ಮನುಷ್ಯನ ದೇಹದ ಅಂಗ ರಚನೆ:
ಎಲ್ಲರಿಗೂ ತಿಳಿದಿರುವಂತೆ ಮನುಷ್ಯನಿಗೆ (ಎಕ್ಸ್ಟರ್ನಲ್ ಆರ್ಗಾನ್) ಹೊರ ಅಂಗಾಂಗಗಳು ಅಂದರೆ ಕಿವಿ, ಬಾಯಿ, ಕಣ್ಣು, ತಲೆ, ಕೈ ಕಾಲುಗಳು ಮತ್ತು ಚರ್ಮ ಇರುತ್ತದೆ. ಇವು ಮೇಲ್ನೋಟಕ್ಕೆ ಕಾಣುವಂತಹವು.
(ಇಂಟರ್ನಲ್ ಆರ್ಗಾನ್) ಒಳಗಿನ ಅಂಗಾಂಗಗಳು ಯಾವವು ಎಂದರೆ ಕಿವಿಯಲ್ಲಿರುವ ಒಳಗಿನ ಭಾಗ, ಕಣ್ಣಿನ ಒಳ ರಚನೆ, ಬಾಯಿ ಒಳಗೆ ಇರುವ ಹಲ್ಲು, ನಾಲಿಗೆ ದವಡೆ, ಶ್ವಾಸಕೋಶ, ಹೃದಯ, ಕರುಳುಗಳು, (ಲಿವರ್) ಯಕೃತ್ತು,( kidney)ಮೂತ್ರ ಜನಕಾಂಗ, (urinary bladder) ಮೂತ್ರಕೋಶ, ಇತ್ಯಾದಿ ಇರುತ್ತವೆ.
ಮೇಲೆ ತಿಳಿಸಿದ ಪ್ರತಿಯೊಂದು ಅಂಗವು ಸುಸ್ಥಿತಿಯಲ್ಲಿದ್ದರೆ ಮಾತ್ರ ಮನುಷ್ಯ ಖುಷಿಯಾಗಿ ಇರಬಲ್ಲ . ಯಾವುದೇ ಒಂದು ಅಂಗ ದುರ್ಬಲವಾದರೆ ಕಷ್ಟವಾಗುತ್ತದೆ. ಕಾರಣವೆಂದರೆ ಇದು ಆ ಒಂದು ಅಂಗಕ್ಕೆ ಸೀಮಿತವಾಗುವುದಿಲ್ಲ. ಅದರ ಅಕ್ಕ ಪಕ್ಕದಲ್ಲಿರುವ ಅಂಗಗಳಿಗೂ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ಫೋಟೋ ಕೃಪೆ :google
- ಸಾಮಾನ್ಯ ಕಾಯಿಲೆಗಳು –
1. ವೈದ್ಯರ ಪರೀಕ್ಷೆ :
ವೈದ್ಯರು ರೋಗಿಯ ನಾಲಿಗೆ, ನಾಡಿ ಬಡಿತ, ಹೃದಯ ಬಡಿತ ಪರೀಕ್ಷೆ ಮಾಡಿ, ರೋಗಿ ಹೇಳುವ ವಿವರಣೆಯಿಂದ ರೋಗವನ್ನು ಪತ್ತೆ ಹಚ್ಚುತ್ತಾರೆ. ಸಾಮಾನ್ಯ ಕಾಯಿಲೆ ಆದರೆ ಚಿಕಿತ್ಸೆ ಕೊಡುತ್ತಾರೆ. ರೋಗವನ್ನು ಪತ್ತೆಹಚ್ಚಲು ಕ್ಲಿಷ್ಟಕರವಾದಲ್ಲಿ ಕೆಲವು ಪರೀಕ್ಷೆಗಳನ್ನು ಮಾಡಿಸುತ್ತಾರೆ. ತಮ್ಮ ಸಂದೇಹವನ್ನು ದೃಢಪಡಿಸಿಕೊಳ್ಳಲು ರಕ್ತ ಪರೀಕ್ಷೆ,ಮೂತ್ರ ಪರೀಕ್ಷೆ, ಎಕ್ಸರೇ ಇತ್ಯಾದಿ ಪರೀಕ್ಷೆಗಳನ್ನು ಮಾಡಿಸುತ್ತಾರೆ. ವರದಿ ನೋಡಿಕೊಂಡು ಅವಲೋಕಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ. ನಂತರದಲ್ಲಿ ಚಿಕಿತ್ಸೆ ಮುಂದುವರಿಸುತ್ತಾರೆ.
2.ಮುನ್ನೆಚ್ಚರಿಕೆ ಕ್ರಮ:
ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ, 40 ವರ್ಷ ಮೀರಿದವರು ಕೆಲವು ಪರೀಕ್ಷೆಗಳನ್ನು ತಾವೇ ಮಾಡಿಸಿಕೊಳ್ಳುವುದು ಒಳ್ಳೆಯದು. ಉದಾಹರಣೆಗೆ ಕಣ್ಣಿನ ತಪಾಷಣೆ, ಹಲ್ಲು ಪರೀಕ್ಷೆ, ದೇಹದಲ್ಲಿನ ಸಕ್ಕರೆ ಪ್ರಮಾಣ, ಬ್ಲಡ್ ಪ್ರೆಸ್ಸರ್(bp), ರಕ್ತದಲ್ಲಿನ ಕೊಬ್ಬಿನ ಅಂಶ(cholestrol )ಇತ್ಯಾದಿ.
“ತಜ್ಞ ವೈದ್ಯರು”
ಕೆಳಗೆ ಕಾಣಿಸಿದ ತಜ್ಞ ವೈದ್ಯರುಗಳು ಎಂ.ಬಿ.ಬಿ.ಎಸ್ ಮುಗಿಸಿದ ನಂತರ ಆಯಾಯ ಮಾನವ ದೇಹದ ಅಂಗಾಂಗಗಳಲ್ಲಿ ಎಂ.ಡಿ ವ್ಯಾಸಂಗ ಮಾಡಿ ಪರಿಣತಿಯನ್ನು ಹೊಂದಿರುತ್ತಾರೆ. ಕೆಲವು ವೈದ್ಯರುಗಳು ಎಂಡಿ ಬದಲಿಗೆ “ಡಿಎನ್‌ಬಿ” ಮಾಡಿಕೊಂಡು ತಜ್ಞ ವೈದ್ಯರಾಗಿರುತ್ತಾರೆ.
ಫೋಟೋ ಕೃಪೆ :google
1.ಫಿಜಿಷಿಯನ್ (physician):
ಇವರು ಜನರಲ್ ಮೆಡಿಶನ್ನಲ್ಲಿ ಎಂ.ಡಿ(m.d general medicine )ವ್ಯಾಸಂಗ ಮಾಡಿರುತ್ತಾರೆ. ಮಾನವ ದೇಹದ ಪ್ರತಿಯೊಂದು ಅಂಗದ ವೈವಿಧ್ಯತೆ, ಅಂಗ ರಚನೆ, ಔಷದ ವಿಜ್ಞಾನ,ಎಲ್ಲವನ್ನು ವ್ಯಾಸಂಗ ಮಾಡಿರುತ್ತಾರೆ. ಸಾಮಾನ್ಯ ಕಾಯಿಲೆಗಳಾದ ಜ್ವರ, ಶೀತ, ನೆಗಡಿ, ಕೆಮ್ಮು ಇತ್ಯಾದಿ ಇದ್ದರೆ…..ಜೊತೆಗೆ ಬೇರೆ ಯಾವುದೇ ಕಾಯಿಲೆ ಇದ್ದರು ಸಹ ಇವರ ಜೊತೆ ಹೇಳಿಕೊಳ್ಳಬಹುದು. ಬ್ಲಡ್ ಪ್ರೆಶರ್,ಮಧುಮೇಹ, ಇತ್ಯಾದಿ ಕಾಯಿಲೆಗಳನ್ನು ಸಹ ನಿಯಂತ್ರಣ ದಲ್ಲಿಡಲು ಔಷಧ ಉಪಾಚಾರ ಮಾಡುತ್ತಾರೆ. ಇವರ ಪರಿಮಿತಿಗೆ ಬಾರದ ರೋಗಗಳಿದ್ದಲ್ಲಿ ಅಂಗಗಳ ತಜ್ಞರಿಗೆ ಬೇಟಿಯಾಗಲು ತಿಳಿಸುತ್ತಾರೆ.
2.ಸ್ತ್ರೀರೋಗ ತಜ್ಞರು (gynaecologist ):
ಇವರು ವಿಶೇಷವಾಗಿ ಮಹಿಳೆಗೆ ಸಂಬಂಧಪಟ್ಟ ಗರ್ಭಧಾರಣೆ, ಭ್ರೂಣದ ಕಾರ್ಯಕ್ಷಮತೆ, ಭ್ರೂಣದ ಬೆಳವಣಿಗೆ, ಭ್ರೂಣದಲ್ಲಿನ ನ್ಯೂನತೆ,ಸಂತಾನ ಉತ್ಪತ್ತಿಗೆ ಸಂಬಂಧಪಟ್ಟ ಅಂಗಾಂಗಗಳ ಕಾರ್ಯಕ್ಷಮತೆ, ಮೂತ್ರನಾಳದಲ್ಲಿನ ಸೋಂಕು ಇತ್ಯಾದಿ ಗುರುತಿಸಿ ಚಿಕಿತ್ಸೆ ಕೊಡುತ್ತಾರೆ. ತಮ್ಮ ನೈಪುಣ್ಯತೆಯಿಂದ ಸಹಜವಾದ ಹೆರಿಗೆಯನ್ನು ಸಹ ಮಾಡಿಸುತ್ತಾರೆ. ಸಹಜ ಹೆರಿಗೆ ಸಾಧ್ಯವಾಗದಿದ್ದಲ್ಲಿ ಸಿಜೇರಿಯನ್ ಶಸ್ತ್ರಚಿಕಿತ್ಸೆಯ ಮುಖಾಂತರ ಮಗುವನ್ನ ತೆಗೆಯುತ್ತಾರೆ. ಪ್ರಸವದ ನಂತರ ಮಗು, ಬಾಣಂತಿ ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಅನ್ನುವುದನ್ನು ಸಹ ತಿಳಿಸುತ್ತಾರೆ.
3.ಮಕ್ಕಳ ತಜ್ಞರು (children specialist ):
ಮಕ್ಕಳು ಹುಟ್ಟಿದಂದಿನಿಂದ, ಸುಮಾರು 14 ವರ್ಷ ತುಂಬುವವರೆಗೆ ಇವರೇ ಮಗುವಿನ ಆರೋಗ್ಯ ನೋಡಿಕೊಳ್ಳುತ್ತಾರೆ. ಮಕ್ಕಳಿಗೆ ಕಾಲಕಾಲಕ್ಕೆ ಕೊಡಬೇಕಾದ ಪ್ರತಿರೋಧಕ ಚುಚ್ಚು ಮದ್ದು ಕೊಡಿಸಲು ಸಲಹೆ ನೀಡುತ್ತಾರೆ.ಕಾಲಕಾಲಕ್ಕೆ ಮಗುವಿನ ತೂಕ, ಎತ್ತರ,ಬೆಳವಣಿಗೆ ಗಮನಿಸುತ್ತಾರೆ.
4.ಚರ್ಮರೋಗ ತಜ್ಞರು (dermatologist ):
ಇವರು ಚರ್ಮಕ್ಕೆ ಸಂಬಂಧಪಟ್ಟ ಅಲರ್ಜಿ, ಕಜ್ಜಿ, ತುರಿಕೆ, ಮಚ್ಚೆ ಇತ್ಯಾದಿ ರೋಗಗಳ ಗುರುತಿಸಿ ಚಿಕಿತ್ಸೆ ಕೊಡುತ್ತಾರೆ. ತಲೆಯಲ್ಲಿ ಬರುವ ಹೊಟ್ಟು,ಕೂದಲು ಉದುರುವಿಕೆ,ಉಗುರಿಗೆ ಸಂಬಂಧಪಟ್ಟ ರೋಗಗಳನ್ನು ಸಹ ಪರೀಕ್ಷಿಸಿ ಔಷಧ ಕೊಡುತ್ತಾರೆ . ಹರ್ಪಿಸ್ ಕಾಯಿಲೆಗೆ ಚಿಕಿತ್ಸೆ ಕೊಡುತ್ತಾರೆ.
5.ಸಾಮಾನ್ಯ ಶಸ್ತ್ರಚಿಕಿತ್ಸಕರು (general surgery):
ಇವರು ಸಹ ದೇಹಕ್ಕೆ ಸಂಬಂಧಪಟ್ಟ ಎಲ್ಲಾ ರೋಗಗಳನ್ನು ಪತ್ತೆಹಚ್ಚಬಲ್ಲರು. ಹೊಟ್ಟೆಯಲ್ಲಿರುವ ಅಂಗಗಳಾದ ದೊಡ್ಡ ಕರುಳು, ಸಣ್ಣ ಕರುಳು, (ಲಿವರ್) ಯಕೃತ್ತು, ಮೂತ್ರಕೋಶ, ಮುಂತಾದ ಅಂಗಗಳಿಗೆ ಸಂಬಂಧಪಟ್ಟ ರೋಗಗಳನ್ನು ಗುರುತಿಸಿ ಚಿಕಿತ್ಸೆ ಕೊಡಬಲ್ಲರು. ಮಾತ್ರೆಗೆ ಗುಣವಾಗದಿದ್ದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಸಹ ಮಾಡುತ್ತಾರೆ. ಚರ್ಮದ ಮೇಲಿನ ಗಾಯಗಳಿಗೆ ಚಿಕಿತ್ಸೆ ಕೊಡುತ್ತಾರೆ. Appendicitis, ಹರ್ನಿಯ, ಮೂಲವ್ಯಾಧಿ ಇದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡುತ್ತಾರೆ.
6. ಕಿವಿ, ಮೂಗು, ಗಂಟಲು ತಜ್ಞರು (E. N. T. Surgeon):
ಕಿವಿ ಕೇಳಿಸಿದಿದ್ದಲ್ಲಿ, ಕಿವಿಯಲ್ಲಿ wax ಇದ್ದಲ್ಲಿ, ವ್ಯಾಕ್ಸ್ ಗಟ್ಟಿಯಾಗಿದ್ದರೆ, ಕಿವಿ ಸೋರುತ್ತಿದ್ದರೆ ಇಂತಹ ತೊಂದರೆಗಳಿಗೆ ಚಿಕಿತ್ಸೆ ಕೊಡುತ್ತಾರೆ. ಮೂಗು ಸತತ ಸೋರುತ್ತಿದ್ದಲ್ಲಿ, ವಾಸನೆ ಗೊತ್ತಾಗದಿದ್ದಲ್ಲಿ ಚಿಕಿತ್ಸೆ ಕೊಡುತ್ತಾರೆ. ಗಂಟಲಿನಲ್ಲಿ ಕೆರೆತ ಉಂಟಾದರೆ,ಆಹಾರ ನುಂಗಲು ತೊಂದರೆ ಆದರೆ, synusities ತೊಂದರೆಗಳಿಗೆ ಚಿಕಿತ್ಸೆ ಕೊಡುತ್ತಾರೆ. ಅವಶ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಯನ್ನು ಸಹ ಮಾಡುತ್ತಾರೆ. ಮಾತನಾಡಲು ತೊಂದರೆ ಇದ್ದಲ್ಲಿ ಚಿಕಿತ್ಸೆ ಕೊಡುತ್ತಾರೆ.
ಮುಂದುವರೆಯುವುದು…
- ದೇವರಾಜ ಚಾರ್ , ಮೈಸೂರು