‘ಬರಲಿ ಮತ್ತೊಂದು ಇಡ್ಲಿ’ ಕವನ – ಬೆಂಶ್ರೀ  ರವೀಂದ್ರ



ರವಿ ಕಾಣದನ್ನು ಕವಿ ಕಂಡ… ಅನ್ನುವಂತೆ ನಮ್ಮ ಕವಿ ಬೆಂಶ್ರೀ  ರವೀಂದ್ರ ಅವರಿಗೆ ಬೆಳಗ್ಗಿನ ಉಪಹಾರ ಇಡ್ಲಿಯಲ್ಲಿ ಹುಟ್ಟಿಕೊಂಡಿತು ಒಂದು ಸುಂದರ ಕವನ, ಎಣ್ಣೆ ಹನಿಯದೆ ಹಬೆಯಲಿ ಬೇಯುವುದು, ಉದರದಾರೋಗ್ಯಕೆ ಬಲು ಒಳ್ಳೆಯದು ಈ ಬಲು ರುಚಿ ಇಡ್ಲಿ, ಮುಂದೆ ಓದಿ…

ಕಣ್ಣು ನಾಲಿಗೆ ಮನವು ಇಡ್ಲಿ ಬೇಕೆಂದಿತು
ಬೆಳಗಿನುಪಹಾರಕೆ ಇಡ್ಲಿ ಸರಿಯೆಂದಿತು
ಹಬೆಯಾಡುವಿಡ್ಲಿಗೆ ತುಪ್ಪ ಸುರಿಯೆಂದಿತು
ತೆಂಗಿನಚಟ್ನಿ ಜೊತೆಯಾಗಿ ಇರಲೆಂದಿತು
ಬಿಸಿಬಿಸಿ ಸಾಂಬಾರಲಿ ಈಜಿ ಸಣ್ಣೀರುಳ್ಳಿ
ನೆತ್ತಿಹತ್ತುವ ಖಾರ ರುಚಿಗೆ ಮೆರುಗೆಂದಿತು

ಅದೋ ನೋಡು ಬಂದರು ಭೀಮ ನಳರು
ಇವರಲ್ಲದೆ ಜಗದಿ ಮತ್ತಾರು ಬಾಣಸಿಗರು
ಕೇಳಿಹರು ಬಡಿಸಿರೆಮಗೆ ತರತರದ ಇಡ್ಲಿ
ರವೆ ಇಡ್ಲಿ, ಚಿಕ್ಕಿಡ್ಲಿ, ಮುಳುಗಿಸಿದ ಇಡ್ಲಿ
ತಟ್ಟೆ ಇಡ್ಲಿ, ಖಾರಾಯಿಡ್ಲಿ,ಕರಿದಿಡ್ಲಿ, ಸೊಪ್ಪಿಡ್ಲಿ
ಉದ್ದು ಮೆಣಸಿನ ವಿಶೇಷ ತೊಗರಿಯಿಡ್ಲಿ

ಎಣ್ಣೆಹನಿಯದೆ ಹಬೆಯಲಿ ಬೇಯುವುದು
ಉದರದಾರೋಗ್ಯಕೆ ಬಲು ಒಳ್ಳೆಯದು
ಶಿವಕೊಟಿ ಆಚಾರ್ಯನ ವಡ್ಡಾರಾಧನೆಯಲಿ
ಇರುವುದಂತಲ್ಲ! ಮಾನಸೋಲ್ಲಾಸದಲಿ
ಮೂಡಿಹುದಂತಲ್ಲ ಇಡ್ಲಿ ಮಹಿಮೆ! ಕುಣಿದು
ಸಾಮಾನ್ಯರ ಜಿಹ್ವೆಯಲಿ ಅಸಾಮಾನ್ಯ ಇಡ್ಲಿ

ನಾಕು ಒಂದರ ಅನುಪಾತದಿ ಅಕ್ಕಿ ಉದ್ದು
ನುಣುಪಾದ ಉದ್ದೊಳಗೆ ಅಡಗಿ ತರಿಯಕ್ಕಿ
ಹದವಾದ ಕಾವಿನಲಿ ಅರಳುವ ಹುದುಗು
ಆವಿಯಲಿ ಬೆಂದು ಕಟ್ಟುವುದು ರುಚಿಯ
ನಾಲಗೆಯಲಿ ಕರಗಿ ತೋರುವುದು ಸ್ವರ್ಗ
ನಮ್ಮೂರಲ್ಲೆ ಭೀಮ ನಳರೇ ತಟ್ಟೆಯೊಡ್ಡಿ

ಖರ್ಚು ಹೆಚ್ಚಿಲ್ಲ ಜೇಬು ಕಚ್ಚುವುದಿಲ್ಲ
ಸಲೀಸಾಗಿ ಸಿಕ್ಕುವುದು ಬೀದಿ ಬದಿಯಲ್ಲಿ
ಪುಟ್ಟ ಅಂಗಡಿ, ಐಷಾರಾಮಿ ಹೋಟೆಲಲಿ
ಆರೋಗ್ಯವಂತನಿಗೆ, ಪೀಡಿತನಿಗೆ ಜೀರ್ಣಿಸಿ
ಸುಲಭದಲಿ ಶಕ್ತಿ ನೀಡುವ  ಸಂಜೀವಿನಿ ಇಡ್ಲಿ
ದಕ್ಷಿಣದ ದಾಕ್ಷಿಣ್ಯ ಮೀರಿ ಬೆಳೆದಿದೆ ಜಗದಿಡ್ಲಿ

ಬನ್ನಿ ಗೆಳೆಯರೆ ಬನ್ನಿ ಇಡ್ಲಿಯಾರಾಧನೆಗೆ
ವಡೆ ದೋಸೆ ಬಾತು ಚಿತ್ರಾನ್ನ ಪೂರಿಗೆ
ಮಿಗಿಲಾಗಿ  ಕನ್ನಡದ ರುಚಿಬೆರೆತ ಇಡ್ಲಿ
ಸಾಂಬಾರು ಚಟ್ನಿ, ಕರುನಾಡ ಮಣ್ಣಲ್ಲಿ
ದೇವ ನಮಗಾಗಿ ಕೊಟ್ಟ ಅದ್ಭುತವೀ ಇಡ್ಲಿ.
ಸವಿದು ಕೇಳಿರಿ ‘ಬರಲಿ ಮತ್ತೊಂದು ಇಡ್ಲಿ ‘


  • ಬೆಂಗಳೂರು ಶ್ರೀನಿವಾಸ್ ರಾವ್ (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading