‘ಮರಿ ದೆವ್ವಾ’ ಸಣ್ಣಕತೆ – ಶ್ರೀವಲ್ಲಭ ಕುಲಕರ್ಣಿ

ಆ ದಿನ ಒಂದು ಪುಟ್ಟ ಸಂಸಾರ ತಮ್ಮ ಕಾರಿನ್ಯಾಗ ಪ್ರವಾಸಕ್ಕ ಹೊರಟಿತ್ತು.‌ಅಲ್ಲಿ ಘಾಟ ಸೆಕ್ಷೆನ್ ಬಂತು.. ಮುಂದ ತಿರುವಿನ್ಯಾಗ ಟ್ರಕ್ ಬಂತು…‌ಮುಂದೇನಾಯಿತು ಶ್ರೀವಲ್ಲಭ ಕುಲಕರ್ಣಿಅವರ ದೆವ್ವದ ಕತೆಯನ್ನು ತಪ್ಪದೆ ಮುಂದೆ ಓದಿ….

ಹೈ ಡ್ಯಾಡ್ ..ಏನೂ ಕಾಳಜೀ ಬ್ಯಾಡಾ …ನಾ ಇಲ್ಲೇ ಪಾರ್ಕಿನ್ಯಾಗ ಆಟಾ ಆಡಿ ಬರ್ತೇನಿ..

ಇಲ್ಲೆ ರಾಕ್ಷಸಸಂದಣಿ ಅಷ್ಟೊಂದ್ ಇಲ್ಲಾ.. ಹಿತಾ ಅನಸ್ತದ ನಮಗ..‌

ನನ್ನ ಫ್ರೆಂಡ್ಸ್ ಸಮಬಾಹು, ವಿಷಮಬಾಹು ಸಮದ್ವೀಬಾಹು ಎಲ್ಲಾರೂ ಬರ್ಲಿಕತ್ತಾರ !

ಅಮ್ಮಾsss ರಕ್ತದ್ ಸೂಪ್ ಮತ್ತ ಫ್ರೆಶ್ ಎಲುಬಿನ್ ಜೊತೆ ಲಿವರ್ ಫ್ರೈ ಮಾಡಿ …. ಡಬ್ಬಿ ಕಟ್ಟಿ ಕೊಡು ಎಲ್ಲಾರೂ ದುಂಡಗ ಕೂತು ತಿಂದು ಆಟಾ ಆಡಿ ಬರ್ತೇವಿ …ಆತಾ? ಕಾಳಜೀ ಮಾಡಬ್ಯಾಡ್ರಿ ನೀವಿಬ್ರೂ‌‌ ..ಹ್ಯಾಂಗ್ ಹೋಗಿರ್ತೇನೋ ಹಂಗ ವಾಪಾಸ್ ಬರ್ತೇನಿ.. ನಮಗೂ ಬ್ಯಾಸರಾಗ್ತದ..‌ ಮಟಮಟ ಮಧ್ಯಾನ್ಹ ಮತ್ತ ರಾತ್ರಿ ನೀವಿಬ್ರೂ ಗಿಡಕ್ಕ ಜೋತ ಬೀಳ್ತಿರಿ… ನಂಗರೇ ಗಿಡಾ ಏರಲಿಕ್ಕೆ ಬರೂದಿಲ್ಲಾ !

ಅಂತು ಆ ಮರಿ ದೆವ್ವಾ !

ರೀssss ಕೇಳಿದ್ರಾ ಇವನ ಮಾತು…! ಏನೋ ಆಸೆ ಪಡ್ತದ ..ಅರ್ಜಂಟ್ ಹೋಗಿ ಹೆದರಿಸಿ….ಯಾರದರ ರಕ್ತಾ ಹೀರ್ಕೊಂಡ್ ತಂದ್ಕೊಡಬರ್ರಿ‌‌ .. ಹಂಗ ಒಂದಿಷ್ಟು ಎಲುಬಿನ್ ಪುಡಿ ತೊಂಬರ್ರಿ.‌ ನಾ ಇಲ್ಲೆ ವಗ್ಗರಣಿಗೆ ಇಡತೇನಿ.. ಪಾಪ ಕೂಸು ಆಸೆ ಪಡ್ತದ … ಅಂತ ..ಗೂಟಕ್ಕ ಜೋತು ಬಿದ್ದ ತಾಯಿ ದೆವ್ವಾ ತನ್ನ ಗಂಡನಿಗೆ ಹೇಳ್ತು…

ಆಗ ಗಂಡ ದೆವ್ವಾ ..

ಲೇ ಈಗರ ಜೋತ ಬಿದ್ದೇನಿ (ಮತ್ತೊಂದ್ ಗೂಟಕ್ಕೆ)….. ಸ್ವಲ್ಪ‌ ಕತ್ಲಿ ಆಗ್ಲಿ ತಡೀಲೇ ..ಎಷ್ಟರ ಕಾಡ್ತಿ‌‌‌ …‌ಬೆಳಕ ಕಂಡ್ರ ಹೆದರಿಕಿ‌ ಬರ್ತದ ನಂಗ ! ಮೊದಲ ಹುಣವಿ (ಹುಣ್ಣಿಮೆ) ಅದ. ಲಗೂ ಕತ್ಲಿ ಆಗಂಗಿಲ್ಲಾ .. ಕಿಟಿಪಿಟಿ ಕೊಡಬ್ಯಾಡ್ನೀ..ಮತ್ತ ಬದುಕಿಸಿ‌ ಇಟ್ಟಿ ಎಲ್ಲೆರೆ.. ಹುಟ್ಟಿ ಮನಷ್ಯಾ ಆಗಿ ಕಾಡ್ತೇನಿ ನೋಡಾಲೇ ಮತ್ತ..

ರೀ… ನಾಯೇನಂದೇನಿ ಈಗ? ಬ್ಯಾಡsss ಬ್ಯಾಡ ನನ್ನ ದಾನವಾ .. ಏನಾದರೂ ನಡೀತದ್ರಿ…. ಮತ್ ಮನಷ್ಯಾ ಮಾತ್ರ ಆಗೂದ್ ಬ್ಯಾಡಾ..!

ನಮ್ಮ ಸಂಸ್ಕೃತಿ ಪ್ರಕಾರ … ನಾವ್ ಗಿಡಕ್ಕ ಜೋತ ಬೀಳಬಕು.. ಅಲ್ಲೇ ಚಂದ ..ಅಲ್ಲನು?

ಆತಾತು.. ಹಂಗ ಆಗ್ಲಿ..‌ಹ್ಯಾಂಗಿದ್ರೂ ನಿನ್ನ ಕುಲಪುತ್ರ ನಾಳೆ ಆಟಕ್ಕ ಹೊಂಟಾನ ಅಷ್ಟ್ರಾಗನ‌ ಏನರ ವ್ಯವಸ್ಥಾ ಮಾಡ್ತೇನಿ ..ಓಕೆ … ಡನ್ ?

ಹೆಣ್ಣ ದೆವ್ವಾ

ಢಣ್ ಢಣಾ ಢಣ್ ! ಇನ್ನೊಂದ್ ಸ್ವಲ್ಪ ಹೊತ್ತು ಅಲ್ಲೇ ಜೋತ್ ಬಿದ್ದೀರಿ.. ಅಷ್ಟ್ರಾಗನ ನಾ ಒಲಿ ಒಳಗ ಆ ಮುದಕಿ ಕಾಲು ಇಟ್ಟು ಬೆಂಕಿ ಹಚ್ಚಿ ಕಡಾಯಿ ಒಳಗ ವಗ್ಗರಣಿ ಮಾಡ್ತೇನಿ..‌ಇವತ್ತ ಎಲ್ಲಾರಿಗೂ ನರದ್ದ (ನೂಡಲ್ಸ್) ಟಿಫಿನ್ ..‌ಸ್ವಲ್ಪ ಗಟ್ಟಿ ರಕ್ತದ್ದು ಜಾಮ್ ಉಳದದ .. ! ಚರ್ಮಾ ಹುರದ ಕುರುಕುರು ಮಾಡಿ ಇಟ್ಟಿರ್ತೇನಿ..! ಚರ್ಮದ್ ಹಪ್ಳ ಬೇಕಂತ ನಿಮ್‌ ಮಗರಾಯಗ !

ಆತಾತು ಅಷ್ಟ ಮಾಡು.. ಎಲುಬಿನ ಚಟ್ನಿಪುಡಿ ಮಾಡಿಡು… ಓಕೆ?

ಇದೊಂದು ಆ ದೆವ್ವದ ಸಂಸಾರದ ಕಥೆ …

ಇವ್ರು ಯಾಕ ದೆವ್ವ ಆದ್ರೂ ಗೊತ್ತಾ? ಇಲ್ಕೇಳಿ…

ಆ ದಿನ ಒಂದು ಪುಟ್ಟ ಸಂಸಾರ ತಮ್ಮ ಕಾರಿನ್ಯಾಗ ಪ್ರವಾಸಕ್ಕ ಹೊರಟಿತ್ತು.‌ ಅಲ್ಲಿ ಘಾಟ ಸೆಕ್ಷೆನ್ ಬಂತು.. ಈ ಕಡೆ ಪ್ರಪಾತ ..ಆ ಕಡೆ ಗುಡ್ಡ.. ಅದು ಮಳೆಗಾಲ ಬೇರೆ. ಇಳಿಜಾರಿನ ದಾರಿ. ಒಂದss ಗಾಡಿ ಹೋಗೋ‌ ಅಷ್ಟು ಇಕ್ಕಟ್ಟಿನ ದಾರಿ. ಮತ್ತ ಮ್ಯಾಲೆ ಧೋ ಧೋ‌ ಮಳಿ ! ಕಾರಿನ ವೈಪರ್ ಕೂತಲ್ಲೇನ ಗ್ಲಾಸ್ ಒರೆಸಿ ಒರೆಸಿ ಹೈರಾಣಾಗಿ ಬಿಟ್ಟಿತ್ತು. ಹೆಡ್ ಲೈಟ್ ಹಾಕ್ಕೊಂಡು ಪ್ರಯಾಣ ಮುಂದುವರೆದಿತ್ತೇನೋ ನಿಜ … ಆದರ…ಸಡನ್ ಆಗಿ …ಮುಂದ ತಿರುವಿನ್ಯಾಗ ಟ್ರಕ್ ಬಂತು…‌ಸ್ಟೀರಿಂಗ್ ಹೊಳ್ಯಾಡಿಸಿ ಹರ ಸಾಹಸ ಪಟ್ಟು ಹೇಗೋ ಟ್ರಕ್ ಪಾಸಾತು..

ಮುಂದ ಹೋದಂಗ … ಅಲ್ಲೆ ಪುಟ್ಟ ಅಂಗಡಿ.. ಹೆಂಡ್ತಿ‌ ಮಕ್ಕಳಿಗೆ ಹಸಿವಿ ಆಗಿರ್ತದ ಅಂತ ಪಾರ್ಕ ಮಾಡಿ ..ಅಂಗಡಿ ಒಳಗ ನೋಡಿದ್ರ..‌ ಯಾರೂ ಇಲ್ಲಾ!
ಗ್ಯಾಸ್ ಇತ್ತು . ಹಾಲ್ ಇತ್ತು. ಕಾಫಿ ಪುಡಿ ಇತ್ತು..‌ಸಕ್ಕರಿ‌ ಇತ್ತು‌.‌ ಗುಡ್ಡೇ ಬಿಸ್ಕೀಟೂ ಇದ್ವು..

ಇವಾಂ ಕಾಯೋ ಮಟಾ ಕಾದು ಕಾದು …ಸುಮ್ಮನ‌ ಕೂಡಲಾರದ … ಕಾಫಿ ಮಾಡಿ ಬಿಟ್ಟಾ.. !
ಎಲ್ರೂ ಕುಡುದ್ರು… ತಲಿ ಇನ್ನಷ್ಟು ಗಿವ್ಂ ಗಿವ್ಂ !
ಮುಂದ ಹ್ಯಾಂಗೋ‌ ಸುಧಾರಿಸ್ಗೊಂಡು ತಮ್ಮ ಪಾಡಿಗೆ ತಾವು ಹೋಗ್ತಿದ್ರು..

ಇತ್ಲಾ ಕಡೆ ಆ ಅಂಗಡಿ ಮಾಲೀಕಳು ಬಂದು.. ಯಾರ್ಲಾ ಅದು …ದುಡ್ಡ‌ ಮಡಗ್ದೇ ಕಾಫಿ ಮಾಡ್ಕೊಂಡ್ ಕುಡ್ಕೊಂಡ್ ಹೋಗಿದ್ದು.. ? ನಿಮ್ಮ ಸಂಸಾರಾ ಹಾಳಾಗಾ..‌ಅಲ್ಲೇ ದಾರ್‍ಯಾಗ ಶಟಿಯಾ….‌! ಶಪಾ ಹಾಕಿದ್ಲು..

ಶಾಪ ತಟ್ಟೇ ಬಿಡ್ತು… ಕಾರಿನ‌ ಬ್ರೆಕ್ ಫೇಲಾಗಿ …ಆ ಸಂಸಾರ ಶಿವನ‌ ಪಾದ ಸೇರ್ತು .

ಏನೇನ್ ಆಸೆಗಳು ಇದ್ವೋ.. ಎಲ್ಲಾ ಮನದಲ್ಲೇ ಉಳದ್ವು ..‌ಅತೃಪ್ತ ಆತ್ಮಗಳಾಗಿ ಸಣ್ಣ ಮನಿ ಕಟ್ಗೊಂಡು .. ಅಲ್ಲೇ ಸಂಚಾರ ಮಾಡ್ಲಿಕತ್ವು..

ಕಮ್ ಬ್ಯಾಕ್ …

ಇದೀಗ ಆ ಮರಿ ದೆವ್ವಾ ಪಾರ್ಕಿನ್ಯಾಗ… ತನ್ನ ಗೆಳೆಯರ ಜೊತೆ .. ಊಟ ಮಾಡ್ಲಿಕ್ಕೆ ಡಬ್ಬಿ ತಗದಾ..

ರಕ್ತದ್ ಸೂಪ್ ನೋಡ್ತಾನsss ಸಿಟ್ಟ ಬಂತು.. ಅದsss ಸಿಟ್ನ್ಯಾಗ ಮನಿಗೆ ಬಂದು ಒದರ್‍ಯಾಡ್ಲಿಕತ್ತಾ..

ಯಾಕ್ಲೇ ಏನಾತು ..ನೀ ಹೇಳಿದಂಗ ಡಬ್ಬಿ ಕಟ್ಟೇನಿಲ್ಲೋ? ತಾಯಿ ದೆವ್ವಾ ಉವಾಚ..

ಅಮ್ಮಾ ..ರಕ್ತದ್ ಸೂಪ್ ಒಳಗ ಬ್ರೆಡ್ ಪೀಸ್ ಯಾಕ ಇರಲಿಲ್ಲಾ? ನಾ ವಲ್ಲೆ ಇದನ್ ಅಂದಾ..
ನಿನಗ ಬ್ಯಾಡಾದ್ರ..ಬಿಡು ಮಗನ .. ಅಂತ್ಹೇಳಿ‌…ತಾಯಿ‌,.. ಗೂಟಕ್ಕ ಜೋತ ಬಿದ್ದು . ಮಕ್ಕೊಂಡ್ಲು…

ಅತ್ತು ಅತ್ತು ಮರಿ ದೆವ್ವ ನೂ ಮಕ್ಕೋತು..
ಗಂಡ ದೆವ್ವ ಅಂತೂ ಮೊದಲೇ ಮಲಗಿತ್ತು.. !


  • ಶ್ರೀವಲ್ಲಭ ಕುಲಕರ್ಣಿ – ಹುಬ್ಬಳ್ಳಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading