‘ಪ್ರಬಂಧಕಾರರಾಗಿ ಕಾರಂತರು’ ಕೃತಿ ಪರಿಚಯ

ವಿದ್ಯಾ ರಾಮಕೃಷ್ಣ ಅವರು ‘ಪ್ರಬಂಧಕಾರರಾಗಿ ಕಾರಂತರು’ ಕೃತಿಯಲ್ಲಿ ಲೇಖಕಿ ಮೊದಲ ಬಾರಿಗೆ ಕಾರಂತರ ಪ್ರಬಂಧಗಳನ್ನು ಸಮಗ್ರವಾಗಿ ಒಟ್ಟಿಗೆ ತಂದಿದ್ದಾರೆ. ಮತ್ತು ಅವುಗಳ ಮೌಲ್ಯ ನಿರ್ಣಯ ಮಾಡಿದ್ದಾರೆ. ಈ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಪ್ರಬಂಧಕಾರರಾಗಿ ಕಾರಂತರು
ಲೇಖಕರು : ವಿದ್ಯಾ ರಾಮಕೃಷ್ಣ
ಪ್ರಕಾಶನ : ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ

ಸಾಮಾನ್ಯವಾಗಿ ಕಾರಂತರ ಕಾದಂಬರಿಗಳ ಕುರಿತು ನಡೆದ ಚರ್ಚೆ ಅವರ ಉಳಿದ ಪ್ರಕಾರಗಳನ್ನು ಕುರಿತು ನಡೆದಿಲ್ಲ ಇದ್ದರೂ ಅವು ಬೆರಳೆಣಿಕೆಯಷ್ಟು ಎಂದು ಮುನ್ನುಡಿಯಲ್ಲಿ ಗೆಳೆಯರಾದ ಜನಾರ್ದನ ಭಟ್ ರು ಗುರುತಿಸಿರುವಂತೆ ಆ ಕೊರತೆಯನ್ನು ನೀಗಬಲ್ಲ ಕೃತಿಗಳಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಕಟಿಸಿದ ಈ ಕೃತಿ ಕೂಡ ಒಂದು ಎಂದು ಅದರ ಮಹತ್ವವನ್ನು ಸರಿಯಾಗಿ ಅವರು ನಿರ್ದೇಶಿಸಿದ್ದಾರೆ.

ಈ ಕೃತಿಯಲ್ಲಿ ಲೇಖಕಿ ಮೊದಲ ಬಾರಿಗೆ ಕಾರಂತರ ಪ್ರಬಂಧಗಳನ್ನು ಸಮಗ್ರವಾಗಿ ಒಟ್ಟಿಗೆ ತಂದು, ಹಂತ ಹಂತವಾಗಿ ಅವುಗಳ ಪರಿಶೀಲನೆ ನಡೆಸಿ, ಅವುಗಳ ಮೌಲ್ಯ ನಿರ್ಣಯ ಮಾಡಿದ್ದಾರೆ. ಅವುಗಳನ್ನು ಇಲ್ಲಿ ಮೂರು ಹಂತಗಳಲ್ಲಿ ಗುರುತಿಸಬಹುದು. ಮೊದಲ ಭಾಗದಲ್ಲಿ ಅವರ ಹರಿತವಾದ ವಿಡಂಬನೆಯ ಪ್ರಬಂಧಗಳು. ಹಳ್ಳಿಯ ಹತ್ತು ಸಮಸ್ತರು, ಚಿಕ್ಕ ದೊಡ್ಡವರು ,ಮೈಲಿಗಲ್ಲುಗಳೊಡನೆ ಮಾತುಕತೆಗಳು ಹಾಗೂ ಮೈಗಳ್ಳನ ದಿನಚರಿ . ಈ ಪ್ರಬಂಧಗಳಲ್ಲಿ ಅವರ ಹಾಸ್ಯಪ್ರಜ್ಞೆ, ವಿಡಂಬನೆಗಳು ಹಾಸುಹೊಕ್ಕಾಗಿವೆ. ಮನುಷ್ಯ ಸ್ವಭಾವದ ವೈಪರೀತ್ಯಗಳು ಇವುಗಳ ಪ್ರಧಾನ ವಸ್ತು. ಮೇಲ್ನೋಟಕ್ಕೆ ಜನರಲ್ಲಿ ಎದ್ದುಕಾಣುವ ವಿರೋಧಾಭಾಸಗಳು ಅವರ ಕಟು ಟೀಕೆಗೆ ಒಳಗಾಯಿತು. ಗ್ರಾಮೀಣ ಸಮಾಜದ ಮುಗ್ಧತೆಗೆ ಬದಲಿಗೆ ಅವರ ಕಪಟತನ ಕಾರಂತರ ಕೋಪಕ್ಕೆ ಗುರಿಯಾಗಿದೆ. ಇದು ಗ್ರಾಮದ ಜನರು ಮುಗ್ದರು ಎಂಬ ನಮ್ಮ ನಂಬಿಕೆಯನ್ನು ಬಯಲುಗೊಳಿಸುತ್ತವೆ.

ಎರಡನೇ ಹಂತದಲ್ಲಿ , ಬಾಳನ್ನು ಕುರಿತ ಅವರ ಗಂಭೀರ ಚಿಂತನೆಯನ್ನು ಒಳಗೊಂಡಿದೆ. ಅದು ಅವರ ಬಾಳ್ವೆಯೆ ಬೆಳಕು ಎನ್ನುವ ಪ್ರಸಿದ್ಧ ಕೃತಿಯಲ್ಲಿ ಅವರ ಚಿಂತನೆಗಳು ಹರಳುಗೊಂಡಿವೆ. ಬಾಳು ಇರುವುದು ಸ್ವೀಕಾರಕ್ಕೆ ಹೊರತು ನಿರಾಕರಣೆಗಲ್ಲ ಎಂಬುದು ಅವರ ಈ ಕೃತಿಯ ಘೋಷವಾಕ್ಯ. ಅದಕ್ಕೆ ವಿರುದ್ಧವಾದ ದೇವರು, ಧರ್ಮ, ಮೋಕ್ಷದ ಸನಾತನ ಪರಿಕಲ್ಪನೆಯನ್ನು ಅವರು ನಿರಾಕರಿಸಿದರು ‌. ಇಂದ್ರಿಯಗಳ ಮೂಲಕ ದೊರೆಯುವ ಎಲ್ಲಾ ಅನುಭವಗಳು ನಮ್ಮ ಜ್ಞಾನದ ಸಂಪಾದನೆಯ ಮಾರ್ಗಗಳು. ಆದ್ದರಿಂದ ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿ ಕೊಂಡು ನಮ್ಮ ಅರಿವನ್ನು ವಿಸ್ತರಿಸಲು ಸಾಧ್ಯ. ಪ್ರಕೃತಿ ಕಲಿಸುವ ಪಾಠ ಅನನ್ಯ. ಬದುಕನ್ನು ಸಮೃದ್ಧಗೊಳಿಸಿಕೊಳ್ಳಲು ಅದು ಸಾಧನ. ಇತ್ಯಾದಿ ಸಕಾರಾತ್ಮಕ ನಿಲುವುಗಳು ಅದರಲ್ಲಿ ಪ್ರಕಟವಾಗಿರುವುದನ್ನು ಲೇಖಕಿ ಸರಿಯಾಗಿ ಗುರುತಿಸಿ ಅವುಗಳಲ್ಲಿ ಕಾರಂತರ ಜೀವಪರ ನಿಲುವುಗಳನ್ನು ಎತ್ತಿಹಿಡಿದಿದ್ದಾರೆ.

ಮೂರನೇ ಹಂತದಲ್ಲಿ ಧರ್ಮಸ್ಥಳದ ಮಂಜಯ್ಯ ಹೆಗ್ಗಡೆಯವರ ನೇತೃತ್ವದಲ್ಲಿ ನಡೆದ ಹನ್ನೆರಡು ದಿನಗಳ ಕಾಲ ನಡೆದ ಬಹುಮುಖಿ ಸಮ್ಮೇಳನದ ಸತ್ಪರಿಣಾಮವನ್ನು ಕುರಿತು ಬಹಳ ಸಕಾರಾತ್ಮಕವಾಗಿ ಬರೆದಿದ್ದಾರೆ ‌ ಇದು ಕಾರಂತರಲ್ಲಿ ಇಂತಹ ಸಮ್ಮೇಳನದ ಕುರಿತು ಬದಲಾದ ಅವರಲ್ಲಿನ ಇತ್ಯಾತ್ಮಕ ಪಲ್ಲಟಕ್ಕೆ ನಿದರ್ಶನವಾಗಿದೆ. ದೇವರು ಧರ್ಮ ಇತ್ಯಾದಿಗಳನ್ನು ನಂಬಿ ಅದರಂತೆ ಬದುಕಿದವರ ಕುರಿತು ಗೌರವದಿಂದ ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿರುವುದನ್ನು ಲೇಖಕಿ ಉಲ್ಲೇಖ ಮಾಡಿದ್ದಾರೆ. ಇದು ಅವರ ವಿಸ್ತೃತ ಓದಿಗೆ ಸಾಕ್ಷಿ. ಅವರ ಗಮನಕ್ಕೆ ಬಾರದ ಒಂದು ಸಂಗತಿ ಎಂದರೆ, ಅವರ ಗ್ರಾಮೀಣ ವ್ಯಕ್ತಿಗಳನ್ನು ಕುರಿತು ಬರೆದಿರುವ ಮೂರು ತಲೆಮಾರಿನ ವೇಶ್ಯೆಯರೆ ಬಹುಶಃ ಅವರ ಮೈಮನಗಳ ಸುಳಿಯಲ್ಲಿ ಎಂಬ ಕಾದಂಬರಿಯ ವಸ್ತುವಾಗಿರುವ ಸಾಧ್ಯತೆ.

ಕೃತಿಯ ಕೊನೆಯ ಭಾಗದಲ್ಲಿ ಕಾರಂತರ ಸಮಕಾಲೀನ ಪ್ರಬಂಧಕಾರರಲ್ಲಿ ಒಬ್ಬರಾದ, ಅವರಿಗಿಂತ ಭಿನ್ನವಾಗಿ ಸನಾತನ ಸಂಸ್ಕೃತಿಯಲ್ಲಿ ನಂಬಿಕೆ ಇರುವ ಪು‌. ತಿ‌. ನ ಅವರ ಪ್ರಬಂಧಗಳ ಜತೆಗೆ ಇಟ್ಟು ಅವರ ನಡುವೆ ಇರುವ ಭಿನ್ನತೆಯನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಭಿನ್ನತೆಯ ದೃಷ್ಟಿಯಿಂದ ಇದು ಸರಿಯಾದರು, ಕಾರಂತರ ವೈಚಾರಿಕ ನಿಲುವನ್ನು ಸಮಾನವಾಗಿ ಹೊಂದಿರುವ ಅವರ ಹಿರಿಯ ಸಮಕಾಲೀನ ಏಕೈಕ ಪ್ರಬಂಧ ಕಾರರಾದ ಎ.ಎನ್ ಮೂರ್ತಿರಾಯರ ಪ್ರಬಂಧಗಳು ಜೊತೆಗೆ ಇಟ್ಟು ನೋಡಬಹುದಿತ್ತು. ಇದು ಕನ್ನಡದಲ್ಲಿ ವೈಚಾರಿಕ ಪ್ರಬಂಧ ಪರಂಪರೆಯ ಸಾತತ್ಯವನ್ನು ಕಟ್ಟಲು ಅನುವು ಮಾಡಿಕೊಡುತ್ತದೆ.

ಕೆಲವು ಸಾಮಾನ್ಯೀಕರಣ ಹೇಳಿಕೆಗಳನ್ನು ತಪ್ಪಿಸಬಹುದು: ಅ,) ಯಾವುದೇ ಮಾರ್ಗವು ಕೊನೆಗೆ ತೋರುವ ಸತ್ಯ ಮಾತ್ರ ಒಂದೇ ಆಗಿರುತ್ತದೆ ಬ)ಹಿಂದಿನವರು ಹಾಕಿಕೊಟ್ಟ ತತ್ವ ಗಳನ್ನೆಲ್ಲ ಒಪ್ಪಲು ಸಾಧ್ಯವಾಗದೆ ಕಾರಂತರು ಪ್ರಾಮಾಣಿಕವಾಗಿ ಅವರ ” ಕಸ್ಟಮೈಜ್ಡ್” ಕಂಡು ಕೊಂಡ ಸತ್ಯವು ಇವುಗಳಿಂದ ಭಿನ್ನವಲ್ಲ. ಇವುಗಳನ್ನು ತೌಲನಿಕ ಅಧ್ಯಯನ ಮಾಡಿ ಸಾಧಾರವಾಗಿ ಮಂಡಿಸಬಹುದೇ ಹೊರತು ಅನ್ಯಥಾ ಅಲ್ಲ ಅಲ್ಲವೇ ಇಷ್ಟಾದರೂ ಲೇಖಕಿಯ ಶ್ರದ್ದಾಪೂರ್ವಕ ಅಧ್ಯಯನಕ್ಕೆ ಈ ಕೃತಿ ನಿದರ್ಶನ. ಎಂ‌.ಎ ಅಧ್ಯಯನದ ಸಲುವಾಗಿ ಇದನ್ನು ಸಿದ್ದಪಡಿಸಿದ ವಿದ್ಯಾರಾಮಕೃಷ್ಣ ಅವರಿಗೆ, ಪ್ರಕಟಿಸಿದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಅಭಿನಂದನೆಗಳು ‌. ಕಾರಂತರ ಮತ್ತು ಕುವೆಂಪು ಅವರ ವಿಶ್ವ ಮಾನವ ಪರಿಕಲ್ಪನೆಗಳ ತೌಲನಿಕ ಅಧ್ಯಯನಕ್ಕೆ ಅವಕಾಶ ಇದೆ. . ಕೃತಿಯ ಪ್ರಾರಂಭದಲ್ಲಿ ವರ್ಗೀಕರಣಕ್ಕೆ ಬದಲಿಗೆ ವರ್ಗಾವಣೆ ಎಂದು ತಪ್ಪಾಗಿ ಬರೆಯಲಾಗಿದೆ. ತಿದ್ದುಪಡಿಯ ಸಂದರ್ಭದಲ್ಲಿ ಇದನ್ನು ಲೇಖಕಿ ಗಮನಕ್ಕೆ ತಂದುಕೊಳ್ಳಬಹುದಿತ್ತು.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW