” ಜಾತ್ರಿ” ಕೃತಿ ಪರಿಚಯ : ಮಲ್ಲಿಕಾರ್ಜುನ ಶೆಲ್ಲಿಕೇರಿ

ಸ್ವಾತಂತ್ರ್ಯ ಪೂರ್ವದ ಮತ್ತು ಸ್ವಾತಂತ್ರ್ಯೋತ್ತರದ ವಿಶಿಷ್ಟ ಘಟನೆಗಳನ್ನು ಧಾರವಾಡ ಸುತ್ತಮುತ್ತಲಿನ ಗ್ರಾಮ್ಯ ಭಾಷೆಯ ಸೊಗಡಿನಲ್ಲಿ ತಮ್ಮ ಎಂಬತ್ಮೂರನೇ ವಯಸ್ಸಿನಲ್ಲಿ ” ಜಾತ್ರಿ” ಹೆಸರಿನಲ್ಲಿ ಕಾದಂಬರಿಯೊಂದನ್ನು ಪ್ರಬುದ್ಧವಾಗಿ ಕಟ್ಟಿ ಕೊಟ್ಟಿದ್ದಾರೆ ಹಿರಿಯ ಕವಿಗಳು, ಅನುವಾದಕರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದಂಥ ಪ್ರೋ. ಧರಣೇಂದ್ರ ಕುರಕುರಿಯವರು. ಈ ಕೃತಿಯ ಕುರಿತು ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕಾದಂಬರಿಯು ಮೂರು ಭಾಗಗಳಲ್ಲಿ ಚೆಲ್ಲುವರಿದಿದೆ. ಓದುತ್ತಾ ಹೋದಂತೆ ಬ್ರಿಟಿಷ್ ಆಡಳಿತದ ಕಾಲಘಟ್ಟದಲ್ಲಿ ನಡೆಯುವ ಅನೇಕ ವಿದ್ಯಮಾನಗಳು, ಅವರಿಗೆ ಬೆಂಬಲ ನೀಡುವ ತರಹೇವಾರಿ ವ್ಯಕ್ತಿಗಳ ಬದುಕಿನ ಚಿತ್ರಣ, ದಮಗಳ್ಳಿ, ಕೆರಿಕಲ್ಲು, ಹಳಮಂಡಿ ಮತ್ತು ವಡದೂರು ಎಂಬ ಕಾಲ್ಪನಿಕ ಗ್ರಾಮಗಳಲ್ಲಿ ನಡೆಯುವ ನೈಸರ್ಗಿಕ ಪ್ರಕೋಪಗಳು, ಅವುಗಳ ನಿವಾರಣೆಗಾಗಿ ಹಿಂದಿನಿಂದಲೂ ಪಾಲಿಸಿಕೊಂಡು ಬಂದಂಥ ಜಾನಪದೀಯ ರೀತಿ,ರಿವಾಜು, ಪದ್ಧತಿಗಳ ಆಚರಣೆಯಂತಹ ಗತ ಕಾಲದ ಗ್ರಾಮ್ಯ ಭಾರತದ ಶ್ರೀಮಂತ ಪರಂಪರೆಯನ್ನು ಕಟ್ಟಿಕೊಟ್ಟ ರೀತಿ ನಿಜಕ್ಕೂ ಅನನ್ಯ.

ತಮ್ಮ ಶ್ರೀಮಂತ ಅನುಭವದ ಹಿನ್ನೆಲೆಯಲ್ಲಿ ಕಾದಂಬರಿಕಾರರು ತುಂಬಾ ಸೂಕ್ಷ್ಮ ವಿಷಯಗಳನ್ನು ಓದುಗನ ಕಣ್ಣಿಗೆ ರಾಚುವಂತೆ ಚಿತ್ರಿಸಿದ ಪರಿ ಕಾದಂಬರಿಗೆ ತೂಕವನ್ನು ನೀಡಿದೆ. ಸವಕಲು ನಾಣ್ಯದಂತಿದ್ದ ಅನೇಕ ನುಡಿಗಟ್ಟುಗಳು, ಪದಗಳಿಗೆ ಸಾಣೆ ಹಿಡಿದು ಮತ್ತೇ ಚಲಾವಣೆಗೆ ತಂದು ಹೊಸ ತಲೆಮಾರಿನವರಿಗೆ ತಿಳಿಯವಂತೆ ಮಾಡಿರುವುದು ಕಾದಂಬರಿಕಾರರ ಹೆಚ್ಚುಗಾರಿಕೆ.

ಊರು, ಗ್ರಾಮವೆಂದರೆ ಒಳ್ಳೆಯವರು, ಕೆಟ್ಟವರಿರುವುದು ಸ್ವಾಭಾವಿಕವೇ. ಜೊತೆಗೆ ಒಳ್ಳೆಯತನದೊಂದಿಗೆ ಕೆಡುಕತನ ಇರುವುದು ಸಹಜವೇ. ಕಾದಂಬರಿಯಲ್ಲಿ ಪಾಂಡುರಂಗರಾಯ, ಸಂಗಪ್ಪ, ಗಣಪತಿ,ತಮ್ಮಣ್ಣ, ನಿಂಗಪ್ಪ, ಚೆಲುವಿ,ರಮಾಬಾಯಿಯಂತಹ ಪಾತ್ರಗಳು ಇವೆರಡನ್ನು ಪ್ರತಿನಿಧಿಸುವಂತಿವೆ.

ಜೊತೆಗೆ ಬ್ರಿಟಿಷರ ದರ್ಪ, ದೌಲತ್ತು, ದೌರ್ಬಲ್ಯ, ಶೋಕಿತನಗಳು ಕಾದಂಬರಿಯಲ್ಲಿ ಚಿತ್ರಿತಗೊಂಡು ಅವರ ಗುಣ ಸ್ವಭಾವಗಳು ದರ್ಶಿಸುವಂತೆ ಮಾಡುತ್ತವೆ. ಕಾದಂಬರಿಯಲ್ಲಿ ಭಾರತೀಯ ಗ್ರಾಮ್ಯ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಹಳ್ಳಿಯ ಜೀವನ, ಸಂಸ್ಕೃತಿ,ಪರಿಸರವನ್ನು ಚಿತ್ರಿಸುವಂತೆ ಪಲ್ಲಟಗೊಂಡ ಅವುಗಳ ಇನ್ನೊಂದು ಮುಖವನ್ನು ಕಾದಂಬರಿ ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಗ್ರಾಮ್ಯ ಭಾರತದಲ್ಲಿ ಅಸ್ತಿತ್ವದಲ್ಲಿ ವಿಶಿಷ್ಟ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅರಿಯಲು ಕಾದಂಬರಿ ಓದಬೇಕು. ಅಂತಹ ವಿಶಿಷ್ಟ ಅನುಭೂತಿ ಓದುಗರಿಗೆ ಖಂಡಿತ ಲಭಿಸುವುದು. ವಿಭಕ್ತ ಸಂಸ್ಕೃತಿ,ವಿಘಟಿತ ಸಮಾಜದ ವಿವಿಧ ಕಾಲಘಟ್ಟದ ವಿಶಿಷ್ಟ ಘಟನೆಗಳ ಮಹತ್ತರ ಕಾದಂಬರಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಪ್ರೋ. ಧರಣೇಂದ್ರ ಕುರಕುರಿ ಸರ್ ಗೆ ಅಭಿನಂದನೆಗಳು.


  • ಮಲ್ಲಿಕಾರ್ಜುನ ಶೆಲ್ಲಿಕೇರಿ – ಕೆ ಎ ಎಸ್ ಅಧಿಕಾರಿ, ಲೇಖಕರು, ಕವಿಗಳು, ಬಾಗಲಕೋಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading