ಈ ಪ್ರೀತಿ ಒಂಥರಾ : ಬಿ.ವಿ.ಭಾರತಿ

ಬಿ.ವಿ.ಭಾರತಿ ಅವರ ಈ ಪ್ರೀತಿ ಒಂಥರಾ ಕಥಾ ಸಂಕಲನದ ಕುರಿತು ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ಈ ಪ್ರೀತಿ ಒಂಥರಾ
ಲೇಖಕರು : ಬಿ.ವಿ.ಭಾರತಿ
ಪ್ರಕಾರ : ಕಥಾ ಸಂಕಲನ, ಕನ್ನಡ
ಬೆಲೆ : ೨೦೦.೦೦

ಪ್ರೇಮ ಕ್ಷಣಿಕ, ನೆನಪು ಅನಂತಕಾಲ: ನೆರೂಡಾ ನ Love is so short forgetting is so long…… ಸಾಲುಗಳಿಗೆ ವ್ಯಾಖ್ಯಾನದಂತೆ ಇದೆ ಭಾರತಿಯವರ ಈ ಕೃತಿ:

ಇದು ಸ್ವಾನುಭವದೊಂದಿಗೆ ಪಸಾಯದಾನದ ಮೂಲಕ ರೂಪುಗೊಂಡಿದೆ. ಸ್ವಾನುಭವಕ್ಕೆ ನಿದರ್ಶನ: ಮೊದಲನೆಯ ಬರಹ. ಕಾಲೇಜ್ ನಲ್ಲಿ ಮಂಜು ಎನ್ನುವ ಹುಡುಗನ ಕುರಿತು ಹುಟ್ಟಿದ ಏಕಮುಖ ಪ್ರೇಮ. ಅದನ್ನು ಬೇಕಾದರೆ ಹುಚ್ಚು ವ್ಯಾಮೋಹ ಎಂದೂ ಕರೆಯಬಹುದು. ಅವನಿಗೂ ಅವಳ ಕುರಿತು ಆಸಕ್ತಿ ಇತ್ತು ಎನ್ನುವುದು ಕೊನೆಗೆ ಅವನ ದುರಂತದಲ್ಲಿ ಪರ್ಯಾವಸಾನಗೊಂಡ ಮೇಲೆ ತಿಳಿಯುತ್ತದೆ. ಪಸಾಯದಾನಕ್ಕೆ ನಿದರ್ಶನ: ಜಯನಗರದ ಕಾಫಿ ಡೇ ನಲ್ಲಿ ಟೇಬಲ್ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳುವ ಹೆಣ್ಣಿನ ಮೂಲಕ. ಇದು ಇವರಲ್ಲಿ ಪಡಿಮಿಡಿತಕ್ಕೆ ಕಾರಣವಾಗುತ್ತದೆ.

ಬಾರ್ ನ ಟೇಬಲ್ ಮೇಲೆ ವಿಸ್ಕಿ ಕುಡಿಯುವ ಗಂಡು ಹೆಣ್ಣುಗಳ ವಿರಸ ಸರಸಗಳು. ಹದಿಹರೆಯದವರ ಏಕಮುಖ ಪ್ರೇಮದ ತಲ್ಲಣಗಳನ್ನು, ವಿರಹ, ರೋಮಾಂಚಕ ಕ್ಷಣಗಳ, ದುರಂತ ಪ್ರೇಮದ ವಿಷಾದಗಳನ್ನು , ಜಗಳ- ಪ್ರೀತಿಗಳ , ಭಾವನಾತ್ಮಕ ಲೋಕವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಬಹುಶಃ ಕನ್ನಡದ ಏಕೈಕ ಕೃತಿ ಎಂದರೆ ಇದು ಉತ್ಪ್ರೇಕ್ಷೆಯಲ್ಲ. ಆತ್ಮಾವಲೋಕನದ ದಾಟಿಯಲ್ಲಿ ನಿರೂಪಿಸಿರುವುದರಿಂದ ಇದಕ್ಕೆ ಇನ್ನಿಲ್ಲದ ಅಧಿಕೃತತೆ ಪ್ರಾಪ್ತವಾಗಿದೆ. ಸ್ವ ಅಣಕ, ಸ್ವ ಮರುಕ, ಪೆದ್ದುತನಗಳ ಗುಗ್ಗು, ಎಳಸು ಇತ್ಯಾದಿ ವಿಶೇಷಣಗಳ ಕಾಮಿಕ್ ವ್ಯೂ ಇದನ್ನು ಅನನ್ಯವಾಗಿಸಿದೆ. ಭಾಷೆಗೆ ಕಾವ್ಯಾತ್ಮಕತೆ ಸಿದ್ದಿಸಿದೆ.

ಸಮಕಾಲೀನ ಪ್ರಸಂಗಗಳ ಜತೆಗೆ ರಾಧಾ ಮಾಧವರ ಅಗಲಿಕೆಯ ಸಂನಿವೇಶವನ್ನು ತಂದಿರುವುದರಿಂದ, ಇದು ಕಾಲಾತೀತ ಮೌಲ್ಯವನ್ನು ಪಡೆದಿದೆ.

ಪೆದ್ದಲಾಷ್ಟಕ ಮುಂತಾದ ಕೆಲವು ಹೊಸಪದಗಳ ಬಳಕೆಯಿಂದ ಭಾಷಾಸಂಕರ ಸಂಸ್ಕೃತಿಯ ಆಯಾಮ ಕೂಡ ಇದಕ್ಕೆ ದೊರೆತಿದೆ. ಇದಕ್ಕೆ ಕಾರಣ ಅವರ ಮಾತೃಭಾಷೆ ನನ್ನ ಹಾಗೆ ತೆಲುಗು, ಬೆಳೆದದ್ದು ತಮಿಳು ನಾಡಿನ ಗಡಿ ಪ್ರದೇಶವಾದ ಕೊಳ್ಳೆಗಾಲ. ಇವರ ವಲಸೆ ಮತ್ತು ಸ್ಥಳಾಂತರಗಳು ಕೊಳ್ಳೆಗಾಲ, ಚಾಮರಾಜನಗರದ ಸರಗೂರು, ಸೇಲಂ, ಬೆಂಗಳೂರುಗಳಲ್ಲಿ – ಶಿವಳ್ಳಿ, ರಾಜಾಜಿನಗರ( ನನ್ನ ಸಂಗಾತಿ ಇದ್ದ ಸ್ಥಳ) ಇ.ಎಸ್.ಐ. ಭಾಷ್ಯಂ ಸರ್ಕಲ್ ( ನನಗೂ ಪ್ರಿಯವಾದ ಸ್ಥಳಗಳು) ಜಯನಗರ , ಇಲ್ಲೆಲ್ಲ ಅವರ ಪ್ರೇಮ ಕತೆಗಳು ಸಂಚರಿಸುತ್ತವೆ. ಆ ಕಾರಣಕ್ಕೆ ಇದು ಸಂಚಾರಿಯು ಹೌದು, ಸ್ಥಾಯಿಯು ಹೌದು. ಪ್ರೇಮಕ್ಕೆ ಇರುವ ಸ್ಥಾಯೀ ಮತ್ತು ಸಂಚಾರಿ ಭಾವಗಳ ಪ್ರತೀಕವಾಗಿದೆ. ಸಿಗದೆ ಹೋಗುವ ಪ್ರೇಮ, ಹುಟ್ಟಿಸಿದ ಹಲವು ಭಾವ ಲಹರಿಗಳು ಈ ಕೃತಿಯನ್ನು ಕಟ್ಟಿವೆ. ಜತೆಗೆ ರಮ್ಯ ಮೋಹಕ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಕಳೆದುಕೊಂಡ ಪೂರ್ವಾಶ್ರಮದ ನೆನಪು ,ಈ ಕೃತಿಯಲ್ಲಿ ಹಲವರು ತಮ್ಮನ್ನು ನೋಡಿಕೊಳ್ಳಬಲ್ಲ‌ ಮಾಯಾಕನ್ನಡಿಯಾಗಿದೆ.


  • ರಘುನಾಥ್ ಕೃಷ್ಣಮಾಚಾರ್ –  (ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading