ಮಾಧುರಿ ದೇಶಪಾಂಡೆ ಅವರ “ಪ್ರೇಮ” ಕೃತಿಯ ಕುರಿತು ಲೇಖಕ ಶ್ರೀವಲ್ಲಭ ಕುಲಕರ್ಣಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಪ್ರೇಮ
ಹಿಂದಿ ಮೂಲ: ಮುನ್ಷಿ ಪ್ರೇಮಚಂದ
ಕನ್ನಡಕ್ಕೆ ಅನುವಾದ: ಶ್ರೀಮತಿ ಮಾಧುರಿ ದೇಶಪಾಂಡೆ
ಪ್ರಕಾಶಕರು: ಐಸಿರಿ ಪ್ರಕಾಶನ, ಯಶ್ ಕ್ರಿಯೇಶನ್ಸ್ , ಬೆಂಗಳೂರು
ಒಟ್ಟು ಅಧ್ಯಾಯಗಳು: ೧೩
ಬೆಲೆ: ೯೦/-
ಮೊದಲ ಮುದ್ರಣ: ೨೦೧೧
ಪಬ್ಲಿಶರ್: ಶ್ರೀದೇವಿ ಪಬ್ಲಿಕೇಶನ್ಸ್ ಬೆಂಗಳೂರು
ಈ ಪುಸ್ತಕ ಪಾತ್ರದ ಹೆಸರೇ ಸೂಚಿಸುವಂತೆ ಇದೊಂದು “ಪ್ರೇಮ” ಭರಿತ ಮತ್ತೊಂದು ಹೊತ್ತಿಗೆ ಕನ್ನಡ ಸಾರಸ್ವತ ಲೋಕದಲ್ಲಿ ಮಿಂಚುತ್ತಿದೆ ಎಂದೆಣೆಸಿದರೂ, ಮಧ್ಯಭಾಗದಲ್ಲಿ ತಿರುವು ಪಡೆಯುತ್ತದೆ. ಮೂಲ ಕರ್ತೃವಾದ ಮುನ್ಷಿ ಪ್ರೇಮ ಚಂದ ಅವರ ಆಶಯಕ್ಕೆ ಧಕ್ಕೆ ಬಾರದಂತೆ ಲೇಖಕಿಯಾದ ಶ್ರೀಮತಿ ಮಾಧುರಿ ದೇಶಪಾಂಡೆಯವರು ಕನ್ನಡಕ್ಕೆ ಅನುವಾದ ಮಾಡಿದ್ದು, ಅಂತ್ಯದಲ್ಲಿ ಪ್ರೇಮ ಸಾಫಲ್ಯಗೊಂಡು ಸುಖಾಂತ್ಯಗೊಳ್ಳುತ್ತದೆ.
ಗಂಡ ಸತ್ತ ನಂತರ ಆಚರಿಸಲ್ಪಡುವ ಮೌಢ್ಯ ಆಚರಣೆಯ ಕುರಿತಾಗಿ ಎಳೆ ಎಳೆಯಾಗಿ ಬಿಂಬಿಸಲಾಗಿದೆ. ಆ ಕಾಲದಲ್ಲಿ ಆಚರಣೆಗಳೇ ಹಾಗಿದ್ದವು ಎನ್ನಿ. ಗಂಡ ಸತ್ತರೆ ಹರೆಯದ ಹೆಣ್ಣೂ ಕೂಡ ತಲೆ ಬೋಳಿಸಿಕೊಂಡು, ವಯೋ ಸಹಜ ಕಾಮನೆಗಳನ್ನು ಮರೆಮಾಚಿ ಶಕೇಶಿಯಾಗಬೇಕಿತ್ತಂತೆ. ಇಂತಹ ಮೌಢ್ಯಾಚರಣೆಯ ವಿರುದ್ಧ ಅಮೃತರಾಯನು ಕಾಯಾ ವಾಚಾ ಮನಸಾ ಹೋರಾಡಿ, ಮೌಢ್ಯಾಚರಣೆಗೆ ಅಂತ್ಯ ಹಾಡಿ ರಕ್ತ ರಾತ್ರಿಯೊಂದಿಗೆ ಜಯ ತನ್ನದಾಗಿಸುತ್ತಾನೆ.

ಪ್ರೇಮಳನ್ನೇ ಅಪಾದ ಮಸ್ತಕವಾಗಿ ಪ್ರೀತಿಸುತ್ತಿದ್ದ ದಿನಮಾನಗಳಲ್ಲಿ , ಆ ಕಾಲದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಅಮೃತರಾಯನು ಅನ್ಯ ಪಂಥಕ್ಕೆ ಸೇರಿದ ಅಪವಾದ ಎದುರಿಸಬೇಕಾಗುತ್ತದೆ. ಅತ್ಯಂತ ಸಂಭಾವಿತ , ಸರಳ ಜೀವಿಯಾಗಿದ್ದ ಅಮೃತರಾಯ, ಪ್ರೇಮಾಳ ಪರಮಾಪ್ತ ಸಖಿಯಾಗಿದ್ದ ಪೂರ್ಣಾಳ ಬಗ್ಗೆ ಮೋಹಿತನಾಗಿದ್ದು ವಿಧಿಯ ಆಟವೇ ಸರಿ. ಇತ್ತ ಕಡೆ ಪ್ರೇಮಾಳೂ ಅಮೃತರಾಯನಿಗೇ ಮನಸ್ಸನ್ನು ಕೊಟ್ಡಿದ್ದು, ಹಗಲೂ ರಾತ್ರಿ ಆತನ ಚಿತ್ರವನ್ನೇ ನೋಡುತ್ತಾ, ಆತನ ಅನುಪಸ್ಥಿತಿಯಲ್ಲಿ ಅದನ್ನೇ ಮುದ್ದಿಸುವುದು ಅವಳ ಒಲವಿಗೆ ಹಿಡಿದ ಕನ್ನಡಿಯಾಗಿದೆ.
ಈ ನಡುವೆ ಆಗತಾನೇ ಮದುವೆಯಾದ ಪೂರ್ಣಾಳ ಪತಿ ಪಂಡಿತ ವಸಂತ ಕುಮಾರ, ತನ್ನ ಹೆಂಡತಿಯನ್ನು ಅದೆಷ್ಟು ಆಳವಾಗಿ ಪ್ರೀತಿಸುತ್ತಿರುತ್ತಾನೆ ಎಂಬುದು ಆತನ ನಲ್ನುಡಿಯ ಪ್ರೇಮ ಭರಿತ ಮಾತುಗಳಿಂದ ವ್ಯಕ್ತವಾಗುತ್ತದೆ. ಒಂದೊಮ್ಮೆ ಹೋಳಿ ಹಬ್ಬದ ಸಮಯದಲ್ಲಿ ಹೆಂಡತಿಗೆ ಇಷ್ಟವಾಗುವ ಹೂವನ್ನು ತರಲು ಗಂಗಾ ನದಿಯಲ್ಲಿ ಈಜಲು ತೆರಳಿದಾಗ, ಸುಳಿಗೆ ಸಿಲುಕಿ, ವಿಧಿಯಾಟಕ್ಕೆ ಬಲಿಯಾಗಿ ತನ್ನ ಜೀವವನ್ನೇ ಕೊಡುತ್ತಾನೆ. ಪೂರ್ಣಳು ವಿಧವೆಯಾಗುತ್ತಾಳೆ. ವೈಧವ್ಯ ಪಟ್ಡ ಧರಿಸಿ, ಸುತ್ತ ಮುತ್ತಲಿನ ಸಿರಿವಂತ ಜನರ ಚುಚ್ಚು ಮಾತುಗಳಿಂದ ಮತ್ತಷ್ಟು ಬಲಹೀನಳಾಗಿ ಮಾನಸಿಕವಾಗಿ ಜರ್ಜರಿತಳಾಗಿ, ಪರ ಪುರುಷನೊಂದಿಗೆ ಬೆರೆತ ಇಲ್ಲ ಸಲ್ಲದ ಆರೋಪ ಎದುರಿಸುತ್ತಾಳೆ. ವಸ್ತು ಸ್ಥಿತಿ ಹಾಗಿರುವುದಿಲ್ಲ. ಪತಿಯ ದೇಹ ತ್ಯಾಗದ ನಂತರ ಪೂರ್ಣಳು ಮನೆ ಕೆಲಸದ “ಬಿಲ್ಲೋ” ನ ಮೇಲೆ ಹೆಚ್ಚಿಗೆ ಅವಲಂಬಿತಳಾಗಿರುತ್ತಾಳೆ. ಅತ್ತ ಕಡೆ ಹೆತ್ತವರಿಲ್ಲದ , ಇತ್ತ ಕಡೆ ಅತ್ತೆ ಮಾವನಿಲ್ಲದ, ಗಂಡನ ಆಶ್ರಯವಿಲ್ಲದ ಏಕಾಂಗಿ ಜೀವನ ಕಷ್ಟಕರವಲ್ಲವೇ?
ಆದರೂ ತನಗೆ ಅರಿವಿಲ್ಲದಂತೇ ಆಪ್ತ ಸಖಿಯಾದ ಪ್ರೇಮಾಳ ಪ್ರೇಮಿ ಅಮೃತರಾಯನ ತೆಕ್ಕೆಗೆ ಒರಗಿದ್ದು ವಿಧಿಯ ಕ್ರೂರತೆಯನ್ನು ಬಿಂಬಿಸುತ್ತದೆ. ಪ್ರೇಮ ಹಾಗೂ ಪೂರ್ಣ ಇಬ್ಬರೂ ಪರಮಾಪ್ತರಾಗಿದ್ದರೂ ಕಾಲ ಇವರಿಬ್ಬರನ್ನೂ ಪ್ರತ್ಯೇಕಿಸುತ್ತದೆ. ಅಷ್ಟೊತ್ತಿಗಾಗಲೇ ಗಲಭೆಗಳಿಂದ ಅಮೃತರಾಯ ಹಾಗೂ ಪೂರ್ಣಳ ವಿವಾಹವೂ ನೆರವೇರಿರುತ್ತದೆ ! ಕಾಲನ ಹೊಡೆತಕ್ಕೆ ಸಿಲುಕಿ ಪ್ರೇಮಳು ಬಾಬು ದಾನನಾಥರನ್ನು ಒಲ್ಲದ ಮನಸ್ಸಿನಿಂದ ಮದುವೆಯಾಗಿ, ನಂತರ ಅಪಾರ ಮಾನಸಿಕ ಯಾತನೆ ಅನುಭವಿಸುತ್ತಿರುತ್ತಾಳೆ.

ಹಿಂದುತ್ವದ ಪ್ರತಿಪಾದಿಯಾದ ಅಮೃತರಾಯನು ದೇಶ ಸೇವೆಯಲ್ಲೇ ತನ್ನ ಜೀವನವನ್ನು ಮುಡಿಪಿಟ್ಟು, ಸಮಾಜದ ಹಿತಕ್ಕಾಗಿ ಸಂಘ ಕಟ್ಟಲು ಮನಸ್ಸು ಮಾಡಿ, ಆಪ್ತರ ಸಹಾಯಕ್ಕಾಗಿ ಯಾಚಿಸಿದಾಗ, ತನ್ನವರೆಂದುಕೊಂಡವರೇ ಕೊನೆಗಾಲದಲ್ಲಿ ಕೈ ಎತ್ತಿದ್ದು ಮಾರ್ಮಿಕವಾಗಿ ಬಿಂಬಿತವಾಗಿದೆ.
ಕೊನೆಯ ಘಳಿಗೆಯಲ್ಲಿ ಹಿತಶತೃಗಳು ಅಮೃತರಾಯನನ್ನೇ ಇನ್ನಿಲ್ಲವಾಗಿಸುವ ತಂತ್ರ ಹೆಣೆದಿದ್ದು ಪ್ರೇಮಾಳಿಗೆ ಗೊತ್ತಾಗಿ, ಪತಿಯ ಮೇಲೆ ಆಕ್ರಮಣ ಮಾಡುವ ಘಳಿಗೆಯನ್ನು ಪತ್ರ ಮುಖೇನ ಪೂರ್ಣಳಗೆ ಎಚ್ಚರಿಸುತ್ತಾಳೆ. ಈ ವಿಷಯ ತಿಳಿದ ಪೂರ್ಣಳು ತನ್ನ ಪತಿಯ ಉಳಿವಿಗಾಗಿ ಪಿಸ್ತೂಲು ಚಲಾಯಿಸುವುದನ್ನು ಕಲಿತುರೂ, ರಾತ್ರಿ ನಡೆದ ಜಟಾಪಟಿಯಲ್ಲಿ ಪೂರ್ಣ ಮತ್ತು ಬಾಬು ದಾನನಾಥರು ಸಾವನ್ನೊಪ್ಪುತ್ತಾಳೆ.
ದೈವ ನಿರ್ಣಯವೆಂಬಂತೆ ಅಮೃತರಾಯ ಪುನಃ ತನ್ನ ಹಳೆಯ ಪ್ರೇಮಿಯಾದ ಪ್ರೇಮಾಳನ್ನೇ ವರಿಸುತ್ತಾನೆ.
ಅತ್ಯಂತ ಸೂಕ್ಷ್ಮ ಎಳೆಗಳಿಂದ ಹೆಣೆಯಲ್ಪಟ್ಟ ಸುಂದರ ಕಥಾ ವಸ್ತು ಇದಾಗಿದೆ. ಅನ್ಯ ಭಾಷೆಯನ್ನು ತಿಳಿದು, ಮೂಲ ಕಥಾ ವಸ್ತುವಿಗೆ ಎಲ್ಲೂ ಚ್ಯುತಿ ಬಾರದಂತೆ ತುರ್ಜುಮೆ ಮಾಡುವ ಕಲೆ ಲೇಖಕಿಯಾದ ಶ್ರೀಮತಿ ಮಾಧುರಿ ದೇಶಪಾಂಡೆಯವರಿಗೆ ಸಿದ್ದಿಸಿದ್ದು, ಈ ಮೂಲಕ ಇನ್ನಷ್ಟು ಉತ್ತಮ ಕೃತಿಗಳು ಕನ್ನಡ ಸಾರಸ್ವತ ಲೋಕದಲ್ಲಿ ಹೊಳೆಯುವಂತಾಗಲಿ, ಅನೇಕ ಪತ್ರಿಕೆಗಳಿಗೆ ಅವಿರತವಾಗಿ ಲೇಖನಗಳನ್ನು ಬರೆಯುತ್ತಿರುವ ಮಾಧುರಿಯವರು ಕವನ ಬರೆಯುವುದರಲ್ಲೂ ಸೈ ಎನ್ನಿಸಿಕೊಂಡಿದ್ದಾರೆ.
ಮತ್ತಷ್ಟು ಆಕರ್ಷಕ ಮುಖ ಪುಟದೊಂದಿಗೆ ಆ ಅನುವಾದಿತ ಕೃತಿಯು ಇನ್ನೇನು ಎರಡನೇ ಮುದ್ರಣ ಕಾಣಲಿದ್ದು, ಪ್ರತಿಗಳಿಗಾಗಿ ಲೇಖಕಿಯನ್ನು ಸಂಪರ್ಕಿಸಲು ಕೋರಲಾಗಿದೆ.
- ಶ್ರೀವಲ್ಲಭ ಕುಲಕರ್ಣಿ – ಹುಬ್ಬಳ್ಳಿ
