ಕತೆಗಾರ್ತಿ ಸ್ನೇಹಾ ತೆಗ್ಗಿಹಾಳ ಅವರ ‘ಪ್ರತಿರೂಪ’ ಕೃತಿಯಲ್ಲಿ ಮದುವೆಯಾಗಿ ಮೊಮ್ಮಕ್ಕಳಿರುವ ಅಜ್ಜಿಗೆ ಇನ್ನೊಂದು ಮದುವೆಯಾಗೋ ಬಯಕೆ, ಆ ಮೂಲಕ ತನ್ನ ಬಾಳಿಗೆ ಬೆಳಕಾದವರಿಗೆ ಆಸರೆಯಾಗುವ ತವಕ. ಮಕ್ಕಳು, ಸೊಸೆಯಂದಿರ ಉತ್ತರಕ್ಕೆ ಕಾದು ನಿಲ್ಲುವ ಸಂಕಟ. ಕುತೂಹಲ ಸೃಷ್ಟಿಸುವ ಪ್ರತಿರೂಪ ಕೃತಿಯ ಕುರಿತು ರಾಘವೇಂದ್ರ ಪಿ ಅಪರಂಜಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪ್ರತಿರೂಪ
ಕಥೆಗಾರ್ತಿ: ಸ್ನೇಹಾ ತೆಗ್ಗಿಹಾಳ
ಬೆಲೆ : 300/
ಸಂಪರ್ಕಿಸುವ ಸಂಖ್ಯೆ : 9986256854
ಗಡಿಯಾರ ಕೇವಲ ಸಮಯ ಮಾತ್ರ ಹೇಳೋದಿಲ್ಲ, ಪ್ರತಿಯೊಬ್ಬರ ಜೀವನದ ಕಥೆಗಳನ್ನು ಹೇಳತಾ ಹೋಗತದೆ. ಪ್ರತಿಯೊಬ್ಬರ ಜೀವನದಲ್ಲೂ ತಂದೆ, ತಾಯಿ, ತಮ್ಮ, ಬಂಧು-ಬಳಗ, ಗೆಳೆಯ, ಗೆಳತಿ ಹೀಗೆ ಅನೇಕ ಪಾತ್ರಗಳು ಬರುತ್ತವೆ. ಹಾಗೆ ಬಂದು ಹೋದ ಪಾತ್ರಗಳು ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನು ಬಿಟ್ಟು ಹೋಗಿವೆ ಎನ್ನುವುದು ಮುಖ್ಯ.

ಹೊಟ್ಟೆಗೆ ಹೇಗೆ ಶುದ್ಧ ಆಹಾರದ ಅವಶ್ಯಕತೆಯಿದೆಯೋ ಅದೆ ರೀತಿ ಮಸ್ತಿಷ್ಕಕ್ಕೂ ಉತ್ತಮ ವಿಚಾರಗಳ ಅವಶ್ಯಕತೆಯಿದೆ ಎನ್ನೋದನ್ನ ಕಥೆಗಾರ್ತಿ ಸ್ನೇಹಾ ತೆಗ್ಗಿಹಾಳ ಅವರು ತಮ್ಮ ಕಥೆಗಳಲ್ಲಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಕಥೆ ಬರೆಯೋದು ಸುಲಭ, ಆದರೆ ಮನೆಮನೆ ಕಥೆಗಳನ್ನು ಹಿಡಿದಿಡೋದಿದೆಯಲ್ಲ ತುಂಬಾ ಕಷ್ಟ. ಮದುವೆಯಾಗಿ ಮೊಮ್ಮಕ್ಕಳಿದ್ದರೂ ಅಜ್ಜಿಗೆ ಇನ್ನೊಂದು ಮದುವೆಯಾಗೋ ಬಯಕೆ, ಆ ಮೂಲಕ ತನ್ನ ಬಾಳಿಗೆ ಬೆಳಕಾದವರಿಗೆ ಆಸರೆಯಾಗುವ ತವಕ ಒಂದೆಡೆಯಾದರೆ ಮಕ್ಕಳು, ಸೊಸೆಯಂದಿರ ಉತ್ತರಕ್ಕೆ ಕಾದು ನಿಲ್ಲುವ ಸಂಕಟ, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಪತ್ನಿ ತೀರಿ ಹೋದರೂ ಪತಿಗೆ ಮತ್ತೊಂದು ಮದುವೆ ಮಾಡಿಸುವ ಪತ್ನಿಯ ಔದಾರ್ಯ.

ಮಗನಿಗೆ ಬೈಕ್ ಬೇಕು ಎನ್ನುವ ಒತ್ತಾಸೆ, ತಾಯಿ ತನ್ನ ಆಭರಣವನ್ನೇ ಮಾರುವ ಮಮತೆ, ಮಕ್ಕಳಿಲ್ಲದವರಿಗೆ ಆಸರೆಯಾಗುವ ದತ್ತು ಮಗಳು, ನಂಬಿದ ಹುಡುಗನ ಹಿಂದೆ ಓಡಿ ಹೋಗಿ ಬೆಳೆಸಿದವರನ್ನು ಕಡೆಗಣಿಸಿದರೆ ಅದೆಂತ ಪಾಠ ಕಲಿಯುವ ಪರಿಸ್ಥಿತಿ ಬರುತ್ತೆ ಎನ್ನೋದನ್ನ ಕಥೆಗಳ ಮೂಲಕವೇ ಕಟ್ಟಿಕೊಟ್ಟಿರುವ ಲೇಖಕಿ ಅದಕ್ಕೊಂದಿಷ್ಟು ನೈತಿಕತೆಯ ಮೆರಗು ಕೊಟ್ಟಿದ್ದಾರೆ. ವಿಧವಾ ವಿವಾಹಕ್ಕೂ, ಯೌವನದಲ್ಲಿ ಮಾಡಿದ ತಪ್ಪಿಗೆ ಮದುವೆ ಎನ್ನುವ ಬಂಧನದ ಲೇಪನವನ್ನು, ಲಿವಿಂಗ್ ರಿಲೇಶನ್ಸ್ ನಿಂದ ಆಗುವ ಅನಾಹುತ, ಸೊಸೆ ಎಂದರೆ ಹೇಗಿರಬೇಕು, ಒಂಟಿ ಮನೆ ತನ್ನ ತಮ್ಮನದ್ದೇ ಅಂತ ಗೊತ್ತಾದಾಗ ಮನದಲ್ಲಿ ಉಂಟಾಗುವ ತುಮುಲ, ಗಂಡ ಮನೆ ಬಿಟ್ಟು ಹೋದ ಮೇಲೆ ಅನಾಥ ಮಕ್ಕಳನ್ನು ಕಟ್ಟಿಕೊಂಡು ಬದುಕಿನ ಬಂಡಿಯನ್ನು ಎಳೆಯುವ ದಿಟ್ಟ ಮಹಿಳೆಯ ಚಿತ್ರಣವನ್ನು ಲೇಖಕಿ ಓದುಗರ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಮದುವೆಯಾದ ಮೇಲೆ ಹೆಣ್ಣೊಬ್ಬಳು ಗಂಡನಿಗೆ ಎಲ್ಲವನ್ನು ಹೇಳಿಬಿಡಬೇಕೆಂಬ ಮನಸ್ಥಿತಿ. ಆತ್ಮವೇ ಎದ್ದು ತನ್ನ ಮನಸ್ಸಿನೊಂದಿಗೆ ಮಾತನಾಡುವ ಹೊಸತನದ ಕಥೆಗಳು ಮನದೊಳಗೆ ಓಡಾಡಿ ಚಿಂತನೆಗೆ ಹಚ್ಚಿಬಿಡತಾವೆ.
ಆಧುನಿಕತೆಯ ಸ್ಪರ್ಶ, ಒಂದಿಷ್ಟು ನೈತಿಕ ಪಾಠ, ಒಂಚೂರು ಕಲ್ಪನೆ, ಒಂದಿಷ್ಟು ಕಣ್ಣೀರು ಹಾಕಿಸುವಂತ ಈ ಕಥಾಗುಚ್ಛಕ್ಕೆ ‘ಪ್ರತಿರೂಪ’ ಅಂತ ಕಥೆಗಾರ್ತಿ ಹೆಸರಿಟ್ಟಿದ್ದು ಸಮಯೋಚಿತವಾಗಿದೆ. ಸಮಾಜದ ಪ್ರತಿರೂಪದಂತೆ ಇರುವ ಈ ಕಥಾಸಂಕಲನ ಮನೆಮನೆ ಕಥೆಗಳನ್ನ ಹೇಳತದೆ. ನೀವು ಓದ್ರೀ ಮತ್ತ….
- ರಾಘವೇಂದ್ರ ಪಿ ಅಪರಂಜಿ – ಪತ್ರಕರ್ತ, ಲೇಖಕ , ಹುಬ್ಬಳ್ಳಿ
