ಮಹಾಕುಂಭಮೇಳ; ನಮ್ಮ ಅನುಭವ

ಬೆಂಗಳೂರಿನಿಂದ ವಾರಣಾಸಿ,ವಾರಣಾಸಿಯಿಂದ ಬೆಂಗಳೂರು ಫ್ಲೈಟ್, ಪ್ರಯಾಗ್ ರಾಜ್ ಮತ್ತು ಅಯೋಧ್ಯೆ ಲೋಕಲ್ ಟ್ರಾನ್ಸ್ಪೋರ್ಟ್. ಫ್ಲೈಟ್ ಬುಕಿಂಗ್ ತರುವಾಯ ಎರಡು ಸಾವಿರ ಕ್ಯಾಶ್ ಬ್ಯಾಕ್ ಬಂದಿದ್ದು ಖುಷಿಯನ್ನು ಇಮ್ಮಡಿಗೊಳಿಸಿತು. ಲೇಖಕ ಮೋಹನ್ ಕುಮಾರ್ ಡಿ ಎನ್ ಅವರ ಮಹಾಕುಂಭ ಮೇಳದ ಅನುಭವ ಕಥನವನ್ನು ತಪ್ಪದೆ ಮುಂದೆ ಓದಿ…

ಕುಂಭಮೇಳ ಎಂದರೆ ನನಗೆ ಅಷ್ಟೇನೂ ತಿಳಿದಿರಲಿಲ್ಲ. ಇದಕ್ಕೂ ಮೊದಲು ನಡೆದ ಕುಂಭಮೇಳಗಳ ಬಗ್ಗೆ ಕೇಳಿದ್ದೆಷ್ಟೋ, ಮಾಧ್ಯಮಗಳಲ್ಲಿ ನೋಡಿದ್ದೆಷ್ಟೋ ಅಷ್ಟೇ. ಹೋಗುವ ಅವಕಾಶವಿತ್ತೋ ಇಲ್ಲವೋ ಹೇಳಲಾರೆ. ಆದರೆ ಮೊನ್ನೆ ಸಂಕ್ರಾಂತಿ ಹಬ್ಬದ ದಿನ ಆಫೀಸಿಗೆ ರಜೆ ಇತ್ತಲ್ಲ? ಮನೆಯಲ್ಲಿ ಟೀವಿ ನೋಡುತ್ತಿದ್ದೆ. ಮಾಧ್ಯಮದವರು ಮಹಾಕುಂಭಮೇಳದ ಬಗ್ಗೆ ಪುಂಖಾನುಪುಂಖವಾಗಿ ಸುದ್ದಿ ಬಿತ್ತರಿಸುತ್ತಿದ್ದರು. ಅದರ ಹಿನ್ನೆಲೆ, ವೈಶಿಷ್ಟ್ಯತೆ, ಮಹತ್ವ ಮೇಲಾಗಿ ಈಗ ನಡೆಯುಯುತ್ತಿರುವ ಮಹಾಕುಂಭಮೇಳ ನೂರಾ ನಲವತ್ತನಾಲಕ್ಕು ವರ್ಷಗಳಿಗೊಮ್ಮೆ ಎಂದಾಗ ರೋಮಾಂಚನವಾಯ್ತು. ಅರರೆ! ಇದರಲ್ಲೇನೋ ವಿಶೇಷತೆ ಇದೆ ಎಂದು ಉಳಿದ ಸುದ್ದಿ ಚಾನೆಲ್ ನೋಡಿದೆ. ಎಲ್ಲದರಲ್ಲೂ ಮಹಾಕುಂಭಮೇಳದ್ದೇ ಸುದ್ದಿ! ಆ ಕ್ಷಣದಲ್ಲಿ ನನ್ನ ಮನಸ್ಸಿನಲ್ಲಿ ಏನಿತ್ತೋ ನಿಖರವಾಗಿ ಹೇಳಲಾರೆನಾದರೂ, ಅದರ ಬಗ್ಗೆ ಸೆಳೆತವೊಂದು ಕುಡಿಯೊಡೆಯಲಂತೂ ಆರಂಭಿಸಿತ್ತು. ಫ್ಲೈಟ್ ಟಿಕೆಟ್ ಚೆಕ್ ಮಾಡಿದೆ. ರೀಸನಬಲ್ ರೇಟ್ ಅನ್ನಿಸಿತು. ಹೋಗಿ ಬರೋಣವಾ? ಅಂತ ಮನೆಯಾಕೆಯನ್ನು ಕೇಳಿದೆ. ‘ಹಾಂ..ಇಬ್ಬರೇನಾ!!?’ ಅಂತ ಬೆಚ್ಚಿದಳು. ಅಲ್ಲಿಗೆ ಖೇಲ್ ಖತಂ ಎಂದುಕೊಂಡು ಸುಮ್ಮನಾದೆ.

ಇದಾಗಿ ಎರಡು ದಿನದ ಬಳಿಕ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೆ. ಮನೆಯಾಕೆ ಕರೆ ಮಾಡಿದಳು. ಅದೇನಾಯ್ತೋ ಗೊತ್ತಿಲ್ಲ; ‘ರೀ ಕುಂಭಮೇಳಕ್ಕೆ ಟಿಕೆಟ್ ಬುಕ್ ಮಾಡ್ರೀ’ ಎಂದಳು. ಹೇಗೆ ಬಿತ್ತೋ ಕಾಣೆ; ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿತ್ತು, ಜೊತೆಗೆ ಲಡ್ಡು ಕೂಡ. ಮೊನ್ನೆ ನೋದಿದ್ದಕ್ಕಿಂತ ಚೂರು ಫ್ಲೈಟ್ ದರಗಳು ಅವತ್ತಿಗೆ ಹೆಚ್ಚಿತ್ತು. ಇನ್ನು ತಡ ಮಾಡಿದರೆ ಆಗೋಲ್ಲ ಎನಿಸಿ ತಕ್ಷಣವೇ ಟಿಕೆಟ್ ಬುಕ್ ಮಾಡಿದೆ. ನನ್ನ ಪ್ಲಾನ್ ಈ ರೀತಿ ಇತ್ತು: ಬೆಂಗಳೂರಿನಿಂದ ವಾರಣಾಸಿ – ವಾರಣಾಸಿಯಿಂದ ಬೆಂಗಳೂರು ಫ್ಲೈಟ್. ಪ್ರಯಾಗ್ ರಾಜ್ ಮತ್ತು ಅಯೋಧ್ಯೆ ಲೋಕಲ್ ಟ್ರಾನ್ಸ್ಪೋರ್ಟ್. ಫ್ಲೈಟ್ ಬುಕಿಂಗ್ ತರುವಾಯ ಎರಡು ಸಾವಿರ ಕ್ಯಾಶ್ ಬ್ಯಾಕ್ ಬಂದಿದ್ದು ಖುಷಿಯನ್ನು ಇಮ್ಮಡಿಗೊಳಿಸಿತು.

ಬುಕ್ಕಿಂಗ್ ಆದ ಬಳಿಕ ಸುಮಾರು ಒಂದು ತಿಂಗಳು ಸಮಯವಿತ್ತು. ಈ ನಡುವೆ ಮೂರು ಪುಣ್ಯಸ್ನಾನ ನಡೆದವು. ಹಲವು ಕೋಟಿ ಜನರು ಸಂಗಮದಲ್ಲಿ ಮಿಂದೆದ್ದರು. ಕಾಲ್ತುಳಿತ, ಸಾವು, ಹೇಳಲರಿಯದಷ್ಟು ಟ್ರಾಫಿಕ್, ಹತ್ತಾರು ಕಿಲೋಮೀಟರ್ ಕಾಲ್ನಡಿಗೆ, ಅನಿಯಂತ್ರಿತ ಜನದಟ್ಟಣಿ, ರೈಲು ಬಸ್ಸಿನಲ್ಲಿ ಜನರ ಪರದಾಟ, ಪ್ರಯಾಗದಲ್ಲಿರಬಹುದಾದ ಅವ್ಯವಸ್ಥೆ, ಮರಳು, ಧೂಳಿನ ಹೊರತಾಗಿ, ನಾನು ಮತ್ತು ಮನೆಯಾಕೆ ಇಬ್ಬರೇ ಕುಂಭಮೇಳಕ್ಕೆ ಹೋಗುತ್ತಿದ್ದುದು ದೊಡ್ಡ ಆತಂಕದ ಸಂಗತಿಯಾಗಿ ನನ್ನನ್ನು ಕಾಡಲಾರಂಭಿಸಿತ್ತು. ಪ್ರತಿ ದಿನವೂ ನಾವು ದಂಪತಿಗಳು ಕುಂಭಮೇಳಕ್ಕೆ ಸಂಬಂಧಿಸಿದ ರೀಲ್ಸ್ ವೀಕ್ಷಣೆ, ಹೇಗೆ ವ್ಯವಸ್ಥೆ ಮಾಡಿಕೊಳ್ಳಬೇಕು, ಅದಾಗಲೇ ಹೋಗಿ ಬಂದವರ ಅನುಭವವೇನು ಎಂದು ಮಾಹಿತಿ ಸಂಗ್ರಹಣೆಯಲ್ಲೇ ದಿನ ನೂಕುತ್ತಿದ್ದೆವು. ಏನೇ ಪೂರ್ವಭಾವಿ ಸಿದ್ಧತೆ ಮಾಡಿಕೊಂಡರೂ ಆ ಕ್ಷಣ ಪಾಲಿಗೆ ಬಂದದ್ದೇ ಸತ್ಯ ಎನಿಸಿ, ಹೆಚ್ಚು ತಲೆಕೆಡಿಸಿಕೊಳ್ಳದೇ ನಿಟ್ಟುಸಿರಾದೆವು.

ಅಂದುಕೊಂಡ ದಿನ ಮೊನ್ನೆ ಸೋಮವಾರ ಸಂಜೆ ವಿಮಾನವೇರಿ ವಾರಣಾಸಿ ತಲುಪಿದಾಗ ರಾತ್ರಿ ಎಂಟರ ಸಮಯ. ಬ್ಯಾಗ್ ಕೆಲೆಕ್ಟ್ ಮಾಡಿಕೊಂಡು ಹೊರಕ್ಕೆ ಬಂದೆವು. ವಾರಣಾಸಿ ನಗರಕ್ಕೆ ಹೋಗಿ, ಅಲ್ಲಿಂದ ಬಸ್ ಹಿಡಿದು ಪ್ರಯಾಗಕ್ಕೆ ಹೋಗೋಣವೆಂದುಕೊಂಡು ಸಿಟಿ ಶಟಲ್ ಬಸ್ ಸರ್ವೀಸ್ ವಿಚಾರಿಸಿದರೆ, ಎಲ್ಲಿದೆ ಬಸ್? ಆ ವ್ಯವಸ್ಥೆ ಇಲ್ಲಿಲ್ಲ ಎಂದರು. ಊಬರ್, ಓಲಾ.. ನೋ ವೇ. ಚಾನ್ಸೇ ಇಲ್ಲ. ಹೋಗಲಿ ಪ್ರೀಪೇಯ್ಡ್ ಟ್ಯಾಕ್ಸಿ ವಿಚಾರಿಸಿದರೆ, ಸರ್ವೀಸ್ ಇಲ್ಲ ಎಂದರು. ಅಲ್ಲಿಗೆ ಆ ತನಕ ತಡೆಹಿಡಿದುಕೊಂಡಿದ್ದ ಆತಂಕ ಮತ್ತೊಮ್ಮೆ ಕಾಡಲಾರಂಭಿಸಿತ್ತು. ಹೊರಗೆ ಬಂದರೆ ಪ್ರೈವೇಟ್ ಟ್ಯಾಕ್ಸಿವಾಲಾಗಳ ಕಾಟ. ಬಾಯಿಗೆ ಬಂದ ದರ. ಕ್ಷಣ ಹೆದರಿದೆ. ಹೊರಕ್ಕೆ ಬಂದಾಗ ಟ್ಯಾಕ್ಸಿವಾಲಾಗಳ ಕಾಟ ಶುರುವಾಯ್ತು. ವಿಮಾನ ನಿಲ್ದಾಣದಿಂದ ವಾರಣಾಸಿ ನಗರ ಇದ್ದದ್ದು ಇಪ್ಪತ್ತೈದು ಕಿಲೋಮೀಟರ್. ಟ್ಯಾಕ್ಸಿವಾಲಾಗಳು ಒಕ್ಕೊರಲಿನಿಂದ ಕೇಳಿದ್ದು ಬರೋಬ್ಬರಿ ಒಂದು ಸಾವಿರ! ಸೀಸನ್ ಬಿಡು ಎಂದುಕೊಂಡು ಸುಮ್ಮನಾದೆ.

ಅಷ್ಟರಲ್ಲಿ ಒಬ್ಬ ಟ್ಯಾಕ್ಸಿವಾಲಾ ಒಬ್ಬ ನೀವು ನಿರ್ದಿಷ್ಟವಾಗಿ ಎಲ್ಲಿಗೆ ಹೋಗಬೇಕೆಂದು ಕೇಳಿದ. ಪ್ರಯಾಗಕ್ಕೆ ಎಂದಾಗ, ನೀವು ವಾರಣಾಸಿಗೆ ಹೋಗಿ ಅಲ್ಲಿಂದ ಬಸ್ ಹಿಡಿದು ಹೋಗಲು ಆಗುವುದಿಲ್ಲ. ಬಸ್ ಸಿಗುವುದಿಲ್ಲ. ಸಿಕ್ಕರೂ ಪ್ರಯಾಗದ ಹಾದಿಯಲ್ಲಿ ವಿಪರೀತ ಟ್ರಾಫಿಕ್. ಇನ್ನು ರೈಲಿನ ಬಗ್ಗೆ ನಿಮಗೇ ಗೊತ್ತಿರುತ್ತೆ ಎಂದು ಹೆದರಿಸಿದ. ಇನ್ನೇನಪ್ಪಾ ಗತಿ ಎಂದುಕೊಂಡು ರೇಟ್ ಕೇಳಿದೆ. ನಾಲ್ಕೂವರೆ ಸಾವಿರ ಕೊಡಿ ಸರ್. ಆದಷ್ಟೂ ಟ್ರಾಫಿಕ್ ಆವಾಯ್ಡ್ ಮಾಡಿ ಪ್ರಯಾಗಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದ. ನಾನು ಎದ್ದು ಹೋಗುವ ಮಾತು ಬಿದ್ದು ಹೋಗಲಿ ಎನ್ನುವಂತೆ ಎರಡು ಸಾವಿರ ಕೊಡ್ತೀನಿ ಅಂದೆ. ಸ್ವಲ್ಪ ಯೋಚಿಸಿ, ಆಯ್ತು ಸರ್ ಬನ್ನಿ. ಆದರೆ ನಿಮ್ಮಿಬ್ಬರನ್ನೇ ಕರೆದುಕೊಂಡು ಹೋಗುವ ಬದಲು ಶೇರಿಂಗ್ ಸಿಸ್ಟಮ್’ನಲ್ಲಿ ಹೋಗೋಣ ಎಂದು ಹೇಳಿ, ಇನ್ನಷ್ಟು ಪ್ರಯಾಣಿಕರನ್ನು ಹುಡುಕಿಕೊಂಡು ಬರಲು ಹೊರಟ. ನಾವು ಕಾರಲ್ಲಿ ಕೂತಿದ್ದೆವು. ಎಷ್ಟೊತ್ತಾದರೂ ಯಾರೂ ಬರಲಿಲ್ಲ. ಕೊನೆಗೆ ಈ ಕಾರಿನ ಡ್ರೈವರ್ ನಮ್ಮನ್ನೇ ಮಿಕಗಳನ್ನಾಗಿಸುತ್ತಾನೆ ಎಂದುಕೊಂಡೆವು. ಒಂದು ಪಕ್ಷ ಅವನು ಕೇಳಿದಷ್ಟು ದುಡ್ಡು ಕೊಡಲು ನಾವು ಒಪ್ಪಿಕೊಂಡೊವು ಅಂತಿಟ್ಟುಕೊಳ್ಳೋಣ. ಸುರಕ್ಷತೆ ಏನಿದೆ? ಅಪರಿಚಿತ. ಅಪರಿಚಿತ ಪ್ರದೇಶ. ಸಮಯ ನೋಡಿಕೊಂಡು ಸಾಧಿಸಿಬಿಟ್ಟರೇ? ವಿಪರೀತ ನಡುಕ ಶುರುವಾಯ್ತು. ಇವನ ಕೈಯಿಂದ ಹೇಗಾದರೂ ಬಚಾವ್ ಆಗೋಣ ಎಂದುಕೊಂಡರೆ ಅವನು ಅಷ್ಟರಲ್ಲಾಗಲೇ ನಮ್ಮ ಲಗೇಜನ್ನು ಕಾರಿನ ಡಿಕ್ಕಿಗೆ ಸೇರಿಸಿಬಿಟ್ಟಿದ್ದ! ದೇವರೇ ಏನಪ್ಪಾ ಗತಿ! ಎನ್ನುವ ಹೆದರಿಕೆಯಲ್ಲಿರುವಾಗ, ಇಬ್ಬರು ಪ್ರಯಾಣಿಕರನ್ನು ಹುಡುಕಿಕೊಂಡು ಬಂದೇ ಬಿಟ್ಟ.. ನಾವು ಸ್ವಲ್ಪ ನಿಟ್ಟುಸಿರಾದೆವು. ಆ ಇಬ್ಬರು ಗೋವಾದಿಂದ ಬಂದಿದ್ದರು. ನಾವು ನಮ್ಮ ಸಂಕಷ್ಟ ಹೇಳಿಕೊಂಡಾಗ ಅವರು ಹೇಳಿದ್ದು ಒಂದೇ ಮಾತು: ಡೋಂಟ್ ವರಿ, ವೀ ಆರ್ ದೇರ್ ಫಾರ್ ಯೂ. ವೀ ಆರ್ ಯುವರ್ ಸೇಫ್ಟಿ! ಭಗವಂತ ದಯ ಕರುಣಿಸಿದ. ನಮ್ಮ ಪ್ರಯಾಣ ಆರಂಭವಾಯ್ತು.

ಪ್ರಯಾಗಕ್ಕೆ ನಮಗೆ ಸಿಕ್ಕ ಸಹ ಯಾನಿಕರು ಗೋವಾದಲ್ಲಿ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದರು. ಅವರ ಜೊತೆ ಮಾತು ಸಾಗುತ್ತಲೇ, ಸಭ್ಯರೆನಿಸಿದರು. ಇದರ ಅರಿವು ಮನೆಯಾಕೆಗೆ ಆಗುತ್ತಲೇ ನಿರುಮ್ಮಳವಾಗಿ ನಿದ್ರೆಗೆ ಜಾರಿದಳು. ಎಲ್ಲಿ ನಾವು ಅನಾನುಕೂಲವಾಗುತ್ತೆ ಎಂದುಕೊಂಡಿದ್ದೆವೋ ಅಲ್ಲೆಲ್ಲಾ ದೇವರು ಹೇಗೋ, ಯಾರದೋ ರೂಪದಲ್ಲಿ ಕಾಯಲು ಅದಾಗಲೇ ನಿರ್ಧರಿಸಿದ್ದನೆಂದು ನಮಗೆ ಆ ಕ್ಷಣಕ್ಕೆ ತೋರುವುದಕ್ಕಾದರೂ ಹೇಗೆ ಸಾಧ್ಯವಿತ್ತು? ಟ್ಯಾಕ್ಸಿಯಲ್ಲಿ ನಾವು ಐದೇ ಜನ. ಡ್ರೈವರ್, ಗೋವಾ ಸಹಯಾತ್ರಿಗಳು ಮತ್ತು ನಾವು. ಪ್ರಯಾಣ ಸುಗಮವಾಗಿ ಸಾಗುತ್ತಿತ್ತು. ನಮಗೆ ಸಿಕ್ಕ ಕಾರಿನ ಡ್ರೈವರ್ ಪ್ರಯಾಗ್ ರಾಜಿನವನು. ವಾರಣಾಸಿ ಏರ್ಪೋರ್ಟ್ಗೆ ಯಾತ್ರಿಕರನ್ನು ಬಿಡಲು ಬಂದಿದ್ದ. ಹೀಗಾಗಿ ಅವನಿಗೆ ಮುಖ್ಯರಸ್ತೆ, ಹೆದ್ದಾರಿಯನ್ನು ಬಿಟ್ಟು ಒಳದಾರಿಯ ಬಗ್ಗೆ, ಎಲ್ಲಕ್ಕಿಂತ ಹೆಚ್ಚಾಗಿ ಯಾವ ದಾರಿಯಲ್ಲಿ ಹೋದರೆ ಟ್ರಾಫಿಕ್ ಆವಾಯ್ಡ್ ಮಾಡಬಹುದೆನ್ನುವ ಬಗ್ಗೆ ಚೆನ್ನಾಗಿ ಜ್ಞಾನವಿತ್ತು. ಪ್ರಯಾಗ್ ರಾಜ್ ಸುಮಾರು ಇಪ್ಪತ್ತು ಕಿಲೋಮೀಟರ್ ಇದೆ ಎನ್ನುವಾಗ ಶುರುವಾಯ್ತು ನೋಡಿ ಟ್ರಾಫಿಕ್. ಜೀವನದಲ್ಲಿ ಆ ಪಾಟಿ ಟ್ರಾಫಿಕ್ ನೋಡಿರಲಿಲ್ಲ. ಎಷ್ಟು ಹೊತ್ತಾದರೂ ಗಾಡಿ ಚಲಿಸುತ್ತಲಿರಲಿಲ್ಲ. ಮುಂದೇನಪ್ಪಾ ಗತಿ ಎಂದುಕೊಂಡೆ. ಅಲ್ಲೀ ತನಕ ಫಸ್ಟ್ ಗೇರಲ್ಲಿ ಜರ್ಕ್ ಹೊಡೆಸುತ್ತಲೇ ಇದ್ದ ಡ್ರೈವರ್ ಒಂದು ಯೂ ಟರ್ನ್ ಸಿಕ್ಕ ತಕ್ಷಣ ಗಾಡಿ ಓಡಿಸಿದ ಪರಿಯಿತ್ತಲ್ಲ? ಅಯ್ಯಯ್ಯಪ್ಪ!! ಅದ್ಯಾವ ಸಂದುಗೊಂದುಗಳಲ್ಲಿ ತೂರಿದನೋ? ಬಹು ವಿಸ್ತೀರ್ಣವಾದ ಜಾಗದಲ್ಲಿ ಅಗಾಧವಾಗಿ ನಿರ್ಮಾಣವಾಗುತ್ತಿರುವ ಸರಸ್ವತಿ ಟೌನ್’ಶಿಪ್ಪಿನ ರಸ್ತೆಗಳಲ್ಲಿ, .ಮುಂದೆ ರಸ್ತೆಯೇ ಇಲ್ಲದ, ಬೀದಿ ದೀಪವೇ ಕಾಣದ ಮಣ್ಣ ರಸ್ತೆಯಲ್ಲಿ ಕಾರನ್ನು ನುಗ್ಗಿಸಿ, ಹಲವು ಗಂಟೆಗಳು ತಡವಾಗಬೇಕಿದ್ದ ಪ್ರಯಾಣವನ್ನು ಕೆಲವೇ ಗಂಟೆಗಳಲ್ಲಿ ಮುಗಿಸಿ ಪ್ರಯಾಗದ ಅರೇಲ್ ಘಾಟಿನ ಸನಿಹಕ್ಕೆ ನಮ್ಮನ್ನು ಕರೆತಂದೇ ಬಿಟ್ಟ! ಇದರಲ್ಲಿ ಗೋವಾ ಹುಡುಗರ ಸಹಕಾರವನ್ನು ಮರೆಯುವಂತಿಲ್ಲ.

ಗಾಡಿಯಿಂದ ಇಳಿದು, ಕಾರ್ ಚಾಲಕನಿಗೆ ಹಣ ನೀಡಿ, ಮನಸಾರೆ ಅವನನ್ನು ಅಭಿನಂದಿಸಿ ಅಲ್ಲಿಂದ ಬೀಳ್ಗೊಂಡೆವು. ಸ್ವಲ್ಪ ದೂರ ನಡೆದಾಗ ಕಣ್ಣೆದುರೇ ಪುಣ್ಯ ಜಲಧಾರೆಯನ್ನು ಕಂಡು ರೋಮಾಂಚನ ಅನುಭವಿಸುವ ಹೊತ್ತಿಗೇ ನಮ್ಮ ಹಿಂದೆ ಬರುತ್ತಿದ್ದ ಗೋವಾ ಹುಡುಗರು ಕಣ್ಮರೆಯಾಗಿದ್ದರು! ಅಸಂದರ್ಭದಲ್ಲಿ ಜೊತೆಯಾದವರ ಅಕಾಲಿಕ ಕಣ್ಮರೆಯಿಂದಾಗಿ ಬೇಸರವಾದದ್ದಂತೂ ನಿಜ.ಸತ್ಯವನ್ನು ಒಪ್ಪಲೇ ಬೇಕಲ್ಲ? ನಾವು ಮುಂದುವರಿದೆವು. ನಮ್ಮ ಪುಣ್ಯ ನೋಡಿ; ಹತ್ತು, ಇಪ್ಪತ್ತು, ಮೂವತ್ತು ಕಿಲೋಮೀಟರ್ ನಡೆಯಬೇಕು ಅಂತೆಲ್ಲ ಇತ್ತೆಲ್ಲ? ಇಲ್ಲ, ನಾವು ನಡೆದದ್ದು ಕೇವಲ ಎರಡರಿಂದ ಮೂರು ಕಿಲೋಮೀಟರ್ ಅಷ್ಟೇ.

ಇಲ್ಲಿಗೆ ಬರುವ ಮುನ್ನ ಏನೆಲ್ಲಾ ಅಡ್ಡಿ ಆತಂಕಗಳು, ಅವ್ಯವಸ್ಥೆಯ ಕೊರಗು ನಮ್ಮನ್ನು ಕಾಡಿದ್ದವು ನೋಡಿ? ಕಣ್ಣ ಮುಂದಿದ್ದ ಅಪಾರ ಜಲಧಾರೆಯನ್ನು ಕಂಡು ಎಲ್ಲವೂ ಮರೆಯಾಗಿ ಹೋಯ್ತು. ಮನಸ್ಸು ಫ್ರಫುಲ್ಲವಾಯ್ತು. ನಿಜ. ಎಲ್ಲರೂ ಹೇಳುವಂತೆ ಪ್ರಯಾಗದ ನೀರು ಕೊಳೆಯಾಗಿತ್ತು. ಮಲಿನಗೊಂಡಿತ್ತು. ಆದರೆ ಅದನ್ನು ನೋಡುವ, ಭಾವಿಸುವ, ನದಿಯಲ್ಲಿ ಮಿಂದೇಳುವ ನಮ್ಮ ನಂಬಿಕೆ ಶುಚಿಯಾಗಿತ್ತು. ಹೀಗಾಗಿ ಎಲ್ಲ ಅಪಸವ್ಯಗಳ ನಡುವೆಯೂ ನಾವು ಅದರಲ್ಲಿ ಮಿಂದೆದ್ದೆವು. ನಾವು ನದಿಯಲ್ಲಿ ಮುಳುಗು ಹಾಕಿದ ಆ ಕ್ಷಣ ಎಣಿಕೆಗೆ ಸಿಗದ, ಪದಗಳಲ್ಲಿ ಹಿಡಿದು ವರ್ಣಿಸಲಾಗದ ಅಲೌಕಿಕ ಆತ್ಮಸಂತೃಪ್ತಿಯ ಅನುಭವವಾಯ್ತು ಮತ್ತು ಆ ಅನುಭವ ಎಲ್ಲ ಕೊರೆಗಳನ್ನು ಮೀರಿದ್ದು. ಸರ್ವವ್ಯಾಪಿಯಾದ ಸತ್ಯವೊಂದು ಸುಂದರವಾದ ಶಿವನ ರೂಪ ಧರಿಸಿ ನಮ್ಮೆದುರು ನಿಂತ ಗಳಿಗೆ ಅದಾಗಿತ್ತು. ಹೃದಯದುಂಬಿ ಬರುವುದು, ಮಾತು ಮೌನವಾಗುವುದು, ಕಣ್ಣ ಹನಿ ಸುವರ್ಣ ಬಿಂದುವಾಗುವ ಕ್ಷಣವದು; ನಮ್ಮ ಪಾಲಿನ ಅಮೃತಕಾಲ. ನಂಬಿದವರಿಗೆ ನಂಬಿಕೆಯೇ ಕಾಯುತ್ತೆ. ನಂಬಲೇಬೇಕು ಅಂತಿಲ್ಲ. ನಂಬದಿದ್ದರೆ ಚಿಂತೆಯೂ ಇಲ್ಲ. ನಮ್ಮ ನಂಬಿಕೆ ನಮ್ಮದು. ನಂಬದವರ ನಂಬಿಕೆಯೂ, ಯೆಸ್, ಅವರದೇ!

ಇಲ್ಲೊಂದು ಸಂಗತಿ ಹೇಳಬೇಕು. ಬೆಂಗಳೂರಿನಿಂದ ವಾರಣಾಸಿಗೆ ಮರಳಿ ಬೆಂಗಳೂರಿಗೆ ಫ್ಲೈಟ್ ಟಿಕೆಟ್ ಏನೋ ಬುಕ್ ಮಾಡಿದ್ದೆ. ವಾರಣಾಸಿಯಿಂದ ಪ್ರಯಾಗಕ್ಕೆ, ಪ್ರಯಾಗದಿಂದ ಅಯೋಧ್ಯೆಗೆ, ಅಲ್ಲಿಂದ ವಾರಣಾಸಿಗೆ ಯೂಪಿಎಸ್ಆರ್ಟಿಸಿ ಬಸ್ ಟಿಕೆಟ್ ಕಾಯ್ದಿರಿಸಿದ್ದೆನಾದರೂ ವಾರಣಾಸಿ ಟು ಪ್ರಯಾಗ ಮತ್ತು ಅಯೋಧ್ಯೆ ಟು ವಾರಣಾಸಿ ಟಿಕೆಟ್ ಯೂಪಿಎಸ್ಆರ್ಟಿಸಿ ನಿಗಮದವರೇ ರದ್ದು ಮಾಡಿದ್ದರು. ಈಗ ರದ್ದಾಗದೆ ಉಳಿದದ್ದು ಒಂದೇ ಟಿಕೆಟ್; ಪ್ರಯಾಗ್ ಟು ಅಯೋಧ್ಯೆ.

ಗಂಗಾರತಿ ಮಾಡಿ, ಮಿಂದೆದ್ದ ಬಳಿಕ ಪ್ರಯಾಗ್ ರಾಜ್ ಸರ್ವೀಸ್ ಲೇನ್ ನಿಲ್ದಾಣದಿಂದ ನಮ್ಮ ಪ್ರಯಾಣ ಅಯೋಧ್ಯೆ ಕಡೆ ಸಾಗಬೇಕಿತ್ತು. ಸರಿ ಅಂತ ಬಸ್ ನಿಲ್ದಾಣಕ್ಕೆ ಹೋಗುವ ಅಂದುಕೊಂಡು ಒಬ್ಬ ಬೈಕರ್ ಅನ್ನು ವಿಚಾರಿಸಿದೆವು. ಅವನು ಪ್ರಯಾಗ್ ರಾಜ್ ಸರ್ವೀಸ್ ಲೇನ್’ಗೆ ಹೋಗಬೇಕು ಅಂದ ಕೂಡಲೇ ಹೌಹಾರಿದ. ಯಾಕೆ ಅಂತ ನಮಗೆ ಆ ಕ್ಷಣಕ್ಕೆ ಅರಿವಾಗಲಿಲ್ಲ. ಸರ್ ಟ್ರಾಫಿಕ್ ಬಳಸಿ ಹೋಗೋದಕ್ಕೆ ಸುಮಾರು ಇಪ್ಪತ್ತು ಇಪ್ಪತ್ತೈದು ಕಿಲೋಮೀಟರ್ ಆಗುತ್ತೆ. ಒಂದು ಸಾವಿರ ಕೊಡಿ ಅಂದ. ಕೊನೆಗೆ ಏಳುನೂರಕ್ಕೆ ಒಪ್ಪಿಕೊಂಡ. ಬೈಕ್ ಮೇಲೆ ಲಗೇಜ್ ಹೊತ್ತ ನಮ್ಮ ತ್ರಿಬಲ್ ರೈಡಿಂಗ್ ಆರಂಭವಾಯ್ತು. ಬೈಕರ್ ಏಕೆ ಹೌಹಾರಿದ ಎಂದು ನಮ್ಮ ಅನುಭವಕ್ಕೆ ಬರತೊಡಗಿತು. ಪ್ರಯಾಗದ ಬೀದಿ ಬೀದಿಗಳಲ್ಲಿ, ರಸ್ತೆಗಳಲ್ಲಿ ಘನ ಘೋರವಾದ ಟ್ರಾಫಿಕ್ ಇತ್ತು. ಎಲ್ಲೆಂದರಲ್ಲಿ ವಾಹನಗಳ ಸರತಿ ಸಾಲು ಉದ್ದೋ ಉದ್ದಕ್ಕೆ ನಿಂತಲ್ಲೇ ನಿಂತಿದ್ದವು. ಕಿರಿದಾದ ಜಾಗ, ಹಿರಿದಾದ ಲಗೇಜ್ ಜೊತೆಗೆ ತ್ರಿಬಲ್ ರೈಡಿಂಗ್ ಎಂದಿಗೂ ಮುಗಿಯದ ಪಯಣ ಎನಿಸಿತು. ನಮ್ಮ ಬೈಕರ್ ಏನೇನೋ ಸಾಹಸ ಮಾಡಿ ದಣಿವು ಹೆಚ್ಚಾದಾಗ ಒಂದು ಕಡೆ ಟೀಗೆ ನಿಲ್ಲಿಸಿದ. ಟೀ ಸೇವನೆ ಬಳಿಕ ರೈಡಿಂಗ್ ಮತ್ತೆ ಆರಂಭವಾಯ್ತು. ಹಲವು ಅಡೆತಡೆಗಳನ್ನು ಎದುರಿಸಿ ಕೊನೆಗೂ ನಮ್ಮ ಬೈಕರ್ ಪ್ರಯಾಗ್ ರಾಜ್ ಸರ್ವೀಸ್ ಲೇನ್ ನಿಲ್ದಾಣಕ್ಕೆ ಕರೆತಂದು, ಅಯೋಧ್ಯೆಗೆ ಹೋಗಬೇಕಾದ ಬಸ್ಸಿನ ಕುರಿತು ವಿಚಾರಿಸಿದರೆ ಎಲ್ಲಿದೆ ಬಸ್ಸು? ಬಸ್ಸೂ ಇಲ್ಲ, ಬದನೆಕಾಯೂ ಇಲ್ಲ! ಜನ ಮತ್ತು ವಾಹನ ದಟ್ಟಣೆಯಿಂದಾಗಿ ಅಯೋಧ್ಯೆಗೆ ಹೋಗಬೇಕಿದ್ದ ಎಲ್ಲ ಬಸ್’ಗಳನ್ನು ಇನ್ನೂ ಏಳೆಂಟು ಕಿಲೋಮೀಟರ್ ದೂರವಿದ್ದ ಬೇಲಾ ಕಚ್ಚರ್ ಎನ್ನುವ ಸ್ಥಳಕ್ಕೆ ಎತ್ತಂಗಡಿ ಮಾಡಿದ್ದರು! ಪ್ರಪಾತಕ್ಕೆ ಬಿದ್ದೆವು ಎನಿಸಿತು. ಚಿಂತಿಸಬೇಡಿ ನಾನಿದ್ದೇನೆ ಎಂದ ಬೈಕರ್ ಬೇಲಾ ಕಚ್ಚರ್ ಕಡೆ ಗಾಡಿ ತಿರುಗಿಸಿದ.

ನೀವು ನಂಬುವುದಿಲ್ಲ. ಅಲ್ಲಿಯ ತನಕದ ಪ್ರಯಾಣ ಒಂದು ತೂಕವಾದರೇ ಏಳೆಂಟು ಕಿಲೋಮೀಟರ್ ಬೇಲಾ ಕಚ್ಚರ್ ನ ಪ್ರಯಾಣವೇ ಬೇರೆ ರೀತಿಯದ್ದಾಗಿತ್ತು. ಗಂಗೆ ನದಿ ಹರಿಯುವ ಸುವಿಶಾಲ, ಸವಿಸ್ತಾರ ಪ್ರದೇಶದಲ್ಲಿ ನಿರ್ಮಿಸಿದ ತಾತ್ಕಾಲಿಕ ರಸ್ತೆಯನ್ನು ಹಾಯ್ದು ಹೋಗುವಾಗ ಅದಾಗಲೇ ಆ ರಸ್ತೆಯಲ್ಲಿ ಸುಮಾರು ಐದಾರು ಕಿಲೋಮೀಟರ್ ವಾಹನಗಳು ಆಮೆಗತಿಯಲ್ಲಿ ಸಾಗುತ್ತಿದ್ದವು. ಆಗ ಎದ್ದಿದ್ದ ಮಣ್ಣ ಧೂಳಿಗೆ ಕಣ್ಣೆದುರಿನ ರಸ್ತೆಯೇ ಮಾಯವಾಗಿತ್ತು. ಅತೀ ನೋವಿನ ಪ್ರಯಾಣ, ಧೂಳಿನ ಸಿಂಪಡಣೆ ಎಲ್ಲವನ್ನು ಸಹಿಸಿಕೊಂಡು ಕೊನೆಗೂ ಹೇಳಿದ ಮಾತಿನಂತೆ ನಮ್ಮ ಬೈಕರ್ ನಮ್ಮನ್ನು ಬೇಲಾ ಕಚ್ಚರ್ ಗೆ ತಂದು ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದ. ಅಯೋಧ್ಯೆಗೆ ಹೋಗುವ ಬಸ್ಸನ್ನು ಅವನೇ ಹುಡುಕಿ, ನಾವು ಬಸ್ಸಿನಲ್ಲಿ ಕೂತು, ಬಸ್ಸು ಹೊರಡುವ ತನಕ ಅಲ್ಲಿಯೇ ಕಾದಿದ್ದ ಆ ಅಪರಿಚಿತ ಬೈಕರ್ ನ ನಗುಮೊಗ, ಭರವಸೆಯನ್ನು ಈಡೇರಿಸಿದ ಸಾರ್ಥಕತೆ ಅವನ ಕಣ್ಣುಗಳಲ್ಲಿ ಪ್ರತಿಫಲನವಾಗುತ್ತಿತ್ತು. ಕೊನೆಗೊಮ್ಮೆ ನಗುತ್ತ ನಮ್ಮತ್ತ ಕೈಬೀಸಿದ ಅವನ ಆ ಕ್ಷಣದ ಚಿತ್ರ ಮನದ ಭಿತ್ತಿಯಲ್ಲಿ ನಮಗೆ ಶಾಶ್ವತವಾಗಿ ದಾಖಲಾಗಿದೆ. ದೇವರು ಮತ್ತೊಮ್ಮೆ ಇಲ್ಲಿ ಬೈಕರ್ ನ ರೂಪದಲ್ಲಿ ಗೋಚರನಾದ.

ನಮ್ಮ ಪ್ರಯಾಣ ಯೂಪಿಎಸ್ಆರ್ಟಿಸಿ ಬಸ್ಸಿನಲ್ಲಿ ಸುಮಾರು ನೂರಾ ಅರವತ್ತೈದು ಕಿಲೋಮೀಟರ್ ದೂರದ ಅಯೋಧ್ಯೆ ಕಡೆ ಸಾಗುತ್ತಿತ್ತು. ನಡುವೆ ಪ್ರತಾಪಗಢ ಮತ್ತು ಸುಲ್ತಾನ್’ಪುರ್ ನಲ್ಲಿ ಎರಡು ಬಾರಿ ಬಸ್ಸಿನ ಡ್ರೈವರ್ ಗಾಡಿ ನಿಲ್ಲಸಿದ. ಅಲ್ಲಿನ ಲೋಕಲ್ ಸ್ಪೈಸಿ ರುಚಿ ಸವಿದೆವು. ಅಯೋಧ್ಯೆ ಇನ್ನೇನು ಅರವತ್ತು ಕಿಲೋಮೀಟರ್ ದೂರವಿದೆ ಎನ್ನುವಾಗಲೇ ಡ್ರೈವರ್ ಹೆದ್ದಾರಿಯನ್ನು ಬಿಟ್ಟು ಹಳ್ಳಿ ದಾರಿಯತ್ತ ಬಸ್ಸನ್ನು ತಿರುಗಿಸಿದ. ಇದ್ಯಾಕೆ ಹೀಗೆ ಎಂದು ಯೋಚಿಸುತ್ತಿರುವಾಗ ಹೆದ್ದಾರಿಯಲ್ಲಿರುವ ಟ್ರಾಫಿಕ್ ತಪ್ಪಿಸಲು ಹಳ್ಳಿಗಳ ಮೇಲೆ ಹೋಗುತ್ತಿದ್ದಾನೆ ಎಂದು ತಿಳಿದು ಬಂತು. ಸರಿ ಅಂತ ನಾವೂ ಸುಮ್ಮನೆ ಕೂತೆವು. ಹೋದ..ಹೋದ..ಹೋದ.. ಹಳ್ಳಿ ರಸ್ತೆಯ ಪ್ರಯಾಣ ನಮಗೆ ನರಕ ದರ್ಶನವಾಗುವ ರೀತಿ ಹೋದ. ಆ ಹಳ್ಳಿಗಳೋ, ಅಲ್ಲಿದ್ದ ರಸ್ತೆಗಳೋ? ನೇರವಾಗಿ ಯಮಪುರಿಗೆ ಕನೆಕ್ಟ್ ಆಗುವಂತಿದ್ದವು. ಕೇವಲ ನೂರಾ ಅರವತ್ತೈದು ಕಿಲೋಮೀಟರ್ ಪ್ರಯಾಣವನ್ನು ಸರಿಸುಮಾರು ಎಂಟೂ ಕಾಲುಗಂಟೆಯ ಅವಧಿಯಲ್ಲಿ ಮುಗಿಸಿದಾಗ ನಾವು ಕೊನೆಗೂ ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಕಾಲಿರಿಸಿದ್ದೆವು. ಡ್ರೈವರನ ನಿಪುಣತೆ, ಚತುರತೆ, ಸಮಯಪ್ರಜ್ಞೆ ಮತ್ತು ಅನಾನುಕೂಲವಾದರೂ ಅಂತ್ಯದಲ್ಲಿ ಅನುಕೂಲವನ್ನೇ ಮಾಡಿಕೊಟ್ಟಿದ್ದ ಅವನ ಬುದ್ಧಿವಂತಿಕೆ ನಮ್ಮನ್ನು ಸರಿಸುಮಾರು ಇಪ್ಪತ್ತು ಕಿಲೋಮೀಟರ್ ಟ್ರಾಫಿಕ್ ನಲ್ಲಿ ನಾವು ಸಿಗೆ ಹಾಕಿಕೊಳ್ಳುವಂತೆ ಮಾಡಿದ್ದರೂ ನಮ್ಮ ಅಪಾರ ಸಮಯವನ್ನು ಉಳಿಸಿದ್ದ. ಇನ್ನೇನು ಹೇಳಬೇಕು? ಡ್ರೈವರನೇ ಮತ್ತೊಮ್ಮೆ ಇಲ್ಲಿ ದೇವರಾಗಿದ್ದ. ಈಗ ತಿಳಿದುಬಂದ ಸಂಗತಿ ಎಂದರೇ, ನಮಗಿಂತ ಚೂರು ಮೊದಲೇ ಹೊರಟಿದ್ದ ಇನ್ನೊಂದು ತಂಡದವರು ಟ್ರಾಫಿಕ್ ಸಮಸ್ಯೆಯಿಂದಾಗಿ ಕೊನೆಗೂ ಅಯೋಧ್ಯೆಯನ್ನು ತಲುಪಲಾಗದೆ ನೈಮಿಷಾರಣ್ಯವನ್ನು ನೋಡಿಕೊಂಡು ಬೆಂಗಳೂರಿಗೆ ವಾಪಸ್ ಆಗಿದೆ ಎಂದಾಗ ಆ ಬಸ್ ಡ್ರೈವರನ್ನು ನಾವು ನೆನೆಯಲೇಬೇಕು.

ಅಯೋಧ್ಯೆಯಲ್ಲಿ ಇಳಿಯುವ ಹೊತ್ತಿಗೆ ಸಂಜೆ ಐದೂ ಮುಕ್ಕಾಲು. ಅಲ್ಲಿನ ಅಂಗಡಿಯೊಂದರಲ್ಲಿ ಟೀ ಕುಡಿದು, ಸಮೋಸ ಸವಿದು ದೇಗುಲದತ್ತ ಹೆಜ್ಜೆ ಹಾಕಿದೆವು. ಅಯೋಧ್ಯೆಯ ಪುಣ್ಯಭೂಮಿಯಲ್ಲಿನ ರಾಮಲಲ್ಲಾನ ದೇಗುಲವನ್ನು ತಲುಪುವ ಹಾದಿಗೆ ಬಂದು ನಿಂತಾಗ ಕಂಡಿದ್ದು ಅಪಾರ ಜನಸ್ತೋಮ. ಪ್ರಾಪ್ತಿ ಇದ್ದಂತೆ ಆಗಲಿ ಎಂದುಕೊಂಡು ನಾವೂ ಅವರಲ್ಲೊಬ್ಬರಾಗಿ ಹೆಜ್ಜೆ ಹಾಕಿದೆವು. ಲಕ್ಷಾಂತರ ಭಕ್ತರ ಲಗೇಜನ್ನು ಇಡುವ ಲಾಕರ್ ಗಳು, ಮೊಬೈಲ್ ಡೆಪಾಸಿಟ್ ಲಾಕರ್ ಗಳ ವ್ಯವಸ್ಥೆ ಮಾಡಲಾದರೂ ಸಾಧ್ಯವೇ? ಹೀಗಾಗಿ ಹೆಗಲ ಮೇಲೆ ಲಗೇಜ್ ಭಾರ ಹೊತ್ತೇ ಹೆಜ್ಜೆ ಹಾಕಿದೆವು. ಅಯೋಧ್ಯ ಮಂದಿರದ ವಿಶೇಷತೆ ಎಂದರೇ, ಎಷ್ಟೇ ಜನ ಭಕ್ತರು ಬರಲಿ ಅವರನ್ನೆಲ್ಲ ಅಕಾಮಾಡೇಟ್ ಮಾಡುವ ಸಾಮರ್ಥ್ಯ ಅದಕ್ಕಿದೆ. ಜನರೆಂತೋ ಅಷ್ಟೇ ಪ್ರಮಾಣದ ಸುವಿಶಾಲ ಸಾಲುಗಳು ಭಕ್ತರನ್ನು ಎಲ್ಲಿಯೂ ನಿಲ್ಲಿಸದಂತೆ ಚಲಿಸುವಂತೆ ಮಾಡುತ್ತದೆ. ಭಕ್ತರ ಸಾಲು ಚಲಿಸುತ್ತಲೇ ಇರುವುದರಿಂದ ನೂಕುನುಗ್ಗಲಾಗಲೀ, ಅಪಾರ ಸಮಯ ವ್ಯಯಿಸಬೇಕಾದ ಪ್ರಮೇಯವಾಗಲೀ ಉದ್ಭವಿಸುವುದಿಲ್ಲ. ಹೀಗಾಗಿ ನಮ್ಮ ಚಲಿಸುವಿಕೆಯೂ ರಾಮಲಲ್ಲಾನನ್ನು ಇನ್ನಷ್ಟು ಹತ್ತಿರವಾಗಿಸುತ್ತಿತ್ತು. ಅವನ ಸಾಮೀಪ್ಯ ಸನಿಹವಾಗುತ್ತಿದ್ದಂತೆ ಹೃದಯ ತಲ್ಲಣಗೊಳ್ಳುತ್ತಿತ್ತು. ಎಷ್ಟೋ ಶತಮಾನಗಳ ನಿರೀಕ್ಷೆ, ತ್ಯಾಗ ಮತ್ತು ಬಲಿದಾನದ ಅಂಗವಾಗಿ ಸಾಕಾರವೆತ್ತ ಮೂರ್ತಿಯಾಗಿ ಅಲ್ಲಿ ರಾಮಲಲ್ಲಾ ಆಳೆತ್ತರ ನಿಂತಿದ್ದ. ಅವನ ದರ್ಶನ ಭಾಗ್ಯ ನಮ್ಮ ಜೀವನದ ಅಮೂಲ್ಯ ಕ್ಷಣವಾಯಿತು.

ರಾಮಲಲ್ಲಾನ ದರ್ಶನವಾದ ಬಳಿಕ ಅಯೋಧ್ಯೆಯಲ್ಲಿ ನಿಲ್ಲದೇ ಮುಂದೆ ವಾರಣಾಸಿಗೆ ಹೋಗುವ ನಿರ್ಧಾರ ಮಾಡಿದೆವು. ನಾವು ನಿದ್ರೆ ಮಾಡಿ ಅದಾಗಲೇ ಎರಡು ದಿನವಾಗಿತ್ತು. ವಿಪರೀತ ದಣಿವು, ಆಯಾಸ, ಸುಸ್ತು ನಮ್ಮನ್ನು ಬಾಧಿಸುತ್ತಿದ್ದರೂ ವಾರಣಾಸಿ ಬಸನ್ನೇರಿ ಕುಳಿತೆವು. ಅದೃಷ್ಟಕ್ಕೆ ಹವಾನಿಯಂತ್ರಿತ ಬಸ್ ಸಿಕ್ಕಿದ್ದರಿಂದ ನಮ್ಮ ಪ್ರಯಾಣ ಸುಗಮವಾದ ನಿದ್ರೆಯ ಜೊತೆ ಸಾಗಿತ್ತು. ನಾವು ವಾರಣಾಸಿ ಇಳಿದಾಗ ಬೆಳಗ್ಗೆ ನಾಲ್ಕು ಗಂಟೆ. ಬೆಳಗಿನ ಹಿತವಾದ ಚಳಿಯೊಂದಿಗೆ ಆಟೋ ಏರಿ ವಿಶ್ವನಾಥನ ಮಂದಿರದ ಅತಿ ಸನಿಹದಲ್ಲೇ ರೂಮ್ ಮಾಡಿ ನಿದ್ರೆಗೆ ಜಾರಿದೆವು. ನಿರಾತಂಕವಾದ ನಿದ್ರೆಯನ್ನು ಮುಗಿಸಿ ಎದ್ದಾಗ ಸಮಯ ಬೆಳಗ್ಗೆ ಒಂಭತ್ತು ಗಂಟೆ. ಎದ್ದವನೇ ನಿತ್ಯ ಕರ್ಮ ಮುಗಿಸಿ, ಆಚೆ ಹೋಗಿ ತಿಂಡಿ ತಿಂದು, ಮನೆಯಾಕೆಗೆ ಪಾರ್ಸೆಲ್ ತಂದೆ. ಅವಳೂ ಅಚ್ಚುಕಟ್ಟಾಗಿ ತಿಂದಳು. ಎರಡು ದಿನದಿಂದ ನಡೆಸಿದ್ದ ನಮ್ಮ ಎಡೆಬಿಡದ ಓಡಾಟಕ್ಕೆ ಕಾಶಿ ವಿಶ್ವನಾಥನ ಸನ್ನಿಧಿ ಯಥೇಚ್ಛವಾದ ವಿಶ್ರಾಂತಿಯನ್ನೊದಗಿಸಿತ್ತು. ಬಾನಂಗಳದ ಮೈದಾನದಲ್ಲಿ ಮನದಣಿಯೇ ಹಾರಿದ ಮರಿ ಹಕ್ಕಿಗಳನ್ನು ಮಡಿಲಲ್ಲಿ ಸೇರಿಸಿಕೊಂಡ ತಾಯಿಯಂತೆ ಕಾಶಿ ನಮ್ಮ ಪಾಲಿಗೆ ಒದಗಿಬಂತು. ತಿಂಡಿಯಾದ ಬಳಿಕ ಮತ್ತೊಮ್ಮೆ ಮಲಗಿ ನಮ್ಮ ಆಯಾಸ ಪರಿಹರಿಸಿಕೊಂಡೆವು. ಮಧ್ಯಾಹ್ನದ ಹೊತ್ತಿಗೆ ಎದ್ದು ಸ್ನಾನ ಮುಗಿಸಿ ಮನೆಯಿಂದ ತಂದಿದ್ದ ಚಪಾತಿ ಸೇವನೆ ನಮ್ಮ ಹಸಿವನ್ನು ನೀಗಿಸಿತು.

ಇದಾದ ಮೇಲೆ ನಾವು ಸಿದ್ಧರಾಗಿ ಕಾಶಿಯ ಬೀದಿಗೆ ಬಂದು, ಸಮೋಸ, ಲಸ್ಸಿ ಸವಿದು, ಸೈಕಲ್ ರಿಕ್ಷಾವೇರಿ ಗಾಯ್ ಘಾಟ್’ನತ್ತ ಹೋದೆವು. ಅಲ್ಲಿ ಬೋಟ್ ಏರಿ ಕಾಶಿಯ ಒಂದೊಂದೇ ಘಾಟ್’ಗಳನ್ನು ನೋಡುತ್ತಾ ಮರಳಿ ಬರುವ ಹೊತ್ತಿಗೆ ಸೂರ್ಯ ಮುಳುಗಲು ಆರಂಭಿಸಿದ್ದ. ಇಲ್ಲಿ ಕೂಡ ವಿಪರೀತ ಭಕ್ತರು ಸೇರಿದ್ದರಿಂದ ಪ್ರತಿ ಸಂಜೆ ನಡೆಯುವ ಗಂಗಾರತಿಯನ್ನು ನಿಲ್ಲಿಸಿದ್ದರು. ಬೋಟ್ ಮುಗಿಸಿ ಹೊರ ಬಂದು ಕಾಶಿಯ ಕ್ಷೇತ್ರಪಾಲಕನಾದ ಕಾಲಭೈರವನ ಮಂದಿರದತ್ತ ಹೆಜ್ಜೆ ಹಾಕುವ ಮುನ್ನ ಸವಿದ ಗರಿಗರಿಯಾದ ಬಾದೂಷದ ಸ್ವಾದ ಮರೆಯುವಂತಿಲ್ಲ. ಕಾಲಭೈರವನನ್ನು ಕಾಣಲು ಬಂದಾಗ ಮತ್ತೊಮ್ಮೆ ಎದುರಾದದ್ದು ತುದಿ ಮೊದಲಿಲ್ಲದ ಸರತಿಯ ಸಾಲು. ಕಾಲಭೈರವನಿರುವುದು ತೀರಾ ಇಕ್ಕಟ್ಟಾದ ಓಣಿಯಲ್ಲಿ. ಸುಮಾರು ಎರಡು ಗಂಟೆಯ ಬಳಿಕ ಕ್ಷೇತ್ರಪಾಲಕನ ದರ್ಶನ ಮುಗಿಸಿ ಹೊರಬಂದು ಲಸ್ಸಿ ರಬ್ಡಿ ಸವಿದು, ವಿಶ್ವನಾಥನ ಮಂದಿರದತ್ತ ನಡೆದೆವು. ಅಲ್ಲಿ ಕಂಡಿದ್ದು ಕ್ಷಿತಿಜವನ್ನೂ ಮೀರಿ ನೆರೆದಿದ್ದ ಭಕ್ತರ ಸಾಲು. ಈಗ ನಿಂತರೆ ಬೆಳಗ್ಗೆಯಾದರೂ ದರ್ಶನವಾಗುವುದಿಲ್ಲ ಎನಿಸಿತು. ಹೀಗಾಗಿ ರೂಮಿಗೆ ಮರಳಿ ಕಟ್ಟಿಸಿಕೊಂಡು ಬಂದಿದ್ದ ಊಟವನ್ನು ಸವಿದು ಮಲಗಿದೆವು.

ಅಲಾರಾಂ ಆದಾಗ ಸಮಯ ಬೆಳಗಿನ ಜಾವ ಒಂದು ಗಂಟೆ. ಕೇವಲ ಅರ್ಧ ಗಂಟೆಯಲ್ಲಿ ಸ್ನಾನ ಮುಗಿಸಿ ನಾವಿಬ್ಬರೂ ವಿಶ್ವನಾಥನ ದರ್ಶನಕ್ಕೆ ಬರುವ ಹೊತ್ತಿಗೆ ಅದಾಗಲೇ ಸಾಲು ಕಿಲೋಮೀಟರ್’ಗಟ್ಟಲೇ ಬೆಳೆದಿತ್ತು. ಅದೇ ದಿನ ಮಧ್ಯಾಹ್ನ 2.20ಕ್ಕೆ ಬೆಂಗಳೂರಿಗೆ ರಿಟರ್ನ್ ಫ್ಲೈಟ್ ಇತ್ತು. ಈ ಸಾಲಿನಲ್ಲಿ ನಿಂತರೆ ದರ್ಶನ ಮುಗಿಸಿ ಹೊರ ಬರುವ ಹೊತ್ತಿಗೆ ಸಂಜೆಯಾಗಿರುತ್ತೆ ಎನಿಸಿ ಸರತಿ ಸಾಲಿನಲ್ಲಿ ನಿಲ್ಲುವ ಯೋಜನೆಯನ್ನು ಕೈಬಿಟ್ಟೆ. ದೇವಸ್ಥಾನದ ನಾಲ್ಕನೇ ಗೇಟಿನ ಮುಖ್ಯದ್ವಾರದ ಬಳಿ ಏನಾದರೂ ಮಾಡಲು ಸಾಧ್ಯವೇ ನೋಡಿದೆ. ಉಹುಂ! ಎಷ್ಟೇ ಬುದ್ಧಿ ಖರ್ಚು ಮಾಡಿದರೂ ಶೀಘ್ರ ದರ್ಶನವಾಗುವ ಯಾವುದೇ ಅವಕಾಶ ತೋರಲಿಲ್ಲ. ನಮಗೆ ಬೇರೆ ಆಯ್ಕೆಯೂ ಕಾಣಲಿಲ್ಲ. ಹೀಗಾಗಿ ಸರತಿ ಸಾಲಿನಲ್ಲಿ ಬರುವ ಎಂದುಕೊಂಡು ಅಲ್ಲಿಂದ ಹೆಜ್ಜೆ ತೆಗೆಯುವ ಹೊತ್ತಿಗೆ ಯಾರೂ ನಂಬಲು ಸಾಧ್ಯವಿಲ್ಲದಂತಹ ಪವಾಡವೊಂದು ಜರುಗಬೇಕೇ?! ಅಲ್ಲಿಂದ ಕಾಲ್ತೆಗೆಯುವ ಮುನ್ನ ಹೇಗೂ ಇರಲಿ ಅಂತ ಭಕ್ತರ ಸಾಲು ಆರಂಭವಾಗುವ ಜಾಗದಲ್ಲಿ ನಿಂತಿದ್ದ ಹಿರಿಯ ಪೊಲೀಸ್ ಅಧಿಕಾರಿಯನ್ನು, ನನಗೆ ಹೀಗ್ಹೀಗೆ ಫ್ಲೈಟ್ ಇದೆ, ದರ್ಶನ ತಡವಾದರೆ ತೊಂದರೆಯಾಗುತ್ತೆ ಎಂದು ವಿನಂತಿಸಿಕೊಂಡೆ. ದೇವರ ದೇವ ಮಹಾದೇವ ನಮಗೆ ಮತ್ತೊಮ್ಮೆ ಮನುಷ್ಯನ ರೂಪದಲ್ಲಿ ಸಹಾಯವೆಸಗಲು ಬಂದಿದ್ದ. ಹಾಗೆ ಹೇಳಿದ ಕೂಡಲೇ ಅಲ್ಲಿದ್ದ ಆ ಪೊಲೀಸ್ ಅಧಿಕಾರಿಗೆ ಏನನ್ನಿಸಿತೋ? ಹೆಚ್ಚು ಮಾತನಾಡದೇ ಒಳಕ್ಕೆ ಬಿಟ್ಟ. ಇಂತಹ ಸಮಯದಲ್ಲಿ ದೇವರೇ ಮನುಷ್ಯನ ರೂಪದಲ್ಲಿ ಬಂದು ಸಹಾಯ ಹಸ್ತ ಚಾಚಿದ ಎಂದು ನಂಬದಿರಲು ಸಾಧ್ಯವಿಲ್ಲದೇ ಇರುತ್ತದೆಯೇ ಹೇಳಿ ನೋಡೋಣ? ಆ ಹಿರಿ ಅಧಿಕಾರಿಯ ಜೀವ ತಣ್ಣಗಿರಲಿ. ಮನೆ ಮಂದಿಯಾದಿಯಾಗಿ ಸುಖವಾಗಿರಲಿ. ಇದು ಕಾಕತಾಳೀಯ ಎನಿಸಿದರೂ ಪರವಾಗಿಲ್ಲ. ಸಂಯೋಗ ಎಂದರೂ, ಪ್ರಾಸಂಗಿಕ ಎಂದರೂ ಅಥವಾ ಸಂಭವನೀಯ ಘಟನೆ ಎಂದರೂ ಬೇಜಾರಿಲ್ಲ. ದೇವರಿದ್ದಾನೆ ಎಂದು ಬಲವಾಗಿ ನಂಬುವ ಅನೇಕ ಘಟನೆಗಳಿಗೆ ನಾವು ಈ ಬಾರಿಯ ಪ್ರಯಾಣದಲ್ಲಿ ಸಾಕ್ಷಿಯಾಗಿದ್ದೇವೆ.

ಏಳೆಂಟು ಗಂಟೆ ಬೇಡುವ ವಿಶ್ವನಾಥನ ದರ್ಶನ ನಮಗೆ ಕೇವಲ ಒಂದು ಗಂಟೆಯ ಅವಧಿಯಲ್ಲಿ, ಅದೂ ಎರಡೆರಡು ಬಾರಿ ಲಭಿಸಿತೆಂದರೆ ನಂಬುವ ಮಾತೇ? ಅದೂ ಅಂತಿಂಥ ದರ್ಶನವಲ್ಲ; ಸಮೃದ್ಧ, ಸಂತೃಪ್ತ ದರ್ಶನ. ಮಾಯೆಯೊಂದು ಹಾಗೆ ಇದ್ದಕ್ಕಿದ್ದಂತೆ, ಪವಾಡವೇನೋ ಎನ್ನುವಂತೆ ಅವತ್ತಿನ ಬೆಳಗಿನ ಜಾವ ನಡೆದಿತ್ತು. ಬೆಳಗಿನ ಜಾವ ನಾಲ್ಕಕ್ಕೆ ಸಾಲಿಗೆ ನಿಂತವರು ಜಗದ್ ನಿಯಂತ್ರಕನಾದ ವಿಶ್ವನಾಥನ ದರ್ಶನ ಮುಗಿಸಿ ಕೇವಲ ಒಂದು ಗಂಟೆಯ ಬಳಿಕ ಐದರ ಹೊತ್ತಿಗೆ ಹೊರಗೆ ಬಂದಿದ್ದೆವು! ಅಲ್ಲಿಂದ ಅನ್ನಪೂರ್ಣೇಶ್ವರಿಯ ದರ್ಶನವನ್ನೂ ಮಾಡಿಕೊಂಡು ಬೆಳಗ್ಗೆ ಎಂಟರ ಹೊತ್ತಿಗೆ ಗಂಟು ಮೂಟೆ ಕಟ್ಟಿಕೊಂಡು, ಆಟೋ ಏರಿ ವಿಮಾನ ನಿಲ್ದಾಣದತ್ತ ಹೊರಟೆವು. ಓಲಾ ಊಬರ್ರೋ ಬುಕ್ ಮಾಡೋಣ ಅಂತಿದ್ದೆ. ಹೊರಕ್ಕೆ ಬರುತ್ತಿದ್ದಂತೆಯೇ ನಮ್ಮನ್ನು ಕಂಡ ಆಟೋ ಚಾಲಕರು ದುಂಬಾಲು ಬಿದ್ದರು. ಓಲಾ ಊಬರ್ರು ಇದ್ದದ್ದೇ ಅಂದುಕೊಂಡು ಆಟೋದಲ್ಲಿ ಏರ್ಪೋರ್ಟ್ ಕಡೆ ಹೊರಟೆವು.

ತಿಂಡಿ ತಿನ್ನಲು ನಾವಾಗಿ ಕೇಳಿಕೊಂಡಿದ್ದರಿಂದ ಆಟೋ ಚಾಲಕ ಒಂದು ಕಡೆ ಕರೆದುಕೊಂಡು ಹೋದ. ಅವನಿಗೆ ದುಬಾರಿ ಹೋಟೆಲ್ ಗೊತ್ತಿಲ್ಲ. ಏಕೆಂದರೆ ಅವನು ಕಷ್ಟ ಜೀವಿ. ವ್ಯಥಾ ವ್ಯಯಿಸಿ ಗೊತ್ತಿಲ್ಲ. ಹೀಗಾಗಿ ಅವನು ತಿನ್ನುವ, ಇಷ್ಟ ಪಡುವ ಜಾಗಕ್ಕೆ ಕರೆದುಕೊಂಡು ಹೋದ. ಆಟೋ ಇಳಿದು ಆ ಜಾಗವನ್ನು ನೋಡಿದ ಒಮ್ಮೆಲೆ ನಮಗೆ ಪಿಚ್ಚೆನಿಸಿತು. ಆದರೂ ಅದನ್ನು ತೋರಿಸಿಕೊಳ್ಳದೇ ಹೋದೆವು. ಆಲೂ ಧಂ ಮತ್ತು ಆಲೂ ಚಟ್’ಪಟ್ ಕಚೋಡಿ ಕೊಡಿಸಿದ. ನಾವು ನಮ್ಮ ಇಡೀ ಮಹಾಕುಂಭಮೇಳದ ಹಲವು ಸನ್ನಿವೇಶಗಳಲ್ಲಿ ಸಾಧ್ಯವಿದ್ದ ಕಡೆಗಳಲ್ಲೆಲ್ಲ ಲೋಕಲ್ ರುಚಿಯನ್ನು ಸವಿದಿದ್ದೆವು. ಎಲ್ಲವೂ ಬಹಳ ಟೇಸ್ಟಿಯಾಗಿತ್ತು. ಆಟೋ ಚಾಲಕ ಕೊಡಿಸಿದ ತಿಂಡಿ ಕೂಡ ಇದಕ್ಕೆ ಹೊರತಾಗಿರಲಿಲ್ಲ. ನಮ್ಮ ಎಲ್ಲ ಸಂಕೋಚವನ್ನು ಬದಿಗೊತ್ತಿ ರುಚಿಯನ್ನು ಸವಿಯುವಾಗ ನಮ್ಮೆದುರಿದ್ದ ತಳ್ಳು ಗಾಡಿಯ ಹೆಸರನ್ನೊಮ್ಮೆ ನೋಡಿದೆ; ಮುಸ್ತಾಕ್ ಚಾಟ್ ಸೆಂಟರ್ ಅಂತ ಬರೆದಿದ್ದ! ನಾನು ಬೆಚ್ಚಿಬಿದ್ದೆ. ಅದೆಲ್ಲ ಕ್ಷಣ ಕಾಲವಷ್ಟೇ. ಆತಂಕದ ಸಮಯದಲ್ಲಿ ನಮ್ಮ ಜೊತೆಗೂಡಿದ ಗೋವಾದ ಆ ಅಪರಿಚಿತ ಸ್ನೇಹಿತರು, ಆಪತ್ಕಾಲದಲ್ಲಿ ಸರಿಯಾದ ಸಮಯಕ್ಕೆ ಹಲವು ಏಳು ಬೀಳುಗಳನ್ನು, ಅಡೆತಡೆಗಳನ್ನು ನಿವಾರಿಸಿ ನಮ್ಮನ್ನು ನಿಲ್ದಾಣಕ್ಕೆ ಸೇರಿಸಿ, ಬಸ್ಸು ಹೋಗುವ ತನಕವೂ ಕೆಳಗೆ ನಿಂತು ನಗುತ್ತಾ ಕೈಬೀಸುತ್ತಿದ್ದ ಆ ಅಪರಿಚಿತ ಬೈಕರ್, ಭರವಸೆಯೇ ಕರಗಿ ಹೋಗುವ ಅಸಂದರ್ಭದ ಕ್ಷಣದಲ್ಲಿ ಸಹಾಯಹಸ್ತ ಚಾಚಿದ ಆ ಹಿರಿಯ ಪೊಲೀಸ್ ಅಧಿಕಾರಿ ಇವರೆಲ್ಲ ಯಾವ ಜಾತಿಯವರು? ಕುಲ ಗೋತ್ರ ಒಂದೂ ಗೊತ್ತಿಲ್ಲ. ಇವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಗವಂತನ ಇರುವಿಕೆಯನ್ನು ಋಜುವಾತುಗೊಳಿಸಿದವರು. ಹೀಗಿರುವಾಗ ಇವನ ಜಾತಿ, ಕುಲ, ಗೋತ್ರ, ಮತದ ಯೋಚನೆ ನನಗೇಕೆ ಎನಿಸಿ ಅವನು ಕೊಟ್ಟ ಸ್ವಾದಿಷ್ಟ ತಿಂಡಿಯನ್ನು ನಾನೂ ನನ್ನಾಕೆ ಸವಿದೆವು. ಬಿಲ್ ಎಷ್ಟಾಗಿತ್ತು ಗೊತ್ತಾ? ಕೇವಲ ನೂರಾಹತ್ತು! ಇನ್ನೇನು ತಿಂದಿದ್ದು ಮುಗಿಯಿತು ಎನ್ನುವಾಗ, ಆಟೋ ಚಾಲಕ ತಿಂಡಿ ತಿನ್ನುತ್ತಲೇ ಸಾರ್ ಮೀಟಿ ಖಾವೋ ಸಾಬ್ ಎಂದ. ಮುಸ್ಕಾನ್ ಮತ್ತೊಮ್ಮೆ ಗರಿಗರಿಯಾದ ಎರಡು ಬಾದೂಷ ಕೊಟ್ಟ. ಚಪ್ಪರಿಸಿಕೊಂಡು ತಿಂದೆವು. ಆ ಸ್ವಾದ ಏರ್ಪೋರ್ಟ್ ತಲುಪಿದ ಬಳಿಕವೂ ಹಾಗೇ ಉಳಿದಿತ್ತು. ಅನ್ನ ದೇವರ ಮುಂದೆ ಇನ್ನು ದೇವರಿಲ್ಲ.

ಅನೇಕ ಆತಂಕ, ಗೊಂದಲ, ಅನುಮಾನದ ಹೊರತಾಗಿ ನೂರಾ ನಲವತ್ತುನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಮಹಾಕುಂಭಮೇಳ ನಮ್ಮ ಪಾಲಿಗೆ ಯಾವುದೇ ತೊಂದರೆ ಇಲ್ಲದೆ ನಿರಾತಂಕವಾಗಿ ನಡೆಯಿತು. ಅಲ್ಲಿ ಏನೇನು ಸಮಸ್ಯೆಗಳಿವೆಯೋ ಅದೆಲ್ಲಾ ನಮಗೆ ಅಮುಖ್ಯ. ಸಂಕುಚಿತ ಮನಸ್ಸುಗಳಿಗೆ ನೈರ್ಮಲ್ಯೀಕರಣ, ಬಳಸಲು ಯೋಗ್ಯವಲ್ಲದ ನೀರು, ಅನಾರೋಗ್ಯ, ಅವ್ಯವಸ್ಥೆ, ಮೌಢ್ಯ, ಮೂಢನಂಬಿಕೆ ಮುಂತಾದ ಲೋಪದೋಷಗಳಷ್ಟೇ ಕಾಣಲಿ, ಸಂತೋಷ. ಮಹಾಕುಂಭಮೇಳ ಜಾತಿ ಮತ ಧರ್ಮವನ್ನು ಮೀರಿ ಎಲ್ಲರನ್ನೂ ಸಂಘಟಿಸುವ, ಒಂದೆಡೆ ಸೇರಿಸುವ, ಸರ್ವಧರ್ಮ ಮಹಾ ಸಮ್ಮೇಳನವಾಗಿದೆ. ಜೊತೆಗೆ ಸಂಕುಚಿತ ಮನೋಭಾವವನ್ನು ತೊಡೆದು ಹಾಕುವ, ಸರ್ವ ಜನಾಂಗದ ಶಾಂತಿಯ ತೋಟವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿದೆ ಎನ್ನುವ ಬೃಹತ್ತು ಮಹತ್ತಿನಂದ ಕೂಡಿದ ಅಂಶವಷ್ಟೇ ನಮಗೆ ತಿಳಿದಿದ್ದರೆ ಸಾಕು. ಲೋಪ ಹುಡುಕುವ ಮನಸ್ಸುಗಳು ನಿಂತ ನೀರು. ಅವರು ಅಲ್ಲೇ ಇರಲಿ. ಇಲ್ಲಿ ಹರಿಯುವ ನದಿಯಲ್ಲಿ ಕೊಳೆಯಿದ್ದರೂ ಅದಕ್ಕೆ ಚಲನೆಯಿದೆ. ಚಲನೆ ಕೆಡುವುದಿಲ್ಲ. ಕೊಳೆಯುವುದಿಲ್ಲ. ಇದೇ ಸತ್ಯ.

ಕೊನೆಯ ಮಾತು. ಈ ಬರಹ ನನಗೆ ದಕ್ಕಿದ್ದೆಷ್ಟೋ ಅಷ್ಟೇ. ಇದು ಕೇವಲ ನಮ್ಮ ಅನುಭವ. ಆ ನೆಲದಲ್ಲಿ ನಡೆದಾಡಿ, ನದಿಯಲ್ಲಿ ಮುಳುಗು ಹಾಕಿದ ಪ್ರತಿಯೊಬ್ಬರ ಅನುಭವವೂ ಮಹಾಕುಂಭಮೇಳದಂತೆ ಮಹಾಗಾಥೆಯೇ ಆಗಿದೆ.


  • ಮೋಹನ್ ಕುಮಾರ್ ಡಿ ಎನ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW