ಸಸ್ಯಶಾಸ್ತ್ರದ ಧ್ರುವತಾರೆ ಬಿ.ಜಿ.ಎಲ್. ಸ್ವಾಮಿ ಅವರ ‘ಪ್ರಾಧ್ಯಾಪಕನ ಪೀಠದಲ್ಲಿ’ ಪುಸ್ತಕದ ಕುರಿತು ಮೋಹನ್ ಕುಮಾರ್ ಡಿ ಎನ್ ಅವರು ಬರೆದಿರುವ ಪರಿಚಯವನ್ನು ತಪ್ಪದೆ ಮುಂದೆ ಓದಿ…
ಪುಸ್ತಕ : ಪ್ರಾಧ್ಯಾಪಕನ ಪೀಠದಲ್ಲಿ
ಲೇಖಕರು : ಬಿ.ಜಿ.ಎಲ್. ಸ್ವಾಮಿ
ಪ್ರಕಾಶನ : ಐಬಿಎಚ್ ಪ್ರಕಾಶನ
ಪುಟಗಳು: 216
ಬೆಲೆ: 70/- (ಮೂಲ ಬೆಲೆ 15/-)
ಪಿಯೂಸಿ ವಾಣಿಜ್ಯಶಾಸ್ತ್ರ ಓದುವಾಗ ಮುಂದೆ ಪದವಿ ಮುಗಿಸಿ, ಎಂ ಕಾಂ ಓದಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಬೇಕೆನ್ನುವುದು ನನ್ನ ಬಹಳ ವರ್ಷಗಳ ಕನಸಾಗಿತ್ತು. ಐ ವಾಸ್ ಮಚ್ ಪ್ಯಾಷನೇಟ್ ಅಂಡ್ ಅಬ್ಸೆಸ್ಡ್ ಅಟ್ ಟೀಚಿಂಗ್. ಪಿಯೂಸಿ ಮುಗಿಯುವ ತನಕ ಅದನ್ನೇ ಧೇನಿಸುತ್ತಿದ್ದೆ. ಮುಂದೆ ಮೂರು ವರ್ಷಗಳ ಪದವಿ ಮುಗಿಸುವಷ್ಟರಲ್ಲಿ ನನ್ನ ಆಲೋಚನಾ ಕ್ರಮವೇ ದಿಕ್ಕುತಪ್ಪಿ, ಪ್ರಾಧ್ಯಾಪಕನಾಗಬೇಕೆನ್ನುವ ಮನದಿಂಗಿತವನ್ನು ಬದಿಗೊತ್ತಿ ಕನಿಷ್ಠ ಎರಡು ಸಾವಿರ ರೂಪಾಯಿ ಸಂಬಳ ಕೊಡುವ ಆಫೀಸಿನಲ್ಲಿ ಯಾವ ಕೆಲಸವಾದರೂ ಸಿಕ್ಕು ಜೀವನವನ್ನು ನಿರ್ವಹಿಸಿದರೆ ಸಾಕೆನ್ನುವ ಅಡ್ಡ ನಿರ್ಧಾರಕ್ಕೆ ಬಲಿಯಾದದ್ದು ನನ್ನ ಕೈಗೂಡದ ಕನಸುಗಳಲ್ಲಿ ಪ್ರಮುಖವಾದುದು. ಇದಕ್ಕೆ ಮನೆಯ ಪರಿಸ್ಥಿತಿಯ ಜೊತೆಗೆ ಸ್ವತಃ ನನಗೆ ಬೋಧಿಸುತ್ತಿದ್ದ ಪ್ರಾಧ್ಯಾಪಕರೂ ಕಾರಣರಾಗಿದ್ದರು. ಆಗ ಆರಂಭಿಕ ಹಂತದ ನಿರಾಸೆ ಉಂಟಾದರೂ ಮುಂದೆ ಕ್ರಮಿಸಬೇಕಾದ ಜೀವನದ ಹಾದಿಯ ಅನುಭವ ಅದಾಗಲೇ ತಕ್ಕಮಟ್ಟಿಗೆ ಅನುಭವಕ್ಕೆ ಬಂದಿತ್ತಾದ್ದರಿಂದ ಮಾರ್ಗ ಬದಳಿಸಿಕೊಳ್ಳುವ ಕುರಿತು ನಾನೂ ಯೋಚಿಸಿದ್ದೆ. ಬದುಕಿನ ಅನಿಶ್ಚಿತತೆ ಮತ್ತು ಆತಂಕದ ದಿನಗಳು ಕಳೆದು ಈಗಿನ ಸೆಟ್ಲ್ಡ್ ಆದ ಸ್ಥಿತಿಯಲ್ಲಿ ಯೋಚಿಸಿದಾಗ ಅಂದು ನನ್ನ ಪ್ರಾಧ್ಯಾಪಕರು ನನ್ನನ್ನು ವಿಮುಖನನ್ನಾಗಿಸಿದ ಸಂಗತಿ ಸಕಾರಣವೂ ಮತ್ತು ಸಮಂಜಸವೂ ಆಗಿತ್ತೆಂದು, ಒಂದೆರೆಡು ಬಾರಿಯಲ್ಲ, ಎಷ್ಟೋ ಬಾರಿ ಅನ್ನಿಸಿದೆ.
ಏಕೆಂದರೆ, ವಿಲಾಸಿ ಜೀವನವನ್ನು ಮೈಗೂಡಿಸಿಕೊಂಡು ಎಷ್ಟು ಬೇಕೋ ಅಷ್ಟನ್ನೇ ಬೋಧಿಸುತ್ತಿದ್ದ ಯುಜಿಸಿ ಶ್ರೇಣಿಯ ಪ್ರಾಧ್ಯಾಪಕರು ಒಂದೆಡೆಯಾದರೆ, ಪಠ್ಯ- ಪಠ್ಯೇತರ ಎರಡನ್ನೂ ಆಸಕ್ತಿಕರವಾಗಿ ಕೇವಲ ಮೂರ್ನಾಲ್ಕು ಸಾವಿರ ತಿಂಗಳ ಪಗಾರಕ್ಕೆ ನಿಯತ್ತಾಗಿ ಬೋಧಿಸುತ್ತಿದ್ದ ಗುತ್ತಿಗೆ ಪ್ರಾಧ್ಯಾಪಕರು ಇನ್ನೊಂದೆಡೆ. ನಮ್ಮ ಒಡನಾಟ ಮತ್ತು ಒಲವು ಏನಿದ್ದರೂ ಗುತ್ತಿಗೆ ಆಧಾರಿತ ಪ್ರಾಧ್ಯಾಪಕರ ಮೇಲೆಯೇ. ಅವರು ಕೇವಲ ಬೋಧಿಸುತ್ತಿರಲಿಲ್ಲ. ಮನನ ಮಾಡಿಸುತ್ತಿರಲಿಲ್ಲ. ಅಭ್ಯಾಸ ಮಾಡಿಸುತ್ತಿರಲಿಲ್ಲ. ಉರು ಹೊಡೆಸುವ, ನೆನಪಿಟ್ಟುಕೊಳ್ಳುವ ಕೌಶಲ್ಯವನ್ನು ಹೇಳಿಕೊಡಲಿಲ್ಲ. ಪಠ್ಯದ ಜೊತೆಗೆ ಜೀವನವನ್ನೂ ಬೋಧಿಸಿದರು. ಬದುಕು ತನ್ನದೇ ಆದ ಗತಿಯನ್ನು ನಿರ್ದೇಶಿಸಿಕೊಳ್ಳಲು, ಪಲ್ಲಟಗಳಿಗೆ ಒಳಗಾಗ್ಯೂ ಸ್ವತಂತ್ರವಾಗಿರಲು ನೇರವಾಗಿ ಅವರ ಅನುಭವ – ಅವಮಾನಗಳೇ ನನಗೆ ಕಾರಣವಾದವು. ಅವರು ತೆರದಿಟ್ಟ ಅವರ ಬದುಕಿನ ಕಹಿ ಸತ್ಯ, ಪ್ರಾಧ್ಯಾಪಕರಾಗಿ ಅನುಭವಿಸುತ್ತಿದ್ದ ನೋವು, ಸಿಗಬೇಕಿದ್ದರೂ ಅಲಭ್ಯವಾಗಿದ್ದ ಮಾನ್ಯತೆ ಮತ್ತು ಬದುಕಿನ ಭೀಕರ ವಾಸ್ತವ ನನ್ನೆದುರು ಅನಾವರಣಗೊಳ್ಳಲು ಆರಂಭಿಸಿತ್ತು. ಹೀಗಾಗಿ ನನ್ನ ಕನಸ್ಸಿನಿಂದ ನಿಧಾನವಾಗಿ ವಿಮುಖನಾದೆ. ಆದರೆ ಈ ಕ್ಷಣಕ್ಕೂ ಮನದ ಮೂಲೆಯಲ್ಲಿ ಪ್ರಾಧ್ಯಾಪಕನಾಗಬೇಕೆನ್ನುವ ನನ್ನ ಕನಸ್ಸು ತನ್ನ ಬಿಸುಪನ್ನು ಕಳೆದುಕೊಂಡಿಲ್ಲ.
ಏನನ್ನೋ ಹೇಳಲು ಹೊರಟವನು ಇನ್ನೆನನ್ನೋ ಹೇಳುತ್ತಿರುವೆನೆನಿಸಿದರೆ, ಕ್ಷಮಿಸಿ. ಬಿಜಿಎಲ್ ಸ್ವಾಮಿ ಅವರ “ಪ್ರಾಧ್ಯಾಪಕನ ಪೀಠದಲ್ಲಿ” ಓದುವಾಗ / ಓದಿದ ಬಳಿಕ ನನ್ನನ್ನು ಕಾಡಿದ್ದು: ನಾನೊಬ್ಬ ಒಬ್ಬ ಆದರ್ಶ ಶಿಕ್ಷಕನಾಗಬೇಕು, ಒಳ್ಳೆಯ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಬೇಕು, ಗುರು-ಶಿಷ್ಯ ಪರಂಪರೆ ಬೆಳೆಸಬೇಕು, ಸಶಕ್ತ ಐಡಿಯಾಲಜಿಗಳ ಅರಿವು ಮೂಡಿಸಬೇಕು, ಸಮಾಜದಲ್ಲಿ ಬದಲಾವಣೆ ತರಬೇಕು (ಅದು ಆಗುತ್ತಿತ್ತೋ ಇಲ್ಲವೋ ಬೇರೆಯ ಮಾತು) ಎನ್ನುವ ನನ್ನ ಹಳೆಯ ಬಯಕೆ ಮತ್ತು ನೆನಪುಗಳೇ. ಹೀಗಾಗಿ ಏನೇನೋ ಬಡಬಡಿಸಿಬಿಟ್ಟೆ.
ಬಿ.ಜಿ.ಎಲ್. ಸ್ವಾಮಿ
ಪ್ರಸ್ತುತ ಪುಸ್ತಕ ಬಿಜಿಎಲ್ ಸ್ವಾಮಿ ಅವರು ಪ್ರಾಧ್ಯಾಪಕನಾಗಿದ್ದಾಗ ಕಂಡುಂಡ ಅನುಭವಗಳ ಮೊತ್ತ. ಹಲವು ಪ್ರಸಂಗಗಳು ಮೋಜಿನವು, ರಸವತ್ತಾಗಿಯೂ ಇವೆಯಾದರೂ ಅದರ ಹಿಂದೆ ಸಮಾಜಕ್ಕೆ ನೈತಿಕ ಪಾಠವೂ ಇದೆ. ಹಾಗಂತ ಇದು ಕೇವಲ ಬೋಧನೆಯಷ್ಟೇ ಅಲ್ಲ. ಒಬ್ಬ ಪ್ರಾಧ್ಯಾಪಕನ ಜವಾಬ್ದಾರಿಗಳ ಜೊತೆಗೆ ಆಡಳಿತ ಮಂಡಳಿ, ಸರಕಾರ ಮತ್ತು ವಿದ್ಯಾರ್ಥಿಗಳ ನಡುವೆ ಇರಬೇಕಾದ ಅನ್ಯೋನ್ಯತೆಯನ್ನು ಹೇಳುತ್ತಲೇ ಹಾಗೆ ಪರಸ್ಪರ ಅನ್ಯೋನ್ಯತೆ ಸಾಧಿಸಲಾಗದ್ದಕ್ಕೆ ರಾಜಕೀಯ ಹಸ್ತಕ್ಷೇಪ, ವಶೀಲಿಬಾಜಿ, ಸ್ವಜನಪಕ್ಷಪಾತ, ಧಾರ್ಮಿಕತೆ ಹೇಗೆಲ್ಲಾ ಕಾರಣವಾಗಿದೆ? ದೇಶದ ಭಾವೀ ಪ್ರಜೆಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಪ್ರಗತಿಯನ್ನು ರೂಪಿಸಬೇಕಾದ ಕಾರ್ಯಬಾಹುಳ್ಯವಿರುವ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಹೇಗೆ ಕಾರ್ಯಸಿಂಧುವಲ್ಲದ ವ್ಯಕ್ತಿಗಳಿಂದಾಗಿ, ಅಕಾರಣಗಳಿಂದಾಗಿ ಮೂಲೆಗೀಡಾಗುತ್ತಿದೆ, ಸರಕಾರ ಮತ್ತು ಆಡಳಿತದಲ್ಲಿನ ಭ್ರಷ್ಟಾಚಾರ, ಅನೈತಿಕತೆ, ಅಸಮರ್ಪಕ ಶಿಕ್ಷಣ ನೀತಿ ಮತ್ತು ಅನುಷ್ಠಾನ ಕೂಡ ವಿದ್ಯಾರ್ಥಿಗಳಿಗೆ ಮಾರಕವಾಗಿದೆ ಮತ್ತು ಇದರ ಅನುಕೂಲಸಿಂಧುತ್ವದಿಂದಾಗಿ ಬೋಧಕ ಸಿಬ್ಬಂದಿಯವರು ಮಾತ್ರವಲ್ಲದೇ ಬೋಧಕೇತರ ಸಿಬ್ಬಂದಿಗಳು ಕೂಡ ಹಾದಿ ತಪ್ಪಿದ್ದಾರೆ ಎನ್ನುವುದನ್ನು ಹಲವು ದೃಷ್ಟಾಂತಗಳ ಮೂಲಕ ಸ್ವಾಮಿ ಅವರು ಹೇಳುತ್ತಾರೆ.
ಓದುವಾಗ ಹಲವು ಕಡೆ ಸ್ವಾಮಿಯವರ ಸಹಜ ಹಾಸ್ಯಪ್ರಜ್ಞೆ ಮೂಡಿದರೂ ಆಳದಲ್ಲಿ ಗಾಢ ವಿಷಾದ ಅಡಕವಾಗಿರುತ್ತದೆ. ವಿನೋದದ ಹಿಂದಿನ ತೀಕ್ಷ್ಣತೆ ಮತ್ತು ಸೂಕ್ಷ್ಮಗಳು ಸಮಾಜದ ಕೇವಲ ಅಂದಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಲ್ಲದೆ ಎಂದಿಗೂ ಸಲ್ಲುವ ಅವಶ್ಯಕತೆಗಳಲ್ಲೊಂದಾಗಿದೆ.
ನಮಸ್ಕಾರ.
- ಮೋಹನ್ ಕುಮಾರ್ ಡಿ ಎನ್