ಶಿವ ಎನ್ನುವ ಶಬ್ದದ ಅರ್ಥ “ಯಾವುದು ಅಲ್ಲವೋ ಅದು” ಎಂದು. ಆಧುನಿಕ ವಿಜ್ಞಾನದ ಪ್ರಕಾರ ವಿಶ್ವವು ಶೂನ್ಯದಿಂದಲೇ ಉತ್ಪತ್ತಿಯಾಗಿದೆ ಹಾಗೂ ಶೂನ್ಯಕ್ಕೆ ಹಿಂದಿರುಗುತ್ತದೆ. ಮಹಾ ಶಿವರಾತ್ರಿಯ ಹಬ್ಬದ ದಿನದಂದು ಶಿವ ಸ್ವರೂಪ ಅಂತರಾರ್ಥವನ್ನು ತಿಳಿಯುವ ವಿಶೇಷ ಲೇಖನವನ್ನು ಸುಜಾತಾ ರವೀಶ್ ಅವರು ಬರೆದಿದ್ದಾರೆ, ತಪ್ಪದೆ ಓದಿ…
ಹಿಂದೂ ಪುರಾಣಗಳ ಪ್ರಕಾರ ಈ ಸಮಸ್ತ ವಿಶ್ವದ ವ್ಯವಹಾರದ ಆಗುಹೋಗುಗಳನ್ನು ನೋಡಿಕೊಳ್ಳುವವರು ತ್ರಿಮೂರ್ತಿಗಳು. ಸೃಷ್ಟಿ ಬ್ರಹ್ಮನದಾದರೆ ವಿಷ್ಣು ಸ್ಥಿತಿ ಕಾರಕ ಕಡೆಯಾದಾದ ಲಯಕ್ಕೆ ಸಂಬಂಧಿಸಿದ ವಿಷಯವನ್ನು ನೋಡಿಕೊಳ್ಳುವವನು ಶಿವ.
ಎಲ್ಲಕ್ಕೂ ಮೂಲಾಧಾರವಾದ ಪರತತ್ವ ಪರಬ್ರಹ್ಮನನ್ನು ಶಿವ ಎಂದೇ ಭಾವಿಸುತ್ತಾರೆ. ಹಾಗಾಗಿ ಸಂಹಾರಕ ಮತ್ತು ಲಯಕಾರಕ ದೇವತೆಯೊಂದಿಗೆ ಮೂಲಾಧಾರವೂ ಸಹ ಶಿವನೇ. ಋಗ್ವೇದದಲ್ಲಿ ಶಿವನಿಗೆ ರುದ್ರ ಎನ್ನುವ ಹೆಸರು. ಈ ರುದ್ರನಿಗೆ ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ ಚಂದ್ರಶೇಖರ ನೀಲಕಂಠ ನಂಜುಂಡ ಮಹದೇಶ್ವರ ಮಹೇಶ್ವರ ನಾಗರಾಜ ನಾಗೇಶ ಕೈಲಾಸಪತಿ ಎಂಬ ಹೆಸರುಗಳೂ ಇವೆ. ಶಿವ ಎಂದರೆ ಮಾಯಾ ನಿರಹಂಕಾರ ಬಂಧರಹಿತ ಎಂದೂ ಮಂಗಳ ಎಂಬ ಅರ್ಥವೂ ಉಂಟು.
ನಿರಾಕಾರನೂ ಮೂಲತತ್ವಾಧಾರನೂ ಆದ ಈ ಶಿವನಿಗೆ ನಾನಾ ಸ್ವರೂಪಗಳು. ಅವುಗಳ ಬಗ್ಗೆ ಸ್ಥೂಲವಾಗಿ ತಿಳಿಯೋಣ.

ಫೋಟೋ ಕೃಪೆ : shakuntala savi
ಶಿವನ ಶೂನ್ಯ ಸ್ವರೂಪ
ಮೂಲಭೂತವಾಗಿ ಶಿವನನ್ನು ಶೂನ್ಯ ಎಂದು ಹೇಳಬಹುದು. ಅಕ್ಷರಶಃ ಶಿವ ಎನ್ನುವ ಶಬ್ದದ ಅರ್ಥ “ಯಾವುದು ಅಲ್ಲವೋ ಅದು” ಎಂದು. ಆಧುನಿಕ ವಿಜ್ಞಾನದ ಪ್ರಕಾರ ವಿಶ್ವವು ಶೂನ್ಯದಿಂದಲೇ ಉತ್ಪತ್ತಿಯಾಗಿದೆ ಹಾಗೂ ಶೂನ್ಯಕ್ಕೆ ಹಿಂದಿರುಗುತ್ತದೆ. ಜಗ್ಗಿ ವಾಸುದೇವ ಅವರ ಒಂದು ವಾದದ ಪ್ರಕಾರ ಈ ಮೇರೆ ಇಲ್ಲದ ಶೂನ್ಯವೇ ಸಮಸ್ತ ವಿಶ್ವದ ಅಸ್ತಿತ್ವಕ್ಕೆ ಮೂಲವಾಗಿ ವಿಶ್ವದ ಮುಖ್ಯವಾದ ಗುಣವಾಗಿದೆ. ಹೀಗೆ ಸಮಸ್ತ ವಿಶ್ವಕ್ಕೂ ಆಧಾರವಾಗಿರುವ ಕೊನೆ ಇಲ್ಲದ ಈ ಶೂನ್ಯವೇ ಶಿವ. ವಿಶ್ವವು ಯಾವುದರಿಂದ ಉತ್ಪತ್ತಿಯಾಗಿದೆಯೋ ಹಾಗೂ ಯಾವುದರಲ್ಲಿ ಲಯವಾಗುವುದೋ ಅದಕ್ಕೆ ಶಿವ ಎನ್ನುತ್ತಾರೆ. ಶಿವನ ಈ ಶೂನ್ಯ ಸ್ವರೂಪವನ್ನು ಯೋಗಿಗಳು ಹಾಗೂ ಉನ್ನತಮಟ್ಟದ ಋಷಿಮುನಿ ಧ್ಯಾನಿಗಳು ಮಾತ್ರ ಉಪಾಸಿಸಲು ಸಾಧ್ಯ . ಹಾಗಾಗಿ ಎಲ್ಲಾ ವರ್ಗದ ಜನರಿಗೂ ಆರಾಧನೆ ಮಾಡಲು ಸಾಧ್ಯವಾಗುವಂತೆ ಮಾನವ ರೂಪದ ವಿವಿಧ ರೂಪಗಳಲ್ಲಿಯೂ ಶಿವನನ್ನು ಕಾಣಬಹುದು.
ಯೋಗಿ ಸ್ವರೂಪದಲ್ಲಿ ಶಂಕರ
ಶಿವ ಎಂದರೆ ಆದಿ ಯೋಗಿ. ಎಲ್ಲ ಯೋಗಿಗಳಿಗೂ ಮೊದಲು ಬಂದವನು; ಯೋಗವಿದ್ಯೆಯ ಮೂಲ ಗುರು. ಯೋಗ ವಿದ್ಯೆ ಎಂದರೆ ವಿಜ್ಞಾನ ತಂತ್ರಜ್ಞಾನಗಳ ಮೂಲಕ ಮನುಷ್ಯ ಜೀವನದ ಉಗಮವನ್ನು ತಿಳಿಯಬಹುದೋ ಮನುಷ್ಯನ ಪರಮ ಚರಮ ಗುರಿಯನ್ನು ಸಾಧಿಸಬಹುದೋ ಅದು. ಕೇದಾರನಾಥದ ಬಳಿಯ ಕಾಂತಿ ಸರೋವರದಲ್ಲಿ ಆದಿಯೋಗಿ ಸ್ವರೂಪದಿಂದ 7 ಜನ ಶಿಷ್ಯರಿಗೆ ಸಾಂಗವಾಗಿ ಪೂರ್ವೋತ್ತರ ಕ್ರಮದಿಂದ ಯೋಗವಿದ್ಯೆಯ ಉಪದೇಶ ಮಾಡಿದನೆಂಬ ಪ್ರತೀತಿ . ಈ ಏಳು ಜನರೇ ಸಪ್ತರ್ಷಿಗಳಾಗಿ ಪ್ರಸಿದ್ಧರಾಗಿದ್ದಾರೆ . ಅಲ್ಲದೆ ಶಿವನ ಯೋಗೇಶ್ವರ ರೂಪವೇ ದಕ್ಷಿಣಾಮೂರ್ತಿ ಸ್ವರೂಪ. ಹಾಗಾಗಿ ಶಿವನನ್ನು ಯೋಗಿಯ ರೂಪದಲ್ಲಿ ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ವಿಧಿ ವಿಧಾನಗಳನ್ನು ತಿಳಿಯುವ ತಿಳಿಸುವ ಯೋಗ ವಿದ್ಯಾ ಪ್ರವರ್ತಕ ಎಂದು ಹೇಳಬಹುದು.

ಫೋಟೋ ಕೃಪೆ : shakuntala savi
ಲಿಂಗಸ್ವರೂಪ ಶಿವ
ಲಿಂಗ ಪದವು ಪರಮಾತ್ಮ ವಾಚಕ ಹಾಗೂ ಪರಶಿವ ಸೂಚಕ. ಶಿವನಿಗೆ ಲಿಂಗ ಪದ ಬಳಕೆ. ಕುರುಹು ಚಿಹ್ನೆ ಹಾಗೂ ಗುರುತು ಎಂಬುದಾಗಿಯೂ ಅರ್ಥಗಳಿವೆ. ಶಿವಪುರಾಣದಲ್ಲಿ ಲಿಂಗವನ್ನು ಓಂಕಾರ ಸ್ವರೂಪ ಎಂದು ವರ್ಣಿಸಲಾಗಿದೆ . ಓಂಕಾರದಲ್ಲಿಯ ಅ ಉ ಮ ಈ ಮೂರು ಅಕ್ಷರಗಳು ಅನುಕ್ರಮವಾಗಿ ಲಿಂಗದ ಪೀಠ, ಗೋಮುಖ ಹಾಗೂ ಗೋಲಕಗಳಾಗಿ ತಿಳಿಯಲ್ಪಟ್ಟಿದೆ . ಶಿವಪುರಾಣದ ಮತ್ತೊಂದು ವಾಕ್ಯವನ್ನು ಉದಾಹರಿಸಿದರೆ
ಲೀನಾರ್ಥಗಮಕಂ ಚಿಹ್ನಂ ಲಿಂಗಮಿತ್ಯಭಿಧೀಯತೆ
ಎಂದರೆ ಅವ್ಯಕ್ತವಾಗಿರುವುದರ ಜ್ಞಾನವನ್ನುಂಟುಮಾಡಿ ಕೊಡುವುದಕ್ಕೆ ಲಿಂಗವೆಂದು ಹೇಳಬೇಕು. “ಲಿಂಗಂ ಪರಮಾತ್ಮ ಚಿಹ್ನಂ” ಎಂದು ಸಂಹಿತೆಯು ಪ್ರತಿಪಾದಿಸುತ್ತದೆ. ವಚನ ವಾಜ್ಞ್ಮಯದಲ್ಲಿ ಹಾಗೂ ಲಿಂಗಾಯತ ಧರ್ಮದಲ್ಲಿ ಶಿವ ಶಬ್ದವನ್ನು ಬಳಸಿಕೊಂಡಿರುವವರಾದರೂ ಹೆಚ್ಚು ಒತ್ತು ಕೊಟ್ಟು ಆಸಕ್ತಿ ವಹಿಸಿ ಬಳಸಿಕೊಂಡಿರುವುದು ಲಿಂಗ ಪದವನ್ನು ಮಗ್ಗೆಯ ಮಾಯಿ ದೇವರು ತಮ್ಮ ಶಿವಾನುಭವ ಸೂತ್ರದಲ್ಲಿ ವ್ಯಾಖ್ಯಾನಿಸಿರುವುದು ಹೀಗೆ
ಲೀಯತೆ ಗಮ್ಯತೇಯತ್ರ ಏನ ಸರ್ವಂ ಚರಾಚರಂ
ತದೇ ತಲ್ಲಿಂಗ ಮಿತ್ಯುಕ್ತಂ
ಲಿಂಗ ತತ್ವ ಪರಾಯಣಿ
ಸಚರಾಚರ ಸೃಷ್ಟಿಗಳೆಲ್ಲವೂ ಯಾವುದರಿಂದ ಹೊರಹೊಮ್ಮಿ ಎಲ್ಲಿ ಲೀಲೆಯಾಡಿ ಕೊನೆಗೆ ಯಾವುದರಲ್ಲಿ ಲಯವಾಗುವುದು ಅದೇ ಲಿಂಗ. ಅಂದರೆ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣಕರ್ರ್ತೃವಾಗಿ ಇರುವ ಅವ್ಯಕ್ತವಾದ ಚೈತನ್ಯವೇ ಶಿವನ ಲಿಂಗಸ್ವರೂಪ ಎಂದು ಹೇಳಬಹುದು.

ಫೋಟೋ ಕೃಪೆ : shakuntala savi
ಶಿವನ ನಟರಾಜ ಸ್ವರೂಪ
ಯೋಗೇಶ್ವರನಾದ ಶಿವನು ನಾಟ್ಯೇಶ್ವರನೂ ಹೌದು. ಶಿವನ ನಾಟ್ಯ ಭಂಗಿಯನ್ನು ಸೂಚಿಸುವ ಸ್ವರೂಪಕ್ಕೆ ನಟರಾಜ ಎಂದು ಹೆಸರು. ಇಲ್ಲಿ ದೈವಿಕವಾಗಿ ಅವರ ನೃತ್ಯವನ್ನು ಶಿವ ತಾಂಡವ ಎಂದು ಕರೆಯಲಾಗುತ್ತದೆ. ಈ ಭಂಗಿಯು ಶಿವನನ್ನು ನೃತ್ಯ ಹಾಗೂ ನಾಟಕೀಯ ಕಲೆಗಳ ಅಧಿಪತಿಯಾಗಿ ಸಂಕೇತಿಸುತ್ತದೆ . ತಮಿಳು ಭಕ್ತಿ ಗ್ರಂಥಗಳಾದ ತಿರುಮುರೈನಲ್ಲಿ ಶಿವನು ತನ್ನ ಸೃಷ್ಟಿ ವಿನಾಶ ಸಂರಕ್ಷಣೆಯ ಕಾರ್ಯಗಳನ್ನು ಮತ್ತು ಭಕ್ತರನ್ನು ಆಶೀರ್ವದಿಸುವ ಕಾರ್ಯವನ್ನು ಈ ಸ್ವರೂಪದಲ್ಲಿ ಮಾಡುತ್ತಾನೆ ಎಂದು ಹೇಳಲಾಗಿದೆ. ಶಿವನ ಆನಂದದ ನೃತ್ಯ ಲಾಸ್ಯ ರೂಪವಾಗಿ ಆನಂದ ತಾಂಡವ ಎಂದು ಕರೆಯಲ್ಪಟ್ಟರೆ ವಿನಾಶವನ್ನು ಸೂಚಿಸುವ ರೌದ್ರ ರೂಪದ ನೃತ್ಯಕ್ಕೆ ರುದ್ರ ತಾಂಡವ ಎಂದು ಹೆಸರು.
ಶಿವನ ಈ ನಟರಾಜ ಸ್ವರೂಪದಲ್ಲಿ ಪ್ರತಿಯೊಂದು ವಿವಿಧ ಆಯಾಮಗಳನ್ನು ಸೂಚಿಸಿ ಸಾಂಕೇತಿಕವಾಗಿರುವುದು ವಿಶೇಷ. ಅವನು ನೃತ್ಯ ಮಾಡುವ ವೃತ್ತಾಕಾರದ ಮುಚ್ಚಿದ ಜ್ವಾಲೆಯ ಕಮಾನು ಪ್ರಭಾ ಮಂಡಲ. ಇದು ಹಿಂದು ಧರ್ಮದಲ್ಲಿ ಆವರ್ತಕ ಅಸ್ತಿತ್ವ ಅಥವಾ ಜೀವನ ಚಕ್ರದಲ್ಲಿ ಎಲ್ಲವನ್ನು ಸೃಷ್ಟಿಸುವ, ಸೇವಿಸುವ ಕಾಸ್ಮಿಕ್ ಬೆಂಕಿಯನ್ನು ಪ್ರತಿನಿಧಿಸುತ್ತದೆ .ಈ ಸೃಷ್ಟಿ ಮತ್ತು ವಿನಾಶದ ನಿರಂತರ ಸರಪಳಿಯ ಮೂಲಕವೂ ಈಶ್ವರನು ಶಾಂತವಾಗಿ ಕಾಣುವುದು ಆತ್ಮದ ಪರಮ ಶಾಂತಿಯನ್ನು ತೋರಿಸುತ್ತದೆ. ಬಾಗಿರುವ ಅವನ ಕಾಲುಗಳು ಶಕ್ತಿಯುತ ನೃತ್ಯ ಹಾಗೂ ಹರಡಿರುವ ಅವನ ತಲೆಯ ಕೂದಲುಗಳು ನೃತ್ಯದ ಭಾವ ಪರವಶತೆಯನ್ನು ಸೂಚಿಸುತ್ತದೆ. ಅವನು ಧರಿಸಿರುವ ಶಿರಸ್ತ್ರಾಣವು ಸಾಮಾನ್ಯವಾಗಿ ಮಾನವ ತಲೆ ಬುರುಡೆ ಮರಣತ್ವವನ್ನು ಸಂಕೇತಿಸುತ್ತದೆ. ಅವನು ತುಳಿಯುತ್ತಿರುವ ಕುಬ್ಜಾಕೃತಿಯ ರಾಕ್ಷಸ ಅಪಸ್ಮಾರ ಅಥವಾ ಅಜ್ಞಾನದ ಸಂಕೇತ ಹಾಗೂ ಅದನ್ನು ವಿನಾಶ ಪಡಿಸಿ ತನ್ನ ಅಭಯಮುದ್ರೆಯನ್ನು ಶಿವನು ಭಕ್ತರಿಗೆ ತೋರಿಸುತ್ತಾನೆ. ಹೀಗೆ ನಟರಾಜ ಸ್ವರೂಪದಲ್ಲಿ ಶಿವನು ತನ್ನ ಭಕ್ತರನ್ನು ಆಂತರಿಕ ಬುದ್ಧಿವಂತಿಕೆ ಹಾಗೂ ಸ್ವಯಂ ಸಾಕ್ಷಾತ್ಕಾರದ ಕಡೆಗೆ ಕರೆದೊಯ್ಯುವ ಸತ್ವ ರಜಸ್ ತಮಸ್ ಗಳನ್ನು ಪ್ರತಿನಿಧಿಸುತ್ತಾನೆ.

ಫೋಟೋ ಕೃಪೆ : shakuntala savi
ಶಿವನ ಅರ್ಧನಾರೀಶ್ವರ ಸ್ವರೂಪ
ವಾಗರ್ಥಾವಿವ ಸಂಪ್ತ್ರುಕ್ತೌ ವಾಗರ್ಥ ಪ್ರತಿಪತ್ತಯೇ
ಜಗತಃಪಿತರೌ ವಂದೇ ಪಾರ್ವತಿ ಪರಮೇಶ್ವರವೌ
ಜಗತ್ತಿಗೆ ತಂದೆ ತಾಯಿಯರದ ಶಿವ ಮತ್ತು ಶಕ್ತಿ ಪರಿಪೂರ್ಣರಾಗಿ ಒಂದೇ ದೇಹದಲ್ಲಿ ಅಂದರೆ ಶಿವನ ದೇಹದಲ್ಲಿ ಪಾರ್ವತಿಯು ವಿಲೀನವಾಗಿರುವ ಈ ಪ್ರಕ್ರಿಯೆಗೆ ಅರ್ಧನಾರೀಶ್ವರ ತತ್ವ ಎಂದು ಹೆಸರು. ಪುರಾಣಗಳ ಪ್ರಕಾರ ಪಾರ್ವತಿಯು ಶಿವನ ಭಕ್ತ ಭೃಂಗಿ ತನ್ನನ್ನು ಆಲಕ್ಷಿಸಿದನೆಂದು ಅವನನ್ನು ಶಪಿಸಲು ಶಿವನು ತನ್ನ ನಿಜ ಭಕ್ತನಿಗೆ ಮತ್ತೂ ವರವನ್ನು ಕೊಟ್ಟಾಗ ಕುಪಿತಳಾದ ಪಾರ್ವತಿ ಕೇದಾರಕ್ಕೆ ಹೋಗಿ ತಪಸ್ಸು ಮಾಡಿ ಶಿವನ ಅರ್ಧ ದೇಹದಲ್ಲಿ ವಿಲೀನಳಾಗುವ ವರ ಬೇಡಿ ಶಿವ ಅರ್ಧನಾರೀಶ್ವರನಾದನೆಂದು ಹೇಳುತ್ತಾರೆ. ಶಿವನು ಶಕ್ತಿಯೂ ಅವಿನಾಭಾವದಿಂದ ಒಂದೇ ದೇಹದಲ್ಲಿ ಇರುವ ಶಿವನ ವಾಮಾರ್ಧವೇ ಪಾರ್ವತಿ ಎಂಬ ಈ ಕಲ್ಪನೆ ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀ ಪುರುಷರಿಬ್ಬರೂ ಸಮಾನರು ಹಾಗೂ ಪತಿ ತನ್ನ ಪತ್ನಿಯನ್ನು ಗೌರವದಿಂದ ಕಾಣಬೇಕು ಎಂಬ ಭಾವವನ್ನು ಸೂಚಿಸುತ್ತದೆ .ಪುರುಷ ಮತ.
- ಸುಜಾತಾ ರವೀಶ್
