ತುಟಿಯಪ್ಪುಗೆಯ ಚರ್ಮದ ಚುಂಬನಕೆ ಕಣ್ಣಂಚು, ದೂರ ಸರಿದು ಮಳೆಯ ಹನಿಗೆ ಬೆವರುತಿದೆ…ಡಾ. ಕೃಷ್ಣವೇಣಿ. ಆರ್. ಗೌಡ ಅವರ ಲೇಖನಿಯಲ್ಲಿ ಮೂಡಿ ಬಂದ ಪ್ರೇಮಗೀತೆಯನ್ನು ತಪ್ಪದೆ ಮುಂದೆ ಓದಿ….
ಬಿಗಿಯುತ್ತಿದೆ ಮನದ ಹೆಬ್ಭಾರ
ಇದಕೆ ಆಗಸದ ಮೋಡ
ಸಂಕೋಲೆಗಳ ಹಾಕಿ ಆಕ್ರೋಶದ ನೋಟವನು
ಬೀರುತ್ತಿದೆ…
ಕಾರಣವಿಲ್ಲದ ಪ್ರೀತಿಯ ಕಲ್ಲಿಗೆ
ಎದೆಯ ನೋವಿನ ಸಾವಿರಾರು
ಅಕ್ಷರ ದಿನದ ಎಣಿಕೆಯ
ಎಣಿಸುತಿದೆ…
ಹಾದಿಯುದ್ಧಕ್ಕೂ
ಮುಳ್ಳು ಬೇಲಿಯ ಎಲೆ
ಪಾದದಡಿಯಲ್ಲಿ ಮುಗುಚಿ
ತನ್ನನು ತಾನು ಅರಿಯುತಿದೆ..
ಧುಮುಕಿದೆ ಒಂದೊಂದಾಗಿ
ಸಾವಿನ ನೀರು ಆಳದ
ಅರಿವಿಲ್ಲದೆ,
ವಿವೇಕದ ದ್ರಷ್ಠಿಗೆ ರಕ್ತದ ಹರಿವು
ಹೇಳ ಹೆಸರಿಲ್ಲದೆ ಹರಿಯುತಿದೆ..
ಆದರೂ ಎರಕವಿಲ್ಲದ
ಬರವಣಿಗೆಯ ನೆನಪು
ನಗುತ ಎರಡು ಜೀವಗಳ
ಕಾಯುತಿದೆ…
ತುಟಿಯಪ್ಪುಗೆಯ ಚರ್ಮದ ಚುಂಬನಕೆ ಕಣ್ಣಂಚು
ದೂರ ಸರಿದು
ಮಳೆಯ ಹನಿಗೆ ಬೆವರುತಿದೆ…
ಪ್ರಕೃತಿಯ ಮಡಿಲ ಪ್ರಾಯ
ಪಡಸಾಲೆಯ ಒಂಟಿಧ್ವನಿಯ
ಬಣ್ಣಕೆ ಬಾಗಿ, ಬಿಕ್ಕಿ ಬಿಕ್ಕಿ
ಅಳುತ್ತಲೇ ಎದೆ ತೊಟ್ಟು ಉಬ್ಬಿ
ತಂಗಾಳಿಯ ಅಪ್ಪುಗೆಗೆ
ಮೌನವಾಗಿ ಮಲಗಿದೆ….
ಅಂತಸ್ತ ಕಟಕಟೆಯಲಿ
ಕುಲದ ಆಕಾರ?.
ಆದರೆ ಭಾಷೆಯ ಅಭಿಪ್ರಾಯ
ಅಲ್ಲದೆಯೂ ಗೆಲ್ಲುತ್ತಿದೆಯಲ್ಲ
ನ್ಯಾಯ ಪ್ರಮಾಣದ
ಪ್ರೀತಿಯ ಕಣಜ…
ಈ ಕೆರೆಸೆಯ ವರಸೆಗೆ
ಒಲವಿನ ಅಮೃತಕೆ ಚಪ್ಪಾಳೆಯ
ಬೆಳಕು ನವ ನಗೆಯಚೆಲ್ಲುತಿದೆ..
- ಡಾ. ಕೃಷ್ಣವೇಣಿ. ಆರ್. ಗೌಡ
