‘ಸಮಗ್ರ ಕಥೆಗಳು’ ಪುಸ್ತಕ ಪರಿಚಯ – ಮೋಹನ್ ಕುಮಾರ್ ಡಿ ಎನ್

ಪಿ. ಲಂಕೇಶ್ ಅವರ ‘ಸಮಗ್ರ ಕಥೆಗಳು’ ಕುರಿತು ಮೋಹನ್ ಕುಮಾರ್ ಡಿ ಎನ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ‘ಸಮಗ್ರ ಕಥೆಗಳು’
ಲೇಖಕರು : ಪಿ. ಲಂಕೇಶ್
ಪುಟಗಳು: 609
ಬೆಲೆ: 700/-
ಪ್ರಕಾಶನ : ಇಂದಿರಾ ಲಂಕೇಶ್ ಪ್ರಕಾಶನ

ಇದು ನನ್ನ ಬಹಳ ವರ್ಷಗಳ ಕನಸ್ಸು. ಒಂದು ರೀತಿಯ ತಪಸ್ಸೇ ಎನ್ನಿ. ಈ ಪುಸ್ತಕಕ್ಕಾಗಿ ಹುಡುಕದ ಪುಸ್ತಕದಂಗಡಿಗಳಿಲ್ಲ. ಕಾಡಿ ಬೇಡಿರದ ಪುಸ್ತಕ ಪ್ರೇಮಿಗಳಿಲ್ಲ. ಲಂಕೇಶರ ಸಮಗ್ರ ಕಥಾ ಸಂಕಲನಕ್ಕಾಗಿ ಯಾರನ್ನು ಎಷ್ಟೆಲ್ಲಾ ಪೀಡಿಸಿದ್ದೀನೋ? ಅದೆಲ್ಲಾ ಪರಿಶ್ರಮ ವ್ಯರ್ಥವಾಗುವ ಕಾಲ ಸನ್ನಿಹಿತವಾಗಿ, ಅವರ ಸಮಗ್ರ ಸಿಗುವುದಿಲ್ಲ ಎನ್ನುವ ಕೊನೆಯ ನಿರ್ಣಯಕ್ಕೆ ಬರುವ ಮುನ್ನ ಕೂಡ ಲಂಕೇಶ್ ಪ್ರಕಾಶನದವರೊಟ್ಟಿಗೆ ಮೇಯ್ಲ್ ಮಾಡಿ ಪುಸ್ತಕಕ್ಕಾಗಿ ಬೇಡಿಕೆ ಕೂಡ ಇಟ್ಟಿದ್ದೆ. ನಾನು ಕಳುಹಿಸಿದ ಸಂದೇಶಕ್ಕೆ ಉಪ್ಪು ಉಳಿ ಅಂತೇನೂ ಬರಲಿಲ್ಲ. ಆದರೆ ಅದೃಷ್ಟ ನೋಡಿ; ಅವರಿಗೆ ಮೇಯ್ಲ್ ಮಾಡಿ ನಾಲ್ಕಾರು ದಿನಗಳ ಬಳಿಕ ಅವರ ಸಮಗ್ರ ಕಥಾ ಸಂಕಲನ ಹೊರಬರುತ್ತಿರುವುದು ನೋಡಿ ಆಶ್ಚರ್ಯವೂ ಆಗಲಿಲ್ಲ, ಅತ್ಯಂತ ಸಂತೋಷವೂ ಆಗಲಿಲ್ಲ; ಎರಡನ್ನೂ ಮೀರಿದ ಧನ್ಯತೆಯ ಸ್ಥಿತಿ ನನ್ನದಾಗಿತ್ತು.

1963ರಲ್ಲಿ ಅವರ ಮೊದಲ ಕಥಾ ಸಂಕಲನ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಪ್ರಕಟವಾಯ್ತು. ತದನಂತರ, ‘ನಾನಲ್ಲ’ (1970), ‘ಉಮಾಪತಿಯ ಸ್ಕಾಲರ್ಷಿಪ್ ಯಾತ್ರೆ ‘ (1973), ‘ಕಲ್ಲು ಕರಗುವ ಸಮಯ’ (1990), ‘ಉಲ್ಲಂಘನೆ’ (1996) ಮತ್ತು ‘ಮಂಜು ಕವಿದ ಸಂಜೆ’ (2001) ರಲ್ಲಿ ಪ್ರಕಟವಾಗಿವೆ.

ಮೊದಲ ಕಥಾ ಸಂಕಲನದ ಕಥೆಗಳಾದ ‘ಕುರುಡು ಕಾಂಚಾಣ’ದಲ್ಲಿ ಮನುಷ್ಯನ ಸಣ್ಣತನ, ಅವನಲ್ಲಿನ ಸ್ವಕೇಂದ್ರಿತ ಪ್ರಜ್ಞೆ, ತಾನು-ತನ್ನ ಮನೆಯನ್ನು ಹಾರಿ ಹೊರಬರಲಾಗದ ಚೌಕಟ್ಟು, ತನ್ನನ್ನೇ ತಾನು ಮೀರಲಾಗದ ನಿರ್ಬಂಧ, ‘ಗೊಮ್ಮಟೇಶ’ದಲ್ಲಿ ಮನದೊಳಗೆ ಸುಪ್ತವಾಗಿ ಲಾಸ್ಯವಾಡುವ ಬಯಕೆ, ಅದನ್ನು ಮೀರಲಾಗದ ಅಸಹಾಯಕತೆ, ಕಣ್ಣೆದುರಿನ ನಗ್ನ ಮೂರ್ತಿ, ಮನದೊಳಗೆ ಪುಲಕವಾಡುವ ಓತಪ್ರೋತ ಅನಿಯಂತ್ರಿತ ಭಾವನೆಗಳು, ‘ಎಂಟು ಮೂವತ್ತು ಐವತ್ತು’ವಿನಲ್ಲಿ ಹಿರಿತನವನ್ನು ಮೀರಿ ಕಿರಿಯನಾಗಲಾರದ, ಕಿರಿಯ ಬಾಲೆ ಎದುರು ದೊಡ್ಡವನೂ ಆಗಲಾರದ, ಸಮಾಜದ ಗಣ್ಯನ ತೊಳಲಾಟ, ತನ್ನತನವನ್ನು ಸರಿ ಹದ್ದು ದಾಟಿ ಒಳಗೊಳ್ಳಲು ಯತ್ನಿಸುದಷ್ಟೂ ಮುಚ್ಚಟೆ ಮಾಡಬೇಕೆನಿಸುವ ಆದರೆ ಅದಕ್ಕೆ ಅನುವು ಮಾಡಿಕೊಡದ ಎಳೆಯ ಮನಸ್ಸಿನ ಅಸ್ಥಿರತೆ, ‘ಒಬ್ಬಂಟಿ’ಯಲ್ಲಿ ಅಜ್ಞಾನ ಮತ್ತು ಅನಕ್ಷರತೆಯ ಪರಿಣಾಮವನ್ನೆದುರಿಸುವ ನಿಷ್ಠುರವಾದಿ ಸಮಾಜದಲ್ಲಿನ ದಬ್ಬಾಳಿಕೆಗೆ ಬಲಿಯಾಗುವ ಪರಿ, ‘ನಮ್ಮ ನಡುವಿನ ಹುಡುಗ’ ಅಕ್ಕಿಯ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎನ್ನುವಂತೆ ಕರ್ಮ ಮತ್ತು ಆದರ್ಶಗಳ ತಿಕ್ಕಾಟದಲ್ಲಿ ನುಜ್ಜುಗುಜ್ಜಾದ, ‘ನಿವೃತ್ತರು’ನಲ್ಲಿ ಸಮಯಕ್ಕೆ ಸರಿಯಾಗಿ ಕಾದು ಸ್ಪೋಟಗೊಳ್ಳಲು ಮನುಷ್ಯನ ಅಂತರಂಗದಲ್ಲಿ ಕಾದು ಹೊಂಚಿ ಕುಳಿತ ತಣ್ಣನೆಯ ಕ್ರೌರ್ಯ, ಪರಸ್ಪರರ ದೋಷಾರೋಪಣೆ, ವಯಸ್ಸು ಅನುಭವ ಹಿರಿತನವೆನ್ನುವ ಕ್ಷುಲ್ಲಕತೆ ಕಣ್ಣೆದುರೇ ಮಣ್ಣಾಗುವುದು, ‘ವಾಮನ’ದಲ್ಲಿ ಬಯಸದೆಯೇ ಬಂದ ಅತಿಥಿಯೊಬ್ಬ ಅನಿಯಂತ್ರಿತವಾಗಿ ತನ್ನನ್ನು ಮೀರಿ ಬೆಳೆದು ನಿಲ್ಲುವುದು, ‘ಕೆರೆಯ ನೀರನು ಕೆರೆಗೆ ಚೆಲ್ಲಿ’ಯಲ್ಲಿ ಸುಪ್ತವಾಗಿ ಬೆಳೆದ ಬಯಕೆಗಳ ನಡುವೆ ನುಜ್ಜುಗುಜ್ಜಾದ, ಹರೆಯಕ್ಕೂ ಹಿರಿತನಕ್ಕೂ ನಡುವಿನ ಸಂಧಿ ಸ್ಥಿತಿಯಲ್ಲಿ ಸಿಕ್ಕುವ ಹಳ್ಳಿಯ ಅಮಾಯಕ ಯುವತಿ..

ಲಂಕೇಶರ ಎರಡನೆಯ ಕಥಾ ಸಂಕಲನ ‘ನಾನಲ್ಲ’ಕ್ಕೆ ಮುನ್ನುಡಿ ಬರೆಯುತ್ತ ಗೋಪಾಲಕೃಷ್ಣ ಅಡಿಗರು ಹೇಳುವ ಮಾತು ಬಹುಶಃ ಲಂಕೇಶರ ಬಗ್ಗೆ ಬರೆದ ಗದ್ಯಚರಮದಂತೆ ಅನಿಸುತ್ತೆ. ಅವರು ಹೇಳುತ್ತಾರೆ: ‘ಲಂಕೇಶರ ಗದ್ಯದ ಸೊಗಸು ಇರುವುದು ಅದರ ಸಾರ್ಥಕತೆಯಲ್ಲಿ, ಉದ್ದೇಶಸಿದ್ಧಿಗೆ ತಕ್ಕ ಸಾಧನವಾಗಿರುವುದರಲ್ಲಿ, ಅತ್ಯಂತ ಸೂಕ್ಷ್ಮವೂ ಸಂಕೀರ್ಣವೂ ಆಗಿರುವ ಅಂತರಂಗದ ಕಂಪನಗಳನ್ನು ಹಿಡಿದಿಡಬಲ್ಲ ಸೂಕ್ಷ್ಮಗ್ರಾಹಿಯಾಗಿರುವುದರಲ್ಲಿ. ಕಾವ್ಯದ ಯಾವ ವಿಶಿಷ್ಟ ಬಹಿರಂಗ ಲಕ್ಷಣಗಳನ್ನೂ ಬಳಸದೆ ಶುದ್ಧವೂ ಸರಳವೂ ಸಂಕ್ಷಿಪ್ತವೂ ಆದ ಗದ್ಯದ ಮೂಲಕ ಕಾವ್ಯಾನುಭವವನ್ನು ನಮಗೆ ತಂದುಕೊಡುವ ಇವರ ಗದ್ಯಶೈಲಿ ಅದ್ಭುತವಾದರೂ, ಅನನ್ಯ ಸಾಧಾರಣವಾದದ್ದು. ಈ ಗದ್ಯ ತನಗೆ ತಾನೇ ಪ್ರತ್ಯೇಕವಾಗಿ ಎದ್ದು ಕಾಣುವಂಥದಲ್ಲ; ಅದು ಕಾಣುವುದು ಒಟ್ಟು ಕೃತಿಯ ಒಂದು ಅಂಗವಾಗಿ; ಒಟ್ಟು ಪರಿಣಾಮದ ಅವಿಭಾಜ್ಯ ಅಂಶವಾಗಿ. ಇದು ಬಹು ಮುಖ್ಯವಾದ ಮಾತು’ ಬೀದಿ ಹೆಣದ ಕುರಿತು ಮರುಗುವ ವಿದ್ಯಾರ್ಥಿಯೊಬ್ಬನ ತಳಮಲದ ಕಥೆ ‘ನಾನಲ್ಲ’, ತಾನು ಬರೆದ ಕಥೆಯೊಂದಕ್ಕೆ ಸಂಭಾವನೆ ಪಡೆಯಲು ಹೆಣಗುವನೊಬ್ಬನ ಕಥೆ ‘ಒಂದು ಘಟನೆ’, ಕಾರು ತಾಗಿಸಿ ಅಪಘಾತ ಮಾಡಿದ್ದನ್ನು ಮರೆಮಾಚಿ ಒಳ್ಳೆಯವನಂತೆ ನಟಿಸಿ ಕೊನೆಗೆ ಸಿಕ್ಕುಬೀಳುವನೊಬ್ಬನ ಕಥೆ ‘ಹುಡುಕಾಟ’, ಬದುಕಿನ ನಶ್ವರತೆಯನ್ನು ಸಾರುವ ‘ಜೀರ್ಣೋಭವ’, ತಂದೆಯ ಅನಾರೋಗ್ಯ ಮತ್ತು ಬದುಕಿನ ಕೊನೆಯ ಹಂತವಾದ ಸಾವನ್ನು ಕೂಡ ಲೌಕಿಕ ದೃಷ್ಟಿಯಲ್ಲಿ ಕಾಣುವ ಮಗನ ಕಥೆ ‘ತಂದೆ’, ವಿಶ್ವವಿದ್ಯಾಲಯಗಳ ಬೌದ್ಧಿಕ ದಾರಿದ್ರ್ಯತೆ ಮತ್ತು ಲಾಭಿತನವನ್ನು ಸಾರುವ ‘ಆಕ್ಟೋಪಸ್’, ವಿಫಲ ದಾಂಪತ್ಯದ ಅಸ್ಥಿರತೆಯನ್ನು ಹೇಳುವ ‘ಅಸ್ವಸ್ಥರು’, ಎಲ್ಲ ಸರಿ ಇದ್ದೂ ವಾಸನೆಯ ರೋಗವಿದೆ ಎಂದು ಕೊರಗುವ ಮನೋರೋಗಕ್ಕೆ ತುತ್ತಾದವನ ಕಥೆ ‘ವಾಸನೆ’ ಹೇಳುತ್ತದೆ.

ತನ್ನಿಡೀ ಜನ್ಮ ಜಾತಕ ಹುಟ್ಟನ್ನೇ ಪ್ರಶ್ನಿಸುವ ಪೇಚಿನ ಪ್ರಸಂಗಕ್ಕೆ ಸಿಲುಕಿಕೊಂಡು ಅತಾತ್ವಿಕತೆಯನ್ನು ಅನುಭವಿಸುವ, ಅಮ್ಮ ಅಕ್ಕಳ ಬದುಕಿನ ಸಮಗ್ರತೆಯನ್ನೇ ಅನುಮಾನಕ್ಕೆ ತಳ್ಳುವಂತೆ ಮಾಡುವ ‘ಉಮಾಪತಿಯ ಸ್ಕಾಲರ್’ಶಿಪ್ ಯಾತ್ರೆ’ ನಾನು ಓದಿದ ಅತ್ಯುತ್ತಮ ಕಥೆಗಳಲ್ಲಿ ಒಂದು. ಇಡೀ ಕಥೆಗೆ ಪೂರಕವಾಗಿರುವಂತೆ ಲಂಕೇಶರು ಕೇವಲ ಕಥೆಯ ಪಾತ್ರ ಮತ್ತು ಸನ್ನಿವೇಶಗಳನ್ನು ಮಾತ್ರವಲ್ಲದೇ ಪರಿಸರವನ್ನೂ ಸಶಕ್ತವಾಗಿ ಬಳಸಿಕೊಂಡಿದ್ದಾರೆ.

ಇದರ ಜೊತೆಗೆ ‘ಮಾರಲಾಗದ ನೆಲ’ದಲ್ಲಿ ನಗರ ಜೀವನಕ್ಕೆ ಒಡ್ಡಿಕೊಂಡು ತನ್ನ ಮೂಲ ಬೇರನ್ನು ಮರೆತು ವ್ಯಾವಹಾರಿಕತೆ ಒಗ್ಗೂಡಿಸಿಕೊಂಡ ಪ್ರಾಧ್ಯಾಪಕನೊಬ್ಬ ಪಿತ್ರಾರ್ಜಿತವಾದ ಒಕ್ಕಲಿಗೆ ಬಿಟ್ಟ ಹಳ್ಳಿಯ ಆಸ್ತಿಯನ್ನು ಮಾರಲೋಸುಗ ಹಳ್ಳಿಗೆ ಬಂದು ಹಳ್ಳಿಯವರು ನಡೆಸುವ ವ್ಯೂಹ ಷಡ್ಯಂತ್ರಕ್ಕೆ ಬಲಿಯಾಗುವ ಕಥೆ ಹೇಳುತ್ತದೆ. ತಂತ್ರಗಾರಿಕೆ ದೃಷ್ಟಿಯಿಂದ ಮೇಲಿನ ಎರಡು ಕಥೆಗಳು ಅಗ್ರಪಂಕ್ತಿಯಲ್ಲಿ ನಿಲ್ಲುತ್ತವೆ.

‘ಮುಟ್ಟಿಸಿಕೊಂಡವರು’ ಎಷ್ಟೊಳ್ಳೆಯ ಕಥೆ ಎಂದರೇ ವಿಸ್ತೀರ್ಣದಲ್ಲಿ ಸಣ್ಣದಿದ್ದರೂ ಹರಡಿಕೊಳ್ಳುವ ವ್ಯಾಪ್ತಿ, ಹರಹು ಮತ್ತು ಒಟ್ಟಾರೆಯಾಗಿ ಬೀರಬಲ್ಲ ಪ್ರಭಾವ ದೊಡ್ಡದು. ಹತ್ತಾರು ಪುಟಗಳಲ್ಲಿ ಹೇಳಲಾಗದ ಮನುಷ್ಯನ ಸಣ್ಣತನ, ವಕ್ರಬುದ್ಧಿ, ಕುರುಡು ಜಾತಿ ಪ್ರೇಮವನ್ನು ಕೇವಲ ಐದೇ ಐದು ಪುಟಗಳಲ್ಲಿ ಕಟ್ಟಿಕೊಟ್ಟಿರುವ ಲಂಕೇಶರ ಸಶಕ್ತ ಕಥೆಗಳಲ್ಲೊಂದು. ಇದು ದೇಹವನ್ನು ಮುಟ್ಟಿಸಿಕೊಂಡು ಮೈಲಿಗೆಗೆ ಗುರಿಯಾದವನ ಕಥೆಯಾಗಿರುವಂತೆಯೇ ಸಮಾಜದಲ್ಲಿ ತಾಂಡವವಾಡುತ್ತಿರುವ ದುಷ್ಟತನ, ಅಸ್ಪೃಶ್ಯತೆ, ಜಾತೀಯತೆಯನ್ನೂ ಕುರಿತು ಹೇಳುತ್ತದೆ.

‘ಸಹಪಾಠಿ’ ಕೂಡ ಮುಟ್ಟಿಸಿಕೊಂಡವರು ಕಥೆಯ ಮುಂಬರಿದ ಭಾಗವೇನೋ ಅಂತನ್ನಿಸಿದರೂ, ಕಥೆಯ ಅಂತರಾಳ ಭಿನ್ನ ನೆಲೆಯಲ್ಲಿ ನೆಲೆಯೂರುತ್ತದೆ. ಅಂತಃಕ್ಲೇಶದಿಂದ ನರಳುತ್ತಿರುವ ದಟ್ಟ ಕಾಡಿನ ನಡುವೆಯ ಹಳ್ಳಿಗಳ ಗೌಡನ ನೋವು ಬಹಿರಂಗಕ್ಕೆ ಗೋಚರವಾಗುವಂಥದ್ದಲ್ಲ. ಅಲ್ಲಿ ಕೆಳಜಾತಿಯ ಶಿಕ್ಷಕನೊಬ್ಬನಿಗೆ ಮಾಡಿದ ಅವಮಾನ ಅವನನ್ನು ನಿರಂತರ ಕಾಡುತ್ತಿದೆ. ಸಮಸ್ಯೆಯ ಮೂಲ ಶಿಕ್ಷಕನಲ್ಲ. ಅವನ ಮನಸ್ಸೇ. ಅದಕ್ಕೆ ಮದ್ದು ಅರೆಯುವುದು ನಾಲ್ಕು ಧಶಕಗಳ ಹಿಂದಿನ ಸಹಪಾಠಿ, ಪ್ರಸ್ತುತ ಸಾಹಿತಿಯಾಗಿರುವ ಬಾಲ್ಯದ ಗೆಳೆಯ. ಯಾವ ಅತಾತ್ವಿಕ ನೆಲೆಗಟ್ಟಿನಲ್ಲಿ ಶಿಕ್ಷಕನ ಮೇಲೆ ಶೋಷಣೆ ನಡೆದಿತ್ತೋ ಅದೇ ಅತಾತ್ವಿಕ ರೀತಿಯಲ್ಲಿ ಪ್ರಯೋಗ ನಡೆಸುವ ಸಹಪಾಠಿ, ಗೌಡನ ಕ್ಲೇಶಕ್ಕೆ ಕೊಡಲಿ ಏಟು ಹಾಕುವ ಹೊತ್ತಿಗೆ ಅವನು ಕಾಲವಾಗಿರುತ್ತಾನೆ.
‘ಕಲ್ಲು ಕರಗುವ ಸಮಯ’ ಲಂಕೇಶರ ಮಾಸ್ಟರ್’ಪೀಸ್ ಕಥೆಗಳಲ್ಲೊಂದು. ತುಂಬಾ profound ಆಗಿ ಕಥೆ ಹೆಣೆಯಲಾಗಿದೆ. ಸೃಜನಶೀಲತೆ ಮತ್ತು ಸಹೃದಯತೆ ಇಲ್ಲದ ಲೇಖಕನೇನಾದರೂ ಇಂತಹ ಕಥೆಯನ್ನೇನಾದರೂ ಬರೆದಿದ್ದಲ್ಲಿ ಲಯ ತಪ್ಪಿ, ದಿಕ್ಕು ತಪ್ಪಿದ ಗಾಳಿಪಟದಂತಾಗಿರುತ್ತಿತ್ತು. ಆದರೆ ಲಂಕೇಶ್ ಅವರು ಎಷ್ಟು ಸೂಕ್ಷ್ಮವಾಗಿ ಎರಡು ಅನ್ಯ ಕೋಮಿನ ನಡುವಿನ ಪ್ರೇಮಿಗಳನ್ನು ನಿಭಾಯಿಸಿದ್ದಾರೆಂದರೇ ಕಥೆ ಎಲ್ಲೂ ಚ್ಯುತಿಗೊಳ್ಳುವುದಿಲ್ಲ. ಚೂರೇಚೂರು ಯಾಮಾರಿದ್ದರೂ ಮರ್ಯಾದಾ ಹತ್ಯೆಯಂತಹ ಕಥೆಯಾಗುವ ಅಪಾಯವನ್ನು ಲಂಕೇಶ್ ಅದ್ಭುತವಾಗಿ ಕುಸುರಿ ಹಿಡಿದಿದ್ದಾರೆ.

‘ಮಾರಲಾಗದ ನೆಲ’, ‘ವೃಕ್ಷದ ವೃತ್ತಿ’, ‘ದಾಳಿ’, ‘ಉಲ್ಲಂಘನೆ’, ‘ಸುಮ್ಮನೆ ಬದುಕಿದ ಒಂದು ದಿನ’, ‘ಕಣ್ಣಪ್ಪನ ಅಂತಿಮ ದಿನಗಳು’, ‘ಮಂಜು ಕವಿದ ಸಂಜೆ’, ‘ಡಿಸೋಜಾನ ಊವಿನ ವೃತ್ತಿ’, ‘ಶಾರದೆಯ ಪುಟ್ಟ ಸಾಹಸ’, ‘ಅಂಚಿನ ಚಿತ್ರಗಳು’, ‘ಗಡಿ’.. ಎಷ್ಟೆಲ್ಲಾ ಕಥೆಗಳಿವೆ ಓದಲು! ಲಂಕೇಶರು ತನ್ನ ಮೂಲವನ್ನು ಬಿಡದೇ, ಮಣ್ಣಿನ ಗುಣದಿಂದ ಹೊರಬರಲಾಗದೆ ಬರೆದ ಕಥೆಗಳಿವು. ಅದು ತಾನು ಕಂಡ ಹಳ್ಳಿ, ಬಾಲ್ಯ, ಪರಿಸರ.. ಎಲ್ಲದರ ಪ್ರಭಾವ ಹೊರತಾದ ಯಾವ ಕಥೆಯೂ ಇಲ್ಲಿಲ್ಲ. ಆಧುನಿಕ ಮತ್ತು ನಗರೀಕರಣ ಬೇಸ್ಡ್ ಕಥೆಗಳಲ್ಲೂ ಈ ಅಂಶ ಕಂಡೂ ಕಾಣದೆ ಅವಿತಿದೆ. ಹೀಗಾಗಿ ಲಂಕೇಶರನ್ನು ನಮ್ಮ ಮಣ್ಣಿನ ಅಪ್ಪಟ ಕಥೆಗಾರ ಎನ್ನಬಹುದು.

ಪುಸ್ತಕದಲ್ಲಿ ಲಂಕೇಶರ ಬಗ್ಗೆ ಈ ಕೆಳಗಿನ ಮಾತುಗಳು ಬರುತ್ತವೆ. ಓದಿ ನೋಡಿ ಅತಿಶಯೋಕ್ತಿ ಎನಿಸಲಿಕ್ಕಿಲ್ಲ. “ಲಂಕೇಶ್, ಕನ್ನಡ ಕಥಾ ಸಾಹಿತ್ಯದ ಉನ್ನತ ಶಿಖರ. ಸ್ವಾತಂತ್ರ್ಯೋತ್ತರ ಭಾರತದ ಗ್ರಾಮೀಣ ಮತ್ತು ನಗರಗಳ ಒಳಹೊರಗನ್ನು, ತವಕ ತಲ್ಲಣಗಳನ್ನು ಇವರ ಕತೆಗಳು ಕಾಣಿಸುತ್ತವೆ. ಸಂಕ್ರಮಣ ಘಟ್ಟದ ಭಾರತೀಯ ಮನಸ್ಸಿನ ದ್ವಂದ್ವಗಳನ್ನು, ಆಯ್ಕೆಯ ಸವಾಲುಗಳನ್ನು, ಅವುಗಳ ಆಕಾರ ವಿಕಾರಗಳನ್ನು ಇವರಷ್ಟು ಸಾಂದ್ರವಾಗಿ ಕಟ್ಟಿಕೊಟ್ಟವರು ಇಲ್ಲವೇನೋ. ಗಂಡು-ಹೆಣ್ಣಿನ ಸಂಬಂಧಗಳ ಅನೂಹ್ಯ ತಿರುವುಗಳನ್ನು, ಬಿಕ್ಕಟ್ಟು ಮತ್ತು ಸಂಭ್ರಮಗಳನ್ನು ಅವರು ಚಿತ್ರಿಸುತ್ತಾರೆ. ಲಂಕೇಶ್ ಅಷ್ಟೇ ಉತ್ಕಟವಾಗಿ ಜಾತಿ, ವರ್ಗ, ಪ್ರಭುತ್ವ ಮತ್ತು ಧರ್ಮದ ಎಳೆಗಳು ಮನುಷ್ಯನ ಬದುಕನ್ನು ತಮ್ಮ ಬಲೆಗಳಲ್ಲಿ ಬಂಧಿಸಿರುವ ವಿಪರ್ಯಾಸವನ್ನೂ ಓದುಗರ ಬುದ್ಧಿ-ಭಾವಗಳಿಗೆ ತಾಕುವಂತೆ ಬರೆಯಬಲ್ಲರು. ಮನುಷ್ಯ ಸ್ವಭಾವದ ನಿಜ, ಸುಳ್ಳುಗಳನ್ನು, ಅಂತಃಕರಣ, ಕ್ರೌರ್ಯಗಳ ಅಖಂಡ ವ್ಯಂಗ್ಯವನ್ನು, ಬದುಕಿನ ಅನಂತ, ಅಗಮ್ಯ ಶಕ್ತಿಯ ಎದುರಿಗೆ ಮನುಷ್ಯನ ಅಸಹಾಯಕತೆಯನ್ನು ಅದರೆಲ್ಲ ಸೂಕ್ಷ್ಮಗಳಲ್ಲಿ ಹಿಡಿಯಬಲ್ಲ ಕತೆಗಾರ ಲಂಕೇಶ್. ಸಣ್ಣಕತೆಯ ಶಕ್ತಿ ಮತ್ತು ಸೌಂದರ್ಯದ ಸಾಧ್ಯತೆಗಳನ್ನು ಕೊನೆಯಿರದ ಅನುರಕ್ತಿಯಲ್ಲಿ ಹುಡುಕಿದ ಹಾಗೂ ಅದನ್ನು ವಿಸ್ತರಿಸಿದ ಕಾರಣಕ್ಕಾಗಿ ಅವರು ಶ್ರೇಷ್ಠ ಭಾರತೀಯ ಕತೆಗಾರರಲ್ಲಿ ಒಬ್ಬರಾಗಿದ್ದಾರೆ”

ಲಂಕೇಶ್ ಅಬ್ಸರ್ಡ್ ರೀತಿಯ ಕಥೆಗಾರರು. ಹಾಗೆಲ್ಲ ಒಂದೇ ಏಟಿಗೆ, ಪಟ್ಟಿಗೆ ಲಂಕೇಶರನ್ನು ಓದಿ ಮುಗಿಸಲಾಗುವುದಿಲ್ಲ. ಒಂದು ರೀತಿಯ ಟ್ರಾನ್ಸ್ ಸ್ಥಿತಿಯಲ್ಲಿ, ತಾದ್ಯಾತ್ಮವಾಗಿ ಓದಿದರೆ ಮಾತ್ರ ದಕ್ಕುವರು. ಹೀಗಾಗಿ ಯಾವ ಧಾವಂತಕ್ಕೂ ಬೀಳದೇ ಸಾವಧಾನವಾಗಿ, ಕೊನೆಗಾದರೂ, ಲಂಕೇಶರನ್ನು ಓದಿ ಮುಗಿಸಿದ ಸಂತೃಪ್ತಿ ನನ್ನದು.


  • ಮೋಹನ್ ಕುಮಾರ್ ಡಿ ಎನ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW