ಅದರಂತೆ ಹೆಣ್ಣಿಗೆ ದೊರೆತ ಯಥೇಚ್ಛ ಸ್ವಾತಂತ್ರ್ಯ, ಕೈಗೆಟುಕಿದ ಶಿಕ್ಷಣ, ಅಪರಿಮಿತ ಪ್ರೀತಿ ಇವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಹೆಣ್ಣಿನ ಶಕ್ತಿ ಆನೆಬಲದಂತೆ, ಅದು ದುರುಪಯೋಗಬಾರದು ಒಂದು ಚಿಂತನ ಲೇಖನ ಶೋಭಾ ನಾರಾಯಣ ಹೆಗಡೆ ಲೇಖನಿಯಲ್ಲಿ, ತಪ್ಪದೆ ಮುಂದೆ ಓದಿ…
ಹೀಗೇ ಮೊಬೈಲ್ ನೋಡ್ತಾ ಇರುವಾಗ, ಒಂದು ವೀಡಿಯೊ ಕಣ್ಣಿಗೆ ಬಿತ್ತು… ಅಚ್ಚರಿಯಿಂದ ನೋಡತೊಡಗಿದೆ…ಯಾವುದೋ ಮಾಧ್ಯಮದವರು,ಚುನಾವಣಾ ಸಮೀಕ್ಷೆ ನಡೆಸ್ತಾ ಇದ್ರು ಅಂತ ಕಾಣಿಸುತ್ತೆ…ಬೈಕಿನಲ್ಲಿ ಹೋಗ್ತಾ ಇರುವ ಅಪ್ಪ, ಮಗಳನ್ನು ಅಡ್ಡ ಹಾಕಿದರು..ಮಗಳನ್ನು ಕೇಳಿದ್ರು,ಓಟು ಹಾಕ್ತೀರಾ?ಮತದಾನದ ವಯಸ್ಸು ಆಗಿದೆಯಾ ಅಂತ ..ಅವಳು ಹೇಳಿದ್ಲು…ಹೂ ,ಈಸಲದ ಚುನಾವಣೆಯಲ್ಲಿ ಮತ ಚಲಾಯಿಸಲು ಹಕ್ಕಿದೆ ನನಗೆ… ಬಿಜೆಪಿ ಬಿಟ್ಟು, ಬೇರೆ ಯಾವ ಸರ್ಕಾರ ಬಂದ್ರೂ ಓಕೆ ಅಂದಳು..ಮಾಧ್ಯಮದವರು ಕೇಳಿದ್ರು,ಅದ್ಯಾಕೆ ಬಿಜೆಪಿ ಬಿಟ್ಟು, ಬೇರೆ ಸರಕಾರ ಬರಬೇಕು ನಿಮಗೆ. ಆ ಸರಕಾರದಿಂದ ನಿಮಗೆ ಏನು ತೊಂದರೆ ಆಗಿದೆ ಅಂತ..ಆ ಹೆಣ್ಣು ಮಗಳು ಕೊಟ್ಟ ಉತ್ತರ ಕೇಳಿ ದಂಗು ಬಡಿದುಹೋದೆ ಒಮ್ಮೆ… ಹೆಣ್ಣು ಮಕ್ಕಳು ಬೊಟ್ಟು ಇಡಬೇಕು, ಕೈಗೆ ಬಳೆ ಹಾಕಬೇಕು, ಹೀಗೇ ಬಟ್ಟೆ ಹಾಕಬೇಕು ಅಂತೆಲ್ಲ ಬಿಜೆಪಿ ಸರಕಾರ ಹೇಳುತ್ತೆ.ಅದಕ್ಕೆ ,ನಾವು ಹೇಗೆ ಬೇಕಾದರೂ ಇರ್ತೀವಿ..ಹೇಗೆ ಇದ್ರೂ ಸರಿ ಅನ್ನೋ ಸರಕಾರ ನಮಗೆ ಬೇಕು ಅಂತ.
ಉಫ್!! ಪಾವನ ಆಯಿತು ಜನ್ಮ ಅನ್ಕೊಂಡೆ..ಇದೇನು ರಾಜಕೀಯ ಬರಹ ಅಲ್ಲ… ಅಥವಾ ಪಕ್ಷ ಬೆಂಬಲಿಸುವ ಬರಹ ಕೂಡ ಅಲ್ಲ.. ಅವರವರ ಕಾರ್ಯ ಧಕ್ಷತೆ ಮೇರೆಗೆ ಜನರು ಸಪೋರ್ಟ್ ಮಾಡ್ತಾರೆ.ಯಾವುದಾದರೂ ಒಂದು ಸರಕಾರ ನಮ್ಮ ಆಳುತ್ತೆ ಎಲ್ಲ ನಿಜ.ಆದರೆ, ಇಂದಿನ ಹೆಣ್ಣು ಮಕ್ಕಳ ಮನೋಭಾವ ಹೇಗಿದೆ ಎಂಬುದನ್ನು, ಆ ಹುಡುಗಿಯ ಉತ್ತರದಿಂದ ಒಂದು ಕ್ಷಣ ನನ್ನ ಚಿಂತೆಗೀಡು ಮಾಡಿದ್ದು ಸುಳ್ಳಲ್ಲ.
ಫೋಟೋ ಕೃಪೆ : google
ಮೊದಲಿಗೆ “ಹಿಂದು”,”ಭಾರತೀಯ”, ಎಂಬ ಭಾವ ಮನೆಮನೆಗಳಲ್ಲಿ ಇರಬೇಕು… ಹೆಣ್ಣು ಮಕ್ಕಳು ಹೇಗಿರಬೇಕು?ಹೇಗಿರಬಾರದು ಎಂಬುದನ್ನು ಆ ಆ ಮನೆಗೆ ಸಂಬಂಧ ಪಟ್ಟ ಸುಸಂಸ್ಕೃತಿ ಕಲಿಸಿಕೊಡಬೇಕು…ಇಂದಿನ ಕೆಲ ಹೆಣ್ಣು ಮಕ್ಕಳ ಅರೆ ಸಂಸ್ಕಾರ ನೋಡಿದಾಗ ,ಮನೆಮನೆಯ ಶಿಕ್ಷಣ ಎಷ್ಟು ಅಧಃಪತನಕ್ಕೆ ಇಳಿದಿರಬಹುದು ಎಂದು ಒಂದು ಕ್ಷಣ ಯೋಚಿಸಬೇಕಾಗಿದೆ..
ಒಂದು ಕಾಲದಲ್ಲಿ, ಹೆಣ್ಣು ಮಕ್ಕಳಿಗೆ ,ಅಮ್ಮ ಹೇಳಿದ್ದನ್ನೇ ಬಟ್ಟೆ ಧರಿಸುವ ಸ್ವಾತಂತ್ರ್ಯ ಮಾತ್ರ ಇತ್ತು.ಅಕಾಸ್ಮಾತ್ ಹೆಣ್ಣು ಮಕ್ಕಳೇ ಇಷ್ಟಪಟ್ಟು ಧರಿಸಿದರೂ , ಸಮಾಜದಲ್ಲಿ ಮುಜುಗರ ಆಗದಂತಹ ಧಿರಿಸನ್ನೇ ಹಿರಿಯರು ಆಯ್ಕೆ ಮಾಡಿಕೊಡುತ್ತಾ ಇದ್ದರು.
ಹೆಣ್ಣು ಬಳೆ ಹಾಕುವುದು, ಬೊಟ್ಟು ಇಡುವುದು, ಹೂ ಮುಡಿಯುವುದು ಸೌಂದರ್ಯ ವರ್ಧಕ ಹಾಗೂ ನಮ್ಮ ಸಂಸ್ಕೃತಿಯ ಪ್ರತೀಕ….. ನಾವು ಯಾವ ನೆಲದಲ್ಲಿ ಹುಟ್ಟಿರುವೆವೋ,ಆ ನೆಲದ ಸಂಸ್ಕೃತಿ ಆಘ್ರಾಣಿಸಿ,ಅನುಸರಿಸುವುದು ನಮ್ಮ ನಡೆನುಡಿಗಳಿಗೆ ರೂಢೀಗತವಾಗಬೇಕು.ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿ ಎಷ್ಟು ಪ್ರಭಾವ ಬೀರಿದೆ ಎಂದರೆ, ಒಬ್ಬ ವಿವಾಹಿತ ಹೆಣ್ಣು ಮಗಳಿಗೆ “ಕರಿಮಣಿ ಸರ” ,”ಕಾಲುಂಗುರ” ಕೂಡ ಭಾರ ಆಗುವಷ್ಟು… ಇನ್ನು ಮೊದಲಿನವರಂತೆ ವಿವಾಹಿತ ಮಹಿಳೆಯರು ಸೀರೆಯನ್ನೇ ಧರಿಸುವ ಕಟ್ಟು ಪಾಡೇನೂ ಈಗ ಇಲ್ಲ.. ಆದರೆ ಆ ಆ ವಯಸ್ಸಿಗೆ ತಕ್ಕಂತೆ ಬಟ್ಟೆ ಧರಿಸಿದರೆ ,ನಮ್ಮ ಸಂಸ್ಕೃತಿ ಉಸಿರಾಡೀತು ತುಸು ನೆಮ್ಮದಿಯಿಂದ…ಒಂದು ಮಗುವಿನ ತಾಯಿ,ಆದವಳು ತೊಡೆ ಕಾಣುವಂತೆ,ತೋಳು ಕಾಣುವಂತಹ ಧಿರಿಸು ಧರಿಸಿದರೆ,ಮುಂದೆ ಆ ತಾಯಿಯ ಮಕ್ಕಳು ಯಾವ ತರಹದ ಧಿರಿಸು ಧರಿಸಿಯಾರು?ನಮ್ಮ ಇಷ್ಟ, ನಮಗೆ ಹೇಗೆ ಬೇಕೋ ಹಾಗಿರ್ತೀವಿ ಎಂಬ ಉದ್ದಟತನದ ಮಾತಿಗೇನೂ ಬರವಿಲ್ಲ… ಹೆಣ್ಣು ಹೃದಯದಾಳದಿಂದ ಪುರುಷನಷ್ಟು ಸ್ಟ್ರಾಂಗ್ ಆಗಬೇಕೇ ವಿನಃ…ಪಾಶ್ಚಿಮಾತ್ಯದ ಬೆನ್ನು ಹತ್ತಿ ,ಬಿಚ್ಚಮ್ಮಗಳಾಗಿ ಮಾನ ಹರಾಜು ಹಾಕಿಕೊಳ್ಳುವುದರಿಂದಲ್ಲ. .ನೆನಪಿರಲಿ…ಕಿತ್ತೂರು ರಾಣಿ ಚೆನ್ನಮ್ಮ,ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಯಂತಹ ವೀರ ರಮಣಿಯರು ಪುರುಷರಿಗಿಂತಲೂ ಒಂದು ಕೈ ಮೇಲೆ, ತಮ್ಮ ಪೌರುಷವ ಮೆರೆಯುತ್ತಾ ,ಶತ್ರುಗಳ ಸದೆ ಬಡಿದದ್ದು ತಾವುಟ್ಟ ಸೀರೆಯಿಂದ ವೀರ ಕಚ್ಚೆ ಹಾಕಿಯೇ ಎನ್ನುವದನ್ನು ನಾವು ಮರೆಯಬಾರದು… ಸಂಸ್ಕೃತಿಗೆ ತಕ್ಕಂತೆ ನಮ್ಮ ಆಚಾರ ವಿಚಾರ ಧಾರೆ ಇದ್ದರೆ ಅದೇ ಒಂದು ಚಂದ .ಸುಧಾರಣೆ ಬೇಕು. ಬೇಡ ಎಂದಲ್ಲ.. ಆದರೆ ಅತೀ ವಿಕೃತಿ ಮೆರೆಯುವಂತಹ ಸುಧಾರಣೆ ಶೋಭೆ ತರದು….ಕೆಲಸಗಳಲ್ಲಿ, ಶೈಕ್ಷಣಿಕವಾಗಿ,ನಾನಾ ಕ್ಷೇತ್ರಗಳಲ್ಲಿ ಪುರುಷನಷ್ಟೇ ತನ್ನ ಚಾಣಾಕ್ಷತನದಿಂದ ತನ್ನ ಚಾಪು ಒತ್ತಬಹುದು ಹೆಣ್ಣು.. ಆದರೆ ಆ ಬಗ್ಗೆ ಯೋಚಿಸುವಷ್ಟು ವ್ಯವಧಾನ ,ಇಂದಿನ ಬಹುತೇಕ ಹೆಣ್ಣು ಮಕ್ಕಳಿಗೆ ಇಲ್ಲ ಎಂಬುದು ಖೇದಕರ…
ಎಷ್ಟೇ ಸ್ಟ್ರಾಂಗ್ ಇದ್ದರೂ,ಗಂಡಿನಂತೆ ,ಹೆಣ್ಣು ಆಗಲಾರಳು ಖಂಡಿತ ಎಂದಿಗೂ ದೈಹಿಕವಾಗಿ….. ಗಂಡು, ರಾತ್ರಿ ಯಾವುದೋ ಒಂದು ಬಸ್ ಸ್ಟ್ಯಾಂಡಿನಲ್ಲೂ ಮಲಗಿ ಬೆಳಗು ಮಾಡಬಹುದು.. ಆದರೆ ಒಬ್ಬ ಹೆಣ್ಣು ಮಗಳಿಂದ ಒಬ್ಬಳೇ,ನಿರ್ಜನ ಪ್ರದೇಶದಲ್ಲಿ ರಾತ್ರಿ ಕಳೆಯಲು ಸಾದ್ಯವಿಲ್ಲ.. ಕಾರಣ ಅವಳ ದೇಹ ರಚನೆ, ಸೂಕ್ಷ್ಮ ಮನೋಭಾವ.
ಫೋಟೋ ಕೃಪೆ : google
ಹಾಗಂತ ಅವಳು ಅಬಲೆ ಎಂದೇನೆಲ್ಲ. ಮನೋಬಲದಲ್ಲಿ ಗಂಡನ್ನೂ ಮೀರಿಸಬಲ್ಲಳು…ಆದರೆ ಹಿತಮಿತವಾಗಿ ಎಲ್ಲವನ್ನೂ ಬಳಸಿ ಬೆಳೆಯುವುದು ಜಾಣರ ಲಕ್ಷಣ…ಮುಳ್ಳಿನ ಮೇಲೆ ಬಟ್ಟೆ ಬಿದ್ದರೆ ಹರಿಯುವುದು ಬಟ್ಟೆಯೇ ಹೊರತೂ, ಮುಳ್ಳಲ್ಲ…ದೊರೆತ ಯಥೇಚ್ಛ ಸ್ವಾತಂತ್ರ್ಯ, ಕೈಗೆಟುಕಿದ ಶಿಕ್ಷಣ,ಅಪರಿಮಿತ ಪ್ರೀತಿ ಇವುಗಳನ್ನು ಚಂದ ರೀತಿಯಲ್ಲಿ ಉಪಯೋಗಿಸಿಕೊಂಡರೆ,ಹೆಣ್ಣು ಮಕ್ಕಳ ಶಕ್ತಿ ಆನೆಬಲದಂತೆ… ಗಂಡಿನಂತೆ ಸ್ಮೋಕ್, ಡ್ರಿಂಕ್ಸ್, ಅರೆಬರೆ ಬಟ್ಟೆಯಲ್ಲಿ ದೇಹ ಪ್ರದರ್ಶನ, ನಾವು ಕಲಿಯುವುದೇ ನಮ್ಮ ಸಂಸ್ಕೃತಿಯನ್ನು ಬೀದಿಯಲ್ಲಿ ಹರಾಜು ಹಾಕಲು , ಎಂಬಂತಹ ಮನಃಸ್ಥಿತಿಯ ಉಡಾಫೆತನ , ದಯವಿಟ್ಟು ಇಂದಿನ ಹೆಣ್ಣು ಮಕ್ಕಳಿಗೆ ತಲೆಗೇರಿದ ಈ ನಶೆ ಇಳಿಯಲಿ ಆದಷ್ಟು ಬೇಗ. ಕಲಿಕೆ ಅಥವಾ ಶಿಕ್ಷಣ ಚಂದದ ಬದುಕು ಕಟ್ಟಿ ಕೊಳ್ಳಲು…ಶೋಕಿ ಮಾಡಿ ಬದುಕನ್ನು ಮೂರಾಬಟ್ಟೆಯಾಗಿಸಿಕೊಳ್ಳಲಲ್ಲ…
ಹಿಂದಿನ ಕಾಲದಲ್ಲಿ, ಹೆಣ್ಣು ಭೋಗದ ವಸ್ತು ಎಂದಷ್ಟೇ ಸೀಮಿತವಾಗಿದ್ದ ಆ ಕಾಲದಲ್ಲಿ, ವರಧಕ್ಷಿಣೆಯ ಪಿಪಾಸಿಗೆ ಹೆಣ್ಣು ಜೀವದ ಮೇಲೆ ಸೀಮೆ ಎಣ್ಣೆ ಸುರಿದು ಸುಡುವ ಕರಾಳತೆಯ ಕಾಲವಿದ್ದರೂ,ಆ ಹೆಣ್ಣು ಜೀವ ಹೊಂದಿಕೊಂಡು, ಅನುಸರಿಸಿಕೊಂಡು ಹೋಗುತ್ತಿದ್ದಳು. ಕೊನೇ ಉಸಿರು ಇರುವ ತನಕ ಕಟ್ಟಿ ಕೊಂಡ ಒಬ್ಬನೇ ಗಂಡನ ಜೊತೆಯಲ್ಲಿ ಅನಿವಾರ್ಯತೆ ಕೂಡ ಇತ್ತು ಆಗ. ಅಷ್ಟು ಹಿಂಸಾತ್ಮಕ ವ್ಯಥೆಯಲ್ಲೂ ಅಂದು ವಿಚ್ಛೇದನ ಕಡಿಮೆ ಪ್ರಮಾಣದಲ್ಲಿ ಇತ್ತು. ಇಂದು, ಗಂಡೂ ಕೂಡ ಜಾಣ ತಿಳುವಳಿಕೆ ಹೊಂದಿದ್ದಲ್ಲದೇ, ಅಡುಗೆ ಮನೆಯಿಂದ, ಬಾತ್ರೂಂ ತನಕ ಹೆಂಡತಿಗೆ ಸಹಾಯ ಮಾಡುವ ಮನೋಭಾವ ತಳೆದಿದ್ದಾನೆ. ಇಬ್ಬರೂ ಸಮಾನರು ಎಂಬ ಸಮಾನತೆ. ಶಿಕ್ಷಣ, ತಿಳುವಳಿಕೆ ಮಟ್ಟ, ದುಡಿಮೆ ಯಾವುದರಲ್ಲೂ ಹಿಂದೆ ಇಲ್ಲ. ಆದರೆ ಹೊಂದಾಣಿಕೆ ಮಾತ್ರ ಸೊನ್ನೆ. ವಿಚ್ಛೇದನಗಳ ರಾಶಿ ಕೋರ್ಟಿನ ಕಟಕಟೆಯಲ್ಲಿ, ಏನೇ ಆಗಲಿ, ಹೇಳುತ್ತಾ ಹೋದರೆ ಮುಗಿಯದ ಕಥೆ ಇದು. ಸಂಸಾರ ಎಂಬ ಹೆಮ್ಮರಕ್ಕೆ ಹೆಣ್ಣು, ಬಳ್ಳಿಯಾಗೇ ಬಳುಕಿ ರೆಂಬೆ ಕೊಂಬೆಗಳು ಎಲ್ಲೆಡೆ ಹರಡದಂತೆ, ಕಟ್ಟು ಹಾಕಿ ಚಂದಗಾಣಿಸಿಕೊಳ್ಳಬೇಕು ತನ್ನ ಸುಸಂಸ್ಕೃತ ನಡೆಯೊಳಗೇ, ಸಹನೆಯ ಮೂರ್ತಿಯಾಗಿ..ಆದಷ್ಟೂ ಒಳ್ಳೆಯ ಮಾರ್ಗದಲ್ಲಿ ನಡೆದರೆ ಬದುಕು ಬಂಗಾರ. ಯಾವಾಗಲೂ,ಒಳ್ಳೆಯ ಫಸಲು ಪಡೆಯಲು, ಬಿತ್ತನೆಗೆ, ಉತ್ತಮ ಫಲಪ್ರದವಾದ ಭೂಮಿಯೇ ಬೇಕು..ಸಾವಯವ ಇರುವಷ್ಟು ಪುಣ್ಯ ಭೂಮಿ ಎನಿಸಿದರೆ ಮಾತ್ರ, ಉತ್ತಮ ಆರೋಗ್ಯ ಫಸಲು ದೊರೆಯುತ್ತದೆ. ಸಿಕ್ಕ ಸಿಕ್ಕ ರಾಸಾಯನಿಕ ಗೊಬ್ಬರ ಹಾಕಿ, ಹಾಳಾದ, ತನ್ನ ಫಲವತ್ತತೆ ಕಳೆದುಕೊಂಡ ಭೂಮಿಯಲ್ಲಿ,ಎಷ್ಟೇ ಉತ್ತಮ ಭೀಜ ಬಿತ್ತಿದರೂ, ಉತ್ತಮ ಫಸಲು ದೊರೆಯವುದು ಕನಸಿನ ಮಾತು. ಇಂದು ಏನೇ ಆಗಿರಲಿ,ಆದರೆ ಮುಂದೊಂದು ದಿನ ಅವರೂ ಮಗುವಿನ ತಾಯಾಗುವವರು.ಆಗಲೇಬೇಕು.. ನಮ್ಮ ಸುಸಂಸ್ಕೃತ ದೇಶಕ್ಕೆ ಏನು ಬಳುವಳಿ ಕೊಡುವರೋ ಬಿಡುವರೋ,ಆದರೆ ಒಬ್ಬ ಸತ್ಪ್ರಜೆಯನ್ನಾದರೂ ಕೊಡುವಂತ ಉದಾರ ತನದ ಸಂಸ್ಕೃತಿ ಅವರೊಳಗಿರಲಿ ಎಂಬ ಸದಾಶಯದ ಹಾರೈಕೆ…ಕೊನೆಯಲ್ಲಿ ಒಂದು ಮಾತು…ಹೆಣ್ಣಿನ ಜನುಮ ಶಾಪವಲ್ಲ..ಬದಲಿಗೆ ಒಂದು ವರ ಎನ್ನಬಹುದು…”ತೊಟ್ಟಿಲ ತೂಗುವ ಕೈ, ಜಗತ್ತನ್ನೇ ಆಳಬಲ್ಲದು”..ಎನ್ನುವ ಸೂಕ್ತಿ ,ಕೇವಲ ಸೂಕ್ತಿಯಂತಿರದೇ ಪ್ರಚಲಿತವಾಗಿ,ಅನೇಕ ವೀರವನಿತೆಯರು ಮಾಡಿ ತೋರಿಸಿದ್ದಾರೆ ಕೂಡ… ಅದೇ ಬಹುತೇಕ ಇಂದಿನ ಕೈ, ಈಗ ದುಶ್ಚಟಗಳಿಗೆ ಬಲಿಯಾಗೋ,ನಶೆಗೆ ಈಡಾಗೋ ,ಇಲ್ಲ ಶೋಕಿಗೆ ಮಾರು ಹೋಗೋ,ತನ್ನ ಬದುಕನ್ನು ,ಹಾಳು ಮಾಡಿಕೊಳ್ಳುವುದಲ್ಲದೇ,ತನ್ನ ಮುಂದಿನ ಪೀಳಿಗೆಯನ್ನು ದುರ್ಬಲ ಪೀಳಿಗೆಯನ್ನಾಗಿ ,ಸಮಾಜಕ್ಕೆ ಬಳುವಳಿ ನೀಡಲು ಹೊರಟಿರೋದು ಮಾತ್ರ ವಿಷಾದನೀಯ.
- ಶೋಭಾ ನಾರಾಯಣ ಹೆಗಡೆ ಶಿರಸಿ.