‘ಆಡು ಆನೆಯ ನುಂಗಿ’ ಕಿರುಚಿತ್ರ : ಪ್ರಶಾಂತ ಸಾಗರ

ಬರವಣಿಗೆಯ ಸೃಜನಶೀಲತೆ ಜೊತೆಗೆ ನಿರ್ದೇಶಕರಿಗೆ ತಾಂತ್ರಿಕ ತಿಳಿವಳಿಕೆಯೂ ಅತ್ಯವಶ್ಯ. ಇದಕ್ಕೊಂದು ಒಳ್ಳೆ ಉದಾಹರಣೆ ‘ಆಡು ಆನೆಯ ನುಂಗಿ’ ಕಿರುಚಿತ್ರ ಕುರಿತು ಪ್ರಶಾಂತ ಸಾಗರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಮನುಷ್ಯನ ಅಗಾಧ ಕಲ್ಪನೆಗೆ ದೃಶ್ಯಗಳ ಚೌಕಟ್ಟು ಹಾಕುವ ಸಾಧನ ಕ್ಯಾಮರಾವಾದ್ರೆ, ಆ ಕ್ಯಾಮರಾದ ಮೂಲಕ ಕತೆ ಹೇಳುವಿಕೆಯಲ್ಲೂ 1:1, 4:3, 16:9, 21:9, IMAX ಇತ್ಯಾದಿ Aspect ratio ಗಳಿವೆ.

ಒಂದು ಫಾರ್ಮ್ಯಾಟಲ್ಲಿ ಶೂಟ್ ಮಾಡಿದ್ಮೇಲೆ ಅದೆ ಫಾರ್ಮ್ಯಾಟಲ್ಲೇ ನಾವು ತೆರೆಗಾಣಿಸಬೇಕಿರುವುದರಿಂದ ಚಿತ್ರೀಕರಣಕ್ಕಿಂತ ಮುಂಚೆಯೇ ನಮ್ಮ ಚಿತ್ರದ ಕತೆ, ದೃಶ್ಯಕ್ಕೆ ಯಾವುದು ಸೂಕ್ತ ಅನ್ನೋ ಖಚಿತತೆ ಇರಬೇಕು. ಹಾಗಾಗಿ ಬರವಣಿಗೆಯ ಸೃಜನಶೀಲತೆ ಜೊತೆಗೆ ನಿರ್ದೇಶಕರಿಗೆ ಇಂತಹ ತಾಂತ್ರಿಕ ತಿಳಿವಳಿಕೆಯೂ ಅತ್ಯವಶ್ಯ. ಇದಕ್ಕೊಂದು ಒಳ್ಳೆ ಉದಾಹರಣೆ ‘ಆಡು ಆನೆಯ ನುಂಗಿ’ ಕಿರುಚಿತ್ರ.

ಯಲ್ಲಪ್ಪ ಅನ್ನೋ‌ ಕೂಲಿ ಕಾರ್ಮಿಕನಿಗೆ ಶ್ರೀಮಂತ ಸೀನಿಯರ್ ಸಿಟಿಜನ್ ಒಬ್ರು ತಮ್ಮ ಮನೆಕೆಲಸಕ್ಕೆ ಪ್ರತಿದಿನ ಕರ್ಕೊಂಡು ಬರ್ತಿರ್ತಾರೆ. ಆದರೆ ಹೇಳಿಕೊಳ್ಳುವಂತ ಕೆಲಸ ಏನೂ ಇಲ್ಲದೆ ತಮ್ಮ ಒಂಟಿತನದಿಂದ ಪಾರಾಗಲು ಅವರ ಮಾತುಗಳಿಗೆ ಕಿವಿಯಾಗಲಷ್ಟೆ ಯಲ್ಲಪ್ಪನಿಗೆ ಕೂಲಿಯಲ್ಲಿ ಸಿಗುವಷ್ಟೇ ಸಂಬಳವನ್ನ ನೀಡುತಿರ್ತಾರೆ. ಮುಂದೊಂದು ದಿನ ಆ ಸೀನಿಯರ್ ಸಿಟಿಜನ್ ಗೆಳೆಯರೊಬ್ಬರು ಮನೆಗೆ ಬಂದಾಗ ಮಾತಿನ ನಡುವೆ ಕೆಲಸವೇನು ಇಲ್ಲದಿದ್ರೂ ಯಲ್ಲಪ್ಪನ ಬಡತನಕ್ಕೆ, ಅವನ ಸಂಸಾರ ನಡೀಲಿ ಅನ್ನೋ ಅನುಕಂಪದಿಂದ ಹಣ ಕೊಡ್ತಿರೋ ವಿಷಯ ಹೇಳಿದಾಗ ಯಲ್ಲಪ್ಪ ಬಾಗಿಲ ಬಳಿ‌ ನಿಂತು ಯೋಚಿಸ್ತಾನೆ.

ಅಲ್ಲಿವರೆಗೂ 4:3 Aspect ratio ಆಗಿದ್ದಂತ ಫಾರ್ಮ್ಯಾಟ್ ಆ ಶಾಟ್’ನಲ್ಲಿ ನಿಧಾನವಾಗಿ 16:9 ಆಗಿ ಬದಲಾಗುತ್ತೆ. ಅಂದ್ರೆ ಅಲ್ಲಿವರೆಗೂ ಬಡತನವೆಂಬ ಅನುಕಂಪದ ದಾಕ್ಷಿಣ್ಯಕ್ಕೆ ಒಳಗಾಗಿದ್ದ ಯಲ್ಲಪ್ಪನ ಸಂಕುಚಿತ ಪ್ರಪಂಚ ಈಗ ಸ್ವಾಭಿಮಾನದ ಅರಿವಿನಿಂದ ವಿಸ್ತಾರ ಆಯ್ತು ಅನ್ನೋ ರೂಪಕ ಅದು. ಅದರ ಮರುದೃಶ್ಯದಲ್ಲೆ ವಿಸ್ತಾರವಾದ ಫ್ರೇಮ್’ಲ್ಲಿ ಯಲ್ಲಪ್ಪ ತನ್ನ ಸ್ವಶ್ರಮದಿಂದ ಮೆಟ್ಟಿಲು ಇಳಿದು ಹೋಗ್ತಾನೆ. ಅಲ್ಲಿವರೆಗೂ ಅವನು ಆ ಶ್ರೀಮಂತ ಸೀನಿಯರ್ ಸಿಟಿಜನ್ ಕೃಪೆಯಿಂದ ಲಿಫ್ಟಲ್ಲಿ ಸುಲಭವಾಗಿ ಮೇಲೆ ಬರ್ತಿರ್ತಾನೆ. ತನ್ನತನದ ಅರಿವಾದ್ಮೇಲೆ ಲಿಫ್ಟ್ ಮೂಲಕ ಸುಲಭವಾಗಿ ಹೋಗಬಹುದಾದ ದಾರಿಯನ್ನು ತಿರಸ್ಕರಿಸಿ ಮೆಟ್ಟಿಲುಗಳಿಂದ ಇಳಿದು ಹೋಗುವುದ್ರಲ್ಲೆ ಅವನ ಪ್ರತಿಭಟನೆ ವ್ಯಕ್ತವಾಗುತ್ತೆ.

ಹಾಗಂತ ಅದು ನೋಡುಗರಿಗೆ ಬೇಕಂತ ಎದ್ದು ಕಾಣಿಸೋ ಹಾಗೆ ಉದ್ದೇಶಪೂರ್ವಕವೂ ಆಗಿರಬಾರದು; ಈ ತಾಂತ್ರಿಕತೆಯ ರೂಪಕ ಕತೆಗೆ ಪೂರಕವಾಗೂ ಇರಬೇಕು. ಈ ಸೂಕ್ಷ್ಮ ಕುಸುರಿ ಹೆಣಿಗೆಯನ್ನು ನಿರ್ದೇಶಕ ಪುನೀತ್ ಸಕ್ಯ ಬಹು ಜತನದಿಂದ ಮಾಡಿದ್ದಾರೆ. ತಾಂತ್ರಿಕತೆಯನ್ನು ಹೀಗೆ ಸಮರ್ಥವಾಗಿ ಬಳಸಿಕೊಳ್ಳುವ ಯುವನಿರ್ದೇಶಕರನ್ನು ನೋಡಿದರೆ ಖುಷಿಯಾಗುತ್ತೆ. ಅವರ ಮುಂದಿನ ಯೋಜನೆಗಳಿಗೆ ಶುಭವಾಗಲಿ.

‘ಆಡು ಆನೆಯ ನುಂಗಿ’ ಕಿರುಚಿತ್ರವನ್ನು ತಪ್ಪದೆ ವೀಕ್ಷಿಸಿ :


  • ಪ್ರಶಾಂತ ಸಾಗರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading