‘ಕಮಲಿ from ನಡು ಕಾವೇರಿ’ ಸಿನಿಮಾ ಪರಿಚಯ

‘ಕಮಲಿ from ನಡು ಕಾವೇರಿ’ ತಮಿಳಿನಿಂದ ಡಬ್ ಆಗಿರುವಂತಹ ಸಿನಿಮಾವಿದು, ಹಳ್ಳಿಯ ವಿದ್ಯಾರ್ಥಿಗಳು ವಿಸ್ತೃತ ಬದುಕಿಗೆ ಬೇಕಾದ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳುವುದನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಈ ಸಿನಿಮಾದ ಕುರಿತು ಅರವಿಂದ ಚೊಕ್ಕಾಡಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

“ಅದು ನಾನೇ ಅಲ್ವ” ಎಂದು ಹೀರೋ ಹೀರೋಯಿನ್ ಬಳಿ ಕೇಳುವ ಮೂರೇ ಪದಗಳಲ್ಲಿ ಇಡೀ ಸಿನಿಮಾದ ಸಮಗ್ರವನ್ನೂ ಹಿಡಿದು ನಿಲ್ಲಿಸಿರುವ ಸಿನಿಮಾ, ‘ಕಮಲಿ from ನಡು ಕಾವೇರಿ’; ತಮಿಳಿನಿಂದ ಡಬ್ ಆಗಿರುವ ಸಿನಿಮಾ. ಇದರ ನಿರ್ದೇಶಕರೊಬ್ಬರು ಮಹಾನ್ ನಿರ್ದೇಶಕರು. ಹೀರೋನನ್ನು ಇಷ್ಟಪಡುವ ಹೀರೋಯಿನ್ ಏನೇನು ಮಾಡಿದರೂ ಹೀರೋಗೆ ಅರ್ಥ ಆಗುವುದಿಲ್ಲ. ಕೊನೇಗೆ ಅವನಿಗೆ ಅಂದಾಜಾದಾಗ,”ಅದು ನಾನೇ ಅಲ್ವ” ಎಂದು ಕೇಳುತ್ತಾನೆ. ಒಂದಾನೊಂದು ಕಾಲದಲ್ಲಿ ನಮ್ಮ ಪರಿಸ್ಥಿತಿಯೂ ಇದೇ ಆಗಿದ್ದುದರಿಂದಲೋ ಏನೋ ಸಿನಿಮಾ ತುಂಬ ಇಷ್ಟವಾಯಿತು.

“ಅದು ನಾನೇ ಅಲ್ವ” ಎಂದು ಹೀರೋ ಕೇಳುವಾಗ ಹೀರೋಯಿನ್ ಭಾವ ತೀವ್ರತೆಯ ಸಂಭ್ರಮಕ್ಕೆ ಒಳಗಾಗಿ ಪ್ರತಿಕ್ರಿಯಿಸದೆ ಶಾಂತವಾಗಿ ಸಂತೋಷವನ್ನು ಅನುಭವಿಸುತ್ತಾ, “ಇರಬಹುದು” ಎಂದಷ್ಟೇ ಉತ್ತರಿಸುವಲ್ಲಿ ಕಲೆಯ ಉನ್ನತವಾದ ಸಂವೇದನೆಯ ನಿವೇದನೆಯಾಗುತ್ತದೆ. ಇದು ಅರ್ಥವಾಗಬೇಕಾದರೆ ‘ಖುಷಿ’ ಮತ್ತು ‘ಸಂತೋಷ’ ದ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಬೇಕು.

‘ಖುಷಿ’ ಆ ಕ್ಷಣದ ಪ್ರತಿಕ್ರಿಯೆ. ಅದು ಧನಾತ್ಮಕವೂ ಇರಬಹುದು, ಋಣಾತ್ಮಕವೂ ಇರಬಹುದು. ನಮಗೇನೋ ತೊಂದರೆ ಮಾಡಿದವ ಕಷ್ಟಕ್ಕೆ ಸಿಲುಕಿದಾಗ ಒಳಗೊಳಗೇ ಸಂತಸಪಡುವುದು ‘ಖುಷಿ’. ಸಿಟ್ಟು ಬಂದವನಿಗೆ ನಾಲ್ಕು ಚಚ್ಚಿದಾಗ ಸಿಗುವುದು ‘ಖುಷಿ’. ಅತ್ಯಾಚಾರದಿಂದ ಸಿಗುವುದು ‘ಖುಷಿ’. ಖುಷಿಗೆ ಇರುವುದು ಪಡೆದುಕೊಳ್ಳುವ ಗುಣ. ಖುಷಿಯು ಅಲ್ಪಕಾಲಿಕ. ಆದರೆ ‘ಸಂತೋಷ’ ಹೀಗಲ್ಲ. ‘ಸಂತೋಷ’ ಸಾರ್ಥಕತೆಯ ಭಾವದಿಂದ ಹುಟ್ಟಿಕೊಳ್ಳುವಂತಾದ್ದು. ‘ಸಂತೋಷ’ ಕ್ಕೆ ಬಿಟ್ಟುಕೊಡುವ ಗುಣ ಇರುತ್ತದೆ. ತೊಂದರೆ ಮಾಡಿದವನ ಸಂಕಷ್ಟಕ್ಕೆ ನೆರವಾದಾಗ ಸಿಗುವುದು ‘ಸಂತೋಷ’. ಸಂತೋಷವು ಮನುಷ್ಯನ ಚಾರಿತ್ರ್ಯವನ್ನು ರೂಪಿಸುತ್ತದೆ.

ಐ.ಐ.ಟಿ ಯಲ್ಲಿ ಫಸ್ಟ್ ರ‌್ಯಾಂಕ್ ಬಂದವನನ್ನು ಟಿ.ವಿ.ಯಲ್ಲಿ ನೋಡಿ ಅವನನ್ನು ಇಷ್ಟಪಟ್ಟು ತನಗೆ ಅವನೇ ಬೇಕು ಎನ್ನುವ ಹುಚ್ಚನ್ನು ಬೆಳೆಯಿಸಿಕೊಳ್ಳುವ ಹೀರೋಯಿನ್ ಅವನಿರುವಲ್ಲಿಗೆ ಹೋಗುವುದಕ್ಕಾಗಿಯೇ ತಾನೂ ಐ.ಐ.ಟಿ ಗೆ ಹೋಗಲು ಎಕ್ಸಾಂ ಬರೆದು ಹೋಗುತ್ತಾಳೆ. ಅವಳ ಉದ್ದೇಶ ಅವನನ್ನು ಪಡೆಯುವುದಷ್ಟೇ. ಆದ್ದರಿಂದ ಐ.ಐ.ಟಿಗೆ ಸೇರಿಕೊಂಡ ನಂತರ ಝೀರೋ ಮಾರ್ಕಿನ ಹಂತಕ್ಕೆ ಬರುತ್ತಾಳೆ. ಹೀರೋನಿಂದಲೇ ಅಪಮಾನಿತಳಾದಾಗ ಅಧ್ಯಯನವನ್ನೆ ತಿರಸ್ಕರಿಸಿ ಮನೆಗೆ ಬರುತ್ತಾಳೆ. ಆಮೇಲೆ ಅವಳ ಸಾಮಾಜೀಕರಣವಾಗುವುದು. ಅವಳಿಗೆ ಹಳ್ಳಿಯಲ್ಲೇ ಕೋಚಿಂಗ್ ಕೊಟ್ಟ ನಿವೃತ್ತ ಪ್ರಾಧ್ಯಾಪಕ, ತಾನು ಅನುತ್ತೀರ್ಣನಾಗಿದ್ದರೂ ಉಂಗುರ ಮಾರಾಟ ಮಾಡಿ ತಂಗಿಗೆ ಪುಸ್ತಕ ತಂದುಕೊಟ್ಟ ಅಣ್ಣ, ಹಳ್ಳಿ ಶಾಲೆಯ ಮೇಷ್ಟ್ರು, ಅವಳನ್ನೆ ಮಾದರಿಯಾಗಿ ತೆಗೆದುಕೊಂಡ ಕಿರಿಯ ವಿದ್ಯಾರ್ಥಿಗಳು, ಐ.ಐ.ಟಿ ಗೂ ಐ.ಟಿ.ಐ ಗೂ ವ್ಯತ್ಯಾಸ ಗೊತ್ತಿಲ್ಲದಿದ್ದರೂ ಹಣ ಹೊಂದಿಸುವ ತಂದೆ- ಇವರಿಗೆಲ್ಲ ಅವಳ ‘ಪ್ರೀತಿ’ ಯ ಅರಿವಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ಇದೆಲ್ಲ ಅರ್ಥವಾಗುತ್ತಿದ್ದಂತೆ ಮತ್ತೆ ಕಾಲೇಜಿಗೆ ತೆರಳುವ ಹೀರೋಯಿನ್ ತನ್ನ ಎಲ್ಲ ಅಲಂಕಾರಿಕ ಸಾಧನಗಳನ್ನೂ ಕಟ್ಟಿ ಕಸದ ಬುಟ್ಟಿಗೆ ಎಸೆದು ಸನ್ನದ್ಧಳಾಗುವ ಸೀನ್ ಮನೋಜ್ಞವಾಗಿದೆ. ಆಮೇಲೆ ಅವಳ ವಿಕಾಸಕ್ಕೆ ಯಾವ ತಡೆಯೂ ಇಲ್ಲ. ಹೀರೋ ಪಕ್ಕದಲ್ಲೆ ಓಡಾಡುತ್ತಿದ್ದರೂ ಅವಳಿಗೆ ಭಾವ ತೀವ್ರತೆ ಇಲ್ಲ. ಹಳ್ಳಿಯ ವಿದ್ಯಾರ್ಥಿಗಳು ವಿಸ್ತೃತ ಬದುಕಿಗೆ ಬೇಕಾದ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಗಳಿಸಿಕೊಳ್ಳುವುದನ್ನು ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ.

ಹೀರೋಯಿನ್ ಸಾಧನೆಯ ಹಾದಿಗೆ ತೆರೆದುಕೊಂಡಾಗಲೂ ಪ್ರೀತಿಯನ್ನು ಕಳೆದುಕೊಂಡು ದ್ವೇಷವನ್ನು ಬೆಳೆಯಿಸಿಕೊಳ್ಳದೆ ಇರುವುದರಲ್ಲಿ ಬದುಕಿನ ಸಹಜ ಲಯವಿದೆ. ಕನ್ನಡದ ಸ್ತ್ರೀ ಪ್ರಧಾನ ಸಿನಿಮಾಗಳ ‘ಕಣಗಾಲ್ ಟ್ರೆಂಡ್’ ಅನ್ನು ಮೀರಿ ಈ ಸಿನಿಮಾ ಬದುಕಿಗೆ ಅದರ ಸಹಜತೆಯಲ್ಲಿ ಸ್ಪಂದಿಸುತ್ತಾ ಹೋಗುತ್ತದೆ. ಕಣಗಾಲ್ ಟ್ರೆಂಡ್‌ನ ಕಥೆಗಳಲ್ಲಿ ಹೆಣ್ಣು ಗಂಡಿನ ಬಗ್ಗೆ ಒಂದು ಅಸಹನೆ, ಕನಿಷ್ಠ ಪಕ್ಷ ಅಸಮಧಾನವನ್ನಾದರೂ ತಳೆಯುವ ಮೂಲಕವೇ ಬೆಳೆಯುತ್ತಾಳೆ. ಒಂದನ್ನು ಕಳೆದುಕೊಳ್ಳದೆ ಮತ್ತೊಂದನ್ನು ಪಡೆಯಲು ಆಗುವುದಿಲ್ಲ. ಆದರೆ ಇಲ್ಲಿ ಹಾಗಲ್ಲ. ಬೇಕಾದ್ದೆಲ್ಲವನ್ನೂ ಪಡೆಯಲು ಆಗುತ್ತದೆ. ಆದರೆ ಬೇರೆ ಬೇರೆ ಸಂಗತಿಗಳನ್ನು ಬೇರೆ ಬೇರೆ ಸಂಗತಿಗಳಾಗಿಯೇ ಮಾನಿಟರ್ ಮಾಡಬೇಕು ಅಷ್ಟೆ. ಆಗ ಅಲ್ಲಿ ಗಂಡಿನ ಬಗ್ಗೆಯೇ ಅಸಮಧಾನ ತಳೆಯುವುದು ಬಿಡಿ, ಹೀರೋನ ಬಗ್ಗೆಯೂ ಅಸಮಧಾನದ ಅಗತ್ಯ ಇರುವುದಿಲ್ಲ. ಕಣಗಾಲ್ ಟ್ರೆಂಡ್‌ನಲ್ಲಿ ‘ಅಸಮಧಾನ’ ದ ಸ್ಥಾನದಲ್ಲಿ ಇಲ್ಲಿ ‘ಮೆಚ್ಯುರಿಟಿ’ ಬಂದು ನಿಲ್ಲುತ್ತದೆ.

ಮಹಾ ಸಿಡುಕ ರಿಟಾಯರ್ಡ್ ಪ್ರೊಫೆಸರ್ ನಡೆಯುವ ಶೈಲಿಯೇ ನಗು ತರಿಸುತ್ತದೆ. ಹಳ್ಳಿ ಮೇಷ್ಟ್ರ ವರ್ತನೆಯಲ್ಲೆ ಹುಟ್ಟುವ ಹಾಸ್ಯ, ಅಯ್ಯಂಗಾರಿ ನಾಮದ ಪ್ರೊಫೆಸರ್ ಎಡೆಬಿಡದೆ ಮಕ್ಕಳ ಕಾರ್ಟೂನ್ ಸಿನೆಮ ವೀಕ್ಷಿಸುವುದು- ಇದೆಲ್ಲ ಸೂಪರ್ಬ್ ಹಾಸ್ಯವನ್ನು ಸೃಷ್ಟಿಸುತ್ತವೆ. ಡಬ್ಬಲ್ ಮೀನಿಂಗ್ ಸಂಭಾಷಣೆ, ಮೇಷ್ಟ್ರು, ಪೊಲೀಸ್, ಪ್ರಾಧ್ಯಾಪಕ ವೃತ್ತಿಗಳನ್ನೆಲ್ಲ ಅಪಮಾನಿಸುವುದನ್ನೆ ಜೋಕ್ ಆಗಿ ಕಾಣಿಸುವ ಸಿನೆಮಗಳಿಗಿಂತ ಬೇರೆಯೇ ಆಗಿ ನಿಲ್ಲುವ ಹಾಸ್ಯ ಪ್ರಜ್ಞೆ, ಸಮೃದ್ಧವಾದ ಕುಟುಂಬ ಜೀವನದ ಸಂಬಂಧದ ಎಳೆಗಳು ಸಿನಿಮಾವನ್ನು ಶ್ರೇಷ್ಠ ಕಲೆಯಾಗಿ ರೂಪಿಸಿದೆ.

ರೈಲಿನಲ್ಲಿ ಹೀರೋ,”ಅದು ನಾನೇ ಅಲ್ವ” ಎಂದು ಕೇಳಿದಾಗ ಹೀರೋಯಿನ್,”ಇರಬಹುದು” ಎಂದಲ್ಲಿಗೆ ಸಿನೆಮಾ ಮುಗಿಯಿತು.‌ ಆಮೇಲೆ ರೈಲು ಹೋಗುತ್ತಿರುವುದು ಕಾಣಿಸುತ್ತದೆ ಅಷ್ಟೆ. ರೈಲಿನ ಬಹುದೂರದ ತನಕದ ಚಲನೆಯು ಅವರಿಬ್ಬರ ಬದುಕಿನ ಯಾನ ಒಟ್ಟಾಗಿ ಮುಂದುವರಿಯುವುದನ್ನು ಧ್ವನ್ಯಾರ್ಥದಲ್ಲಿ ಬಹಳ ಪವರ್‌ಫುಲ್ ಆಗಿ ಹೇಳುತ್ತದೆ.


  • ಅರವಿಂದ ಚೊಕ್ಕಾಡಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW