ಪೋಸ್ಟ್ ಬಾಕ್ಸ್ ಗೆ ಉಣ್ಣೆಯ ಚಿತ್ತಾರದ ಕಿರೀಟ

ಸಮೀಪದ ಮಾರ್ಕೆಟ್ ಪಕ್ಕದ ರಸ್ತೆಯ ಬದಿಯಲ್ಲಿದ್ದ ಅಂಚೆ ಪೆಟ್ಟಿಗೆಗೆ ಉಣ್ಣೆಯ ಬಣ್ಣಬಣ್ಣದ ದಾರಗಳಿಂದ ಹೆಣೆದ ( knitted ) ಚಿತ್ತಾರದ ಕಿರೀಟ ತೊಡಿಸಿದ್ದು ಕಂಡೆ. ಇದೇನಪ್ಪಾ ಇವರು ಪೋಸ್ಟ್ ಬಾಕ್ಸಿಗೂ ಟೋಪಿ ಹಾಕಿದ್ದಾರಲ್ಲಾ….! ಅಂತ ಸೋಜಿಗವೆನಿಸಿತು. ಜೊತೆಗೆ, ಅದರ ಮೇಲೆ E II R ಎಂದು ನಮೂದಿಸಿತ್ತು. ನಮ್ಮಲ್ಲಾಗಿದ್ದರೇ ಅಲ್ಲೇ ಹತ್ತಿರ ಇದ್ದವರನ್ನು ಇದು ಏನು, ಏಕೆ ಎಂದೆಲ್ಲಾ ಕೇಳಬಹುದಿತ್ತು. ಇಲ್ಲಿ ಕೇಳಲು ಯಾರೂ ಜನರೇ ಇರಲಿಲ್ಲ, ಜನ ವಿರಳ ಪಟ್ಟಣ.

ಕುತೂಹಲ ತಾಳಲಾರದೇ, ಮನೆಗೆ ಬಂದೊಡನೇ ಗೂಗಲ್ ನೋಡಿದೆ. ಅನೇಕ ವಿಚಿತ್ರ ಮಾಹಿತಿಗಳು ಲಭಿಸಿದವು.

ಇಂಗ್ಲೆಂಡ್ ದೇಶದಲ್ಲಿ ಸಾoವಿಧಾನಿಕ ರಾಜಪ್ರಭುತ್ವ – Constitutional Monarchy ಇದ್ದು, ರಾಜ ಮನೆತನಕ್ಕೆ – ರಾಜ ಅಥವಾ ರಾಣಿಗೆ – ಯಾವುದೇ ವಿಶೇಷವಾದ ಶಾಸಕಾಂಗಿಕ ಅಥವಾ ಕಾರ್ಯಾoಗಿಕ ಅಧಿಕಾರ ಇಲ್ಲವಾದರೂ, ತಲತಲಾoತರದಿಂದ ಇವರು ಇಲ್ಲಿನ ಜನರ ಬದುಕಿನಲ್ಲಿ ಸಕ್ರಿಯ ಪಾತ್ರವಹಿಸುತ್ತಲೇ ಬಂದಿದ್ದಾರೆ. ಜನರೂ ಇವರೆಡೆಗೆ ಗೌರವದ ಹಾಗೂ ಭಾವನಾತ್ಮಕವಾದ ನಂಟು ಉಳಿಸಿಕೊಂಡಿದ್ದಾರೆ. ಇದಕ್ಕೆ,1863 ಅಸ್ತಿತ್ವಕ್ಕೆ ಬಂದ, ‘Royal Mail’ ಎಂದೇ ಕರೆಯಲ್ಪಡುವ ಇಲ್ಲಿನ ಪೋಸ್ಟ್ ಸೇವೆಯ ವ್ಯವಸ್ಥೆಯೂ ಸೇರಿದೆ.

ಫೋಟೋ ಕೃಪೆ : google

ಈಗಲೂ ಪೋಸ್ಟ್ ಬಾಕ್ಸ್ ಗಳ ಮೇಲೆ ಇರುವ ಅಂಕಿತ ಅಕ್ಷರಗಳ ಆಧಾರದ ಮೇಲೆ, ಅವು ಯಾವ ರಾಜ / ರಾಣಿಯ ಕಾಲದಲ್ಲಿ ಸ್ಥಾಪಿತವಾದವು ಎಂಬುದನ್ನೂ ಗುರುತಿಸಬಹುದು. ಉದಾಹರಣೆಗೆ :

G R ಎಂದಿದ್ದರೆ George 5th Regina – 1910 ರಿಂದ 1936 ರ ವರೆಗಿನ ಕಾಲದ್ದು ;
E II R ಎಂದಿದ್ದರೆ Elizabeth 2nd Regina – 1952 ರಿಂದ 2022 ರ ವರೆಗಿನ ಕಾಲದ್ದು.

ಹೀಗೆ ಇದರಲ್ಲಿ ರಾಜ ಮನೆತನದ ನಂಟು ಇನ್ನೂ ಉಳಿದುಕೊಂಡಿದೆ. ಇದು ಪ್ರಜಾಪ್ರಭುತ್ವಕ್ಕೆ ಬೇಡವಾದ, ರಾಜಪ್ರಭುತ್ವಪರ ಮನಃಸ್ಥಿತಿ / ಆಚರಣೆ ಎಂದು ನಮಗೆ ಅನಿಸಬಹುದಾದರೂ, ಒಂದು ದೇಶದ / ಸಮುದಾಯದ ಜನರ ನಂಬಿಕೆ, ನಂಟು, ಆಚರಣೆಗಳು ನಮ್ಮ ಈ ತರ್ಕಕ್ಕೆ ದಕ್ಕುವುದಿಲ್ಲ.

ಇನ್ನು Post Box Toppers ಎಂದು ಕರೆಯಲ್ಪಡುವ ಉಣ್ಣೆಯ ಕಿರೀಟಗಳನ್ನು ತೊಡಿಸುವ ಆಚರಣೆ ಮೊಟ್ಟ ಮೊದಲಿಗೆ 2012 ರ ಈಸ್ಟರ್ ( Easter ) ಹಬ್ಬದ ಸಮಯದಲ್ಲಿ ಪ್ರಾರಂಭವಾಯಿತಂತೆ. ನಂತರ ಇತರೇ ಹಬ್ಬದ ದಿನಗಳನ್ನೂ, ವಿಶೇಷ ಸಂದರ್ಭಗಳನ್ನೂ ಸ್ಮರಿಸುವ / ಗೌರವಿಸುವ / ಸಂಭ್ರಮಿಸುವ ಆಚರಣೆಯಾಗಿ ರೂಪುಗೊಂಡಿದೆಯಂತೆ. ವಿಕ್ಟೋರಿಯಾ ರಾಣಿಯ ಪಟ್ಟಾಭಿಷೇಕದ ನೆನಪಿಗೆ, ಈಸ್ಟರ್, ಕ್ರಿಸ್ಮಸ್ ಮುಂತಾದ ಹಬ್ಬಗಳ ಸಂಭ್ರಮಕ್ಕೆ, ಒಲಂಪಿಕ್ ಪಂದ್ಯದಲ್ಲಿ ಬ್ರಿಟಿಷ್ ಕ್ರೀಡಾಪಟುಗಳು ಚಿನ್ನದ ಪದಕ ಗೆದ್ದುದರ ಸಂಭ್ರಮಕ್ಕೆ, ಕೊರೋನಾ ಯೋಧರ – Corona Warriers ಗಳ ಗೌರವಾರ್ಥ, ರಾಣಿ ಎಲಿಜಬೆತ್ II ನಿಧನರಾದ ದಿನದ ಸ್ಮರಣೆಗೆ ಹಾಗೂ ಕೆಲವರು ತಮ್ಮ ವಯಕ್ತಿಕ ಸಂಭ್ರಮಕ್ಕೂ ಇಂಥಾ ಕಿರೀಟ ಹೆಣೆದು ಹತ್ತಿರದ ಪೋಸ್ಟ್ ಬಾಕ್ಸಿಗೆ ತೊಡಿಸುತ್ತಾರೆ.

ನನಗೆ ವಿಚಿತ್ರವೆನಿಸಿದ್ದು, ಇಲ್ಲಿ ಇತ್ತೀಚೆಗೆ ವಿಶ್ವ ಪುಸ್ತಕದ ದಿನಕ್ಕೂ ಜನ ಪೋಸ್ಟ್ ಬಾಕ್ಸ್ ಗಳಿಗೆ ಇಂಥಹಾ ಕಿರೀಟಗಳನ್ನು ತೊಡಿಸಿ ಸಂಭ್ರಮಿಸಿದರಂತೆ…! ಇದು ಇಷ್ಟಕ್ಕೇ ನಿಲ್ಲದೇ, ಪೋಸ್ಟ್ ಬಾಕ್ಸ್ ಕಿರೀಟಗಳ ಪ್ರದರ್ಶನಗಳನ್ನೂ ಇಲ್ಲಿಯ ಜನ ಹಮ್ಮಿಕೊಳ್ಳುತ್ತಾರೆ…! ಈಗ ಇದೊಂದು ಗೀಳಾಗಿ ಪರಿಣಮಿಸಿದ್ದು, BBC ಯವರು ಇದನ್ನು creative craze ಎಂದು ಕರೆದಿದ್ದಾರೆ.

ಇದಕ್ಕಿಂತಲೂ ವಿಚಿತ್ರವೆನಿಸಿದ್ದು, ಈ ಉಣ್ಣೆಯ ಕಿರೀಟಗಳನ್ನು ಹೆಣೆದು ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಹಾಕುವುದನ್ನು / ಪ್ರದರ್ಶಿಸುವುದನ್ನು “Yarn Bombing” ಎಂದೂ ಕರೆಯುತ್ತಾರೆ. ಇವರು ಇದರಲ್ಲಿ ಬಾಂಬಿನಂತಹುದೇನು ಕಂಡರೋ ಗೊತ್ತಿಲ್ಲ…! ಇದು ಇಲ್ಲಿ ಕಾನೂನು ಸಮ್ಮತವೂ ಅಲ್ಲವಂತೆ…! ಆದರೂ ಇವು ಬೇಡವೆಂದರೆ ತೆಗೆದು ಹಾಕುವುದು ಸುಲಭವಾದುದರಿಂದ, ಇವುಗಳಿಂದ ಪೋಸ್ಟ್ ಬಾಕ್ಸಿನಲ್ಲಿ ಪತ್ರ ಅಥವಾ ಪಾರ್ಸೆಲ್ ಹಾಕಲು ಯಾವುದೇ ಅಡಚಣೆಯಾಗುವುದಿಲ್ಲವಾದ್ದರಿಂದ ಹಾಗೂ ತೆಗೆದು ಹಾಕಿದಾಗ ಇವು biodegradable ತ್ಯಾಜ್ಯವಾಗುವುದರಿಂದ, ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲವಂತೆ ಹಾಗೂ ನಿಷೇಧಿಸಲು ಮುಂದಾಗಿಲ್ಲವಂತೆ. ಬದಲಿಗೆ ಇದೊಂದು street art – ರಸ್ತೆಯ ಕಲಾ ಪ್ರಕಾರ ಎಂದು ಪರಿಗಣಿಸಿ ತಟಸ್ತವಾಗಿದೆಯಂತೆ.

ಇವೆಲ್ಲಾ ಏನೇ ಇರಲಿ, ಇವು ನಮ್ಮಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿ ನಿಲ್ಲುವ, ಜನ ನಾಯಕರನ್ನು ವೈಭವೀಕರಿಸುವ, ಅನುವರ್ತಿಗಳು ‘build up’ ಕೊಡುವ ಪರಿಸರಮಾರಕ ಪಾಲಿ ವೀನೈಲ್ ಕ್ಲೋರೈಡ್ – poly venyl chloride – ಇರುವ ಫ್ಲೆಕ್ಸ್ ಬೋರ್ಡ್ ಗಳoತೆ ಅಪಾಯಕಾರಿಯಲ್ಲ.

ಒಟ್ಟಿನಲ್ಲಿ ಮನುಷ್ಯ ಸಂಭ್ರಮಿಸಲು ಅನ್ವೇಷಿಸುವ ಮಾರ್ಗಗಳು ಹಲವು ಹಾಗೂ ವೈವಿಧ್ಯಮಯ. ಕಂಡಷ್ಟೂ ಕಾಣುವುದುoಟು.


  • ರವೀಂದ್ರ ಕೆ. ಆರ್.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW