ಭಾವನೆಗಳ ಲೋಕದಲ್ಲಿ ಪೆಂಗ್ವಿನ್‌ನ ಅಸ್ತಿತ್ವದ ಹುಡುಕಾಟ

ಅಂಟಾರ್ಕ್ಟಿಕಾದ ಕೊರೆಯುವ ಚಳಿಯಲ್ಲಿ, ತನ್ನ ಗುಂಪನ್ನು ತೊರೆದು ಏಕಾಂಗಿಯಾಗಿ ಹೆಜ್ಜೆ ಹಾಕುತ್ತಿರುವ ಒಂದು ಪೆಂಗ್ವಿನ್‌ನ ದೃಶ್ಯ.ಸೋಶಿಯಲ್ ಮೀಡಿಯಾದ ವಾಲ್‌ಗಳಲ್ಲಿ ಹೆಚ್ಚು ವೈರಲ್ ಆಗಿದೆ. ದೇವಿಕಾ ಎಸ್ ರಾಜ್ ಈ ಕುರಿತು ಏನು ಹೇಳುತ್ತಾರೆ ತಪ್ಪದೆ ಮುಂದೆ ಓದಿ…

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದ ವಾಲ್‌ಗಳ ಮೇಲೆ ಅತೀವವಾಗಿ ಚರ್ಚೆಯಾಗುತ್ತಿರುವ ಈ ಬಿಳಿ ಮೌನದ ಚಿತ್ರ. ಸ್ಕ್ರಾಲ್ ಮಾಡುತ್ತಿದ್ದ ಕಣ್ಣುಗಳು ಒಂದು ಕ್ಷಣ ಸ್ತಬ್ಧವಾಗಿ ಆ ದೃಶ್ಯವನ್ನೇ ದಿಟ್ಟಿಸುತ್ತಿವೆ. ಅದು ಅಂಟಾರ್ಕ್ಟಿಕಾದ ಕೊರೆಯುವ ಚಳಿಯಲ್ಲಿ, ತನ್ನ ಗುಂಪನ್ನು ತೊರೆದು, ಎತ್ತರದ ಹಿಮ ಪರ್ವತಗಳ ಕಡೆಗೆ ಏಕಾಂಗಿಯಾಗಿ ಹೆಜ್ಜೆ ಹಾಕುತ್ತಿರುವ ಒಂದು ಪೆಂಗ್ವಿನ್‌ನ ದೃಶ್ಯ. ವಿಜ್ಞಾನದ ದೃಷ್ಟಿಯಲ್ಲಿ ಇದು ಹಾದಿ ತಪ್ಪಿದ ಹಕ್ಕಿಯ ಪಯಣವಿರಬಹುದು, ಆದರೆ ಭಾವನೆಗಳ ಲೋಕದಲ್ಲಿ ಇದು ಅಸ್ತಿತ್ವದ ಹುಡುಕಾಟದ ಮಹಾಯಾನ, ಒಬ್ಬಂಟಿ ಹೆಜ್ಜೆಯ ಆರ್ತನಾದ.

ನೆಟ್ಟಿಗರು ಈ ಚಿತ್ರವನ್ನು ನೋಡಿ ಮರುಗುತ್ತಿದ್ದಾರೆ, ಚರ್ಚಿಸುತ್ತಿದ್ದಾರೆ. ಯಾಕೆಂದರೆ, ಆ ಪೆಂಗ್ವಿನ್‌ನ ನಡೆಯುವ ಹಠದಲ್ಲಿ ನಮಗೆ ನಮ್ಮದೇ ಅಂತರಂಗದ ಪ್ರತಿಬಿಂಬ ಕಾಣಿಸುತ್ತಿದೆ. ಲಕ್ಷಾಂತರ ಫಾಲೋವರ್ಸ್, ಸಾವಿರಾರು ಲೈಕುಗಳ ನಡುವೆಯೂ ಮನುಷ್ಯ ಯಾಕೆ ಇಷ್ಟೊಂದು ಒಬ್ಬಂಟಿಯಾಗುತ್ತಿದ್ದಾನೆ? ತುಂಬಿದ ಸಂಸಾರದ ನಡುವೆಯೂ ಯಾವುದೋ ನಿಗೂಢ
ಶೂನ್ಯ ಯಾಕೆ ಕಾಡುತ್ತಿದೆ? ಈ ಪೆಂಗ್ವಿನ್ ಕೇವಲ ಹಿಮದ ಬೆಟ್ಟಕ್ಕೆ ಹೋಗುತ್ತಿಲ್ಲ; ಅದು ನಮ್ಮೆಲ್ಲರ ಒಳಗಿರುವ ವಿಷಾದದ ಕಣಿವೆಗೆ ಹೋಗುತ್ತಿದೆ…”

ಆ ದೃಶ್ಯವನ್ನು ಒಮ್ಮೆ ನೋಡಿ. ಕಣ್ಣೆತ್ತಿ ಆ ಬಿಳಿಯ ಮೌನವನ್ನು ದಿಟ್ಟಿಸಿ. ಸುತ್ತಲೂ ಅಕ್ಷರಶಃ ಶೂನ್ಯ. ಕಾಲನ್ನು ಕೊರೆಯುವ ಮೈನಸ್ ಡಿಗ್ರಿ ಚಳಿ, ಎತ್ತ ನೋಡಿದರೂ ಹರಡಿಕೊಂಡಿರುವ ಮಂಜಿನ ರಾಶಿ. ಆ ಗುಂಪಿನಿಂದ ಹೊರಬಂದು, ಯಾರ ಹಂಗೂ ಇಲ್ಲದೆ, ಹಿಮ ಪರ್ವತಗಳ ಕಡೆಗೆ ಮುಖ ಮಾಡಿ ನಿಧಾನವಾಗಿ ಹೆಜ್ಜೆ ಹಾಕುತ್ತಿರುವ ಈ ಪೆಂಗ್ವಿನ್… ಇದೊಂದು ಬರೀ ಹಕ್ಕಿಯಲ್ಲ, ಇದೊಂದು ಚಲಿಸುವ ವಿಷಾದ.

ಇದು ಸುಮಾರು 20 ವರ್ಷಗಳ ಹಳೆಯ ದೃಶ್ಯ ಅಂತಾರೆ. ವರ್ನರ್ ಹರ್ಜೋಗ್ ಅನ್ನೋ ಜರ್ಮನ್ ಫಿಲ್ಮ್ ಮೇಕರ್ ತನ್ನ ‘ಎನ್ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್’ ಸಿನಿಮಾದಲ್ಲಿ ಇದನ್ನು ತೋರಿಸಿದಾಗ ಇಡೀ ಜಗತ್ತೇ ಮೌನವಾಗಿತ್ತು. ಈಗ 2026ರ ಹೊಸ್ತಿಲಲ್ಲಿ ನಾವಿದ್ದೇವೆ. ಆದರೂ ಈ ಚಿತ್ರ ಮತ್ತೆ ಮತ್ತೆ ವೈರಲ್ ಆಗುತ್ತಿದೆ ಅಂದರೆ, ಮನುಷ್ಯನ ಒಳಗೂ ಇಂಥದ್ದೇ ಒಂದು ಒಂಟಿತನ ಸುನಾಮಿಯಂತೆ ಅಪ್ಪಳಿಸುತ್ತಿದೆ ಎಂದೇ ಅರ್ಥ.

ಫೋಟೋ ಕೃಪೆ : ಗೂಗಲ್

ಆ ಪೆಂಗ್ವಿನ್ ಎಲ್ಲಿಗೆ ಹೋಗುತ್ತಿದೆ? ಆ ಪರ್ವತಗಳ ಆಚೆ ಬದುಕಿಲ್ಲ ಅನ್ನೋದು ಅದಕ್ಕೆ ಗೊತ್ತು. ಅಲ್ಲಿ ಹೋದರೆ ಸಾವು ಖಚಿತ ಅನ್ನೋದು ಅದಕ್ಕೂ ಅರ್ಥವಾಗುತ್ತದೆ. ಆದರೂ ಅದು ಗುಂಪಿಗೆ ಮರಳುತ್ತಿಲ್ಲ. ಅಕ್ಕಪಕ್ಕದವರು ಕರೆಯುತ್ತಿಲ್ಲ. ಅದೊಂದು ಮೊಂಡುತನದ ನಡಿಗೆ. ನಮ್ಮ ಬದುಕೂ ಹೀಗೆಯೇ ಅಲ್ಲವೇ?

ಬದುಕಿನ ಈ ಅನಿವಾರ್ಯ ಪಯಣದಲ್ಲಿ ಮನುಷ್ಯನ ಜೀವನವನ್ನೂ ಈ ದೃಶ್ಯಕ್ಕೆ ಹೋಲಿಸಿ ನೋಡಿ. ನಾವು ಅದೆಷ್ಟೋ ಬಾರಿ ಲಕ್ಷಾಂತರ ಜನರ ನಡುವೆ ಇದ್ದರೂ, ಅಕ್ಷರಶಃ ಒಬ್ಬಂಟಿಯಾಗಿರುತ್ತೇವೆ. ಮಾರುಕಟ್ಟೆಯ ಗದ್ದಲದಲ್ಲೂ ಮನಸ್ಸು ಯಾವುದೋ ಶೂನ್ಯವನ್ನು ಅರಸುತ್ತಿರುತ್ತದೆ.

ಒಂದು ಹೂವಿನ ಕಥೆಯನ್ನೇ ತಗೊಳ್ಳಿ. ಮುಂಜಾನೆ ಇಬ್ಬನಿಯ ಹನಿಗಳ ಜೊತೆ ನಗುನಗುತ್ತಾ ಅರಳುವ ಹೂವು, ಸಂಜೆಯಾಗುವಷ್ಟರಲ್ಲಿ ಬಾಡಿ ಹೋಗುತ್ತದೆ. ಹೂವಿಗೆ ಗೊತ್ತು ತಾನು ಇಂದು ಸಂಜೆಯೇ ಮಣ್ಣು ಪಾಲಾಗುತ್ತೇನೆ ಎಂದು. ಆದರೂ ಅದು ಸುಗಂಧ ಚೆಲ್ಲುವುದನ್ನು ನಿಲ್ಲಿಸುವುದಿಲ್ಲ. ಮನುಷ್ಯನ ಸ್ಥಿತಿಯೂ ಅಷ್ಟೇ. ಮುಂದಿನ ಕ್ಷಣದಲ್ಲಿ ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಆದರೂ ನಾವು ನಾಳೆಗಳಿಗಾಗಿ ಕೋಟೆ ಕಟ್ಟುತ್ತೇವೆ. ನೂರಾರು ಕನಸುಗಳನ್ನು ಹೆಣೆಯುತ್ತೇವೆ.

ಆದರೆ, ಈ ಪೆಂಗ್ವಿನ್‌ನ ನಡಿಗೆಯಲ್ಲಿ ಒಂದು ನಿಗೂಢತೆ ಇದೆ. ಅದು ಗುರಿಯಿಲ್ಲದ ಪಯಣವಲ್ಲ, ಅದು ಬದುಕಿನ ಮೇಲಿನ ಜುಗುಪ್ಸೆಯೂ ಆಗಿರಲಿಕ್ಕಿಲ್ಲ. ಬಹುಶಃ ಅದು ‘ಸ್ವೀಕಾರ’. ಎಲ್ಲವನ್ನೂ ಬಿಟ್ಟು ನಡೆಯುವಾಗ ಸಿಗುವ ಆ ಶಾಂತಿಯನ್ನು ಅದು ಅರಸುತ್ತಿರಬಹುದು. ನಮಗೂ ಅಷ್ಟೇ, ಬದುಕಿನ ಜಂಜಾಟಗಳ ನಡುವೆ ಎಲ್ಲವನ್ನೂ ಮರೆತು ಎಲ್ಲೋ ದೂರದ ಬೆಟ್ಟದ ತುದಿಯಲ್ಲಿ ಕುಳಿತುಬಿಡಬೇಕು ಅನ್ನಿಸುವ ಕ್ಷಣಗಳು ನೂರಾರು ಬರುತ್ತವೆ. ಆದರೆ ನಾವು ಸಂಕೋಲೆಗಳಿಗೆ ಬದ್ಧರಾಗಿದ್ದೇವೆ.

ಈ ಚರ್ಚೆಯು ಅಂತರಂಗದ ಒಳಧ್ವನಿ ಮತ್ತು ಸಂಘರ್ಷ ವಿಷಯವೂ ಆಗಿದೆ. ನಿಮಗೆ ಗೊತ್ತಾ? ಆ ಪೆಂಗ್ವಿನ್ ತನ್ನ ಸಂಗಾತಿಯನ್ನು ಕಳೆದುಕೊಂಡಿರಬಹುದು ಅಥವಾ ಅದರ ಹಾರ್ಮೋನುಗಳಲ್ಲಿ ಏನೋ ವ್ಯತ್ಯಾಸವಾಗಿರಬಹುದು ಅಂತ ವಿಜ್ಞಾನಿಗಳು ಹೇಳ್ತಾರೆ. ಆದರೆ ಭಾವನೆಗಳ ಲೋಕದಲ್ಲಿ ಇದಕ್ಕೆ ಬೇರೆಯದೇ ಹೆಸರಿದೆ. ಅದನ್ನು ‘Existential Crisis’ ಅನ್ನಬಹುದೇ? ಅಥವಾ ಅತಿಯಾದ ವೈರಾಗ್ಯ ಅನ್ನಬಹುದೇ?

ಫೋಟೋ ಕೃಪೆ : ಗೂಗಲ್

ನಮ್ಮ ಸುತ್ತಲೂ ಇವತ್ತು ಸಾವಿರಾರು ಜನರಿದ್ದಾರೆ. ಫೇಸ್‌ಬುಕ್‌ನಲ್ಲಿ ಫ್ರೆಂಡ್ಸ್ ಇದ್ದಾರೆ, ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಇದ್ದಾರೆ. ಆದರೆ ರಾತ್ರಿ ಮನೆಗೆ ಬಂದು ಲೈಟ್ ಆಫ್ ಮಾಡಿ ಮಲಗಿದಾಗ ಕಾಡುವ ಆ ಮೌನವಿದೆಯಲ್ಲ, ಅದು ಈ ಅಂಟಾರ್ಕ್ಟಿಕಾದ ಹಿಮಗಾಳಿಗಿಂತಲೂ ತಣ್ಣಗಿರುತ್ತದೆ. ನಾವು ಸರಿ ದಾರಿಯಲ್ಲಿ ಹೋಗುತ್ತಿದ್ದೇವಾ? ತಪ್ಪು ದಾರಿಯಲ್ಲಿ ಹೋಗುತ್ತಿದ್ದೇವಾ? ಅನ್ನೋ ಅನುಮಾನ ಕಾಡದ ದಿನವಿಲ್ಲ. ಆದರೂ ಮನಸ್ಸಿನ ಒಳಗಿನ ಯಾವುದೋ ಒಂದು ಅದೃಶ್ಯ ಶಕ್ತಿ ನಮ್ಮನ್ನು ಮುಂದೆ ತಳ್ಳುತ್ತಿರುತ್ತದೆ.

ಹಠವೋ? – ಗೆದ್ದು ತೋರಿಸಲೇಬೇಕು ಎಂಬ ಹಠ.
ಬೇಸರವೋ? – ಸಾಕಪ್ಪಾ ಈ ಬದುಕು ಎಂಬ ವಿರಕ್ತಿ.
ಅಥವಾ ಶಾಂತ ಸ್ವೀಕಾರವೋ? – ವಿಧಿಯ ಆಟಕ್ಕೆ ತಲೆಬಾಗಿ ನಡೆಯುವ ಶರಣಾಗತಿ.

ಇಲ್ಲಿ ಪೆಂಗ್ವಿನ್ ಮೌನವೇ ಉತ್ತರವಾಗಿ,ಅದು ಬೆಟ್ಟಗಳ ಸಾಲಿನಲ್ಲಿ ಮಾಯವಾಗಿ ಬಿಡುತ್ತದೆ. ಅದು ಸಾಯುತ್ತದೆ ಅಂತ ನಮಗೆ ಗೊತ್ತು, ಆದರೆ ಅದು ಸಾಯುವ ಕ್ಷಣದವರೆಗೂ ತನ್ನ ನಿರ್ಧಾರಕ್ಕೆ ಅಂಟಿಕೊಂಡಿರುತ್ತದೆ ನೋಡಿ, ಅಲ್ಲಿಗೆ ಅದರ ವ್ಯಕ್ತಿತ್ವ ಪೂರ್ಣಗೊಳ್ಳುತ್ತದೆ.

ಮನುಷ್ಯನ ಬದುಕು ಕೂಡ ಒಂದು ಪ್ರಶ್ನೆಯಾಗಿ ಉಳಿಯಬಾರದು. ಆದರೆ ದುರಂತವೆಂದರೆ, ನಾವೆಲ್ಲರೂ ಕೊನೆಗೆ ಒಂದು ಪ್ರಶ್ನೆಯಾಗಿಯೇ ಉಳಿದು ಹೋಗುತ್ತೇವೆ. ಹೂವು ಅರಳಿ ಉದುರುವಂತೆ, ಪೆಂಗ್ವಿನ್ ನಡೆದು ಮರೆಯಾಗುವಂತೆ, ನಾವೂ ಕೂಡ ಕಾಲದ ಪ್ರವಾಹದಲ್ಲಿ ಒಂದು ಸಣ್ಣ ಗುಳ್ಳೆಯಷ್ಟೇ.

ಜೀವನ ಅಂದ್ರೆ ಇಷ್ಟೇ… ಇಲ್ಲಿ ಯಾರೂ ಯಾರನ್ನೂ ಹಿಂಬಾಲಿಸುವುದಿಲ್ಲ. ಕೊನೆಯಲ್ಲಿ ನಿನ್ನ ದಾರಿಯನ್ನು ನೀನೇ ಕ್ರಮಿಸಬೇಕು. ಆ ದಾರಿ ಸುಗಮವಾಗಿರಲಿ ಅಥವಾ ಕಲ್ಲು ಮುಳ್ಳಿನಿಂದ ಕೂಡಿರಲಿ, ನಡೆಯುವುದನ್ನು ಮಾತ್ರ ನಿಲ್ಲಿಸಬೇಡ. ಆ ಪೆಂಗ್ವಿನ್‌ನಂತೆ, ನಿನ್ನೊಳಗಿನ ಸತ್ಯವನ್ನು ಹುಡುಕುತ್ತಾ ಹೋಗು. ಉತ್ತರ ಸಿಗಲಿ ಅಥವಾ ಸಿಗದೇ ಹೋಗಲಿ, ಆ ಪಯಣವೇ ಒಂದು ಸುಂದರ ಕವಿತೆಯಾಗಲಿ.

ನೆನಪಿಡಿ, ಸೋಲನ್ನೋ ಅಥವಾ ಸಾವನ್ನೋ ನಾವು ಹೇಗೆ ಸ್ವೀಕರಿಸುತ್ತೇವೆ ಅನ್ನೋದರ ಮೇಲೆ ನಮ್ಮ ಬದುಕಿನ ತೂಕ ನಿರ್ಧರಿಸಲ್ಪಡುತ್ತದೆ. ಆ ಪೆಂಗ್ವಿನ್ ಸೋತಿಲ್ಲ, ಅದು ತನ್ನದೇ ಆದ ಹಾದಿಯನ್ನು ಆಯ್ದುಕೊಂಡಿದೆ. ಆ ಧೈರ್ಯ ನಿಮಗಿರಲಿ.


  • ದೇವಿಕಾ ಎಸ್ ರಾಜ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW