ಪೀರ್ ಸಾಹೇಬ ಬೀರಬ್ಬಿ ಅವರು ನೌಕರಿಯಲ್ಲಿ ಇದ್ದುಕೊಂಡೇ ಸತತ ಪರಿಶ್ರಮದಿಂದ ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಸಾಹಿತ್ಯದ ಒಲವಿನ ಕುರಿತು ವಾಣಿ ಭಂಡಾರಿ ಅವರು ಬರೆದ ಒಂದು ಲೇಖನ, ತಪ್ಪದೆ ಮುಂದೆ ಓದಿ…
ಪೀರ್ ಸಾಹೇಬ್ ಬೀರಬ್ಬಿ ಇವರು ಮೂಲತಃ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದವರು.
ಚಿಕ್ಕಂದಿನಿಂದಲೇ ಶ್ರಮಜೀವಿ ತಮ್ಮ ಬಡತನ ಯಾವುದನ್ನೂ ಸಹ ಲೆಕ್ಕಿಸದೆ ಗುರಿಯತ್ತ ತಮ್ಮ ಚಿತ್ತ ಇರಿಸಿಕೊಂಡು ಛಲ ಬಿಡದೆ ತ್ರಿವಿಕ್ರಮನಂತೆ ಹಲವಾರು ತೊಂದರೆ ತೊಡಕುಗಳನ್ನು ಎದುರಿಸುತ್ತಲೇ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ಈಗ ಅದೆ ಜಿಲ್ಲೆಯ ಹಾರಕನಾಳು ಗ್ರಾಮದಲ್ಲಿ ಇದ್ದು, ಸದ್ಯ ವಿಜಯನಗರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸರ್ಕಾರಿ ನೌಕರರಾಗಿದ್ದಾರೆ.

ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಎನ್ನುತ್ತಾರೆ. ಆದರೆ ಇವರಿಗೆ ಹಿಂದೆ ಗುರು ಯಾರು ಇರದೆ ಇದ್ದರೂ ಅಚಲವಾದ ಗುರಿ ಇತ್ತು. ಸಾಕ್ಷತ್ ಗುರುವಂತೆ ನಿತ್ಯ ಪ್ರೋತ್ಸಾಹಿಸುವ ಅಮ್ಮನ ಅಕ್ಕರೆಯ ನುಡಿ ಬೆನ್ನು ತಟ್ಟಿ ಹುರಿದುಂಬಿಸುವ ತಾಯಿಯ ಶ್ರೀರಕ್ಷೆ ಇತ್ತು. ಅಷ್ಟಾಗಿ ಅಕ್ಷರ ಜ್ಞಾನದ ಸಂಪತ್ತನ್ನು ತನ್ನ ತಾಯಿ ಹೊಂದಿರದಿದ್ದರೂ ಕನ್ನಡ ಇಂಗ್ಲಿಷ್, ತೆಲಗು, ಉರ್ದು ಭಾಷೆಯನ್ನು ಸರಾಗವಾಗಿ ಮಾತಾಡಬಲ್ಲ ಕೌಶಲವನ್ನು ರೂಢಿಸಿಕೊಂಡಿದ್ದರು. ತನ್ನ ಮಗ ಎಂದು ಮನೆಯ ಮನೆತನದ ಮರ್ಯಾದೆ ತೆಗಿಯುವಂತವನಲ್ಲ ಎಂಬ ನಂಬಿಕೆಯಿಂದ ಚಿಕ್ಕಂದಿನಿಂದಲೂ ತನಗೆ ಎಷ್ಟೆ ಕಷ್ಟವಿದ್ದರೂ ಮಗನ ಓದಿಗೆ ನೆರಳಾಗಿ ನಿಂತರು.

ಉನ್ನತ ಶಿಕ್ಷಣದ ಕನಸನ್ನು ಹೊತ್ತ ಪೀರ್ ಸಾಹೇಬ ಬೀರಬ್ಬಿ ಅವರು ನೌಕರಿಯಲ್ಲಿ ಇದ್ದುಕೊಂಡೇ ಸತತ ಪರಿಶ್ರಮದಿಂದ ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ. ಎ. ರಾಜ್ಯಶಾಸ್ತ್ರ ವಿಷಯದಲ್ಲಿ ಅತ್ಯುನ್ನತ ಡಿಸ್ಟಿಂಕ್ಷನ್ ರ‌್ಯಾಂಕ್ ಪಡೆಯುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಇನ್ನೂ ಹೆಚ್ಚಿನ ವಿದ್ಯಾಭ್ಯಾಸದೊಂದಿಗೆ ಉನ್ನತ ಪದವಿ ಹಾಗೂ ನೌಕರಿಯ ಕನಸನ್ನು ಹೊಂದಿರುವ ಇವರು ಪ್ರವೃತ್ತಿಯಲ್ಲಿ ಸಾಹಿತಿಗಳೂ ಆಗಿದ್ದು, ತಮ್ಮ ಸ್ವಂತ ರಚನೆಯ ಕೆಲವು ಕವನ ಸಂಕಲನಗಳನ್ನು ಪ್ರಕಟಿಸಲು ಸಿದ್ಧಗೊಂಡು ಕಾಯುತ್ತಿದ್ದಾರೆ.
- ವಾಣಿ ಭಂಡಾರಿ
