ತಂದೆ – ಮಗನ ಜುಗಲ್ಬಂದಿ… -ಮಾಕೋನಹಳ್ಳಿ ವಿನಯ್‌ ಮಾಧವ್



‘ಮೈಸೂರ್‌ ಪಾಕ್‌ ಹುಡುಗ’ ನ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳುವುದಾದರೆ ಪ್ರಮೋದ್‌ ಮುಗ್ದ ಮುಖದ ಹಿಂದೆ, ಗಾಢವಾದ ಚಿಂತನೆಗಳಿವೆ. ಮುಂದೆ ಒಳ್ಳೆ ಬರಹಗಾರನಾಗುವ ಎಲ್ಲಾ ಲಕ್ಷಣಗಳನ್ನೂ ಒಂದೇ ಪುಸ್ತಕದಲ್ಲಿ ತೋರಿದ್ದಾನೆ.ಮತ್ತು ಅವರ ತಂದೆ ಮೋಹನ ಭಾಸ್ಕರ ಹೆಗಡೆಯವರು ಬರೆದ ʻಪ್ರಭಾರಿʼ ಪುಸ್ತಕಗಳನ್ನು ಓದುವಾಗ, ಇವರಿಬ್ಬರು ಈ ಪೀಳಿಗೆ ಎನ್ನುವ ಕಂದಕದ ಅಂತರವನ್ನು ಬಹಳಷ್ಟು ಕಡಿಮೆ ಇಟ್ಟುಕೊಂಡಿದ್ದಾರೆ ಎಂದು ಅನಿಸಿತು.- ಮಾಕೋನಹಳ್ಳಿ ವಿನಯ್‌ ಮಾಧವ್, ಮುಂದೆ ಓದಿ…

ಗೋಪಾಲಕೃಷ್ಣ ಕುಂಟಿನಿಯವರು ಸರಿಯಾಗಿ ಬರೆದಿದ್ದಾರೆ: ಓದುಗರು ಚಕ್ಕಳಬಕ್ಕಳ ಹಾಕಿ ಕುಳಿತು, ಒಂದು ಮುಷ್ಠಿ ಕಡ್ಲೆಕಾಯಿ ಜೊತೆ ಓದಿ ಅನುಭವಿಸಬಹುದಾದ ರುಚಿಯನ್ನೂ ಈ ಕಥೆಗಳು ಕೊಡುತ್ತವೆ.

ಓದಿದ ಮೇಲೆಯೇ ಅರ್ಥವಾಗಿದ್ದು… ತಿಂದಷ್ಟು ಸುಲಭವಾಗಿ ಕಡ್ಲೆಕಾಯಿ ಅರಗಿಸಿಕೊಳ್ಳಲು ಆಗುವುದಿಲ್ಲ ಎಂದು.

ಸಣ್ಣ ಕಥೆಗಳನ್ನುಓದುಗರು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಎನ್ನುವುದು ಎಷ್ಟೋ ಬಾರಿ ಚರ್ಚಾಸ್ಪದವಾದ ವಿಷಯವಾಗಿದೆ. ಸಾಮಾಜಿಕ ಜಾಲತಾಣಗಳು ಬಂದ ನಂತರವಂತೂ, ಸಣ್ಣ ಕಥೆಗಳನ್ನು ಬಹಳಷ್ಟು ಜನ, ಬಹಳಷ್ಟು ವೇದಿಕೆಗಳಲ್ಲಿ ಪ್ರಕಟಿಸುತ್ತಾರೆ.

ಇತ್ತೀಚೆಗೆ ಹರೀಶ್‌ ಕೇರ ಅವರು ಸಣ್ಣ ಕಥೆಗಳನ್ನು ಹೇಗೆ ಬರೆಯಬೇಕು? ಎನ್ನುವುದರ ಬಗ್ಗೆ ಫೇಸ್ಬುಕ್ಕಿನಲ್ಲಿ ಸೊಗಸಾಗಿ ಬರೆದಿದ್ದರು. ಒಂದು ಘಟನೆಯನ್ನು ನಿರೂಪಿಸುವುದಕಷ್ಟೇ ಸೀಮಿತಗೊಳಿಸದೆ, ಓದುಗನ ಚಿಂತನೆಗೆ ಎಷ್ಟು ಅವಕಾಶ ನೀಡಬೇಕು ಎನ್ನುವುದನ್ನು ಸರಳವಾಗಿ ವಿವರಿಸಿದ್ದಾರೆ. ನನಗೂ ಅಷ್ಟೆ… ಸಣ್ಣ ಕಥೆ ಬರೆಯುವುದು ದೊಡ್ಡ ತಲೆ ನೋವು ಎಂದೆನಿಸುತ್ತದೆ. ಏನೇ ಹೇಳಿದರೂ, ಸಾಹಿತ್ಯದಲ್ಲಿ ಸಣ್ಣ ಕಥೆಗಳನ್ನು ನಿರ್ಲಕ್ಷಿಸುವುದು ಸಾಧ್ಯವೇ ಇಲ್ಲ ಎನ್ನುವುದು ನನ್ನ ಅಭಿಪ್ರಾಯ.

ಶನಿವಾರ ಸಾಯಂಕಾಲ, ಯುಗಾದಿ ಹಬ್ಬದ ದಿನ ಈ ಪುಸ್ತಕಗಳ ಬಿಡುಗಡೆಗೆ ಹೋಗಿದ್ದೆ. ಕುತೂಹಲಕರವಾದ ಅಂಶವೆಂದರೆ, ತಂದೆ ಮತ್ತು ಮಗನ ಚೊಚ್ಚಿಲ ಕಥಾ ಸಂಕಲನಗಳು ಒಟ್ಟಿಗೆ ಬಿಡುಗಡೆಯಾದದ್ದು. ಕುವೆಂಪು-ತೇಜಸ್ವಿ, ಬೇಂದ್ರೆ-ವಾಮನ ಬೇಂದ್ರೆಯವರು ಒಂದೇ ಸಮಯದಲ್ಲಿ ಬರೆದಿದ್ದರೂ, ಇಂತಹ ಪ್ರಯೋಗ ಆಗ ನಡೆದಿರಲಿಲ್ಲ. ಏಕೆಂದರೆ, ಪೀಳಿಗೆಗಳ ವೈಚಾರಿಕ ವ್ಯತ್ಯಾಸದಿಂದ, ಇಂತಹ ಅಂತರಗಳನ್ನು ಕಾಯ್ದಿರಿಸಿಕೊಳ್ಳುವುದು ಅನಿವಾರ್ಯ ಎಂದು ನನಗೆ ಅನ್ನಿಸಿತ್ತು.

ಪ್ರಭಾರಿ ಕೃತಿ ಬರಹಗಾರ ಮೋಹನ ಭಾಸ್ಕರ ಹೆಗಡೆ (ತಂದೆ), ʻಮೈಸೂರ್‌ ಪಾಕ್‌ ಹುಡುಗʼ ಕೃತಿ ಬರಹಗಾರ ಪ್ರಮೋದ್‌ ಮೋಹನ ಹೆಗಡೆ (ಮಗ)

ಈಗಿನ ಹೊಸ ಪೀಳಿಗೆಯಲ್ಲಿ, ತಂದೆಯರು ಒಂದು ಹೆಜ್ಜೆ ಮುಂದೆ ಹೋಗಿ ಮಕ್ಕಳ ಪೀಳಿಗೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ, ಮಕ್ಕಳು ತಮ್ಮ ಜೀವನದ ಜೊತೆ, ಒಂದು ಹೆಜ್ಜೆ ಹಿಂದೆ ಹೋಗಿ, ತಂದೆಯ ಪೀಳಿಗೆಯ ವೈಚಾರಿಕತೆಯನ್ನು ಗೌರವಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ, ನಡುವೆ ಒಂದು ಅಂತರ, ಸಣ್ಣ ಕಂದಕ ಇದ್ದೇ ಇರುತ್ತದೆ. ನಗರವಾಸಿಗಳಾಗಿ, ಗ್ಯಾಜೆಟ್‌, ಆನ್‌ಲೈನ್‌ ಪ್ರಪಂಚದಲ್ಲೇ ಬೆಳೆದ ಈಗಿನ ಪೀಳಿಗೆಯ ಮಕ್ಕಳಿಗೆ, ಅವಿಭಾಜ್ಯ ಕುಟುಂಬ ಆಥವಾ ವ್ಯಕ್ತಿಗತ ಸಂಬಂಧಗಳ ಬಗ್ಗೆ ಅರ್ಥವಾಗುವುದು ಕಷ್ಟ. ಆದರೂ, ಎಲ್ಲೋ ಒಂದು ಕಡೆ ಚಿಕ್ಕವರಿದ್ದಾಗ ಬೆಳೆದ ಹಳ್ಳಿಗಳಲ್ಲಿ ಹೋಗಿ ಬದುಕಬೇಕೆಂಬ ತುಡಿತ, ಅದರಲ್ಲಿ ಎದುರಾಗುವ ವಾಸ್ತವಿಕತೆಯ ಸಮಸ್ಯೆಗಳು, ಎಲ್ಲೋ ಒಂದು ಕಡೆ ಅವರನ್ನು ಹಿಂದಕ್ಕೆ ಸೆಳೆಯುವುದಂತೂ ನಿಜ.

ಫೇಸ್ಬುಕ್ಕಿನಲ್ಲಿ ನನಗೆ ʻಪದ ಚಿನ್ಹೆʼ ಎಂದೇ ಪರಿಚಿತನಾದ ಪ್ರಮೋದ್‌ ಮೋಹನ ಹೆಗಡೆ ಮತ್ತು ಅವನ ತಂದೆ ಮೋಹನ ಭಾಸ್ಕರ ಹೆಗಡೆಯವರು ಬರೆದ ʻಮೈಸೂರ್‌ ಪಾಕ್‌ ಹುಡುಗʼ ಮತ್ತು ʻಪ್ರಭಾರಿʼ ಪುಸ್ತಕಗಳನ್ನು ಓದುವಾಗ, ಇವರಿಬ್ಬರು ಈ ಪೀಳಿಗೆ ಎನ್ನುವ ಕಂದಕದ ಅಂತರವನ್ನು ಬಹಳಷ್ಟು ಕಡಿಮೆ ಇಟ್ಟುಕೊಂಡಿದ್ದಾರೆ ಎಂದು ಅನಿಸಿತು. ʻಮನುಷ್ಯನಿಗೆ ಜೀವನದ ಬಗ್ಗೆ ಕ್ಲಾರಿಟಿ ಇರಬಾರದು, ಕುತೂಹಲವಿರಬೇಕು. ಮುಂದಿನ ಪುಟದಲ್ಲಿ ಏನಿದೆ ಎಂದು ಮೊದಲೇ ಗೊತ್ತಿದ್ದರೆ ಪುಸ್ತಕ ಓದುವ ಕುತೂಹಲ ಸತ್ತು ಹೋಗುತ್ತದೆ,ʼ ಎನ್ನುವ ವಾಕ್ಯವನ್ನು ಓದಿದವನೇ, ಈ ಪುಸ್ತಕ ತಂದೆಯದೋ? ಮಗನದೋ? ಎಂದು ತಿರುಗಿಸಿ ನೋಡಿದೆ. ಮಗನದಾಗಿತ್ತು. ಮುಗ್ದ ಮುಖದ ʻಪದ ಚಿನ್ಹನʼ ಈ ವಾಕ್ಯವನ್ನು ಸರಳವಾಗಿ ತೆಗೆದುಕೊಳ್ಳಬೇಕೋ? ಅಥವಾ ತತ್ವಜ್ಞಾನದಂತೆ ವಿಶ್ಲೇಷಿಸಬೇಕೋ? ಎನ್ನುವ ಜಿಜ್ಞಾಸೆಯಲ್ಲಿ ಬಿದ್ದೆ.

This slideshow requires JavaScript.

ಹಳೆ ಪೀಳಿಗೆಯವರೆಂದುಕೊಂಡರೂ, ಮೋಹನ ಹೆಗಡೆಯವರ ಪ್ರಭಾರಿ ಅಡೂಗಲಜ್ಜಿಯ ಕಥಾ ಸಂಕಲನವೇನಲ್ಲ. ಆದರೆ, ಮಲೆನಾಡಿನ ಹಳ್ಳಿಗಳ ಸೊಗಡನ್ನೂ ಒಳಗೊಂಡ ಕಥೆಗಳಿವೆ. ಮುಖಪುಟದ ಕಥೆಯಾದ ʻಪ್ರಭಾರಿʼಯಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಸುಲಭ. ಏನು ಧನ್ಯಳೋ ಲಕುಮಿ ಕಥೆ ಓದಿದಾಗ, ಪೀಳಿಗೆಗಳ ನಡುವೆ ಬೆಳೆಯುವ ಕಂದಕಕ್ಕೆ ಹೇಗೆ ಸೇತುವೆ ನಿರ್ಮಿಸಬೇಕು ಎನ್ನುವುದನ್ನು ಸರಳವಾಗಿ ಹೇಳಿದರೆ, ವಸುಧೆ ಹಿಗ್ಗಿದಳು ಕಥೆ ಓದಿದಾಗ, ನನ್ನೂರಿನ ವಸುಧೆ ಯಾವಾಗ ಹಿಗ್ಗುತ್ತಾಳೆ? ಎನ್ನುವ ಪ್ರಶ್ನೆ ಮನಸಲ್ಲಿ ಮೂಡಿ, ಒಮ್ಮೆ ಪಿಚ್ಚೆನಿಸಿತು.
ನಾಗಬೆತ್ತದ ರುಚಿ, ಕೆಲವರ ಜೀವನದಲ್ಲಿ ಕಾಲ ಹೇಗೆ ನಿಂತು ಹೋಗುತ್ತದೆ ಎನ್ನುವುದನ್ನು ಮೂರೇ ಪುಟದಲ್ಲಿ ವಿವರಿಸಿದರೆ, ಮಮತೆ, ಒಂದು ಪಾರಿವಾಳದ ಕಥೆ, ಅನಾ, ಹಳ್ಳಿಗಳ ಸಂಬಂಧಗಳನ್ನು ಸೊಗಸಾಗಿ ಹೊರ ತಂದಿವೆ. ಹಳ್ಳಿಯ ರಾಜಕಾರಣ, ಅಮಾಯಕ ಮತ್ತು ತಳ್ಳಿ ಅರ್ಜಿ ಕಥೆಗಳಲ್ಲಿ ಸುಂದರವಾಗಿ ಮೂಡಿದೆ. ಆದರೆ, ರಂಗ ಭೂಮಿಗೆ ಸಂಬಂಧ ಪಟ್ಟ ಎರಡು ಕಥೆಗಳಾದ, ನೆಲ ಸಮ ಮತ್ತು ತ್ತೀ ತ್ತೈ..ತಿ ತ್ತಿ ತ್ತೈ..! ನನ್ನನ್ನು ಬಹಳಷ್ಟು ಚಿಂತನೆಗೆ ದೂಡಿತ್ತು. ನೆಲ ಸಮದ ಕೊನೆಯಂತೂ ಬಹಳಷ್ಟು ಹೊತ್ತು ಕಾಡಿತು.



ಇನ್ನು ಈ ಮೈಸೂರ್‌ ಪಾಕ್‌ ಹುಡುಗನ ಬಗ್ಗೆ ಏನು ಹೇಳುವುದು? ಒಂದೇ ವಾಕ್ಯದಲ್ಲಿ ನನ್ನನ್ನು ಜಿಜ್ಞಾಸೆಗೆ ದೂಡಿದವನು. ಹನ್ನೆರೆಡು ಕಥೆಗಳ ಗುಚ್ಚದಲ್ಲಿ ನನಗೆ ಹನ್ನೆರೆಡು ಲೋಕಗಳಿಗೆ ಕರೆದೊಯ್ದಿದ್ದ ಎಂದು ಮಾತ್ರ ಹೇಳಬಲ್ಲೆ. ಹೌದು, ಈಗಿನ ನನ್ನೂರನ್ನು ನಾನಾಗಲೀ, ನನ್ನನ್ನು ನನ್ನೂರಾಗಲೀ ನೋಡುವ ಪರಿ ಕಳೆದ ಮೂರು ದಶಕಗಳಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ನಾನು ಮೂರು ದಶಕಗಳ ಹಳೆಯ ನನ್ನೂರನ್ನು ಹುಡುಕುತ್ತಾ ಹೋಗುವಾಗ, ನಾನು ಮಾತ್ರ ಡಿಜಿಟಲ್‌ ಪ್ರಪಂಚದಲ್ಲಿ ಬದುಕುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಹೋಗುತ್ತೇನೆ. ಆದರೆ, ನನ್ನೂರೂ ಡಿಜಿಟಲ್‌ ಪ್ರಪಂಚಕ್ಕೆ ಕಾಲಿಟ್ಟಿದ್ದು ಅರಿವಾದಾಗ, ಅದಕ್ಕೆ ಈ ಹುಡುಗ ಕೊಟ್ಟ ಹೆಸರೇ ʻಇಲ್ಲದ ಊರಿಗೆ ಹೋದಾಗʼ.

ನನ್ನೂರಿಗೆ ನಾನು ವಾಪಾಸು ಹೋಗಲು ವಾಸ್ತವಿಕವೇ ಅಡ್ಡಿ. ಬೀರನಿಗೂ ಅಷ್ಟೆ. ಆದರೆ, ಅವನು ರೂಪಾಂತರಗೊಳ್ಳಬೇಕಿತ್ತು ಮತ್ತು ರೂಪಾಂತರಗೊಂಡ ರೀತಿ ಬಹಳ ಇಷ್ಟವಾಯಿತು. ಪ್ರತಿಯೊಂದು ಕಥೆಗೂ ಒಂದು ಅಂತ್ಯವಿದೆ, ಹಾಗೆಯೇ ಓದುಗನ ವಿವೇಚನೆಗೆ ಬಹಳಷ್ಟು ಅವಕಾಶಗಳೂ ಇವೆ. ಹಳ್ಳಿಗೆ ಹೋಗುವ ಪುಟ್ಟ ಹುಡುಗರ ರಜಾ ಸಂಭ್ರಮದಿಂದ ಹಿಡಿದು, ನವ ಪೀಳಿಗೆಯ ಪೆಡ್ಡೆ ಹುಡುಗರ ಭಾವನೆಗಳ ಹುಡುಕಾಟ, ತಲ್ಲಣ ಹೇರಳವಾಗಿವೆ. ಹಾಗೆಯೇ , ಪತ್ತೇದಾರಿ ಕಥೆಗಳೂ ಇವೆ. ಹೊಸ ತಲೆಮಾರಿನ ಮಾನಸಿಕ ಕ್ಷೋಬೆಗಳನ್ನೂ ಯಶಸ್ವಿಯಾಗಿ ಚಿತ್ರಿಸಿದ್ದಾನೆ. ಆಕಸ್ಮಿಕ ಎಂಬ ಕಥೆಯನ್ನು ಓದಿದಾಗ, ಜೆಫ್ರಿ ಆರ್ಚರ್‌ನ ʻಟ್ವಿಸ್ಟ್‌ ಇನ್‌ ದಿ ಟೇಲ್‌ʼ ಪುಸ್ತಕದ ನೆನಪಾಯಿತು.

ಒಟ್ಟಾರೆ ಹೇಳುವುದಾದರೆ, ಪ್ರಮೋದನ ಮುಗ್ದ ಮುಖದ ಹಿಂದೆ, ಗಾಢವಾದ ಚಿಂತನೆಗಳಿವೆ ಎಂದು ನನಗೆ ಅನ್ನಿಸಿತು. ಮುಂದೆ ಒಳ್ಳೆ ಬರಹಗಾರನಾಗುವ ಎಲ್ಲಾ ಲಕ್ಷಣಗಳನ್ನೂ ಒಂದೇ ಪುಸ್ತಕದಲ್ಲಿ ತೋರಿದ್ದಾನೆ. ಇನ್ನೂ ಸ್ವಲ್ಪ ಪರಿಚಯವಾದ ಮೇಲೆ, ಆತ ಸಣ್ಣ ವಿಷಯಗಳನ್ನು ಹೇಗೆ ಸಂಭ್ರಮಿಸುತ್ತಾನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಾಯುತ್ತಿದ್ದೇನೆ.

ಒಟ್ಟಾರೆ, ತಂದೆ-ಮಗನ ಜುಗಲ್ಬಂದಿ ಸ್ವಾರಸ್ಯಕರವಾಗಿದೆ….


  • ಮಾಕೋನಹಳ್ಳಿ ವಿನಯ್‌ ಮಾಧವ್ (ಪತ್ರಕರ್ತರು,ಲೇಖಕರು, ವಿಮರ್ಶಕರು) ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW