ಎರಡು ದಿನಗಳ ಹಿಂದೆ ನೆಂಟರ ಮನೆ ಉಪನಯನದ ಕಾರ್ಯಕ್ರಮಕ್ಕೆ ಹೋಗಿದ್ದೆವು. ಅಲ್ಲಿ ‘ನಾ ಕಂಡ ಪ್ರಣಯರಾಜ ಶ್ರೀನಾಥ್’ ಹೇಗಿದ್ದರು ಗೊತ್ತಾ ? – ಎನ್.ವಿ.ರಘುರಾಂ, ತಪ್ಪದೆ ಮುಂದೆ ಓದಿ…
***
‘ಶುಭಮಂಗಳ, ಶುಭಮೂಹೂರ್ತವೇ, ಶುಭವೇಳೆ, ಅಭಿಲಾಷೆಯ…..’ ಶುಭಮಂಗಳ ಸಿನಿಮಾದ ಹಾಡು ಎಪ್ಪತ್ತರ ದಶಕದಲ್ಲಿ ಆಕಾಶವಾಣಿಯಲ್ಲಿ ಭಿತ್ತರಿಸುತ್ತಿದ್ದಾಗ ತಲೆದೂಗದವರು ಯಾರು ಇರಲಿಲ್ಲ. ಹಾಗಾಗಿ ಕಪ್ಪು ಬಣ್ಣದ ಕ್ಲೋಸ್ ಕಾಲರ್ ಶರ್ಟ್, ಅದೇ ಬಣ್ಣದ ಪ್ಯಾಂಟ್, ಮಂದಹಾಸ ಬೀರುವ ವ್ಯಕ್ತಿ ತಮ್ಮ ಮಡದಿಯೊಂದಿಗೆ ಮೊನ್ನೆ ಎಕದಂತ ಪ್ರವಚನ ಮಂದಿರಕ್ಕೆ ಕಾಲಿಟ್ಟಾಗ ‘ಈ ದಿನವೇ ಶುಭ ದಿನ, ಈ ಕಾಲ ಶುಭಕಾಲ, ಈ ಗಳಿಗೆ ಶುಭಗಳಿಗೆ’ ಎನ್ನುತ್ತಾ ಶುಭಮಂಗಳದ ಹಾಡನ್ನು ಅಲ್ಲಿ ಬಂದಿದ್ದವರು ನೆನಪಿಸಿಕೊಂಡಿದ್ದರೆ ಅಚ್ಚರಿಯ ವಿಷಯವೇನಿಲ್ಲ. ಏಕೆಂದರೆ ಬಂದವರು ‘ಪ್ರಣಯರಾಜ ಶ್ರೀನಾಥ್’ ರವರು. ಯಾರೋ ಒಬ್ಬರು ‘ಶ್ರೀನಾಥ್ ಬಂದರು’ ಎನ್ನುವ ಉದ್ಗಾರವೆತ್ತಿದರು ನೋಡಿ, ಆಗ ತಕ್ಷಣ ಎಲ್ಲರ ದೃಷ್ಟಿ ಬಾಗಿಲ ಕಡೆ ಹೋಯಿತು. ತುಂಬ ಜನ ಎದ್ದು ಬಾಗಿಲ ಬಳಿಗೆ ಓಡಿಕೊಂಡೇ ಹೋದರು. ತಕ್ಷಣ ಬನ್ನಿ, ಬನ್ನಿ ಎಂದು ಸ್ವಾಗತಿಸುವ ಜೊತೆಗೆ ಎಲ್ಲರೂ ತಮ್ಮ ಮೊಬೈಲಿನಿಂದ ಫೋಟೋಗಳನ್ನು ಎಡೆಬಿಡದೆ ತೆಗೆದುಕೊಳ್ಳಲು ಪ್ರಾರಂಭ ಮಾಡಿದರು. ಕೆಲವರಿಗೆ ಪಕ್ಕದಲ್ಲಿ ನಿಂತುಕೊಂಡು ಫೋಟೋ ತೆಗೆಸಿಕೊಳ್ಳುವ ಅತುರ, ಕೆಲವರಿಗೆ ಕೈ ಕುಲಕಲು ಆಸೆ, ಕೆಲವರಿಗೆ ಸೆಲ್ಫೀ ತೆಗೆಯುವ ಧಾವಂತ. ತಕ್ಷಣ ಎದ್ದು ಹೋಗಲು ಸಾಧ್ಯವಿಲ್ಲದವರು ಕುಳಿತಲ್ಲಿಯೇ ಕುತ್ತಿಗೆ ತಿರುಗಿಸಿ ಅದು ಸರಿಯಾಗದೇ ಹೋದಾಗ ಸ್ವಲ್ಪ ಕುರ್ಚಿಯನ್ನೇ ತಿರುಗಿಸಿಕೊಂಡು ಕಣ್ಣು ತುಂಬಿಕೊಂಡರು. ಎನೋ ಹೇಳಲು ಹೋಗಿ ಇನ್ನೇನೋ ಹೇಳಿದವರು ಕೂಡ ಇದ್ದರು ಈ ಗುಂಪಿನಲ್ಲಿ! ಎಷ್ಟು ಜನ ಮುಗಿಬಿದ್ದರೂ, ಎಷ್ಟೇ ಫೋಟೋಗಳನ್ನು ತೆಗೆದುಕೊಂಡರೂ, ಎಲ್ಲರಿಗೂ ಸಹಕರಿಸುತ್ತಾ, ತಮ್ಮ ಮಂದಹಾಸ ಬೀರುತ್ತಾ ಒಳ ಬಂದರು ಪ್ರಣಯರಾಜ.

ಫೋಟೋ ಕೃಪೆ : goofle
ಬಹುಶಃ ‘ಶುಭಮಂಗಳ’ ಸಿನಿಮಾದ ಮೂಲಕ ಶಾಶ್ವತವಾಗಿ ಜನರ ಮನದಲ್ಲಿ ಶ್ರೀನಾಥ್ ಬೇರೂರಿದವರು. ಆರತಿ, ಮಂಜುಳ ಜೊತೆ ಮಾಡಿದ ಚಲನಚಿತ್ರಗಳು ಜಯಭೇರಿ ಬಾರಿಸುತ್ತಿರುವಾಗ, ಮಾನಸ ಸರೋವರದಲ್ಲಿ ಮುಳುಗೆದ್ದ ಶ್ರೀನಾಥರು ತಮ್ಮ ಮನೋಜ್ಞ ಅಭಿನಯದ ಮೂಲಕ ಅನೇಕ ಪ್ರಶಸ್ತಿಗಳನ್ನು ಪಡೆದರು. ಆದರೂ ಯಾವುದನ್ನು ತಲೆಯ ಮೇಲೆ ಹತ್ತದಂತೆ ಎಚ್ಚರವಹಿಸಿ, ಬಹುಶಃ ಅಜಾತಶತ್ರು ಎನಿಸಿ ಚಿತ್ರ ರಸಿಕರ ಮನಸ್ಸಿನಲ್ಲಿ ಶಾಶ್ವತವಾಗಿ ‘ಪ್ರಣಯರಾಜ’ರಾಗಿ ಉಳಿದರು.
ಹದಿಹರೆಯದ ವಯಸ್ಸಿನಲ್ಲಿ ಅಥವ ಯುವಕರಲ್ಲಿ ‘ಪ್ರಣಯರಾಜ’ ಪದ, ಗಂಡು ಹೆಣ್ಣಿನ ನಡುವಿನ ಪ್ರೀತಿಗಿಂತ ಜಾಸ್ತಿ ಮುಂದಕ್ಕೆ ಯೋಚನೆ ಮಾಡುವುದಿಲ್ಲ. ಅದು ತಪ್ಪಿಲ್ಲ ಕೂಡ. ಆ ಕಾಲದಲ್ಲಿ ಶ್ರೀನಾಥ್-ಮಂಜುಳ ಬೆಳ್ಳಿ ತೆರೆಯ ಮೇಲೆ ಮಾಡಿದ ಮೋಡಿಗೆ ‘ಪ್ರಣಯರಾಜ’ ಪದ ಅಂಟಿಕೊಂಡಿದ್ದು ಆಶ್ಚರ್ಯವಲ್ಲ. ಆದರೆ ಈಗ ಹೇಳಲು ಹೊರಟಿರುವ ವಿಷಯ ಅದಲ್ಲ. ಸುಮಾರು ಎಂಭತ್ತರ ಗಡಿಯಲ್ಲಿ ಇರುವ ಶ್ರೀನಾಥ್ ಈಗಲೂ ಜನ ಸಾಮಾನ್ಯರ ಮನದಲ್ಲಿ ಉಳಿದಿರುವುದಕ್ಕೆ ಏನು ಕಾರಣ ನೋಡೋಣ ಬನ್ನಿ.
ಶುಭಮಂಗಳದಲ್ಲಿ ಆರತಿಯ ಸುತ್ತ ಹೆಣೆದಿರುವ ಹಾಡುಗಳನ್ನು ನೋಡಿ. ‘ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ…’ ಎಂದು ಆರತಿಗೆ ಶೃಂಗಾರದಿಂದ ಹೇಳಿದ ಶ್ರೀನಾಥ್ ಈಗ ಅವರ ಬಳಿ ಓಡಿಬಂದ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರನ್ನು ಒಲವಿನಿಂದ ಕಂಡರು. ಆಗ ಹೂಗುಚ್ಛ ಹಿಡಿದು ಆರತಿಯ ಸುತ್ತ ಸುತ್ತುತ್ತಾ ಹೇಳಿದ ತೀವ್ರತೆ ಈಗಲೂ ಇತ್ತು, ಆದರೆ ಬಾವ ಮಾತ್ರ ಶೃಂಗಾರದಿಂದ ವಾತ್ಸಲ್ಯಕ್ಕೆ ಬದಲಾಗಿತ್ತು. ‘ನಾಲ್ಕ ಒಂದ್ಲಿ ನಾಲ್ಕು, ನಾಲ್ಕ್ ಎರಡ್ಲ ಎಂಟು’ ಎಂದು ಆರತಿಗೆ ಲೆಕ್ಕದ ಪಾಠ ಮಾಡಿದ್ದ ಶ್ರೀನಾಥ್ ಯಾರು ಎಷ್ಟೇ ‘ಸೆಲ್ಫಿ’ ತೆಗೆದುಕೊಂಡರು ಕೂಡ ಲೆಕ್ಕ ಕೇಳಲಿಲ್ಲ! ಅವರ ಮುಖ ಸುಂದರವಾದ ‘ಸೂರ್ಯನಕಾಂತಿಯಿಂದ ಹೊಳೆಯುತ್ತಿದ್ದರೆ, ತಿಂಗಳ ಬೆಳಕಿನ ಶಾಂತ’ ಸ್ವಭಾವದ ತೇಜಸ್ಸು ಅಲ್ಲಿ ಹರಡಿತ್ತು. ಹಾಗಾಗಿ ಅವರ ಸ್ನೇಹದ ಕಡಲಲ್ಲಿ, ಹಳೆಯ ‘ನೆನಪಿನ ದೋಣಿಯಲಿ’ ಕೆಲವು ಕಾಲ ಮತ್ತೆ ಪಯಣಿಗರಾಗಿ ವಿಹಾರ ಮಾಡಿದ ಅನುಭವವಾಯಿತು. ಯಾರೇನು ಹೇಳಿದರೂ ತಲೆ ಕೆಡಿಸಿಕೊಳ್ಳದೆ, ನೆಲದ ಮೇಲೆ ಗಟ್ಟಿಯಾದ ಪಾದ ಊರಿ ತಲೆ ಎತ್ತಿ ನಡೆಯುವ ಪರಿ ಜನಪ್ರಿಯ ಚಲನಚಿತ್ರ ನಾಯಕರಾದ ಇವರಿಗೆ ಹೇಗೆ ಸಿದ್ದಿಸಿತು ಎಂದು ಸ್ವಲ್ಪ ಮಟ್ಟಿಗೆ ಆಶ್ಚರ್ಯವಾಗುತ್ತದೆ. ಇವರೇ ಕೆಲವು ಕಾಲದ ಹಿಂದೆ ಕೊಟ್ಟ ಒಂದು ಸಂದರ್ಶನ ನೋಡಿದರೆ ಇದು ಬಹುಶಃ ಅರ್ಥವಾಗುತ್ತದೆ.

ಧರ್ಮಪತ್ನಿ ಜೊತೆ ಪ್ರಣಯ ರಾಜ (ಫೋಟೋ ಕೃಪೆ : Times of India)
‘ಶುಭಮಂಗಳ’ ಚಿತ್ರೀಕರಣದ ಮೊದಲದಿನ ಇವರು ಆರು ಸಾಲುಗಳಿರುವ ಒಂದು ಸಂಭಾಷಣೆ ಸಮುದ್ರ ತೀರದಲ್ಲಿ ಹೇಳುವ ದೃಶ್ಯ ಚಿತ್ರೀಕರಣವಿತ್ತಂತೆ. ಇವರು ಒಂದೇ ಉಸಿರಿಗೆ ತಪ್ಪಿಲ್ಲದೆ ಹೇಳಿದ ಸಂಭಾಷಣೆ ಕೇಳಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಒಪ್ಪಲಿಲ್ಲವಂತೆ!. ಸಂಭಾಷಣೆಯ ಹೇಳಿತ್ತಿರುವಾಗ ಎದುರುಗಡೆ ಇರುವವರ ಭಾವನೆಗಳನ್ನು ಗಮನಿಸಿ, ತಿಳಿದುಕೊಂಡು ಹೇಳಬೇಕು ಎಂದು ಪುಟ್ಟಣ್ಣಾಜಿ ಹೇಳಿದರಂತೆ. ಅದರಂತೆ ಮಾರನೇಯ ದಿನ ಇವರು ಮಾಡಿದ ಅಭಿನಯ ಮೊದಲ ಶಾಟ್ಗೆ ಓ.ಕೆ. ಆಯಿತಂತೆ. ನಾವು ಮಾತನಾಡುತ್ತಿರ ಬೇಕಾದರೆ ಎದುರುಗಡೆ ಇರುವವರನ್ನು ಗಮನಿಸಿ, ಅವರ ಮನಸ್ಥಿತಿಯನ್ನು ತಿಳಿದುಕೊಂಡು, ಅವರ ಮನ ನೋಯಿಸದಂತೆ ಮಾತನಾಡಬೇಕು ಎಂಬುದನ್ನು ಸಿನಿಮಾದಲ್ಲಿ ಅಭಿನಯಿಸುವಾಗ ಮಾತ್ರವಲ್ಲದೆ ನಿಜ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ನನ್ನ ಅನಿಸಿಕೆ. ಹಾಗಾಗಿ ನೋಡಿ ಅವರು ಶುಭಮಂಗಳ ಸಿನಿಮಾದಲ್ಲಿ ಆರತಿ ಜೊತೆ ಮುನಿಸಿಕೊಂಡಾಗ ‘ಸೂರ್ಯಂಗು ಚಂದ್ರಂಗೂ ಬಂದಾರೆ ಮುನಿಸು’ ಹಾಡನ್ನು ಶಿವರಾಂ ಮತ್ತು ಅಂಬರೀಷ್ ಹೇಳಿದರು. ಆದರೆ ಈ ಹಾಡು ನಿಜ ಜೀವನದಲ್ಲಿ ಇವರು ಕೇಳ ಬೇಕಾಗಿ ಬರಲಿಲ್ಲ, ಎಕೆಂದರೆ ಅವರದು ಯಾವಾಗಲೂ ನಗುವ ‘ಭೂತಾಯಿಯ ಮನಸು’. ಗುರುತು ಇರಲಿ ಬಿಡಲಿ, ಎಲ್ಲರ ಜೊತೆ ಕೂತು ವಾತ್ಸಲ್ಯವನ್ನು ಮಂದಹಾಸದಿಂದಲೇ ಹಂಚಿ ಎಲ್ಲರ ಮನದಲ್ಲಿ ಹಳೆಯ ‘ಪ್ರಣಯರಾಜ’ನಾಗೇ ಉಳಿದಿದ್ದಾರೆ. ಶುಭಮಂಗಳ ಸಿನಿಮಾದ ‘ಈ ಶತಮಾನದ ಮಾದರಿ ಹೆಣ್ಣು..’ ಹಾಡು ಆರತಿಯವರ ಸುತ್ತ ಬರೆದಿದ್ದರೂ, ಇಪ್ಪತ್ತನೇಯ ಶತಮಾನದ ಮಾದರಿ ನಾಯಕರಲ್ಲಿ ಒಬ್ಬರು ನಮ್ಮ ‘ಪ್ರಣಯರಾಜ ಶ್ರೀನಾಥರು’ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಹಾಗಾಗಿ ಈಗಲೂ ಅವರು ನಮಗೆ ‘ಪ್ರಣಯರಾಜ’ನೇ ಆಗಿ ಉಳಿದಿದ್ದಾರೆ.
- ಎನ್.ವಿ.ರಘುರಾಂ.
