ಶ್ರೀ ಚಿದಂಬರ ದೇವಸ್ಥಾನಕ್ಕೆ ಹೋಗಬೇಕು ಅಂದುಕೊಂಡು ಮುಂದೆ ಸೊಗಲ ಸೋಮೇಶ್ವರ ಕ್ಷೇತ್ರಕ್ಕೆ ಹೋಗಿ ಬಂದ ಶಿವನ ದರ್ಶನ ಪಡೆದ ಅನುಭವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಶಿವರಾತ್ರಿಗೆ ಇನ್ನೆರಡು ದಿನ ಇರೋದಕ್ಕಿಂತ ಮುಂಚೆ ಸೊಗಲ ಸೋಮೇಶ್ವರ ಕ್ಷೇತ್ರ ನೋಡಿ ಬಂದೆ. ಧಾರವಾಡದಿಂದ ಬೈಲಹೊಂಗಲಕ್ಕ ಮೊದಲ ಬಾರಿ ಹೋಗಿದ್ದು, ಊರು ಸಾಕಷ್ಟು ದೊಡ್ಡದು ಅನಸ್ತು. ಇಲ್ಲೆ ಚೆನ್ನಮ್ಮನ ಸಮಾಧಿನೂ ಅದ ಅಂತ ಗೊತ್ತಾತು.
ಇದಕ್ಕೂ ಮುನ್ನ ನಾ ಬೈಲಹೊಂಗಲಕ್ಕ ಹೊರಟಾಗ ಹಳ್ಳಿಯೊಂದರ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ನಕ್ಕೊಂತ ಬಸ್ ಹತ್ತಿದರು. ನನ್ನ ಪಕ್ಕಕ್ಕ ಬಂದ ಕೂತರು. ನಮಸ್ಕಾರ ಯಾವ ಕಡೆ ಹೊರಟೀರಿ ಅಂತ ಕೇಳಿದ್ರು, ನಾ ಮುರಗೋಡಕ್ಕ ಹೊಂಟಿನಿ, ಅಲ್ಲಿಂದ ಶ್ರೀ ಚಿದಂಬರ ದೇವಸ್ಥಾನ ನೋಡಿ, ಮತ್ತ ವಾಪಸ್ಸು ಬರಬೇಕಂತ ಮಾಡಿನ್ರೀ ಅಂದೆ. ಅಲ್ರೀ ಅಲ್ಲಿತನ ಹೋಗಿರತೀರಿ, ಸೊಗಲಕ್ಕೂ ಹೋಗಿಬರ್ರೀ. ಅಲ್ಲಿ ಮ್ಯಾಲಿನಿಂದ ಗಂಗೆ ಹರಿತಾಳ, ಆ ಗಂಗೆ ಮೈಮ್ಯಾಲ ಬಿದ್ರ ಚರ್ಮರೋಗಗಳು ಹೋಗತಾವ ಅಂತಂದ್ರು. ಮತ್ತ ತಮ್ಮಷ್ಟಕ್ಕ ತಾವು ನಕ್ಕರು… ಎಂತಾ ಮಜಾ ಕ್ಯಾರೆಕ್ಟರ್ ಅಲ್ವಾ ಅಂತ ಅನಸ್ತು. ಅಷ್ಟೋತ್ತಿಗೆ ಅವರ ನಿಲ್ದಾಣ ಬಂತು, ಇಳದು ಹೋದ್ರು.

ನಾ ಚಿದಂಬರ ಕ್ಷೇತ್ರಕ್ಕ ಹೋಗಿ, ವಾಪಸ್ಸು ಮುರುಗೋಡ ಬಸ್ ನಿಲ್ದಾಣದಾಗ ಬಂದು ಕೂತೆ. ಸೊಗಲ ಕ್ಷೇತ್ರ ಅಂತ ಬಸ್ ಬಂತು, ಹತ್ತಿದೆ. ಇನ್ನೇನು ಸೊಗಲ ಕ್ಷೇತ್ರ ಬಂತು ಅನ್ನೋಷ್ಟೊತ್ತಿಗೆ ಬಸ್ ನಲ್ಲಿದ್ದ ಅಜ್ಜವೊಬ್ಬರು ನೀವು ದೇವಸ್ಥಾನಕ್ಕ ಹೋಗಿ ಮತ್ತ ವಾಪಸ್ಸು ಬರ್ತೀರೇನು ಅಂತ ಕೇಳಿದ್ರು…ಹೌದ್ರೀ ಅಂದೆ. ಬಸ್ ಇಳದ ತಕ್ಷಣ ತಮ್ಮಾ ಇಲ್ಲೆ ಕಾಯಿ, ಕರ್ಪೂರ ಎಲ್ಲಿ ಸಿಗತಾವ ಅಂತ ಕೇಳಿದ್ರು….ಬರ್ರೀ ಅಜ್ಜಾರ ಅಂತ ಅವರನ್ನ ಕರಕೊಂಡು ಟೆಂಗಿನಕಾಯಿ, ಕರ್ಪೂರ, ಬಾಳೆಹಣ್ಣು ಕೊಡಿಸಿ ಮುಂದ ಹೊರಟೆವು…ಹಿಂದಿಂದ ಇನ್ನೊಬ್ಬ ಅಜ್ಜ ನಮ್ಮನ್ನೇ ಅನುಸರಿಸಿ ಬಂದರು.
ಸುಂದರವಾದ ಪರಿಸರ, ಸುತ್ತಲು ನೀರು, ಮೇಲೆ ಶಿವನ ಮೂರ್ತಿ, ಸುಮಾರು ೭೦ಮೆಟ್ಟಿಲು ಹತ್ತಿ ಮೇಲೆ ಬರುವಾಗ ಮಧ್ಯದಲ್ಲಿ ಶಿವ-ಪಾರ್ವತಿ ಕುಳಿತ ಮೂರ್ತಿ, ಮತ್ತೆ ಮೇಲೆ ಬಂದಾಗ ಅಲ್ಲಿದ್ದ ಬೃಹದಾಕಾರದ ಶಿವನ ಮೂರ್ತಿ ಮನ ಸೆಳೆಯಿತು. ಮೂರ್ತಿಯ ಹಿಂಭಾಗದಲ್ಲಿ ಬೃಹದಾಕಾರದ ಕಲ್ಲುಗಳಿದ್ದವು. ಅದರ ಕೆಳಗಿಂದ ನುಸುಳಿ ಇನ್ನೊಂದು ಕಡೆ ಹಾಸಿ ಬಂದು ಅದೆನೋ ಮಹದಾನಂದ ಪಡತ್ತಿದ್ದರು ಭಕ್ತರು.
ಶ್ರೀ ಸೋಮೇಶ್ವರನ ದರ್ಶನ ಪಡೆದೆವು. ಆತನೆದುರು ನಿಂತಾಗ ಅದೇನೋ ಆನಂದ ಅನಸ್ತು. ಕೈ ಮುಗಿದು ಮನದ ಭಾರ ಕಡಿಮೆ ಮಾಡಿಕೊಂಡು ಮುಂದೆ ಬಂದೆವು. ಅಲ್ಲಿ ಮೇಲಿನಿಂದ ಬಸಿದು ಬರುವ ನೀರು ಅದರ ಕೆಳಗೆ ಭಕ್ತರು ಸ್ನಾನ ಮಾಡಿ ಪಡುತ್ತಿದ್ದ ಆನಂದ ಕಂಡು, ನಾನು ಬಸಿಯುವ ನೀರಿನ ಕೆಳಗೆ ಹೋಗಿ ನಿಂತೆ. ಮೇಲಿನಿಂದ ಧಬಧಬ ಎಂದು ಮೈಮೇಲೆ ನೀರು ಬಿದ್ದಾಗ ಮೈಯೆಲ್ಲಾ ಹಗುರವಾಯಿತು. ಮನಸ್ಸು ಅದೇನೋ ಆಹ್ಲಾದ ಅನುಭವಿಸ್ತು…ನನ್ನೊಡನೆ ಇಬ್ಬರು ಅಜ್ಜಂದಿರು ಸ್ನಾನ ಮಾಡಿದರು.
ಅಲ್ಲಿಂದ ವಾಪಸ್ಸು ಬರುವಾಗ ‘ಬೆಟ್ಟದ ಅರವಿ’ ಹೂವು ಮಾರುವಾಕೆ ಒಂದಿಷ್ಟು ಹೂವು ಕೊಟ್ಟಲು. ತೊಗೊಂಡು ಮುಂದೆ ಬಂದಾಗ ಅಲ್ಲೊಂದು ಉಡುಪಿ ಹೋಟೆಲ್ ಕಂಡ್ತು. ಅಲ್ಲಿ ಇಬ್ಬರು ಅಜ್ಜಂದಿರೊಂದಿಗೆ ಇಡ್ಲಿ ತಿಂದು, ಚಹಾ ಕುಡಿದು ಹೊರಟೆವು. ವಾಪಸ್ಸು ಬೈಲಹೊಂಗಲಕ್ಕೆ ಅಜ್ಜನೆ ಟಿಕೆಟ್ ತೆಗೆಸಿದ್ರು. ತಮ್ಮೊಡನೆ ಬಂದಿದ್ದು ತಮ್ಮ ಗೆಳೆಯ ಅಂತ ಹೇಳಿದ್ರು…ಅವರಿಗೆ ೯೨ವರ್ಷ ಆಗಿತ್ತು. ಇನ್ನೊಬ್ಬ ಅಜ್ಜನಿಗೆ ೮೪ ವರ್ಷ. ಅವರ ಲವಲವಿಕೆ ಕಮ್ಮಿ ಆಗಿರಲಿಲ್ಲ. ತಾವು ಹೆಡ್ ಮಾಸ್ಟರ್ ಆಗಿದ್ದೆವು. ನಮ್ಮೂರು ಯರಡಾಲ ಅಂದ್ರು.

ಖುಷಿ ಆತು ಧಾರವಾಡದಾಗ ಬಸ್ ಹತ್ತಿದಾಗ ಸಿಕ್ಕ ಮಾಸ್ತರ್. ಸೊಗಲಕ್ಕ ಬಂದಾಗ ಪರಿಚಯನೇ ಇಲ್ಲದೇ ಆತಿಥ್ಯ ಮಾಡಿದ ಹಿರಿಯರು. ಏನಪ್ಪಾ ನಿನ್ನ ಲೀಲೆ ಅಂತ ಶಿವನ ಧ್ಯಾನ ಮಾಡತಾ ಅಜ್ಜಂದಿರಿಬ್ಬರಿಗೂ ಟಾಟಾ ಮಾಡಿ ಧಾರವಾಡ ಬಸ್ ಹತ್ತಿದೆ.
ನೀವು ಹೋಗಿ ಬನ್ನಿ ಮಸ್ತ್ ಅದ ದೇವಸ್ಥಾನ…ಪರಿಸರ, ಜಲಪಾತ…ನೋಡಿ ಕಣ್ತುಂಬಿಕೊಳ್ಳಿ….ಮತ್ತೊಮ್ಮೆ ಮಹಾ ಶಿವರಾತ್ರಿ ಶುಭಾಶಯಗಳು….
- ರಾಘವೇಂದ್ರ ಅಪರಂಜಿ – ಪತ್ರಕರ್ತರು, ಲೇಖಕರು, ಹುಬ್ಬಳ್ಳಿ.
